ಪುಟಗಳು

ಚಹದೊಂದಿಗೆ ತಿನ್ನಿ ಕುರುಕುರು ಈರುಳ್ಳಿ ಚಕ್ರ

Onion Ring Recipe

ಆನಿಯನ್ ರಿಂಗ್ ಎಂದು ಅಂಗಡಿಗಳಲ್ಲಿ ದೊರೆಯುವ ತಿಂಡಿಯ ರುಚಿ ನೋಡಿರುತ್ತೀರಾ. ಈರುಳ್ಳಿಯಿಂದ ತಯಾರಿಸುವ ರಿಂಗ್ ಆಕಾರದ ತಿಂಡಿ ರುಚಿಕರವಾಗಿದ್ದು ಆರೋಗ್ಯಕ್ಕೂ ಒಳ್ಳೆಯದು. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇಷ್ಟವಾಗುವ ಈ ತಿಂಡಿ ಮಾಡಲು ಸುಲಭವಾಗಿದ್ದು ತಯಾರಿಸುವ ವಿಧಾನ ನೋಡಿ ಹೀಗಿದೆ.

ಬೇಕಾಗುವ ಸಾಮಾಗ್ರಿಗಳು:
* 1/2 ಕಪ್ ಮೈದಾ
* 1/4 ಕಪ್ ಜೋಳದ ಹಿಟ್ಟು
* 2 ಚಮಚ ಬೇಯಿಸಿ ಹಿಸುಕಿದ ಆಲೂಗೆಡ್ಡೆ
* ಕೆಂಪು ಮೆಣಸಿನ ಪುಡಿ
* ರುಚಿಗೆ ತಕ್ಕ ಉಪ್ಪು
* ವನಸ್ಪತಿ
* 2-3 ಈರುಳ್ಳಿ (ವೃತ್ತಾಕಾರವಾಗಿ ಕತ್ತರಿಸಿದ್ದು)

ತಯಾರಿಸುವ ವಿಧಾನ:

1. ಮೈದಾ, ಜೋಳದ ಹಿಟ್ಟು, ಕೆಂಪು ಮೆಣಸಿನ ಪುಡಿ, ಆಲೂಗೆಡ್ಡೆ, ಉಪ್ಪು ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು.

2. ಬಾಣಲೆಯಲ್ಲಿ ಎಣ್ಣೆ ಹಾಕಿ ಕುದಿಸಬೇಕು.

3. ಈರುಳ್ಳಿಯನ್ನು ಈ ಮಿಶ್ರಣದಲ್ಲಿ ಅದ್ದಿ ಎಣ್ಣೆಗೆ ಹಾಕಬೇಕು.

4. ರಿಂಗ್ ಕಂದು ಬಣ್ಣಕ್ಕೆ ಬರುವಾಗ ಎಣ್ಣೆಯಿಂದ ತೆಗೆಯಬೇಕು.

ಇದನ್ನು ಸಾಯಾಂಕಾಲದ ಟೀ ಜೊತೆ ಸೇವಿಸಲು ರುಚಿಕರವಾಗಿರುತ್ತದೆ.

ಒಡೆಯುವ ಪಾದಗಳಿಗೆ ಮುಕ್ತಿ ಇಲ್ಲಿದೆ

ಚಳಿಗಾಲದಲ್ಲಿ ಕಾಲು ಒಡೆಯುವ ಸಮಸ್ಯೆ ಹೆಚ್ಚು. ಕೆಲವರ ಮುಖದ ತ್ವಚೆ ತುಂಬಾ ಚೆನ್ನಾಗಿದ್ದು ಪಾದಗಳಲ್ಲಿ ಬಿರುಕು ಉಂಟಾಗಿ ಕಪ್ಪಾಗಿ ಅಸಹ್ಯವಾಗಿ ಕಾಣುತ್ತದೆ. ಆರೋಗ್ಯಕರವಲ್ಲದ ಆಹಾರಕ್ರಮ , ದೂಳು ಇವುಗಳಿಂದ ಪಾದಗಳಲ್ಲಿ ಮಾಯಿಶ್ಚರೈಸರ್ ಕಡಿಮೆಯಾಗಿ ಪಾದಗಳಲ್ಲಿ ಬಿರುಕು ಹೆಚ್ಚಾಗುವುದು. ಒಂದು ವೇಳೆ ಬಿರುಕು ಬಂದಿದ್ದರೆ ಬೇಜಾರು ಬೇಡ. ಈ ಕೆಳಗಿನ ಸಲಹೆಗಳನ್ನು ಪಾಲಿಸಿ ಬಿರುಕು ಹೋಗಲಾಡಿಸಿ ಸುಂದರ ಪಾದಗಳನ್ನು ಪಡೆಯಬಹುದು.

1.ಮಲಗುವ ಮೊದಲು ಕಾಲನ್ನು ಹದ ಬಿಸಿ ನೀರಿನಲ್ಲಿ ಮೃದುವಾದ ಸೋಪು ಹಚ್ಚಿ ತೊಳೆಯಬೇಕು. ನಂತರ ಸಾಸಿವೆ ಎಣ್ಣೆ ಹಚ್ಚಿ ಸಾಕ್ಸ್ ಹಾಕಿ ಮಲಗಬೇಕು.

2. ಬಿಸಿ ನೀರಿಗೆ ನಿಂಬೆರಸ ಹಾಕಿ ಅದರಲ್ಲಿ ಕಾಲುಗಳನ್ನು 10 ನಿಮಿಷ ಇಡಬೇಕು. ನಂತರ ಪ್ಯೂಮಿಕ್ ಕಲ್ಲಿನಿಂದ ತಿಕ್ಕಿ ಕಾಲನ್ನು ಸ್ವಚ್ಚಗೊಳಿಸಬೇಕು. ಈ ರೀತಿ ಮಾಡುತ್ತಿದ್ದರೆ ಕಾಲು ಒಡೆಯುವುದು ಕಡಿಮೆಯಾಗುತ್ತದೆ.

