ಪುಟಗಳು

ಸಂತೆಯಲ್ಲಿ ಸುಬ್ರಹ್ಮಣ್ಯ

ಎನ್ಕೆ ಸುಬ್ರಹ್ಮಣ್ಯರ ಹಾಸ್ಯ ಬರಹಗಳ ಸಂಕಲನ `ಸಂತೆಯಲ್ಲಿ ಸುಬ್ರಹ್ಮಣ್ಯ‘. ಒಬ್ಬ ಮಧ್ಯಮ ವರ್ಗದ ವ್ಯಕ್ತಿಯ ಅನುಭವವನ್ನು ಒಳಗೊಂಡ ಬರಹಗಳಿವು. ಮಧ್ಯಮವರ್ಗದ ಕನಸು ಹಾಗೂ ಜೀವನದ ವಿವರಗಳು ಇಲ್ಲಿ ಬರಹದ ರೂಪವನ್ನು ತಾಳಿವೆ.
ಹಾಗೆಂದು ಇಲ್ಲಿನ ಹದಿನೇಳು ಬರಹಗಳು ಸೀಮಿತ ಅನುಭವದ ಲೋಕದ ಒಳಗಷ್ಟೇ ಓಡಾಡುವುದಿಲ್ಲ. ಇಲ್ಲಿ ಸಂತೆ, ಕಂಪ್ಯೂಟರ್, ವಿಂಬಲ್ಡನ್, ಹೋಗಬೇಕಾದ ಅಮೆರಿಕಾ ಯಾತ್ರೆ, ಗುಜರಿ ಬಜಾರ್ ಬಗ್ಗೆಯೂ ಲೇಖನಗಳಿವೆ. ಲೇಖಕರು ಆಸಕ್ತಿಯಿಂದ ಓದಿಸಿಕೊಳ್ಳುವಂತೆ, ಲವಲವಿಕೆಯಿಂದ, ತಮಾಷೆಯಾಗಿ ಬರೆಯುತ್ತಾರೆ. ಇದಕ್ಕೆ ಹರಿಣಿ ಅವರ ವ್ಯಂಗ್ಯಚಿತ್ರಗಳು ಪುಟಕೊಟ್ಟಿವೆ.
ಶೀರ್ಷಿಕೆ: ಸಂತೆಯಲ್ಲಿ ಸುಬ್ರಹ್ಮಣ್ಯ ಲೇಖಕರು: ಎನ್ಕೆ ಸುಬ್ರಹ್ಮಣ್ಯ ಪ್ರಕಾಶಕರು: ನವ ಕರ್ನಾಟಕ ಪ್ರಕಾಶನ ಪುಟಗಳು : 116 ಬೆಲೆ:ರೂ. 55/

