ಪುಟಗಳು

ಭಾರತದಲ್ಲಿ 861.48 ಮಿಲಿಯನ್ ಜನರ ಬಳಿ ಫೋನಿದೆ* ಇಂದ್ರೇಶ್

ನವದೆಹಲಿ, ಜೂ 14: ಕಳೆದ ಏಪ್ರಿಲ್ ತಿಂಗಳಿನಲ್ಲಿ ದೇಶದಲ್ಲಿ 15.34 ಮಿಲಿಯನ್ ಗ್ರಾಹಕರು ದೂರವಾಣಿ ಸಂಪರ್ಕ ಪಡೆದಿದ್ದಾರೆ ಎಂದು ದೂರಸಂಪರ್ಕ ಉದ್ಯಮ ನಿಯಂತ್ರಕ ಟ್ರಾಯ್(TRAI) ತಿಳಿಸಿದೆ. ಇದರಿಂದ ದೇಶದಲ್ಲಿ ಒಟ್ಟು ಮೊಬೈಲ್ ಗ್ರಾಹಕರ ಸಂಖ್ಯೆ 861.48 ಮಿಲಿಯನ್ ಗಳಿಗೇರಿದೆ. ದೂರವಾಣಿ ಸೌಲಭ್ಯ ಹೊಂದಿರುವವರ ಸಂಖ್ಯೆ 826.93ಮಿಲಿಯನ್ ಗಳಿಗೇರಿದೆ ಎಂದು ಟ್ರಾಯ್ ತಿಳಿಸಿದೆ.

ಪ್ರತೀ ನೂರು ಜನರಿಗೆ(telephones per 100 people- teledensity) ದೂರವಾಣಿ ಸೌಲಭ್ಯ ಹೊಂದಿರುವವರ ಸಂಖ್ಯೆ ಶೇ.72.08 ಕ್ಕೇರಿದೆ. ಆದರೆ ಸಕ್ರಿಯ ಮೊಬೈಲ್ ಗ್ರಾಹಕರ ಸಂಖ್ಯೆ ಏಪ್ರಿಲ್ ನಲ್ಲಿ 583.22ಮಿಲಿಯನ್ ಎಂದು ಟ್ರಾಯ್ ತಿಳಿಸಿದೆ.

ಹೊಸ ಗ್ರಾಹಕರನ್ನು ಹೊಂದುವಲ್ಲಿ ರಿಲಯನ್ಸ್ ಮುಂಚೂಣಿಯಲ್ಲಿದ್ದು ಏಪ್ರಿಲ್ ನಲ್ಲಿ 2.93 ಮಿಲಿಯನ್ ಗ್ರಾಹಕರನ್ನು ಸಂಪಾದಿಸಿದ್ದು ಗ್ರಾಹಕ ಒಟ್ಟು ಸಂಖ್ಯೆ 138.65 ಮಿಲಿಯನ್ ಗಳಿಗೇರಿಸಿಕೊಂಡಿದೆ. ಐಡಿಯಾ ಸೆಲ್ಯುಲಾರ್ 2.45 ಮಿಲಿಯನ್ ಗ್ರಾಹಕರನ್ನು ಸೆಳೆದಿದ್ದು ಗ್ರಾಹಕರ ಒಟ್ಟು ಸಂಖ್ಯೆ 91.95 ಮಿಲಿಯನ್ ಗಳಿಗೇರಿದೆ. ಭಾರ್ತಿ ಏರ್ ಟೆಲ್ 2.41 ಮಿಲಿಯನ್ ಗ್ರಾಹಕರನ್ನು ಸೇರ್ಪಡೆ ಮಾಡಿಕೊಂಡಿದ್ದು, 164.61 ಗ್ರಾಹಕರನ್ನು ಹೊಂದಿದೆ.

ವೊಡಾಫೋನ್ 2.40 ಸೆಳೆದಿದ್ದು, ಒಟ್ಟು 136.97 ಗ್ರಾಹಕರನ್ನು ಸೇರ್ಪಡೆ ಮಾಡಿಕೊಂಡಿದೆ. ಏರ್ ಸೆಲ್ 1.10 ಮಿಲಿಯನ್ ಗ್ರಾಹಕರು, ಟಾಟಾ ಟೆಲಿಸರ್ವೀಸಸ್ 1.24 ಮಿಲಿಯನ್ ಗ್ರಾಹಕರನ್ನು ಸೇರ್ಪಡೆ ಮಾಡಿಕೊಂಡಿವೆ.

