ಪುಟಗಳು

ನೊಬೆಲ್ ಪುರಸ್ಕೃತರು – ಸಮಗ್ರ ಮಾಹಿತಿ ಕೋಶ


ಮನು ಕುಲಕ್ಕೆ ಸಂದ ಅತ್ಯಮೂಲ್ಯ ಕೊಡುಗೆಗಳಾಗಿ 1901 ರಿಂದ ಭೌತ, ರಸಾಯನ, ವೈದ್ಯ, ಸಾಹಿತ್ಯ ಮತ್ತು ಶಾಂತಿ ನೊಬೆಲ್ ಪುರಸ್ಕಾರಗಳಿಗೆ ಭಾಜನರಾದವರನ್ನು ಹಾಗೂ 1969 ರಿಂದ ಚಲಾವಣೆಗೆ ಬಂದ, ಸ್ವೀಡನ್ನ ಸೆಂಟ್ರಲ್ ಬ್ಯಾಂಕ್ ಅರ್ಥಶಾಸ್ತ್ರ ಸಂಶೋಧನೆಗಳಿಗೆ ನೀಡುವ ಪುರಸ್ಕಾರಕ್ಕೆ (ಇದನ್ನೂ ನೊಬೆಲ್ ಪ್ರಶಸ್ತಿ ಎಂದೇ ಕರೆಯುತ್ತಾರೆ) ಪಾತ್ರರಾದವರ ಸಮಗ್ರ ಮಾಹಿತಿ ಈ ಪುಸ್ತಕದಲ್ಲಿದೆ. ಹಾಗೆ 774 ವಿಜ್ಙಾನಿಗಳು, ಸಾಹಿತಿಗಳು, ಶಾಂತಿಪ್ರಿಯರು ಮತ್ತು ಅರ್ಥಶಾಸ್ತ್ರಜ್ಞರು 320 ಪುಟಗಳ ಈ ಪುಸ್ತಕದಲ್ಲಿ ಶೋಭಿಸುತ್ತಾರೆ. (ಅವರ ಛಾಯಾಚಿತ್ರಗಳ ಮುದ್ರಣ ಅಷ್ಟು ಸೊಗಸಾಗಿದೆ.)
ಶಾಲಾ ಕಾಲೇಜುಗಳ ಗ್ರಂಥ ಭಂಡಾರಗಳಲ್ಲಿ ಅಗತ್ಯವಾಗಿ ಇಡಬೇಕಾದ ಪುಸ್ತಕ. ಭೌತ ವಿಜ್ಙಾನ ಹಾಗೂ ಜೀವ ವಿಜ್ಙಾನಗಳ ಪ್ರಶಸ್ತಿ ವಿಜೇತರ ಕುರಿತು ಬರೆಯುವಾಗ ಎಕ್ಸ್ ಕಿರಣ ವಿವರ್ತನೆ, ಸ್ಪಟಿಕ ಸಂರಚನೆ, ರೋಹಿತ, ಪ್ರೋಟೀನ್, ನ್ಯೂಕ್ಲಿಕ್ ಆಮ್ಲ, ಮುಂತಾದ ಪಾರಿಭಾಷಿಕ ಪದಗಳನ್ನು ಬಳಸುವುದರಿಂದ, ಮುನ್ನುಡಿ ಬರೆದಿರುವ ಜನಪ್ರಿಯ ವಿಜ್ಙಾನ ಲೇಖಕ ಅಡ್ಯನಡ್ಕ ಕೃಷ್ಣಭಟ್ ಹೇಳುವಂತೆ ಈ ಕಾರ್ಯಕ್ಷೇತ್ರಗಳ ಬರಿಯ ಸ್ಥೂಲ ತಿಳುವಳಿಕೆ ಪಡಯಲೂ ಸ್ವಲ್ಪಮಟ್ಟಿಗೆ ಓದುಗರ ಪ್ರಯತ್ನ ಬೇಕಾಗುತ್ತದೆ.
ಇದನ್ನು ಗಮನದಲ್ಲಿರಿಸಿಕೊಂಡರೆ ಒಳ್ಳೆಯದು. ಪ್ರಕಾಶನ ಸಂಸ್ಥೆಯ ರಾಜಾರಾಂ `ವರುಷಗಳು ಕಳೆದಂತೆ ನೊಬೆಲ್ ಪಾರಿತೋಷಕಗಳ ಸಂಖ್ಯೆಯೂ ಹೆಚ್ಚುತ್ತಾ ಹೋಗುವುದರಿಂದ, ಹೊಸ ಸೇರ್ಪಡೆಗಳನ್ನು ಅನುಬಂಧದ ರೂಪದಲ್ಲಿ ನೀಡುತ್ತಾ ಹೋಗುವುದಾಗಿ ತಿಳಿಸಿದ್ದಾರೆ. ಸ್ವಾಗತಾರ್ಹ
ಶೀರ್ಷಿಕೆ : ನೊಬೆಲ್ ಪುರಸ್ಕೃತರು – ಸಮಗ್ರ ಮಾಹಿತಿ ಕೋಶ ಲೇಖಕರು : ಸಿ. ಆರ್. ಕೃಷ್ಣರಾವ್ ಪ್ರಕಾಶಕರು : ನವ ಕರ್ನಾಟಕ ಪ್ರಕಾಶನ ಪುಟಗಳು : 320 ಬೆಲೆ: ರೂ.400/-
ಕೃಪೆ : ವಿಜಯ ಕರ್ನಾಟಕ

ಮದುವೆಯ ಆಟಗಳು (ನಾಟಕಗಳು)


