ರಾಷ್ಟ್ರೀಯ ಹೆದ್ದಾರಿ-66ರ ಚತುಷ್ಪಥ ಕಾಮಗಾರಿಗಾಗಿ ಗಿಳಿಯಾರು ಮತ್ತು ಕೋಟತಟ್ಟು ಗ್ರಾಮ ವ್ಯಾಪ್ತಿಯಲ್ಲಿನ ಕಾರಂತರ ಮನೆ ತೆರವುಗೊಳಿಸದಂತೆ ಸಾಹಿತ್ಯಾಸಕ್ತರು, ಕನ್ನಡಪರ ಸಂಘಟನೆಗಳು ಸ್ಥಳೀಯರ ವಿರೋಧ ವ್ಯಕ್ತಪಡಿಸಿದ್ದರು.
ಆದರೆ, ಆಗಬಾರದ್ದು ಆಗಿಬಿಟ್ಟಿದೆ. ನಡುವೆಯೂ ಚತುಷ್ಪಥ ರಸ್ತೆ ಕಾಮಗಾರಿಗೆ ಕಾರಂತಜ್ಜನ ಮೂಲಮನೆ ಬಲಿಯಾಗಿದೆ. ಕಾರಂತರ ಮನೆ ಸ್ಮಾರಕವಾಗಿ ಉಳಿಸಬೇಕೆಂದು ಸಾಹಿತ್ಯ ವಲಯ ಇಟ್ಟಿದ್ದ ಬಹುದಿನಗಳ ಬೇಡಿಕೆ ಸರ್ಕಾರದ ಕಿವಿಗೆ ಬಿದ್ದಿಲ್ಲ.
ಜ್ಞಾನಪೀಠ ಪ್ರಶಸ್ತಿ ಗಳಿಸಿರುವ ಎಂಟು ಮಂದಿ ಕನ್ನಡ ಸಾಹಿತಿಗಳಲ್ಲಿ ಒಬ್ಬರಾದ ಶಿವರಾಮ ಕಾರಂತ ಅವರ ಮೂಲ ಮನೆ 'ಸುಹಾಸ್' ಈಗ ಕಾಲಗರ್ಭಕ್ಕೆ ಸೇರಿದೆ. ಕಾರಂತರ ಪುತ್ತೂರಿನ ಮನೆಯಾದ 'ಹರ್ಷ' ವನ್ನು ಈಗಾಗಲೇ ಸ್ಮಾರಕವನ್ನಾಗಿ ಮಾಡಲಾಗಿದೆ.
ಆದರೆ ಕಾರಂತರ ಕೋಟದ ಮೂಲ ಮನೆಯಲ್ಲಿರುವ ಗ್ರಂಥಾಲಯ, ಅವರ ನೆನಪು ಸದಾ ಉಳಿಯಬೇಕಾದರೆ ಮತ್ತು ಮುಂದಿನ ಪೀಳಿಗೆಗೆ ಕಾರಂತರ ಕುರಿತು ತಿಳಿಯಬೇಕಾದರೆ ಈ ಮನೆ ಉಳಿಸುವುದು ಅನಿವಾರ್ಯವಾಗಿದೆ ಎಂಬುದು ಕಾರಂತ ಅಭಿಮಾನಿಗಳ ಅಭಿಪ್ರಾಯವಾಗಿದೆ.