ಸರ್ಕಾರೀ ಸ್ವಾಮ್ಯದ ಬಿಎಸ್‌ಎನ್‌ಎಲ್ ಮತ್ತು ಎಮ್‌ಟಿಎನ್‌ಎಲ್ ಕ್ರಮವಾಗಿ 0.17 ಮಿಲಿಯ ಹಾಗೂ 367 ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಂಡಿವೆ. ಆದರೆ ತಂತಿ ಸಹಿತ ದೂರವಾಣಿ ಗ್ರಾಹಕರ ಸಂಖ್ಯೆ 34.73 ಮಿಲಿಯನ್ ನಿಂದ 34.55 ಮಿಲಿಯನ್ ಗಳಿಗೆ ಕುಸಿದಿದೆ. ಸರ್ಕಾರೀ ಕಂಪೆನಿಗಳಾದ ಬಿಎಸ್‌ಎನ್‌ಎಲ್ ಹಾಗೂ ಎಮ್‌ಟಿಎನ್‌ಎಲ್ ತಂತಿ ಸಹಿತ ದೂರವಾಣಿ ಮಾರುಕಟ್ಟೆಯಲ್ಲಿ ಶೇ 82.44 ರಷ್ಟು ಪಾಲು ಹೊಂದಿವೆ. ಇದೇ ಅವಧಿಯಲ್ಲಿ ಬ್ರಾಡ್ ಬ್ಯಾಂಡ್ ಗ್ರಾಹಕ ಸಂಖ್ಯೆ 11.87 ಮಿಲಿಯನ್ ನಿಂದ 12.01 ಮಿಲಿಯನ್ ಗಳಿಗೇರಿದೆ

ಮೈಸೂರಿನಲ್ಲಿ ನಾಯಿಗಳಿಗೊಂದು ಬ್ಯೂಟಿ ಪಾರ್ಲರ್* ಬಿಎಂ ಲವಕುಮಾರ್, ಮೈಸೂರು


ಮೈಸೂರು, ಜೂನ್ 15 : ಹಿಂದೆ ತಮ್ಮ ಮನೆಗಳಲ್ಲಿ ರಕ್ಷಣೆಗೆ ಇರಲಿ ಅಂತ ನಾಯಿಗಳನ್ನು ಸಾಕಲಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ ಹೆಚ್ಚಿನ ಜನರು ವಿವಿಧ ತಳಿಯ ಶ್ವಾನಗಳನ್ನು ಮನೆಗಳಲ್ಲಿ ಸಾಕುವುದು ಒಂದು ಫ್ಯಾಷನ್ ಆಗಿ ಬದಲಾಗಿದೆ. ಸಾವಿರಾರು ರೂಪಾಯಿ ಹಣ ನೀಡಿ ತಮಗಿಷ್ಟವಾದ ನಾಯಿಗಳನ್ನು ಮನೆಗೆ ತಂದು ಅದನ್ನು ಮಕ್ಕಳಿಗಿಂತಲೂ ಹೆಚ್ಚಿನ ಕಾಳಜಿ ತೋರಿಸಿ ಸಾಕುತ್ತಾರೆ.

ಬೆಳಿಗ್ಗೆ ಎದ್ದು ಅವುಗಳಿಗೆ ಸ್ನಾನಮಾಡಿಸಿ, ಚೆನ್ನಾಗಿ ಒರೆಸಿ ತಿಂಡಿ ತಿನಿಸುಗಳನ್ನು ನೀಡುವುದು ಸುಲಭದ ಕೆಲಸವಲ್ಲ. ಅದರಲ್ಲೂ ಉದ್ದ ಕೂದಲು ಹೊಂದಿರುವ ಕೆಲವು ತಳಿಯ ಶ್ವಾನಗಳನ್ನು ಬಾಚಿ ಸುಂದರವಾಗಿ ಕಾಣುವಂತೆ ಮಾಡುವುದು ಕಷ್ಟದ ಕೆಲಸ, ಇದು ಎಲ್ಲರಿಂದಲೂ ಮಾಡಲಾಗದು.