ಖ್ಯಾತ ಕವಿ-ನಾಟಕಕಾರ ಎಚ್.ಎಸ್.ಶಿವಪ್ರಕಾಶರ ನಾಲ್ಕು ಕಿರುನಾಟಕಗಳ ಸಂಕಲನ ಮದುವೆಯ ಆಟಗಳು. `ಮದುವೆಯ ಹೆಣ್ಣು` ಎಂಬ ಮೊದಲ ನಾಟಕ ತೋಂಡ ಬುಡಕಟ್ಟಿನ ವಿಶಿಷ್ಟ ಮದುವೆಯ ಸಂಪ್ರದಾಯವನ್ನು ಆಧರಿಸಿದ್ದರೆ, ಎರಡನೆಯ ನಾಟಕವಾದ `ಕಸಂದ್ರಾ` ಈಸ್ಖಿಲಸ್ ರಚಿತ ಗ್ರೀಕ್ ನಾಟಕ ತ್ರಿವಳಿಯಲ್ಲಿ ಒಂದಾದ ಅಗಮೆಮ್ನಾನ್ ನಾಟಕದ ರೂಪಾಂತರ, ಮೂರನೆಯದಾದ `ಸತಿ` ಶಿವ-ದಾಕ್ಷಾಯಣಿ ಪುರಾಣ ಪ್ರಸಂಗವನ್ನಾಧರಿಸಿದೆ. ಕೊನೆಯ ನಾಟಕವಾದ `ಮಕರಚಂದ್ರ` ಲೇಖಕರು ದಾಖಲಿಸಿರುವಂತೆ, ಜಪಾನಿ ಭಾಷೆಯ `ನೋ ನಾಟಕ` `ಡಮಾಸ್ ಡ್ರಮ್` ಎಂಬುದನ್ನು ಆಧರಿಸಿದೆ. ಈ ನಾಲ್ಕು ನಾಟಕಗಳಲ್ಲಿ `ಕಸಂದ್ರ` ಹೊರತುಪಡಿಸಿದರೆ ಉಳಿದ ನಾಟಕಗಳೆಲ್ಲವೂ ರಂಗದ ಮೇಲೆ ಯಶಸ್ವಿಯಾಗಿ ಪ್ರದರ್ಶಿಸಲ್ಪಟ್ಟಿವೆ.
ಸಂಕಲನದ ಹೆಸರು ಓದುಗರೊಡನೆ ಆಟವಾಡುತ್ತದೆ; ಹೆಸರನ್ನು ನೋಡಿ, ಈ ನಾಟಕಗಳು ಪ್ರಹಸನಗಳೆಂದು ಓದುಗರು ನಿರೀಕ್ಷಿಸಬಹುದು. ಆದರೆ, ಇದರಲ್ಲಿರುವ ನಾಲ್ಕೂ ನಾಟಕಗಳು ಪ್ರಹಸನಗಳೆಂದು ಓದುಗರು ನಿರೀಕ್ಷಿಸಬಹುದು. ಆದರೆ, ಇದರಲ್ಲಿರುವ ನಾಲ್ಕೂ ನಾಟಕಗಳು ರುದ್ರ ನಾಟಕಗಳು. `ಆಟ` ಎಂಬ ಪದವನ್ನು ನಾಟಕಕಾರರು ಅನೇಕ ಅರ್ಥಗಳಲ್ಲಿ ಉಪಯೋಗಿಸಿದ್ದಾರೆ. ಮೊದಲನೆಯದಾಗಿ, ಭರತನ `ಕ್ರೀಡನೀಯಕಂ` ಎಂಬ ಪ್ರಯೋಗವನ್ನಾಧರಿಸಿ `ನಾಟಕ ಅಥವಾ ಪ್ರದರ್ಶನ` ಎಂಬ ಅರ್ಥದಲ್ಲಿ ಇಲ್ಲಿ `ಆಟ` ಎಂಬ ಪದ ಉಪಯೋಗಿಸಲ್ಪಟ್ಟಿದೆ. ಎರಡನೆಯದಾಗಿ, ಈ ಪದ ಗಂಡು ಹೆಣ್ಣುಗಳು ಪರಸ್ಪರ ಆಕರ್ಷಿತರಾಗಿ ಆಡುವ ಆಟಗಳನ್ನು ಸೂಚಿಸುತ್ತದೆ. ಇನ್ನೂ ಮುಂದುವರೆದು, ಮುಖ್ಯವಾಗಿ, ಕುಟುಂಬ ಎಂಬ ಸಂಸ್ಥೆಯನ್ನು ಅಸ್ತಿತ್ವಕ್ಕೆ ತರುವ ಮದುವೆಯ ಆಚರಣೆಯಲ್ಲಿ ವಿಧಿ ಅಥವಾ ಸಮಕಾಲೀನ ಪ್ರಭಾವಿ ವ್ಯವಸ್ಥೆ ಆಡುವ `ಆಟಗಳ`, ಎಂದರೆ ಉಂಟುಮಾಡುವ ಅನಿರೀಕ್ಷಿತ ಹಾಗೂ ಘೋರ ಪರಿಣಾಮಗಳ ಸುತ್ತಾ ಈ ನಾಲ್ಕೂ ನಾಟಕಗಳು ಕಟ್ಟಲ್ಪಟ್ಟಿವೆ.
ಈ ಸಂಕಲನದ ನಾಲ್ಕೂ ಏಕಾಂಕಗಳ ಕೇಂದ್ರಾಶಯವೆಂದರೆ : ಎಲ್ಲಾ ಸಮಾಜಗಳಲ್ಲಿಯೂ ನಡೆಯುವ ಗಂಡು-ಹೆಣ್ಣುಗಳ ಆಟ ಅಥವಾ `ಬೇಟ` `ಬೇಟೆ`ಯಾಗುವ ದುರಂತ. `ಮದುವೆ ಹೆಣ್ಣು` ನಾಟಕದಲ್ಲಿ, ಒಂದು ಬುಡಕಟ್ಟಿನ ಸಂಪ್ರದಾಯದಂತೆ ಮದುವೆಗೆ ಮೊದಲು ವರನು ಗಂಡಾಳಿನ ತಲೆಬುರುಡೆಯೊಂದನ್ನು ವಧು ದಕ್ಷಿಣೆಯಾಗಿ ವಧುವಿನ ತಂದೆತಾುಯರಿಗೆ ಕೊಡಲು ಕಾಡಿನಲ್ಲಿ ಅಲೆಯುತ್ತಿರುವಾಗ, ಮಳೆಯ ಹಾಗೂ ಕತ್ತಲೆಯ ಕಾರಣದಿಂದ ಗೊತ್ತಾಗದೆ ತಾನು ವಿವಾಹವಾಗಲಿರುವ ತರುಣಿಯನ್ನೇ ಕೊಂದು ಅವಳ ತಲೆಬುರುಡೆಯನ್ನು ತರುತ್ತಾನೆ. ಇಲ್ಲಿ, ಬೇಟೆಯಾಡುವುದು ವಿಧಿ ಹಾಗೂ ಬುಡಕಟ್ಟಿನ ಪ್ರಾಚೀನ ಸಂಪ್ರದಾಯ ಮತ್ತು ಬೇಟೆಗೆ ಗುರಿಯಾಗುವವರು ಗಂಡು ಮತ್ತು ಹೆಣ್ಣು ಇಬ್ಬರೂ. `ಕಸಂದ್ರ` ಎಂಬ ಎರಡನೆಯ ನಾಟಕದಲ್ಲಿ, ಹೆಲನ್ ಮತ್ತು ಪ್ಯಾರಿಸ್ ಇವರುಗಳ ವಿವಾಹೇತರ ಪ್ರೇಮ-ಕಾಮಗಳ ಕಾರಣದಿಂದ ಪ್ರಾರಂಭವಾಗುವ ಟ್ರಾಯ್ ಯುದ್ಧದಲ್ಲಿ ಅಲ್ಲಿನ ರಾಜಪುತ್ರಿ ಕಸಂದ್ರ ಗ್ರೀಕರ ಸೇನಾನಿ ಅಗಮೆಮ್ನಾನ್ ಗೆ ಸೆರೆಯಾಗಿ, ಅವನ ದಾಸಿಯಾಗಿ ಗ್ರೀಸ್ ಗೆ ಹೋಗಿ, ಅಲ್ಲಿ ದುರ್ಮರಣಕ್ಕೆ ಈಡಾಗುತ್ತಾಳೆ. ಇಲ್ಲಿಯೂ ವಿಧಿ (ಅವಳು ಸರಿಯಾಗಿ ಭವಿಷ್ಯವನ್ನು ನುಡಿಯಬಲ್ಲಳು; ಆದರೆ ಅವಳನ್ನು ಯಾರೂ ನಂಬದಿರುವಂತೆ ಅವಳಿಗೆ ಶಾಪವಿದೆ) ಮತ್ತು ಯುದ್ಧ (ಈ ವ್ಯವಸ್ಥೆಯಲ್ಲಿ ವಿಜಯೀ ಸೇನೆಗೆ ಮೊದಲು ಬಲಿಯಾಗುವವಳು ಸ್ತ್ರೀಯರು) ಇವುಗಳ ಬೇಟೆಗೆ ಅವಳು ಬಲಿಯಾಗುತ್ತಾಳೆ. ಪೌರಾಣಿಕ ದಾಕ್ಷಾಯಣಿ ಪ್ರಸಂಗವನ್ನು ಆಧರಿಸಿರುವ `ಸತಿ` ದಕ್ಷ-ಶಿವ ಸಂಘರ್ಷವನ್ನು `ಆರ್ಯ-ಅನಾರ್ಯ` ಸಂಘರ್ಷವೆಂಬಂತೆ ಚಿತ್ರಿಸುತ್ತದೆ; ಮತ್ತು ಈ ಸಂಘರ್ಷದಿಂದ ಉದ್ಭವಿಸುವ ಘೋರ ಯುದ್ಧವನ್ನು ತಡೆಯಲು ದಾಕ್ಷಾಯಣಿ ತಾನೇ ಯಜ್ಞಕುಂಡಕ್ಕೆ ಹಾರಿ ಬಲಿಯಾಗುತ್ತಾಳೆ. ಈ ಮೂರೂ ನಾಟಕಗಳಿಗಿಂತ ಭಿನ್ನವಾದುದು `ಮಕರಚಂದ್ರ`. ಇದರಲ್ಲಿ, ಕೆಳ ವರ್ಗದ ಜಾಡಮಾಲಿಯೊಬ್ಬನು ತನ್ನೆದುರು ಮನೆಯಲ್ಲಿರುವ ಸುಂದರ ನಟಿಯೊಬ್ಬಳ ನೀಳ ರೇಷ್ಮೆ ಕೂದಲನ್ನು ನೋಡಿ ಅವಳನ್ನು ಮೋಹಿಸುತ್ತಾನೆ ಮತ್ತು ಅವಳಿಗೆ ಭಾವುಕ ಪ್ರೇಮಪತ್ರಗಳನ್ನು ಬರೆಯುತ್ತಾನೆ. ಆ ಪತ್ರಗಳಿಂದ ಆ ನಟಿ ಆರ್ಕತಳಾದರೂ ಅವನ ಸಾಮಾಜಿಕ ಅಂತಸ್ತನ್ನು ಅರಿತ ಕೂಡಲೇ ಅವನ ಪ್ರೇಮವನ್ನು ತಿರಸ್ಕರಿಸುತ್ತಾಳೆ ಮತ್ತು ಆ ತಿರಸ್ಕಾರವನ್ನು ಸಹಿಸಿಕೊಳ್ಳಲಾರದೆ ಆ ಬಡ ಜಾಡಮಾಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇಲ್ಲಿ, ಶ್ರೇಣಿಕೃತ ಸಾಮಾಜಿಕ ವ್ಯವಸ್ಥೆ ಬೇಟೆಯಾಡುತ್ತದೆ ಮತ್ತು ಅದರಲ್ಲಿ ಆ ಬಡ ಮನುಷ್ಯ ಮಿಕವಾಗುತ್ತಾನೆ. ಈ ನಾಟಕವನ್ನು ಯಶೋಧರ ಚರಿತೆಯ ಮತ್ತೊಂದು ವಿನ್ಯಾಸವೆಂದು ನೋಡಬಹುದು; ಪ್ರಾಚೀನ ಕಾವ್ಯದ ಅಷ್ಟಾವಂಕ ಮತ್ತು ಅವನ ಸಂಗೀತ ಇವಕ್ಕೆ ಬದಲಾಗಿ ಅರವತ್ತು ವರ್ಷದ ಬಡ ಮುದುಕ ಮತ್ತು ಅವನ ಪ್ರೇಮ ಪತ್ರಗಳಿವೆ.
ಈ ಬಗೆಯ `ಬೇಟ-ಬೇಟೆ-ಬೇಟೆಗಾರ` ಚೌಕಟ್ಟಿನಲ್ಲಿ ಈ ರೂಪಕಗಳು ನಮಗೆ ದರ್ಶಿಸುವುದೇನೆಂದರೆ, ಹೆಚ್ಚಿನ ಸಂದರ್ಭಗಳಲ್ಲಿ ಪುರುಷಕೇಂದ್ರಿತ ವ್ಯವಸ್ಥೆಯೆಂಬ ಬೇಟೆಗಾರನಿಗೆ ಸಿಕ್ಕಿ ನರಳುವ/ಸಾಯುವ ಮಿಕ ಸ್ತ್ರೀ ಎಂಬುದು. ಶೌರ್ಯ-ಸಾಹಸಗಳನ್ನು ಆದರ್ಶ ಮೌಲ್ಯಗಳೆಂದು ಪರಿಗಣಿಸುವ ಯುದ್ಧ, ಬೇಟೆ ಮತ್ತು ಪಿತೃವಿಗೆ ಮಗಳ ಮೇಲೆ ಅಧಿಕಾರವನ್ನು ಕೊಡುವ ಕೌಟುಂಬಿಕ ವ್ಯವಸ್ಥೆ ಇವೆಲ್ಲವೂ ಪುರುಷನಿಗಿಂತ ಸ್ತ್ರೀಯನ್ನು ಕೀಳೆಂದು ಭಾವಿಸುವ ಪುರುಷ ನಿರ್ಮಿತ ಹಾಗೂ ಪುರುಷಕೇಂದ್ರಿತ ವ್ಯವಸ್ಥೆಯಲ್ಲಿ ತಂದೆಗೆ ಮಗಳನ್ನು ಬಲಿ ಕೊಡುವ ಅಥವಾ ಅವಳ ವಿವಾಹವನ್ನು ನಿರ್ಧರಿಸುವ ಅಧಿಕಾರವಿದೆ; ವಿಜಯೀ ಸೇನೆಗೆ ದೊರಕುವ ಕೊಳ್ಳೆಯಲ್ಲಿ ಸ್ತ್ರೀಯನ್ನು ಕೂಡಾ ಕೊಳ್ಳೆಯ ಭಾಗವೆಂದು ಪರಿಗಣಿಸುವ ಗರ್ವವಿದೆ. ಅರ್ಥಾತ್, ಸ್ತ್ರೀಯರೆಂದರೆ ಉಪಯೋಗಿಸಿ ಎಸೆಯಬಲ್ಲ ಸರಕುಗಳು ಎಂಬ ದೃಷ್ಟಿಕೋನ ಎಲ್ಲ ಸಾಮಾಜಿಕ ವ್ಯವಸ್ಥೆಗಳಲ್ಲಿಯೂ ಕ್ರಿಯಾಶೀಲವಾಗಿರುತ್ತದೆಯೆಂಬುದನ್ನು ಈ ನಾಟಕಗಳು ಪರಿಣಾಮಕಾರಿಯಾಗಿ ದರ್ಶಿಸುತ್ತದೆ. ಶ್ರೇಷ್ಟ ಕವಿಯಾಗಿರುವ ಶಿವಪ್ರಕಾಶರ ಪದ್ಯಗಂಧಿ ಗದ್ಯ ಉತ್ಕಟ ಭಾವನೆಗಳನ್ನು ಹಾಗೂ ನಾಟಕೀಯ ಸಂದರ್ಭಗಳನ್ನೂ ಸಮರ್ಥವಾಗಿ ನಿಭಾಯಿಸುತ್ತದೆ.
ಕೊನೆಯ ನಾಟಕ `ಮಕರಚಂದ್ರ` ಇವೆಲ್ಲವುಗಳಿಗಿಂತ ಭಿನ್ನವಾಗಿದೆ. ಇದರಲ್ಲಿ ಬರುವ ಪ್ರೇಮಿ ಅರವತ್ತು ವರ್ಷದ ಮತ್ತು ವಯಸ್ಕರ ಶಾಲೆಯಲ್ಲಿ ಶಿಕ್ಷಣ ಪಡೆದಿರುವ ಪೌರ ಕಾರ್ಮಿಕ. ಆದರೆ ಇವನು ತನ್ನ ಪ್ರೇಮಿಗೆ ಬರೆಯುವ ಪತ್ರಗಳಾದರೋ ಅದ್ಭುತ ಕಾವ್ಯಗಳು. ಅಲ್ಲದೆ, ಈ `ನಾಟಕ`ವನ್ನು ರಚಿಸಿ ರಂಗದ ಮೇಲೆ ತರುವವನು ಹಾಲು ಮಾರುವ 13 ವರ್ಷಗಳ ಒಬ್ಬ ಹುಡುಗ. ಈ ಕಾರಣಗಳಿಂದ ಉದ್ದಕ್ಕೂ ನಾಟಕ ಅಸಹಜ ಹಾಗೂ ಕೃತಿಮವೆಂದು ಭಾಸವಾಗುತ್ತದೆ. `ದೇಹಕ್ಕೆ ಮುಪ್ಪಾದರೂ ಮನಸ್ಸಿಗೆ ತಾರುಣ್ಯವಿರಬಹುದು, ಮತ್ತು ಪತ್ರಗಳು ಮನಸ್ಸಿನಲ್ಲೇಳುವ ಭಾವನೆಗಳ ಒಂದು ಸಾಂಕೇತಿಕ ರೂಪ` ಎಂದು ಈ ನಾಟಕವನ್ನು ಯಶಸ್ವಿಯಾಗಿ ರಂಗದ ಮೇಲೆ ತಂದಿರುವ ಕೃಷ್ಣಮೂರ್ತಿ ಕವತ್ತಾರ್ ಹೇಳುತ್ತಾರೆ. ಆದರೂ, ಕನಿಷ್ಠ ಪಕ್ಷ ಓದುವಾಗ, ಪಾತ್ರಗಳು ಮತ್ತು ಘಟನೆಗಳೆಲ್ಲವೂ ಮಕ್ಕಳ `ಆಟ`ದಂತೆಯೇ ಕಾಣುತ್ತವೆ. ನಾಟಕ ನಟಿಯ ಒಂಟಿತನ, ಕೃತಿಮ ಹಾಗೂ ಯಾಂತ್ರಿಕ ಬದುಕು, ಇವುಗಳನ್ನು ಚಿತ್ರಿಸುವ ಮೂಲಕ ಅವಳ ಪೊಳ್ಳು ಬದುಕನ್ನು ಬಡ ಹಾಗೂ ವೃದ್ಧ ಪ್ರೇಮಿಯ ಹೃದಯ ಶ್ರೀಮಂತಿಕೆಗೆ ಎದುರಾಗಿಸುತ್ತದೆ. ಆದರೂ, ಕೊನೆಯಲ್ಲಿ ಬರುವ ಅವನ ಸಾವು ಅನಿವಾರ್ಯವೆ ಎಂಬ ಪ್ರಶ್ನೆ ಓದುಗರಲ್ಲೇಳುತ್ತದೆ.
ಕೊನೆಯಲ್ಲೊಂದು ಮಾತು : ಈ ಸಂಕಲನದ ಕರಡನ್ನು ನಾಟಕಕಾರರು ಇನ್ನೂ ಹೆಚ್ಚಿನ ಎಚ್ಚರದಿಂದ ತಿದ್ದಬೇಕಾಗಿತ್ತೆಂದು ತೋರುತ್ತದೆ. . . . ಮುದ್ರಣ ದೋಷಗಳು ಉತ್ತಮ ನಾಟಕಗಳಿಗಿಟ್ಟ ಕಪ್ಪು ಚುಕ್ಕೆಗಳಂತೆ ಉದ್ದಕ್ಕೂ ಕಂಡುಬರುತ್ತದೆ.
ಶೀರ್ಷಿಕೆ: ಮದುವೆಯ ಆಟಗಳು (ನಾಟಕಗಳು) ಲೇಖಕರು: ಎಚ್ ಎಸ್ ಶಿವಪ್ರಕಾಶ್ ಪ್ರಕಾಶಕರು: ಅಭಿನವ ಪುಟಗಳು :130 ಬೆಲೆ:ರೂ.75/-
ಕೃಪೆ : ಪ್ರಜಾವಾಣಿ

