“ಸಿಟಿಯ ಕಗ್ಗತ್ತಲೆಯಿಂದ ಪಾರಾಗಲು ಯತ್ನಿಸಿದವರ ಹಾಡು” “ಕೀಟ್ಸನ ಸಾವನ್ನು ನೆನೆದು-ಒಣಗುತ್ತಿತ್ತು ಗಿಡ ತೊಟಕು ನೀರು ಸಹ ಯಾರೂ ಹನಿಸಲಿಲ್ಲ ಸತ್ತಮೇಲೆ ಕಣ್ಣೀರ ಸುರಿಸಿದರು ವಿಧಿಯ ಆಟವೆಲ್ಲ” ಇಂದಿಗೂ ಬದಲಾಗದ “ದಿನಪತ್ರಿಕೆಯ ಸುದ್ಧಿ ಹಣೆಬರಹ “ಅಲ್ಲಿರುವ ನೆಲ, ನೀರು ಹಳದಿ, ಮುಗಿಲೂ ಹಳದಿ, ಜನ ನಕ್ಕರೂ ಹಳದಿ, ಏನು ಮಂದಿ! “ ಈ ನಡುವೆ ನಾವಿದ್ದೇವೆ-ಅದೇ ರಂಗಭೂಮಿ ಮತ್ತು ನಾನು, ಆಪಾದಿಸುತ್ತಾ, ಸಮರ್ಥಿಸಿಕೊಳ್ಳುತ್ತಾ ಪರಸ್ಪರ ನೋವಿನಲ್ಲಿ ಬೆರಳಾಡಿಸುತ್ತಾ....” ಹೀಗೆಲ್ಲಾ ಹೃದಯಕಾಂತಿಗೆ ಸೂರ್ಯನಾಗಿ ದಿಕ್ಕು ತೋರಿಸಿದ ನನ್ನ ಪ್ರೀತಿಯ ಕಂಬಾರರಿಗೆ ಜ್ಞಾನಪೀಠ ಸನ್ಮಾನವಾಗಿದೆ. 8 ಕವನ ಸಂಕಲನ, 22 ನಾಟಕ, 3 ಬೃಹತ್ ಕಾದಂಬರಿಗಳು, ಎಷ್ಟೆಷ್ಟೋ ಕಥೆಗಳು, ಚಿತ್ರಗಳು ಹಾಡುಗಳು ಇನ್ನೂ ಏನೇನೋ ಇವೆಯಂತೆ ಅವರ ಹೆಮ್ಮೆಯ ಮುಡಿಗೆ, ಆದರೆ ನನಗೆ ಮಾತ್ರ ಚಂದ್ರಶೇಖರ ಕಂಬಾರರ ಬರವಣಿಗೆ, ಭಾಷೆ, ಭಾವವೆಂದರೆ ಗರಡಿ ಮನೆಯ ಸ್ತಬ್ಧ ಚಿತ್ರದಂತೆ. ನನ್ನಂತರಂಗದಂತೆ. ಶ್ರೀರಾಮಚಂದ್ರನ ಧರ್ಮದಂತೆ, ಸೀತೆಯ ನಿಷ್ಠೆಯಂತೆ.