ಶೋಷಕರೇ ಶೋಷಿತರಿಗೆ ಹಿತವಚನ ನೀಡುವುದು ಈ ದೇಶದ ಬುದ್ಧಿಜೀವಿಗಳ ಫ್ಯಾಷನ್


scan0001

`ವಿಮರ್ಶಕ ಜಿ.ಎಚ್.ನಾಯಕರು ಶೋಷಕ ವರ್ಗದಿಂದ ಬಂದವರು. ಅವರ ಹೆಸರೇ ಜಾತಿ ಸೂಚಿತವಾದದ್ದು. ಅವರು ಸವರ್ಣೀರಾದ್ದರಿಂದ ಅವರು ಎಂದೂ ಅವರ ಜನಾಂಗದ ಬಗ್ಗೆ ಹೇಳುವುದಿಲ್ಲ. ಶೋಷಕರೇ ಶೋಷಿತರಿಗೆ ಹಿತವಚನ ನೀಡುವುದು ಈ ದೇಶದ ಬುದ್ಧಿಜೀವಿಗಳ ಫ್ಯಾಷನ್
`ಹಣದ ವಿಚಾರದಲ್ಲಿ ದೇವನೂರು ಮಹಾದೇವ ಪ್ರಾಮಾಣಿಕನಲ್ಲ. ಆತ ಪಡೆದ ಹಣಕ್ಕೆ ಲೆಕ್ಕವಿಲ್ಲ. ಶಿಸ್ತು ಮೊದಲೇ ಇಲ್ಲ. ಈ ವ್ಯಕ್ತಿ ಮತ್ತೊಬ್ಬರ ಮೇಲೆ ಗೂಬೆ ಕೂರಿಸಿ ತನ್ನ ಅಪ್ರಾಮಾಣಿಕತೆಯನ್ನು ಮುಚ್ಚಿಕೊಳ್ಳಲು ಸದಾ ಪ್ರಯತ್ನಿಸುತ್ತಾರೆ. ದೇವನೂರು ಮಹಾದೇವ ಎಷ್ಟು ದಲಿತರಿಂದ ಹಣ ಪಡೆದುಕೊಂಡಿದ್ದಾರೆ ಎಂಬುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಬೇಕು‘ (ಪು 94-95) ಎಂದು ನೇರವಾಗಿ ಬರೆಯುವ ಮುನಿವೆಂಕಟಪ್ಪ ಯಾವುದೇ ಮುಲಾಜುಗಳಿಲ್ಲದೆ ಬರೆದ ಬರಹಗಳು ಇಲ್ಲಿವೆ.
ದಲಿತ ಚಿಂತಕರಲ್ಲಿ ಒಬ್ಬರಾದ ಡಾ.ಮುನಿವೆಂಕಟಪ್ಪ ಇಲ್ಲಿ ಮಾಡಿರುವುದು ಸಾಹಿತ್ಯದ ವಿಮರ್ಶೆಗಿಂತ ಹೆಚ್ಚಾಗಿ ದಲಿತರ ಚಾರಿತ್ರಿಕ ವಿಮರ್ಶೆ. ಇಲ್ಲಿನ ಲೇಖನಗಳಲ್ಲಿ ಮುಖ್ಯವಗಿ ದಲಿತ ಚಳವಳಿ ಹಾಗೂ ಸಾಹಿತ್ಯ ಚರ್ಚೆಯಾಗಿದೆ. ವೆಂಕಟಪ್ಪನವರ ಈ ಚಿಂತನೆಗಳಲ್ಲಿ ಒಂದು ನೈತಿಕವಾದ ಆಕ್ರೋಶ ಇರುವುದನ್ನು ನಾವು ಕಾಣಬಹುದು. ಇದು ಅನೇಕ ದೊಡ್ಡವರು ಎನ್ನಿಸಿಕೊಂಡವರ ತಪ್ಪು ನಿಲುವುಗಳಿಗೆ ಪ್ರತಿಯಾಗಿ ಹುಟ್ಟಿಕೊಂಡ ಸಿಟ್ಟು. ಈ ಸಿಟ್ಟಿನ ಹಿಂದೆ ನೋವು ಇದೆ ಎಂಬುದನ್ನು ಮರೆಯುವಂತಿಲ್ಲ. ಇದಕ್ಕೆ ಉದಾಹರಣೆಯಾಗಿ ಕವಿ ಸಿದ್ದಲಿಂಗಯ್ಯ ಅವರು `ನನ್ನನ್ನು ದಲಿತ ಕವಿ ಎಂದು ಕರೆಯಬೇಡಿ, ಕನ್ನಡದ ಕವಿ ಎಂದು ಕರೆಯಿರಿ ಎಂದು ಕೇಳಿಕೊಂಡಿರುವುದನ್ನು, ದಲಿತರು ತಾವು ನಡೆದುಬಂದ ದಾರಿಯನ್ನು ಹಿಂತಿರುಗಿ ನೋಡಲು ಸಿದ್ಧರಿಲ್ಲದಿರುವುದನ್ನು ತೋರಿದ್ದಾರೆ. (ಪು.28) ಇಂಥ ಅನೇಕ ಸಂದರ್ಭಗಳನ್ನು ಮುನಿವೆಂಕಟಪ್ಪನವರು ಇಲ್ಲಿನ ಪುಟಗಳಲ್ಲಿ ತೆರೆದಿಟ್ಟಿದ್ದಾರೆ. ಇದರೊಂದಿಗೆ ದೇವನೂರು ಮಹದೇವ, ಮೊಗಳ್ಳಿ ಅಂಥವರನ್ನು ಏಕವಚನದಲ್ಲಿ ಕರೆದು ಸಂಯಮ ಕಳೆದುಕೊಳ್ಳುತ್ತಾರೆ.
ಈ ಬಗೆಯ ನೈತಿಕ ಸಿಟ್ಟುಗಳು ಅವರಲ್ಲಿವೆ. ಅಂತಹ ಸಂಗತಿಗಳ ಬಗ್ಗೆ ನೇರವಾಗಿ, ಆಧಾರಸಹಿತವಾಗಿ ಹೇಳಿದ್ದಾರೆ. ಆದರೆ, ಒಂದೆಡೆ (ಮೈಸೂರು ಜಿಲ್ಲೆಯ ದಲಿತ ಬಂಡಾಯ ಸಾಹಿತ್ಯಿಕ ಹಿರಿಮೆ) ಕಥೆಗಾರ ಮೊಗಳ್ಳಿ ಗಣೇಶರ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿದ `ದಲಿತ ಕಥನದ ಬಗ್ಗೆ ಬರೆಯುತ್ತ ಮೊಗಳ್ಳಿವರು ಮಾಡುವ ಸುಳ್ಳು ಉಲ್ಲೇಖಗಳನ್ನು, ಲೇಖಕರ ನಡುವೆ `ಒಬ್ಬರ ಮೇಲೆ ಒಬ್ಬರನ್ನು ಎತ್ತಿಕಟ್ಟುವ, ಸಲ್ಲದ ವಿಚಾರಗಳನ್ನು ಬರೆಯುವ ಸಾಹಿತಿಗಳನ್ನು, ಅಂಥವನ್ನು ಪ್ರಕಟಿಸುವ ವಿಶ್ವವಿದ್ಯಾಲಯದ ಪ್ರಸಾರಾಂಗವನ್ನು ಏನೆಂದು ಕರೆಯಬೇಕು?’ ಎಂದು ಕೇಳಿದ್ದಾರೆ. ಈವರೆಗೆ ಲೇಖಕರ ಪ್ರಶ್ನೆ ಸರಿಯಾಗಿಯೇ ಇದೆ. ಮುಂದುವರಿದು ಅವರು ಮೈಸೂರು ವಿಶ್ವವಿದ್ಯಾಲಯದ ಕಥೆಗಾರ ಮೊಗಳ್ಳಿ ಗಣೇಶರು ಎಂ.ಎ ತರಗತಿಯಲ್ಲಿ ಮೂರನೆಯ ದರ್ಜೆಯಲ್ಲಿ ತೇರ್ಗಡೆಯಾಗಿ ಮತ್ತೊಂದು ಎಂ.ಎ ಗೆ ಸೇರಿ ಪ್ರಥಮ ದರ್ಜೆಯಲ್ಲಿ ಪಾಸಾದುದ್ದನ್ನೂ, ಅನಂತರ ಸಂಶೋಧನೆ ನೆಪದಲ್ಲಿ 12 ವರ್ಷಗಳ ಕಾಲ ಒಂದೇ ಕೊಠಡಿಯಲ್ಲಿ ಉಳಿದುಕೊಂಡುದ್ದನ್ನು, ಮೈಸೂರು ವಿ.ವಿ.ಯಲ್ಲಿ ಓದಲು ಬರುವ ಬಡಹುಡುಗರು ಹಾಸ್ಟೇಲ್ನಲ್ಲಿ ರೂಮಿಗಾಗಿ ಪರದಾಡುತ್ತಿರುವುದನ್ನು ನೋಡಿಯೂ ಮುಜುಗರಕ್ಕೆ ಅವರು ಒಳಗಾಗದಿರವುದನ್ನೂ, `ಆತನನ್ನು ಓಡಿಸಿ ನಿಜವಾದ ಅರ್ಹ ಬಡ ವಿದ್ಯಾರ್ಥಿಗಳಿಗೆ ಆ ಜಾಗ ಸಿಗುವಂತಾಗುವಂತೆ ಮಾಡಲು ಸಾಹಸ ಪಡಬೇಕಾಯಿತುಎಂದು ಬರೆಯುತ್ತಾರೆ. ಮೊಗಳ್ಳಿಯವರ ಕೃತಿಯೊಂದಿಗೆ ಅವರ ಈ ಉಲ್ಲೇಖ ಅಗತ್ಯ ಇತ್ತು ಎಂದು ಅನಿಸುವುದಿಲ್ಲ.
ಆದರೂ, ಈ ಪುಸ್ತಕ ಸಾಕಷ್ಟು ಚರ್ಚೆಗಳನ್ನು ದಲಿತ ಸಾಹಿತ್ಯ, ಚಳವಳಿಗಳ ಕುರಿತು ಮಾಡುತ್ತದೆ ಎಂಬುದು ಮಹತ್ವದ ಸಂಗತಿ.
ಶೀರ್ಷಿಕೆ: ದಲಿತ ಚಳವಳಿ ಮತ್ತು ಸಾಹಿತ್ಯ  ಲೇಖಕರು: ಡಾ.ವಿ.ಮುನಿವೆಂಕಟಪ್ಪ ಪ್ರಕಾಶಕರು: ಎಸ್.ಎಸ್.ಪ್ರಕಾಶನ ಪುಟಗಳು:128 ಬೆಲೆ:ರೂ.65/