ಬೆಸುಗೆಗೊಳ್ಳದ ಹಳಿಗಳು


ಕಥೆ, ನಾಟಕ, ಚಿತ್ರಕಲೆಯ ಬಹುರೂಪಿ ಚೌಗಲೆ ಅವರು ಅನುವಾದ ಸಾಹಿತ್ಯದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಮರಾಠಿಯ ಹಲವು ಪ್ರಮುಖ ನಾಟಕಗಳನ್ನು ಅವು ಕನ್ನಡದ್ದೇ ಸ್ವಂತ ಕೃತಿ ಎನಿಸುವಷ್ಟು ಸಮರ್ಥವಾಗಿ ರೂಪಾಂತರಿಸಿದ್ದಾರೆ. ನಾಟಕ ಕ್ಷೇತ್ರದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಚೌಗಲೆ ಅವರ ಸಣ್ಣ ಕಥೆ ಆಧರಿಸಿ ಮತ್ತೊಬ್ಬ ನಟ, ನಿರ್ದೇಶಕ, ಲೇಖಕ ಶಿರೀಷ ಜೋಷಿ `ಬೆಸುಗೆಗೊಳ್ಳದ ಹಳಿಗಳು‘ ಎಂಬ ನಾಟಕವಾಗಿಸಿದ್ದಾರೆ. ನಾಟಕದ ಶೀರ್ಷಿಕೆ `ಬೆಸುಗೆಗೊಳ್ಳದ …‘ ಎಂದಿದ್ದರೂ ಈ ಇಬ್ಬರು ಪ್ರತಿಭಾವಂತರ ಜುಗಲ್ ಬಂದಿಯಿಂದಾಗಿ ನಾಟಕ ಬಿಗಿಯಾದ ಬಂಧದಿಂದ ಸುಮಧುರವಾಗಿ ಬೆಸುಗೆಗೊಂಡಿದೆ. ಹಲವು ಪ್ರಯೋಗವನ್ನೂ ಕಂಡಿದೆ. ನಾಟಕದ ಯಶಸ್ಸಿರುವುದೇ ಅದರ ಪ್ರಯೋಗದಲ್ಲೇ.
ಚೌಗಲೆ ಅನುವಾದಿಸಿರುವ ಗಾಂಧಿ-ಅಂಬೇಡ್ಕರ್ ನಾಟಕದಲ್ಲಿ ವಿದೂಷಕ ಸೇರಿ ಮೂರೇ ಪಾತ್ರಗಳು. ವಿದೂಷಕ ಇಬ್ಬರನ್ನೂ ಪ್ರಶ್ನಿಸುತ್ತಾನೆ, ಕೆಣಕುತ್ತಾನೆ, ಪ್ರತಿಕ್ರಯಿಸುತ್ತಾನೆ. ಈ ಸಂಭಾಷಣೆಯಲ್ಲಿ ಅರ್ಧ ಶತಮಾನದ ಭಾರತದ ಚರಿತ್ರೆ ಇದೆ. ಸ್ವಾತಂತ್ರ್ಯ ಹೋರಾಟ ಇದೆ. ಜಾತಿ, ಅಸ್ಪೃಶ್ಯತೆ ನಿವಾರಣೆ ಹೇಗೆಂಬ ಸೈದ್ಧಾಂತಿಕ ಸಂಘರ್ಷ ಇದೆ. ಗಾಂಧಿಯನ್ನು ತುಸು ಹೆಚ್ಚಾಗಿಯೇ ಅಂಬೇಡ್ಕರ್ ಚುಚ್ಚಿದರೂ ಅಲ್ಲಿ ಇತಿಹಾಸದ ಯಥಾವತ್ ಘಟನೆಗಿಂತ ದಲಿತರ ಸಂಕಟದ ಸ್ಫೋಟ ಇದೆ. ನಿರ್ದೇಶಕನಿಗೆ ದೊಡ್ಡ ಸವಾಲು ಒಡ್ಡುವ ನಾಟಕ ಇದು. ಚೌಗಲೆ ಅವರು ನಾಟಕವನ್ನು ಅನುವಾದಿಸಿ ಕೈತೊಳೆದುಕೊಳ್ಳುವುದಿಲ್ಲ. ಅದರ ಪ್ರಯೋಗಕ್ಕೆ ನಿರ್ದೇಶಕರನ್ನು ಪ್ರೀತಿಯಿಂದ ಒತ್ತಾಯಿಸುತ್ತಾರೆ. ಅದಕ್ಕಾಗಿ ನಾಡಿನ ಹಲವೆಡೆ ಓಡಾಡುತ್ತಾರೆ. ಇದು ಸೃಜನಶೀಲತೆಯ ಮುಂದುವರಿಕೆ. ನಾಟಕಕ್ಕೆ ಇದು ತುಂಬಾ ಅಗತ್ಯ.
ಶೀರ್ಷಿಕೆ: ಬೆಸುಗೆಗೊಳ್ಳದ ಹಳಿಗಳು ಲೇಖಕರು: ಕಥೆ:ಡಿ.ಎಸ್.ಚೌಗಲೆ ರಂಗರೂಪ:ಶಿರೀಷ ಜೋಷಿ ಪ್ರಕಾಶಕರು: ಪುಟಗಳು : 60 ಬೆಲೆ: ರೂ.30/-
ಶೀರ್ಷಿಕೆ: ಗಾಂಧಿ-ಅಂಬೇಡ್ಕರ್ ಲೇಖಕರು: ಪ್ರೇಮಾನಂದ ಗಜ್ವಿ ಅನು:ಡಿ.ಎಸ್.ಚೌಗಲೆ ಪ್ರಕಾಶಕರು: ಪುಟಗಳು : 106 ಬೆಲೆ: ರೂ.60/-

