ಪುಟಗಳು

ರಿಯಾಯಿತಿ ದರದಲ್ಲಿ ಕನ್ನಡ ಪುಸ್ತಕ ಕೊಳ್ಳಿರಿ



Kannada Book Fair 2012
 
ಬೆಂಗಳೂರು, ಜ.5: ಕನ್ನಡ ಪುಸ್ತಕ ಪ್ರಾಧಿಕಾರ ಜ.5ರಿಂದ 8ರವರೆಗೆ ನಗರದ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ವಿಶೇಷ ರಿಯಾಯಿತಿ ಪುಸ್ತಕ ಮಾರಾಟ ಮೇಳವನ್ನು ಆಯೋಜಿಸಲಾಗಿದೆ.

ಗುರುವಾರ ಬೆಳಗ್ಗೆ 11ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್ ಪುಸ್ತಕ ಮೇಳ ಉದ್ಘಾಟಿಸಿದರು. ಪ್ರಾಧಿಕಾರ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ ಉಪಸ್ಥಿತರಿದ್ದರು.

ಮೇಳ ನಡೆಯುವ ಪ್ರತಿದಿನ ಬೆಳಗ್ಗೆ 10:30ರಿಂದ ರಾತ್ರಿ 8ರವರೆಗೆ ಸಾರ್ವಜನಿಕರಿಗೆ ಪ್ರವೇಶವಿರುತ್ತದೆ. ರಾಜ್ಯದ 70 ಪ್ರಕಾಶನ ಸಂಸ್ಥೆಗಳು ಮೇಳದಲ್ಲಿ ಭಾಗವಹಿಸಿದ್ದಾರೆ. ಮೇಳದಲ್ಲಿ 68ಕ್ಕೂ ಅಧಿಕ ಮಳಿಗೆ ಇದೆ.

ಎಲ್ಲ ಪ್ರಕಾಶಕರು ಕನಿಷ್ಠ ಶೇ.25ರಷ್ಟು ರಿಯಾಯಿತಿ ನೀಡುವುದು ಕಡ್ಡಾಯ ಎಂದು ನಿಯಮ ಮಾಡಲಾಗಿದೆ. ಕೆಲವು ವಿ.ವಿ.ಗಳ ಪ್ರಸರಾಂಗಗಳು ಮತ್ತು ಸಂಸ್ಥೆಗಳು ಶೇ.50ರಷ್ಟು ರಿಯಾಯಿತಿಯನ್ನು ನೀಡಲು ಮುಂದೆ ಬಂದಿವೆ.

ಕಳೆದ ವರ್ಷ ನಡೆದ ವಿಶೇಷ ರಿಯಾಯಿತಿ ಪುಸ್ತಕ ಮೇಳದಲ್ಲಿ ಒಂದು ಕೋಟಿ ರೂ.ಗಳಿಗೂ ಹೆಚ್ಚಿನ ವ್ಯವಹಾರವಾಗಿದೆ. ಒಟ್ಟು 6 ಪುಸ್ತಕ ಮೇಳಗಳನ್ನು ನಡೆಸಲಾಗಿದೆ ಎಂದು ಸಿದ್ದಲಿಂಗಯ್ಯ ಹೇಳಿದರು.

ಜಾಹೀರಾತು ಮುಕ್ತ ಕನ್ನಡ ಮೂವಿ ಚಾನಲ್ ಪ್ರಾರಂಭ



Sun TV Network Ltd
 
ಈಗಿನ ಟಿವಿ ಚಾನಲ್‌ಗಳಲ್ಲಿ ಊಟಕ್ಕಿಂತ ಉಪ್ಪಿನಕಾಯಿಯೇ ಜಾಸ್ತಿ ಎಂಬಂತೆ ಕಾರ್ಯಕ್ರಮಗಳಿಗಿಂತ ಜಾಹೀರಾತುಗಳ ಅಬ್ಬರವೇ ಜೋರಾಗಿದೆ. ಈ ಕಿರಿಕಿರಿಯಿಂದ ಬೇಸತ್ತಿರುವ ವೀಕ್ಷಕರ ಮನೆ ಪಡಸಾಲೆಗೆ ಮತ್ತೊಂದು ಹೊಸ ಕನ್ನಡ ಟಿವಿ ಬಂದಿದೆ. ಅದೂ ಜಾಹೀರಾತು ರಹಿತ ಆಕ್ಷನ್ ಮೂಮಿ ಚಾನಲ್.

ದಕ್ಷಿಣ ಭಾರತದಲ್ಲಿ ಮುಂಚೂಣಿಯಲ್ಲಿರುವ ಸನ್ ಟಿವಿ ನಾಲ್ಕು ಹೊಸ ಆಕ್ಷನ್ ಮೂವಿ ಚಾನಲ್‌ಗಳನ್ನು ಪ್ರಾರಂಭಿಸಿದೆ. ನಿಮ್ಮ ಮೆಚ್ಚಿನ ಚಲನಚಿತ್ರಗಳನ್ನು ಪ್ರದರ್ಶಿಸುವ ಜೊತೆಗೆ ಜಾಹೀರಾತುಗಳಿಂದ ಮುಕ್ತವಾಗಿರುತ್ತದೆ ಈ ವಾಹಿನಿ.

ಕನ್ನಡ ಸೇರಿದಂತೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಜಾಹೀರಾತು ಮುಕ್ತ ವಾಹಿನಿಗಳನ್ನು ಪ್ರಾರಂಭಿಸಲಾಗಿದೆ ಎಂದು ಸನ್ ಟಿವಿ ನೆಟ್‌ವರ್ಕ್ ತಿಳಿಸಿದೆ. ಚಲನಚಿತ್ರಗಳಿಗೆಂದೇ ಮೀಸಲಾದ ಈ ವಿಶೇಷ ವಾಹಿನಿ 24 ಗಂಟೆಗಳ ಕಾಲ ವೀಕ್ಷಕರನ್ನು ರಂಜಿಸಲಿದೆ. ಇದೊಂದು ಪ್ರೀಮಿಯರ್ ಪೇ ಚಾನಲ್ ಆಗಿದೆ.

ಹೊಸ ನಾಲ್ಕು ಚಾನಲ್‌ಗಳನ್ನು ಆರಂಭಿಸುವುದರೊಂದಿಗೆ ಸನ್ ಟಿವಿ ನೆಟ್‌ವರ್ಕ್ ಬಳಗಕ್ಕೆ ಒಟ್ಟು 29 ಚಾನಲ್‌ಗಳು ಸೇರ್ಪಡೆಯಾದಂತಾಗಿದೆ. ಕನ್ನಡದಲ್ಲಿ ಏಳು, ತಮಿಳಿನಲ್ಲಿ ಹತ್ತು, ತೆಲುಗಿನಲ್ಲಿ ಎಂಟು ಹಾಗೂ ಮಲಯಾಳಂನಲ್ಲಿ ನಾಲ್ಕು ಟಿವಿ ವಾಹಿನಿಗಳನ್ನು ಸನ್ ನೆಟ್‌ವರ್ಕ್ ಹೊಂದಿದೆ. (ಏಜೆನ್ಸೀಸ್)