ಹಿಂದುತ್ವ ಮತ್ತು ದಲಿತರು

ಈ ಗ್ರಂಥದಲ್ಲಿ ಸೇರ್ಪಡೆಯಾಗಿರುವ ಲೇಖನಗಳು ಹಿಂದುತ್ವ ಶಕ್ತಿಗಳು ದಲಿತರನ್ನು ತಮ್ಮತ್ತ ಸೆಳೆದುಕೊಳ್ಳುತ್ತಿರುವ ಪ್ರಕ್ರಿಯೆಯ ಬಗ್ಗೆ ತಾತ್ವಿಕವೂ ಅನುಭವಜನ್ಯವೂ ಆದ ವಿಶ್ಲೇಷಣೆಗಳ ಮೂಲಕ ಸಾಕಷ್ಟು ಬೆಳಕು ಚೆಲ್ಲುತ್ತವೆ. ಕ್ರಿಯಾಶೀಲ ಚಳವಳಿಗಾರರು ಮತ್ತು ವಿದ್ವಾಂಸರುಗಳು ಬರೆದಿರುವ ಲೇಖನಗಳು ಈ ಗ್ರಂಥದಲ್ಲಿ ಸೇರ್ಪಡೆಯಾಗಿವೆ. ಈ ಲೇಖನಗಳಲ್ಲಿ ದಲಿತರ ಸಾಮಾಜಿಕ, ಸಾಂಸ್ಕೃತಿಕ, ಸೈದ್ಧಾಂತಿಕ ಮತ್ತು ರಾಜಕೀಯ ಜೀವನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಚರ್ಚಿಸಲಾಗಿದೆ. ಜೊತೆಗೆ ಅವರು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಅಗತ್ಯವಾದ ಮುನ್ನೋಟದ ಬಗ್ಗೆ ಬೆಳಕು ಹರಿಸುವ ಲೇಖನಗಳೂ ಇಲ್ಲಿವೆ. ಇತ್ತೀಚಿನ ವಿದ್ಯಮಾನಗಳು ಸೃಷ್ಟಿಸಿರುವ ಸಮಸ್ಯೆಗಳ ಕುರಿತ ಗಂಭೀರ ಸ್ವರೂಪದ ಸಂವಾದಕ್ಕೆ ಇಲ್ಲಿನ ಲೇಖನಗಳು ದಾರಿಮಾಡಿಕೊಡುತ್ತವೆ.
ಶೀರ್ಷಿಕೆ: ಹಿಂದುತ್ವ ಮತ್ತು ದಲಿತರು ಮೂಲ ಸಂಪಾದಕರು:ಆನಂದ್ ತೇಲ್ ತುಂಬ್ಡೆ ಅನು ಸಂಯೋಜನೆ: ಪ್ರೊ.ಗಂಗಾಧರ ಮೂರ್ತಿ ಪ್ರಕಾಶಕರು: ಚಿಂತನ ಪುಸ್ತಕ ಪುಟಗಳು:216 ಬೆಲೆ:ರೂ.120

