ಪುಟಗಳು

ಶೋಷಕರೇ ಶೋಷಿತರಿಗೆ ಹಿತವಚನ ನೀಡುವುದು ಈ ದೇಶದ ಬುದ್ಧಿಜೀವಿಗಳ ಫ್ಯಾಷನ್

`ವಿಮರ್ಶಕ ಜಿ.ಎಚ್.ನಾಯಕರು ಶೋಷಕ ವರ್ಗದಿಂದ ಬಂದವರು. ಅವರ ಹೆಸರೇ ಜಾತಿ ಸೂಚಿತವಾದದ್ದು. ಅವರು ಸವರ್ಣೀರಾದ್ದರಿಂದ ಅವರು ಎಂದೂ ಅವರ ಜನಾಂಗದ ಬಗ್ಗೆ ಹೇಳುವುದಿಲ್ಲ. ಶೋಷಕರೇ ಶೋಷಿತರಿಗೆ ಹಿತವಚನ ನೀಡುವುದು ಈ ದೇಶದ ಬುದ್ಧಿಜೀವಿಗಳ ಫ್ಯಾಷನ್
`ಹಣದ ವಿಚಾರದಲ್ಲಿ ದೇವನೂರು ಮಹಾದೇವ ಪ್ರಾಮಾಣಿಕನಲ್ಲ. ಆತ ಪಡೆದ ಹಣಕ್ಕೆ ಲೆಕ್ಕವಿಲ್ಲ. ಶಿಸ್ತು ಮೊದಲೇ ಇಲ್ಲ. ಈ ವ್ಯಕ್ತಿ ಮತ್ತೊಬ್ಬರ ಮೇಲೆ ಗೂಬೆ ಕೂರಿಸಿ ತನ್ನ ಅಪ್ರಾಮಾಣಿಕತೆಯನ್ನು ಮುಚ್ಚಿಕೊಳ್ಳಲು ಸದಾ ಪ್ರಯತ್ನಿಸುತ್ತಾರೆ. ದೇವನೂರು ಮಹಾದೇವ ಎಷ್ಟು ದಲಿತರಿಂದ ಹಣ ಪಡೆದುಕೊಂಡಿದ್ದಾರೆ ಎಂಬುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಬೇಕು‘ (ಪು 94-95) ಎಂದು ನೇರವಾಗಿ ಬರೆಯುವ ಮುನಿವೆಂಕಟಪ್ಪ ಯಾವುದೇ ಮುಲಾಜುಗಳಿಲ್ಲದೆ ಬರೆದ ಬರಹಗಳು ಇಲ್ಲಿವೆ.
ದಲಿತ ಚಿಂತಕರಲ್ಲಿ ಒಬ್ಬರಾದ ಡಾ.ಮುನಿವೆಂಕಟಪ್ಪ ಇಲ್ಲಿ ಮಾಡಿರುವುದು ಸಾಹಿತ್ಯದ ವಿಮರ್ಶೆಗಿಂತ ಹೆಚ್ಚಾಗಿ ದಲಿತರ ಚಾರಿತ್ರಿಕ ವಿಮರ್ಶೆ. ಇಲ್ಲಿನ ಲೇಖನಗಳಲ್ಲಿ ಮುಖ್ಯವಗಿ ದಲಿತ ಚಳವಳಿ ಹಾಗೂ ಸಾಹಿತ್ಯ ಚರ್ಚೆಯಾಗಿದೆ. ವೆಂಕಟಪ್ಪನವರ ಈ ಚಿಂತನೆಗಳಲ್ಲಿ ಒಂದು ನೈತಿಕವಾದ ಆಕ್ರೋಶ ಇರುವುದನ್ನು ನಾವು ಕಾಣಬಹುದು. ಇದು ಅನೇಕ ದೊಡ್ಡವರು ಎನ್ನಿಸಿಕೊಂಡವರ ತಪ್ಪು ನಿಲುವುಗಳಿಗೆ ಪ್ರತಿಯಾಗಿ ಹುಟ್ಟಿಕೊಂಡ ಸಿಟ್ಟು. ಈ ಸಿಟ್ಟಿನ ಹಿಂದೆ ನೋವು ಇದೆ ಎಂಬುದನ್ನು ಮರೆಯುವಂತಿಲ್ಲ. ಇದಕ್ಕೆ ಉದಾಹರಣೆಯಾಗಿ ಕವಿ ಸಿದ್ದಲಿಂಗಯ್ಯ ಅವರು `ನನ್ನನ್ನು ದಲಿತ ಕವಿ ಎಂದು ಕರೆಯಬೇಡಿ, ಕನ್ನಡದ ಕವಿ ಎಂದು ಕರೆಯಿರಿ ಎಂದು ಕೇಳಿಕೊಂಡಿರುವುದನ್ನು, ದಲಿತರು ತಾವು ನಡೆದುಬಂದ ದಾರಿಯನ್ನು ಹಿಂತಿರುಗಿ ನೋಡಲು ಸಿದ್ಧರಿಲ್ಲದಿರುವುದನ್ನು ತೋರಿದ್ದಾರೆ. (ಪು.28) ಇಂಥ ಅನೇಕ ಸಂದರ್ಭಗಳನ್ನು ಮುನಿವೆಂಕಟಪ್ಪನವರು ಇಲ್ಲಿನ ಪುಟಗಳಲ್ಲಿ ತೆರೆದಿಟ್ಟಿದ್ದಾರೆ. ಇದರೊಂದಿಗೆ ದೇವನೂರು ಮಹದೇವ, ಮೊಗಳ್ಳಿ ಅಂಥವರನ್ನು ಏಕವಚನದಲ್ಲಿ ಕರೆದು ಸಂಯಮ ಕಳೆದುಕೊಳ್ಳುತ್ತಾರೆ.
