ಪುಟಗಳು

ನಕಲಿ ಭೂ ದಾಖಲೆಗಳ ಸ್ವರ್ಗ ಬೆಂಗಳೂರು

ಬೆಂಗಳೂರು, ಮೇ 29: ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಭೂಮಿಯ ಬೆಲೆ ಗಗನಕ್ಕೆ ತಲುಪಿದ್ದೇ ತಡ ನಕಲಿ ದಾಖಲೆಗಳು ವ್ಯಾಪಕವಾಗಿ ಸೃಷ್ಟಿಯಾಗತೊಡಗಿವೆ. ಇಂತಹ ದಾಖಲೆಗಳ ಸೃಷ್ಟಿಕರ್ತರಿಗೆ ನಗರವು ಸ್ವರ್ಗವಾಗಿದೆ. ಸಬ್‌ ರಿಜಿಸ್ಟ್ರಾರ್‌, ಬಿಡಿಎ ಹಾಗೂ ತಹಸೀಲ್ದಾರ್ ಕಚೇರಿಗಳ ಸನಿಹದಲ್ಲೇ ನಕಲಿ ದಾಖಲೆಯ ಸೃಷ್ಟಿ ಕೇಂದ್ರಗಳಿವೆ ಎಂಬುದು ಆಘಾತಕಾರಿ.

ಜಮೀನುಗಳ ನಕಲಿ ದಾಖಲೆ ಸೃಷ್ಟಿಕರ್ತರಿಗೆ ಸಬ್‌ ರಿಜಿಸ್ಟ್ರಾರ್‌, ಬಿಡಿಎ ಹಾಗೂ ತಹಸೀಲ್ದಾರ್ ಕಚೇರಿಗಳ ಸುತ್ತಮುತ್ತಲಿನ ಕೆಲವು ಜೆರಾಕ್ಸ್‌ ಮಳಿಗೆಗಳು ಸಾಥ್‌ ನೀಡುತ್ತಿವೆ ಎಂಬ ಸತ್ಯವೂ ಬಯಲಾಗಿದೆ. ನಗರ ಪೊಲೀಸ್‌ ಆಯುಕ್ತ ಜ್ಯೋತಿ ಪ್ರಕಾಶ್‌ ಮಿರ್ಜಿ ಅವರು ಈ ಬಗ್ಗೆ ಸಾಕಷ್ಟು ಬೆಳಕು ಚೆಲ್ಲಿದ್ದಾರೆ. ವಿವರ ಹೀಗಿದೆ:

ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕುಗಳಿಗೆ ಸಲ್ಲಿಸಿ ಕೋಟ್ಯಂತರ ರೂ. ವಂಚಿಸಿದ್ದ ಹಾಗೂ ಬೇರೊಬ್ಬರ ಜಮೀನು ತಮ್ಮದೇ ಎಂದು ಮಾರಾಟ ಮಾಡುವುದಾಗಿ ನಂಬಿಸಿ ಕೋಟ್ಯಂತರ ರೂ. ಪಡೆದಿದ್ದ ವಂಚಕರು ಪೊಲೀಸ್ ವಿಚಾರಣೆಯಲ್ಲಿ ನಕಲಿ ದಾಖಲೆ ಹೇಗೆ ಸೃಷ್ಟಿಯಾಗುತ್ತಿದೆ ಎಂಬುದನ್ನು ಬಾಯ್ಬಿಟ್ಟಿದ್ದಾರೆ.

ಜಮೀನುಗಳ ಮಾರಾಟ, ಖರೀದಿ, ಖಾತೆ ಬದಲಾವಣೆ, ಇ.ಸಿ. ಪಡೆಯಲು ಆಸ್ತಿದಾರರು ಜೆರಾಕ್ಸ್‌ ಮಾಡಿಸುವಾಗ ಅವರ ಗಮನ ಬೇರೆಡೆ ಸೆಳೆದು ಒಂದು ಪ್ರತಿ ಎಕ್ಸ್‌ಟ್ರಾ ಪಡೆದು ಅಥವಾ ಮೂಲ ದಾಖಲಾತಿಗಳಾಗಿದ್ದಲ್ಲಿ ಕಲರ್ ಜೆರಾಕ್ಸ್‌ ಪಡೆದುಕೊಂಡು ಅದರ ಆಧಾರದಲ್ಲಿ ನಕಲಿ ದಾಖಲೆ ಸೃಷ್ಟಿಯಾಗುವುದು ಬಹಿರಂಗವಾಗಿದೆ.

ಜಮೀನು ಮಾರಾಟಗಾರ ಮತ್ತು ಖರೀದಿದಾರನ ನಡುವೆ 'ಮಧ್ಯಸ್ಥಿಕೆ'ದಾರರಾಗಿ ಕಾರ್ಯನಿರ್ವಹಿಸುವ ಕೆಲವರು ಮಾರಾಟ ಅಥವಾ ಖರೀದಿ ನೆಪದಲ್ಲಿ ಮಾಲೀಕರಿಂದ ಆಸ್ತಿಯ ದಾಖಲೆ ಪಡೆದು ಜೆರಾಕ್ಸ್‌ ಮಾಡಿಸಿಕೊಂಡು ನಂತರ ವ್ಯಾಪಾರ ಕುದುರಲಿಲ್ಲ ಎಂಬ ಸಬೂಬು ಹೇಳಿ ಜೆರಾಕ್ಸ್‌ ಪ್ರತಿಗಳ ಆಧಾರದಲ್ಲಿ ನಕಲಿ ದಾಖಲೆ ಸೃಷ್ಟಿ.

ಮಧ್ಯಸ್ಥಿಕೆದಾರರನ ಗಮನಕ್ಕೆ ಬಾರದಂತೆ ಆತನ ನೆರವಿನಿಂದಲೇ ಜಮೀನುಗಳ ದಾಖಲೆಗಳ ಪ್ರತಿ ಪಡೆದು ಜಮೀನು ಮಾಲೀಕರ ಹೆಸರಿನವರನ್ನೇ ಹುಡುಕಿ ನಕಲಿ ದಾಖಲೆ ಸೃಷ್ಟಿ ಮಾಡಲಾಗುತ್ತಿದೆ.

ನಕಲಿ ದಾಖಲೆ ಸೃಷ್ಟಿಗಾಗಿ ತಹಸೀಲ್ದಾರ್‌, ಬಿಡಿಎ, ಸಬ್‌ ರಿಜಿಸ್ಟ್ರಾರ್‌ ಕಚೇರಿ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ನೌಕರರ ಸಹಕಾರ ಪಡೆದು ನಕಲಿ ರಬ್ಬರ್ ಸ್ಟಾಂಪ್‌ ಹಾಗೂ ಮೊಹರು ತಯಾರಿಸಲಾಗುತ್ತಿತ್ತು ಎಂಬ ಮಾಹಿತಿಯನ್ನೂ ವಂಚಕರು ಹೊರಗೆಡವಿದ್ದಾರೆ.

