ಪುಟಗಳು

ಸಂತೆಯಲ್ಲಿ ಸುಬ್ರಹ್ಮಣ್ಯ

ಎನ್ಕೆ ಸುಬ್ರಹ್ಮಣ್ಯರ ಹಾಸ್ಯ ಬರಹಗಳ ಸಂಕಲನ `ಸಂತೆಯಲ್ಲಿ ಸುಬ್ರಹ್ಮಣ್ಯ‘. ಒಬ್ಬ ಮಧ್ಯಮ ವರ್ಗದ ವ್ಯಕ್ತಿಯ ಅನುಭವವನ್ನು ಒಳಗೊಂಡ ಬರಹಗಳಿವು. ಮಧ್ಯಮವರ್ಗದ ಕನಸು ಹಾಗೂ ಜೀವನದ ವಿವರಗಳು ಇಲ್ಲಿ ಬರಹದ ರೂಪವನ್ನು ತಾಳಿವೆ.
ಹಾಗೆಂದು ಇಲ್ಲಿನ ಹದಿನೇಳು ಬರಹಗಳು ಸೀಮಿತ ಅನುಭವದ ಲೋಕದ ಒಳಗಷ್ಟೇ ಓಡಾಡುವುದಿಲ್ಲ. ಇಲ್ಲಿ ಸಂತೆ, ಕಂಪ್ಯೂಟರ್, ವಿಂಬಲ್ಡನ್, ಹೋಗಬೇಕಾದ ಅಮೆರಿಕಾ ಯಾತ್ರೆ, ಗುಜರಿ ಬಜಾರ್ ಬಗ್ಗೆಯೂ ಲೇಖನಗಳಿವೆ. ಲೇಖಕರು ಆಸಕ್ತಿಯಿಂದ ಓದಿಸಿಕೊಳ್ಳುವಂತೆ, ಲವಲವಿಕೆಯಿಂದ, ತಮಾಷೆಯಾಗಿ ಬರೆಯುತ್ತಾರೆ. ಇದಕ್ಕೆ ಹರಿಣಿ ಅವರ ವ್ಯಂಗ್ಯಚಿತ್ರಗಳು ಪುಟಕೊಟ್ಟಿವೆ.
ಶೀರ್ಷಿಕೆ: ಸಂತೆಯಲ್ಲಿ ಸುಬ್ರಹ್ಮಣ್ಯ ಲೇಖಕರು: ಎನ್ಕೆ ಸುಬ್ರಹ್ಮಣ್ಯ ಪ್ರಕಾಶಕರು: ನವ ಕರ್ನಾಟಕ ಪ್ರಕಾಶನ ಪುಟಗಳು : 116 ಬೆಲೆ:ರೂ. 55/