ಬಹುಮುಖಿ


ತಮ್ಮ ಕತೆ ಕಾದಂಬರಿಗಳಿಂದ ಪ್ರಸಿದ್ಧರಾಗಿರುವ ವಿವೇಕ ಶಾನಭಾಗದ ಎರಡನೆಯ ನಾಟಕ `ಬಹುಮುಖಿ‘. ನಗರಾಭಿಮುಖ ಚಲನೆ ತುಂಬ ತೀವ್ರವಾಗಿರುವ ತೀರಾ ಸಮಕಾಲೀನವೆನ್ನಿಸುವ ವಿದ್ಯಮಾನಗಳಿಗೆ ಒಡ್ಡಿದ ರೂಪಕದಂತಿರುವ ಈ ನಾಟಕ ಈ ಹೊತ್ತಿನ ಅನೇಕ ಮುಖ್ಯ ಪ್ರಶ್ನೆಗಳನ್ನು ತನ್ನ ಗರ್ಭದಲ್ಲಿ ಇಟ್ಟುಕೊಂಡಿದೆ. ಹಲವು ಪಾತ್ರ, ಘಟನೆಗಳ ಸುತ್ತ ಹೆಣೆದುಕೊಂಡಿರುವ ಈ ನಾಟಕವು ಸದ್ಯದ ನಗರದ ಜೀವನ ಕ್ರಮದಲ್ಲಿ `ಯಶಸ್ವಿ‘ಯಾಗುವುದು ಹೇಗೆ, `ಸುಖಿ‘ಯಾಗಿರುವುದು ಹೇಗೆ ಎಂಬ ಆತಂಕದಲ್ಲಿರುವ ವ್ಯಕ್ತಿಗಳ ಪಾಡನ್ನು ಮಾರ್ಮಿಕವಾಗಿ ಚಿತ್ರಿಸುತ್ತದೆ. ಬೆಂಗಳೂರು ಎಂಬುದು ಈ ನಾಟಕದಲ್ಲಿ ಜನಭರಿತವಾದ ಕೇವಲ ಒಂದು ಭೌಗೋಳಿಕ ಪ್ರದೇಶವಲ್ಲ; ಅದು ಇಲ್ಲಿ ಸಮಕಾಲೀನ, `ಆಧುನಿಕ‘ ನಾಗರೀಕತೆಯ ಒಂದು ಕಿರು ರೂಪವೇ ಸರಿ. ಹಾಗಾಗಿ ವಿವೇಕರು ಈ ನಾಟಕದಲ್ಲಿ ಪ್ರತಿಬಿಂಬಿಸುತ್ತಿರುವ ವಿದ್ಯಮಾನಗಳು ಭಾರತೀಯ ಉಪಖಂಡದ ಇವತ್ತಿನ ಯಾವುದೇ ದೊಡ್ಡ ನಗರದ ವಿದ್ಯಮಾನಗಳನ್ನು ಪ್ರತಿಫಲಿಸಬಲ್ಲ ಸಾಮರ್ಥ್ಯವನ್ನು ಪಡೆದುಕೊಂಡು ಬಿಡುತ್ತದೆ. ಅನೇಕ ಕುತೂಹಲಕಾರಿ ಸ್ಥಳೀಯ ವಿವರಗಳಿದ್ದೂ ನಾಟಕ ಪಡೆದುಕೊಂಡಿರುವ ಈ ವ್ಯಾಪಕತೆ ವಿವೇಕರ ಸೃಜನಶೀಲ ಪ್ರತಿಭೆಗೆ ಸಾಕ್ಷಿಯಾಗಿದೆ.
ಹತ್ತು ದೃಶ್ಯಗಳಿಂದ ಕೂಡಿದ ಈ ನಾಟಕವು ಮೇಲು ನೋಟಕ್ಕೆ ಹಲವು ಬಿಡಿ ದೃಶ್ಯಗಳನ್ನು ಸಡಿಲವಾಗಿ ಜೋಡಿಸಿಟ್ಟಂತಿದೆ. ಹಾಗೆಯೇ, ಬಿರಾಜದಾರ, ಸಂಜಯ, ಶೇಖರ, ಜಕ್ಕೂಜಿ ಮುಂತಾದ ಪಾತ್ರಗಳ ವೈಯಕ್ತಿಕ ಸಮಸ್ಯೆಗಳನ್ನು ಪಕ್ಕ ಪಕ್ಕದಲ್ಲಿ ಇಟ್ಟಂತೆ ಕಾಣುತ್ತದೆ. ಇವೆಲ್ಲವುಗಳನ್ನು ಸಂಯೋಜಿಸಿ ಒಂದು ದರ್ಶನವನ್ನು ಕಟ್ಟಲು ವಿವೇಕರು ವಾಸ್ತವವಾದೀ ನಾಟಕದ ಕಾರ್ಯಕಾರಣ ತರ್ಕವನ್ನು ಅವಲಂಬಿಸುವುದಿಲ್ಲ. ಒಂದು ಕಾಲಕ್ಕೆ ಕನ್ನಡದಲ್ಲಿ ಜನಪ್ರಿಯವಾಗಿದ್ದ ಎಪಿಕ್ ರಂಗಭೂಮಿಯ ತಂತ್ರಗಳನ್ನೂ ವಿವೇಕರು ಬಳಸುವುದಿಲ್ಲ. ನಾಟಕದ ವಸ್ತುವು ನಮ್ಮ ಸುತ್ತಲ ಹಲವು ವ್ಯಕ್ತಿ-ಸನ್ನಿವೇಶಗಳನ್ನು ಹೊಳೆಯಿಸುವಂತಿದ್ದು ಅದನ್ನೊಂದು ಅಸಂಗತ ಪುರಾಣವನ್ನಾಗಿ ಕಟ್ಟುವ ಇರಾದೆ ಸೂಚ್ಯವಾಗಿ ಗೋಚರಿಸಿದರೂ `ಬಹುಮುಖಿ‘ ಒಂದು ಅಸಂಗತ ನಾಟಕವಲ್ಲ. ವಾಸ್ತವವಾದಿ ಮತ್ತು ಅಸಂಗತ ನಾಟಕಗಳ ಪರಿಚಿತ ಮಾದರಿಗಳ ನಡುವಣ ಪ್ರಕಾರವೊಂದನ್ನು ವಿವೇಕರು ಶೋಧಿಸುತ್ತಿದ್ದಾರೆ ಎನಿಸುತ್ತದೆ. ಇವತ್ತಿನ ಕನ್ನಡ ನಾಟಕ ಮತ್ತು ರಂಗಭೂಮಿಗಳ ಸಂದರ್ಭದಲ್ಲಿ ವಿವೇಕರ ಈ ಸೃಜನಶೀಲ ಪ್ರಯತ್ನ ಗಮನ ಸೆಳೆಯುವಂತಿದೆ.
ಈ ನಾಟಕದ ಪ್ರಧಾನ ಪಾತ್ರಗಳ ಅವಸ್ಥೆಯಲ್ಲಿ ಒಂದು ಸಾದೃಶ್ಯ ಗೋಚರಿಸುತ್ತದೆ. ಇವರು ಸಣ್ಣ ಸಣ್ಣ ಊರುಗಳಿಂದ ಬೆಂಗಳೂರೆಂಬ ಮಹಾನಗರಿಗೆ ಬೇರೆ ಬೇರೆ ಕಾರಣಗಳಿಗಾಗಿ ಬಂದವರು. ಈ ನಾಟಕದ ಮುಖ್ಯ ಪಾತ್ರವಾದ ಪತ್ರಕರ್ತ ಸಂಜಯ ಒಂದು ಸಂದರ್ಭದಲ್ಲಿ ಹೇಳುತ್ತಾನೆ : ಸಣ್ಣ ಊರಿನಿಂದ ಬಂದು ಈ ಸಿಟಿಯಲ್ಲಿ ಊರಿಕೊಳ್ಳೋದು ಅಂದರೆ ಏನೂಂತ ನಿನಗೆ ಗೊತ್ತಿಲ್ಲ. ಯಾವುದನ್ನು ನಮ್ಮ ಶಕ್ತಿ ಅಂತ ತಿಳಕೊಂಡು ಬೆಳೆದಿರತೀವೋ ಅದೆಲ್ಲ ಇಲ್ಲಿ ದೌರ್ಬಲ್ಯ ಆಗಿ ಬಿಡತ್ತೆ. ಇದಕ್ಕೆ ಒಂದು ವೈದೃಶ್ಯವೆಂಬಂತೆ ಊರ್ಮಿಳಾ ಹೇಳುತ್ತಾಳೆ : ನಾನು ಸಿಟಿ ಹುಡುಗಿ, ನನಗೆ ಇದೆಲ್ಲ ಗೊತ್ತಾಗಲ್ಲ . . . ನನಗೆ ಈ ಕೆಲಸ ಲಕ್ಷುರಿ, ನಿನಗೆ ಇದೇ ಜೀವನಾ . . . .
ಒಮ್ಮೆ ಜಗನ್ನಾಥನಾಗಿದ್ದು ಈಗ ಒಬ್ಬ ಪ್ರಭಾವಿ `ಗುರು‘ವಾಗಿರುವ ಜಕ್ಕೂಜಿ ಗೆಳೆತನದ ಸಲಿಗೆಯಲ್ಲಿ ಆದರೆ ಗೀತೋಪದೇಶದ ಧಾಟಿಯಲ್ಲಿ ಸಂಜಯನಿಗೆ ಹೇಳುವ ಮಾತುಗಳಲ್ಲಿ ಆಧುನಿಕ ನಗರಜೀವನ ಸ್ವರೂಪದರ್ಶನವೇ ಆಗುವಂತಿದೆ : ನೀನು ಅದೇ ನಮ್ಮೂರಿನ ಗುಡಿಗಾರ ಗಲ್ಲಿಯ ಸಂಜೂ ಆಗಿ ಇರ್ತೀನಿ ಅಂದ್ರೆ ಇಲ್ಲಿ ಬದುಕಕ್ಕೆ ಆಗಲ್ಲ. ಮೊದಲು ಬೇರು ಬಿಡಿಸಿಕೋಬೇಕು. ಹಗುರಾದರೆ ಮಾತ್ರ ತೇಲಕ್ಕೆ ಆಗೋದು. ಈ ಸಿಟಿ ಹುಡುಗ್ರನ್ನ ನೋಡು. ಅವರಿಗೆ ಏನಾದ್ರೂ ಭಾರ ಇದೆಯಾ. ಮಾತೃಭಾಷೆಯ ಭಾರವಿಲ್ಲ. ಸಮಾಜ ಸುಧಾರಣೆಯ ಭಾರವಿಲ್ಲ. ರಾಜಕೀಯದ ಭಾರವಿಲ್ಲ. ಸಾಮಾಜಿಕ ನ್ಯಾಯದ ಭಾರವೂ ಇಲ್ಲ. ನಮಗೆ? ರಾವ್ ಮಾಸ್ತರು ತಲೆಯಲ್ಲಿ ತುಂಬಿದ್ದನ್ನು ತೆಗೆಯಕ್ಕೇ ಆಗ್ತಾ ಇಲ್ಲ. ಅವರೆಲ್ಲ ಕಾಲ್ ಸೆಂಟರ್ಗೆ ಹೋಗಿ ರಾಬರ್ಟೋ ಸ್ಟೀವೋ ಆಗಿ ಕೆಲಸಾ ಮಾಡಿ ಮನೆಗೆ ಬಂದು ರಾಮುನೋ ರಾಘುನೋ ಆಗಿರ್ತಾರೆ. ಇಲ್ಲಿ ಕಳಚಿಕೋಬೇಕು. ಅಂಟಿಕೋಬಾರದು. ರಸ್ತೆ ಮೇಲೆ ಯಾರೋ ಸಾಯ್ತಾ ಬಿದ್ದಿದ್ದರೂ ಮುಖ ತಿರುಗಿಸಿ ನಡೆಯಲು ಕಲೀಬೇಕು. ಮತ್ತು ಅಂಥವರನ್ನು ಎತ್ತತಾರಲ್ಲ. ಆ ಸಂಘದವರಿಗೆ ಚಾರಿಟಿ ಅಂತ ಹಣ ಕೊಡಬೇಕು. ಅದು ನಮ್ಮ ಮನಸ್ಸಿನ ಮತ್ತು ಸಮಾಜದ ಸ್ವಾಸ್ಥ್ಯಕ್ಕಾಗಿ.