ಆಸ್ತಿಯ ನೈಜ ಮಾಲೀಕರು ಯಾರು? ಅವರ ಹಿನ್ನೆಲೆ ಏನು ? ಅವರ ವಾರಸುದಾರರು ಯಾರು ? ಎಂಬಿತ್ಯಾದಿ ಮಾಹಿತಿ ಕಲೆಹಾಕಿ ಆ ನಂತರ ಮಧ್ಯಸ್ಥಿಕೆದಾರನ ಮೂಲಕ ಆಸ್ತಿ ಖರೀದಿ ಪ್ರಸ್ತಾಪ ಸಲ್ಲಿಸುವುದು. ಆ ನಂತರ ದೊಡ್ಡ ದೊಡ್ಡ ಹೋಟೆಲ್‌ಗ‌ಳಿಗೆ ಕರೆದು ತಾವು ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಎಂಬಂತೆ ಫೋಸ್‌ ನೀಡಿ ಅಲ್ಲಿ ಔತಣಕೂಟ ನೀಡಿ ಮಾರಾಟಗಾರನ ವಿಶ್ವಾಸಗಳಿಸುವುದು. ನಂತರ ಟೋಕನ್‌ ಅಡ್ವಾನ್ಸ್‌ ನೀಡಿ ಜಮೀನು ದಾಖಲೆಗಳ ಪ್ರತಿ ಪಡೆಯುವುದು ವಂಚಕರು ಕಾರ್ಯಾಚರಣೆ ವಿಧಾನ.

ವಂಚನೆ ವ್ಯವಹಾರದಲ್ಲಿ ಮಹಿಳೆಯರನ್ನು ಬಳಸಿಕೊಂಡರೆ ಯಾರಿಗೂ ಅನುಮಾನ ಬರುವುದಿಲ್ಲ ಎಂಬ ಕಾರಣಕ್ಕೆ ಜಮೀನಿನ ನೈಜ ಮಾಲೀಕರ ಹೆಸರು ಹೊಂದಿರುವವರನ್ನೇ ಆರಿಸಿಕೊಂಡು ನಕಲಿ ದಾಖಲೆ ಸೃಷ್ಟಿಸಿ ಇವರೇ ಮಾಲೀಕರು, ನಾವೆಲ್ಲಾ ಇವರ ಸಂಬಂಧಿಕರು ಎಂದು ಹೇಳಿಕೊಳ್ಳುತ್ತಿದ್ದರು. ಕೆಲವೊಮ್ಮೆ ಆಸ್ತಿ ಖರೀದಿದಾರರನ್ನು ಮನೆಗೂ ಆಹ್ವಾನಿಸಿ ಅಲ್ಲಿಯೂ ಕುಟುಂಬದವರಂತೆ ನಟಿಸುತ್ತಾರೆ.

ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕುಗಳಲ್ಲಿ ಅಡವಿಟ್ಟು ಹಣ ಸಾಲವಾಗಿ ಪಡೆಯುವುದು ಸುಲಭ ಮಾರ್ಗ ಎಂಬುದನ್ನು ಕಂಡುಕೊಂಡಿದ್ದ ವಂಚಕರು ನಕಲಿ ದಾಖಲೆ ಸೃಷ್ಟಿಸಿದ ಒಂದೇ ಆಸ್ತಿಯ ಅಥವಾ ಇಲ್ಲದ ಆಸ್ತಿಯ ದಾಖಲೆಗಳನ್ನೇ ಹತ್ತಾರು ಬ್ಯಾಂಕುಗಳಿಗೆ ನೀಡಿ ಸಾಲ ಪಡೆಯುತ್ತಿದ್ದರು. ಇದಕ್ಕೆ ಬ್ಯಾಂಕುಗಳ ಅಧಿಕಾರಿಗಳ ಸಹಕಾರವೂ ಇರುತ್ತಿತ್ತು. ಇಂತಿಷ್ಟು ಪರ್ಸೆಂಟೇಜ್‌ ವೆಚ್ಚ ಮಾಡುತ್ತಿದ್ದರು. ಈ ಎಲ್ಲ ಮಾಹಿತಿಗಳೂ ವಿಚಾರಣೆ ಸಂದರ್ಭದಲ್ಲಿ ಬಾಯ್ಬಿಡಿಸಲಾಗಿದೆ ಎಂದು ಹೇಳಲಾಗಿದೆ.

ಒಟ್ಟಾರೆ ಬೆಂಗಳೂರಿನಲ್ಲಿ ಜಮೀನುಗಳ ನಕಲಿ ದಾಖಲೆ ಸೃಷ್ಟಿಸುವ ಅತಿದೊಡ್ಡ ತಂಡವೇ ಕಾರ್ಯನಿರ್ವಹಿಸುತ್ತಿದ್ದು ಆ ತಂಡದ ಸಮಗ್ರ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿದ್ದು ಶೀಘ್ರದಲ್ಲೇ ಮತ್ತೂಂದು ಜಾಲ ಪೊಲೀಸ್‌ ಬಲೆಗೆ ಬೀಳಲಿದೆ