3.
ತೆಂಗಿನೆಣ್ಣೆಯಿಂದ ಪಾದಗಳನ್ನು, ಮಸಾಜ್ ಮಾಡಿ ಸಾಕ್ಸ್ ಹಾಕಿ ಮಲಗಬೇಕು. ನಂತರ ಬೆಳಗ್ಗೆ ಎದ್ದು ಹದ ಬಿಸಿನೀರಿನಿಂದ ಪ್ಯೂಮಿಕ್ ಕಲ್ಲು ಬಸಿ ತಿಕ್ಕಿ ತೊಳೆಯಬೇಕು. ಈ ರೀತಿ ಮಾಡಿದರೆ ಕಾಲಿನಲ್ಲಿನ ಬಿರುಕು ಕ್ರಮೇಣ ಮಾಯವಾಗುತ್ತದೆ.

4. ಬಾಳೆಹಣ್ಣು ಅಥವಾ ಬೆಣ್ಣೆ ಹಣ್ಣಿನಿಂದ ಪಾದಗಳನ್ನು 10 ನಿಮಿಷ ತಿಕ್ಕಿ ನಂತರ 10-15 ನಿಮಿಷ ಬಿಡಬೇಕು. ನಂತರ ಕಾಲುಗಳನ್ನು ತೊಳೆದು ತೆಂಗಿನೆಣ್ಣೆ ಹಚ್ಚಬೇಕು. ಈ ರೀತಿ ಮಾಡಿದರೆ ಪಾದಗಳಲ್ಲಿರುವ ಬಿರುಕು ಕಡಿಮೆಯಾಗುತ್ತದೆ.

5. ಪಪ್ಪಾಯಿ ಹಣ್ಣಿಗೆ ಸ್ವಲ್ಪ ನಿಂಬೆರಸ ಹಾಕಿ ಪಾದಗಳಿಗೆ 10 ನಿಮಿಷ ತಿಕ್ಕಿ ನಂತರ ತೊಳೆಯಬೇಕು. ಈ ರೀತಿ ವಾರಕ್ಕೆ 2 ಬಾರಿ ಮಾಡಿದರೆ ಪಾದಗಳು ನುಣಪಾಗಿ ಸುಂದರವಾಗಿ ಕಾಣುವುದು.

ಕೇಂದ್ರ ಸರಕಾರಿ ನೌಕರರಿಗೆ 7 % DA ಹೆಚ್ಚಳ


central-govt-employees-da-hiked-7-percent
 
ನವದೆಹಲಿ,ಫೆ.1: ಕೇಂದ್ರ ಸರಕಾರಿ ನೌಕರರಿಗೆ ಇಲ್ಲೊಂದು ಸಿಹಿಸುದ್ದಿ. ಕೇಂದ್ರ ನೌಕರರಿಗೆ 2012ರ ಜನವರಿ 1 ರಿಂದ ಅನ್ವಯವಾಗುವಂತೆ ಶೇ. 7ರಷ್ಟು ಅಧಿಕ ತುಟ್ಟಿ ಭತ್ಯೆ (DA) ಪ್ರಾಪ್ತಿಯಾಗಲಿದೆ. ಕಳೆದ ಸೆಪ್ಟೆಂಬರಿನಲ್ಲಿ ಇದೇ ಪ್ರಮಾಣದಲ್ಲಿ ತುಟ್ಟಿ ಭತ್ಯೆ ಹೆಚ್ಚಿಸಲಾಗಿತ್ತು.

ಈವರೆಗೆ ನೌಕರರು ಮೂಲ ವೇತನದ ಶೇ. 58ರಷ್ಟು ತುಟ್ಟಿ ಭತ್ಯೆ ಪಡೆಯುತ್ತಿದ್ದರು. ಈಗ ಅದು ಶೇ. 7ರಷ್ಟು ಹೆಚ್ಚಾಗಲಿದ್ದು, ಇನ್ನು ಮುಂದೆ ನೌಕರರು ಪಡೆಯುವ ತುಟ್ಟಿ ಭತ್ಯೆಯ ಪ್ರಮಾಣ ಶೇ. 65 ಆಗಲಿದೆ. ಸುಮಾರು 50 ಲಕ್ಷ ಹಾಲಿ ಉದ್ಯೋಗಿಗಳು ಮತ್ತು 40 ಲಕ್ಷ ಪಿಂಚಣಿದಾರರು ಇದರ ಪ್ರಯೋಜನ ಪಡೆಯಲಿದ್ದಾರೆ.

ಡಿಸೆಂಬರ್ 2011ರ ಅವಧಿಯವರೆಗೆ ಅಂದರೆ 12 ತಿಂಗಳಲ್ಲಿ ಕೈಗಾರಿಕಾ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕದ ಸರಾಸರಿಯು ಏರಿಕೆಯಾಗಿರುವ ಹಿನ್ನೆಲೆಯಲ್ಲಿ ತನ್ನ ನೌಕರರಿಗೆ ಹೆಚ್ಚುವರಿ ತುಟ್ಟಿ ಭತ್ಯೆ ನೀಡಲು ನಿರ್ಧರಿಸಲಾಗಿದೆ ಎಂದು ಕಾರ್ಮಿಕ ಇಲಾಖೆ ಮೂಲಗಳು ತಿಳಿಸಿವೆ. ಈ ಸರಾಸರಿಯ ಆಧಾರದ ಮೇಲೆ ಪ್ರತಿ 6 ತಿಂಗಳಿಗೊಮ್ಮೆ DA ಪರಿಷ್ಕರಿಸಲಾಗುವುದು.