ತನ್ನ ಮೊದಲಿನ ಅಸ್ಮಿತೆಯನ್ನು ಕಳಚಿಕೊಂಡು ಒಬ್ಬ `ಗುರು‘ವಾಗಿ ಅವಸ್ಥಾನಗೊಂಡು ಬೆಂಗಳೂರಿನಲ್ಲಿ `ಯಶಸ್ವಿ‘ಯಾಗಿರುವ ಜಕ್ಕೂಜಿಗೆ ತನ್ನ ಸದ್ಯದ ಜೀವನ ಕ್ರಮ ಮೋಸದ್ದು ಅನ್ನಿಸುವುದೇ ಇಲ್ಲ. ನಗರಜೀವನದ ಇನ್ನೊಂದು ಮುಖವನ್ನು ಸೂಚಿಸುತ್ತ ಅವನು ಒಂದು ವರ್ಗದ ಮಹಿಳೆಯರ ಸಮಸ್ಯೆಗೆ ತಾನು ಕೊಡುತ್ತಿರುವ `ಪರಿಹಾರ‘ ಅವರನ್ನು ಕಾಡುತ್ತಿರುವ ಶೂನ್ಯದ ಬೇಸರ ಸ್ಥಿತಿಗೆ ಔಷಧಿವೆಂಬಂತಿದೆ ಎಂಬುದನ್ನು ಕಂಡುಕೊಂಡಿದ್ದಾನೆ. ಅವರ ಬೇಸರಕ್ಕೆ ಸ್ಪಂದಿಸೋದಕ್ಕೆ ಅವರ ಗಂಡಂದಿರು-ಮಕ್ಕಳಿಗೆ ಪುರುಸೊತ್ತೇ ಇಲ್ಲದ ಸಂದರ್ಭದಲ್ಲಿ ಅವರ ಗೋಳುಗಳಿಗೆ ತಾನು ಕಿವಿಯಾದೆ ; ಅಷ್ಟೇ ಸಾಲದು ಎಂದು ಅದಕ್ಕೊಂದಷ್ಟು ಧ್ಯಾನ-ಯೋಗ ಬೆರೆಸಿದೆ; ಬೇಕಾದರೆ ಒಂಥರಾ ಎಮೋಶನಲ್ ಫಿಟ್ನೆಸ್ ಸೆಂಟರ್ ಅಂತಾ ಇಟ್ಟುಕೋ ಅಂತ ಅವನು ತನ್ನ ಗೆಳೆಯ ಸಂಜಯನಿಗೆ ಹೇಳುತ್ತಾನೆ. ತನ್ನ ಅಪ್ಪ ಜೋಯಿಸರಾಗಿದ್ದರು. ಅವರ ಬಳಿಯೂ ಜನ ಕಷ್ಟ-ಸುಖ ಹೇಳಿಕೊಂಡು ಎರಡು ತಿಳುವಳಿಕೆಯ ಮಾತು ಕೇಳಿಕೊಂಡು ದಕ್ಷಿಣೆ ಕೊಟ್ಟು ಹೋಗುತ್ತಿದ್ದರು. `ನಾನು ನನ್ನ ಕುಟುಂಬ ವೃತ್ತಿಯನ್ನು ಬೇರೆ ಥರಾ ಮುಂದುವರಿಸಿಕೊಂಡು ಹೋಗ್ತಿದ್ದೇನೆ ಜನರಿಗೆ ನೆಮ್ಮದಿಯನ್ನು ಮಾರ್ತಿದ್ದೇನೆ‘ ಎಂದು ಜಕ್ಕೂಜಿ ಹೇಳುತ್ತಾನೆ.
ಸಂಜಯನ ಬಾಸ್ `ಕರ್ನಾಟಕ ಧ್ವನಿ‘ ಪತ್ರಿಕೆಯ ಸಂಪಾದಕ ಬಿರಾಜದಾರನಿಗೆ `ಯಶಸ್ವಿ‘ ಪತ್ರಿಕೋದ್ಯಮವೆಂದರೆ, ಎಲ್ಲಾನೂ ಉತ್ಸಾಹದಿಂದ ನೋಡೋದು; ನೀರಸ ಘಟನೆಗಳನ್ನು, ವಿವರಗಳನ್ನು ರೋಚಕ `ಸ್ಟೋರಿ‘ಗಳನ್ನಾಗಿ ಪರಿವರ್ತಿಸುವುದು. ಸಂಜಯನಿಗೆ ಅಂತ ದಿನಾ ಅನತಿದ್ರ ಹಾಂಗ ಕಾಣಸತೈತಿ. ಈ ಸ್ವರ್ಗದಾಗ ನಿನ ಮಾರಿ ಚರ್ಮ ಹೊಳಿಯೂ ಹಾಂಗ ಮಾಡೋ ಕ್ರೀಮ್ ಹಚಿಗೋ ಅಂದ್ರ ಅದಕ್ಕೊಂದ ಅರ್ಥ ಇರತೈತಿ. ಪೇಜ್ ತುಂಬಾ ನಷ್ಟಪಂಚಾಂಗ ಇದ್ದರ, ಆ ಸೂತಕದ ಮನಿಯಾಗ ಸಿಹಿ ಮಾರಲಿಕ್ಕಾಗತೈತೇನು? ಸ್ಲಂ ಒಳಗ ವಜ್ರದ ಒಡವಿ ಜಾಹೀರಾತು ಹಾಕಲಿಕ್ಕೆ ಯಾರಾದರೂ ರೊಕ್ಕ ಕೊಡತಾರೇನು? ಇದೂ ಹಾಂಗ. . . ಛಲೋ ಛಲೋ ಜಾಹೀರಾತು ಸಿಗತಾವ. . . . . ಫುಟ್ ಬಾಲ್ ಕಪ್ ಗೆದ್ದರ ಆ ದೇಶದ ಮಾರುಕಟ್ಟಿ ಬೆಳೀತದಂತ. ಯಾಕ? ನಿರಾಳ ಮನಸ್ಥಿತಿಯೊಳಗ ಜನಾ ಹೆಚ್ಚು ಖರ್ಚು ಮಾಡತಾರ. ಸಮಾಜ, ಮತ್ತ ಮುಖ್ಯವಾಗಿ ನಮ್ಮ ಓದುಗರ ಸ್ವಾಸ್ಥ್ಯ. ನಾವು ನೋಡಿಕೋ ಬೇಕಲ್ಲ‘.
ನಾಟಕದ ಇನ್ನೊಂದು ಮುಖ್ಯ ಪಾತ್ರವಾದ ಶೇಖರ ಶ್ರೀರಂಗಪಟ್ಟಣದವನು. ಅವನ ತಂದೆ ಅಲ್ಲಿ ಟೂರಿಸ್ಟ್ ಗೈಡ್ ಆಗಿದ್ದರು. ಇತಿಹಾಸ ಚೆನ್ನಾಗಿ ಗೊತ್ತಿತ್ತು. ಅದನ್ನೇ ತಮ್ಮ ಮಗನಿಗೆ ಕತೆಯಾಗಿ ಹೇಳುತ್ತಿದ್ದರು. ಇವನು ಅಪ್ಪನಿಗಿಂತ ಚೆನ್ನಾಗಿ ಕತೆ ಹೇಳೋದು ಕಲಿತ. ರೋಚಕವಾಗಿ ಹೇಳಬೇಕೂಂತ ಇಲ್ಲದೇ ಇರೋದನ್ನೂ ಸೇರಿಸತಾ ಇದ್ದೆ. . . . ಅದೇ ನನಗೆ ಅಭ್ಯಾಸವಾಗಿ ಹೋಯಿತು. ಹೊಸ ಹೊಸ ಕತೆ ಹುಟ್ಟಿಸಿ ಹೇಳೋದು. ಇವನೂ ಈಗ ಬೆಂಗಳೂರಿಗೆ ಬಂದಿದ್ದಾನೆ. ಬದುಕಲು ದುಡ್ಡು ಬೇಕು. ಅದಕ್ಕಾಗಿ ಉದ್ಯೋಗ ಬೇಕು. ಕತೆ ಕಟ್ಟಿ ಹೇಳುವ, ನಟಿಸುವ ಉದ್ಯೋಗ ಬಿಟ್ಟರೆ ಬೇರೆ ಕೆಲಸ ಗೊತ್ತಿಲ್ಲ.
ಈ ಎಲ್ಲಾ ಪಾತ್ರಗಳನ್ನೂ ಸನ್ನಿವೇಶಗಳನ್ನೂ ಪರಸ್ಪರ ಬೆಸೆಯುವ ಸಂಗತಿಯೊಂದು ನಾಟಕದಲ್ಲಿ ನಡೆಯುತ್ತದೆ. ಬಿರಾಜದಾರನು `ತಲಿ ಮ್ಯಾಲ ಹೊಡಿಯುವಂಥಾ‘ ಒಂದು `ಸ್ಟೋರಿ‘ಗಾಗಿ ಸಂಜಯನನ್ನು ಪೀಡಿಸುತ್ತಾನೆ. ಅದರ ಒತ್ತಡ-ಆತಂಕಗಳಲ್ಲಿರುವ ಸಂಜಯನಿಗೆ ಶೇಖರ ಆಕಸ್ಮಿಕವಾಗಿ ಸಿಕ್ಕಿ ತಾನು ಕೆಂಪೇಗೌಡನ ವಂಶಸ್ಥನೆಂದು ನಂಬಿಸಿ ಸ್ವಲ್ಪ ಹಣವನ್ನೂ ಕಸಿದುಕೊಂಡು ಇನ್ನೂ ಹೆಚ್ಚಿನ ಪುರಾವೆಗಳನ್ನು ಒದಗಿಸುವುದಾಗಿ ವಚನವೀಯುತ್ತಾನೆ. ಸಂಜಯನ ನವರಸಭರಿತ ಸ್ಟೋರಿ ಪತ್ರಿಕೆಯಲ್ಲಿ ಪ್ರಕಟವಾಗಿ ಇನ್ನಷ್ಟು ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ತನ್ನ ಪ್ರಭಾವದಿಂದ ಜಕ್ಕೂಜಿ ಸಂಜಯನನ್ನು ಹೊಸ ಸಂಕಷ್ಟದಿಂದ ಪಾರು ಮಾಡುತ್ತಾನೆ. ವಿವೇಕರು ಈ ಪ್ರಸಂಗವನ್ನೇ ದೊಡ್ಡದು ಮಾಡದೆ ಇಲ್ಲವೇ ರೋಚಕಗೊಳಿಸದೆ ಈ ಘಟನೆಯ ಮೂಲಕ ಒಂದು ನಾಗರೀಕತೆಯ ಒಳಸ್ವರೂಪವನ್ನೇ ತಮ್ಮ ನಾಟಕದ ಮೂಲಕ ನಮ್ಮೆದುರು ತೆರೆದಿಡುವಲ್ಲಿ ಸಾಕಷ್ಟು ಸಫಲರಾಗಿದ್ದಾರೆ.
- ಟಿ.ಪಿ.ಅಶೋಕ
ಶೀರ್ಷಿಕೆ: ಬಹುಮುಖಿ ಲೇಖಕರು: ವಿವೇಕ ಶಾನಭಾಗ ಪ್ರಕಾಶಕರು: ಅಕ್ಷರ ಪ್ರಕಾಶನ ಹೆಗ್ಗೋಡು ಪುಟಗಳು:60 ಬೆಲೆ: ರೂ.45/-

