ಪುಟಗಳು

ಲಂಕೇಶರು ಬರೆದ ಮದ್ದಿನ ಚೀಟಿಗಳು:ಪ್ಯಾಪಿಲಾನ್ ಚಿಂತನೆ



























"ಹದಿನಾರರ ಹುಡುಗಿಗೆ
ನಡು ಬಳುಕಿಸಲೂ
ಕುಡಿಮೀಸೆ ಪೋರನಿಗೆ
ಸಿಳ್ಳೆ ಹಾಕಲೂ
ಹೇಳಿಕೊಡಲು ಹೋದ ಕವಿ ಮೂರ್ಖನಾದ
ಜಾಣೆಯಾದ ಹುಡುಗಿಯೊಂದಿಗೆ
ಹುಡುಗ ಕಾಣೆಯಾದ"


ಇದು ನೀಲು ಪದ್ಯವಲ್ಲ. ಆರೇಳು ವರುಷಗಳ ಹಿಂದೆ ನಾವು ಹುಡುಗರು ನಡೆಸುತ್ತಿದ್ದ ಒಂದು ಅ-ನಿಯತಕಾಲಿಕದಲ್ಲಿ ಗೆಳೆಯ ಬರೆದಿದ್ದ ಪದ್ಯ ಇದು. ಮಿಂಚುಳ್ಳಿ ಎಂಬ ಹೆಸರಿನಲ್ಲಿ ಇದನ್ನು ಬರೆಯುವಾಗ ನಮ್ಮಲ್ಲಿ ಯಾರೂ ಕವಿಗಳಾಗಲೀ, ಓಡಿಹೋಗಬಲ್ಲ ಸಾಹಸಿಗಳಾಗಲೀ ಆಗಿರಲಿಲ್ಲ. ಆದರೆ ಈ ಮೇಲಿನ ಪದ್ಯದಲ್ಲಿನ ಸ್ಪಷ್ಟತೆ ಮಾತ್ರ ಲಂಕೇಶರ ನೀಲುಗಳಿಂದ ನಮ್ಮೊಳಗೆ ಇಳಿದು ಬಂದದ್ದಿರಬೇಕು. ಲಂಕೇಶರ ಪದಗಳ ಖಚಿತವಾದ ಆಯ್ಕೆ, ತೇಜಸ್ವಿಯವರ ವಾಕ್ಯಗಳ ಬಂಧ ನಮಗೆ ಬರೆಯುವುದನ್ನು ಹೇಳಿಕೊಡುತ್ತಿತ್ತು. ರಷ್ಯನ್ ಬರಹಗಾರರ ಕಾದಂಬರಿಗಳ ಕನ್ನಡ ಅನುವಾದಗಳನ್ನು ಓದುವಾಗ ಅವರು ಬಳಸುತ್ತಿದ್ದ ಸ್ಪಷ್ಟ ಪದಗಳು ಆಶ್ಚರ್ಯ ಹುಟ್ಟಿಸುತ್ತಿದ್ದವು. ಉದಾಹರಣೆಗೆ "ಅವಳ ಬಲಿಷ್ಠ ಕಾಲುಗಳು, ಕೊಕ್ಕಿನಂತೆ ಬಾಗಿದ ಬೆನ್ನು..." ಇತ್ಯಾದಿ. ಲಂಕೇಶರಲ್ಲಿ ಮತ್ತೆಮತ್ತೆಂಬಂತೆ ಬರುವ ಪದಗಳಾದ "ಸ್ಪಷ್ಟತೆ, ಆಕ್ರೋಶ, ಸ್ಫೋಟ, ಹಕ್ಕಿ, ದ್ರೋಹ, ಪ್ರಕ್ಷುಬ್ಧತೆ"ಗಳು ಎಷ್ಟು ಬಾರಿ ಬಂದರೂ ಅವುಗಳನ್ನು ಯೋಜಿಸಲ್ಪಟ್ಟ ಕ್ರಮದಿಂದಲೇ ಅವು ಮತ್ತೆ ಚೂಪಾಗಿ ಬೇರೆಬೇರೆ ಅರ್ಥಗಳನ್ನು ಕೊಡುತ್ತಿದ್ದವು. ನನಗೆ ಅವರ ಭಾಷೆಯ ಬಗ್ಗೆ ಆಗುತ್ತಿದ್ದ ಇನ್ನೊಂದು ಸೋಜಿಗವೆಂದರೆ ಈ ಖಾಚಿತ್ಯದ ಗಟ್ಟಿ ಪದಗಳಲ್ಲೇ ಅವರು ಮನಸ್ಸಿನ ಗೊಂದಲ, ಬದುಕಿನ ಅಪೂರ್ಣತೆ, ದ್ವಂದ್ವಗಳನ್ನು ಚಿತ್ರಿಸುತ್ತಿದ್ದುದು. ಮಾರಲಾಗದ ನೆಲ ಕಥೆಯಲ್ಲಿ ಬರುವ ಒಂದು ಚಿತ್ರಣ ನನಗೆ ತುಂಬ ಪ್ರಿಯವಾದುದು. ಹೊಲದಲ್ಲಿ ಆತ ಅವಳನ್ನು ಅಪ್ಪಿ, ನೇವರಿಸಿ ಕುಪ್ಪುಸವನ್ನು ಬಿಚ್ಚುವ ಸನ್ನಾಹದಲ್ಲಿರುವಾಗ ಅವಳು ಅವನನ್ನು ತಬ್ಬಿಕೊಂಡೇ "ಅಣ್ಣಾ.. ಅಣ್ಣಾ.." ಎನ್ನುವುದು ಲಂಕೇಶರ ಭಾಷೆಯಲ್ಲಿ ಮಾತ್ರ ಅಷ್ಟು ತೀವ್ರವಾಗಿ ಮೂಡುವುದಕ್ಕೆ ಸಾಧ್ಯವೇನೋ. ಆ ಸನ್ನಿವೇಶದ ಆವರಣ ಮತ್ತು ಅದರ ಗೊಂದಲಗಳು ಲಂಕೇಶರ ಭಾಷೆಯಲ್ಲಿ ತುಂಬ ಮೂರ್ತವಾಗಿ ನಿಜವಾಗುತ್ತ ಹೋಗುತ್ತದೆ.
ಬರೆದಿದ್ದು ಯಾವುದೂ ಜೊಳ್ಳಲ್ಲವಾದ್ದರಿಂದ ಮತ್ತು ಅದು ಸಿಗರೇಟಿನಿಂದ ಹಿಡಿದು ಸಿನೆಮಾ, ಸಾಹಿತಿ, ಟೆನಿಸ್ಸು ಎಲ್ಲದರ ಕುರಿತೂ ಇರುವುದರಿಂದ ಯಾವುದೂ ಒಮ್ಮೆಗೆ ನೆನಪಾಗುತ್ತಿಲ್ಲ. ಜಗತ್ತಿನಲ್ಲಿ ಸಿಗರೇಟು ಸೇದುವ ನೂರರಲ್ಲಿ ಆರು ಜನಕ್ಕೆ ಕ್ಯಾನ್ಸರ್ ಬರುತ್ತದೆ. ಹಾಗೆಯೇ ನೂರರಲ್ಲಿ ಸ್ತನಗಳಿರುವ ಎಂಟು ಹೆಂಗಸರಿಗೆ ಬ್ರೆಸ್ಟ್ ಕ್ಯಾನ್ಸರ್ ಬರುತ್ತದೆ ಎಂದು ಅವರು ಬರೆದಿದ್ದು; ಮತ್ತು ಅವರ ಮಗಳು ಸಿನೆಮಾ ಮಾಡಿ ಹಾಳು ಮಾಡಿದ ಮುಸ್ಸಂಜೆಯ ಕಥಾ ಪ್ರಸಂಗದ ಟೆಂಟ್ ಸಿನೆಮಾ, ಆ ಕತ್ತಲು, ಆ ಊರನ್ನು ಲಂಕೇಶರು ಚಿತ್ರಿಸುವುದು ಎಲ್ಲವೂ ಅಸ್ಪಷ್ಟವಾಗಿ ಮನಸ್ಸಿನಲ್ಲಿ ಹಾಯುತ್ತವೆ. ಸಂಕ್ರಾಂತಿ ನಾಟಕ ನೋಡುವಾಗ ಅದರ ತಾತ್ವಿಕ ಮತ್ತು ದೃಶ್ಯಗಳ ಬಿಗಿಗೆ ಚಕಿತಗೊಂಡಿದ್ದು ಕೂಡ. ಮೊನ್ನೆ `ಕೆಂಸಂ'ನಲ್ಲಿ ಪ್ರಕಟವಾದ ಒಂದು ಪ್ರತಿಕ್ರಿಯೆ "out dated ಅಂತ ಅನ್ನಿಸಲ್ವಾ ಇದು ಈ ಕಾಲದಲ್ಲಿ?..." ಎಂದಿತ್ತು. ಆಶ್ಚರ್ಯವಾಯಿತು. ದೊಡ್ಡದಾಗಿ ಸಾಮಾಜಿಕ ಅಂತ ನೋಡಿದರೂ ಕೂಡ ಇನ್ನೂ ಮರ್ಯಾದಾ ಹತ್ಯೆಗಳು ಆಗುತ್ತಿರುವ ವೀರಾವೇಶದ ಕಾಲದಲ್ಲೇ ನಾವು ಬದುಕುತ್ತಿದ್ದೇವೆ. ಅಲ್ಲಿಯೂ ಇದೇನೂ Irrelevent ಕಥೆ ಅಲ್ಲ. ತಿಪ್ಪಣ್ಣನದ್ದು dull ವ್ಯಕ್ತಿತ್ವ, ನಗರಪ್ರಜ್ಞೆ, ಶ್ಯಾಮಲಾ ದಡ್ಡಿ, ಇತ್ಯಾದಿಗಳ ಕುರಿತ ಮಾತನ್ನು ಈ ಕಥೆ ನಮ್ಮಿಂದ ಆಡಿಸುತ್ತದೆ ಅಂದರೆ ಅದರ ಅರ್ಥ ಕಥೆಯ ಗಟ್ಟಿತನ ಮತ್ತು ಬಹುಮುಖತೆ ಇರಬೇಕು. ಬಹುಷಃ ಈ ಕಥೆಯಲ್ಲಿ ನಾವು ಗಮನಿಸದೇ ಹೋದ ಇನ್ನೊಂದೆಂದರೆ ತಿಪ್ಪಣ್ಣ ಆಳದಲ್ಲಿ ಸ್ಪಷ್ಟವಾದ ಮನುಷ್ಯನೇ; ಆದರೆ ಕಥೆಗಾರ ಮೊದಲಿಗೇ ಕೊಡುವ ಊರಿನ ಕ್ರೌರ್ಯದ ಚಿತ್ರಣದಿಂದಾಗಿ ತಿಪ್ಪಣ್ಣ ಕೊಲೆಯಾಗಲಿರುವ ಮನುಷ್ಯನಾಗಿ ನಮ್ಮಿಂದ ಸಿಂಪಥಿ ಪಡೆಯುತ್ತ ಕುಬ್ಜನಂತೆ ಕಾಣುತ್ತಾನೆ. ಅವನ ಹಿಂಜರಿಕೆ, ನೋವು, ಆಶೆ- ಇವೆಲ್ಲವೂ "IRRELEVENT" ಅನ್ನಿಸಿದರೆ ಮನುಷ್ಯನ ಎಲ್ಲ ತಲ್ಲಣಗಳೂ Outdatedಡ್ಡೇ.
