ಪುಟಗಳು

ಪಾನಿಪುರಿ ತಿನ್ನೋದು ಎಂದೋ ಬಿಟ್ಟೆ, ಯಾಕಂದ್ರೆ..




* ಪ್ರವೀಣ ಚಂದ್ರ
ಪಾನಿಪುರಿ, ಮಸಾಲಪುರಿ, ಬೇಲ್ ಪುರಿ ಅಂತ ರಸ್ತೆಬದಿಯಲ್ಲಿ ಸಾಕಷ್ಟು "ಪುರಿ"ಗಳಿವೆ. ನಾವು ಆರ್ಡರ್ ಮಾಡಿದಾಕ್ಷಣ ಮುಖವನ್ನೊಮ್ಮೆ ಗಂಭೀರವಾಗಿ ನೋಡಿ ಒದ್ದೆಯಾದ ಪ್ಲೇಟ್ ಗೆ ಅಲ್ಲಿ ಸಾಲಾಗಿರಿಸಿದ ಐಟಂಗಳನ್ನು ಹಾಕಿ ನಮ್ಮ ಕೈಗಿಕ್ಕುತ್ತಾನೆ ಮಾಣಿ. ನಾವು ಅದನ್ನು ಚಪ್ಪರಿಸಿಕೊಂಡು ತಿನ್ನುತ್ತೇವೆ. ಅಷ್ಟೇ ಸಾಲದೆಂಬಂತೆ ಬಾಯಿ ರುಚಿಗೆ ಸ್ವಲ್ಪ ಪಾನಿ ಕೇಳಿ ಕುಡಿಯುತ್ತೇವೆ. ಸ್ವಲ್ಪ ಖಾರ ಖಾರ ಅನಿಸಿದರೆ ಅಲ್ಲಿರೋ ಮಗ್ ನಿಂದ ನೀರು ಕುಡಿಯುತ್ತೇವೆ.


ಸಂಜೆ ಹಸಿವಾದರೆ ಸೀದಾ ರಸ್ತೆ ಬದಿಯ ಪಾನಿಪುರಿ ಗಾಡಿಗೆ ಹೋಗಿ ಏನಾದರೂ ತಿನ್ನುವ ಅಭ್ಯಾಸ ನಿಮ್ಮಂತೆ ನನಗೂ ಇತ್ತು. ಆದರೆ ಇನ್ನೂ ಹಸಿವಿನಿಂದ ಸತ್ತರೂ ಅದನ್ನು ತಿನ್ನಲಾರೆ ಎಂದು ತೀರ್ಮಾನಿಸಿಬಿಟ್ಟಾಗಿದೆ. ಅದಕ್ಕೆ ಕಾರಣ ನೂರಾರು ಕೊಡಬಹುದು. ಕೆಲವು ಕಾರಣಗಳನ್ನು ಇಲ್ಲಿ ನೀಡಿದ್ದೇನೆ. ಇದನ್ನೆಲ್ಲ ಓದಿದ ನಂತರ ನಿಮಗೂ ಈ ಪಾನಿಪುರಿ ತಿನ್ನಬೇಕೆನಿಸಿದರೆ ಅದು ನಿಮ್ಮಿಷ್ಟ.

* ಮೊದಲು ಹೆದರಬೇಕಾದ್ದು ಧೂಳಿಗೆ. ಪಾನಿಪುರಿ ಗಾಡಿಯ ಪಕ್ಕದಲ್ಲಿ ನಿಮಿಷಕ್ಕೆ ಲೆಕ್ಕವಿಲ್ಲದಷ್ಟು ಬಸ್, ಕಾರುಗಳು ಧೂಳೆಬ್ಬಿಸುತ್ತ ಸಾಗುತ್ತವೆ. ಧೂಳುಗಳೆಲ್ಲ ಪಾನಿಪುರಿ ಗೂಡಿನೊಳಗೆ ಹೋಗಿ ಅಲ್ಲಿ ಸಾಲಾಗಿರಿಸಿದ ಐಟಂನೊಳಗೆ ಕುಳಿತುಕೊಂಡುಬಿಡುತ್ತವೆ. ಧೂಳಿನ ಬಣ್ಣದ ಪಾನಿ/ಮಸಾಲ ಪುರಿಗಳನ್ನು ತಿಂದಾಗ ಇದರಲ್ಲಿ ಧೂಳು ಇರಬಹುದು ಎಂಬ ಡೌಟೇ ನಮಗೆ ಬರೋದಿಲ್ಲ. ಧೂಳು ಎಂದರೆ ರೋಗಾಣುಗಳ ಆವಾಸಸ್ಥಾನ. ದುಡ್ಡುಕೊಟ್ಟು ರೋಗ ಬರಿಸಿಕೊಳ್ಳಬೇಕಾ?