ಈ ಬಗೆಯ ನೈತಿಕ ಸಿಟ್ಟುಗಳು ಅವರಲ್ಲಿವೆ. ಅಂತಹ ಸಂಗತಿಗಳ ಬಗ್ಗೆ ನೇರವಾಗಿ, ಆಧಾರಸಹಿತವಾಗಿ ಹೇಳಿದ್ದಾರೆ. ಆದರೆ, ಒಂದೆಡೆ (ಮೈಸೂರು ಜಿಲ್ಲೆಯ ದಲಿತ ಬಂಡಾಯ ಸಾಹಿತ್ಯಿಕ ಹಿರಿಮೆ) ಕಥೆಗಾರ ಮೊಗಳ್ಳಿ ಗಣೇಶರ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿದ `ದಲಿತ ಕಥನದ ಬಗ್ಗೆ ಬರೆಯುತ್ತ ಮೊಗಳ್ಳಿವರು ಮಾಡುವ ಸುಳ್ಳು ಉಲ್ಲೇಖಗಳನ್ನು, ಲೇಖಕರ ನಡುವೆ `ಒಬ್ಬರ ಮೇಲೆ ಒಬ್ಬರನ್ನು ಎತ್ತಿಕಟ್ಟುವ, ಸಲ್ಲದ ವಿಚಾರಗಳನ್ನು ಬರೆಯುವ ಸಾಹಿತಿಗಳನ್ನು, ಅಂಥವನ್ನು ಪ್ರಕಟಿಸುವ ವಿಶ್ವವಿದ್ಯಾಲಯದ ಪ್ರಸಾರಾಂಗವನ್ನು ಏನೆಂದು ಕರೆಯಬೇಕು?’ ಎಂದು ಕೇಳಿದ್ದಾರೆ. ಈವರೆಗೆ ಲೇಖಕರ ಪ್ರಶ್ನೆ ಸರಿಯಾಗಿಯೇ ಇದೆ. ಮುಂದುವರಿದು ಅವರು ಮೈಸೂರು ವಿಶ್ವವಿದ್ಯಾಲಯದ ಕಥೆಗಾರ ಮೊಗಳ್ಳಿ ಗಣೇಶರು ಎಂ.ಎ ತರಗತಿಯಲ್ಲಿ ಮೂರನೆಯ ದರ್ಜೆಯಲ್ಲಿ ತೇರ್ಗಡೆಯಾಗಿ ಮತ್ತೊಂದು ಎಂ.ಎ ಗೆ ಸೇರಿ ಪ್ರಥಮ ದರ್ಜೆಯಲ್ಲಿ ಪಾಸಾದುದ್ದನ್ನೂ, ಅನಂತರ ಸಂಶೋಧನೆ ನೆಪದಲ್ಲಿ 12 ವರ್ಷಗಳ ಕಾಲ ಒಂದೇ ಕೊಠಡಿಯಲ್ಲಿ ಉಳಿದುಕೊಂಡುದ್ದನ್ನು, ಮೈಸೂರು ವಿ.ವಿ.ಯಲ್ಲಿ ಓದಲು ಬರುವ ಬಡಹುಡುಗರು ಹಾಸ್ಟೇಲ್ನಲ್ಲಿ ರೂಮಿಗಾಗಿ ಪರದಾಡುತ್ತಿರುವುದನ್ನು ನೋಡಿಯೂ ಮುಜುಗರಕ್ಕೆ ಅವರು ಒಳಗಾಗದಿರವುದನ್ನೂ, `ಆತನನ್ನು ಓಡಿಸಿ ನಿಜವಾದ ಅರ್ಹ ಬಡ ವಿದ್ಯಾರ್ಥಿಗಳಿಗೆ ಆ ಜಾಗ ಸಿಗುವಂತಾಗುವಂತೆ ಮಾಡಲು ಸಾಹಸ ಪಡಬೇಕಾಯಿತುಎಂದು ಬರೆಯುತ್ತಾರೆ. ಮೊಗಳ್ಳಿಯವರ ಕೃತಿಯೊಂದಿಗೆ ಅವರ ಈ ಉಲ್ಲೇಖ ಅಗತ್ಯ ಇತ್ತು ಎಂದು ಅನಿಸುವುದಿಲ್ಲ. ಆದರೂ, ಈ ಪುಸ್ತಕ ಸಾಕಷ್ಟು ಚರ್ಚೆಗಳನ್ನು ದಲಿತ ಸಾಹಿತ್ಯ, ಚಳವಳಿಗಳ ಕುರಿತು ಮಾಡುತ್ತದೆ ಎಂಬುದು ಮಹತ್ವದ ಸಂಗತಿ.