ಶೋಷಕರೇ ಶೋಷಿತರಿಗೆ ಹಿತವಚನ ನೀಡುವುದು ಈ ದೇಶದ ಬುದ್ಧಿಜೀವಿಗಳ ಫ್ಯಾಷನ್


scan0001

`ವಿಮರ್ಶಕ ಜಿ.ಎಚ್.ನಾಯಕರು ಶೋಷಕ ವರ್ಗದಿಂದ ಬಂದವರು. ಅವರ ಹೆಸರೇ ಜಾತಿ ಸೂಚಿತವಾದದ್ದು. ಅವರು ಸವರ್ಣೀರಾದ್ದರಿಂದ ಅವರು ಎಂದೂ ಅವರ ಜನಾಂಗದ ಬಗ್ಗೆ ಹೇಳುವುದಿಲ್ಲ. ಶೋಷಕರೇ ಶೋಷಿತರಿಗೆ ಹಿತವಚನ ನೀಡುವುದು ಈ ದೇಶದ ಬುದ್ಧಿಜೀವಿಗಳ ಫ್ಯಾಷನ್
`ಹಣದ ವಿಚಾರದಲ್ಲಿ ದೇವನೂರು ಮಹಾದೇವ ಪ್ರಾಮಾಣಿಕನಲ್ಲ. ಆತ ಪಡೆದ ಹಣಕ್ಕೆ ಲೆಕ್ಕವಿಲ್ಲ. ಶಿಸ್ತು ಮೊದಲೇ ಇಲ್ಲ. ಈ ವ್ಯಕ್ತಿ ಮತ್ತೊಬ್ಬರ ಮೇಲೆ ಗೂಬೆ ಕೂರಿಸಿ ತನ್ನ ಅಪ್ರಾಮಾಣಿಕತೆಯನ್ನು ಮುಚ್ಚಿಕೊಳ್ಳಲು ಸದಾ ಪ್ರಯತ್ನಿಸುತ್ತಾರೆ. ದೇವನೂರು ಮಹಾದೇವ ಎಷ್ಟು ದಲಿತರಿಂದ ಹಣ ಪಡೆದುಕೊಂಡಿದ್ದಾರೆ ಎಂಬುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಬೇಕು‘ (ಪು 94-95) ಎಂದು ನೇರವಾಗಿ ಬರೆಯುವ ಮುನಿವೆಂಕಟಪ್ಪ ಯಾವುದೇ ಮುಲಾಜುಗಳಿಲ್ಲದೆ ಬರೆದ ಬರಹಗಳು ಇಲ್ಲಿವೆ.
ದಲಿತ ಚಿಂತಕರಲ್ಲಿ ಒಬ್ಬರಾದ ಡಾ.ಮುನಿವೆಂಕಟಪ್ಪ ಇಲ್ಲಿ ಮಾಡಿರುವುದು ಸಾಹಿತ್ಯದ ವಿಮರ್ಶೆಗಿಂತ ಹೆಚ್ಚಾಗಿ ದಲಿತರ ಚಾರಿತ್ರಿಕ ವಿಮರ್ಶೆ. ಇಲ್ಲಿನ ಲೇಖನಗಳಲ್ಲಿ ಮುಖ್ಯವಗಿ ದಲಿತ ಚಳವಳಿ ಹಾಗೂ ಸಾಹಿತ್ಯ ಚರ್ಚೆಯಾಗಿದೆ. ವೆಂಕಟಪ್ಪನವರ ಈ ಚಿಂತನೆಗಳಲ್ಲಿ ಒಂದು ನೈತಿಕವಾದ ಆಕ್ರೋಶ ಇರುವುದನ್ನು ನಾವು ಕಾಣಬಹುದು. ಇದು ಅನೇಕ ದೊಡ್ಡವರು ಎನ್ನಿಸಿಕೊಂಡವರ ತಪ್ಪು ನಿಲುವುಗಳಿಗೆ ಪ್ರತಿಯಾಗಿ ಹುಟ್ಟಿಕೊಂಡ ಸಿಟ್ಟು. ಈ ಸಿಟ್ಟಿನ ಹಿಂದೆ ನೋವು ಇದೆ ಎಂಬುದನ್ನು ಮರೆಯುವಂತಿಲ್ಲ. ಇದಕ್ಕೆ ಉದಾಹರಣೆಯಾಗಿ ಕವಿ ಸಿದ್ದಲಿಂಗಯ್ಯ ಅವರು `ನನ್ನನ್ನು ದಲಿತ ಕವಿ ಎಂದು ಕರೆಯಬೇಡಿ, ಕನ್ನಡದ ಕವಿ ಎಂದು ಕರೆಯಿರಿ ಎಂದು ಕೇಳಿಕೊಂಡಿರುವುದನ್ನು, ದಲಿತರು ತಾವು ನಡೆದುಬಂದ ದಾರಿಯನ್ನು ಹಿಂತಿರುಗಿ ನೋಡಲು ಸಿದ್ಧರಿಲ್ಲದಿರುವುದನ್ನು ತೋರಿದ್ದಾರೆ. (ಪು.28) ಇಂಥ ಅನೇಕ ಸಂದರ್ಭಗಳನ್ನು ಮುನಿವೆಂಕಟಪ್ಪನವರು ಇಲ್ಲಿನ ಪುಟಗಳಲ್ಲಿ ತೆರೆದಿಟ್ಟಿದ್ದಾರೆ. ಇದರೊಂದಿಗೆ ದೇವನೂರು ಮಹದೇವ, ಮೊಗಳ್ಳಿ ಅಂಥವರನ್ನು ಏಕವಚನದಲ್ಲಿ ಕರೆದು ಸಂಯಮ ಕಳೆದುಕೊಳ್ಳುತ್ತಾರೆ.
