ಬೆಂಗಳೂರು, ನ. 5 : ಬಕ್ರೀದ್ ಹಬ್ಬ ಇನ್ನೆರಡು ದಿನ(ನ.7)ಗಳಿರುವಾಗ ಬೆಂಗಳೂರಿನ ಮುಸ್ಲಿಂ ಬಾಂಧವರು ತೀವ್ರ ಕಳವಳಕ್ಕೀಡಾಗುತ್ತಿದ್ದಾರೆ. ಆಡುಗಳನ್ನು ಬೆಂಗಳೂರಿನಲ್ಲಿ ಕೊಳ್ಳುವ ಬದಲು ಆಂಧ್ರದ ಧರ್ಮಾವರಂ ಮತ್ತು ತಮಿಳುನಾಡಿನ ಕೃಷ್ಣಗಿರಿಯಲ್ಲಿ ಕೊಂಡಿದ್ದಕ್ಕಾಗಿ ತಲೆತಲೆ ಚಚ್ಚಿಕೊಳ್ಳುತ್ತಿದ್ದಾರೆ.
ಏಕೆಂದರೆ, ಕಳೆದ ಒಂದು ದಿನದಲ್ಲಿ ಅಲ್ಲಿಂದ ಕೊಂಡು ತಂದಿದ್ದ ಸುಮಾರು 120 ಆಡುಗಳು ಮುಸ್ಲಿಂರ ಹೊಟ್ಟೆಯ ಬದಲು ಅಲ್ಲಾನ ಪಾದ ಸೇರಿಕೊಂಡಿವೆ. ಜಾಸ್ತಿ ಶಾಣ್ಯಾತನ ಮಾಡಲು ಹೋಗಿ ನಾವೇ ಬಕರಾಗಳಾದೆವಾ ಎಂದು ಪ್ರಲಾಪಿಸುತ್ತಿದ್ದಾರೆ. ದುಡ್ಡೂ ಇಲ್ಲ ಆಡೂ ಇಲ್ಲದಂತಾಗಿದೆ.
ಬಕ್ರೀದ್ ಅಥವಾ ಈದ್-ಉಲ್-ಜುಹಾ ಅಂದರೆ ಅಲ್ಲಾಹುವನ್ನು ಮೆಚ್ಚಿಸುವ ಸಲುವಾಗಿ ದಷ್ಟಪುಷ್ಟವಾಗಿ ಬೆಳೆದ ಬಕರಾ ಅಥವಾ ಆಡುಗಳನ್ನು ಬಲಿ ಕೊಡುವ ಸಂತಸದ ಹಬ್ಬ. ಆಡುಗಳನ್ನು ಬಲಿಕೊಟ್ಟ ನಂತರ ಮಟನ್ ಅನ್ನು ಮನೆಮಂದಿಯೆಲ್ಲ ಹಂಚಿ ತಿನ್ನುತ್ತಾರೆ. ಬಡವರಿಗೂ ಹಂಚುತ್ತಾರೆ.
ಆಡುಗಳು ಏಕೆ ಸತ್ತವು ಎಂಬುದು ಇನ್ನೂ ಬಗೆಹರಿಸಲಾಗದ ಪ್ರಶ್ನೆಯಾಗಿದೆ. ರಾತ್ರಿ ತಂದ ಆಡುಗಳು ಬೆಳಗು ಹರಿಯುತ್ತಿದ್ದಂತೆ ಕಣ್ಣು ಮೇಲೆ ಮಾಡಿವೆ. ಮೂರು ಸಾವಿರ ಉಳಿಸಲು ಹೋಗಿ ಪರರಾಜ್ಯದ ಮಾರಾಟಗಾರರಿಂದ ಮೂರು ನಾಮ ಹಾಕಿಸಿಕೊಂಡು ಬಂದಂತಾಗಿದೆ.
ಬೆಂಗಳೂರಿನಲ್ಲಿ ಏನಿಲ್ಲೆಂದರೂ ಪ್ರತಿ ಆಡಿಗೆ 8ರಿಂದ 10 ಸಾವಿರ ಬೆಲೆ. ಧರ್ಮಾವರಂ ಅಥವಾ ಕೃಷ್ಣಗಿರಿಯಲ್ಲಾದರೆ 5ರಿಂದ 6 ಸಾವಿರ ರು.ಯಲ್ಲಿ ದಕ್ಕಿಬಿಡುತ್ತದೆ. ಅಲ್ಲಿಂದ ತರುವ ಖರ್ಚನ್ನೆಲ್ಲ ವ್ಯಯ ಮಾಡಿದರೆ ಎರಡೂವರೆಯಿಂದ ಮೂರು ಸಾವಿರ ರುಪಾಯಿ ಬಚಾವ್ ಮಾಡಬಹುದೆಂದು ಅವರು ಎಣಿಸಿದ್ದರು.
ಕೃಪೆ
- ಒನ್ ಇಂಡಿಯಾ ಕನ್ನಡ