ಅಂತಹವರ ಸಹಾಯಕ್ಕಾಗಿ ಈಗ ಮೈಸೂರಿನಲ್ಲಿ ಶ್ವಾನಗಳಿಗಾಗಿ ಚಿತ್ಕಲಾ ಎಂಬುವವರು ಬ್ಯೂಟಿ ಪಾರ್ಲರ್ ತೆರೆದಿದ್ದಾರೆ. ಮೈಸೂರಿನ ಗೋಕುಲಂ ಮುಖ್ಯ ರಸ್ತೆಯಲ್ಲಿರುವ ಮೈಪೆಟ್ ಕ್ಲಿನಿಕ್ ಆವರಣದಲ್ಲಿ "ಪೆಟ್ ಸ್ಪಾ" ಎಂಬ ಬ್ಯೂಟಿ ಪಾರ್ಲರ್ ಇದ್ದು, ಇದೀಗ ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿದೆ.

ಚಿತ್ಕಲಾ ಅವರ ಪತಿ ಡಾ.ಅರುಣ್ ಪಶುವೈದ್ಯರಾಗಿರುವುದರಿಂದ ಅವರಿಗೆ ತುಂಬಾ ಅನುಕೂಲವಾಗಿದೆ. ಇಲ್ಲಿ ಶ್ವಾನಗಳಿಗೆ ಚರ್ಮ ರೋಗ ನಿವಾರಕ ಶಾಂಪು ಬಳಸಿ ಬಿಸಿ ನೀರಿನ ಸ್ನಾನ ಹಾಗೂ ಕೂದಲು ಕಟಿಂಗ್, ಕಿವಿ ಕ್ಲೀನಿಂಗ್ ಸೇರಿದಂತೆ ಹಲವು ಸೇವೆ ಮಾಡಲಾಗುತ್ತದೆ. ಈಗಾಗಲೇ ಹಲವರು ತಮ್ಮ ಮುದ್ದಿನ ನಾಯಿಗಳೊಂದಿಗೆ ಪೆಟ್ ಸ್ಪಾಗೆ ತೆರಳಿ ಸೌಂದರ್ಯ ವರ್ಧಿಸಿಕೊಂಡು ಬಂದಿದ್ದಾರೆ.

ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಎನ್ನುವ ಹಾಗೆ ನಾಯಿಗಳಿಗೂ ಕಾಲ ಕೂಡಿ ಬಂದಿದೆ. ಮುದ್ದಿನ ಬೆಕ್ಕುಗಳಿಗೂ ಕಾಲ ಕೂಡಿ ಬಂದರೂ ಆಶ್ಚರ್ಯವಿಲ್ಲ. ಮುಂದೊಂದು ದಿನ ನಾಯಿಗಳಿಗೆ 'ಸಿಟ್, ಶೇಕ್ ಹ್ಯಾಂಡ್, ಕಮ್ ಹಿಯರ್, ಗೋ ದೇರ್' ಎಂದು ಪಾಠ ಹೇಳಿಕೊಳ್ಳುವ ಇನ್ಸ್ಟಿಟ್ಯೂಟ್ ಗಳು ಆರಂಭವಾದರೂ ಆಗಬುಹುದು. ಅಥವಾ ಮಾನವನಿಗೆ ನಾಯಿಗಳ ಭಾಷೆ ಅರ್ಥ ಮಾಡಿಸಿಕೊಡುವ ಶಾಲೆ ಪ್ರಾರಂಭವಾದರೂ ಅಚ್ಚರಿಯಿಲ್ಲ!

ಗಿನ್ನಿಸ್ ಬುಕ್ ಸೇರಿದ ಕುಳ್ಳ, ಇವನ ಎತ್ತರ 23 ಇಂಚು!


ವಿಶ್ವದ ಅತ್ಯಂತ ಸಣ್ಣವ್ಯಕ್ತಿಯಾಗಿ ಗಿನ್ನಿಸ್ ಬುಕ್ಕಿಗೆ ಫಿಲಿಪೈನ್ ನ "ಜುನ್ರೆ ಬಲವಿಂಗ್" ಆಯ್ಕೆಯಾಗಿದ್ದಾನೆ. ಇವನು ಕೇವಲ 23.6 ಇಂಚು ಎತ್ತರವಿದ್ದಾನೆ. ಆದ್ರೆ ಇವನ ವಯಸ್ಸು 18 ಅಂದ್ರೆ ನಂಬಲೇಬೇಕು.