'ಫೈಲ್' ಸರೀನಾ? 'ಕಡತ' ಸರೀನಾ ಚರ್ಚೆ, ಅವಲೋಕನ


Fuel Kannada Program, Bangalore
 
ಬೆಂಗಳೂರು, ಫೆ.1: ಕನ್ನಡ ತಂತ್ರಾಂಶಗಳ ಅನುವಾದದಲ್ಲಿ ಬಳಸಬೇಕಿರುವ ಪದಗಳಲ್ಲಿ ಏಕರೂಪತೆ ಕಾಯ್ದುಕೊಳ್ಳಲು ಉದ್ಧೇಶಿಸಲಾದಂತಹ ಅವಲೋಕನ ಕಾರ್ಯಗಾರವನ್ನು ಜನವರಿ 28 ಹಾಗು 29 ರಂದು FUEL ಪರಿಯೋಜನೆಯ ಅಡಿಯಲ್ಲಿ ಬೆಂಗಳೂರಿನ ಸೆಂಟರ್ ಫಾರ್ ಇಂಟರ್ನೆಟ್ ಆಂಡ್ ಸೊಸೈಟಿಯಲ್ಲಿ (ಸಿಐಎಸ್) ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ, ಗಣಕದಲ್ಲಿ ಹೆಚ್ಚಾಗಿ ಬಳಸಲಾಗುವ ಪರ್ಯಾಯ ಕನ್ನಡ ಪದಗಳ ಅವಲೋಕಿಸುವ ಸಲುವಾಗಿ ಕನ್ನಡ ಸಮುದಾಯದ ಮೂಲಕ ಅವಲೋಕನ ನಡೆಸಲಾಯಿತು. ಕಂಪ್ಯೂಟರ್ ತಂತ್ರಾಂಶಗಳ ಕನ್ನಡ ಅನುವಾದದಲ್ಲಿನ ಗೊಂದಲ ಹಾಗು ಏಕರೂಪತೆಯ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಸಂಚಯ (sanchaya.net) ತಂಡವು ಈ FUEL ಕನ್ನಡ ಕಾರ್ಯಗಾರವನ್ನು ರೆಡ್‌ ಹ್ಯಾಟ್‌ನ ನೆರವಿನಿಂದ ಹಮ್ಮಿಕೊಂಡಿತ್ತು.

ಭಾಷಾಶಾಸ್ತ್ರಜ್ಞರು, ಅನುವಾದಕರು ಹಾಗು ಬಳಕೆದಾರರು ಮುಂತಾಗಿ ಸುಮಾರು 15 ಜನರು ಪಾಲ್ಗೊಂಡ ಎರಡು ದಿನಗಳ ಈ ಕಾರ್ಯಗಾರದಲ್ಲಿ ಸುಮಾರು 578 ಪದ/ಪದಗುಚ್ಛಗಳ ಪ್ರಸ್ತುತ ಅನುವಾದವನ್ನು ಅವಲೋಕಿಸಿ, ಅದರಲ್ಲಿನ ತಪ್ಪುಗಳನ್ನು ತಿದ್ದಿ ಒಂದು ಶಿಷ್ಟ ಗಣಕ ಪದಕೋಶವನ್ನು ಸಿದ್ಧಗೊಳಿಸಲಾಯಿತು.
ಉದಾ: file ಎನ್ನುವುದಕ್ಕೆ ಕಡತ, edit-ಸಂಪಾದನೆ, window-ಕಿಟಕಿ..ಇತ್ಯಾದಿ

ರೆಡ್‌ ಹ್ಯಾಟ್‌ನ ಶಂಕರ ಪ್ರಸಾದ್ ಎಲ್ಲರನ್ನೂ ಸ್ವಾಗತಿಸಿ, ಕಂಪ್ಯೂಟರ್ ಪದಕೋಶದಲ್ಲಿ ಶಿಷ್ಟತೆಯ ಅಗತ್ಯಗಳನ್ನು ವಿವರಿಸಿದರು. ನಂತರ ಮಾತನಾಡಿದ ಕನ್ನಡ ಗಣಕ ಪರಿಷತ್ತಿನ ಕಾರ್ಯದರ್ಶಿಯಾದಂತಹ ಜಿ ಎನ್ ನರಸಿಂಹ ಮೂರ್ತಿಯವರು ಈ ನಿಟ್ಟಿನಲ್ಲಿ ಹಿಂದೆ ನಡೆದ ಕೆಲಸಗಳು ಹಾಗು ಮುಂದಿನ ಕಾರ್ಯಗಳ ಕುರಿತು ಮಾತನಾಡಿದರು.

ಈ ಕಾರ್ಯಗಾರದಲ್ಲಿ ಕಿರುತೆರೆಯ ಖ್ಯಾತ ನಟಿ ಜಯಲಕ್ಷ್ಮಿ ಪಾಟೀಲ್, ಬನವಾಸಿ ಬಳಗದ ಸದಸ್ಯರು, ಕಣಜದಲ್ಲಿ ಕೆಲಸ ಮಾಡುತ್ತಿರುವವರು, ತಂತ್ರಜ್ಞರು, ಗೂಗಲ್ ಸಂಸ್ಥೆಯಲ್ಲಿನ ಈ ಹಿಂದಿನ ಅನುವಾದಕರು, ಪತ್ರಕರ್ತರು, ಭಾಷಾತಂತ್ರಜ್ಞರು ಮುಂತಾದವರು ಭಾಗವಹಿಸಿದ್ದರು.