ಲಂಕೇಶರನ್ನು ಬಯ್ಯುವವರು ಅವರ ಕುರಿತ ಅನೆಕ್^ಡೋಟ್ ಗಳಿಂದಾಗಿ ಹಾಗೆ ಮಾಡುತ್ತಾರೆ. ಯಾವಾಗ ಈ ವ್ಯಕ್ತಿ ಚಿತ್ರಣಗಳು ಕಾಂಟೆಕ್ಸ್ಟ್ ನಿಂದ ಹೊರಗುಳಿದು ಚದುರಿದ ಚಿತ್ರಗಳಂತೆ ನಿಲ್ಲುತ್ತವೆಯೋ ಆಗ ಅವು ಹೇಳಹೊರಟದಕ್ಕಿಂತ ಭಿನ್ನ ಅರ್ಥಕೊಟ್ಟು ಅವನ ವ್ಯಕ್ತಿತ್ವವನ್ನು ನಾಶಮಾಡುವುದು. ಲಂಕೇಶರು ಕೆ.ವಿ ಸುಬ್ಬಣ್ಣನವರ ಮನೆಯಲ್ಲೇ ಕುಳಿತು ಶುರುಮಾಡಿದ ಒಂದು ಕಾದಂಬರಿಗೆ ಮುಂಗಡ ಹಣ ಇಸಿದುಕೊಳ್ಳುವ ಒಂದು ಪ್ರಸ್ತಾಪ ಹುಳಿಮಾವಿನಮರದಲ್ಲಿ ಬರುತ್ತದೆ. ಹೆಗ್ಗೋಡಿನ ಕೆಲವರು ಲಂಕೇಶ್ ಆಮೇಲೆ ನೀನಾಸಂ ಅನ್ನು ಮಠ, ಅಗ್ರಹಾರ ಇತ್ಯಾದಿಯಾಗಿ ಬರೆದರೆಂದು ಮಾತಾಡುವುದುಂಟು. ನನಗೊಮ್ಮೆ ಒಬ್ಬರು ಹೇಳಿದರು. ಲಂಕೇಶರ ಹೆಣ್ಣುಮಕ್ಕಳಲ್ಲೊಬ್ಬರು ನೀನಾಸಮ್ಮಿಗೆ ಹೋಗಿ ಬಂದಮೇಲೆ "ಅಪ್ಪ, ನೀನು ಹೇಳಿದಂತೆ ಇಲ್ಲವಲ್ಲ ನೀನಾಸಂ" ಅಂದರಂತೆ. ಅದಕ್ಕೆ ಲಂಕೇಶ್ "ಮಗಳೇ, ಅದು ನನಗೂ ಗೊತ್ತು. ಆದರೆ ಅದು ನನ್ನ ಸಣ್ಣತನವಷ್ಟೇ" ಎಂದು ಉತ್ತರಿಸಿದರೆಂದು ಆ ಹಿರಿಯರು ನನಗೆ ಹೇಳಿದ್ದರು. ಇಂಥ ಪುಟ್ಟ ಕತೆಗಳೇ ನಮ್ಮನ್ನು ತೇಜಸ್ವಿಯವರೆಡೆಗೂ ಆಕರ್ಷಿಸಿದ್ದವು. ಇಂಥ ಚಿತ್ರಗಳು ಒಬ್ಬೊಬ್ಬರಿಗೆ ಒಂದೊಂದು ರೀತಿಯಾಗಿ ವ್ಯಕ್ತಿತ್ವವನ್ನು ಕಾಣಿಸುವುದರಿಂದ ಈ ಅನೆಕ್^ಡೋಟ್^ಗಳನ್ನು ಇಲ್ಲಿಗೆ ಬಿಡುವ.
ನಾವು ಈಗಿನ ಹುಡುಗರಿಗೆ ಲಂಕೇಶ್ ಗೊತ್ತಿರುವುದು ಏನಾಗಿ? ಕಥೆಗಾರನಾಗಿ ಮತ್ತು ಗಂಭೀರ ಪತ್ರಕರ್ತನಾಗಿ ಅನ್ನಿಸುತ್ತದೆ. ಅವರಲ್ಲಿನ ಕವಿ ಮತ್ತು ನಿರ್ದೇಶಕ ಇಷ್ಟು ವರ್ಷಗಳ ನಂತರ ನಾವು ಹುಡುಗರಿಗೆ ಅಷ್ಟಾಗಿ ತಟ್ಟುವುದು ಕಷ್ಟ. ಬಹುಶಃ ಗೌರಿ ಲಂಕೇಶರ ಅನಗತ್ಯ ಸಿಟ್ಟು ಮತ್ತು ಅತಿರೇಕಗಳು ನಾವು ಈಗಿನ ಹುಡುಗರಿಗೆ ಲಂಕೇಶರಿಗಿದ್ದ ಸೂಕ್ಷ್ಮತೆಯನ್ನು ಅರ್ಥಮಾಡಿಕೊಳ್ಳದಂತೆ ಮಾಡಿರಬಹುದು ಅನ್ನಿಸುತ್ತದೆ. ಅಂದರೆ ಲಂಕೇಶ್ ಪತ್ರಿಕೆಯ ಮುಖಾಂತರ ಅವರು ಸಾಧಿಸಿದ್ದ ಮೊನಚು ಈಗ ಅಲ್ಲಿ ಕೇವಲ ಗೌರಿಯವರ ಕೂಗಾಟವಾಗಿಯೂ ಮತ್ತು ಲಂಕೇಶರಲ್ಲಿನ ನಿರ್ದೇಶಕ ಇಂದ್ರಜಿತ್ ಸೃಷ್ಟಿಸುವ ಕಲಸುಮೇಲೋಗರಗಳಲ್ಲಿಯೂ ಕಳೆದುಹೋಗಿಬಿಟ್ಟು ಆ ಲೇಖಕನ ಜೊತೆಗಿನ ಸಾತತ್ಯ ನಷ್ಟವಾಗಿಹೋಗಿರುವಂತೆ ಕಾಣುತ್ತದೆ. ಅಥವಾ ಈ ಸಾತತ್ಯವು ಒಬ್ಬ ಬರಹಗಾರನ ಬರವಣಿಗೆಯ ಜೊತೆ ಇಟ್ಟುಕೊಳ್ಳಬೇಕಾದ ತಂತುವಾಗದೇ ಕೇವಲ ಆ ಬರಹಗಾರನ ಕುರಿತಾದ ತಪ್ಪುತಿಳುವಳಿಕೆ ಮತ್ತು ಅಗೌರವಗಳು ಮಾತ್ರ ಉಳಿದು ಇಲ್ಲಿ ಲಗಾಟಿ ಹೊಡೆಯುತ್ತಿರುವಂತೆ ಕೂಡಾ ಅನ್ನಿಸುತ್ತದೆ. ಅಕಡೆಮಿಕ್ ವಲಯದ ಮಿಂಚಲ್ಲದ; ಒಬ್ಬ ಹಕ್ಕಿಯಂಥ, ರೈತನಂಥ ಮನುಷ್ಯನಿರಬಹುದಾದ ಅವರ ಅವ್ವ, ಅಕ್ಕ, ಪ್ರಸನ್ನ, ಒಂದು ಬಾಗಿಲು, ಬಿರುಕುಗಳನ್ನು ಓದುವುದು ನಮ್ಮನ್ನು ನಾವು Outdated ಆಗದಂತೆ ತಡೆದುಕೊಳ್ಳುವ ಪ್ರಯತ್ನವಾದೀತೇನೋ.
ಉಮಾಪತಿಯ ಅಸಹಾಯಕತೆಯೂ, ಮುಗ್ಧ ಸಿಟ್ಟೂ ಒಬ್ಬ Relevent ಇಂಜಿನೀಯರನದಲ್ಲವಿರಬಹುದು. ಮುಟ್ಟಿಸಿಕೊಂಡವನು ಕಥೆಯ ಡಾಕ್ಟರೂ, ರೋಗಿಯೂ ಈ ಸಾರ್ವತ್ರಿಕ ಖಾಯಿಲೆಯ ಕಾಲದಲ್ಲಿ ಇರದಿರಬಹುದು. ಗುಣಮುಖದ ರಾಜ ಮತ್ತು ವೈದ್ಯ ಈ ಕಾಲದವರಲ್ಲದಿರಬಹುದು.
ಆದರೆ ಈ ಎಲ್ಲರ ಕ್ಷೋಭೆಯೂ, ಮೌನವೂ, ಚಡಪಡಿಕೆಗಳೂ ನಮ್ಮ ಸುತ್ತ, ಒಳಗೆ ಹಾಗೆಯೇ ಇವೆ. ವಿಮರ್ಶಕರು ಲಂಕೇಶರ ಬರಹಗಳಲ್ಲಿ "ರೋಗ ಮತ್ತು ಚಿಕಿತ್ಸೆ" ಎಂಬ ಫಾರ್ಮುಲಾವನ್ನೇನೋ ಗುರುತಿಸುತ್ತಾರೆ. ನನಗೆ ಲಂಕೇಶರ ಬರಹಗಳು ಮೌನದಲ್ಲಿ ಮನುಷ್ಯರು ತೆಗೆದುಕೊಳ್ಳಬೇಕಾದ ಮದ್ದುಗಳಂತೆ ಕಾಣುತ್ತವೆ.