ಹದಿನೆಂಟು ವಯಸ್ಸಿನ ಹುಡುಗನೊಬ್ಬನ ತೂಕ ಕೇವಲ 5 ಕೆ.ಜಿ. ಎನ್ನುವುದು ಮತ್ತೊಂದು ಸೋಜಿಗ. ಆತನ ಹೆತ್ತವರು ಹೇಳುವ ಪ್ರಕಾರ ಈತ ಒಂದನೇ ವಯಸ್ಸಿನ ನಂತರ ಬೆಳವಣಿಗೆಯಾಗಲಿಲ್ಲವೆನ್ನುತ್ತಾರೆ. ಸದ್ಯ ತನ್ನ ಕುಬ್ಜತೆಯಿಂದಾಗಿ ಗಿನ್ನಿಸ್ ದಾಖಲೆ ಮಾಡಿದ್ದಾನೆ.

ಈತ ನೇಪಾಲದ ಖಗೇಂದ್ರ ದಾಖಲೆಯನ್ನು ಮುರಿದು ಹಾಕಿದ್ದಾನೆ. ಆತನ ಹೆಸರು ಈ ಹಿಂದೆ ಗಿನ್ನಿಸ್ ಬುಕ್ಕಿನಲ್ಲಿತ್ತು. ಆದರೆ ಅತನಿಗಿಂತ ಮೂರು ಇಂಚು ಸಣ್ಣಗಿರುವ ಕಾರಣ ಬಲವಿಂಗ್ ಗೆ ವಿಶ್ವದ ಕುಬ್ಜ ಕಿರೀಟ ದೊರಕಿದೆ.

ಹಾಗಂತ ವಿಶ್ವದಲ್ಲಿ ಇವನಿಗಿಂತ ಸಣ್ಣಗಾತ್ರದವರು ಇರಲಿಲ್ಲವೆಂದಲ್ಲ. 22.5 ಇಂಚು ಉದ್ದದ ಭಾರತದ ಗುಲ್ ಮೊಹಮ್ಮದ್ (1957-97) ಬದುಕಿಲ್ಲವಾದರಿಂತ ಸದ್ಯ ಬದುಕಿರುವ ಕುಳ್ಳರಲ್ಲಿ ಬಲವಿಂಗ್ ಅಗ್ರಜ.

ಮೊಬೈಲ್ ಮಾಹಿತಿ ಕಿತ್ತೊಗೆಯಲು ಬಂದಿದೆ 'ಟೈಗರ್ ಟೆಕ್ಸ್ಟ್'

ಹೊಸದಿಲ್ಲಿ, ಜೂನ್ 13: ಸ್ನೇಹಿತರಿಗೇ ಆಗಲಿ, ಪರಮ ಶತ್ರುಗಳಿಗೇ ಆಗಲಿ ಅವರ ಮೊಬೈಲ್‌ಗೆ ಮೆಸೇಜ್‌, ಪೋಟೊ, ವೀಡಿಯೊ ಕಳುಹಿಸಿ ನಂತರ ಅಯ್ಯೋ ಅದನ್ನು ಅವರಿಗೆ ಕಳುಹಿಸಬಾರದಿತ್ತು ಎಂದು ಪೇಚಾಡಿಕೊಳ್ಳುತ್ತೀದ್ದೀರಾ!? ಹಾಗಾದರೆ ಅದರ ಊಸಾಬರಿ ಇನ್ನು ನಿಮಗೆ ಬೇಡ ಬಿಡಿ. ಏಕೆಂದರೆ ಟೈಗರ್ ಟೆಕ್ಸ್ಟ್ ಎಂಬ ಹೊಸ ಸಾಫ್ಟ್ ವೇರ್ ಅದಲ್ಲೆವನ್ನೂ ಕ್ಷಣಾರ್ಧದಲ್ಲಿ ಅಳಿಸಿಹಾಕಲು ಸಜ್ಜಾಗಿದೆ.

