ಪುಟಗಳು

ದಿನದ ಜನ- ಇಂದು ಚಾರ್ಲಿ ಚಾಪ್ಲಿನ್ ಹುಟ್ಟಿದ ದಿನ


ಇವತ್ತು ನಗೆ ಸಾಮ್ರಾಟ ಚಾರ್ಲಿ ಚಾಪ್ಲಿನ್ ಹುಟ್ಟಿದ ದಿನ. ಕಾಮೆಡಿ ಎಂಬ ಪದಕ್ಕೆ ಅನ್ವರ್ಥ ಎಂಬಂತೆ ಇರುವ ಚಾರ್ಲಿಯ ಸಿನಿಮಾಗಳನ್ನು ಜನ ಇಂದಿಗೂ ಆಸ್ವಾದಿಸುತ್ತಾರೆ. ಆಗಿನ್ನೂ ಸಿನಿಮಾ ಜಗತ್ತು ಅಂಬೆ ಗಾಲಿಡುತ್ತಿದ್ದ ಕಾಲದಲ್ಲಿ ಆತ ನಟನಾಗಿ ಗಳಿಸಿದ ಜನಪ್ರಿಯತೆ ಇನ್ನೂ ಮಾಸಿಲ್ಲ.
ಕಪ್ಪು ಬಣ್ಣದ ಮಾಸಲು ಕೋಟು, ಸುತ್ತಳತೆಯ ಟೋಪಿ, ಮುಖದ ಮೇಲೆ ಚೋಟುದ್ದದ ಮೀಸೆ ಇರುವ , ಕೈಯಲ್ಲೊಂದು ವಾಕಿಂಗ್ ಸ್ಟಿಕ್ ಹಿಡಿದ...ಟ್ರಾಂಪ್ ಪಾತ್ರಧಾರಿ ಚಾಪ್ಲಿನ್ ಗುರುತು ತಿಳಿಸಲು ಇಷ್ಟು  ಹೇಳಿದರೆ ಸಾಕು. 
ಆಗಿನ್ನು ಮೂಕಿ ಚಿತ್ರಗಳ ನಿರ್ಮಾಣವಾಗುತ್ತಿದ್ದ  ದಿನಗಳಲ್ಲಿ  ತನ್ನ ಹಾವಭಾವಗಳ ಮೂಲಕವೇ ಅಭಿನಯದ ಮಜಲುಗಳನ್ನು ತೆರೆದಿಟ್ಟ ಚಾರ್ಲಿ , ಮಾಂತ್ರಿಕ ನಟ ಎಂದೇ ಕರೆಸಿಕೊಂಡವರು. ಮಾತೇ ಇಲ್ಲದೆ, ಬರೀ ಆಂಗಿಕ ಅಭಿನಯದಲ್ಲೇ ನಗೆಯ ಮೋಡಿ ಮಾಡುವ ಮೋಡಿಗಾರ. ಇನ್ನೊಂದೆಡೆ ಮಾನವತೆಯ ಕುರುಹಾಗಿ ಬೆಳೆದ ಕಲೆಗಾರ. ಸ್ವಂತ ಪ್ರತಿಭೆಯಿಂದ ಮೇಲೆ ಬಂದ ಈ ನಟ ನಮ್ಮನ್ನು ಸಾಕಷ್ಟು ನಗಿಸುತ್ತಾನೆ, ಅಷ್ಟೇ ಕಾಡಿಸುತ್ತಾನೆ ,ಕೆಲವೊಮ್ಮೆ ಯೋಚಿಸುವಂತೆ ಮಾಡುತ್ತಾನೆ.
ಬಡತನದಲ್ಲೇ ಬೆಂದು ಬೆಳೆದ ಚಾರ್ಲಿ, ಏಳು ಬೀಳುಗಳನ್ನು ಕಾಣುತ್ತಲೇ ಬೆಳೆದ. ತಾನು ನೋವುಂಡರೂ, ಎಲ್ಲರನ್ನೂ ನಗಿಸುತ್ತಲೇ ನಡೆದ. ‘ನಾನು ಮಳೆಯಲ್ಲಿ ನಡೆಯಲು ಇಷ್ಟ ಪಡುತ್ತೇನೆ. ಏಕೆಂದರೆ ನಾನು ಅಳುವುದು ಯಾರಿಗೂ ಕಾಣದು' ಎಂಬ ಚಾರ್ಲಿ ಮಾತನ್ನು ಎಂದೆಂದಿಗೂ ಮರೆಯಲೂ ಸಾಧ್ಯವಿಲ್ಲ.
ಸುಮಾರು ಐದು ದಶಕಗಳ ಕಾಲ ಸಿನಿಮಾ ಮಾಧ್ಯಮದಲ್ಲಿದ್ದ ಚಾರ್ಲಿ ನಟನಾಗಿ ಅಭಿನಯಕ್ಕಿಳಿದು ಮುಂದೆ ಸಿನಿಮಾ ನಿರ್ದೇಶಕನಾಗಿ, ನಿರ್ಮಾಪಕನಾಗಿ, ಸಂಗೀತ ನಿರ್ದೇಶಕನಾಗಿ ದುಡಿದ. ಒಮ್ಮೆ ತನ್ನ ಹಾಸ್ಯದ ಇಮೇಜ್ ಕಳಚಿ, ಗಂಭೀರವಾದ ಸಿನಿಮಾ ಮಾಡಹೊರಟು, ಕೈಸುಟ್ಟುಕೊಂಡ.
ಕಮ್ಯೂನಿಸ್ಟ್ ಸಿದ್ದಾಂತದಲ್ಲಿ ನಂಬಿಕೆ ಇರಿಸಿದ್ದ ಚಾರ್ಲಿ ಆ ಕಾರಣಕ್ಕಾಗೇ ಅಮೆರಿಕಾ, ಇಂಗ್ಲೆಂಡಿನಂಥ ದೇಶಗಳಿಂದ ಶಂಕೆಗೆ ಒಳಗಾದ.
ಇರುವಷ್ಟು ದಿನ ಎಲ್ಲರನ್ನು ನಗಿಸುತ್ತಲೇ ಬದುಕಿದ್ದ ಒಂಬತ್ತು ಮಕ್ಕಳ ತಂದೆ ಚಾರ್ಲಿ , ೧೯೭೭ರ ಡಿಸೆಂಬರ್ ೨೫ರಂದು ಸ್ವಿರ್ಡರ್ ಲೆಂಡಿನಲ್ಲಿ ತೀರಿಕೊಂಡ.