ಶಾಂತಾರಾಮ್ ಹಾಜಿರ್ ಹೈ

kuruda-kurudi1


ಶಾಂತಾರಾಮ ಸೋಮಯಾಜಿ ಕತೆಗಳಲ್ಲಿ ಹೊಸಲೋಕವಿರುತ್ತದೆ. ವಿನೂತನವಾದ ಬರಹ ಶೈಲಿಯಲ್ಲಿ ಕತೆ ಹೇಳುವ ಶಾಂತಾರಾಮರ ಮೂರನೆಯ ಕಾದಂಬರಿ `ಕುರುಡ ಕುರುಡಿ‘. ಇಲ್ಲಿಯೂ ಕೂಡಾ ಹೊಸತೇನನ್ನೋ ಹೇಳುವ ಕೆಲಸ ನಡೆದಿದೆ. ಹೊಸ ಕಥಾವಸ್ತು. ಓದುಗರನ್ನು ಹಿಡಿದಿಟ್ಟುಕೊಂಡು ಹೋಗುವಲ್ಲಿ ಯಶಸ್ವಿಯಾಗಿದೆ. ಜೊತೆಗೆ ಶಾಂತಾರಾಮರ ವೈಚಾರಿಕ ವಿಷಯಗಳೂ ಇವೆ.
ವಾರಪತ್ರಿಕೆಯೊಂದರಲ್ಲಿ ಪ್ರಕಟವಾಗಿ ಜನಮೆಚ್ಚುಗೆ ಗಳಿಸಿದ `ಕುರುಡ ಕುರುಡಿಯನ್ನು ಬೆಳಕಿಗೆ ತಂದಿದ್ದಾರೆ ಪ್ರಕಾಶಕ ನಾರಾಯಣ ಮಾಳ್ಕೋಡ್. ಮುಖಪುಟದ ಕೆಟ್ಟ ವಿನ್ಯಾಸವನ್ನು ಕಣ್ಣುಮುಚ್ಚಿ ಕ್ಷಮಿಸಿದರೆ ಪುಸ್ತಕ `ಸುಮುಖ‘.
ಶೀರ್ಷಿಕೆ: ಕುರುಡ ಕುರುಡಿ ಲೇಖಕರು: ಶಾಂತಾರಾಮ ಸೋಮಯಾಜಿ ಪ್ರಕಾಶಕರು: ಸುಮುಖ ಪ್ರಕಾಶನ ಪುಟಗಳು:316 ಬೆಲೆ:ರೂ.200/

ಬೈ ದ ಡಾಕ್ಟರ್, ಫಾರ್ ದ ಡಾಕ್ಟರ್, ಥಟ್ ಅಂತ ಕೊಳ್ಳಿ!


manasvi11

ಐದಕ್ಕಿಂತಲೂ ಹೆಚ್ಚು ಬಾರಿ ಮರುಮುದ್ರಣಗೊಂಡಿರುವ ಡಾ.ಸಿ.ಆರ್.ಚಂದ್ರಶೇಖರ್ ರ ಕೃತಿಗಳ ಸಂಖ್ಯೆ 30. ಸಿ.ಆರ್.ಸಿ. ಒಟ್ಟು 159 ಪುಸ್ತಕಗಳು ಒಂದಕ್ಕಿಂತ ಹೆಚ್ಚಿನ ಮರುಮುದ್ರಣ ಕಂಡಿವೆ. ಅಂದರೆ ಶೇ.75ಕ್ಕಿಂತಲೂ ಹೆಚ್ಚಿನ ಪುಸ್ತಕಗಳು ಮರುಮುದ್ರಣವನ್ನು ಕಂಡಿವೆ ಎಂದಂತಾುತು.
ಹೀಗೆ ಡಾ. ನಾ. ಸೋಮೇಶ್ವರರು ಸಿ.ಆರ್.ಸಿ. ಯವರ ಕುರಿತು ಬರೆದ `ಮನಸ್ವಿಯಲ್ಲಿ ಲೆಕ್ಕ ಹಾಕುತ್ತಾರೆ. `ಮನಸ್ವಿ ಸಿ.ಆರ್.ಸಿ.ಯವರ 60 ವರ್ಷಗಳ ಬದುಕು-ಬರಹವನ್ನು ಸೋಮೇಶ್ವರರು ವಿಶಿಷ್ಟವಾಗಿ ದಾಖಲಿಸಿರುವ ಪುಸ್ತಕ.
ಸೋಮೇಶ್ವರರು ಪ್ರೀತಿುಂದ ಹೊಗಳಿಕೆಗಳಲ್ಲೇ ಈ ಪುಸ್ತಕವನ್ನು ಬರೆದಿಲ್ಲ. ತುಲನಾತ್ಮಕ ಅಧ್ಯಯನದಿಂದ ಹೊರಬಂದಿರುವ ಕೃತಿುದು. ಸಿ.ಆರ್.ಸಿ. ಪುಸ್ತಕಗಳಿಂದ ಶತಕ ಬಾರಿಸಿರಬಹುದು. ಆದರೆ ಈ ಪುಸ್ತಕ ಸೋಮೇಶ್ವರ `ಶತಕ. ಅಪರೂಪಕ್ಕೆ ಬೈ ದ ಡಾಕ್ಟರ್, ಫಾರ್ ದ ಡಾಕ್ಟರ್ ಪುಸ್ತಕವೊಂದು ಬಂದಿದೆ. ಡಾಕ್ಟರ್ ಗಳನ್ನು ಓದುವ ಆಸಕ್ತರು `ಥಟ್ ಅಂತ ಕೊಳ್ಳಿ!
ಶೀರ್ಷಿಕೆ: ಮನಸ್ವಿ ಲೇಖಕರು: ಡಾ. ನಾ.ಸೋಮೇಶ್ವರ ಪ್ರಕಾಶಕರು:ನವಕರ್ನಟಕ ಪ್ರಕಾಶನ ಪುಟಗಳು:114 ಬೆಲೆ:ರೂ.45