* ಆತ ಬಳಸುವ ನೀರು ಕಂಡರೆ ವಾಕರಿಕೆ ಬರೋದು ಗ್ಯಾರಂಟಿ. ಹೆಚ್ಚಿನವರು ಬಳಸೋದು ಬೋರ್ ವೆಲ್ ನೀರು. ಒಂದು ಬಕೆಟ್ ನಲ್ಲಿ ಎಷ್ಟು ನೂರು ಪ್ಲೇಟ್ ತೊಳೆಯುತ್ತಾನೋ? ಲೆಕ್ಕವಿಟ್ಟರೆ ಆತನ ಹೆಸರು ಗಿನ್ನಿಸ್ ಬುಕ್ ನಲ್ಲಿ ದಾಖಲೆಯಾದೀತು. ಪಾಪ ಆತನಿಗೆ ಗ್ರಾಹಕರ ರಷ್ ನಲ್ಲಿ ಅರ್ಧಗಂಟೆಗೊಮ್ಮೆ ನೀರು ತರಲು ಸಮಯವೂ ಇರೋಲ್ಲ. ನೋಡಲು ಪೈಬರ್ ಪ್ಲೇಟ್ ಶುಭ್ರವಾಗಿರುವಂತೆ ಕಾಣುತ್ತದೆ. ಆದರೆ ಇನ್ನುಮುಂದೆ ಪುರಿ ತಿನ್ನೋ ಮುನ್ನ ಆತನ ಬಕೆಟ್ ಒಮ್ಮೆ ಇಣುಕಿ ನೋಡಿರಿ. ಸಾರಿ ಟು ಸೇ ದಿಸ್.

* ಆತ ಬಳಸುವ ನೀರು ಬೋರ್ ವೆಲ್ ನದ್ದಾಗಿದ್ದರೆ ಅದರಲ್ಲಿರುವ ಹಾನಿಕಾರಕ ಅಂಶಗಳ ಕುರಿತು ತುಸು ಯೋಚಿಸಬೇಕು. ನಗರದ ಬೋರ್ ವೆಲ್ ನೀರುಗಳು ಕುಡಿಯಲು ಯೋಗ್ಯವಾಗಿರೋದಿಲ್ಲ. ಹೆಚ್ಚಾಗಿ ಬೇಸಿಗೆಯಲ್ಲಿ ಅಂತರ್ ಜಲದಲ್ಲಿ ಲವಣಾಂಶಗಳ ಸೇರಿಕೆ ಅಪಾರ ಪ್ರಮಾಣದಲ್ಲಿರುತ್ತದೆ. "300 ಅಡಿಗಳಿಗಿಂತ ಕೆಳಗೆ ಕೊರೆಯಲಾದ ಬೋರ್ ವೆಲ್ ನೀರು ಬೇಸಿಗೆಯಲ್ಲಿ ಬಳಕೆಗೆ ಸೂಕ್ತವಲ್ಲ" ಎನ್ನುತ್ತದೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್.. ಅರ್ಸೆನಿಕ, ಫ್ಲೋರೈಡ್ ನಂತಹ ಆಘಾತಕಾರಿ ಲವಣಗಳು ಬೋರ್ ವೆಲ್ ನಲ್ಲಿದ್ದು ಆರೋಗ್ಯಕ್ಕೆ ಬಹಳಷ್ಟು ಅಪಾಯಕಾರಿ. ದಿನಾ ನೀವು ಪಾನಿಪುರಿ ತಿನ್ನುತ್ತ ಇಂತಹ ರಾಸಾಯನಿಕಗಳನ್ನು ನಿಮ್ಮ ದೇಹದೊಳಗೆ ಸೇರಿಸುತ್ತೀರಿ, ಎಚ್ಚರ.