ಊರಿನ ಮುದ್ದು, ಮನೆಯವರ ಕಣ್ಮಣಿ, ಮುಂದೊಂದು ದಿನ ಭೂಮಂಡಲದ ಹಾಹಾಕಾರವ ನೀಗುವ ಶಕ್ತಿಯಾದರೂ ಅಮ್ಮನಿಗೆ ಮಾತ್ರ ಮಗು “ನನ್ನ ಬಂಗಾರ” ತಾನೆ? ಹಾಗೇ, ಬೇಂದ್ರೆ ಅಜ್ಜನ ನಂತರ ಭಾಷೆಯನ್ನು ಅದ್ಭುತವಾಗಿ ಕಟ್ಟಿಕೊಟ್ಟವರು ಕಂಬಾರರು ಅಂತ ಪಂಡಿತರು ಹೇಳುತ್ತಿದ್ದರೂ ನನಗೆ ಮಾತ್ರ ತೀರ್ಥರೂಪು “ನನ್ನ ಕಂಬಾರರು” ಅಷ್ಟೆ. ಅದಕ್ಕೆ ಒಂದಷ್ಟು ದಿನಗಳ ಹಿಂದೆ ಪಾಂಡಿತ್ಯ ಪ್ರಖರರೊಬ್ಬರೊಂದಿಗೆ ಸರಿಸುಮಾರು ಯುದ್ಧವನ್ನೇ ಮಾಡಿದ್ದೆ. ಅವರ ಪ್ರಕಾರ ಇಂಗ್ಲಿಷಿಗೆ ಅಸಾಧ್ಯವೆಂಬುದೇ ಇಲ್ಲ! ನಾನು ಕೇಳಿದ್ದು ಸಣ್ಣ ಪ್ರಶ್ನೆಯಷ್ಟೆ, ಕಂಬಾರರ “ಗೌತಮ ಕಂಡ ಪ್ರಥಮ ದರ್ಶನ” ಪದ್ಯದ ಈ ಸಾಲುಗಳನ್ನು ಇಂಗ್ಲಿಷಿಗೆ ತನ್ನಿ ಅಂತ “ಗದಬಡಿಸಿ ಗದಬಡಿಸಿದವನೆ ಹುಡುಕಾಡಿ, ಹುಡುಕಾಡಿದವನೆ ಕೊನೆಗೆ ಹಾಸಿಗೆಗೆ ಬಂದು ನೋಡುತ್ತೇನೆ: ನನ್ನ ಪಾಲಿನ ಹುಡುಗಿ ಇದಕೆ ಹಾಸುಗೆಯಾಗಿ, ಅರೆಗಣ್ಣ ತುದಿಯ ಸೂರು ಜತಿಯಗುಂಟ ಸ್ವರ್ಗದುಯ್ಯಾಲೆ ಕಟ್ಟಿದಹಲ್ಯೆ.” “ತಪ್ಪಿದ್ದರೆ ಕ್ಷಮಿಸಿ ನಾನು ಅಧಮಳು” ಅಂದರೂ ಉತ್ತಮರ ಸಿಟ್ಟು ಇಂದಿಗೂ ಇಳಿದಿಲ್ಲ!
ಕನ್ನಡವೆಂದರೆ ಕಂಬಾರರು ಅಷ್ಟೆ : ಅಂದಹಾಗೆ, ಆ ದಿನ ಬಾಗಿಲು ತೆರೆದಾಗ ಅಯ್ಯರ್ ಮಾಮ ಜೋರಾಗಿ ನಗುತ್ತಾ ಒಳಬಂದರು. ಮಾಮಿಗೆ ಸಂಕೋಚ. ಸೆರಗು ಸರಿ ಮಾಡ್ಕೊಳ್ಳುತ್ತಾ ಗಂಡ ಆಗಲೇ ಪಟ್ಟಾಂಗ ಹಾಕಿಕೊಂಡಿದ್ದ ಸೋಫಾ ಮೆಲೆ ಕುಳಿತರು. ಸೌಜನ್ಯಕ್ಕೆ “ತೊಟ್ಟು ಹಾಲು ಕೊಡಲೇ” ಎಂದೇ. ಅಷ್ಟೇ ಸಾಕು ಮಾಮಾ ತಮಿಳು ಮಿಶ್ರಿತ ಇಂಗ್ಲಿಷ್ನಲ್ಲಿ ಹೇಳ್ತಾ ಹೋದರು “ಕೆಳಜಾತಿಯ ತಮಿಳರಿಗೆ ನಾಲಿಗೆ ಹೊರಳದೆ ತಮಿಳನ್ನು ಅಪಭ್ರಂಶಗೊಳಿಸಿದರು. ಅದೇ ಕನ್ನಡವಾಯ್ತು. ಪಾಲು ಹಾಲಾಯ್ತು. ಇಲ್ಲದಿದ್ದರೆ ಕನ್ನಡಕ್ಕೆ ಸ್ವಂತ ಅಸ್ತಿತ್ತ್ವವೆ ಇಲ್ಲ. ಅದು ಭಾಷೆಯೇ ಅಲ್ಲ. ನಿನಗೆ ಗೊತ್ತಾ? ಸರಸ್ವತಿ ತಮಿಳರ ದೇವತೆ” ಹೀಗೆ ಇನ್ನೂ ಏನೇನೋ. ನನಗೆ ಅದೆಲ್ಲಾ ತಿಳಿಯೋಲ್ಲ. ನನಗೆ ಕನ್ನಡವೆಂದರೆ ಶಾಲೆಯಲ್ಲಿ ಮುದ್ದಣನ ಶ್ರೀಮತಿ ಸ್ವಯಂವರ ಹೇಳಿಕೊಟ್ಟ ಪದ್ಮಾ ಮಿಸ್ ಮತ್ತು ಚಂದ್ರಶೇಖರ ಕಂಬಾರರು ಅಷ್ಟೆ!
ಮಾಮಿಗೆ ಮುಜುಗರವಾಗ್ತಿತ್ತು. ಹಿರಿಯರನ್ನು ಹೀಗೆಳೆಯುವುದು ನಮ್ಮ ಸಂಸ್ಕೃತಿಯಲ್ಲ್ವಲ್ಲಾ? ಅದಕ್ಕೆ ವಾತಾವರಣ ತಿಳಿ ಮಾಡಲು, ಒಳಗೆ ಹೋಗಿ ಮಾಡಿದ್ದ ಹೆಸರುಬೇಳೆ ಕೋಸಂಬರಿಯನ್ನು ಬಟ್ಟಲುಗಳಿಗೆ ಹಾಕಿ ತಂದುಕೊಟ್ಟೆ. ತತ್ಕ್ಷಣ ಮಾಮಾ “ಅರೆ, ಇದು ತಮಿಳರ ತಿಂಡಿ. ನೀನು ಹೇಗೆ ಕಲಿತೆ?” ಅಂದು ಬಿಡೋದೇ? ಸಿಟ್ಟು ಕ್ರೂರ ಸೂರ್ಯನಂತೆ ನೆತ್ತಿ ಸುಡುತ್ತಿದ್ದರೂ, ನಾನು ಪ್ರತಿಭಟಿಸಲಿಲ್ಲ. ಇತ್ತೀಚೆಗೆ ಕಂಬಾರರೇ ನನ್ನ ಮೌನಕ್ಕೂ ಕನ್ನಡದಲ್ಲಿ ಮಾತನಾಡುವ ಸೊಗಡನ್ನು ಪರಿಚಯಿಸಿಕೊಟ್ಟಿದ್ದಾರೆ. ಹಾಗಾಗಿ ನನ್ನ ನಾಳೆಗಳು ಅವರೇ ಹೇಳಿದಂತೆ ಸಂಸ್ಕೃತಿಯಿಂದ ವಿಸ್ಮೃತಿಗೊಳ್ಳಲಾರದೆಂಬ ಭರವಸೆಯಿದೆ, ಹೇಗೆಂದಿರಾ? ಅವರ ಶಿವಾಪುರದ ಪ್ರತಿಮೆಗಳಲ್ಲಿ ಒಂದಾದ ಪದ್ಯ ಸಾಲುಗಳು ಕೇಳುತ್ತ್ವೆ “ಬೇಕಾದಷ್ಟು ಕನಸುಗಳಿವೆಯಲ್ಲಾ ಬದುಕಕ್ಕೆ ಇನ್ನೇನು ಬೇಕು ಗೆಳತಿ...?” ಹೀಗೆ ಕಂಡ ಕನಸೊಂದು ಇಂದು ನನಸಾಗಿದೆ. ಕಂಬಾರರ ಪಾದಕ್ಕೆರಗಿ ಪೀಠದ ಜ್ಞಾನ ಸ್ಫಟಿಕದಂತೆ ಸ್ಫುರಿಸಿದೆ. ಜ್ಞಾನಪೀಠದ ಔನತ್ಯವನ್ನು ಹೆಚ್ಚಿಸಿರುವ ಹಿರಿಯರ ಚರಣಸ್ಪರ್ಶಿಸುತ್ತಿರುವ ಈ ಸಮಯದಲ್ಲಿ ನನ್ನ ಮನಸ್ಸಿನಲ್ಲಿ ಕಂಬಾರರು ಹಾದುಹೋದದ್ದು ಹೀಗೆ