ಬೆಳ್ಳೇಕೆರೆ ಹಳ್ಳಿ ಥೇಟರ್


ರಂಗಭೂಮಿ ಬೆಂಗಳೂರಿನಿಂದ ಆಚೆ ಹೋಗಿಲ್ಲ ಎಂಬ ಭಾವನೆ ಮೂಡುವಂತೆ ಸದ್ಯದ ಸ್ಥಿತಿ ಇದೆ. ಪ್ರಕಟವಾಗುವ ಪತ್ರಿಕಾ ವಿಮಶರ್ೆಗಳಲ್ಲಿ ಬೆಂಗಳೂರಿನ ನಾಟಕಗಳೇ ತುಂಬಿರುತ್ತವೆ. ದೃಶ್ಯ ಮಾಧ್ಯಮಗಳ ಪಾಲಿಗೆ ಥಿಯೇಟರ್ ಅಕ್ಷರಶಃ `ಮೃತ ರಂಗಭೂಮಿ‘. ಬೆಂಗಳೂರಿನ ಹೊರಗೂ ರಂಗಭೂಮಿ ಇದೆ ಎಂದು ಹೇಳಲು ಆದಾರಕ್ಕೆ ನೀನಾಸಂ, ರಂಗಾಯಣಗಳನ್ನಷ್ಟೇ ಹೆಸರಿಸುತ್ತೇವೆ. ಆದರೆ ತಿಪಟೂರು, ಸಾಣೆಹಳ್ಳಿ, ಶಿವಮೊಗ್ಗ, ಉಡುಪಿಗಳಲ್ಲಿ ರಂಗಭೂಮಿಯನ್ನು ಹಲವರು ಹಚ್ಚಿಕೊಂಡು, ಬೆಳೆಸುತ್ತಿದ್ದಾರೆ. ಗ್ರಾಮೀಣ ರಂಗಭೂಮಿ ಇನ್ನೂ ಹೆಚ್ಚು ಹುಲುಸಾಗಿದೆ.
ಈ ನಿಟ್ಟಿನಲ್ಲಿ `ಬೆಳ್ಳೇಕೆರೆ ಹಳ್ಳಿ ಥೇಟರ್‘ ಎಂಬ ಕೃತಿ ಇಲ್ಲಿ ಉಲ್ಲೇಖಾರ್ಹ. ಲೇಖಕ ಪ್ರಸಾದ್ ರಕ್ಷಿದಿ ಇದನ್ನು `ಒಂದು ಗ್ರಾಮೀಣ ರಂಗಭೂಮಿಯ ಆತ್ಮಕಥನ‘ ಎಂದು ಕರೆದಿದ್ದಾರೆ. ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ ಬೆಳ್ಳೇಕೆರೆಯ ರಂಗಭೂಮಿ ಬೆಳೆದುಬಂದ ಕತೆಯನ್ನು ಇಲ್ಲಿ ಲೇಖಕರು ವಿವರಿಸಿದ್ದಾರಾದರೂ ಅದರ ಜೊತೆಗೇ ಊರು, ಊರ ಮಂದಿ, ಊರ ಸಂಸ್ಕೃತಿ ಮೂರ್ತಗೊಂಡಿದ್ದನ್ನು ದಾಖಲಿಸಿದ್ದಾರೆ. ಆ ಮಟ್ಟಿಗೆ ಇದೊಂದು ಸಂಸ್ಕೃತಿ ಕಥನವೂ, ಗ್ರಾಮೀಣ ಸಾಂಸ್ಕೃತಿಕ ಇತಿಹಾಸದ ದಾಖಲೆಯೂ ಆಗಿ ಕಾಣುತ್ತದೆ.
ಶೀರ್ಷಿಕೆ: ಬೆಳ್ಳೇಕೆರೆ ಹಳ್ಳಿ ಥೇಟರ್ ಲೇಖಕರು:ಪ್ರಸಾದ್ ರಕ್ಷಿದಿ ಪ್ರಕಾಶಕರು: ಅಭಿನವ ಪ್ರಕಾಶನ ಪುಟಗಳು: 205 ಬೆಲೆ:ರೂ.100/-

ತುಂಗಾ : ಅವಳಿಗೆ ಸಿಕ್ಕಂಥ ಶಾಲೆ ನಮಗೇಕೆ ಸಿಗಲಿಲ್ಲ?!