I Paid A Bribe

ಒಸಡಿನಲ್ಲಿ ರಕ್ತಸ್ರಾವ: ಇಲ್ಲಿದೆ ಸುಲಭ ಮನೆಮದ್ದು

ಒಸಡಿನ ರಕ್ತಸ್ರಾವ ಹೆಚ್ಚಿನವರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆ. ವಸಡಿನಲ್ಲಿರುವ ರೋಗಾಣುಗಳು ಕೀವು ಉಂಟುಮಾಡುತ್ತವೆ. ಹಲ್ಲಿನ ಸಂದಿಗಳಲ್ಲಿ, ವಸಡಿನಲ್ಲಿ ರಕ್ತಸ್ರಾವವಾಗುತ್ತದೆ. ಬಾಯಿಯ ಆರೋಗ್ಯದ ಕುರಿತು ನಿರ್ಲಕ್ಷ್ಯವಹಿಸುವುದೇ ಈ ತೊಂದರೆಗೆ ಪ್ರಮುಖ ಕಾರಣ. ಅಸಡ್ಡೆ ಮಾಡಿದರೆ ಬಾಯಿ ಬ್ಯಾಕ್ಟೀರಿಯಾ, ರೋಗಾಣುಗಳ ಆವಾಸ ಸ್ಥಾನವಾಗುತ್ತದೆ. ಒಸಡಿನ ರಕ್ತಸ್ರಾವಕ್ಕೆ ಪರಿಹಾರವಾಗಿ ಕೆಲವು ಸುಲಭ ಮನೆಮದ್ದುಗಳು ಇಲ್ಲಿವೆ.

* ಶ್ರೀಗಂಧವನ್ನು ತೇಯ್ದು ಅದನ್ನು ಬಾಯಿಯಲ್ಲಿ ಇಟ್ಟುಕೊಂಡರೆ ಹಲ್ಲಿನ ಒಸಡಿನಲ್ಲಿ ಬರುವ ಕೀವು ಹಾಗೂ ರಕ್ತ ನಿಲ್ಲುತ್ತದೆ.

* ಒಸಡಿನಲ್ಲಿ ರಕ್ತಸ್ರಾವವಿದ್ದರೆ ಜಾಜಿಮಲ್ಲಿಗೆಯ ಎಲೆಯನ್ನು ಪ್ರತಿದಿನ ತಿನ್ನಬೇಕು.

* ರಾತ್ರಿ ನಿದ್ದೆ ಮಾಡುವ ಮುನ್ನ ಲೋಳಿಸರ ರಸವನ್ನು ವಸಡಿಗೆ ಹಚ್ಚಿಕೊಳ್ಳಿ. ರಾತ್ರಿಪೂರ್ತಿ ಹಾಗೆಯೇ ಇರಲಿ. ಮರುದಿನ ವಸಡಿನ ರಕ್ತಸ್ರಾವ ಕಡಿಮೆಯಾಗುತ್ತದೆ.

* ಇನ್ನೊಂದು ಪ್ರಮುಖ ಮನೆಮದ್ದು ಶುಂಠಿ. ಇದಕ್ಕೆ ರೋಗ ನಿರೋಧಕ ಮತ್ತು ಬ್ಯಾಕ್ಟಿರಿಯ ನಿವಾರಕ ಗುಣವಿದೆ. ಶುಂಠಿಯನ್ನು ತೇಯ್ದು ಒಸಡಿಗೆ ಹಚ್ಚಿಕೊಳ್ಳಿ.

* ತುಲಸಿ ಸರ್ವರೋಗ ನಿವಾರಕ. ತುಲಸಿ ಎಲೆಯನ್ನು ತೇಯ್ದು ಒಸಡಿಗೆ ರಾತ್ರಿ ನಿದ್ದೆಗೆ ಮುನ್ನ ಹಚ್ಚಿಕೊಳ್ಳಿ.

* ಬಿಸಿನೀರಿಗೆ ಒಂದು ಚಮಚ ಲಿಂಬೆರಸ ಮತ್ತು ಸ್ವಲ್ಪ ಉಪ್ಪು ಹಾಕಿ ಬಾಯಲ್ಲಿ ಮುಕ್ಕಳಿಸುತ್ತಿರಿ.

ಒಸಡಿನಲ್ಲಿ ಗಾಯ, ಕೀವು, ರಕ್ತಸ್ರಾವ ಇತ್ಯಾದಿಗಳು ಮೇಲೆ ತಿಳಿಸಿದ ಸುಲಭ ಮನೆಮದ್ದಿನಿಂದ ಗುಣವಾಗಬಹುದು. ಅದಕ್ಕಿಂತ ಉತ್ತಮ ಪರಿಹಾರವೆಂದರೆ ಉತ್ತಮ ದರ್ಜೆಯ ಪೇಸ್ಟ್ ನಿಂದ ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು.

ಇವನಿಗೆ ಭರ್ತಿ 107 ಹೆಂಡತಿಯರು...185 ಮಕ್ಕಳು

ಒಂದು ಪತ್ನಿಯೊಂದಿಗೆ ಜೀವನ ನಡೆಸಲಾಗದವರಿಗೆ ಇವನೊಂದು ಅಚ್ಚರಿ. ಇನ್ನೊಂದು ಮದುವೆಯ ಕನಸು ಕಾಣುವರಿಗೆ ಇವನು ಸ್ಪೂರ್ತಿಯಾಗಬಲ್ಲ. ಆರತಿಗೊಬ್ಬ ಕೀರುತಿಗೊಬ್ಬ, ನಾವಿಬ್ಬರು ನಮಗೊಂದು ಮಗು ಅನ್ನುವರಿಗೆ ಇವನು... ಹೀಗೆ ಇವನ ಬಗ್ಗೆ ಹೇಳಿದಷ್ಟು ಕಥೆ ಮುಗಿಯೋದಿಲ್ಲ.. ಮುಂದೆ ಓದಿಕೊಳ್ಳಿ.

