ಪುಟಗಳು

ದೀಪಾವಳಿ ಹಬ್ಬದ ಶುಭಾಶಯಗಳು


ಸಮಸ್ತ ಕನ್ನಡಿಗರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

ಭವಿಷ್ಯೋತ್ತರ ಪುರಾಣದಲ್ಲಿ (೧೪೦-೭೧) ಹೇಳಿರುವ ಉಕ್ತಿ ಹೀಗಿದೆ
ಉಪಶಮಿತ ಮೇಘನಾದಂ
ಪ್ರಜ್ವಲಿತ ದಶಾನನಂ ರಮಿತರಾಮಂ|
ರಾಮಾಯಣಮಿದಂ ಸುಭಗಂ
ದೀಪದಿನಂ ಹರತು ವೋ ದುರಿತಂ||

devi1.JPG
ರಾಮಾಯಣದಲ್ಲಿ ಮೇಘನಾಥನು (ಇಂದ್ರಜಿತು) ಶಾಂತನಾಗುವಂತೆ ಈ ಮಹೋತ್ಸವದಲ್ಲಿ ಮೇಘನಾದವು (ಗುಡುಗು) ಶಾಂತವಾಗಿಬಿಟ್ಟಿರುತ್ತದೆ. ರಾಮಾಯಣದಲ್ಲಿ ದಶಮುಖರಾವಣನು ಸುಡಲ್ಪಡುವಂತೆ ಇದರಲ್ಲಿ ದಶೆ(ಬತ್ತಿ)ಗಳನ್ನು ಉರಿಸಲ್ಪಡುವುದು. ಅಲ್ಲಿ ರಾಮನು ರಮಿಸುವಂತೆ ಇಲ್ಲಿ ಶ್ರೀರಾಮನೂ ಮತ್ತು ರಮಣಿಯರೂ ರಮಿಸುತ್ತಾರೆ. ಹೀಗೆ ರಾಮಾಯಣದಂತೆ ರಮಣೀಯವಾಗಿರುವ ದೀಪಾವಳಿ ಮಹೋತ್ಸವ ದಿನವು ನಮ್ಮ ಹಾಗೂ ನಿಮ್ಮ ಪಾಪಗಳನ್ನು ಹೋಗಲಾಡಿಸಲಿ.
ನಮ್ಮ ದೇಶದಲ್ಲಿ ಅಲ್ಲದೇ ಅಕ್ಕ ಪಕ್ಕದ ದೇಶಗಳಲ್ಲೆಲ್ಲಾ ಅತ್ಯಂತ ವಿಜೃಂಭಣೆಯಿಂದ ಆಚರಿಸಲ್ಪಡುವ ಕೆಲವೇ ಹಬ್ಬಗಳಲ್ಲಿ, ದೀಪಾವಳಿಯೂ ಮುಖ್ಯವಾದುದು. ಇದನ್ನು ನಾಡಹಬ್ಬವಾಗಿಯೂ ಆಚರಿಸುವ ಸಂಪ್ರದಾಯವುಂಟು.
ದೀಪಗಳ ಆವಳಿ – ಸರಮಾಲೆ – ದೀಪಗಳ ಸಾಲು ಎಂದರ್ಥ. ಕಾರ್ತಿಕ ಮಾಸದ ಕಡೆಯಲ್ಲಿ ಮನೆ ಮಂದಿರಗಳಲ್ಲಿ ಕಾರ್ತೀಕ ದೀಪೋತ್ಸವ, ಶಿವ ದೀಪೋತ್ಸವ ಮತ್ತು ವಿಷ್ಣು ದೀಪೋತ್ಸವಗಳೆಂದು ಕರೆದು ಎಲ್ಲೆಡೆ ದೀಪಗಳನ್ನು ಸಾಲು ಸಾಲಾಗಿ ಹಚ್ಚಿಡುವರು. ಮುಂದೆ ಕಾರ್ತೀಕ ದೀಪೋತ್ಸವದಲ್ಲಿ ದೀಪಗಳನ್ನು ಬೆಳಗಿಸುವ ಸಮಾರಂಭಕ್ಕೆ ದೀಪಾವಳಿಯು ನಾಂದಿಯಾಗಿರುತ್ತದೆ. ದೀಪಾವಳಿ ಉತ್ಸವದಲ್ಲಿ ಮಹಾವಿಷ್ಣುವಿನ ಪೂಜೆ, ನರಕಾಸುರನ ವಧೆ, ಬಲೀಂದ್ರ ವಿಜಯದ ಪೂಜೆ, ಮಹಾಲಕ್ಷ್ಮಿಯ ಪೂಜೆ, ಮಹಾದೇವನ ಪೂಜೆ, ಮಹಾರಾತ್ರಿಯ ಪೂಜೆ, ಕುಬೇರನ ಪೂಜೆ, ಯಮಧರ್ಮರಾಜನ ಪೂಜೆ, ಗೋವಿನ ಪೂಜೆ ಮತ್ತು ಗೋವರ್ಧನ ಪೂಜೆಗಳನ್ನೂ ಮಾಡುವರು. ಈ ಸಮಯದಲ್ಲಿ ಪಶು ಪ್ರಾಣಿಗಳಿಗೂ ಪೂಜೆಯಲ್ಲಿ ಆದ್ಯತೆ ನೀಡಲಾಗುವುದು. ಇಷ್ಟಲ್ಲದೇ ಇದೇ ಸಮಯದಲ್ಲಿ ದೀಪದಾನವನ್ನೂ ನಡೆಸುವರು. ಇಷ್ಟಲ್ಲದೇ ವಿಶೇಷ ದಿನಗಳಲ್ಲಿ ಆಯಾ ಪ್ರಾಂತ್ಯಗಳಲ್ಲಿ ಆಚರಣೆಯಲ್ಲಿರುವ ಕೌಮುದೀ ಮಹೋತ್ಸವ, ನರಕ ಚತುರ್ದಶೀ, ಬಲಿಪಾಡ್ಯಮಿ, ವೀರಪ್ರತಿಪದಾ, ಭಗಿನೀ ದ್ವಿತೀಯಾ (ಬಿಹಾರ ಉತ್ತರ ಪ್ರದೇಶಗಳಲ್ಲಿ ಭಾವುದೂಜ್), ಸೋದರ ಬಿದಿಗೆ (ಮಹಾರಾಷ್ಟ್ರದಲ್ಲಿ ಭಾವುಬೀಜ್) ಇತ್ಯಾದಿ ಹಬ್ಬಗಳನ್ನು ಆಚರಿಸುವರು.