ಈ ಬಗೆಯ ನೈತಿಕ ಸಿಟ್ಟುಗಳು ಅವರಲ್ಲಿವೆ. ಅಂತಹ ಸಂಗತಿಗಳ ಬಗ್ಗೆ ನೇರವಾಗಿ, ಆಧಾರಸಹಿತವಾಗಿ ಹೇಳಿದ್ದಾರೆ. ಆದರೆ, ಒಂದೆಡೆ (ಮೈಸೂರು ಜಿಲ್ಲೆಯ ದಲಿತ ಬಂಡಾಯ ಸಾಹಿತ್ಯಿಕ ಹಿರಿಮೆ) ಕಥೆಗಾರ ಮೊಗಳ್ಳಿ ಗಣೇಶರ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿದ `ದಲಿತ ಕಥನದ ಬಗ್ಗೆ ಬರೆಯುತ್ತ ಮೊಗಳ್ಳಿವರು ಮಾಡುವ ಸುಳ್ಳು ಉಲ್ಲೇಖಗಳನ್ನು, ಲೇಖಕರ ನಡುವೆ `ಒಬ್ಬರ ಮೇಲೆ ಒಬ್ಬರನ್ನು ಎತ್ತಿಕಟ್ಟುವ, ಸಲ್ಲದ ವಿಚಾರಗಳನ್ನು ಬರೆಯುವ ಸಾಹಿತಿಗಳನ್ನು, ಅಂಥವನ್ನು ಪ್ರಕಟಿಸುವ ವಿಶ್ವವಿದ್ಯಾಲಯದ ಪ್ರಸಾರಾಂಗವನ್ನು ಏನೆಂದು ಕರೆಯಬೇಕು?’ ಎಂದು ಕೇಳಿದ್ದಾರೆ. ಈವರೆಗೆ ಲೇಖಕರ ಪ್ರಶ್ನೆ ಸರಿಯಾಗಿಯೇ ಇದೆ. ಮುಂದುವರಿದು ಅವರು ಮೈಸೂರು ವಿಶ್ವವಿದ್ಯಾಲಯದ ಕಥೆಗಾರ ಮೊಗಳ್ಳಿ ಗಣೇಶರು ಎಂ.ಎ ತರಗತಿಯಲ್ಲಿ ಮೂರನೆಯ ದರ್ಜೆಯಲ್ಲಿ ತೇರ್ಗಡೆಯಾಗಿ ಮತ್ತೊಂದು ಎಂ.ಎ ಗೆ ಸೇರಿ ಪ್ರಥಮ ದರ್ಜೆಯಲ್ಲಿ ಪಾಸಾದುದ್ದನ್ನೂ, ಅನಂತರ ಸಂಶೋಧನೆ ನೆಪದಲ್ಲಿ 12 ವರ್ಷಗಳ ಕಾಲ ಒಂದೇ ಕೊಠಡಿಯಲ್ಲಿ ಉಳಿದುಕೊಂಡುದ್ದನ್ನು, ಮೈಸೂರು ವಿ.ವಿ.ಯಲ್ಲಿ ಓದಲು ಬರುವ ಬಡಹುಡುಗರು ಹಾಸ್ಟೇಲ್ನಲ್ಲಿ ರೂಮಿಗಾಗಿ ಪರದಾಡುತ್ತಿರುವುದನ್ನು ನೋಡಿಯೂ ಮುಜುಗರಕ್ಕೆ ಅವರು ಒಳಗಾಗದಿರವುದನ್ನೂ, `ಆತನನ್ನು ಓಡಿಸಿ ನಿಜವಾದ ಅರ್ಹ ಬಡ ವಿದ್ಯಾರ್ಥಿಗಳಿಗೆ ಆ ಜಾಗ ಸಿಗುವಂತಾಗುವಂತೆ ಮಾಡಲು ಸಾಹಸ ಪಡಬೇಕಾಯಿತುಎಂದು ಬರೆಯುತ್ತಾರೆ. ಮೊಗಳ್ಳಿಯವರ ಕೃತಿಯೊಂದಿಗೆ ಅವರ ಈ ಉಲ್ಲೇಖ ಅಗತ್ಯ ಇತ್ತು ಎಂದು ಅನಿಸುವುದಿಲ್ಲ.
ಆದರೂ, ಈ ಪುಸ್ತಕ ಸಾಕಷ್ಟು ಚರ್ಚೆಗಳನ್ನು ದಲಿತ ಸಾಹಿತ್ಯ, ಚಳವಳಿಗಳ ಕುರಿತು ಮಾಡುತ್ತದೆ ಎಂಬುದು ಮಹತ್ವದ ಸಂಗತಿ.
ಶೀರ್ಷಿಕೆ: ದಲಿತ ಚಳವಳಿ ಮತ್ತು ಸಾಹಿತ್ಯ  ಲೇಖಕರು: ಡಾ.ವಿ.ಮುನಿವೆಂಕಟಪ್ಪ ಪ್ರಕಾಶಕರು: ಎಸ್.ಎಸ್.ಪ್ರಕಾಶನ ಪುಟಗಳು:128 ಬೆಲೆ:ರೂ.65/