ಬಡವರ ಜಾತಿಗಣತಿ; ಸರಕಾರದ ದ್ವಂದ್ವ ನೀತಿ

ಬಡತನ ಆಧಾರಿತ ಜಾತಿಗಣತಿಯನ್ನು ಇದೇ 2011 ಜೂನ್ನಿಂದ ಡಿಸೆಂಬರ್ವರೆಗೆ ನಡೆಸಲು ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿರುವುದು ವರದಿಯಾಗಿದೆ.ಸಾಮಾಜಿಕ-ಆರ್ಥಿಕ ವಿವರಗಳನ್ನೊಳ ಗೊಂಡ ಜಾತಿಗಣತಿ ನಡೆಸುವ ನಿರ್ಧಾರವು ವಿರೋಧ ಪಕ್ಷಗಳಿಗೆ ಸರಕಾರವು ಸಂಸತ್ತಿನಲ್ಲಿ ನೀಡಿದ ಭರವಸೆ ಸಂಪೂರ್ಣವಾಗಿ ಈಡೇರಿಸಿ ದಂತಾಗಿದೆ ಎಂದು ಸರಕಾರದ ವಕ್ತಾರರೊಬ್ಬರು ಹೇಳಿಕೆ ನೀಡಿರುವುದು ಕೆಳಕಂಡ ಕಾರಣ ಗಳಿಂದಾಗಿ ವಾಸ್ತವಕ್ಕಿಂಥ ಭಿನ್ನವಾಗಿದೆ.ಸಂವಿಧಾನದ ಅನುಚ್ಛೇದ 15(4) ಪ್ರಕಾರ, ಹಿಂದುಳಿದಿರುವಿಕೆಯನ್ನು ಸಾಮಾಜಿಕ ಮತ್ತು ಶೈಕ್ಷಣಿಕ ಮಾನದಂಡಗಳನ್ನಿಟ್ಟುಕೊಂಡು ಮೌಲ್ಯ ಮಾಪನ ಮಾಡಬೇಕೆ ಹೊರತು ಕೇವಲ ಬಡತನದ ಆರ್ಥಿಕ ಮತ್ತು ವರಮಾನದ ಅಳತೆ ಗೋಲಿನಿಂದಲ್ಲ.
ಈಗ ತಾನೇ ಮುಕ್ತಾಯಗೊಂಡ, ಹತ್ತು ವರ್ಷಗಳಿಗೊಮ್ಮೆ ನಡೆಯುವ ಸಾಮಾನ್ಯ ಜನಗಣತಿಯಲ್ಲಿಯೇ ಜಾತಿಯನ್ನು ಎಣಿಕೆ ಮಾಡಬೇಕೆಂದು ಎಲ್ಲ ರಾಜಕೀಯ ಪಕ್ಷಗಳ ನಾಯಕರು, ರಾಷ್ಟ್ರಾದ್ಯಂತ ಅನೇಕ ಬುದ್ಧಿಜೀವಿ ಗಳು, ಸಮಾಜಶಾಸ್ತ್ರಜ್ಞರು, ಜನಪರ ಚಳವಳಿ ಗಳ ಮುಖಂಡರು ಆಗ್ರಹಿಸಿದ್ದು, ಆನಂತರ ಸರಕಾರ ಜಾತಿಗಣತಿಯನ್ನು ಪ್ರತ್ಯೇಕವಾಗಿ ನಡೆಸಲು ತೆಗೆದುಕೊಂಡ ನಿರ್ಧಾರವನ್ನು ವಿರೋಧಿಸಿದ್ದನ್ನು ಇಲ್ಲಿ ಗಮನಿಸಬಹುದು. ಜನಗಣತಿಯಲ್ಲಿ ಜಾತಿ ಎಣಿಕೆಯನ್ನು ಒಮ್ಮೆಗೇ ಮಾಡುವುದರಿಂದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ದತ್ತಾಂಶಗಳು ಮತ್ತು ಡೆಮಾಗ್ರಫಿಕ್ ಕುರಿತ ದತ್ತಾಂಶಗಳಲ್ಲಿ ಕಂಡು ಬರುವ ಪರಸ್ಪರ ಸಂಬಂಧಗಳನ್ನು ಸುಲಭವಾಗಿ ಗುರುತಿಸಬಹು ದಿತ್ತು. ಜನಗಣತಿಯ ಜೊತೆಗೆ ಜಾತಿಗಣತಿ ಯನ್ನು ಕೈಗೊಂಡಿದ್ದರೆ ಫಲವತ್ತತೆ, ವಿವಾಹ ಮತ್ತು ಕೌಟುಂಬಿಕ ವಿವರಗಳು, ಮರಣ ಪ್ರಮಾಣ, ಸಾಕ್ಷರತೆ, ಶೈಕ್ಷಣಿಕ ಅರ್ಹತೆ ಮತ್ತು ಸಾಧನೆ, ಉದ್ಯೋಗ, ಉದ್ಯೋಗ ಲಕ್ಷಣಗಳು, ನಿರುದ್ಯೋಗ ಇತ್ಯಾದಿ ವಿಷಯಗಳ ಕುರಿತು ಸಂಪೂರ್ಣ ಮಾಹಿತಿ ಲಭ್ಯವಾಗುತ್ತಿತ್ತು.
ಮಾಹಿತಿಯೊಂದಿಗೆ ಸಾಮಾಜಿಕ ಮತ್ತು ಶೈಕ್ಷ ಣಿಕವಾಗಿ ಹಿಂದುಳಿದಿರುವ ಸಮುದಾಯಗಳಿಗೆ ಸಾಮಾಜಿಕ ನ್ಯಾಯದ ವಿವಿಧ ನೀತಿಗಳನ್ನು ಜಾರಿಮಾಡಲು ಅನುಕೂಲವಾಗುತ್ತಿತ್ತು. ಇಂತಹ ಮಾಹಿತಿಯು ಆಗಾಗ್ಗೆ ಹಿಂದುಳಿದ ಜಾತಿಗಳನ್ನು ಗುರುತಿಸಲು ಹಾಗೂ ಮೀಸಲಾತಿ ಪ್ರಮಾಣವನ್ನು ನಿಗದಿಪಡಿಸಲು ಸರಕಾರಕ್ಕೆ ಸಹಾಯವಾಗುತ್ತಿತ್ತು. ಆದರೆ ಈಗ ಸರಕಾರವು ಉದ್ದೇಶಿಸಿರುವ ಬಡತನ ಆಧಾರಿತ ಜಾತಿ ಗಣತಿ ಮೇಲಿನ ಉದ್ದೇಶಗಳಿಗೆ ವಿರುದ್ಧವಾ ಗಿದೆ.