ಪುಟಗಳು

ರಕ್ಷಾ ಬಂಧನ: ಇದು ಮಧುರವಾದ ಭಾವಾನುಬಂಧ

Raksha bandhan
ಇದು ಅಣ್ಣ, ತಂಗಿಯರ ನವಿರಾದ ಭಾವನೆಗಳನ್ನು ರಕ್ಷಾ ಬಂಧನದ ಮೂಲಕ ಗಟ್ಟಿಗೊಳಿಸುವ ದಿನ. ಅಣ್ಣ-ತಂಗಿಯರಿಗೆ ಈ ದಿನ ಸಂಭ್ರಮವೋ ಸಂಭ್ರಮ. ಬಾಂಧವ್ಯದ ಸಂಕೇತದ ಈ ದಿನವನ್ನ ಇಡೀ ಭಾರತದಾದ್ಯಂತ ಆಚರಿಸಲಾಗುತ್ತದೆ.

ತನ್ನ ಸೋದರನ ಅಭಿವೃದ್ಧಿಗೆ, ನೆಮ್ಮದಿಗೆ ಹಾರೈಸುವ ಅಕ್ಕ ತಂಗಿಯರು ತಮ್ಮ ಅಣ್ಣತಮ್ಮಂದಿರಿಗೆ ರಾಖಿ ಕಟ್ಟಿ, ಸಿಹಿ ವಿನಿಯಮ ಮಾಡಿಕೊಂಡು ಉಡುಗೊರೆ ಪಡೆದು ಸಂತಸ ಪಡುವ ರಕ್ಷಾ ಬಂಧನ ಹಬ್ಬ ಬರುವುದು ಶ್ರಾವಣ ಹುಣ್ಣಿಮೆಯಂದು. ರಾಖಿ ಹಬ್ಬ, ನೂಲು ಹುಣ್ಣಿಮೆ ಎಂದು ಕರೆಸಿಕೊಳ್ಳುವ ಈ ಹಬ್ಬಕ್ಕೆ ಭಾವನೆಯೇ ಬೆಂಬಲ.

ಇದು ತಂಗಿಯೆಡೆಗಿನ ವಿಶೇಷ ಕಾಳಜಿ, ಪ್ರೀತಿಯನ್ನು ಪ್ರತಿನಿಧಿಸುವ ಹಬ್ಬ. ಆದ್ದರಿಂದ ಈ ಆಚರಣೆಯನ್ನು ಇನ್ನೂ ಉಳಿಸಿಕೊಂಡು ಬರಲಾಗಿದೆ. ನಾಗರ ಪಂಚಮಿಯಂದೂ ಅಣ್ಣ ತಂಗಿಯರು ಸಿಹಿ ವಿನಿಮಯ ಮಾಡಿಕೊಳ್ಳುವ ರೂಢಿಯಿದ್ದು, ಇದು ರಕ್ಷಾಬಂಧನಕ್ಕೆ ಮುನ್ನುಡಿ ಬರೆದಂತೆ. ಇದೇ ದಿನ ಬ್ರಾಹ್ಮಣರು ಇದನ್ನು ಋಗ್ವೇದ ಉಪಕರ್ಮವೆಂದು ಜನಿವಾರವನ್ನು ಬದಲಿಸಿ ಹೊಸ ಜನಿವಾರವನ್ನು ಹಾಕಿಕೊಂಡು ನಡೆಸಿಕೊಂಡು ಬರುವುದು ಇಂದಿಗೂ ಇದೆ.

ಎಸ್ ಎಲ್ ಭೈರಪ್ಪ ಅವರ ಆವರಣ ಹಿಂದಿಗೆ ಅನುವಾದ

SL Bhyrappa
ಕನ್ನಡದಲ್ಲಿ ವಾದ-ವಿವಾದಗಳಿಗೆ ಕಾರಣವಾಗಿದ್ದ ಎಸ್. ಎಲ್. ಭೈರಪ್ಪನವರ ‘ಆವರಣ’ ಹಿಂದಿ ಜಗತ್ತನ್ನೂ ಪ್ರವೇಶಿಸಿದೆ. ಈ ಹಿಂದೆಯೇ ತಮಿಳು, ಮರಾಠಿ, ಸಂಸ್ಕೃತ ಭಾಷೆಗೆ ಆವರಣ ಹೋದ ಸುದ್ದಿ ಇತ್ತು.

ಮುಸ್ಲಿಂ ನವಾಬರ 'ಜನಾನ'ದ ವರೆಗೆ ಕಥೆ ಪ್ರವೇಶಿಸಿದ್ದು ಒಂದು ಕಡೆಯಾದರೆ ಮತ್ತೊಂದೆಡೆ ಬುದ್ಧಿಜೀವಿಗಳ ಹರಕು-ಹುಳುಕನ್ನು ಕಾದಂಬರಿ ಹರಾಜು ಹಾಕಿ ವಿವಾದಕ್ಕೆ ಕಾರಣವಾಗಿತ್ತು. ಒಂದೇ ವರ್ಷದಲ್ಲಿ 20ಕ್ಕೂ ಹೆಚ್ಚು ಮುದ್ರಣಗಳಿಗೂ ಹೋಗಿತ್ತು.

ಮೂಲಕಥೆ ಉತ್ತರ ಭಾರತದ ಹಿಂದಿ ಜಗತ್ತಿನದೇ. ಇದೀಗ ಕಾದಂಬರಿ ಹಿಂದಿ ಜಗತ್ತನ್ನು ಪ್ರವೇಶಿಸಿದೆ. ಕುವೆಂಪು ಭಾಷಾ ಭಾರತಿಯ ಅಧ್ಯಕ್ಷರಾಗಿರುವ ಡಾ. ಪ್ರಧಾನ ಗುರುದತ್ ಹಿಂದಿಗೆ ಅನುವಾದಿಸಿದ್ದಾರೆ.

ಇಂಡಿಯಾ ಟುಡೇ ಹಿಂದಿ ಅವತರಣಿಕೆಯ ಈ ವಾರದ ಸಂಚಿಕೆ ಅರ್ಧ ಪುಟದ ವಿಮರ್ಶೆ ಪ್ರಕಟಿಸಿದೆ. ವಿಮರ್ಶಕ ಶಶಿಭೂಷಣ ದ್ವಿವೇದಿಗೆ ಪ್ರಧಾನರ ಅನುವಾದ ಸಮಾಧಾನ ತಂದಿಲ್ಲವಂತೆ.

ಇದೇ ಅಗಸ್ಟ್ 16ರಂದು ಕೇರಳದ ಕೊಚ್ಚಿನ್ ನಲ್ಲಿ ಆವರಣದ ಸಂಸ್ಕೃತ ಆವೃತ್ತಿಗೆ ಕೇಂದ್ರ ಸಾಹಿತ್ಯ ಅಕಾಡಮಿಯ ‘ಅತ್ಯುತ್ತಮ ಅನುವಾದ’ ಪುರಸ್ಕಾರ ಸಿಗಲಿದೆ ಎಂದು ಗೊತ್ತಾಗಿದೆ.