ಹಿಂದುತ್ವ ಮತ್ತು ದಲಿತರು

ಈ ಗ್ರಂಥದಲ್ಲಿ ಸೇರ್ಪಡೆಯಾಗಿರುವ ಲೇಖನಗಳು ಹಿಂದುತ್ವ ಶಕ್ತಿಗಳು ದಲಿತರನ್ನು ತಮ್ಮತ್ತ ಸೆಳೆದುಕೊಳ್ಳುತ್ತಿರುವ ಪ್ರಕ್ರಿಯೆಯ ಬಗ್ಗೆ ತಾತ್ವಿಕವೂ ಅನುಭವಜನ್ಯವೂ ಆದ ವಿಶ್ಲೇಷಣೆಗಳ ಮೂಲಕ ಸಾಕಷ್ಟು ಬೆಳಕು ಚೆಲ್ಲುತ್ತವೆ. ಕ್ರಿಯಾಶೀಲ ಚಳವಳಿಗಾರರು ಮತ್ತು ವಿದ್ವಾಂಸರುಗಳು ಬರೆದಿರುವ ಲೇಖನಗಳು ಈ ಗ್ರಂಥದಲ್ಲಿ ಸೇರ್ಪಡೆಯಾಗಿವೆ. ಈ ಲೇಖನಗಳಲ್ಲಿ ದಲಿತರ ಸಾಮಾಜಿಕ, ಸಾಂಸ್ಕೃತಿಕ, ಸೈದ್ಧಾಂತಿಕ ಮತ್ತು ರಾಜಕೀಯ ಜೀವನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಚರ್ಚಿಸಲಾಗಿದೆ. ಜೊತೆಗೆ ಅವರು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಅಗತ್ಯವಾದ ಮುನ್ನೋಟದ ಬಗ್ಗೆ ಬೆಳಕು ಹರಿಸುವ ಲೇಖನಗಳೂ ಇಲ್ಲಿವೆ. ಇತ್ತೀಚಿನ ವಿದ್ಯಮಾನಗಳು ಸೃಷ್ಟಿಸಿರುವ ಸಮಸ್ಯೆಗಳ ಕುರಿತ ಗಂಭೀರ ಸ್ವರೂಪದ ಸಂವಾದಕ್ಕೆ ಇಲ್ಲಿನ ಲೇಖನಗಳು ದಾರಿಮಾಡಿಕೊಡುತ್ತವೆ.
ಶೀರ್ಷಿಕೆ: ಹಿಂದುತ್ವ ಮತ್ತು ದಲಿತರು ಮೂಲ ಸಂಪಾದಕರು:ಆನಂದ್ ತೇಲ್ ತುಂಬ್ಡೆ ಅನು ಸಂಯೋಜನೆ: ಪ್ರೊ.ಗಂಗಾಧರ ಮೂರ್ತಿ ಪ್ರಕಾಶಕರು: ಚಿಂತನ ಪುಸ್ತಕ ಪುಟಗಳು:216 ಬೆಲೆ:ರೂ.120

ಶಾಂತಾರಾಮ್ ಹಾಜಿರ್ ಹೈ

kuruda-kurudi1


ಶಾಂತಾರಾಮ ಸೋಮಯಾಜಿ ಕತೆಗಳಲ್ಲಿ ಹೊಸಲೋಕವಿರುತ್ತದೆ. ವಿನೂತನವಾದ ಬರಹ ಶೈಲಿಯಲ್ಲಿ ಕತೆ ಹೇಳುವ ಶಾಂತಾರಾಮರ ಮೂರನೆಯ ಕಾದಂಬರಿ `ಕುರುಡ ಕುರುಡಿ‘. ಇಲ್ಲಿಯೂ ಕೂಡಾ ಹೊಸತೇನನ್ನೋ ಹೇಳುವ ಕೆಲಸ ನಡೆದಿದೆ. ಹೊಸ ಕಥಾವಸ್ತು. ಓದುಗರನ್ನು ಹಿಡಿದಿಟ್ಟುಕೊಂಡು ಹೋಗುವಲ್ಲಿ ಯಶಸ್ವಿಯಾಗಿದೆ. ಜೊತೆಗೆ ಶಾಂತಾರಾಮರ ವೈಚಾರಿಕ ವಿಷಯಗಳೂ ಇವೆ.
ವಾರಪತ್ರಿಕೆಯೊಂದರಲ್ಲಿ ಪ್ರಕಟವಾಗಿ ಜನಮೆಚ್ಚುಗೆ ಗಳಿಸಿದ `ಕುರುಡ ಕುರುಡಿಯನ್ನು ಬೆಳಕಿಗೆ ತಂದಿದ್ದಾರೆ ಪ್ರಕಾಶಕ ನಾರಾಯಣ ಮಾಳ್ಕೋಡ್. ಮುಖಪುಟದ ಕೆಟ್ಟ ವಿನ್ಯಾಸವನ್ನು ಕಣ್ಣುಮುಚ್ಚಿ ಕ್ಷಮಿಸಿದರೆ ಪುಸ್ತಕ `ಸುಮುಖ‘.
ಶೀರ್ಷಿಕೆ: ಕುರುಡ ಕುರುಡಿ ಲೇಖಕರು: ಶಾಂತಾರಾಮ ಸೋಮಯಾಜಿ ಪ್ರಕಾಶಕರು: ಸುಮುಖ ಪ್ರಕಾಶನ ಪುಟಗಳು:316 ಬೆಲೆ:ರೂ.200/