ಇಷ್ಟಾಗಿಯೂ ಉತ್ತಮ ತರಬೇತಿ ಹೊಂದಿ ರುವ ಗಣತಿ ಎಣಿಕೆದಾರರು ಹಾಗೂ ದೇಶಾ ದ್ಯಂತ ಇರುವ ವ್ಯವಸ್ಥಿತ ಗಣತಿ ಸಂಸ್ಥೆ ಮತ್ತು ಅದರ ಆಯುಕ್ತರು ಇದರಲ್ಲಿ ನೇರವಾಗಿ ಪಾಲ್ಗೊಳ್ಳುತ್ತಿಲ್ಲ. ಬದಲಾಗಿ ವಿವಿಧ ರಾಜ್ಯ ಸರಕಾರಗಳ ಪಂಚಾಯತ್ ನೌಕರರು, ಪಟ್ವಾರಿ ಗಳು, ಗ್ರಾಮೀಣ ಉದ್ಯೋಗ ಖಾತ್ರಿ ಯೋಜ ನೆಯ ಕೆಲಸಗಾರರಿಂದ ಇದನ್ನು ನಡೆಸಲು ಉದ್ದೇಶಿಸಲಾಗಿದೆ. ಇಂತಹ ಸಮೀಕ್ಷೆಯಿಂದ ನಿಗದಿತ ಸಮಯ ಮಿತಿಯೊಳಗೆ ನಂಬಲರ್ಹ ಹಾಗೂ ವಿಶ್ವಾಸಾರ್ಹ ಮಾಹಿತಿ ದೊರೆಯು ವುದು ಸಾಧ್ಯವಿಲ್ಲ.
ಜಾತಿಗಣತಿಯ ಮಾಹಿತಿಯನ್ನು, ಕೈಯಲ್ಲಿ ಹಿಡಿದು ಬಳಸಬಹುದಾದ ಸಣ್ಣಗಾತ್ರದ ಕಂಪ್ಯೂ ಟರ್(ಸಿಂಪ್ಯೂಟರ್) ಸಹಾಯದಿಂದ ಮಾಡ ಲಾಗುತ್ತಿದೆ. ಮಾಹಿತಿಯನ್ನು ನಂತರ ಗಣತಿ ದಾರ ಸ್ಕ್ಯಾನ್ಮಾಡಿದ ಜನಸಂಖ್ಯಾ ನೋಂದ ಣಿಯ ಮಾಹಿತಿಯೊಂದಿಗೆ ತುಂಬಲಾಗುತ್ತದೆ ಎಂದು ಹೇಳಲಾಗಿದೆ. ಕುರಿತು ಸ್ಪಷ್ಟ ಮಾಹಿ ತಿಗಳು ಇಲ್ಲದಿರುವುದು ಅನೇಕ ಗಂಭೀರ ಪ್ರಶ್ನೆ ಗಳಿಗೆ ಆಸ್ಪದಕೊಡುವಂತಿದೆ. ಹತ್ತಾರು ಸಾವಿರ ಕಂಪ್ಯೂಟರ್ಗಳು ದೇಶದ ವಿಭಿನ್ನ ಪ್ರದೇಶ ಮತ್ತು ಪರಿಸ್ಥಿತಿಗಳಲ್ಲಿ ಅಸಂಖ್ಯಾತ ಅನನುಭವಿ ಕಾರ್ಯಕರ್ತರ ಕೈಯಲ್ಲಿ ನಿಖರವಾಗಿ ಕೆಲಸ ಮಾಡುವುದು ಕಷ್ಟಸಾಧ್ಯವಾದುದು ಎಂಬುದಕ್ಕೆ ಹಿಂದಿನ ಅನುಭವಗಳು ಇದಕ್ಕೆ ನಿದರ್ಶನವಾಗಿವೆ.
ಈಗಷ್ಟೇ ಮುಕ್ತಾಯಗೊಂಡ ದಶವಾ ರ್ಷಿಕ ಜನಗಣತಿಯಲ್ಲೂ ಬಗೆಯ ವಿಶ್ವಾಸಾ ರ್ಹವಲ್ಲದ ವಿಧಾನವನ್ನು ಬಳಸದೆ ಮುದ್ರಿತ ಕಾಗದದ ನಮೂನೆಗಳನ್ನು ಮಾತ್ರ ಬಳಸಲಾಗಿತ್ತು ಎನ್ನುವುದನ್ನು ಗಮನಿಸಿದರೆ ಸಾಕು ಇದಕ್ಕೆ ಸ್ಪಷ್ಟ ಉತ್ತರ ಸಿಗುತ್ತದೆ. ಇಷ್ಟಲ್ಲದೆ ಜಾತಿ ಮತ್ತು ಧಾರ್ಮಿಕ ಮಾಹಿತಿಯನ್ನು ಗೌಪ್ಯವಾಗಿಡಲು ಸರಕಾರ ತೀರ್ಮಾನಿಸಿದೆ. ಸರಕಾರ ದೃಢವಾದ ನಿರ್ಧಾರವನ್ನು ತೆಗೆದುಕೊಳ್ಳದೆ, ಗೊಂದಲಮಯ ಹೇಳಿಕೆಗಳನ್ನು ನೀಡುತ್ತಾ, ತನ್ನ ನಿಲುವುಗಳನ್ನು ಬದಲಿಸುತ್ತಾ, ಕೊಟ್ಟ ಭರವಸೆಗಳನ್ನು ತಿರುಚುತ್ತಾ ಇರುವ - ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮ ವಾಗಿ ಗಮನಿಸಿದಾಗ ಜಾತಿಗಣತಿಯ ಕುರಿತು ಸರಕಾರದ ಪ್ರಾಮಾಣಿಕತೆ ಮತ್ತು ಉದ್ದೇಶ ಪೂರ್ಣತೆಯ ಬಗ್ಗೆ ಗಂಭೀರ ಅನುಮಾನಗಳಿಗೆ ಎಡೆಮಾಡಿಕೊಡುವುದಲ್ಲದೆ, ಜಾತಿಗಣತಿಯನ್ನು ಹೇಗಾದರೂ ಮಾಡಿ ನಾಶಗೊಳಿಸಬೇಕೆಂದು ಮೊದಲಿನಿಂದಲೂ ಸಾಮಾಜಿಕ ನ್ಯಾಯದ ವಿರುದ್ಧವಿರುವ ಶಕ್ತಿಗಳ ಜೊತೆಯಲ್ಲಿ ಆಳುವ ವರ್ಗ ಕೂಡ ಕೈಜೋಡಿಸಿದೆಯೇ ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತಿದೆ.
-
ಡಾ.ಎಸ್.ಜಾಫೆಟ್
ಪ್ರಾಧ್ಯಾಪಕರು ಮತ್ತು ನಿರ್ದೇಶಕರು
ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ,
ಭಾರತ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆನಾಗರಬಾವಿ, ಬೆಂಗಳೂರು -560 072