ಈ ಹೊಸ ತಂತ್ರಾಂಶವನ್ನು ನಿಮ್ಮ ಮೊಬೈಲ್‌ಗೆ ಹಾಕಿಸಿಕೊಂಡರೆ ಮೆಸೇಜ್‌ ಪಡೆಯುವವರ ಮೊಬೈಲ್‌ನಿಂದ ನೀವು ಕಳುಹಿಸಿದ ಎಸ್‌ಎಂಎಸ್‌ನ್ನು ಡಿಲೀಟ್‌ ಮಾಡಬಹುದು. ಅಮೆರಿಕದಲ್ಲಿ ಸಿದ್ಧವಾಗಿರುವ ಈ ಟೈಗರ್ ಟೆಕ್ಸ್ಟ್ ಎಂಬ ಸಾಫ್ಟ್ ವೇರ್ ಸದ್ಯಕ್ಕೆ ಭಾರತಕ್ಕೆ ಇನ್ನೂ ಬಂದಿಲ್ಲ. ಈ ಮಧ್ಯೆ, ಭಾರತ ಸರಕಾರ ಇದರಿಂದ ಹೊಸ ಭದ್ರತಾ ಸಮಸ್ಯೆ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.

ಇದು ಬಳಕೆದಾರನಿಗೆ ತಾನು ಕಳುಹಿಸಿದ ಮಾಹಿತಿ ಮೇಲೆ ಸಂಪೂರ್ಣ ಹಕ್ಕನ್ನು ಒದಗಿಸಿಕೊಡುತ್ತದೆ. ಎಸ್‌ಎಂಎಸ್‌, ವೀಡಿಯೊ, ಫೋಟೋಗಳನ್ನು ಕಳುಹಿಸಿದರೆ ಆ ಬಳಿಕ ಸೇವಾದಾರರಲ್ಲಿ ಕಾದಿರಿಸುವ ಮಾಹಿತಿಯನ್ನು ತನ್ನಿಂತಾನೇ ಅಳಿಸಿಹಾಕುವ ವ್ಯವಸ್ಥೆಯನ್ನು ಟೈಗರ್ ಟೆಕ್ಸ್ಟ್ ಒದಗಿಸಿಕೊಡಲಿದೆ. ಇದರಿಂದ ನಿಮ್ಮ ಖಾಸಗಿತನವನ್ನು ಯಾವುದೇ ಅಂಜಿಕೆ ಇಲ್ಲದೆ ಅನುಭವಿಸಬಹುದು ಎಂದು ಟೈಗರ್ ಟೆಕ್ಸ್ಟ್ ತಂತ್ರಾಂಶ ಪರಿಚಯಿಸಿದ ಅಮೆರಿಕದ ಕಂಪನಿ ಹೇಳಿದೆ. ಈ ತಂತ್ರಾಶ ಐಫೋನ್‌, ಬ್ಲ್ಯಾಕ್‌ಬೆರಿ, ಆಂಡ್ರಾಯಿಡ್‌ ಹೊಂದಿರುವ ಫೋನ್‌ಗಳಲ್ಲಿ ಸುಲಭವಾಗಿ ಕಾರ್ಯನಿರ್ವಹಿಸುತ್ತದೆ.

ನಕಲಿ ಆಂಟಿ ವೈರಸ್ ದಾಳಿ ಕಾದಿದೆ ಎಚ್ಚರ ಎಚ್ಚರ

ನ್ಯೂಯಾರ್ಕ್ ಜೂ 13: ಮೈಕ್ರೋಸಾಫ್ಟ್ ಸೆಕ್ಯುರಿಟಿ ಅಪ್ಡೇಟ್ ಮಾಡಿಕೊಳ್ಳಿ ಎನ್ನುತ್ತಾ ಯಾವುದೇ ಸಂದೇಶ ಬಂದರೆ ಎರಡೆರಡು ಬಾರಿ ಪರೀಕ್ಷಿಸಿ, ನಕಲಿ ಆಂಟಿ ವೈರಸ್ ತಂತ್ರಾಂಶವನ್ನು ದುಷ್ಕರ್ಮಿಗಳು ವೆಬ್ ಲೋಕದೊಳಗೆ ಬಿಟ್ಟಿದ್ದಾರೆ. ಯಾವುದೇ ಅಪ್ಡೇಟ್ ಸೂಚನೆ ಬಂದರೆ ಪರೀಕ್ಷಿಸದೆ ಓಕೆ ಬಟನ್ ಒತ್ತಬೇಡಿ ಎಂದು ಇಂಟರ್ ನೆಟ್ ಸುರಕ್ಷತಾ ಸಂಸ್ಥೆ ಸೊಫೋಸ್ ತಿಳಿಸಿದೆ.