ಇವಳು `ತುಂಗಾ’ ಅಲ್ಲ ಗಾಯತ್ರಿ. . .ಜಪಾನಿನ ಟೆಲಿವಿಷನ್ ಕ್ಷೇತ್ರದ ದೊಡ್ಡ ಹೆಸರು ತೆತ್ಸುಕೋ ಕುರೋಯಾನಾಗಿ. `ಸರಿಯಾದ’ ಶಾಲೆ ಪಡೆಯಲು ಆಕೆ (ಆಕೆಯ ತಾಯಿ) ಪಟ್ಟ ಬವಣೆಯೇ `ತೊತ್ತೋಚಾನ್’ ಕಾದಂಬರಿಯಾಗಿ ಮೂಡಿ ಬಂದಿದೆ. ಇಡೀ ಜಗತ್ತನ್ನು ಇನ್ನಿಲ್ಲದಂತೆ ಕಾಡಿದ ಕೃತಿ ಇದು. ಈ ಕೃತಿಯನ್ನು ಕನ್ನಡಕ್ಕೆ ತಂದದ್ದು ವಿ. ಗಾಯತ್ರಿ. ಈಗ ಅದೇ `ತೊತ್ತೋಚಾನ್’ ನಿಂದ ಪ್ರೇರಣೆ ಪಡೆದ, ಅದೇ ಎಳೆ ಹೊಂದಿರುವ
`ತುಂಗಾ’ವನ್ನು ನಮ್ಮೆದುರು ಇಡುತ್ತಿದ್ದಾರೆ. ಒಂದು ಘಟ್ಟದವರೆಗೆ ಆತ್ಮ ಕಥಾನಕ ಎನಿಸುವ ಈ ಕೃತಿ ಈ ನೆಲದ ಗುಣವನ್ನು ತುಂಬಿಕೊಂಡಿದೆ. ಕೃತಿ ರೂಪಿತವಾದ ಪ್ರತಿ ಹಂತದಲ್ಲೂ ಹತ್ತಿರವಿದ್ದ ನನಗೆ ಇದರ ಪ್ರಕಟಣೆಯ ಕ್ಷಣ ಅಮೃತಘಳಿಗೆ.ಗಾಯತ್ರಿ ನಾನು ತುಂಬಾ ಪ್ರೀತಿಸುವ ಗೆಳತಿ. ಆಕೆಯ ಮುನ್ನೋಟವೇ ಅಚ್ಚರಿ ತರುವಂತಹದ್ದು. ಅತ್ಯಂತ ನಿಷ್ಟುರ, ದಿಟ್ಟ ನುಡಿಗಳ ಗಾಯತ್ರಿ ಎಂದೂ ಉಡಾಫೆ ಮಾಡಿದವರಲ್ಲ. ಎಲ್ಲಾ ಮಾತಿನ ಹಿಂದೆಯೂ ಆಳವಾದ ಚಿಂತನೆ, ವಿವೇಚನೆ ಇರುತ್ತದೆ. ತಣ್ಣಗಿದ್ದು, ದೊಡ್ಡ ಕೆಲಸ ಮಾಡುವ ಗಾಯತ್ರಿ ನನಗೆ ಮೆಚ್ಚು.ಡಾ. ವಿಜಯಾ- ಬೆನ್ನುಡಿಯಿಂದಶೀರ್ಷಿಕೆ: ತುಂಗಾ : ಅವಳಿಗೆ ಸಿಕ್ಕಂಥ ಶಾಲೆ ನಮಗೇಕೆ ಸಿಗಲಿಲ್ಲ?! ಲೇಖಕರು:ವಿ. ಗಾಯತ್ರಿ ಪ್ರಕಾಶನ: ಮೇಫ್ಲವರ‍್ ಪುಟಗಳು:176 ಬೆಲೆ:ರೂ.120/-

ಮಾಹಿತಿ ಹಕ್ಕು ಕಾಯ್ದೆ ತೆಕ್ಕೆಗೆ ಖಾಸಗಿ ಶಾಲೆಗಳು


ಮಲೆಗಳಲ್ಲಿ ಮದುಮಗಳು


ಅಸ್ಪ್ರುಸ್ಯ ವಸಂತ


ಈ ಸಲ ಅಂಡಲೆಯೋಕೆ ಹೋಗಿದ್ದಿದ್ದು ತುಮಕೂರಿನ ನಾಮ ಚಿಲುಮೆಗೆ











































ನಾಮದ ಚಿಲುಮೆ - ತುಮಕೂರು ಜಿಲ್ಲೆಯ ದೇವರಾಯನ ದುರ್ಗದ ಸಮೀಪವಿರುವ ಒಂದು ಪ್ರೇಕ್ಷಣೀಯ ಸ್ಥಳ. ಇದು ತುಮಕೂರು ನಗರದಿಂದ ೧೦ ಕಿ.ಮೀ ದೂರದಲ್ಲಿದೆ.
ರಾಮಾಯಣ ಕಾಲದಲ್ಲಿ ಶ್ರೀ ರಾಮಚಂದ್ರ, ಲಕ್ಷ್ಮಣ, ಸೀತೆ ಕೆಲ ಕಾಲ ದೇವರಾಯನದುರ್ಗ ಕಾಡಿನಲ್ಲಿ ವನವಾಸ ಅನುಭವಿಸಿದರು ಎಂಬ ಸ್ಥಳ ಪುರಾಣ ಇದೆ. ಒಮ್ಮೆ ರಾಮನಿಗೆ ಹಣೆಗೆ ತಿಲಕವಿಡುವ ಸಂದರ್ಭ ಬಂದಿತು. ನೀರಿಗಾಗಿ ಸುತ್ತಲೂ ನೋಡಿದರೂ ಎಲ್ಲಿಯೂ ನೀರು ಸಿಗಲೇ ಇಲ್ಲ. ಆಗ ಆ ಸ್ಥಳದಲ್ಲೇ ಬಾಣ ಹೂಡಿ ಒಂದು ಬಂಡೆಯ ಮೇಲೆ ಬಿಟ್ಟಾಗ, ಬಾಣ ಒಳಹೊಕ್ಕು ರಂಧ್ರವನ್ನು ಕೊರೆದು ಅಲ್ಲಿ ನೀರಿನ ಬುಗ್ಗೆ ಚಿಮ್ಮಿತು. ಆ ನೀರನ್ನು ತೆಗೆದುಕೊಂಡು ರಾಮ ತನ್ನ ಹಣೆಗೆ ನಾಮವನ್ನು ಧರಿಸಿದಂತೆ. ಹಾಗಾಗಿ ಈ ಚಿಲುಮೆಗೆ ನಾಮದ ಚಿಲುಮೆಎಂಬ ಹೆಸರು ಬಂದಿದೆ. ಕಡು ಬೇಸಿಗೆಯಲ್ಲೂ ಇಲ್ಲಿ ನೀರು ಚಿಮ್ಮುತ್ತಲೇ ಇರುವುದು ವಿಶೇಷ. ನಾಮದ ಚಿಲುಮೆಯಲ್ಲಿ ಒ೦ದು ಸಣ್ಣ ಮ್ರುಗಾಲಯವಿದ್ದು ಅದರಲ್ಲಿ ಜಿ೦ಕೆ, ಕವಡೆ ಇತ್ಯಾದಿ ಪ್ರಾಣಿಗಳಿವೆ. ತ೦ಪಾದ ಗಾಳಿ, ಉತ್ತಮ ಮರಗಳು, ತು೦ಟ ಕೊತಿಗಳು, ಬಣ್ಣ ಬಣ್ಣದ ಪಕ್ಶಿಗಳಿರುವ ಇದು ವಾರಾ೦ತ್ಯ ಕಳೆಯಲು ಇದು ಉತ್ತಮ ಸ್ಠಳ.