ಸಂತೆಯಲ್ಲಿ ಸುಬ್ರಹ್ಮಣ್ಯ

ಎನ್ಕೆ ಸುಬ್ರಹ್ಮಣ್ಯರ ಹಾಸ್ಯ ಬರಹಗಳ ಸಂಕಲನ `ಸಂತೆಯಲ್ಲಿ ಸುಬ್ರಹ್ಮಣ್ಯ‘. ಒಬ್ಬ ಮಧ್ಯಮ ವರ್ಗದ ವ್ಯಕ್ತಿಯ ಅನುಭವವನ್ನು ಒಳಗೊಂಡ ಬರಹಗಳಿವು. ಮಧ್ಯಮವರ್ಗದ ಕನಸು ಹಾಗೂ ಜೀವನದ ವಿವರಗಳು ಇಲ್ಲಿ ಬರಹದ ರೂಪವನ್ನು ತಾಳಿವೆ.
ಹಾಗೆಂದು ಇಲ್ಲಿನ ಹದಿನೇಳು ಬರಹಗಳು ಸೀಮಿತ ಅನುಭವದ ಲೋಕದ ಒಳಗಷ್ಟೇ ಓಡಾಡುವುದಿಲ್ಲ. ಇಲ್ಲಿ ಸಂತೆ, ಕಂಪ್ಯೂಟರ್, ವಿಂಬಲ್ಡನ್, ಹೋಗಬೇಕಾದ ಅಮೆರಿಕಾ ಯಾತ್ರೆ, ಗುಜರಿ ಬಜಾರ್ ಬಗ್ಗೆಯೂ ಲೇಖನಗಳಿವೆ. ಲೇಖಕರು ಆಸಕ್ತಿಯಿಂದ ಓದಿಸಿಕೊಳ್ಳುವಂತೆ, ಲವಲವಿಕೆಯಿಂದ, ತಮಾಷೆಯಾಗಿ ಬರೆಯುತ್ತಾರೆ. ಇದಕ್ಕೆ ಹರಿಣಿ ಅವರ ವ್ಯಂಗ್ಯಚಿತ್ರಗಳು ಪುಟಕೊಟ್ಟಿವೆ.
ಶೀರ್ಷಿಕೆ: ಸಂತೆಯಲ್ಲಿ ಸುಬ್ರಹ್ಮಣ್ಯ ಲೇಖಕರು: ಎನ್ಕೆ ಸುಬ್ರಹ್ಮಣ್ಯ ಪ್ರಕಾಶಕರು: ನವ ಕರ್ನಾಟಕ ಪ್ರಕಾಶನ ಪುಟಗಳು : 116 ಬೆಲೆ:ರೂ. 55/