ಮೋಝಿಲ್ಲಾ ಫೈರ್ ಫಾಕ್ಸ್ ವೆಬ್ ಬ್ರೌಸರ್ ಬಳಕೆದಾರರನ್ನು ಈ ನಕಲಿ ಆಂಟಿ ವೈರಸ್ ಗುರಿಯಾಗಿಸಿಕೊಂಡಿದೆ. ಮೈಕ್ರೋಸಾಫ್ಟ್ ಸೆಕ್ಯುರಿಟಿ ಸೆಂಟರ್ ನ ಸಂದೇಶವನ್ನು ನಕಲೀಕರಿಸಿ, ಗ್ರಾಹಕರನ್ನು ತನ್ನ ತಂತ್ರಕ್ಕೆ ಸಿಲುಕಿಸುತ್ತಿದೆ.Update your Windows ಎಂಬ ಸಾಮಾನ್ಯ ಸಂದೇಶಕ್ಕೆ ಓಗೊಟ್ಟು ಓಕೆ ಬಟನ್ ಒತ್ತಿದ್ದರೆ ಮುಗಿಯಿತು. ನಕಲಿ ಆಂಟಿ ವೈರಸ್ ತನ್ನ ಕೀಟಲೆ ತಂತ್ರಾಂಶವನ್ನು ನಿಮ್ಮ ಗಣಕದಲ್ಲಿ ಸ್ಥಾಪಿಸಿಬಿಡುತ್ತದೆ ಎಮ್ದು ಸೊಫೊಸ್ ಎಚ್ಚರಿಸಿದೆ.
  Read:  In English 
ಒಮ್ಮೆ ನೀವು agree ಎಂದು ಒತ್ತಿದರೆ KB453396-ENU.zip ಎಂಬ ಫೈಲ್ ಡೌನ್ ಲೋಡ್ ಆಗುತ್ತದೆ. ಇದು ಹಾನಿಕಾರಕ ಕ್ರಿಮಿಯನ್ನು ಒಳಗೊಂಡಿದ್ದು, ನಿಮ್ಮ ಕಂಪ್ಯೂಟರ್ ಫೈಲ್ ಗಳು ನಾಶಗೊಳಿಸುತ್ತದೆ. ಇದಲ್ಲದೆ ಕೆಲವು ಬಳಕೆದಾರರಿಗೆ ಮೈಕ್ರೋಸಾಫ್ಟ್ ನ ಸೆಕ್ಯುರಿಟಿ ಅಸ್ಸುರೆಸ್ಸ್ ನಿರ್ದೇಶಕ ಸ್ಟೀವ್ ಲಿಪ್ನರ್ ನಿಂದ ಸುರಕ್ಷತೆ ಬಗ್ಗೆ ಇಮೇಲ್ ಬಂದಿದ್ದು ಇದು ಕೂಡಾ ನಕಲಿಯಾಗಿದೆ. ಮೈಕ್ರೋಸಾಫ್ಟ್ ಸಂಸ್ಥೆ ಈ ರೀತಿ ಯಾವುದೇ ವೈಯಕ್ತಿಕ ಇಮೇಲ್ ಕಳಿಸಿಲ್ಲ ಎಂದು ಸೊಫೋಸ್ ಹೇಳಿದೆ.