ಬೈ ದ ಡಾಕ್ಟರ್, ಫಾರ್ ದ ಡಾಕ್ಟರ್, ಥಟ್ ಅಂತ ಕೊಳ್ಳಿ!


manasvi11

ಐದಕ್ಕಿಂತಲೂ ಹೆಚ್ಚು ಬಾರಿ ಮರುಮುದ್ರಣಗೊಂಡಿರುವ ಡಾ.ಸಿ.ಆರ್.ಚಂದ್ರಶೇಖರ್ ರ ಕೃತಿಗಳ ಸಂಖ್ಯೆ 30. ಸಿ.ಆರ್.ಸಿ. ಒಟ್ಟು 159 ಪುಸ್ತಕಗಳು ಒಂದಕ್ಕಿಂತ ಹೆಚ್ಚಿನ ಮರುಮುದ್ರಣ ಕಂಡಿವೆ. ಅಂದರೆ ಶೇ.75ಕ್ಕಿಂತಲೂ ಹೆಚ್ಚಿನ ಪುಸ್ತಕಗಳು ಮರುಮುದ್ರಣವನ್ನು ಕಂಡಿವೆ ಎಂದಂತಾುತು.
ಹೀಗೆ ಡಾ. ನಾ. ಸೋಮೇಶ್ವರರು ಸಿ.ಆರ್.ಸಿ. ಯವರ ಕುರಿತು ಬರೆದ `ಮನಸ್ವಿಯಲ್ಲಿ ಲೆಕ್ಕ ಹಾಕುತ್ತಾರೆ. `ಮನಸ್ವಿ ಸಿ.ಆರ್.ಸಿ.ಯವರ 60 ವರ್ಷಗಳ ಬದುಕು-ಬರಹವನ್ನು ಸೋಮೇಶ್ವರರು ವಿಶಿಷ್ಟವಾಗಿ ದಾಖಲಿಸಿರುವ ಪುಸ್ತಕ.
ಸೋಮೇಶ್ವರರು ಪ್ರೀತಿುಂದ ಹೊಗಳಿಕೆಗಳಲ್ಲೇ ಈ ಪುಸ್ತಕವನ್ನು ಬರೆದಿಲ್ಲ. ತುಲನಾತ್ಮಕ ಅಧ್ಯಯನದಿಂದ ಹೊರಬಂದಿರುವ ಕೃತಿುದು. ಸಿ.ಆರ್.ಸಿ. ಪುಸ್ತಕಗಳಿಂದ ಶತಕ ಬಾರಿಸಿರಬಹುದು. ಆದರೆ ಈ ಪುಸ್ತಕ ಸೋಮೇಶ್ವರ `ಶತಕ. ಅಪರೂಪಕ್ಕೆ ಬೈ ದ ಡಾಕ್ಟರ್, ಫಾರ್ ದ ಡಾಕ್ಟರ್ ಪುಸ್ತಕವೊಂದು ಬಂದಿದೆ. ಡಾಕ್ಟರ್ ಗಳನ್ನು ಓದುವ ಆಸಕ್ತರು `ಥಟ್ ಅಂತ ಕೊಳ್ಳಿ!
ಶೀರ್ಷಿಕೆ: ಮನಸ್ವಿ ಲೇಖಕರು: ಡಾ. ನಾ.ಸೋಮೇಶ್ವರ ಪ್ರಕಾಶಕರು:ನವಕರ್ನಟಕ ಪ್ರಕಾಶನ ಪುಟಗಳು:114 ಬೆಲೆ:ರೂ.45