ಶೋಷಕರೇ ಶೋಷಿತರಿಗೆ ಹಿತವಚನ ನೀಡುವುದು ಈ ದೇಶದ ಬುದ್ಧಿಜೀವಿಗಳ ಫ್ಯಾಷನ್


scan0001

`ವಿಮರ್ಶಕ ಜಿ.ಎಚ್.ನಾಯಕರು ಶೋಷಕ ವರ್ಗದಿಂದ ಬಂದವರು. ಅವರ ಹೆಸರೇ ಜಾತಿ ಸೂಚಿತವಾದದ್ದು. ಅವರು ಸವರ್ಣೀರಾದ್ದರಿಂದ ಅವರು ಎಂದೂ ಅವರ ಜನಾಂಗದ ಬಗ್ಗೆ ಹೇಳುವುದಿಲ್ಲ. ಶೋಷಕರೇ ಶೋಷಿತರಿಗೆ ಹಿತವಚನ ನೀಡುವುದು ಈ ದೇಶದ ಬುದ್ಧಿಜೀವಿಗಳ ಫ್ಯಾಷನ್
`ಹಣದ ವಿಚಾರದಲ್ಲಿ ದೇವನೂರು ಮಹಾದೇವ ಪ್ರಾಮಾಣಿಕನಲ್ಲ. ಆತ ಪಡೆದ ಹಣಕ್ಕೆ ಲೆಕ್ಕವಿಲ್ಲ. ಶಿಸ್ತು ಮೊದಲೇ ಇಲ್ಲ. ಈ ವ್ಯಕ್ತಿ ಮತ್ತೊಬ್ಬರ ಮೇಲೆ ಗೂಬೆ ಕೂರಿಸಿ ತನ್ನ ಅಪ್ರಾಮಾಣಿಕತೆಯನ್ನು ಮುಚ್ಚಿಕೊಳ್ಳಲು ಸದಾ ಪ್ರಯತ್ನಿಸುತ್ತಾರೆ. ದೇವನೂರು ಮಹಾದೇವ ಎಷ್ಟು ದಲಿತರಿಂದ ಹಣ ಪಡೆದುಕೊಂಡಿದ್ದಾರೆ ಎಂಬುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಬೇಕು‘ (ಪು 94-95) ಎಂದು ನೇರವಾಗಿ ಬರೆಯುವ ಮುನಿವೆಂಕಟಪ್ಪ ಯಾವುದೇ ಮುಲಾಜುಗಳಿಲ್ಲದೆ ಬರೆದ ಬರಹಗಳು ಇಲ್ಲಿವೆ.
ದಲಿತ ಚಿಂತಕರಲ್ಲಿ ಒಬ್ಬರಾದ ಡಾ.ಮುನಿವೆಂಕಟಪ್ಪ ಇಲ್ಲಿ ಮಾಡಿರುವುದು ಸಾಹಿತ್ಯದ ವಿಮರ್ಶೆಗಿಂತ ಹೆಚ್ಚಾಗಿ ದಲಿತರ ಚಾರಿತ್ರಿಕ ವಿಮರ್ಶೆ. ಇಲ್ಲಿನ ಲೇಖನಗಳಲ್ಲಿ ಮುಖ್ಯವಗಿ ದಲಿತ ಚಳವಳಿ ಹಾಗೂ ಸಾಹಿತ್ಯ ಚರ್ಚೆಯಾಗಿದೆ. ವೆಂಕಟಪ್ಪನವರ ಈ ಚಿಂತನೆಗಳಲ್ಲಿ ಒಂದು ನೈತಿಕವಾದ ಆಕ್ರೋಶ ಇರುವುದನ್ನು ನಾವು ಕಾಣಬಹುದು. ಇದು ಅನೇಕ ದೊಡ್ಡವರು ಎನ್ನಿಸಿಕೊಂಡವರ ತಪ್ಪು ನಿಲುವುಗಳಿಗೆ ಪ್ರತಿಯಾಗಿ ಹುಟ್ಟಿಕೊಂಡ ಸಿಟ್ಟು. ಈ ಸಿಟ್ಟಿನ ಹಿಂದೆ ನೋವು ಇದೆ ಎಂಬುದನ್ನು ಮರೆಯುವಂತಿಲ್ಲ. ಇದಕ್ಕೆ ಉದಾಹರಣೆಯಾಗಿ ಕವಿ ಸಿದ್ದಲಿಂಗಯ್ಯ ಅವರು `ನನ್ನನ್ನು ದಲಿತ ಕವಿ ಎಂದು ಕರೆಯಬೇಡಿ, ಕನ್ನಡದ ಕವಿ ಎಂದು ಕರೆಯಿರಿ ಎಂದು ಕೇಳಿಕೊಂಡಿರುವುದನ್ನು, ದಲಿತರು ತಾವು ನಡೆದುಬಂದ ದಾರಿಯನ್ನು ಹಿಂತಿರುಗಿ ನೋಡಲು ಸಿದ್ಧರಿಲ್ಲದಿರುವುದನ್ನು ತೋರಿದ್ದಾರೆ. (ಪು.28) ಇಂಥ ಅನೇಕ ಸಂದರ್ಭಗಳನ್ನು ಮುನಿವೆಂಕಟಪ್ಪನವರು ಇಲ್ಲಿನ ಪುಟಗಳಲ್ಲಿ ತೆರೆದಿಟ್ಟಿದ್ದಾರೆ. ಇದರೊಂದಿಗೆ ದೇವನೂರು ಮಹದೇವ, ಮೊಗಳ್ಳಿ ಅಂಥವರನ್ನು ಏಕವಚನದಲ್ಲಿ ಕರೆದು ಸಂಯಮ ಕಳೆದುಕೊಳ್ಳುತ್ತಾರೆ.
ಈ ಬಗೆಯ ನೈತಿಕ ಸಿಟ್ಟುಗಳು ಅವರಲ್ಲಿವೆ. ಅಂತಹ ಸಂಗತಿಗಳ ಬಗ್ಗೆ ನೇರವಾಗಿ, ಆಧಾರಸಹಿತವಾಗಿ ಹೇಳಿದ್ದಾರೆ. ಆದರೆ, ಒಂದೆಡೆ (ಮೈಸೂರು ಜಿಲ್ಲೆಯ ದಲಿತ ಬಂಡಾಯ ಸಾಹಿತ್ಯಿಕ ಹಿರಿಮೆ) ಕಥೆಗಾರ ಮೊಗಳ್ಳಿ ಗಣೇಶರ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿದ `ದಲಿತ ಕಥನದ ಬಗ್ಗೆ ಬರೆಯುತ್ತ ಮೊಗಳ್ಳಿವರು ಮಾಡುವ ಸುಳ್ಳು ಉಲ್ಲೇಖಗಳನ್ನು, ಲೇಖಕರ ನಡುವೆ `ಒಬ್ಬರ ಮೇಲೆ ಒಬ್ಬರನ್ನು ಎತ್ತಿಕಟ್ಟುವ, ಸಲ್ಲದ ವಿಚಾರಗಳನ್ನು ಬರೆಯುವ ಸಾಹಿತಿಗಳನ್ನು, ಅಂಥವನ್ನು ಪ್ರಕಟಿಸುವ ವಿಶ್ವವಿದ್ಯಾಲಯದ ಪ್ರಸಾರಾಂಗವನ್ನು ಏನೆಂದು ಕರೆಯಬೇಕು?’ ಎಂದು ಕೇಳಿದ್ದಾರೆ. ಈವರೆಗೆ ಲೇಖಕರ ಪ್ರಶ್ನೆ ಸರಿಯಾಗಿಯೇ ಇದೆ. ಮುಂದುವರಿದು ಅವರು ಮೈಸೂರು ವಿಶ್ವವಿದ್ಯಾಲಯದ ಕಥೆಗಾರ ಮೊಗಳ್ಳಿ ಗಣೇಶರು ಎಂ.ಎ ತರಗತಿಯಲ್ಲಿ ಮೂರನೆಯ ದರ್ಜೆಯಲ್ಲಿ ತೇರ್ಗಡೆಯಾಗಿ ಮತ್ತೊಂದು ಎಂ.ಎ ಗೆ ಸೇರಿ ಪ್ರಥಮ ದರ್ಜೆಯಲ್ಲಿ ಪಾಸಾದುದ್ದನ್ನೂ, ಅನಂತರ ಸಂಶೋಧನೆ ನೆಪದಲ್ಲಿ 12 ವರ್ಷಗಳ ಕಾಲ ಒಂದೇ ಕೊಠಡಿಯಲ್ಲಿ ಉಳಿದುಕೊಂಡುದ್ದನ್ನು, ಮೈಸೂರು ವಿ.ವಿ.ಯಲ್ಲಿ ಓದಲು ಬರುವ ಬಡಹುಡುಗರು ಹಾಸ್ಟೇಲ್ನಲ್ಲಿ ರೂಮಿಗಾಗಿ ಪರದಾಡುತ್ತಿರುವುದನ್ನು ನೋಡಿಯೂ ಮುಜುಗರಕ್ಕೆ ಅವರು ಒಳಗಾಗದಿರವುದನ್ನೂ, `ಆತನನ್ನು ಓಡಿಸಿ ನಿಜವಾದ ಅರ್ಹ ಬಡ ವಿದ್ಯಾರ್ಥಿಗಳಿಗೆ ಆ ಜಾಗ ಸಿಗುವಂತಾಗುವಂತೆ ಮಾಡಲು ಸಾಹಸ ಪಡಬೇಕಾಯಿತುಎಂದು ಬರೆಯುತ್ತಾರೆ. ಮೊಗಳ್ಳಿಯವರ ಕೃತಿಯೊಂದಿಗೆ ಅವರ ಈ ಉಲ್ಲೇಖ ಅಗತ್ಯ ಇತ್ತು ಎಂದು ಅನಿಸುವುದಿಲ್ಲ.
ಆದರೂ, ಈ ಪುಸ್ತಕ ಸಾಕಷ್ಟು ಚರ್ಚೆಗಳನ್ನು ದಲಿತ ಸಾಹಿತ್ಯ, ಚಳವಳಿಗಳ ಕುರಿತು ಮಾಡುತ್ತದೆ ಎಂಬುದು ಮಹತ್ವದ ಸಂಗತಿ.
ಶೀರ್ಷಿಕೆ: ದಲಿತ ಚಳವಳಿ ಮತ್ತು ಸಾಹಿತ್ಯ  ಲೇಖಕರು: ಡಾ.ವಿ.ಮುನಿವೆಂಕಟಪ್ಪ ಪ್ರಕಾಶಕರು: ಎಸ್.ಎಸ್.ಪ್ರಕಾಶನ ಪುಟಗಳು:128 ಬೆಲೆ:ರೂ.65/