ಲೋಕಲೈಸೇಶನ್ ಅಥವ ಪ್ರಾದೇಶೀಕರಣ ಎನ್ನುವುದು ಒಂದು ಉತ್ಪನ್ನವನ್ನು ನಿರ್ದಿಷ್ಟ ಪ್ರದೇಶ ಅಥವ ಭಾಷಾ ಪರಿಸರಕ್ಕೆ ಹೊಂದಿಕೊಳ್ಳುವಂತೆ ಪರಿವರ್ತಿಸುವ ಮಾಡುವ ಕೆಲಸವಾಗಿದೆ. ಪ್ರಾದೇಶೀಕರಣವು ಹೆಚ್ಚು ಸಂಕೀರ್ಣವಾದಂತೆಲ್ಲಾ ಮತ್ತು ಹಲವು ಉಪಕರಣಗಳನ್ನು ಒಳಗೊಂಡಂತೆಲ್ಲಾ ಅನುವಾದ ಮತ್ತು ಪದಕೋಶದ ಶಿಷ್ಟತೆಯು ಎದುರಾಗುತ್ತಾ ಹೋಗುತ್ತದೆ.

ಆದ್ದರಿಂದ, ಈ ಸಂದರ್ಭದಲ್ಲಿ ಆ ರೀತಿಯ ಒಂದು ಕಾರ್ಯಗಾರವು ಅಗತ್ಯ ಹಾಗು ಪ್ರಮುಖವೆನಿಸುತ್ತದೆ. ಇಂದಿನ ತಂತ್ರಜ್ಞಾನ ಕ್ರಾಂತಿಯು ನಮ್ಮ ಕರ್ನಾಟಕದ ಪ್ರತಿ ಮೂಲೆಯನ್ನು ತಲುಪಲು ಅದು ಏಕರೂಪವಾದ ಪದಗಳೊಂದಿಗೆ ಕನ್ನಡದಲ್ಲಿ ಲಭ್ಯವಾಗಿಸುವುದು ಅನಿವಾರ್ಯ.

ಸ್ಥಳೀಯ ಬಳಕೆದಾರರು ತಂತ್ರಜ್ಞಾನವನ್ನು ಸುಲಭವಾಗಿ ಬಳಸಲು ನೆರವಾಗಲು FUEL ಪರಿಯೋಜನೆಯು ಒಂದು ಶಿಷ್ಟವಾದ ಹಾಗು ಏಕರೂಪವಾದ ಪಾರಿಭಾಷಿಕ ಪದಕೋಶವನ್ನು ಒದಗಿಸುತ್ತದೆ. ಈಗಾಗಲೆ ಸುಮಾರು 9 ಭಾರತೀಯ ಭಾಷೆಗಾಗಿ ಈ ಬಗೆಯ ಕಾರ್ಯವು ನಡೆದಿದ್ದು, ಕನ್ನಡದ ಕಂಪ್ಯೂಟರ್ ಪದಕೋಶವು 10ನೆಯದ್ದಾಗಿದೆ.

ಕೊಲೆಸ್ಟ್ರಾಲ್ ಗೆ ಸೂಪರ್ ಫುಡ್ ಯಾವುದು?

ಎಲ್ಲಿಯವರೆಗೂ ಬೊಜ್ಜಿನ ಸಮಸ್ಯೆ ಇರುತ್ತೋ ಅಲ್ಲಿಯವರೆಗೂ ಅದನ್ನು ಕರಗಿಸುವ ಮಾರ್ಗವೂ ಒಂದೊಂದಾಗಿ ಹುಟ್ಟಿಕೊಳ್ಳುತ್ತಲೇ ಇರುತ್ತೆ. ದಿನ ನಿತ್ಯವೂ ಬೊಜ್ಜನ್ನು ಕರಗಿಸುವ ಹಲವು ವಿಧಾನಗಳನ್ನು ನೀವು ನೋಡುತ್ತಲೇ ಇರ್ತೀರ. ಆದರೆ ಇಲ್ಲೊಂದು ಸರಳ ಮಾರ್ಗವಿದೆ.

ಹಸಿವು ನೀಗಿಸುವುದರೊಂದಿಗೆ ಬೊಜ್ಜನ್ನೂ ನಿಯಂತ್ರಿಸುವ ಕೆಲವು ಸೂಪರ್ ಫುಡ್ ಗಳನ್ನು ಇಲ್ಲಿ ನೀಡಲಾಗಿದೆ. ಈ ಆಹಾರ ದೇಹಕ್ಕೆ ಎರಡು ಪಟ್ಟು ಪ್ರಯೋಜನ ನೀಡುತ್ತೆ ಅನ್ನೋದು ತಜ್ಞರ ಅಭಿಪ್ರಾಯ. ಇವುಗಳು ದೇಹವನ್ನು ಶುದ್ಧೀಕರಣಗೊಳಿಸುವುದರೊಂದಿಗೆ ಅಗತ್ಯ ಶಕ್ತಿಯನ್ನೂ ನೀಡಿ ದೇಹವೂ ಫಿಟ್ ಆಗಿರುವಂತೆ ನೋಡಿಕೊಳ್ಳುತ್ತೆ.

ಫಿಟ್ ಆಗಿರಲು ಅವಶ್ಯಕವಾದ ಆಹಾರ:

1. ಪರಿಶುದ್ಧ ಆಲಿವ್ ಎಣ್ಣೆ: ಪರಿಶುದ್ಧ ಆಲಿವ್ ಎಣ್ಣೆ ಎಂದು ಇಲ್ಲಿ ಒತ್ತಿ ಹೇಳಲಾಗಿದೆ. ಏಕೆಂದರೆ ಸಂಸ್ಕರಿದ ಆಲಿವ್ ಎಣ್ಣೆಯಲ್ಲಿ ದೇಹಕ್ಕೆ ಅಗತ್ಯವಾದ ಒಮೆಗಾ3 ಫ್ಯಾಟಿ ಆಸಿಡ್ ಇರುವುದಿಲ್ಲ. ಆದ್ದರಿಂದ ಅದನ್ನು ಕಚ್ಛಾ ಬಳಸಬೇಕು. ಆಲಿವ್ ಎಣ್ಣೆಯನ್ನು ಬಿಸಿ ಮಾಡಿದರೂ ಅದರಲ್ಲಿನ ಸತ್ವ ಬೇಗನೆ ನಶಿಸಿಹೋಗುತ್ತದೆ. ಆದ್ದರಿಂದ ಹಸಿಯಾದ ಸಲಾಡ್ ನೊಂದಿಗೆ ಎಣ್ಣೆಯನ್ನು ಹಾಗೇ ಬೆರೆಸಿ ಸೇವಿಸಿದರೆ ಕೆಟ್ಟ ಬೊಜ್ಜನ್ನು ಬೇಗನೆ ಕಳೆದುಕೊಳ್ಳಬಹುದು.

2. ದುಂಡು ಮೆಣಸಿನ ಕಾಯಿ ಅಥವಾ ಕ್ಯಾಪ್ಸಿಕಂ: ಕ್ಯಾಪ್ಸಿಕಂನಿಂದ ಅನೇಕ ಉಪಯೋಗವಿದೆ. ಕ್ಯಾಪ್ಸಿಕಂನಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುವ ವಿಶೇಷ ಗುಣವಿರುವುದರೊಂದಿಗೆ ಇದರಲ್ಲಿರುವ ಹೇರಳ ಆಂಡಿಯಾಕ್ಸಿಡಂಟ್ ಬೇಗನೆ ಸುಕ್ಕು ಮೂಡುವುದನ್ನು ತಡೆಯುತ್ತದೆ. ಅದರಲ್ಲೂ ಕೆಂಪು ಮತ್ತು ಹಳದಿ ಕ್ಯಾಪ್ಸಿಕಂ ನಲ್ಲಿ ಹೆಚ್ಚು ಪೋಷಕಾಂಶವಿದೆ.

3. ಬಾದಾಮಿ: ಬಾದಾಮಿಯನ್ನು ಈ ಸೂಪರ್ ಫುಡ್ ಪಟ್ಟಿಗೆ ಇತ್ತೀಚೆಗಷ್ಟೆ ಸೇರಿಸಲಾಗಿದೆ. ಬಾದಾಮಿಯಲ್ಲಿ ಹೇರಳ ಪೋಷಕಾಂಶವಿರುವುದರಿಂದ ಪ್ರಾಮುಖ್ಯತೆ ಪಡೆದುಕೊಂಡಿದೆ. ಬಾದಾಮಿಯನ್ನು ನೀರಿನಲ್ಲಿ ನೆನೆಸಿ ಬೆಳಗ್ಗೆ ಹೊತ್ತು ತಿಂದರೆ ದಿನವಿಡೀ ಚೈತನ್ಯದಿಂದಿರಲು ಹೆಚ್ಚು ಶಕ್ತಿಯನ್ನು ದೇಹಕ್ಕೆ ಒದಗಿಸುತ್ತೆ.

4. ದ್ರಾಕ್ಷಿ: ಯಾವುದೇ ರೀತಿಯ, ಬಣ್ಣದ ದ್ರಾಕ್ಷಿ ಬೊಜ್ಜು ಕರಗಿಸುವುದಕ್ಕೆ ಉತ್ತಮ ಮಾರ್ಗ. ಅದರಲ್ಲೂ ಕಪ್ಪು ದ್ರಾಕ್ಷಿಯಲ್ಲಿ ಹೆಚ್ಚು ಪೋಷಕಾಂಶವಿದೆ. ಬೆರಿಗಳಲ್ಲಿ ಒಂದಾಗಿರುವ ಸ್ಟ್ರಾಬೆರಿಯಲ್ಲಿ ವಿಟಮಿನ್ ಸಿ ಮತ್ತು ಆಂಟಿಯಾಕ್ಸಿಡಂಟ್ ಮತ್ತು ಫೋಟೊಕೆಮಿಕಲ್ಸ್ ಬೊಜ್ಜು ಕರಗಿಸಿ ದೇಹವನ್ನು ಸ್ಲಿಮ್ ಮಾಡುತ್ತದೆ.

5. ಹಸಿರು ತರಕಾರಿ: ಎಲ್ಲಕ್ಕಿಂತ ಹೆಚ್ಚು ಪೋಷಕಾಂಶ ನೀಡುವುದರಲ್ಲಿ ತರಕಾರಿಯದ್ದು ಮೇಲುಗೈ. ತರಕಾರಿಗಳಲ್ಲಿ ವಿಟಮಿನ್ ಎ, ಕೆ, ಫೊಲೆಟ್ ಹಾಗೂ ಆಂಟಿಯಾಕ್ಸಿಡಂಟ್ ಹೇರಳವಾಗಿರುತ್ತೆ. ತರಕಾರಿ ಸೇವನೆ ಎಲ್ಲ ರೀತಿಯಿಂದಲೂ ಒಳ್ಳೆಯದು. ರಕ್ತ, ತ್ವಚೆ, ಕೂದಲು ಮತ್ತು ತಾರುಣ್ಯ ಎಲ್ಲವೂ ತರಕಾರಿಗಳ ಮೇಲೆ ಅವಲಂಬಿತವಾಗಿದೆ.

ಸಿಕ್ಸ್ ಪ್ಯಾಕ್ ಪಡೆಯಲು ಬೇಕು ನಾಲ್ಕು ಪೋಷಕಾಂಶ



ಗಟ್ಟಿಮುಟ್ಟಾದ ಶರೀರವನ್ನು ನೋಡಿದಾಗ ಅದು ಜಿಮ್ ಬಾಡಿ ಎಂದು ಗೊತ್ತಾಗುತ್ತೆ. ದೈಹಿಕವಾಗಿ ಕಠಿಣ ಪರಿಶ್ರಮವನ್ನು ಹೊಂದಿರುವವರು ಕೂಡ ಗಟ್ಟಿಮುಟ್ಟಾದ ಶರೀರವನ್ನು ಹೊಂದಿರುತ್ತಾರೆ.

ಗಟ್ಟಿಮುಟ್ಟಾದ ಶರೀರಕ್ಕೆ ಜಿಮ್ ಮಾತ್ರ ಸಾಲದು ಅದಕ್ಕೆ ತಕ್ಕದಾದ ಆಹಾರಕ್ರಮ ಹೊಂದಿರಬೇಕು. ಸ್ನಾಯುಗಳು ಬಲವಾಗಲು
ಈ ಕೆಳಗಿನ ಪೋಷಕಾಂಶವಿರುವ ಅಹಾರವನ್ನು ಕಡ್ಡಾಯವಾಗಿ ಸೇವಿಸಬೇಕು.

1. ಪ್ರೊಟೀನ್: ಅಮೈನೊ ಅಸಿಡ್ ಇರುವ ಆಹಾರದಲ್ಲಿ ಹೆಚ್ಚು ಪ್ರೊಟೀನ್ ಅಂಶವಿರುತ್ತದೆ. ಇದು ದೇಹದ ಬೆಳವಣಿಗೆಗೆ ಮತ್ತು ದೇಹದ ಭಾಗಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗಿದೆ. ಬೀನ್ಸ್, ಬಾದಾಮಿ, ಪಾಲಾಕ್ ಸೊಪ್ಪು, ಮೀನು, ಮಾಂಸ, ಕಾರ್ಬೋಹೈಡ್ರೇಟ್ ಇರುವ ಆಹಾರಗಳಲ್ಲಿ ಅಧಿಕ ಪ್ರೊಟೀನ್ ಇರುತ್ತದೆ.

2. ವಿಟಮಿನ್:
ಖನಿಜಾಂಶವಿರುವ ಆಹಾರಗಳ ಸೇವನೆ ದೇಹದಲ್ಲಿ ಸ್ನಾಯುಗಳನ್ನು ಬಲಪಡಿಸುತ್ತದೆ. ಮೊಟ್ಟೆ. ಅಣಬೆ, ಈರುಳ್ಳಿ, ಮಾಂಸ, ಟರ್ಕಿ ಕೋಳಿಯ ಲಿವರ್, ಸಿಹಿಗೆಣಸು, ಪಾಲಾಕ್, ಬ್ರೊಕೊಲಿಗಳಲ್ಲಿರುವ ವಿಟಮಿನ್ ಗಳು ದೇಹದ ಆರೋಗ್ಯವನ್ನು ಹೆಚ್ಚಿಸುತ್ತದೆ.

3. ಕಾರ್ಬೋಹೈಡ್ರೇಟ್:
ಸರಿಯಾದ ಪ್ರಮಾಣವನ್ನು ತೂಕವನ್ನು ಹೊಂದಿರಬೇಕೆಂದರೆ ಕಾರ್ಬೋಹೈಡ್ರೇಟ್ ಮತ್ತು ಒಳ್ಳೆಯ ಕೊಬ್ಬಿನಂಶ (ಒಮೆಗಾ ಕೊಬ್ಬು) ಆಹಾರದಲ್ಲಿ ಇರಬೇಕು. ಒಮೆಗಾ3 ಕೊಬ್ಬಿನಂಶ ಮೀನಿನಲ್ಲಿ ಹೆಚ್ಚಾಗಿ ಇರುತ್ತದೆ. ಇದು ದೇಹದವನ್ನು ಫಿಟ್ ಆಗಿಡಲು ಸಹಾಯ ಮಾಡುತ್ತದೆ. ಅಕ್ಕಿ, ಬಾರ್ಲಿ, ಜೋಳ, ಓಟ್ ಮೀಲ್, ಪೈನಾಪಲ್, ಸ್ಟ್ರಾಬರಿ, ಕರ್ಜೂರಗಳಲ್ಲಿ ಅಧಿಕ ಕಾರ್ಬೋಹೈಡ್ರೇಟ್ ಇರುತ್ತದೆ.

4. ಗ್ಲುಟಾಮೈನ್:
ಎಲುಬು ಮತ್ತು ಸ್ನಾಯುಗಳನ್ನು ಬಲವಾಗಿಡಲು ಗ್ಲುಟಾಮೈನ್ ಅವಶ್ಯಕ. ಗ್ಲುಟಾಮೈನ್ ಒತ್ತಡವನ್ನು ಕಡಿಮೆ ಮಾಡುತ್ತದೆ. ಈ ಗ್ಲುಟಾಮಿನ್ ಎಲೆಕೋಸು, ಹಾಲಿನ ಉತ್ಪನ್ನಗಳಲ್ಲಿ, ಚಿಕ್ಕನ್, ಹಂದಿ ಮಾಂಸ ಮತ್ತು ಮೀನಿನಲ್ಲಿ ಹೆಚ್ಚಾಗಿ ಇರುತ್ತದೆ.

ಇಷ್ಟಲ್ಲದೆ ದಿನವೂ ಒಂದು ಲೀಟರ್ ನೀರನ್ನು ಕುಡಿಯಬೇಕು, ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಹೀಗೆ ಮಾಡಿದರೆ ನೀವು ಬಯಸಿದಂತಹ ಸದೃಢವಾದ ಮೈಕಟ್ಟನ್ನು ಪಡೆಯಬಹುದು.

ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ



Lalbagh Flower Show 2012 
ಈ ವಾರ ಲಾಲ್ ಬಾಗ್ ಎಂದಿನಂತಿಲ್ಲ. ಸಸ್ಯಕಾಶಿಯ ಹೂದೋಟದ ಹೂವುಗಳು ಪುಳಕಗೊಂಡಿವೆ. ದೇವದಾರು, ತೇಗ, ಸಾಗುವಾನಿ, ಮಾವು, ನೀಲಗಿರಿ ಮರಗಳು ಗಾಜಿನ ಮನೆಯತ್ತ ಕಣ್ಣು ನೆಟ್ಟಿವೆ. ಈಗಷ್ಟೇ ಚಿಗುರಿದ ಎಲೆಚಿಗುರುಗಳು ಅಚ್ಚರಿಯ ನೋಟ ಬೀರುತ್ತಿವೆ. ಲಾಲ್ ಬಾಗ್ ಗಣರಾಜ್ಯದ ಸಂಭ್ರಮದಲ್ಲಿದೆ. ಗಾಜಿನ ಮನೆ ಫಲಪುಷ್ಪ ಅಲಂಕಾರ, ಆವಿಷ್ಕಾರಗಳಿಂದ ಮದುವಣಗಿತ್ತಿಯಂತೆ ಪೋಸ್ ನೀಡುತ್ತಿದೆ. ಲಾಲ್ ಬಾಗ್ ನೊಳಗೆ ಜಾತ್ರೆಯ ಗೌಜುಗದ್ದಲ ಕೇಳಿಬರುತ್ತಿದೆ.

ಭಾನುವಾರ (ಜ.22) ಡಬಲ್ ರೋಡ್, ಜಯನಗರ ಬಳಿ ದಿನನಿತ್ಯ ನೋಡುತ್ತಿದ್ದ ಟ್ರಾಫಿಕ್ ಪೊಲೀಸರು ಲಾಲ್ ಬಾಗ್ ಒಳಗಡೆ ವಾಹನ ಪಾರ್ಕಿಂಗ್ ಮಾಡಿಸುವಲ್ಲಿ ಬ್ಯುಸಿಯಾಗಿದ್ದರು. ಹೆಚ್ಚಿನ ಬೆಂಗಳೂರಿಗರೂ ಎಲ್ಲಾ ಕೆಲಸ ಕಾರ್ಯಕ್ರಮವನ್ನು ಬಿಟ್ಟು ಲಾಲ್ ಬಾಗ್ ಫಲಪುಷ್ಪ ಸೊಬಗು ನೋಡಲು ಆಗಮಿಸಿದ್ದರು. ಗಾಜಿನ ಮನೆಯ ಹೊರಭಾಗದಲ್ಲಿ ಚೆಂಡು ಹೂವುಗಳು, ಬಣ್ಣ ಬಣ್ಣದ ಬಗೆಬಗೆ ಜಾತಿ ಹೂವುಗಳು ನಗೆ ಬೀರುತ್ತಿದ್ದವು.

ಸಸ್ಯಕಾಶಿಯ ಗಾಜಿನ ಮನೆಯೊಳಗೆ ರಾಶಿರಾಶಿ ಜನರು ಸಾಲು ಸಾಲಾಗಿ ಹೋಗುತ್ತಿದ್ದರು. ಕ್ಯಾಮರಾ, ಪರ್ಸ್, ಮೊಬೈಲ್ ಹುಷಾರಾಗಿ ನೋಡಿಕೊಳ್ಳಿ ಅಂತ ಅನೌನ್ಸ್ ಕೇಳಿಬರುತ್ತಿತ್ತು. ಪೊಲೀಸರಂತೂ ಹೂವುಗಳನ್ನು ಕಾಯುವುದರಲ್ಲಿ ಸುಸ್ತಾಗಿದ್ದರು. ಪಕ್ಕಕ್ಕೆ ಬರ್ರಿ, ಹೂಹಾಸಿಗೆ ತುಳಿಯಬೇಡ್ರಿ, ಫೋಟೊ ತೆಗಿತಾ ನಿಲ್ ಬ್ಯಾಡ್ರಿ.. ಮುಂದೆ ಹೋಗ್ರಿ" ಅಂತ ಬೊಬ್ಬೆಗಳು ಕೇಳಿಬರುತ್ತಿದ್ದವು. ದುಂಬಿಗಳಂತೆ ಹೂವಿನ ಮನೆಯ ಸುತ್ತ ಜನಸಾಗರ ಮುತ್ತಿತ್ತು.

"ಬುದ್ಧನ ಪ್ರತಿಮೆ ಮತ್ತು ಗುಹೆಯಿಂದ ನೀರು ಬೀಳುವಂತೆ ಹೂ ನದಿ ವಿನ್ಯಾಸ ಮಾಡಿದ್ದು ತುಂಬಾ ಇಷ್ಟವಾಯಿತು" ಎಂದು ಮುನೇಶ್ವರ ಬ್ಲಾಕಿನ ಕೃಷ್ಣಕುಮಾರಿ ಹೇಳಿದಾಗ ಅವರ ಪಕ್ಕದಲ್ಲಿದ್ದ 15 ವರ್ಷದ ನೇತ್ರ "ಕಳೆದ ವರ್ಷದ ಪ್ರದರ್ಶನಕ್ಕಿಂತಲೂ ಸೂಪರ್" ಎಂಬ ಕಾಂಪ್ಲಿಮೆಂಟ್ ಕೊಟ್ಟಳು. "ರಷ್ ನಲ್ಲಿ ಒಮ್ಮೆ ಹಾಗೆ ಹೋಗಿ ಬಂದೆ. ಈಗ ಎರಡನೇ ಸಾರಿ ಗಾಜಿನ ಮನೆಗೆ ಪ್ರವೇಶಿಸುತ್ತಿದ್ದೇನೆ" ಎಂದು ಕಾಕ್ಸ್ ಟೌನ್ ನಿವಾಸಿ ನಬಿಹಾ ಹೇಳಿದ್ದು ಸುಳ್ಳಲ್ಲ. ಅಲ್ಲಿನ ರಷ್, ತಳ್ಳಾಟ ನೋಡಿ ಶಾಂತಮೂರ್ತಿ ಹೂವಿನ ಬುದ್ಧನಿಗೂ ಕಸಿವಿಸಿಯಾಗಿದ್ದಿರಬಹುದು.

ಹೆಚ್ಚು ಗಮನ ಸೆಳೆಯುತ್ತಿದ್ದದ್ದು ದಕ್ಷಿಣ ಕೊರಿಯಾ ಮಾದರಿಯ 30 ಅಡಿ ಎತ್ತರದ ಬುದ್ಧ ಸ್ತೂಪ ಮತ್ತು ಹೂನದಿ. 50 ಲಕ್ಷ ಗುಲಾಬಿ, 1.50 ಲಕ್ಷ ಕಾರ್ನೇಷನ್, 25 ಸಾವಿರ ಆರ್ಕಿಡ್ಸ್ ಹೂವು ಗೊಂಚಲು, ಡ್ರಸಿನಾ, ಲೆದರ್ ಲೀಫ್, ಮೈಸೂರು ಮಲ್ಲಿಗೆ, ಸುಗಂಧ ರಾಜ ಹೀಗೆ ನಾನಾ ಬಗೆಯ ಹೂವುಗಳಿಂದ ನಿರ್ಮಿಸಲಾಗಿದೆ. ಹೂ ನದಿ ಕೂಡ ಪ್ರಮುಖ ಆಕರ್ಷಣೆ. ಗುಹೆ ಆಕಾರದ ಹೂವಿನ ವಿನ್ಯಾಸದಿಂದ ನೀರು ಹರಿದು ಬರುವಂತೆ ವಿನ್ಯಾಸ ಮಾಡಿದ್ದು ಎಲ್ಲರ ಗಮನಸೆಳೆಯಿತು. ಉಳಿದಂತೆ ಗಾಜಿನ ಮನೆಯ ಮೂಲೆ ಮೂಲೆ ಬಿಡದಂತೆ ಹೂವಿನ ನವಿಲು, ಪಕ್ಷಿಗಳು, ಹೂಗೊಂಚಲುಗಳು, ಚಿತ್ತಾರಗಳು ಆವರಿಸಿದ್ದವು.

ಗಾಜಿನ ಮನೆ ಮಾತ್ರವಲ್ಲದೇ ಹೊರಭಾಗದಲ್ಲಿದ್ದ ಸಾಲು ಸಾಲು ಮಳಿಗೆಗಳಲ್ಲೂ ವ್ಯವಹಾರ ಜೋರಾಗಿತ್ತು. ಚಟ್ನಿಪುಡಿಯಿಂದ ಹಿಡಿದು ಕರಕುಶಲ ವಸ್ತುಗಳು ಲಭಿಸುತ್ತಿದ್ದವು. ಲಾಲ್ ಬಾಗ್ ಕೆರೆಯಲ್ಲಿದ್ದ ಹೂವಿನ ತೆಪ್ಪ ಕೂಡ ಆಕರ್ಷಕ. ನಮಗೆ ಸಿಕ್ಕ ಮಾಹಿತಿ ಪ್ರಕಾರ ಭಾನುವಾರ ಒಂದು ಲಕ್ಷಕ್ಕಿಂತಲೂ ಹೆಚ್ಚು ಜನರು ಲಾಲ್ ಬಾಗ್ ಗೆ ಭೇಟಿ ನೀಡಿದ್ದರು. ಆರಂಭದ ಎರಡು ದಿನಗಳಲ್ಲಿ ಸುಮಾರು 50 ಸಾವಿರ ಜನರು ಭೇಟಿ ನೀಡಿದ್ದಾರಂತೆ.

ಲಾಲ್ ಬಾಗ್ ಫಲಪುಷ್ಪ ಪ್ರದರ್ಶನದ ಟಿಕೇಟ್ ದರ ಒಬ್ಬರಿಗೆ 50 ರುಪಾಯಿ. ತಲಾ ಇಬ್ಬರಿಗೆ 90 ರುಪಾಯಿ. ಈ ಪ್ರದರ್ಶನ ಜನವರಿ 29ಕ್ಕೆ ಕೊನೆಗೊಳ್ಳಲಿದೆ. ಗಣರಾಜ್ಯದಂದು ಮತ್ತು ಕೊನೆಯ ದಿನ ಲಕ್ಷಕ್ಕಿಂತ ಹೆಚ್ಚು ಜನರು ಭೇಟಿ ನೀಡುವ ನಿರೀಕ್ಷೆಯಿದೆ. ಹೂವಿನಲ್ಲಿ ಹುಳಗಳಿರುವಂತೆ ಫಲಪುಷ್ಪ ಪ್ರದರ್ಶನಕ್ಕೆ ಕಿಸೆ ಕಳ್ಳರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರಂತೆ. ಸೇಫ್ ಆಗಿ ಹೋಗಿಬನ್ನಿ. ನೂರು ವರ್ಷದ ಇತಿಹಾಸ ಹೊಂದಿರುವ ಹೂವಿನ ಪ್ರದರ್ಶನ ಮಿಸ್ ಮಾಡಿಕೊಳ್ಳಬೇಡಿ. ಅಲ್ಲಿಗೆ ಹೋಗುವ ಮುನ್ನ ಈ ಗ್ಯಾಲರಿ ಲೋಕಕ್ಕೆ ಭೇಟಿ ನೀಡಿ ಕಣ್ಮನ ತಂಪಾಗಿಸಿಕೊಳ್ಳಿ.

Pink Floyd - Wish You Were Here