ಪುಟಗಳು

ಮೈಸೂರಿನಲ್ಲಿ ನಾಯಿಗಳಿಗೊಂದು ಬ್ಯೂಟಿ ಪಾರ್ಲರ್* ಬಿಎಂ ಲವಕುಮಾರ್, ಮೈಸೂರು


ಮೈಸೂರು, ಜೂನ್ 15 : ಹಿಂದೆ ತಮ್ಮ ಮನೆಗಳಲ್ಲಿ ರಕ್ಷಣೆಗೆ ಇರಲಿ ಅಂತ ನಾಯಿಗಳನ್ನು ಸಾಕಲಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ ಹೆಚ್ಚಿನ ಜನರು ವಿವಿಧ ತಳಿಯ ಶ್ವಾನಗಳನ್ನು ಮನೆಗಳಲ್ಲಿ ಸಾಕುವುದು ಒಂದು ಫ್ಯಾಷನ್ ಆಗಿ ಬದಲಾಗಿದೆ. ಸಾವಿರಾರು ರೂಪಾಯಿ ಹಣ ನೀಡಿ ತಮಗಿಷ್ಟವಾದ ನಾಯಿಗಳನ್ನು ಮನೆಗೆ ತಂದು ಅದನ್ನು ಮಕ್ಕಳಿಗಿಂತಲೂ ಹೆಚ್ಚಿನ ಕಾಳಜಿ ತೋರಿಸಿ ಸಾಕುತ್ತಾರೆ.

ಬೆಳಿಗ್ಗೆ ಎದ್ದು ಅವುಗಳಿಗೆ ಸ್ನಾನಮಾಡಿಸಿ, ಚೆನ್ನಾಗಿ ಒರೆಸಿ ತಿಂಡಿ ತಿನಿಸುಗಳನ್ನು ನೀಡುವುದು ಸುಲಭದ ಕೆಲಸವಲ್ಲ. ಅದರಲ್ಲೂ ಉದ್ದ ಕೂದಲು ಹೊಂದಿರುವ ಕೆಲವು ತಳಿಯ ಶ್ವಾನಗಳನ್ನು ಬಾಚಿ ಸುಂದರವಾಗಿ ಕಾಣುವಂತೆ ಮಾಡುವುದು ಕಷ್ಟದ ಕೆಲಸ, ಇದು ಎಲ್ಲರಿಂದಲೂ ಮಾಡಲಾಗದು.

ಅಂತಹವರ ಸಹಾಯಕ್ಕಾಗಿ ಈಗ ಮೈಸೂರಿನಲ್ಲಿ ಶ್ವಾನಗಳಿಗಾಗಿ ಚಿತ್ಕಲಾ ಎಂಬುವವರು ಬ್ಯೂಟಿ ಪಾರ್ಲರ್ ತೆರೆದಿದ್ದಾರೆ. ಮೈಸೂರಿನ ಗೋಕುಲಂ ಮುಖ್ಯ ರಸ್ತೆಯಲ್ಲಿರುವ ಮೈಪೆಟ್ ಕ್ಲಿನಿಕ್ ಆವರಣದಲ್ಲಿ "ಪೆಟ್ ಸ್ಪಾ" ಎಂಬ ಬ್ಯೂಟಿ ಪಾರ್ಲರ್ ಇದ್ದು, ಇದೀಗ ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿದೆ.

ಚಿತ್ಕಲಾ ಅವರ ಪತಿ ಡಾ.ಅರುಣ್ ಪಶುವೈದ್ಯರಾಗಿರುವುದರಿಂದ ಅವರಿಗೆ ತುಂಬಾ ಅನುಕೂಲವಾಗಿದೆ. ಇಲ್ಲಿ ಶ್ವಾನಗಳಿಗೆ ಚರ್ಮ ರೋಗ ನಿವಾರಕ ಶಾಂಪು ಬಳಸಿ ಬಿಸಿ ನೀರಿನ ಸ್ನಾನ ಹಾಗೂ ಕೂದಲು ಕಟಿಂಗ್, ಕಿವಿ ಕ್ಲೀನಿಂಗ್ ಸೇರಿದಂತೆ ಹಲವು ಸೇವೆ ಮಾಡಲಾಗುತ್ತದೆ. ಈಗಾಗಲೇ ಹಲವರು ತಮ್ಮ ಮುದ್ದಿನ ನಾಯಿಗಳೊಂದಿಗೆ ಪೆಟ್ ಸ್ಪಾಗೆ ತೆರಳಿ ಸೌಂದರ್ಯ ವರ್ಧಿಸಿಕೊಂಡು ಬಂದಿದ್ದಾರೆ.

ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಎನ್ನುವ ಹಾಗೆ ನಾಯಿಗಳಿಗೂ ಕಾಲ ಕೂಡಿ ಬಂದಿದೆ. ಮುದ್ದಿನ ಬೆಕ್ಕುಗಳಿಗೂ ಕಾಲ ಕೂಡಿ ಬಂದರೂ ಆಶ್ಚರ್ಯವಿಲ್ಲ. ಮುಂದೊಂದು ದಿನ ನಾಯಿಗಳಿಗೆ 'ಸಿಟ್, ಶೇಕ್ ಹ್ಯಾಂಡ್, ಕಮ್ ಹಿಯರ್, ಗೋ ದೇರ್' ಎಂದು ಪಾಠ ಹೇಳಿಕೊಳ್ಳುವ ಇನ್ಸ್ಟಿಟ್ಯೂಟ್ ಗಳು ಆರಂಭವಾದರೂ ಆಗಬುಹುದು. ಅಥವಾ ಮಾನವನಿಗೆ ನಾಯಿಗಳ ಭಾಷೆ ಅರ್ಥ ಮಾಡಿಸಿಕೊಡುವ ಶಾಲೆ ಪ್ರಾರಂಭವಾದರೂ ಅಚ್ಚರಿಯಿಲ್ಲ!