ಹಿಂದುತ್ವ ಮತ್ತು ದಲಿತರು

ಈ ಗ್ರಂಥದಲ್ಲಿ ಸೇರ್ಪಡೆಯಾಗಿರುವ ಲೇಖನಗಳು ಹಿಂದುತ್ವ ಶಕ್ತಿಗಳು ದಲಿತರನ್ನು ತಮ್ಮತ್ತ ಸೆಳೆದುಕೊಳ್ಳುತ್ತಿರುವ ಪ್ರಕ್ರಿಯೆಯ ಬಗ್ಗೆ ತಾತ್ವಿಕವೂ ಅನುಭವಜನ್ಯವೂ ಆದ ವಿಶ್ಲೇಷಣೆಗಳ ಮೂಲಕ ಸಾಕಷ್ಟು ಬೆಳಕು ಚೆಲ್ಲುತ್ತವೆ. ಕ್ರಿಯಾಶೀಲ ಚಳವಳಿಗಾರರು ಮತ್ತು ವಿದ್ವಾಂಸರುಗಳು ಬರೆದಿರುವ ಲೇಖನಗಳು ಈ ಗ್ರಂಥದಲ್ಲಿ ಸೇರ್ಪಡೆಯಾಗಿವೆ. ಈ ಲೇಖನಗಳಲ್ಲಿ ದಲಿತರ ಸಾಮಾಜಿಕ, ಸಾಂಸ್ಕೃತಿಕ, ಸೈದ್ಧಾಂತಿಕ ಮತ್ತು ರಾಜಕೀಯ ಜೀವನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಚರ್ಚಿಸಲಾಗಿದೆ. ಜೊತೆಗೆ ಅವರು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಅಗತ್ಯವಾದ ಮುನ್ನೋಟದ ಬಗ್ಗೆ ಬೆಳಕು ಹರಿಸುವ ಲೇಖನಗಳೂ ಇಲ್ಲಿವೆ. ಇತ್ತೀಚಿನ ವಿದ್ಯಮಾನಗಳು ಸೃಷ್ಟಿಸಿರುವ ಸಮಸ್ಯೆಗಳ ಕುರಿತ ಗಂಭೀರ ಸ್ವರೂಪದ ಸಂವಾದಕ್ಕೆ ಇಲ್ಲಿನ ಲೇಖನಗಳು ದಾರಿಮಾಡಿಕೊಡುತ್ತವೆ.
ಶೀರ್ಷಿಕೆ: ಹಿಂದುತ್ವ ಮತ್ತು ದಲಿತರು ಮೂಲ ಸಂಪಾದಕರು:ಆನಂದ್ ತೇಲ್ ತುಂಬ್ಡೆ ಅನು ಸಂಯೋಜನೆ: ಪ್ರೊ.ಗಂಗಾಧರ ಮೂರ್ತಿ ಪ್ರಕಾಶಕರು: ಚಿಂತನ ಪುಸ್ತಕ ಪುಟಗಳು:216 ಬೆಲೆ:ರೂ.120

ಶಾಂತಾರಾಮ್ ಹಾಜಿರ್ ಹೈ

kuruda-kurudi1


ಶಾಂತಾರಾಮ ಸೋಮಯಾಜಿ ಕತೆಗಳಲ್ಲಿ ಹೊಸಲೋಕವಿರುತ್ತದೆ. ವಿನೂತನವಾದ ಬರಹ ಶೈಲಿಯಲ್ಲಿ ಕತೆ ಹೇಳುವ ಶಾಂತಾರಾಮರ ಮೂರನೆಯ ಕಾದಂಬರಿ `ಕುರುಡ ಕುರುಡಿ‘. ಇಲ್ಲಿಯೂ ಕೂಡಾ ಹೊಸತೇನನ್ನೋ ಹೇಳುವ ಕೆಲಸ ನಡೆದಿದೆ. ಹೊಸ ಕಥಾವಸ್ತು. ಓದುಗರನ್ನು ಹಿಡಿದಿಟ್ಟುಕೊಂಡು ಹೋಗುವಲ್ಲಿ ಯಶಸ್ವಿಯಾಗಿದೆ. ಜೊತೆಗೆ ಶಾಂತಾರಾಮರ ವೈಚಾರಿಕ ವಿಷಯಗಳೂ ಇವೆ.
ವಾರಪತ್ರಿಕೆಯೊಂದರಲ್ಲಿ ಪ್ರಕಟವಾಗಿ ಜನಮೆಚ್ಚುಗೆ ಗಳಿಸಿದ `ಕುರುಡ ಕುರುಡಿಯನ್ನು ಬೆಳಕಿಗೆ ತಂದಿದ್ದಾರೆ ಪ್ರಕಾಶಕ ನಾರಾಯಣ ಮಾಳ್ಕೋಡ್. ಮುಖಪುಟದ ಕೆಟ್ಟ ವಿನ್ಯಾಸವನ್ನು ಕಣ್ಣುಮುಚ್ಚಿ ಕ್ಷಮಿಸಿದರೆ ಪುಸ್ತಕ `ಸುಮುಖ‘.
ಶೀರ್ಷಿಕೆ: ಕುರುಡ ಕುರುಡಿ ಲೇಖಕರು: ಶಾಂತಾರಾಮ ಸೋಮಯಾಜಿ ಪ್ರಕಾಶಕರು: ಸುಮುಖ ಪ್ರಕಾಶನ ಪುಟಗಳು:316 ಬೆಲೆ:ರೂ.200/

ಬೈ ದ ಡಾಕ್ಟರ್, ಫಾರ್ ದ ಡಾಕ್ಟರ್, ಥಟ್ ಅಂತ ಕೊಳ್ಳಿ!