* ಬಟಾಣಿ, ಈರುಳ್ಳಿ, ಟೊಮೆಟೊ, ಮಸಾಲ ಎಲ್ಲವೂ ಇವತ್ತಿನದ್ದೇ ಅನ್ನೋಕೆ ಯಾವುದೂ ಗ್ಯಾರಂಟಿ ಇಲ್ಲ. ಹೆಚ್ಚಿನವರು ಅಂದಂದೇ ತಯಾರಿಸಬಹುದು. ಒಮ್ಮೆ ಯೋಚಿಸಿ. ಪ್ರತಿದಿನ ಆ ದೊಡ್ಡ ತಪ್ಪಲೆಯಲ್ಲಿರುವ ಅಷ್ಟೂ ಬಟಾಣಿಗಳು ಖಾಲಿಯಾಗುತ್ತಾ? ಕೆಲವರದ್ದು ಖಾಲಿಯಾಗಬಹುದು. ಎಲ್ಲದರೂ ಖಾಲಿಯಾಗದಿದ್ದರೆ, ದುಬಾರಿ ಬಟಾಣಿಯನ್ನು ಬಿಸಾಕಿ ಮರುದಿನ ಹೊಸದನ್ನು ಬೇಯಿಸುತ್ತಾನಾ ಆತ? ನೆವರ್. ಪುಟ್ಟ ಹಂಡೆಯಲ್ಲಿರುವ ಮಸಾಲೆಯದ್ದೂ ಇದೇ ಕತೆ. ದುಡ್ಡುಕೊಟ್ಟು ಇದನ್ನೆಲ್ಲ ತಿಂತೀವಲ್ಲ?

* ಪುಟ್ಟ ಹಂಡೆಯಲ್ಲಿರುವ ಪಾನೀಯ ಕುರಿತು ಹೇಳಲೇಬೇಕು. ಮಸಾಲ ಪುರಿ, ಪಾನಿಪುರಿ ತಿಂದ ನಂತರ ನಾವು ಪ್ಲೇಟ್ ಚಾಚಿ "ಪಾನಿ" ಕೊಡಿ ಅಂತೀವಿ. ಆತ ಅದರೊಳಗೆ ಗ್ಲಾಸ್ ಹಾಕಿ(ಕೈ ಕೂಡ ಹಾಕುತ್ತಾನೆ) ಪಾನಿ ಕೊಡುತ್ತಾನೆ. ಹೆಚ್ಚಿನವರು ಇದನ್ನು ನಿತ್ಯ ತಯಾರಿಸುವುದಿಲ್ಲ. ಬಹಳಷ್ಟು ದಿನಗಳಷ್ಟು ಹಳೆಯದ್ದು ಇರುತ್ತದೆ. ಆ ಪಾನಿ ಕುಡಿದ ಹೆಚ್ಚಿನವರ ಗಂಟಲಿನಲ್ಲಿ ಕೆರೆತ ಉಂಟಾಗುತ್ತದೆ. ಪಾನಿಪುರಿ/ಮಸಾಲ ಪುರಿಗೆ ಹಾಕುವ ಸ್ವೀಟ್, ಖಾರ ಕೂಡ ಆರೋಗ್ಯಕ್ಕೆ ಒಳ್ಳೆಯದ್ದಲ್ಲ. ಗ್ಯಾಸ್ ಪ್ರಾಬ್ಲಂ ಇರುವವರು ಮತ್ತೂ ಎಚ್ಚರ ವಹಿಸಬೇಕು.

* ಈಗ ನೀವು ಕೇಳಬಹುದು. ನಾವು ದಿನಾಲೂ ತಿಂತೀವಿ. ಆದರೂ ನಮಗೇನೂ ರೋಗ ಶುರುವಾಗಿಲ್ಲ ಅಂತ. ಅದಕ್ಕೆ ನಿಮ್ಮ ರೋಗ ನಿರೋಧಕ ಶಕ್ತಿ ಕಾರಣವಾಗಿರಬಹುದು. ಇಂತಹ ಜಂಕ್ ಆಹಾರದಿಂದ ರೋಗನಿರೋಧಕ ಶಕ್ತಿ ನಿಧಾನವಾಗಿ ಕಡಿಮೆಯಾಗುತ್ತ ಸಾಗಬಹುದು. ತನ್ನ ಪಾನಿಪುರಿ ಗಾಡಿಗೆ ಚಂದದ ಗಾಜು ಅಳವಡಿಸಿ ಆದಷ್ಟು ಧೂಳು ಒಳಗೆ ಬರದಂತೆ ಕೆಲವರು ನೋಡಿಕೊಳ್ಳುತ್ತಾರೆ. ಅದು ಸ್ವಲ್ಪ ಸೇಫ್ ಅನಿಸಬಹುದು. ಆದರೆ ಧೂಳಿಗೆ ಯಾವ ತಡೆಯಿದೆ? ಆತ ರಸ್ತೆಬದಿಯಲ್ಲಿ ಪ್ಲೇಟನ್ನು ಸೋಪ್, ಡಿಟರ್ಜೆಂಟ್ ಬಳಸಿ ತೊಳೆಯಲು ಸಾಧ್ಯವೇ? ಕೆಲವೊಮ್ಮೆ ಆತ ಗಿರಾಕಿಗಳ ರಷ್ ನೋಡಿ ಸರಿಯಾಗಿ ತೊಳೆಯದೇ ನಿಮ್ಮ ಕೈಗೆ ಘಮಘಮ ಅನ್ನೋ ಪಾನಿಪುರಿ ಪ್ಲೇಟ್ ನೀಡಬಹುದು.

ರಸ್ತೆಬದಿಯಲ್ಲಿ ದೊರಕುವ ಪಾನಿಪುರಿ, ಮಸಾಲಪುರಿ, ಬೇಲ್ ಪುರಿ ಇತ್ಯಾದಿಗಳನ್ನು ತಿನ್ನದಿರಲು ಹೀಗೆ ಸಾಕಷ್ಟು ಕಾರಣಗಳನ್ನು ಕೊಡಬಹುದು. ಆದರೂ ಡೋಂಟ್ ಕೇರ್ ಎನ್ನದೇ ತಿನ್ನಲು ಯೋಚಿಸುತ್ತಿದ್ದೀರಾ? ಅಷ್ಟಕ್ಕೆ ನಿಮ್ಮನ್ನು ಸುಲಭವಾಗಿ ಬಿಡಲು ನನಗೆ ಮನಸ್ಸು ಬರುತ್ತಿಲ್ಲ. ಕೊನೆಯದಾಗಿ ಮೊನ್ನೆ ಬೆಂಗಳೂರು ಮಿರರ್ ನಲ್ಲಿ ಬಂದ ಸುದ್ದಿಯ ಸಾರಂಶ ಓದಿರಿ.

ಹೀಗೂ ಉಂಟೆ!

ಪುಣೆ ಸಮೀಪದ ಒಂದು ಗಲ್ಲಿಯಲ್ಲಿ ಪಾನಿಪುರಿ ಮಾರಾಟ ಮಾಡುತ್ತಿದ್ದ 59 ವಯಸ್ಸಿನವನ ಹೆಸರು ರಾಜ್ ದೇವ್ ಚೌಹಾಣ್. ಯಾವತ್ತೂ ಆತನಿಗೆ ಗಿರಾಕಿಗಳ ರಷ್ ಇರುತ್ತದೆ. ಹಾಗಂತ ದೇಹ ಸುಮ್ಮನಿರುತ್ತಾ? ಸಮೀಪದಲ್ಲಿ ಶೌಚಾಲಯವಿಲ್ಲ. ಇದ್ದರೂ ಹೋಗಲು ಸಮಯವಿಲ್ಲ. ಜಲಬಾಧೆ ನೀಗಿಸಲು ಆತ ಕಂಡುಕೊಂಡ ಉಪಾಯ ಏನುಗೊತ್ತ? ಪಾನಿಪುರಿ ಗಾಡಿಯ ಕೆಳಗೆ ಸ್ಟೀಲ್ ಮಗ್ ಗೆ ಸುಸ್ಸು ಮಾಡುವುದು. ಧೂ ಅಸಹ್ಯ ಅನ್ನಬೇಡಿ. ಮುಂದೆ ಓದಿ.

ಪುಣೆಯ ಅಂಕಿತಾ ಠಾಣೆ ಎಂಬ 19 ವಯಸ್ಸಿನ ವಿದ್ಯಾರ್ಥಿನಿಗೆ ಪಾನಿಪುರಿ ತಿನ್ನೋ ಹುಚ್ಚು. ಆಕೆ ಅಂದು ಅಲ್ಲೇ ಗಲ್ಲಿಯಲ್ಲಿದ್ದ ರಾಜ್ ದೇವ್ ಚೌಹಾಣ್ ನ ಪಾನಿಗಾಡಿಗೆ ಬಂದು ಮಸಾಲ ಪುರಿ ತಿನ್ನುತ್ತಿದ್ದಳು. ಗಾಡಿಯಾತ ನಿಂತಲ್ಲೇ ಚೂರು ಬಗ್ಗಿ ಏನೋ ಮಾಡುತ್ತಿದ್ದಾನೆ ಅನಿಸಿ ನೋಡಿದವಳಿಗೆ ಆಶ್ಚರ್ಯ! 59 ವಯಸ್ಸಿನ ಗಾಡಿಯಾತ ಪಾನಿಪುರಿ ಗಾಡಿಕೆಳಗೆ ಸ್ಟೀಲ್ ಮಗ್ ಒಂದಕ್ಕೆ ಅದನ್ನು ಮಾಡುತ್ತಿದ್ದಾನಂತೆ. ಪ್ರತಿನಿತ್ಯದ ಜಲಬಾಧೆ ತೀರಿಸಲು ಆತ ಕಂಡುಕೊಂಡ ಉಪಾಯವಿದು. ಇದೇ ಮಗ್ಗನ್ನು ಗ್ರಾಹಕರು ನೀರು ಕುಡಿಯಲು ಬಳಸುತ್ತಿದ್ದರು.

ಈತನ ಈ ಕ್ರಿಯೆಯನ್ನು ಆಕೆ ಮನೆಯವರಿಗೆ, ನೆರೆಕರೆಯವರಿಗೆ ಹೇಳಿದಾಗ ಯಾರು ನಂಬಲಿಲ್ಲವಂತೆ. ಆದರೆ ಆತನ ಗಾಡಿಯ ಪಕ್ಕದಲ್ಲಿರುವ ಕಟ್ಟಡದಲ್ಲಿದ್ದಾತ ಈತನ ಈ ನಿತ್ಯ ಪ್ರಕ್ರಿಯೆಯನ್ನು ವೀಡಿಯೋ ಮಾಡುತ್ತಿದ್ದಾನಂತೆ. ಆತನನ್ನು ನಂತರ ಪೊಲೀಸರಿಗೆ ಒಪ್ಪಿಸಲಾಯಿತು. ಮರುದಿನ ಆತನನ್ನು ಕೋರ್ಟ್ ಗೆ ಒಪ್ಪಿಸಲಾಯಿತು. ಸಾಕಷ್ಟು ಎಚ್ಚರಿಕೆ ನೀಡಿದ ನಂತರ 1,200 ರು. ದಂಡ ಕೊಟ್ಟನಂತೆ. ಪಾಪ ಅಂಕಿತಳಿಗೆ ಈಗ ಪಾನಿಪುರಿ ಅಂಗಡಿ ಕಂಡರೆ ವಾಕರಿಕೆ ಬರುತ್ತಂತೆ.. ವ್ಯಾಕ್...!