ಪುಟಗಳು

ಚಾರಣಪ್ರಿಯರಿಗೆ ಹೇಳಿ ಮಾಡಿಸಿದ ಮಾಕಳಿ ಬೆಟ್ಟ - ಪ್ರಜಾವಾಣಿ ವಾರ್ತೆ

ದೊಡ್ಡಬಳ್ಳಾಪುರ: ತಾಲ್ಲೂಕಿನ ಪ್ರಸಿದ್ಧ ಬೆಟ್ಟಗಳಲ್ಲಿ ಒಂದಾಗಿರುವ ಮಾಕಳಿ ದುರ್ಗ ಅಥವಾ ದೊಡ್ಡಬೆಟ್ಟ ಶಿವನ ಭಕ್ತರಿಗೆ ಹಾಗೂ ಚಾರಣ ಪ್ರಿಯರಿಗೆ ಅಚ್ಚು ಮೆಚ್ಚಿನ ತಾಣವಾಗಿದೆ. ಸಾಸಲು ಹೋಬಳಿಯ ಗುಂಡಮಗೆರೆ ಸಮೀಪದಲ್ಲಿರುವ ಈ ಮಾಕಳಿ ಬೆಟ್ಟ ಹತ್ತಲು ಯಾವುದೇ ಮೆಟ್ಟಿಲುಗಳ ಸೌಲಭ್ಯ ಇಲ್ಲ.

ಸುಮಾರು 2.5 ಕಿ.ಮೀ ಎತ್ತರದ ಬೆಟ್ಟವನ್ನು ಒಂದೂವರೆ ಗಂಟೆ ಸಮಯದಲ್ಲಿ ಹತ್ತ ಬಹುದಾಗಿದೆ. ಅಷ್ಟೇನು ಕಡಿದಾಗಿಲ್ಲ. ಗುಂಡಮಗೆರೆ ಗ್ರಾಮದ ಕಡೆಯಿಂದ ಹತ್ತಲು ಒಂದಿಷ್ಟು ಸುಲಭವಾದ ಕಾಲು ಮಾರ್ಗ ಇದೆ.
ಬೆಟ್ಟಕ್ಕೆ ಹತ್ತುವಾಗ ನವಿಲು, ನರಿ, ಕಾಡು ಕೋಳಿ, ಮೊಲ ಸೇರಿದಂತೆ ಸಣ್ಣಪುಟ್ಟ ಕಾಡು ಪ್ರಾಣಿಗಳು ಕಣ್ಣಿಗೆ ಬೀಳುತ್ತವೆ.
ಬೆಟ್ಟದ ಮೇಲೆ ಪಾಳೆಗಾರರು ನಿರ್ಮಿಸಿದ್ದ ಕೋಟೆ ಇದೆಯಾದರೂ ಈಗ ಅದು ನಾಶವಾಗಿದೆ. ಮಳೆ ಬಂದರೆ ರಕ್ಷಣೆ ಪಡೆಯಲು ಹಾಗೂ ಅಡುಗೆ ಮಾಡಿಕೊಂಡು ಕುಳಿತು ಊಟ ಮಾಡಲು ಕೋಟೆಯಲ್ಲಿ ಸ್ಥಳಾವಕಾಶವಿದೆ. 
`ಕೋಟೆಯ ಒಳ ಭಾಗದಲ್ಲೇ ಕುಡಿಯುವ ನೀರಿಗಾಗಿ ಬಂಡೆಗಳ ಮಧ್ಯದಲ್ಲೇ ನಿರ್ಮಿಸಲಾಗಿರುವ ಹಾಲು ಬಾವಿ, ನೀರು ಬಾವಿ ಹೆಸರಿನ ಎರಡು ಕೊಳಗಳು ಇವೆ. ಇದಲ್ಲದೆ ಕೋಟೆ ಹೊರ ಭಾಗದ ಬೃಹತ್ ಬಂಡೆಯಲ್ಲಿ ಹನುಮನ ದೊಣೆ ಕೂಡ ಇದೆ. ಈ ದೊಣೆಯಲ್ಲಿ ಬೇಸಿಗೆ ಮಳೆಗಾಲ ಸೇರಿದಂತೆ ಎಂತಹ ಬರಗಾಲದಲ್ಲೂ ನೀರು ಇದ್ದೇ ಇರುತ್ತದೆ~ ಎನ್ನುತ್ತಾರೆ ಮಾಕಳಿ ಬೆಟ್ಟದಲ್ಲಿನ ಕಾಡುಮಲ್ಲೇಶ್ವರ ಸ್ವಾಮಿ ದೇವಾಲಯದ ಭಕ್ತ ಎಂ.ದೇವರಾಜ್.