manasvi11

ಐದಕ್ಕಿಂತಲೂ ಹೆಚ್ಚು ಬಾರಿ ಮರುಮುದ್ರಣಗೊಂಡಿರುವ ಡಾ.ಸಿ.ಆರ್.ಚಂದ್ರಶೇಖರ್ ರ ಕೃತಿಗಳ ಸಂಖ್ಯೆ 30. ಸಿ.ಆರ್.ಸಿ. ಒಟ್ಟು 159 ಪುಸ್ತಕಗಳು ಒಂದಕ್ಕಿಂತ ಹೆಚ್ಚಿನ ಮರುಮುದ್ರಣ ಕಂಡಿವೆ. ಅಂದರೆ ಶೇ.75ಕ್ಕಿಂತಲೂ ಹೆಚ್ಚಿನ ಪುಸ್ತಕಗಳು ಮರುಮುದ್ರಣವನ್ನು ಕಂಡಿವೆ ಎಂದಂತಾುತು.
ಹೀಗೆ ಡಾ. ನಾ. ಸೋಮೇಶ್ವರರು ಸಿ.ಆರ್.ಸಿ. ಯವರ ಕುರಿತು ಬರೆದ `ಮನಸ್ವಿಯಲ್ಲಿ ಲೆಕ್ಕ ಹಾಕುತ್ತಾರೆ. `ಮನಸ್ವಿ ಸಿ.ಆರ್.ಸಿ.ಯವರ 60 ವರ್ಷಗಳ ಬದುಕು-ಬರಹವನ್ನು ಸೋಮೇಶ್ವರರು ವಿಶಿಷ್ಟವಾಗಿ ದಾಖಲಿಸಿರುವ ಪುಸ್ತಕ.
ಸೋಮೇಶ್ವರರು ಪ್ರೀತಿುಂದ ಹೊಗಳಿಕೆಗಳಲ್ಲೇ ಈ ಪುಸ್ತಕವನ್ನು ಬರೆದಿಲ್ಲ. ತುಲನಾತ್ಮಕ ಅಧ್ಯಯನದಿಂದ ಹೊರಬಂದಿರುವ ಕೃತಿುದು. ಸಿ.ಆರ್.ಸಿ. ಪುಸ್ತಕಗಳಿಂದ ಶತಕ ಬಾರಿಸಿರಬಹುದು. ಆದರೆ ಈ ಪುಸ್ತಕ ಸೋಮೇಶ್ವರ `ಶತಕ. ಅಪರೂಪಕ್ಕೆ ಬೈ ದ ಡಾಕ್ಟರ್, ಫಾರ್ ದ ಡಾಕ್ಟರ್ ಪುಸ್ತಕವೊಂದು ಬಂದಿದೆ. ಡಾಕ್ಟರ್ ಗಳನ್ನು ಓದುವ ಆಸಕ್ತರು `ಥಟ್ ಅಂತ ಕೊಳ್ಳಿ!
ಶೀರ್ಷಿಕೆ: ಮನಸ್ವಿ ಲೇಖಕರು: ಡಾ. ನಾ.ಸೋಮೇಶ್ವರ ಪ್ರಕಾಶಕರು:ನವಕರ್ನಟಕ ಪ್ರಕಾಶನ ಪುಟಗಳು:114 ಬೆಲೆ:ರೂ.45

I Paid A Bribe

ಒಸಡಿನಲ್ಲಿ ರಕ್ತಸ್ರಾವ: ಇಲ್ಲಿದೆ ಸುಲಭ ಮನೆಮದ್ದು

ಒಸಡಿನ ರಕ್ತಸ್ರಾವ ಹೆಚ್ಚಿನವರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆ. ವಸಡಿನಲ್ಲಿರುವ ರೋಗಾಣುಗಳು ಕೀವು ಉಂಟುಮಾಡುತ್ತವೆ. ಹಲ್ಲಿನ ಸಂದಿಗಳಲ್ಲಿ, ವಸಡಿನಲ್ಲಿ ರಕ್ತಸ್ರಾವವಾಗುತ್ತದೆ. ಬಾಯಿಯ ಆರೋಗ್ಯದ ಕುರಿತು ನಿರ್ಲಕ್ಷ್ಯವಹಿಸುವುದೇ ಈ ತೊಂದರೆಗೆ ಪ್ರಮುಖ ಕಾರಣ. ಅಸಡ್ಡೆ ಮಾಡಿದರೆ ಬಾಯಿ ಬ್ಯಾಕ್ಟೀರಿಯಾ, ರೋಗಾಣುಗಳ ಆವಾಸ ಸ್ಥಾನವಾಗುತ್ತದೆ. ಒಸಡಿನ ರಕ್ತಸ್ರಾವಕ್ಕೆ ಪರಿಹಾರವಾಗಿ ಕೆಲವು ಸುಲಭ ಮನೆಮದ್ದುಗಳು ಇಲ್ಲಿವೆ.

* ಶ್ರೀಗಂಧವನ್ನು ತೇಯ್ದು ಅದನ್ನು ಬಾಯಿಯಲ್ಲಿ ಇಟ್ಟುಕೊಂಡರೆ ಹಲ್ಲಿನ ಒಸಡಿನಲ್ಲಿ ಬರುವ ಕೀವು ಹಾಗೂ ರಕ್ತ ನಿಲ್ಲುತ್ತದೆ.

* ಒಸಡಿನಲ್ಲಿ ರಕ್ತಸ್ರಾವವಿದ್ದರೆ ಜಾಜಿಮಲ್ಲಿಗೆಯ ಎಲೆಯನ್ನು ಪ್ರತಿದಿನ ತಿನ್ನಬೇಕು.

* ರಾತ್ರಿ ನಿದ್ದೆ ಮಾಡುವ ಮುನ್ನ ಲೋಳಿಸರ ರಸವನ್ನು ವಸಡಿಗೆ ಹಚ್ಚಿಕೊಳ್ಳಿ. ರಾತ್ರಿಪೂರ್ತಿ ಹಾಗೆಯೇ ಇರಲಿ. ಮರುದಿನ ವಸಡಿನ ರಕ್ತಸ್ರಾವ ಕಡಿಮೆಯಾಗುತ್ತದೆ.

* ಇನ್ನೊಂದು ಪ್ರಮುಖ ಮನೆಮದ್ದು ಶುಂಠಿ. ಇದಕ್ಕೆ ರೋಗ ನಿರೋಧಕ ಮತ್ತು ಬ್ಯಾಕ್ಟಿರಿಯ ನಿವಾರಕ ಗುಣವಿದೆ. ಶುಂಠಿಯನ್ನು ತೇಯ್ದು ಒಸಡಿಗೆ ಹಚ್ಚಿಕೊಳ್ಳಿ.

* ತುಲಸಿ ಸರ್ವರೋಗ ನಿವಾರಕ. ತುಲಸಿ ಎಲೆಯನ್ನು ತೇಯ್ದು ಒಸಡಿಗೆ ರಾತ್ರಿ ನಿದ್ದೆಗೆ ಮುನ್ನ ಹಚ್ಚಿಕೊಳ್ಳಿ.

* ಬಿಸಿನೀರಿಗೆ ಒಂದು ಚಮಚ ಲಿಂಬೆರಸ ಮತ್ತು ಸ್ವಲ್ಪ ಉಪ್ಪು ಹಾಕಿ ಬಾಯಲ್ಲಿ ಮುಕ್ಕಳಿಸುತ್ತಿರಿ.

ಒಸಡಿನಲ್ಲಿ ಗಾಯ, ಕೀವು, ರಕ್ತಸ್ರಾವ ಇತ್ಯಾದಿಗಳು ಮೇಲೆ ತಿಳಿಸಿದ ಸುಲಭ ಮನೆಮದ್ದಿನಿಂದ ಗುಣವಾಗಬಹುದು. ಅದಕ್ಕಿಂತ ಉತ್ತಮ ಪರಿಹಾರವೆಂದರೆ ಉತ್ತಮ ದರ್ಜೆಯ ಪೇಸ್ಟ್ ನಿಂದ ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು.