ಬೆಂಗಳೂರು, ಸೆ. 14: ಬೀಟ್‌ರೂಟ್‌ನಿಂದ ಮದ್ಯ ತಯಾರಿಕೆ ಬಗ್ಗೆ ಸುಳಿವು ಕೊಟ್ಟಿದ್ದ ಮಾನ್ಯ ಅಬಕಾರಿ ಸಚಿವರು ಬುಧವಾರ ಮತ್ತೆ ಅದೇ ರಾಗ ಹಾಡಿದ್ದಾರೆ. ಅಬಕಾರಿ ಕಾಯ್ದೆಗೆ ತಿದ್ದುಪಡಿ ತಂದು ಹೊಸ ಹೊಸ ವಿಧಾನಗಳಲ್ಲಿ ಮದ್ಯ ತಯಾರಿಕೆಗೆ ಉತ್ತೇಜನ ನೀಡಲಾಗುವುದು ಎಂದು ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರೇಣುಕಾಚಾರ್ಯ ಹೇಳಿದ್ದಾರೆ.
ಬೀಟ್‌ರೂಟ್‌ನಿಂದ ಮದ್ಯ ತಯಾರಿಕೆ ಬಗ್ಗೆ ಕಂಪೆನಿಯೊಂದು ಪ್ರಸ್ತಾವನೆ ಸಲ್ಲಿಸಿದೆ. ಇಲಾಖೆಯ ತಾಂತ್ರಿಕ ಸಮಿತಿ ಸಹ ಇದಕ್ಕೆ ಸಮ್ಮತಿಸಿದೆ. ಆದರೆ, ಹೊಸ ವಿಧಾನದ ಮದ್ಯ ತಯಾರಿಕೆಗೆ ಪ್ರಸಕ್ತ ಕಾಯ್ದೆಯಲ್ಲಿ ಅವಕಾಶಗಳಿಲ್ಲ. ಹೀಗಾಗಿ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ರೇಣುಕಾಚಾರ್ಯ ಹೇಳಿದರು.
ಬೀಟ್ ರೂಟ್ ನಂತರ ಟೋಮ್ಯಾಟೋ : 1 ಟನ್ ಬೀಟ್‌ರೂಟ್‌ನಲ್ಲಿ 350 ಲೀಟರ್ ಮದ್ಯ ತಯಾರಿಸಬಹುದು.[ತಯಾರಿಸುವ ವಿಧಾನ ನೋಡಿ] ಈ ಮದ್ಯದಲ್ಲಿ ಶೇ.16ರಷ್ಟು ಸಕ್ಕರೆ ಅಂಶವಿರುತ್ತದೆ. ಕೋಲಾರದ ನಿವೃತ್ತ ಸೇನಾಧಿಕಾರಿಯೊಬ್ಬರು ಟೊಮ್ಯಾಟೊದಿಂದ ಮದ್ಯ ತಯಾರಿಸಲು ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಇದರ ಜೊತೆಗೆ, ರಾಜ್ಯದಲ್ಲಿ ಸಣ್ಣ ಪ್ರಮಾಣದ ಮದ್ಯ ತಯಾರಿಕಾ ಘಟಕ ಸ್ಥಾಪನೆಗೆ ಸರಕಾರ ಸಿದ್ಧತೆ ನಡೆಸಿದೆ. ಚಾನ್ಸರಿ ಹೊಟೇಲ್, ಇಂದಿರಾನಗರದ ಫ್ರೆಶ್‌ಫೋರ್ ಮತ್ತು ನ್ಯೂ ಬಿಇಎಲ್ ರಸ್ತೆಯ ಸ್ಪಿರಿಟ್ ಬಿಯರ್ ವರ್ಲ್ಡ್ ಸಂಸ್ಥೆ ಅರ್ಜಿ ಸಲ್ಲಿಸಿದೆ ಎಂದು ಸಚಿವ ರೇಣುಕಾಚಾರ್ಯ ಹೇಳಿದ್ದಾರೆ