ಶೀರ್ಷಿಕೆ: ದಲಿತ ಚಳವಳಿ ಮತ್ತು ಸಾಹಿತ್ಯ  ಲೇಖಕರು: ಡಾ.ವಿ.ಮುನಿವೆಂಕಟಪ್ಪ ಪ್ರಕಾಶಕರು: ಎಸ್.ಎಸ್.ಪ್ರಕಾಶನ ಪುಟಗಳು:128 ಬೆಲೆ:ರೂ.65/-

ಇಂಡೋನೇಶಿಯಾದ ಎಳೆಯ ಬರಹಗಾರ್ತಿಯ ಸರಳ ಕತೆಗಳು

೧೯೫೨ ರಲ್ಲಿ ದಾವಣಗೆರೆಯಲ್ಲಿ ಡಾ.ರಾಜ್ ಕುಮಾರ್

ವಿದ್ಯುನ್ಮಾನ ಮತಯಂತ್ರ ನಿಮಗಿದು ಗೊತ್ತೇ ?

Electronic Voting machine, ವಿದ್ಯುನ್ಮಾನ ಮತಯಂತ್ರ, ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್,ಭಾರತವು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿದ ರಾಷ್ಟ್ರವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವತ್ರಿಕ ಚುನಾವಣೆಗಳು ಮಹತ್ತರ ಪಾತ್ರ ವಹಿಸಲಿವೆ. ಕೋಟ್ಯಾಂತರ ಮತದಾರರಿರುವ ನಮ್ಮ ರಾಷ್ಟ್ರದಲ್ಲಿ ಸಾರ್ವತ್ರಿಕ ಚುನಾವಣೆ ನಡಸುವುದು ಹರಸಾಹಸದ ಕೆಲಸ. ಅನಕ್ಷರಸ್ಥ ಮತದಾರರು, ಗುಡ್ಡಗಾಡುಗಳಲ್ಲಿ ಮತಗಟ್ಟೆಗಳನ್ನು ಸ್ಥಾಪಿಸುವ ಪರಿಸ್ಥಿತಿ, ತಿರಸ್ಕೃತ ಮತಗಳು, ಅಕ್ರಮ ಮತದಾನ ಹೀಗೆ ಮುಕ್ತ, ನ್ಯಾಯಸಮ್ಮತ, ಸಮರ್ಪಕ ಚುನಾವಣೆ ನಡೆಸುವಲ್ಲಿ ಹಲವಾರು ಸವಾಲುಗಳು ಎದುರಾಗುತ್ತವೆ. ಈ ಎಲ್ಲ ಸವಾಲುಗಳಿಗೆ  ಪರಿಹಾರವೆಂಬಂತೆ ಈಗ ಮತಗಟ್ಟೆಗೆ ಬಂದಿದೆ ವಿದ್ಯುನ್ಮಾನ ಮತಯಂತ್ರ. ಜೀವನದ ಎಲ್ಲ ಕ್ಷೇತ್ರಗಳಲ್ಲೂ ವ್ಯಾಪಿಸಿರುವ ವಿದ್ಯುನ್ಮಾನ ಸಾಧನಗಳು ಈಗ ಮತಗಟ್ಟೆ ಪ್ರವೇಶಿಸಿದೆ. ಈ ವಿದ್ಯುನ್ಮಾನ ಮತಯಂತ್ರದ ಕಾರ್ಯನಿರ್ವಹಣೆಯ ಪರಿಚಯ ಇಲ್ಲಿದೆ.
ಹಿನ್ನೆಲೆ ಮತ್ತು ವಿವರಣೆ:    ನಮ್ಮ ದೇಶದಲ್ಲಿ ೧೯೫೨ ರಿಂದ ೧೯೯೯ರವರೆಗೆ ನಡೆದ ಎಲ್ಲ ಸಾರ್ವತ್ರಿಕ ಚುನಾವಣೆ ಹಾಗೂ ಉಪಚುನಾವಣೆಗಳಲ್ಲಿ ಮತಪತ್ರಗಳ ಮೂಲಕ ಮತದಾನ ಮಾಡುವ ವ್ಯವಸ್ಥೆ ಇತ್ತು. ನಂತರ ನಡೆದ ಕೆಲ ಸಾರ್ವತ್ರಿಕ ಹಾಗೂ ಉಪಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ ಬಳಕೆಯಾದರೂ ೨೦೦೪ರಲ್ಲಿ ಜರುಗಿದ ಲೋಕಸಭಾ ಹಾಗೂ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ವಿಧಾನಸಭಾ ಸಾರ್ವತ್ರಿಕ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಯಿತು. ಅದೇ ರೀತಿ ಕರ್ನಾಟಕ ರಾಜ್ಯದಲ್ಲಿ ಜರುಗಿದ ೨೦೦೮ರ ವಿಧಾನಸಭಾ ಚುನಾವಣೆಯಲ್ಲಿಯೂ ಈ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಯಿತು. ದೇಶದಾದ್ಯಂತ ಈಗ ೧೫ನೇ ಲೋಕಸಭಾ ಚುನಾವಣೆಯ ಪ್ರಕ್ರಿಯೆ ಪ್ರಾರಂಭವಾಗಿದ್ದು, ಈ ಚುನಾವಣೆಯಲ್ಲಿಯೂ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುವುದು. ಅದರಂತೆ ಗುಲಬರ್ಗಾ ಪರಿಶಿಷ್ಟ ಜಾತಿ ಮೀಸಲು ಲೋಕಸಭಾ ಕ್ಷೇತ್ರದ ಚುನಾವಣೆಯ  ಮತದಾನ  ೨೦೦೯ರ ಏಪ್ರಿಲ್ ೨೩ ರಂದು ಬೆಳಗಿನ ೭ ರಿಂದ ಸಂಜೆ ೫ ಗಂಟೆಯವರೆಗೆ ನಡೆಯಲಿದೆ. ಗುಲಬರ್ಗಾ ಜಿಲ್ಲೆಯ ೧೩ ವಿಧಾನಸಭಾ ಕ್ಷೇತ್ರಗಳ ಪೈಕಿ ಶಹಾಪೂರ, ಶೋರಾಪೂರ (ಎಸ್.ಟಿ.), ಯಾದಗಿರ ಕ್ಷೇತ್ರಗಳು  ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಹಾಗೂ ಆಳಂದ , ಚಿಂಚೋಳಿ (ಎಸ್.ಸಿ.) ಕ್ಷೇತ್ರಗಳು ಬೀದರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುತ್ತವೆ. ಉಳಿದ ಎಂಟು ಕ್ಷೇತ್ರಗಳು ಗುಲಬರ್ಗಾ ಮೀಸಲು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೊಳಪಟ್ಟಿವೆ.   ಜಿಲ್ಲೆಯ ಮತದಾರರು ಈ ವಿದ್ಯುನ್ಮಾನ ಮತಯಂತ್ರಗಳ ಮಾಹಿತಿ ಪಡೆಯುವುದು ಅತ್ಯಗತ್ಯವಾಗಿದೆ.
          ಎಲೆಕ್ಟ್ರಾನಿಕ್ಸ್ ವೋಟಿಂಗ್ ಮೆಷಿನ್ ಎಂಬ ವಿದ್ಯುನ್ಮಾನ ಮತಯಂತ್ರವು ದೊಡ್ಡದಾದ  ಕ್ಯಾಲ್‌ಕ್ಯೂಲೇಟರ್ ಮಾದರಿಯಲ್ಲಿದೆ. ಬೆಂಗಳೂರಿನ ಬಿ.ಇ.ಎಲ್. ಮತ್ತು ಹೈದ್ರಾಬಾದಿನ ಎಲೆಕ್ಟ್ರಾನಿಕ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ೧೯೮೯-೯೦ರಲ್ಲಿ ರೂಪಿಸಿದ ಈ ವಿದ್ಯುನ್ಮಾನ ಮತಯಂತ್ರ  ಎರಡು ಘಟಕಗಳನ್ನು ಹೊಂದಿರುತ್ತದೆ. ಮತದಾರರು ತಮ್ಮ ಮತ ಚಲಾಯಿಸಲು ಬಳಸುವ ಮತದಾನ ಘಟಕವೇ (ಬ್ಯಾಲೇಟ್ ಯೂನಿಟ್) ಮೊದಲನೇ ಘಟಕ. ಮತಗಟ್ಟೆಯಲ್ಲಿ ಪ್ರಿಸೈಡಿಂಗ್ ಅಧಿಕಾರಿಗಳ ನಿಯಂತ್ರಣದಲ್ಲಿರುವ ನಿಯಂತ್ರಣ ಘಟಕವೇ (ಕಂಟ್ರೋಲ್ ಯೂನಿಟ್) ಎರಡನೆಯದು. ಗುಲಬರ್ಗಾ ಜಿಲ್ಲೆಯಲ್ಲಿ ೨೬೯೮ ಮತಗಟ್ಟೆಗಳಿದ್ದು, ೨೬೯೮ ವಿದ್ಯುನ್ಮಾನ ಮತಯಂತ್ರಗಳ ಅವಶ್ಯಕತೆ ಇದೆ. ಈಗಾಗಲೇ ೩೩೧೦ ಮತಯಂತ್ರಗಳು ಲಭ್ಯವಿದ್ದು, ಇವುಗಳನ್ನು ಮತದಾನ ಕಾರ್ಯಕ್ಕಾಗಿ ಸಜ್ಜುಗೊಳಿಸಲಾಗಿದೆ. ಈ ಪೈಕಿ ಗುಲಬರ್ಗಾ ಮೀಸಲು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ೧೬೬೨ ಮತಗಟ್ಟೆಗಳಿದ್ದು, ೧೬೬೨ ವಿದ್ಯುನ್ಮಾನ ಮತಯಂತ್ರಗಳ ಅವಶ್ಯಕತೆಯಿದೆ. ಇದಕ್ಕಾಗಿ ೨೦೩೯ ಮತಯಂತ್ರಗಳನ್ನು ಸಜ್ಜುಗೊಳಿಸಲಾಗಿದೆ.
ಮತದಾನ ಘಟಕ (ಬ್ಯಾಲೆಟ್ ಯೂನಿಟ್):     ಮತದಾನ ಘಟಕದ ನಿರ್ವಹಣೆ ಅತ್ಯಂತ ಸರಳವಾಗಿದೆ. ಆಯತಾಕಾರದ ಹಲಗೆಯ ಮಾದರಿಯಲ್ಲಿರುವ ಈ ಉಪಕರಣದಲ್ಲಿ ಒಟ್ಟು ೧೬ ಉಮೇದುವಾರರ ಹೆಸರು ಮತ್ತು ಅವರಿಗೆ ಚುನಾವಣಾ ಆಯೋಗ ನೀಡಿರುವ ಚಿಹ್ನೆಗಳನ್ನು ದಾಖಲಿಸಿಕೊಳ್ಳಬಹುದು. ಉಮೇದುವಾರರು ೧೬ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಇದರೊಂದಿಗೆ ಇನ್ನೊಂದು ಬ್ಯಾಲೆಟ್ ಯೂನಿಟ್‌ನ್ನು ಸೇರಿಸಿಕೊಳ್ಳಲಾಗುವುದು. ಒಟ್ಟು ನಾಲ್ಕು ಬ್ಯಾಲೆಟ್ ಯೂನಿಟ್‌ಗಳನ್ನು (೬೪ ಉಮೇದುವಾರರಿದ್ದಲ್ಲಿ) ಸೇರಿಸಿಕೊಳ್ಳಬಹುದು.  