ಕಾರ್ತೀಕ ಮಾಸ ಹಾಗೂ ಮಹಾ ಶಿವರಾತ್ರಿ ಸಂದರ್ಭಗಳಲ್ಲಿ ಕಾಡುಮಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಈ ಸಂದರ್ಭದಲ್ಲಿ ಮಾಕಳಿ ಬೆಟ್ಟದಲ್ಲಿ ತಾಲ್ಲೂಕಿನ ಜನರಷ್ಟೇ ಅಲ್ಲದೆ ದೂರದ ತುಮಕೂರು, ಗೌರಿಬಿದನೂರು, ಬೆಂಗಳೂರು ಸೇರಿದಂತೆ ಹತ್ತಾರು ಕಡೆಗಳಿಂದ ಸಾವಿರಾರು ಜನ ಶಿವಭಕ್ತರು ಕಾಡುಮಲ್ಲೇಶ್ವರನ ದರ್ಶನಕ್ಕೆ ಆಗಮಿಸುತ್ತಾರೆ.
ಮಾಕಳಿ ದುರ್ಗದಲ್ಲಿ ಒಂದು ರಾತ್ರಿ ತಂಗಿದ್ದರೆ ಮಾತ್ರ ಪ್ರಕೃತಿ ಸೌಂದರ್ಯದ ಸವಿಯನ್ನು ಮನದಣಿಯೆ ಕಣ್ಣು ತುಂಬಿಕೊಳ್ಳಬಹುದು. ಬೆಳಿಗ್ಗೆ ಸೂರ್ಯ ಉದಯಿಸುವ ಹಾಗೂ ಮಾಕಳಿ ದುರ್ಗದ ಸುತ್ತಲಿನ ಬೆಟ್ಟಗಳ ಸಾಲಿನಿಂದ ಕೇಳಿ ಬರುವ ನವಿಲುಗಳ ಇಂಪಾದ ಕೂಗು ಎಂತಹವರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.
ಚಾರಣಿಗರಿಗೆ ಬೆಟ್ಟದ ಮೇಲೆ ಕುಡಿಯಲು ನೀರು, ಉಳಿದುಕೊಳ್ಳಲು ಕೋಟೆ ಒಳಗೊಂದಿಷ್ಟು ಜಾಗ ಬಿಟ್ಟರೆ ಉಳಿದ ಎಲ್ಲ ಊಟದ ಸಾಮಗ್ರಿಗಳನ್ನು ಕೊಂಡೊಯ್ಯಬೇಕು. ಬೆಳಕಿಗಾಗಿ ಮೆಣದ ಬತ್ತಿಗಳನ್ನು ತೆಗೆದುಕೊಂಡು ಹೋದರೆ ಒಳಿತು. ಬೆಟ್ಟದ ಮೇಲೆ ವಿದ್ಯುತ್ ಸೌಲಭ್ಯ ಇಲ್ಲ.
ಮಾಕಳಿ ದುರ್ಗ ಬೆಟ್ಟಕ್ಕೆ ಚಾರಣ ಹೋಗಲು ಇಂತಹದ್ದೇ `ಕಾಲ~ ಸೂಕ್ತ ಎನ್ನುವಂತೇನೂ ಇಲ್ಲ. ಮಳೆಗಾಲ, ಚಳಿಗಾಲ ಬೇಸಿಗೆ ಯಾವುದೇ ಸಮಯದಲ್ಲಿ ಚಾರಣ ಹೊರಟರು ಒಂದೊಂದು ರೀತಿಯ ಅನುಭವಗಳನ್ನು ಪಡೆಯಬಹುದಾಗಿದೆ.
 

