ಪುಟಗಳು

ಮೊಬೈಲ್ ಮಾಹಿತಿ ಕಿತ್ತೊಗೆಯಲು ಬಂದಿದೆ 'ಟೈಗರ್ ಟೆಕ್ಸ್ಟ್'

ಹೊಸದಿಲ್ಲಿ, ಜೂನ್ 13: ಸ್ನೇಹಿತರಿಗೇ ಆಗಲಿ, ಪರಮ ಶತ್ರುಗಳಿಗೇ ಆಗಲಿ ಅವರ ಮೊಬೈಲ್‌ಗೆ ಮೆಸೇಜ್‌, ಪೋಟೊ, ವೀಡಿಯೊ ಕಳುಹಿಸಿ ನಂತರ ಅಯ್ಯೋ ಅದನ್ನು ಅವರಿಗೆ ಕಳುಹಿಸಬಾರದಿತ್ತು ಎಂದು ಪೇಚಾಡಿಕೊಳ್ಳುತ್ತೀದ್ದೀರಾ!? ಹಾಗಾದರೆ ಅದರ ಊಸಾಬರಿ ಇನ್ನು ನಿಮಗೆ ಬೇಡ ಬಿಡಿ. ಏಕೆಂದರೆ ಟೈಗರ್ ಟೆಕ್ಸ್ಟ್ ಎಂಬ ಹೊಸ ಸಾಫ್ಟ್ ವೇರ್ ಅದಲ್ಲೆವನ್ನೂ ಕ್ಷಣಾರ್ಧದಲ್ಲಿ ಅಳಿಸಿಹಾಕಲು ಸಜ್ಜಾಗಿದೆ.

ಈ ಹೊಸ ತಂತ್ರಾಂಶವನ್ನು ನಿಮ್ಮ ಮೊಬೈಲ್‌ಗೆ ಹಾಕಿಸಿಕೊಂಡರೆ ಮೆಸೇಜ್‌ ಪಡೆಯುವವರ ಮೊಬೈಲ್‌ನಿಂದ ನೀವು ಕಳುಹಿಸಿದ ಎಸ್‌ಎಂಎಸ್‌ನ್ನು ಡಿಲೀಟ್‌ ಮಾಡಬಹುದು. ಅಮೆರಿಕದಲ್ಲಿ ಸಿದ್ಧವಾಗಿರುವ ಈ ಟೈಗರ್ ಟೆಕ್ಸ್ಟ್ ಎಂಬ ಸಾಫ್ಟ್ ವೇರ್ ಸದ್ಯಕ್ಕೆ ಭಾರತಕ್ಕೆ ಇನ್ನೂ ಬಂದಿಲ್ಲ. ಈ ಮಧ್ಯೆ, ಭಾರತ ಸರಕಾರ ಇದರಿಂದ ಹೊಸ ಭದ್ರತಾ ಸಮಸ್ಯೆ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.

ಇದು ಬಳಕೆದಾರನಿಗೆ ತಾನು ಕಳುಹಿಸಿದ ಮಾಹಿತಿ ಮೇಲೆ ಸಂಪೂರ್ಣ ಹಕ್ಕನ್ನು ಒದಗಿಸಿಕೊಡುತ್ತದೆ. ಎಸ್‌ಎಂಎಸ್‌, ವೀಡಿಯೊ, ಫೋಟೋಗಳನ್ನು ಕಳುಹಿಸಿದರೆ ಆ ಬಳಿಕ ಸೇವಾದಾರರಲ್ಲಿ ಕಾದಿರಿಸುವ ಮಾಹಿತಿಯನ್ನು ತನ್ನಿಂತಾನೇ ಅಳಿಸಿಹಾಕುವ ವ್ಯವಸ್ಥೆಯನ್ನು ಟೈಗರ್ ಟೆಕ್ಸ್ಟ್ ಒದಗಿಸಿಕೊಡಲಿದೆ. ಇದರಿಂದ ನಿಮ್ಮ ಖಾಸಗಿತನವನ್ನು ಯಾವುದೇ ಅಂಜಿಕೆ ಇಲ್ಲದೆ ಅನುಭವಿಸಬಹುದು ಎಂದು ಟೈಗರ್ ಟೆಕ್ಸ್ಟ್ ತಂತ್ರಾಂಶ ಪರಿಚಯಿಸಿದ ಅಮೆರಿಕದ ಕಂಪನಿ ಹೇಳಿದೆ. ಈ ತಂತ್ರಾಶ ಐಫೋನ್‌, ಬ್ಲ್ಯಾಕ್‌ಬೆರಿ, ಆಂಡ್ರಾಯಿಡ್‌ ಹೊಂದಿರುವ ಫೋನ್‌ಗಳಲ್ಲಿ ಸುಲಭವಾಗಿ ಕಾರ್ಯನಿರ್ವಹಿಸುತ್ತದೆ.