ಹ್ಯಾಕರ್ ಗಳು ಇಮೇಲ್ ನಲ್ಲಿ ಕ್ರಿಮಿ(worm)ಯನ್ನು ಸೇರಿಸಿ, ಎಲ್ಲರ ಮೇಲ್ ಬಾಕ್ಸ್ ಗಳನ್ನು ಸ್ಪ್ಯಾಮ್ ಮಾಡುತ್ತಿದ್ದಾರೆ. ಇದಕ್ಕೆ ಮೈಕ್ರೋಸಾಫ್ಟ್ ಹಿರಿಯ ಅಧಿಕಾರಿಗಳ ಹೆಸರನ್ನು ಬಳಸಲಾಗುತ್ತಿದೆ. ಒಂದಿಷ್ಟು ಸಂಶಯ ಬರದಂತೆ ಮೈಕ್ರೋಸಾಫ್ಟ್ ಲೆಟರ್ ಹೆಡ್ ಮೂಲಕ ಈ ಇಮೇಲ್ ಗಳು ಹರಿದಾಡುತ್ತಿದೆ. ಸೈಬರ್ ಕ್ರಿಮಿನಲ್ ಗಳು ತುಂಬಾ ಚತುರತೆಯಿಂದ ಗ್ರಾಹಕರನ್ನು ಬಲೆಗೆ ಕೆಡವುತ್ತಿದ್ದಾರೆ ಎಂದು ಸೊಫೊಸ್ ನ ಹಿರಿಯ ತಂತ್ರಜ್ಞಾನ ಸಲಹೆಗಾರ ಗ್ರಹಾಮ್ ಕ್ಲೂಲೆ ಹೇಳಿದ್ದಾರೆ. ಒಟ್ಟಿನಲ್ಲಿ, ವಿಂಡೋಸ್ ಗೆ ಅಂಟಿದ ದೋಷದ ದೆಶೆಯಿಂದ ಜನ ಫೈರ್ ಫಾಕ್ಸ್ ಅನ್ನು ಬೈಯುವಂತಾಗುತ್ತಿದೆ.

ಸಾಲ: ಮಗಳನ್ನೇ ಕಾಮಕ್ಕೆ ಪ್ರಚೋದಿಸಿದ ಪೋಷಕರು

ರೋಟರ್ ಡ್ಯಾಮ್, ಜೂನ್ 12: ಸಾಲಗಾರರ ದಾಹತೀರಿಸಲು ಅರ್ಥಾತ್ ಸಾಲ ತೀರಿಸಲು ಪೋಷಕರು ಎಂಟು ವರ್ಷದ ಮಗಳನ್ನೇ ಅಡವಿಟ್ಟು ಸೆಕ್ಸ್ ಗೆ ಪ್ರಚೋದಿಸಿದ ಪ್ರಕರಣ ಡಚ್ ನ ರೋಟರ್ ಡ್ಯಾಂನಲ್ಲಿ ಬೆಳಕಿಗೆ ಬಂದಿದೆ.

ಸಾಲ ಕಂತು ಪಾವತಿಗೆ ಬದಲಿಗೆ ಸಾಲಗಾರರ ಕಾಮಕ್ಕೆ ಬಾಲಕಿಯನ್ನು ಪ್ರಚೋದಿಸುತ್ತಿರುವುದನ್ನು ಸಂಬಂಧಿಯೊಬ್ಬ ಕಂಪ್ಯೂಟರ್ ಮೂಲಕ ಪತ್ತೆ ಹಚ್ಚಿ, ನಮಗೆ ಸುಳಿವು ನೀಡಿದ. ತಕ್ಷಣ ಬಾಲಕಿಯ 44 ವರ್ಷದ ಅಪ್ಪ, 43 ವರ್ಷದ ಅಮ್ಮ ಮತ್ತು 32 ವರ್ಷದ ವ್ಯಕ್ತಿಯೊಬ್ಬನನ್ನು ಜೂನ್ 9ರಂದು ಬಂಧಿಸಲಾಗಿದೆ ಎಂದು ರೋಟರ್ ಡ್ಯಾಂ ಪೊಲೀಸರು ತಿಳಿಸಿದ್ದಾರೆ.

ಸಾಲ ತೀರಿಸುವ ಸಂಬಂಧ ಮಗಳನ್ನು ಭೋಗ್ಯಕ್ಕೆ (ಸಂಭೋಗಕ್ಕೆ) ಕಳಿಸಲು ಸಿದ್ಧವಿರುವುದಾಗಿ ಮಾತಾಪಿತರು ಕಳೆದ ತಿಂಗಳು ಇಂಟರ್ ನೆಟ್ ನಲ್ಲಿ ಜಾಹೀರಾತು ನೀಡಿದ್ದರು. ತದನಂತರ ಬಾಲಕಿಯ ಫೋಟೋಗಳ ಸಮೇತ ಸಾಕಷ್ಟು ಇ-ಮೇಲ್ ಗಳು ಹರಿದಾಡಿವೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಬಾಲಕಿಯ ಸಂಬಂಧಿ ಪೊಲೀಸರಿಗೆ ಮಾಹಿತಿ ತಲುಪಿಸಿದ್ದಾರೆ ಎಂದು ದಚ್ ಪತ್ರಿಕೆ ವರದಿ ಮಾಡಿದೆ.

