ಪುಟಗಳು

ದಲಿತರ ‘ಇಂಗ್ಲಿಷ್ ದೇವತೆ’ ಮಂದಿರಕ್ಕೆ ತಡೆ

ಲಕ್ನೊ, ಅ.30: ಉತ್ತರ ಪ್ರದೇಶದ ಲಖೀಮ್‌ಪುರ ಖೇರಿ ಜಿಲ್ಲೆಯ ಬಂಕಾ ಗ್ರಾಮದ ದಲಿತರು ‘ಇಂಗ್ಲಿಷ್ ದೇವತೆ’ಗೆ ನಿರ್ಮಿಸಿರುವ ದೇವಸ್ಥಾನ ಇದೀಗ ಸಮಸ್ಯೆಯನ್ನು ಎದುರಿಸುತ್ತಿದೆ. ಇಂಗ್ಲಿಷ್ ದೇವತೆಯ ದೇವಸ್ಥಾನ ನಿರ್ಮಿಸಿ ದೇಶಾದ್ಯಂತ ಸುದ್ದಿಯಾಗಿದ್ದ ಇಲ್ಲಿನ ಪ್ರಸ್ತುತ ಮಂದಿರ ನಿರ್ಮಾಣಕ್ಕೆ ಸ್ಥಳೀಯ ಪೊಲೀಸರು ಅಡ್ಡಿ ಪಡಿಸಿದ್ದಾರೆ. ಪ್ರಸ್ತುತ ಮಂದಿರದ ಕಾಮಗಾರಿಯನ್ನು ತಕ್ಷಣವೇ ನಿಲ್ಲಿಸುವಂತೆ ಅವರು ಸೂಚಿಸಿದ್ದಾರೆ.
‘‘ಸ್ಥಳೀಯ ಉಚೌಲಿಯ ಪೊಲೀಸ್ ಠಾಣಾ ಮುಖ್ಯಸ್ಥರು ಕಟ್ಟಡದ ಕಾಮಗಾರಿಯನ್ನು ನಿಲ್ಲಿಸುವಂತೆ ಆದೇಶಿಸಿದ್ದಾರೆ. ಆಡಳಿತದ ಪೂರ್ವ ಅನುಮತಿ ಪಡೆಯದೆ ಯಾವುದೇ ಆರಾಧನಾ ಮಂದಿರವನ್ನು ನಿರ್ಮಿಸದಿರುವಂತೆ ಸುಪ್ರೀಂ ಕೋರ್ಟ್ ಆದೇಶ ಇರುವುದರಿಂದ ಪ್ರಸ್ತುತ ಮಂದಿರದ ಕಾಮಗಾರಿಯನ್ನು ನಿಲ್ಲಿಸುವಂತೆ ಪೊಲೀಸರು ಸೂಚಿಸಿದ್ದಾರೆ’’ ಎಂದು ಚಂದ್ರಬಾನ್ ಪ್ರಸಾದ್ ಹೇಳಿದ್ದಾರೆ.
ಪೊಲೀಸರು ತಿಳಿಸಿರುವ ಸುಪ್ರೀಂ ಕೋರ್ಟ್ ಆದೇಶ, ಸಾರ್ವಜನಿಕ ಸ್ಥಳಗಳಿಗೆ ಸಂಬಂಧಿಸಿದ್ದಾಗಿದೆ. ಆದಾಗ್ಯೂ ಪ್ರಸ್ತುತ ಮಂದಿರವನ್ನು ಖಾಸಗಿ ಆಸ್ತಿಯಲ್ಲಿ ನಿರ್ಮಿಸಲಾಗುತ್ತಿದೆ. ನಳಂದ ಪಬ್ಲಿಕ್ ಶಿಕ್ಷಾ ನಿಕೇತನ್ ನಡೆಸುವ ಚಾಂದ್ ಜುಹಾರ್‌ಗೆ ಸೇರಿದ ಕ್ಯಾಂಪಸ್‌ನಲ್ಲಿ ಈ ದೇವಸ್ಥಾನವನ್ನು ನಿರ್ಮಿಸಲಾಗುತ್ತಿದೆ ಎಂದು ಚಂದ್ರಬಾನ್ ಪ್ರಸಾದ್ ತಿಳಿಸಿದ್ದಾರೆ.
ಲಖೀಂಪುರ ಪೊಲೀಸರ ಪ್ರಕ್ರಿಯೆಯು ಜನರ ಪ್ರಜಾಪ್ರಭುತ್ವದ ಹಕ್ಕುಗಳ ಮೇಲೆ ನಡೆಸಿರುವ ದಾಳಿಯಾಗಿದೆ. ತಕ್ಷಣವೇ ನಿಷೇಧವನ್ನು ಹಿಂದಕ್ಕೆ ಪಡೆಯದಿದ್ದರೆ, ತಾವು ನ್ಯಾಯಾಲಯದ ಮೆಟ್ಟಿಲೇರುವುದಾಗಿ ಚಂದ್ರಬಾನ್ ಪ್ರಸಾದ್ ಎಚ್ಚರಿಸಿದ್ದಾರೆ.
‘‘ದೇವಸ್ಥಾನದ ನಿರ್ಮಾಣ ತಡೆಗೆ ಕಾರಣಗಳೇನು? ಸ್ಥಳೀಯ ದೂರುಗಳೇನಾದರೂ ಇವೆಯಾ ಎಂದು ನಾವು ಪರಿಶೀಲಿಸುತ್ತೇವೆ’’ ಎಂದೂ ಪ್ರಸಾದ್ ತಿಳಿಸಿದರು.
‘‘20 ಕಿ.ಮೀ. ಸುತ್ತಮುತ್ತಲಲ್ಲಿ ಸುಮಾರು ಮೂರು ಶಾಲೆಗಳಿವೆ. ಆ ಶಾಲೆಗಳಲ್ಲಿ ಸರಸ್ವತಿಯ ಪ್ರತಿಮೆಗಳಿವೆ. ಆದರೆ ಇನ್ನೊಂದು ಶಾಲೆಯಲ್ಲಿ ಮಂದಿರ ನಿರ್ಮಾಣವನ್ನು ತಡೆಯುವುದು ದುರದಷ್ಟಕರ’’ ಎಂದು ಪ್ರಸಾದ್ ಅಭಿಪ್ರಾಯ ಪಟ್ಟಿದ್ದಾರೆ.
ಆದಾಗ್ಯೂ ಈ ಆರೋಪಗಳನ್ನು ತಳ್ಳಿ ಹಾಕಿರುವ ಪಸ್ಗಾವನ್ ಪೊಲೀಸ್ ಠಾಣೆಯ ಠಾಣಾಧಿಕಾರಿ ರವಿ ಶ್ರೀವಾಸ್ತವ, ಕಟ್ಟಡ ನಿರ್ಮಾಣಕ್ಕೆ ತಡೆಯೊಡ್ಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.