* ಯಾರಿವನು?
ಹೆಸರು ಬೆಲ್ಲೊ ಮಸಬಾ. ನೈಜೀರಿಯಾದ ಪ್ರಜೆ. ಇಸ್ಲಾಂ ಧರ್ಮ.

* ಏನು ಇವನ ಸ್ಪೆಷಲ್?
ಸಾಮನ್ಯ ವಿಶೇಷ ಅಲ್ಲ. ಈ ಭೂಪ 107 ಹೆಂಡತಿಯರಿಗೆ ಮುದ್ದಿನ ಗಂಡ.

* ಹಾಗಾದರೆ ಅವನಿಗೆ ಮಕ್ಕಳೆಷ್ಟು?

ಹೆಂಡತಿಯರಿಗೆ ಹೋಲಿಸಿದರೆ ಜಾಸ್ತಿ ಏನಲ್ಲ. ಕೇವಲ 185 ಮಕ್ಕಳ ಅಪ್ಪ.

* ಅವನ ಪ್ರಾಯ?
ಇನ್ನೂ 87ರ ಹರೆಯ!

* ಅಬ್ಬಾ..! ಇವ್ರನ್ನೆಲ್ಲ ಹೇಗೆ ಸಾಕ್ತಾನೆ? ಏನು ಕೆಲಸ ಅವನಿಗೆ?
ವೃತ್ತಿಯಲ್ಲಿ ನಾಟಿ ವೈದ್ಯ. ಸ್ವಲ್ಪ ಭೂಮಿ ಇದೆ. ಇವನು ಅಲ್ಲಿನ ರಾಜಕಾರಣಿಗಳಿಗಿಂತ ಫೇಮಸ್. ಒಂದು ಲೆಕ್ಕದಲ್ಲಿ ಹೇಳುವುದಾದರೆ ಸೆಲೆಬ್ರೆಟಿ.

* ಹಾಗಾದರೆ ಅವನ ಮನೆ ಹೇಗಿದೆ?
ಅದು ದೊಡ್ಡ ಮನೆ. 85 ರೂಂಗಳಿವೆ. ಅದರಲ್ಲಿ ತನ್ನ ಎಲ್ಲಾ ಪತ್ನಿ ಮತ್ತು ಮಕ್ಕಳೊಂದಿಗೆ ಇದ್ದಾನೆ.

* ಇವನು ಅಷ್ಟು ಮದುವೆ ಆಗಿರೋದಕ್ಕೆ ಯಾರೂ ಕೇಸ್ ಹಾಕಿಲ್ಲವೇ? ಅಲ್ಲಿನ ಸರಕಾರ, ಕೋರ್ಟ್ ಚಕಾರ ಎತ್ತಿಲ್ಲವೇ?
ಚಕಾರ ಎತ್ತುವರಿದ್ರು. ಅವನ ವಿರುದ್ಧ ಸಾಕಷ್ಟು ಪ್ರಕರಣ ದಾಖಲಾಗಿತ್ತು. ಆದರೆ ಕೋರ್ಟ್ ಗೆ ಆತನ ಪತ್ನಿಯರೇ ಬಂದು ಬಚಾವ್ ಮಾಡಿದ್ದಾರೆ. ಅವನ ಪತ್ನಿಯರಿಗೆ ಅಷ್ಟೊಂದು ಪ್ರೀತಿ ಅವನ ಮೇಲೆ.

ಮೇ ಡೇ ಹುತಾತ್ಮದ ಮಹಾಗಾಥೆ



ಶೀರ್ಷಿಕೆ: ಮೇ ಡೇ ಹುತಾತ್ಮದ ಮಹಾಗಾಥೆ  ಲೇಖಕರು:ವಿಲಿಯಂ ಆಡಲ್ ಮನ್  ಅನುವಾದ:ರಾಹು  ಪುಟಗಳು:278 ಬೆಲೆ:200

ಗಣಿಯಾಳದಲ್ಲಿ ಸಿಕ್ಕಿಹಾಕಿಕೊಂಡ 33 ಕಾರ್ಮಿಕರನ್ನು ಮೇಲಕ್ಕೆತ್ತಿದ ಅಭೂತಪೂರ್ವ ಘಟನೆಯ ದಾಖಲೆ ಕನ್ನಡದಲ್ಲಿ


























ರಾಷ್ಟಪತಿ ಬಂದರೆಂಬ ಸುದ್ಧಿ ಕೇಳಿ ಎಲ್ಲಾ ಕ್ಯಾಮರಾಗಳೂ ಮಾಧ್ಯಮ ಕೇಂದ್ರಕ್ಕೆ ದೌಡಾಯಸಿದವು.
ಅದುವರೆಗೆ ಸುರಕ್ಷಿತವಾಗಿ ಬಚ್ಚಿಟ್ಟಿದ್ದ ಕೆಂಪಕ್ಷರದ ಚೀಟಿ ಆಂಡ್ರೂ ಸುಗಾರೆಯ ಕೈ ದಾಟಿ ಈಗ ಪಿನೆರೊ ಕೈಗೆ ಬಂತು. ಆಳದಿಂದ ಬಂದ ಆ ಪುಟ್ಟ ಸಂದೇಶವನ್ನು ರಾಷ್ಟ್ರಪತಿ ಎತ್ತಿ ಹಿಡಿದು ಕ್ಯಾಮೆರಾಗಳಿಗೆ ಪ್ರದರ್ಶಿಸಿದರು. `ನಾವು 33 ಜನರೂ ಸುರಕ್ಷಿತವಾಗಿದ್ದೇವೆ’ ಎಂಬರ್ಥದ ಬರಹದ `ಲೋಸ್ 33′ (ಈ 33) ಎಂಬ ಪುಟ್ಟ ಪದ ಇಡೀ ಅಮೆರಿಕಾ ಖಂಡದ ಸಹಸ್ರಾರು ಟಿವಿ ಚಾನೆಲ್ ಗಳಲ್ಲಿ, ಪತ್ರಿಕೆಗಳಲ್ಲಿ ತಲೆಬರಹವಾಗಿ ರಾರಾಜಿಸಿತು.
ಅದೇ ವೇಳೆಗೆ ಡ್ರಿಲ್ಲಿಂಗ್ ಯಂತ್ರದ ತಾಂತ್ರಿಕ ಸಿಬ್ಬಂದಿ ಭಾರೀ ಗಾತ್ರದ ತಂತಿ ಸುರುಳಿಯನ್ನು ಹೊತ್ತು ತಂದಿದ್ದರು. ತಂತಿಯ ತುದಿಯಲ್ಲಿ ಒಂದು ಪುಟ್ಟ ಫೋನ್ ಉಪಕರಣವೊಂದನ್ನು ಕಟ್ಟಿ ಮೆಲ್ಲಗೆ ರಂಧ್ರದ ಮೂಲಕ ಇಳಿ ಬಿಟ್ಟರು. `ಸಹಾಯ ಬರಲಿದೆ, ಗಣಿ ಸಚಿವರು ತುಸು ಹೊತ್ತಿನಲ್ಲೇ ಮಾತಾಡಲಿದ್ದಾರೆ. ನಿಮ್ಮಲ್ಲಿ ಯಾರಾದರೊಬ್ಬರು ರಂಧ್ರದ ಬಳಿ ನಿಂತಿರಿ’ ಎಂಬ ಪುಟ್ಟ ಸಂದೇಶದ ಚೀಟಿಯೊಂದನ್ನು ಫೋನ್ ಜತೆ ಕಟ್ಟಿದ್ದರು. ಅದು ಆ ಮುಷ್ಟಿಯಗಲದ ರಂಧ್ರದಲ್ಲಿ ಮೆಲ್ಲಮೆಲ್ಲನೆ ಇಳಿಯುತ್ತ 680 ಮೀಟರ‍್ ಆಳದಲ್ಲಿದ್ದವರನ್ನು ತಲುಪಿತು. ರೆಕಾರ್ಡಿಂಗ್ ವ್ಯವಸ್ಥೆಯನ್ನೆಲ್ಲ ಮತ್ತೊಮ್ಮೆ ಪರಿಶೀಲಿಸಿದ್ದಾಯಿತು.
ಅರ್ಧ ಗಂಟೆಯಲ್ಲಿ ಪಾತಾಳದಲ್ಲಿ ಫೋನ್ ರಿಂಗಾಯಿತು. ಕಾರ್ಮಿಕ ತಂಡದ ಮುಖ್ಯಸ್ಥ ಲೂಯಿಸ್ ಊರ್ಝುವಾ ಫೋನ್ ಎತ್ತಿಕೊಂಡ.
`ಹೇಗಿದ್ದೀರಾ ಎಲ್ಲ?’ ಸಚಿವರ ಪ್ರಶ್ನೆಗೆ ಕೆಳಿಗಿನಿಂದ ತುಸು ಕ್ಷೀಣವಾದ ಆದರೆ ಸ್ಪಷ್ಟ ಉತ್ತರ ಬಂತು.
`ನಾವೆಲ್ಲಾ ಕ್ಷೇಮವಾಗಿದ್ದೇವೆ. ರಕ್ಷಣೆ ಬರುವುದನ್ನೇ ಕಾಯ್ತಾ ಇದ್ದೇವೆ’ ಉರ್ಝುವಾ ಧ್ವನಿ.
ಗೋಲ್ ಬೋರ್ನ್ ಮುಂದಿನ ಮಾತು ಹೇಳುವ ಮೊದಲೇ ಕೆಳಗಿನಿಂದ ಮಾತು ಕೇಳಿಸಿತು:
`ಸರ‍್, ಒಂದು ಕ್ಷಣ ನಿಲ್ಲಿ. ನಾವೆಲ್ಲ ಇಲ್ಲಿ ಒಟ್ಟಾಗಿ ನಿಂತಿದ್ದೇವೆ’.
ತುಸು ಅವಾಕ್ಕಾದ ಗಣಿಸಚಿವರು ಫೋನನ್ನು ಆಚೆ ಕಿವಿಯಿಂದ ಈಚೆ ಕಿವಿಯತ್ತ ತರುತ್ತಲೇ ಕೆಳಗಿನಿಂದ ತೀರ ಪರಿಚಿತ ವೃಂದಗಾನ ಕೇಳಬಂತು -
`ಪ್ಯೂರೊಚಿಲೀ ಎಸ್ತೂಸಿಲೋ ಅಜುವಾಲ್ಡೊ. . .’
ಗೋಲ್ ಬೋರ್ನ್ ಹಠಾತ್ತನೆ ಸೆಟೆದು ನಿಂತರು. ಸಚಿವರ ಸುತ್ತ ನಿಂತವರಿಗೆ ತುಸು ಗಾಬರಿ. ಏನಾಗಿರಬಹುದು?
ಎರಡು ನಿಮಿಷ ಮೌನವಾಗಿ ಸೆಟೆದೇ ನಿಂತಿದ್ದ ಸಚಿವರು,
`ಓ ಎಲ್ ಸಿಲೋ…. ಓ ಎಲ್ ಸಿಲೊ …. ಕೊಂತ್ರಾಲಾ ಒಪ್ರೆಸೆನ್ ….’ ಎಂದು ರಾಗವಾಗಿ ಹೇಳಿದಾಗ ಎಲ್ಲರಿಗೂ ಅರ್ಥವಾಯಿತು.
ಪಾತಾಳದಲ್ಲಿದ್ದ ಎಲ್ಲ 33 ಜನರೂ ಒಟ್ಟಾಗಿ ಚಿಲಿಯ ರಾಷ್ಟಗೀತೆಯನ್ನು ಹಾಡುತ್ತಿದ್ದರು!
ನೆರೆದಿದ್ದವರ ಕಣ್ಣು ಮಂಜಾಗಿತ್ತು.
….
- ಪುಸ್ತಕದೊಳಗಿನಿಂದ (ಪುಟ : 39-40)
ಏಳುನೂರು ಮೀಟರ‍್ ಆಳದಲ್ಲಿ 33 ಗಣಿಗಾರರು ಸಿಕ್ಕಿಹಾಕಿಕೊಂಡಿದ್ದಾರೆ. ಹದಿನೇಳು ದಿನ ಶ್ರಮಿಸಿ 3 ಅಂಗುಲ ಬೋರ‍್ ರಂಧ್ರ ಕೊರೆದು ನೋಡಿದರೆ ಅವರೆಲ್ಲ ಬದುಕಿರುವುದು ಗೊತ್ತಾಗಿದೆ. ಇನ್ನೂ ದೊಡ್ಡ ರಂಧ್ರ ಕೊರೆದು ಅವರನ್ನು ಮೇಲಕ್ಕೆತ್ತಲು ನಾಲ್ಕು ತಿಂಗಳೇ ಬೇಕು. ಅದುವರೆಗೆ ಆ ಮುಷ್ಟಿಗಾತ್ರದ ರಂಧ್ರದ ಮೂಲಕ ಅವರಿಗೆ ಆಹಾರ-ಔಷಧ ರವಾನಿಸಬೇಕು; ಅವರನ್ನು ಮೇಲಕ್ಕೆತ್ತಲು ರಾಕೆಟ್ ಮಾದರಿಯ ಲಿಫ್ಟ್ ನಿರ್ಮಿಸಬೇಕು.,
2010ರ ಅಕ್ಟೋಬರ‍್ ನಲ್ಲಿ ಚಿಲಿ ಎಂಬ ಪುಟ್ಟ ದೇಶ ಎಲ್ಲರನ್ನೂ ಸುರಕ್ಷಿತ ಮೇಲೆತ್ತಿದಾಗ ಆ ಮಹಾಸಾಹಸದ ವೀಕ್ಷಣೆಗೆ 3000 ವರದಿಗಾರರು ಸೇರಿದ್ದರು. ನೂರು ಕೋಟಿಗೂ ಹೆಚ್ಚು ಜನರು ನೇರ ಪ್ರಸಾರದಲ್ಲಿ ಅದನ್ನು ಕಣ್ಣಾರೆ ನೋಡಿದರು. ಸಾಮಾನ್ಯ ಪ್ರಜೆಗಳ ಈ ಅಸಾಮಾನ್ಯ ಸಾಧನೆ `ಮನುಕುಲಕ್ಕೇ ಸ್ಫೂರ್ತಿದಾಯಕ ಸಾಧನೆ’ ಎಂಬ ಶ್ಲಾಘನೆಗೆ ಪಾತ್ರವಾಯಿತು.
ಕಲ್ಪನೆಗೂ ಮೀರಿದ ಈ ನೈಜಕತೆಯನ್ನು ಥ್ರಿಲ್ಲರ‍್ ಶೈಲಿಯಲ್ಲಿ ಬರೆದ ಸರೋಜಾ ಪ್ರಕಾಶ್ ಭೌತವಿಜ್ಞಾನದ ಉಪನ್ಯಾಸಕಿಯಾಗಿದ್ದವರು. ವಿಜ್ಞಾನವನ್ನು ಎಲ್ಲರಿಗೂ ಅರ್ಥವಾಗುವಂತೆ ಬರೆಯುವ ಇವರು ಚಿಲಿ ಸಾಹಸದ ಕಥೆಯನ್ನು ಎಲ್ಲರಿಗೂ ಇಷ್ಟವಾಗುವಂತೆ ಬರೆದಿದ್ದಾರೆ. ಈ ಅಪೂರ್ವ ಘಟನೆ ಇಂಗ್ಲೀಷ್ ನಲ್ಲಿ ಕಾದಂಬರಿಯಾಗಿಯೋ, ಸಿನೆಮಾ ಆಗಿಯೋ ಬರುವ ಮೊದಲೇ ಕನ್ನಡ ಸಾಹಿತ್ಯಕ್ಕೆ ಸೇರ್ಪಡೆಯಾಗುತ್ತಿದೆ. ಅದು ಹೆಮ್ಮೆಯ ದಾಖಲೆ.
- ನಾಗೇಶ ಹೆಗಡೆ
(ಪುಸ್ತಕದ ಬೆನ್ನುಡಿಯಿಂದ )
ಶೀರ್ಷಿಕೆ: ಚಿಲಿಯ ಕಲಿಗಳು – ಗಣಿ ಪಾತಾಳದಲ್ಲಿ 33 ಜನ 69 ದಿನ ಲೇಖಕರು:ಸರೋಜಾ ಪ್ರಕಾಶ ಪ್ರಕಾಶಕರು: ಭೂಮಿ ಬುಕ್ಸ್ ಪುಟಗಳು:156+8 ಬೆಲೆ:ರೂ.110