ಪುಟಗಳು

ರಕ್ಷಾ ಬಂಧನ: ಇದು ಮಧುರವಾದ ಭಾವಾನುಬಂಧ

Raksha bandhan
ಇದು ಅಣ್ಣ, ತಂಗಿಯರ ನವಿರಾದ ಭಾವನೆಗಳನ್ನು ರಕ್ಷಾ ಬಂಧನದ ಮೂಲಕ ಗಟ್ಟಿಗೊಳಿಸುವ ದಿನ. ಅಣ್ಣ-ತಂಗಿಯರಿಗೆ ಈ ದಿನ ಸಂಭ್ರಮವೋ ಸಂಭ್ರಮ. ಬಾಂಧವ್ಯದ ಸಂಕೇತದ ಈ ದಿನವನ್ನ ಇಡೀ ಭಾರತದಾದ್ಯಂತ ಆಚರಿಸಲಾಗುತ್ತದೆ.

ತನ್ನ ಸೋದರನ ಅಭಿವೃದ್ಧಿಗೆ, ನೆಮ್ಮದಿಗೆ ಹಾರೈಸುವ ಅಕ್ಕ ತಂಗಿಯರು ತಮ್ಮ ಅಣ್ಣತಮ್ಮಂದಿರಿಗೆ ರಾಖಿ ಕಟ್ಟಿ, ಸಿಹಿ ವಿನಿಯಮ ಮಾಡಿಕೊಂಡು ಉಡುಗೊರೆ ಪಡೆದು ಸಂತಸ ಪಡುವ ರಕ್ಷಾ ಬಂಧನ ಹಬ್ಬ ಬರುವುದು ಶ್ರಾವಣ ಹುಣ್ಣಿಮೆಯಂದು. ರಾಖಿ ಹಬ್ಬ, ನೂಲು ಹುಣ್ಣಿಮೆ ಎಂದು ಕರೆಸಿಕೊಳ್ಳುವ ಈ ಹಬ್ಬಕ್ಕೆ ಭಾವನೆಯೇ ಬೆಂಬಲ.

ಇದು ತಂಗಿಯೆಡೆಗಿನ ವಿಶೇಷ ಕಾಳಜಿ, ಪ್ರೀತಿಯನ್ನು ಪ್ರತಿನಿಧಿಸುವ ಹಬ್ಬ. ಆದ್ದರಿಂದ ಈ ಆಚರಣೆಯನ್ನು ಇನ್ನೂ ಉಳಿಸಿಕೊಂಡು ಬರಲಾಗಿದೆ. ನಾಗರ ಪಂಚಮಿಯಂದೂ ಅಣ್ಣ ತಂಗಿಯರು ಸಿಹಿ ವಿನಿಮಯ ಮಾಡಿಕೊಳ್ಳುವ ರೂಢಿಯಿದ್ದು, ಇದು ರಕ್ಷಾಬಂಧನಕ್ಕೆ ಮುನ್ನುಡಿ ಬರೆದಂತೆ. ಇದೇ ದಿನ ಬ್ರಾಹ್ಮಣರು ಇದನ್ನು ಋಗ್ವೇದ ಉಪಕರ್ಮವೆಂದು ಜನಿವಾರವನ್ನು ಬದಲಿಸಿ ಹೊಸ ಜನಿವಾರವನ್ನು ಹಾಕಿಕೊಂಡು ನಡೆಸಿಕೊಂಡು ಬರುವುದು ಇಂದಿಗೂ ಇದೆ.