ಒಂದು ಮತಯಂತ್ರ ಗರಿಷ್ಠ ೩೮೪೦ ಮತಗಳನ್ನು ದಾಖಲಿಸುವ ಸಾಮರ್ಥ್ಯ ಹೊಂದಿದೆ. ಒಂದುವೇಳೆ ಮತಯಂತ್ರ ಮಧ್ಯದಲ್ಲೇ ಕೈಕೊಟ್ಟರೆ ಪರ್ಯಾಯ ಯಂತ್ರವನ್ನು ಬಳಸಲಾಗುತ್ತದೆ. ಅಲ್ಲಿಯವರೆಗೆ ಚಲಾವಣೆಯಾದ ಮತಗಳು ಹಾಳಾದ ಯಂತ್ರದಲ್ಲಿಯೇ ಸುರಕ್ಷಿತವಾಗಿರುತ್ತವೆ. ಈ ಮತಯಂತ್ರಕ್ಕೆ ವಿದ್ಯುತ್ ಬೇಕಿಲ್ಲ. ಆರು ವೋಲ್ಟಿನ ಸಾಮಾನ್ಯ ಬ್ಯಾಟರಿ ಶೆಲ್ ಸಾಕು. ಶೆಲ್ ಮುಗಿದರೆ ಅಥವಾ ಹಾಳಾದರೆ ಮತದಾಖಲೆ ಹೊಂದಿರುವ ಚಿಪ್‌ಗೆ ಯಾವುದೇ ಧಕ್ಕೆ ಆಗುವುದಿಲ್ಲ.   ಪ್ರತಿ ಉಮೇದುವಾರನ ಗುರುತಿನ ಬಲಭಾಗದಲ್ಲಿ ಒಂದು ಒತ್ತುಗುಂಡಿ ಇರುತ್ತದೆ. ಮತದಾರರು ಮತಹಾಕಲು ಬಯಸುವ ಅಭ್ಯರ್ಥಿಯ ಚಿಹ್ನೆ (ಗುರುತು) ಪಕ್ಕದಲ್ಲಿರುವ ನೀಲಿ ಗುಂಡಿಯನ್ನು ಒತ್ತಿದರೆ ಸಾಕು. ಮತದಾರರ ಮತವು ಈ ಬ್ಯಾಲೆಟ್ ಯೂನಿಟ್‌ನಲ್ಲಿ ದಾಖಲಾಗುವುದು.
ಕಂಟ್ರೋಲ್ ಯೂನಿಟ್:    ಉಮೇದುವಾರರ ಕ್ರಮ ಸಂಖ್ಯೆ ಮತ್ತು ದಾಖಲಾದ ಒಟ್ಟು ಮತಗಳನ್ನು ಅಂಕಿಗಳಲ್ಲಿ ತೋರಿಸುವ ವ್ಯವಸ್ಥೆಯನ್ನು ಈ ನಿಯಂತ್ರಣ ಘಟಕ (ಕಂಟ್ರೋಲ್ ಯೂನಿಟ್)ಹೊಂದಿದೆ. ಕಂಟ್ರೋಲ್ ಯೂನಿಟ್ಟಿನ ಕೆಳಭಾಗದಲ್ಲಿ ಯಾರಿಗೆ ಎಷ್ಟು ಮತಗಳು ಲಭಿಸಿವೆ ಎಂದು ತಿಳಿದುಕೊಳ್ಳಲು ಹಾಗೂ ಮತದಾನ ಪ್ರಾರಂಭವಾಗುವ ಮೊದಲು ಬ್ಯಾಲೆಟ್ ಯೂನಿಟ್‌ನಲ್ಲಿ ಯಾರಿಗೂ ಒಂದು ಮತವೂ ದಾಖಲಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರತ್ಯೇಕ ಗುಂಡಿಗಳಿವೆ.
ಕಾರ್ಯನಿರ್ವಹಣೆ:ಬ್ಯಾಲೆಟ್ ಯೂನಿಟ್‌ನ್ನು ಕಂಟ್ರೋಲ್ ಯೂನಿಟ್‌ದೊಂದಿಗೆ ಸಂಪರ್ಕ ಕಲ್ಪಿಸಿದ ಬಳಿಕ ಮತಯಂತ್ರ ಕಾರ್ಯನಿರ್ವಹಿಸಲು ಸಿದ್ಧವಾಗಿರುತ್ತದೆ. ಮತದಾನ ಪ್ರಾರಂಭವಾಗುವ ಮೊದಲು ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ಕರೆದು ಅವರ ಸಮ್ಮುಖದಲ್ಲಿ ಮತಯಂತ್ರದಲ್ಲಿನ ಕ್ಲಿಯರ್ ಗುಂಡಿ ಒತ್ತಿ ತೋರಿಸಲಾಗುತ್ತದೆ. ಅದುವರೆಗೆ ಯಾವ ಚಿಹ್ನೆಗೂ ಮತದಾನವಾಗಿಲ್ಲವೆಂದು ಖಾತರಿಯಾದ ಮೇಲೆ ಪಕ್ಷದ ಪ್ರತಿನಿಧಿಗಳಿಂದ ಪರಿಶೀಲಿಸಿದ ಬಗ್ಗೆ ಹಾಳೆಯಲ್ಲಿ ಸಹಿ ಪಡೆದು ಈ ಹಾಳೆಯನ್ನು ಕ್ಲಿಯರ್ ಗುಂಡಿಯಿರುವ ಭಾಗದಲ್ಲೇ ಮುಚ್ಚಿಟ್ಟು ಸೀಲ್ ಮಾಡಿದ ನಂತರ ಮತದಾನ ಮಾಡುವ ಪ್ರಕ್ರಿಯೆ ಪ್ರಾರಂಭವಾಗುವುದು.
          ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿ ಅಥವಾ ಭಾರತ ಚುನಾವಣಾ ಆಯೋಗವು ಸೂಚಿಸಿದ  ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಪರಿಶೀಲಿಸಿದ ನಂತರ ನೋಂದಣಿ ಪುಸ್ತಕದಲ್ಲಿ ಸಹಿ ಅಥವಾ ಹೆಬ್ಬೆಟ್ಟು ಒತ್ತಿಸಿಕೊಂಡು ಅವರನ್ನು ಬ್ಯಾಲೆಟ್ ಯೂನಿಟ್ ಇರುವ ಸ್ಥಳಕ್ಕೆ ಕಳುಹಿಸಲಾಗುವುದು. ಮತಗಟ್ಟೆ ಅಧಿಕಾರಿ ತನ್ನ ಬಳಿಯಿರುವ ಕಂಟ್ರೋಲ್ ಯೂನಿಟ್‌ದಲ್ಲಿ ವೋಟ್ ಎಂಬ ಗುಂಡಿ ಒತ್ತಿದ ಕೂಡಲೇ ಬ್ಯಾಲೆಟ್ ಯೂನಿಟ್‌ನಲ್ಲಿ ರೆಡಿ ಎಂದು ಸೂಚಿಸುವ ಹಸಿರು ದೀಪ ಉರಿಯುವುದು. ಮತದಾರರು ಮತಹಾಕಲು ಬ್ಯಾಲೆಟ್ ಯೂನಿಟ್ ಇರುವ ವಿಭಾಗಕ್ಕೆ (ಕಂಪಾರ್ಟ್‌ಮೆಂಟ್) ಹೋದಕೂಡಲೇ ಅಲ್ಲಿರುವ ಮತದಾನ ಯಂತ್ರ (ಬ್ಯಾಲೆಟ್ ಯೂನಿಟ್) ದಲ್ಲಿರುವ ಅಭ್ಯರ್ಥಿಗಳ ಪಟ್ಟಿ ಮೇಲ್ಭಾಗದಲ್ಲಿ ಹಸಿರು ದೀಪ ಉರಿಯುತ್ತಿದೆಯೇ ಎಂಬುದನ್ನು ಪರೀಕ್ಷಿಸಬೇಕು. ಹಸಿರು ದೀಪ ಉರಿಯುತ್ತಿದ್ದಲ್ಲಿ ಸದರಿ ವಿದ್ಯುನ್ಮಾನ ಯಂತ್ರ ಸುಸ್ಥಿಯಲ್ಲಿದ್ದು, ಮತಚಲಾವಣೆಗೆ ಸಿದ್ಧವಾಗಿದೆ ಎಂದು ತಿಳಿಯಬೇಕು. ನಂತರ ತಮಗೆ ಬೇಕಾದ ಅಭ್ಯರ್ಥಿಯ ಹೆಸರಿನ ಮುಂದಿರುವ ಗುರುತಿನ ಚಿತ್ರದೆದುರಿನ ನೀಲಿ ಗುಂಡಿಯನ್ನು ಒತ್ತಬೇಕು. ನೀಲಿ ಗುಂಡಿ ಒತ್ತಿದ ಕೂಡಲೇ ಹಸಿರು ದೀಪ ಆರಿಹೋಗಿ   ಮತದಾರ ಆಯ್ಕೆ ಮಾಡಿದ ಗುರುತಿನ ಬಲಭಾಗದಲ್ಲಿ ಕೆಂಪು ದೀಪ ಉರಿಯುವುದು. ನಂತರ ೧೦ ಸೆಕೆಂಡುಗಳ ಕಾಲ  ಬೀಪ್ ಎಂಬ ಶಬ್ದ ಕೇಳಿಬರುವುದು. ಕೆಂಪು ದೀಪ ಆರಿಹೋಗಿ ಬೀಪ್ ಶಬ್ದವೂ  ನಿಂತುಹೋದರೆ ಆಗ ನಿಮ್ಮ ಮತ ಚಲಾವಣೆಯಾಗಿದೆ ಎಂದು ತಿಳಿಯಬೇಕು. ಬೀಪ್ ಶಬ್ದ ಬಾರದಿದ್ದಲ್ಲಿ ಕೂಡಲೇ ಮತಗಟ್ಟೆ ಅಧಿಕಾರಿಯನ್ನು ಸಂಪರ್ಕಿಸಬೇಕು. ನಂತರ ಸರದಿಯಂತೆ ಇನ್ನೊಬ್ಬ ಮತದಾರರು  ಮತದಾನ ಮಾಡಲು ಹೋಗಬಹುದು. ಒಬ್ಬ ಮತದಾರ ಎಷ್ಟೇ ಗುಂಡಿಗಳನ್ನು ಒತ್ತಿದರೂ ದಾಖಲಾಗುವುದು ಒಂದೇ ಒಂದು ಮತ ಮಾತ್ರ . ಅರ್ಧ ಗಂಟೆಗೊಮ್ಮೆ ಮತದಾರರ ಸಹಿಯನ್ನೊಳಗೊಂಡ ನೋಂದಣಿ ಪುಸ್ತಕದ ಸಂಖ್ಯೆಯನ್ನು ದಾಖಲಾದ ಒಟ್ಟು ಮತಗಳ ಸಂಖ್ಯೆಯನ್ನು ಟೋಟಲ್ ವೋಟ್ಸ್ ಎಂಬ ಗುಂಡಿ ಒತ್ತಿ ತಾಳೆ ನೋಡಿಕೊಳ್ಳಬಹುದು.
ಉಪಯುಕ್ತತೆ:    ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಂಟ್ರೋಲ್ ಯೂನಿಟ್‌ನ್ನು ಮಾತ್ರ ಮತ ಎಣಿಕೆ ಕೇಂದ್ರಗಳಿಗೆ ಕೊಂಡೊಯ್ದರೆ ಸಾಕು. ಮತಗಳನ್ನು ತ್ವರಿತವಾಗಿ ಎಣಿಕೆ ಮಾಡಬಹುದು. ಸಾಮಾನ್ಯವಾಗಿ ಮತ ಚೀಟಿಗಳಂತೆ ಕಂಟ್ರೋಲ್ ಯೂನಿಟ್‌ಗಳನ್ನು ಸಹ ೩ ವರ್ಷಗಳಿಗೆ ಭದ್ರಪಡಿಸಬಹುದು. ವಿದ್ಯುನ್ಮಾನ ಮತಯಂತ್ರವು ಅನಕ್ಷರಸ್ಥ ಮತದಾರರಿಗೆ ಒಂದು ವರದಾನವಾಗಿದೆ. ಉಮೇದುವಾರನ ಚಿಹ್ನೆಯ ಪಕ್ಕದಲ್ಲಿರುವ ನೀಲಿ ಗುಂಡಿ ಒತ್ತಲು ಯಾರಿಗೂ ಕಷ್ಟವಾಗದು. ಒಬ್ಬರಿಗೆ ಒಂದೇ ಒಂದು ಮತ ಚಲಾಯಿಸಲು ಅವಕಾಶವಿರುವುದರಿಂದ ಅಕ್ರಮ ಮತದಾನಕ್ಕೆ ಹಾಗೂ ತಿರಸ್ಕೃತ ಮತಗಳಿಗೆ ಅವಕಾಶವಿರುವುದಿಲ್ಲ. ಮುಕ್ತ , ನ್ಯಾಯಸಮ್ಮತ ಹಾಗೂ ಶಾಂತಿಯುತ ಮತದಾನ ಕಾರ್ಯಕ್ಕೆ ಈ ವಿದ್ಯುನ್ಮಾನ ಮತಯಂತ್ರಗಳು ನಂಬಿಕೆಗೆ ಅರ್ಹವಾಗಿರುತ್ತವೆ.
ವರದಿ: ಜಿ.ಚಂದ್ರಕಾಂತ,
ಸಹಾಯಕ ನಿರ್ದೇಶಕರು
,ವಾರ್ತಾ ಇಲಾಖೆ, ಗುಲಬರ್ಗಾ