ಪುಟಗಳು

ಅನಂತ ಗುಪ್ತ ನಿಧಿ: ಕಾಡತೊಡಗಿದೆ ಸಂರಕ್ಷಣೆಯ ಭೀತಿ


ತಿರುವನಂತಪುರಂ, ಜುಲೈ 4: ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ರಹಸ್ಯ ಕೊಠಡಿಗಳಲ್ಲಿ ಪತ್ತೆಯಾಗಿರುವ ಅಪಾರ ಪ್ರಮಾಣದ ಸಂಪತ್ತನ್ನು ಸಂರಕ್ಷಿಸುವುದು ಹೇಗೆಂಬುದು ಈಗ ಎಲ್ಲರ ಚಿಂತೆಯ ವಿಷಯ.

ರಹಸ್ಯ ಕೊಠಡಿಯ ತೆರೆಯುವ ತನಕ ಈ ದೇವಸ್ಥಾನಕ್ಕೆ ಸಾಧಾರಣವಾದ ಬಂದೋಬಸ್ತಿನ ವ್ಯವಸ್ಥೆಯಿತ್ತು. ಆದರೆ ಈಗ ಅಬೇಧ್ಯ ರಕ್ಷಣಾ ವ್ಯವಸ್ಥೆಯನ್ನು ಮಾಡಲಾಗಿದ್ದರೂ ಸುದೀರ್ಘ‌ ಕಾಲ ಸಂಪತ್ತನ್ನು ರಕ್ಷಿಸಿಡಬೇಕಾದ ಚಿಂತೆ ಸರಕಾರವನ್ನು ಕಾಡುತ್ತಿದೆ. ಒಟ್ಟಾರೆ ಸುಮಾರು 1 ಲಕ್ಷ ಕೋಟಿ ರುಪಾಯಿ ಮೇಲ್ಪಟ್ಟು ಬೆಲೆಬಾಳುವ ಸಂಪತ್ತು ದೇವಸ್ಥಾನದ ರಹಸ್ಯ ಕೊಠಡಿಗಳಲ್ಲಿದೆ.

ಸುಪ್ರೀಂ ಕೋರ್ಟ್‌ ನೇಮಿಸಿರುವ ಏಳು ಸದಸ್ಯರ ಸಮಿತಿ ಸಂಪತ್ತಿನ ತಪಶೀಲು ಪಟ್ಟಿ ತಯಾರಿಸುತ್ತಿದ್ದು, ಶನಿವಾರದ ತನಕ ಸುಮಾರು 1 ಲಕ್ಷ ಕೋಟಿ ರು. ಸಂಪತ್ತು ಸಿಕ್ಕಿದೆ. ಭಾನುವಾರ ತಪಶೀಲು ಪಟ್ಟಿ ತಯಾರಿಸುವ ಪ್ರಕ್ರಿಯೆಗೆ ವಿರಾಮ ನೀಡಲಾಗಿದ್ದು, ಸೋಮವಾರ ಮುಂದುವರಿಯುತ್ತದೆ.

ಜಗತ್ತಿನ ಅತ್ಯಂತ ಶ್ರೀಮಂತ ಹಿಂದು ದೇವಸ್ಥಾನವಾಗಿ ಮೂಡಿ ಬಂದಿರುವ ಹಿನ್ನೆಲೆಯಲ್ಲಿ ಅಬೇಧ್ಯ ರಕ್ಷಣಾ ವ್ಯವಸ್ಥೆಯನ್ನು ಮಾಡುವ ಅಗತ್ಯವೂ ತಲೆದೋರಿದೆ. ಐತಿಹಾಸಿಕ ಮಹತ್ವವುಳ್ಳ ಈ ದೇವಾಲಯ ಮತ್ತು ಇಲ್ಲಿ ದೊರೆತಿರುವ ಭಾರಿ ಸಂಪತ್ತಿನ ಸಂರಕ್ಷಣೆ ಹೇಗೆ ಎನ್ನುವ ಪ್ರಶ್ನೆ ಇತಿಹಾಸಕಾರರು, ಪ್ರಾಧ್ಯಾಪಕರು ಹಾಗೂ ದೇವಾಲಯ ಸಂಸ್ಕೃತಿ ಕುರಿತ ಕುತೂಹಲಿಗಳನ್ನು ಕಾಡತೊಡಗಿದೆ.