ದೀಪಾವಳಿ ಹಬ್ಬದ ಶುಭಾಶಯಗಳು


ಸಮಸ್ತ ಕನ್ನಡಿಗರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

ಭವಿಷ್ಯೋತ್ತರ ಪುರಾಣದಲ್ಲಿ (೧೪೦-೭೧) ಹೇಳಿರುವ ಉಕ್ತಿ ಹೀಗಿದೆ
ಉಪಶಮಿತ ಮೇಘನಾದಂ
ಪ್ರಜ್ವಲಿತ ದಶಾನನಂ ರಮಿತರಾಮಂ|
ರಾಮಾಯಣಮಿದಂ ಸುಭಗಂ
ದೀಪದಿನಂ ಹರತು ವೋ ದುರಿತಂ||

devi1.JPG
ರಾಮಾಯಣದಲ್ಲಿ ಮೇಘನಾಥನು (ಇಂದ್ರಜಿತು) ಶಾಂತನಾಗುವಂತೆ ಈ ಮಹೋತ್ಸವದಲ್ಲಿ ಮೇಘನಾದವು (ಗುಡುಗು) ಶಾಂತವಾಗಿಬಿಟ್ಟಿರುತ್ತದೆ. ರಾಮಾಯಣದಲ್ಲಿ ದಶಮುಖರಾವಣನು ಸುಡಲ್ಪಡುವಂತೆ ಇದರಲ್ಲಿ ದಶೆ(ಬತ್ತಿ)ಗಳನ್ನು ಉರಿಸಲ್ಪಡುವುದು. ಅಲ್ಲಿ ರಾಮನು ರಮಿಸುವಂತೆ ಇಲ್ಲಿ ಶ್ರೀರಾಮನೂ ಮತ್ತು ರಮಣಿಯರೂ ರಮಿಸುತ್ತಾರೆ. ಹೀಗೆ ರಾಮಾಯಣದಂತೆ ರಮಣೀಯವಾಗಿರುವ ದೀಪಾವಳಿ ಮಹೋತ್ಸವ ದಿನವು ನಮ್ಮ ಹಾಗೂ ನಿಮ್ಮ ಪಾಪಗಳನ್ನು ಹೋಗಲಾಡಿಸಲಿ.
ನಮ್ಮ ದೇಶದಲ್ಲಿ ಅಲ್ಲದೇ ಅಕ್ಕ ಪಕ್ಕದ ದೇಶಗಳಲ್ಲೆಲ್ಲಾ ಅತ್ಯಂತ ವಿಜೃಂಭಣೆಯಿಂದ ಆಚರಿಸಲ್ಪಡುವ ಕೆಲವೇ ಹಬ್ಬಗಳಲ್ಲಿ, ದೀಪಾವಳಿಯೂ ಮುಖ್ಯವಾದುದು. ಇದನ್ನು ನಾಡಹಬ್ಬವಾಗಿಯೂ ಆಚರಿಸುವ ಸಂಪ್ರದಾಯವುಂಟು.
ದೀಪಗಳ ಆವಳಿ – ಸರಮಾಲೆ – ದೀಪಗಳ ಸಾಲು ಎಂದರ್ಥ. ಕಾರ್ತಿಕ ಮಾಸದ ಕಡೆಯಲ್ಲಿ ಮನೆ ಮಂದಿರಗಳಲ್ಲಿ ಕಾರ್ತೀಕ ದೀಪೋತ್ಸವ, ಶಿವ ದೀಪೋತ್ಸವ ಮತ್ತು ವಿಷ್ಣು ದೀಪೋತ್ಸವಗಳೆಂದು ಕರೆದು ಎಲ್ಲೆಡೆ ದೀಪಗಳನ್ನು ಸಾಲು ಸಾಲಾಗಿ ಹಚ್ಚಿಡುವರು. ಮುಂದೆ ಕಾರ್ತೀಕ ದೀಪೋತ್ಸವದಲ್ಲಿ ದೀಪಗಳನ್ನು ಬೆಳಗಿಸುವ ಸಮಾರಂಭಕ್ಕೆ ದೀಪಾವಳಿಯು ನಾಂದಿಯಾಗಿರುತ್ತದೆ. ದೀಪಾವಳಿ ಉತ್ಸವದಲ್ಲಿ ಮಹಾವಿಷ್ಣುವಿನ ಪೂಜೆ, ನರಕಾಸುರನ ವಧೆ, ಬಲೀಂದ್ರ ವಿಜಯದ ಪೂಜೆ, ಮಹಾಲಕ್ಷ್ಮಿಯ ಪೂಜೆ, ಮಹಾದೇವನ ಪೂಜೆ, ಮಹಾರಾತ್ರಿಯ ಪೂಜೆ, ಕುಬೇರನ ಪೂಜೆ, ಯಮಧರ್ಮರಾಜನ ಪೂಜೆ, ಗೋವಿನ ಪೂಜೆ ಮತ್ತು ಗೋವರ್ಧನ ಪೂಜೆಗಳನ್ನೂ ಮಾಡುವರು. ಈ ಸಮಯದಲ್ಲಿ ಪಶು ಪ್ರಾಣಿಗಳಿಗೂ ಪೂಜೆಯಲ್ಲಿ ಆದ್ಯತೆ ನೀಡಲಾಗುವುದು. ಇಷ್ಟಲ್ಲದೇ ಇದೇ ಸಮಯದಲ್ಲಿ ದೀಪದಾನವನ್ನೂ ನಡೆಸುವರು. ಇಷ್ಟಲ್ಲದೇ ವಿಶೇಷ ದಿನಗಳಲ್ಲಿ ಆಯಾ ಪ್ರಾಂತ್ಯಗಳಲ್ಲಿ ಆಚರಣೆಯಲ್ಲಿರುವ ಕೌಮುದೀ ಮಹೋತ್ಸವ, ನರಕ ಚತುರ್ದಶೀ, ಬಲಿಪಾಡ್ಯಮಿ, ವೀರಪ್ರತಿಪದಾ, ಭಗಿನೀ ದ್ವಿತೀಯಾ (ಬಿಹಾರ ಉತ್ತರ ಪ್ರದೇಶಗಳಲ್ಲಿ ಭಾವುದೂಜ್), ಸೋದರ ಬಿದಿಗೆ (ಮಹಾರಾಷ್ಟ್ರದಲ್ಲಿ ಭಾವುಬೀಜ್) ಇತ್ಯಾದಿ ಹಬ್ಬಗಳನ್ನು ಆಚರಿಸುವರು.