ದಲಿತ ವಿರೋಧಿ ಪೇಜಾವರ ಶ್ರೀಗಳ ವಿರುದ್ಧ ಪ್ರತಿಭಟನೆ!

ಉಡುಪಿ ಜೂ 12: ದಲಿತರು ಕ್ರೈಸ್ತ , ಇಸ್ಲಾಂ ಧರ್ಮಗಳಿಗೆ ಮತಾಂತರವಾಗಬೇಡಿ.ಬೌದ್ಧ ಧರ್ಮ ಸ್ವೀಕರಿಸಿದರೂ ಅ ಧರ್ಮದಲ್ಲೂ ದಲಿತರು ಅಸ್ಪೃಶ್ಯತೆಯಿಂದ ಹೊರ ಬರಲಾರಿರಿ. ಮತಾಂತರದ ನಾಟಕ ಬೇಡ ಎಂದು ಇತ್ತೀಚೆಗೆ ನಡೆದ ಬೌದ್ಧ ಧರ್ಮ ದೀಕ್ಷಾ ಕಾರ್ಯಕ್ರಮದ ಬಗ್ಗೆ ಪೇಜಾವರಶ್ರೀಗಳು ನೀಡಿದ್ದ ಹೇಳಿಕೆ ಅವರಿಗೆ ಮುಳುವಾಗಿ ಪರಿಣಮಿಸಿದೆ. ಶ್ರೀಗಳು ಅನ್ಯ ಮತ ಬದಲು ಹಿಂದೂಗಳೇ ಉಳಿಯಿರಿ ಎಂದು ನೀಡಿದ ಆಫರ್ ಅನ್ನು ತಿರಸ್ಕರಿಸಿರುವ ದಲಿತರು, ಜೂ 13ರಂದು ಶ್ರೀಗಳ ಹೇಳಿಕೆ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ.


ಪೇಜಾವರ ಶ್ರೀಗಳ ಹೇಳಿಕೆ ಸಂವಿಧಾನ ವಿರೋಧಿಯಾಗಿದ್ದು, ಅವರ ದಲಿತ ವಿರೋಧಿ ನೀತಿಯನ್ನು ಖಂಡಿಸುತ್ತೇವೆ. ಜಾತಿ ಮತ್ತು ಅಸ್ಪಶ್ಯತೆ ಹಿಂದೂ ಧರ್ಮದ ಆತ್ಮ ಇದ್ದಂತೆ. ಜಾತಿ ನಾಶ ಮಾಡುವುದು ಎಂದರೆ ಹಿಂದೂ ಧರ್ಮವನ್ನು ನಾಶ ಮಾಡಿದಂತೆ. ದಲಿತರು ಬೌದ್ಧ ಧರ್ಮ ಸ್ವೀಕರಿಸುವುದರಿಂದ ಅಸ್ಪಶೃತೆ ನಾಶವಾಗುವುದು ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೂವಪ್ಪ ಮಾಸ್ತರ್ ತಿಳಿಸಿದ್ದಾರೆ.

‘ಜಾತಿ ಮತ್ತು ಅಸ್ಪಶ್ಯತೆ ಹಿಂದೂ ಧರ್ಮದ ಅವಿಭಾಜ್ಯ ಅಂಗ’ ಎಂದು ಹೇಳಿರುವ ಪೇಜಾವರ ಶ್ರೀ ವಿಶ್ವೇಶತೀರ್ಥರ ಹೇಳಿಕೆ ಅಸ್ಪೃಶ್ಯತೆಯನ್ನು ಬೆಂಬಲಿಸುತ್ತಿದ್ದು, ಅವರನ್ನು ಅಸ್ಪಶ್ಯತಾ ಕಾಯ್ದೆಯಡಿಯಲ್ಲಿ ಬಂಧಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಮಾಸ್ತರ್ ಹೇಳಿದರು