ಸ್ವಾತಂತ್ರ್ಯಪೂರ್ವದ ಇತರ ಹಲವು ರಾಜಮನೆತನಗಳಲ್ಲಿ ಈ ರೀತಿ ಅಪಾರ ಪ್ರಮಾಣದ ಸಂಪತ್ತು ಇತ್ತು. ಆದರೆ ಅದು ದಾಳಿಕೋರರ ಪಾಲಾಗಿದೆ ಅಥವ ರಾಜಮನೆತನದವರೇ ಅವುಗಳನ್ನು ಬಳಸಿಕೊಂಡಿದ್ದಾರೆ. ಆದರೆ ಈ ಖಜಾನೆ ತಿರುವಾಂಕೂರು ಸಂಸ್ಥಾನವನ್ನಾಳಿದವರ ಪ್ರಾಮಾಣಿಕತೆ ಮತ್ತು ಸರಳತೆಯ ಸಂಕೇತದಂತಿದೆ. ಅವರು ಈ ಸ್ವತ್ತಿನಲ್ಲಿ ಏನೊಂದನ್ನೂ ತೆಗೆದುಕೊಂಡು ಹೋಗಿಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

'ಶತಮಾನಗಳಿಂದ ದೇವಾಲಯದ ನೆಲಮಾಳಿಗೆಯಲ್ಲಿದ್ದ ಈ ಭಂಡಾರವನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸಬೇಕು' ಎಂದು ಇತಿಹಾಸಕಾರ ಮತ್ತು ಲೇಖಕ ಎಂ.ಜಿ. ಶಶಿಭೂಷಣ್ ಹೇಳಿದ್ದಾರೆ.

ಈ ಸಂಪತ್ತನ್ನು ಬಹಳ ಎಚ್ಚರಿಕೆ ಹಾಗೂ ಕಾಳಜಿಯಿಂದ ಸಂರಕ್ಷಿಸಿಡಬೇಕೆಂದು ಇಂಡಿಯನ್‌ ಹಿಸ್ಟರಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ನಾರಾಯಣನ್‌ ಸಹಿತ ಹಲವು ಇತಿಹಾಸಕಾರರು ಒತ್ತಾಯಿಸಿದ್ದಾರೆ. ಇದು ತಿರುವಾಂಕೂರು ರಾಜಮನೆತನದವರ ಆಧೀನದಲ್ಲಿರುವ ದೇವಸ್ಥಾನಕ್ಕೆ ಸಂಪತ್ತಾಗಿರುವುದರಿಂದ ಇಷ್ಟರ ತನಕ ಪಾಲಿಸಿಕೊಂಡು ಬಂದಿರುವ ಪರಂಪರೆಯ ಪ್ರಕಾರ ಸರಕಾರ ಅದನ್ನು ವಶಪಡಿಸಿಕೊಳ್ಳುವಂತಿಲ್ಲ. ಸರಕಾರದ ಆಧೀನಕ್ಕೊಳಪಟ್ಟ ದೇವಸ್ಥಾನಗಳು ದುರಾಡಳಿತದಿಂದ ನಾಶವಾಗಿರುವ ಅನೇಕ ಉದಾಹರಣೆಗಳು ನಮ್ಮೆದುರಿಗಿವೆ. ಅನಂತಪದ್ಮನಾಭ ಸ್ವಾಮಿ ದೇವಸ್ಥಾನಕ್ಕೆ ಈ ಗತಿಯಾಗಬಾರದು ಎಂದು ನಾರಾಯಣನ್‌ ಹೇಳಿದ್ದಾರೆ.

ರಹಸ್ಯ ಕೊಠಡಿಗಳಲ್ಲಿ ಪತ್ತೆಯಾಗಿರುವ ಕೆಲವೊಂದು ವಸ್ತುಗಳನ್ನು ವಸ್ತು ಸಂಗ್ರಹಾಲಯದಲ್ಲಿ ಸಾರ್ವಜನಿಕ ವೀಕ್ಷಣೆಗಾಗಿ ಇಡಬಹುದು. ಉಳಿದ ಸಂಪತ್ತನ್ನು ಸುರಕ್ಷಿತವಾಗಿ ಕಾಪಿಡಬೇಕೆಂದು ಅವರು ಸಲಹೆ ಮಾಡಿದ್ದಾರೆ.

1947ರ ಬಳಿಕ ಹೆಚ್ಚಿನೆಲ್ಲ ದೇವಸ್ಥಾನಗಳ ಆಡಳಿತವನ್ನು ತಿರುವಾಂಕೂರು ದೇವಸ್ವಂ ಬೋರ್ಡ್‌ಗೆ ಬಿಟ್ಟುಕೊಡಲಾಗಿದ್ದರೂ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ಆಡಳಿತ ಮಾತ್ರ ರಾಜಮನೆತನದವರ ಆಧೀನದಲ್ಲಿತ್ತು.ಕೊನೆಯ ರಾಜ ಚಿತ್ತಿರಾ ತಿರುನಾಲ್‌ ಬಲರಾಮ ವರ್ಮ ಅವರನ್ನು ದೇವಸ್ಥಾನಗಳ ವಿಲಯನದ ಬಳಿಕ ರಾಜಪ್ರಮುಖರೆಂದು ಹೆಸರಿಸಿದರೂ ಅವರು ರಹಸ್ಯ ಕೊಠಡಿಗಳಲ್ಲಿರುವ ಸಂಪತ್ತನ್ನು ಮುಟ್ಟಿಲ್ಲ.

ಈ ನಡುವೆ ವಿಶ್ವಹಿಂದು ಪರಿಷತ್‌, ನಾಯರ್ ಸರ್ವಿಸ್‌ ಸೊಸೈಟಿ, ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ ಮುಂತಾದ ಸಂಘಟನೆಗಳು ಸಂಪತ್ತನ್ನು ಸರಕಾರ ವಶಪಡಿಸಿಕೊಳ್ಳಬಾರದು ಎಂದು ಎಚ್ಚರಿಸಿವೆ

ಉಕ್ಕಿನ ಬಾಗಿಲು ಅಡ್ಡ: ಅನಂತ ನಿಧಿ ಪರಿಶೋಧನೆ ಶುಕ್ರವಾರಕ್ಕೆ

ತಿರುವನಂತಪುರಂ, ಜುಲೈ 5: ಇಲ್ಲಿನ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ನೆಲಮಾಳಿಗೆಯ ಇನ್ನೂ ಒಂದು ಕೊಠಡಿಯಲ್ಲಿರುವ ನಿಧಿಯ ಪರಿಶೋಧನೆಯನ್ನು ಸದ್ಯಕ್ಕೆ ಕೈಬಿಟ್ಟಿದ್ದು, ಶುಕ್ರವಾರ ಮುಂದುವರಿಸಲು ನಿರ್ಧರಿಸಲಾಗಿದೆ. 'ಬಿ' ಕೊಠಡಿಯ ಎರಡು ಮರದ ಬಾಗಿಲುಗಳನ್ನು ತೆರೆಯಲು ಸಾಧ್ಯವಾದರೂ ಪ್ರಾಚೀನ ಕಾಲದ ಉಕ್ಕಿನಿಂದ ಮಾಡಿರುವ ಮೂರನೇ ಬಾಗಿಲಿನ ಬೀಗ ತೆಗೆಯಲು ಸಾಧ್ಯವಾಗದ ಕಾರಣ ವಿಳಂವಾಗಿದೆ.

ಆರು ಕೊಠಡಿಯೊಳಗಿನ ವಸ್ತುಗಳ ಪರಿಶೀಲನೆ ಮೇಲ್ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ನೇಮಿಸಿದ ವಿಶೇಷ ಸಮಿತಿಯು ಸೋಮವಾರದವರೆಗೆ ಐದು ಕೊಠಡಿಗಳ ಅವಲೋಕನ ಪೂರ್ಣಗೊಳಿಸಿದೆ. ರಹಸ್ಯ ಕೊಠಡಿ 'ಬಿ' ತೆರೆಯಲು ವಿಶೇಷ ಪರಿಣತಿ ಅಗತ್ಯವಾದ್ದರಿಂದ ಶುಕ್ರವಾರ ಸಭೆ ಸೇರಿ ಆ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಾಗಿ ಸಮಿತಿ ನೇತೃತ್ವ ವಹಿಸಿರುವ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಂ.ಎನ್. ಕೃಷ್ಣನ್ ತಿಳಿಸಿದ್ದಾರೆ.

ದೇವಸ್ಥಾನದ ಆಸ್ತಿ ಕಬಳಿಸುವ ಯತ್ನ ನಡೆಯುತ್ತಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ, ಸುಪ್ರೀಂಕೋರ್ಟ್ ನ್ಯಾಯವಾದಿ ಟಿ.ಪಿ. ಸುಂದರರಾಜನ್ ಅವರು ಕೋರ್ಟ್ ಮೊರೆ ಹೋದ ಪರಿಣಾಮ ಪದ್ಮನಾಭಸ್ವಾಮಿ ದೇಗುಲದ ಅನಂತ ಸಂಪತ್ತು ಒಂದೊಂದಾಗಿ ಪತ್ತೆಯಾಗುತ್ತಿದೆ.

ಅನಂತ ನಿಧಿ: 'ಬಿ' ಉಗ್ರಾಣ ತೆಗೆಯುವುದು ಅಪಶಕುನ

ತಿರುವನಂತಪುರ, ಜುಲೈ 6: ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಆರನೇ ರಹಸ್ಯ ಉಗ್ರಾಣ ತೆರೆಯುವುದನ್ನು ಮುಂದೂಡಲು ಪುರಾಣ ಪ್ರತೀತಿ, ನಂಬಿಕೆಯೇ ಕಾರಣ ಎಂದು ತಿಳಿದುಬಂದಿದೆ.

ನಂಬಿಕೆಗಳ ಪ್ರಕಾರ 'ಬಿ' ಉಗ್ರಾಣವನ್ನು ತೆರೆಯುವುದು ಅಪಾಯಕಾರಿ. ಈ ಕೊಠಡಿಯ ಪ್ರಧಾನ ಬಾಗಿಲಿನಲ್ಲಿ ಹಾವಿನ ಮಾದರಿಯೊಂದಿದೆ. ಅದನ್ನು ತೆರೆದರೆ ಅಪಶಕುನ ಕಟ್ಟಿಟ್ಟಬುತ್ತಿ ಎನ್ನಲಾಗುತ್ತಿದೆ. ಅಂತೆಯೇ ಈ ಉಗ್ರಾಣದ ತಳದಲ್ಲಿ ರಹಸ್ಯ ಸುರಂಗವಿದ್ದು, ಇದು ನೇರವಾಗಿ ಸಮುದ್ರಕ್ಕೆ ಕರೆದುಕೊಂಡು ಹೋಗುತ್ತದೆ ಎಂಬಿತ್ಯಾದಿ ನಂಬಿಕೆಗಳಿವೆ.

'ಬಿ' ಉಗ್ರಾಣ ತೆರೆಯುವುದರಿಂದ ಅನಾಹುತಗಳಾಗಬಹುದು ಎಂದು ರಾಜಮನೆತನದವರೂ ಈ ಕೊಠಡಿಯನ್ನು ತೆರೆಯುವುದಕ್ಕೆ ಆಕ್ಷೇಪ ಎತ್ತಿದ್ದಾರೆಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಸಮಿತಿ ತಜ್ಞರ ಅಭಿಪ್ರಾಯ ಪಡೆದುಕೊಂಡು ಮುಂದುವರಿಯುವ ತೀರ್ಮಾನಕ್ಕೆ ಬಂದಿದೆ.

ಸರ್ವೋಚ್ಚ ನ್ಯಾಯಾಲಯದ ಆದೇಶದ ಪ್ರಕಾರ ದೇವಸ್ಥಾನದ ನೆಲಮಾಳಿಗೆಯ ಉಗ್ರಾಣಗಳಲ್ಲಿರುವ ಸಂಪತ್ತನ್ನು ಎಣಿಸುತ್ತಿರುವ ಏಳು ಜನರ ಸಮಿತಿ ಏಳನೇ ದಿನವಾದ ಸೋಮವಾರ ಹಠಾತ್‌ ಕಾರ್ಯಸ್ಥಗಿತಗೊಳಿಸಿ ಶುಕ್ರವಾರ 'ಬಿ' ಕೊಠಡಿಯ ಬಾಗಿಲು ತೆರೆಯುವ ಕುರಿತು ತೀರ್ಮಾನ ಕೈಗೊಳ್ಳಲು ನಿರ್ಧರಿಸಿದೆ. ಈಗಾಗಲೇ ತೆರೆದಿರುವ ಐದು ಕೊಠಡಿಗಳಲ್ಲಿರುವ ವಸ್ತುಗಳನ್ನು ಎಣಿಸುವ ಕಾರ್ಯ ಮುಗಿದಿದ್ದು, ಒಂದು ಲಕ್ಷ ಕೋಟಿ ರೂ ಮೇಲ್ಪಟ್ಟು ಸಂಪತ್ತು ಸಿಕ್ಕಿದೆ. ಈ ಹಿನ್ನೆಲೆಯಲ್ಲಿ 'ಬಿ' ಉಗ್ರಾಣದಲ್ಲಿ ಎಷ್ಟು ಸಂಪತ್ತು ಇರಬಹುದು ಎಂಬ ಕುತೂಹಲ ಕೆರಳಿರುವಾಗಲೇ ಸಮಿತಿ ಎಣಿಕೆಯ ಕಾರ್ಯವನ್ನು ಅನಿರೀಕ್ಷಿತವಾಗಿ ಮುಂದೂಡಿದೆ.

ಸುಪ್ರೀಂಕೋರ್ಟ್‌ ನೇಮಿಸಿರುವ ಏಳು ಸದಸ್ಯರ ಸಮಿತಿ ಶುಕ್ರವಾರ ಸಮಾಲೋಚಿಸಿ ಮುಂದಿನ ನಡೆಯ ಬಗ್ಗೆ ನಿರ್ದಾರ ಕೈಗೊಳ್ಳಲಿದೆ. ದೇವಸ್ಥಾನಕ್ಕೆ ಸಂಬಂಧಿಸಿದಂತೆ ಜನರಲ್ಲಿ ಅನೇಕ ನಂಬಿಕೆಗಳಿರುವುದರಿಂದ ಸಮಿತಿ ಏಕಪಕ್ಷೀಯವಾಗಿ ವರ್ತಿಸುವುದಿಲ್ಲ. ಅಂತೆಯೇ ಆರನೇ ಉಗ್ರಾಣದ ಬಾಗಿಲು ತೆರೆಯಲು ಕೆಲವೊಂದು ರೀತಿಯ ತಂತ್ರಜ್ಞಾನದ ಅರಿವು ಹೊಂದಿರುವುದು ಕೂಡ ಅಗತ್ಯ ಎಂದು ಸಮಿತಿಯಲ್ಲಿರುವ ನಿವೃತ್ತ ನ್ಯಾಯಾಧೀಶ ಎಂ. ಎನ್‌. ಕೃಷ್ಣನ್‌ ಹೇಳಿದ್ದಾರೆ

'ಪದ್ಮನಾಭ ದೇಗುಲ ರಹಸ್ಯಗಳೆಲ್ಲ 1941ರಲ್ಲೇ ಪ್ರಕಟವಾಗಿತ್ತು'

ತಿರುವನಂತಪುರಂ, ಜುಲೈ 6: ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ನೆಲಮಾಳಿಗೆಯ ರಹಸ್ಯ ಕೊಠಡಿಗಳಲ್ಲಿ ಸಿಕ್ಕಿರುವ ಅಮೂಲ್ಯ ವಸ್ತುಗಳ ಪೈಕಿ ಹೆಚ್ಚಿನವುಗಳ ವಿವರ ಪುರಾತನ 'ಮತಿಲಾಕಂ ರೆಕಾರ್ಡ್ಸ್‌' ಕೃತಿಯಲ್ಲಿ ಭದ್ರವಾಗಿ ಲಾಕ್ ಆಗಿವೆ.

ಮತಿಲಾಕಂ ಎಂದರೆ ಅರಮನೆಯ ದಾಖಲೆಗಳು ಎಂದರ್ಥ. ತಿರುವಾಂಕೂರು ರಾಜಮನೆತನ ಮತ್ತು ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಇತಿಹಾಸದ ದಾಖಲೆಗಳನ್ನು ಮಲಯಾಳಂ ಕವಿ ಉಳ್ಳೂರು ಎಸ್‌. ಪರಮೇಶ್ವರನ್‌ ಅಯ್ಯರ್ 1941ರಲ್ಲಿ ಸಂಕಲಿಸಿ ಪ್ರಕಟಿಸಿದ್ದಾರೆ. ಅಂತೆಯೇ 12 ಆವೃತ್ತಿಗಳಲ್ಲಿರುವ 'ಕೊಟ್ಟಾರಂ' ದಾಖಲೆಯಲ್ಲೂ ಸಂಪತ್ತಿನ ವಿವರಗಳಿವೆ.

ತಿರುವಾಂಕೂರು ಅರಮನೆ ಮತ್ತು ಅನಂತ ಪದ್ಮನಾಭಸ್ವಾಮಿ ಪ್ರತ್ಯೇಕಿಸಿ ನೋಡಲು ಸಾಧ್ಯವಿಲ್ಲ. ತಿರುವಾಂಕೂರಿನ ಇತಿಹಾಸ ಬರೆಯುವಾಗ ಅದರಲ್ಲಿ ದೇವಸ್ಥಾನದ ಇತಿಹಾಸವೂ ಅಂತರ್ಗತವಾಗಿರುತ್ತದೆ. ಮತಿಲಾಕಂನಲ್ಲಿ ದೀರ್ಘ‌ ಕಾಲದಿಂದ ತೆರೆದಿರದಿದ್ದ ರಹಸ್ಯ ಉಗ್ರಾಣಗಳಲ್ಲಿರುವ ವಸ್ತುಗಳ ವಿವರಗಳಿವೆ ಎಂದು ಸಂಕೇತ ಭಾಷೆಯನ್ನು ಓದಿರುವ ಸಾಹಿತಿ ಉಳ್ಳೂರು ಹೇಳಿದ್ದಾರೆ. ಪದ್ಮನಾಭನಿಗೆ ಕಾಣಿಕೆಯಾಗಿ ಸಿಕ್ಕಿರುವ ಎಲ್ಲ ಆಭರಣಗಳ ವಿವರಗಳು ಮತಿಲಾಕಂನಲ್ಲಿದೆ. ಸರಪಳಿಯಂತಹ ಚಿನ್ನದ ಸರಗಳು ತೂಕ, ಉದ್ದ, ಗಾತ್ರ ಹಾಗೂ ಅದಕ್ಕೆ ಪೋಣಿಸಿರುವ ವಜ್ರ, ಮುತ್ತುರತ್ನಗಳ ವಿವರಗಳನ್ನು ಮತಿಲಾಕಂನಲ್ಲಿ ಬರೆದಿಟ್ಟಿದ್ದಾರೆ.

ತಿರುವಾಂಕೂರು ಅರಸರು ಬಹಳ ಜತನದಿಂದ ಹಾಗೂ ಭಯಭಕ್ತಿಯಿಂದ ಅನಂತ ಪದ್ಮನಾಭನ ಸಂಪತ್ತನ್ನು ಸಂರಕ್ಷಿಸಿಟ್ಟಿರುವುದಕ್ಕೆ ಇತಿಹಾಸದಲ್ಲಿ ಅನೇಕ ನಿದರ್ಶನಗಳು ಸಿಗುತ್ತವೆ. ಈ ಪೈಕಿ ಒಂದು ಇಂತಿದೆ. ರಾಜಮನೆತನದ ಸದಸ್ಯರು ಅನಂತ ಪದ್ಮನಾಭನ ದರ್ಶನ ಮಾಡಿ ಹೊರಬರುವಾಗ ಕಾಲಿನಲ್ಲಿರುವ ಮಣ್ಣನ್ನು ಕೂಡ ಅಲ್ಲಿಯೇ ಕೊಡವಿಕೊಳ್ಳುತ್ತಾರೆ. ದೇವರಿಗೆ ಸೇರಿದ ಧೂಳಿನ ಕಣವನ್ನು ಕೂಡ ತಾವು ಒಯ್ದಿಲ್ಲ ಎನ್ನುವುದನ್ನು ತೋರಿಸಿಕೊಡುವ ಸಾಂಕೇತಿಕ ವಿಧಿ ಇದು. ರಾಜ ಮನೆತನದವರು ಈಗಲೂ ಈ ವಿಧಿಯನ್ನು ಪಾಲಿಸುತ್ತಾರೆ.

ಈಗ ರಾಜಮನೆತನಕ್ಕೆ ಮುಖ್ಯಸ್ಥರಾಗಿರುವ ಉತ್ರದಾಮ್‌ ತಿರುನಾಳ್‌ ಮಾರ್ತಾಂಡ ವರ್ಮ ಒಂದು ದಿನ ಅನಂತ ಪದ್ಮನಾಭ ದೇವರ ದರ್ಶನ ಮಾಡಲು ಸಾಧ್ಯವಾಗದಿದ್ದರೆ 151.55 ಪೈಸೆ ತಪ್ಪುಕಾಣಿಕೆ ಒಪ್ಪಿಸುವ ಕ್ರಮವನ್ನು ವಿಧಿವತ್ತಾಗಿ ಪಾಲಿಸಿಕೊಂಡು ಬಂದಿದ್ದಾರೆ. ಅರವನೆಯ ಖರ್ಚು ವೆಚ್ಚಗಳನ್ನು ಸಂಬಾರ ವ್ಯಾಪಾರದಿಂದ ಬರುವ ವರಮಾನದಿಂದ ನಿಭಾಯಿಸಿಕೊಳ್ಳಬೇಕೆ ಹೊರತು, ರಾಜ್ಯದ ಬೊಕ್ಕಸದ ಹಣವನ್ನು ಬಳಸಬಾರದು ಎಂಬ ಅಲಿಖಿತ ನಿಮಯ ಅಂದಿನ ದಿನಗಳಲ್ಲಿ ತಿರುವಾಂಕೂರು ಅರಮನೆಯಲ್ಲಿ ಜಾರಿಯಲ್ಲಿತ್ತು.

ಪ್ರಾಚೀನ ಮಲಯಾಳಂ ಭಾಷೆಯಲ್ಲಿ ಬರೆದಿರುವ ಮತಿಲಾಕಂ ಆಭರಣ ಹಾಗೂ ಮತ್ತಿತರ ವಸ್ತುಗಳ ಸಂಖ್ಯೆ, ರೂಪ, ಗಾತ್ರ ಮತ್ತಿತರ ವಿವರಗಳನ್ನು ಒದಗಿಸುತ್ತಿದೆ. ಉದಾಹರಣೆಗೆ ಹೇಳುವುದಾದರೆ ಸಮಿತಿಗೆ ಸಿಕ್ಕಿರುವ ಭಾರೀ ಗಾತ್ರದ ಸರಕ್ಕೆ ಮತಿಲಾಕಂನಲ್ಲಿ 'ಪೊನ್ನಾಲಿ ಪಟ್ಟತ್ತಾಳಿ' ಎಂಬ ಹೆಸರಿದೆ. ಪೊನ್ನಾಲಿ ಪಟ್ಟತ್ತಾಳಿಗೆ ಪೋಣಿಸಿರುವ ಹವಳ, ಮರಕತ ಮತ್ತು ನೀಲಮಣಿಗಳ ವಿವರವೂ ಅದರಲ್ಲಿದೆ