ಪುಟಗಳು

ಜಯಪ್ರಕಾಶ್ ನಾರಾಯಣ : ಒಂದು ಅಪೂರ್ಣ ಕ್ರಾಂತಿಯ ಕಥೆ



2003 ರಲ್ಲಿ ಪ್ರಕಟವಾಗಿದ್ದ ಈ ಪುಸ್ತಕದ ಪರಿಷ್ಕೃತ ಆವೃತ್ತಿ ಇದು. ಜೆಪಿ ಇನ್ನೂ ಬದುಕಿದ್ದಾಗ, ಅವರ ಸಂಪೂರ್ಣ ಕ್ರಾಂತಿಯ ಕಾವು ಇನ್ನೂ ಆರದಿದ್ದಾಗ, ದಿಲ್ಲಿಯಲ್ಲಿದ್ದ ಕಾರಣ ಅವರ ಚಳುವಳಿಯ ಸ್ವರೂಪವನ್ನು ಕಣ್ಣಾರೆ ಕಂಡು ಪ್ರಭಾವಿತರಾಗಿದ್ದ ಲೇಖಕರು ಇದೀಗ ಈ ಪುಸ್ತಕವನ್ನು ತಮ್ಮ ತಲೆಮಾರಿನವರು ಹಳೆಯ ನೆನಪುಗಳನ್ನು ಮೆಲುಕು ಹಾಕಲು, ತಮ್ಮ ಹೋರಾಟ-ಹಾರಾಟದ ದಿನಗಳನ್ನು ಪುನರ್ರಚಿಸಿಕೊಳ್ಳಲು ಹಾಗೂ ಈ ತಲೆಮಾರಿನವರು ತಮ್ಮ ಹಿಂದಿನ ತಲೆಮಾರಿನವರು ಒಂದು ರಾಷ್ಟ್ರವನ್ನು ಕಟ್ಟಲು ಏನೆಲ್ಲಾ ಆದರ್ಶಗಳನ್ನು ರೂಪಿಸಿಕೊಂಡಿದ್ದರು, ಮೌಲ್ಯಗಳನ್ನು ರೂಢಿಸಿಕೊಂಡಿದ್ದರು… ಮುಂತಾಗಿ ತಿಳಿಯಲು ಓದಬೇಕೆಂದು ಸೂಚಿಸುತ್ತಾರೆ.
ಖಂಡಿತಾ ಸರಿ. ಆದರೆ ಖಂಡತುಂಡ ವಾಕ್ಯಗಳ, ಸಂಕೀರ್ಣ ವಿಚಾರಗಳ ನಾಗಭೂಷಣ ಯಾಕೋ ಇಲ್ಲಿ sounds too much simpleton! ಆದರೂ ಪಾಶವೀ ಶಕ್ತಿಯೊಂದರ ಹಿಡಿತದಲ್ಲಿ ಇಡೀ ದೇಶವೇ ನಲುಗುತ್ತಿದ್ದಾಗ ತಮ್ಮ ಅತ್ಯಂತ ಸೌಮ್ಯ ರೂಪದಲ್ಲೇ ಅದಕ್ಕೊಂದು ಮುಕ್ತಿ ಕರುಣಿಸಿದ ಮಹಾನ್ ಚೇತನ ಜೆಪಿ ಯವರ ಕುರಿತು ಇಡೀ ಸಮುದಾಯಕ್ಕೇ ಇಂತಹುದೊಂದು ಭಕ್ತಿ-ಗೌರವಗಳಿರುವುದನ್ನು ಮರೆಯುವಂತಿಲ್ಲ. ಅತಂತ್ರ ವಿಧಾನಸಭೆಗಳ, ಅನೈತಿಕ ಮೈತ್ರಿಕೂಟ ಸರಕಾರಗಳ ಈ ಹೊತ್ತಿನಲ್ಲಿ ಅವರ `ಸಾಮಾಜಿಕ ಪುನರ್ರಚನೆ ಒಂದು ಭೌತವಾದಿ ತತ್ವಶಾಸ್ತ್ರದ ಸ್ಫೂರ್ತಿಯೊಂದಿಗೆ ಯಶಸ್ವಿಯಾಗಲಾರದು, ಅದಕ್ಕಾಗಿ ಭೌತೇತರವಾದವೊಂದರ ಅಗತ್ಯ ಇದೆ‘ ಎನ್ನುವ ವಿಚಾರ ನಿಲುಕಲಾರದಷ್ಟು ಎತ್ತರದಲ್ಲಿದೆ ಎನ್ನುವುದೂ ನಿಜ. ಇಷ್ಟಿದ್ದರೂ ಮತ್ತೊಬ್ಬ ಲೋಕನಾಯಕನ ಆಗಮನಕ್ಕಾಗಿ ಕಾಯುವುದನ್ನು ನಿಲ್ಲಿಸದಿರೋಣ.


ಶೀರ್ಷಿಕೆ : ಜಯಪ್ರಕಾಶ್ ನಾರಾಯಣ : ಒಂದು ಅಪೂರ್ಣ ಕ್ರಾಂತಿಯ ಕಥೆ

ಲೇಖಕರು : ಡಿ. ಎಸ್. ನಾಗಭೂಷಣ

ಪ್ರಕಾಶಕರು : ಅಭಿರುಚಿ ಪ್ರಕಾಶನ

ಪುಟಗಳು : 200 ಬೆಲೆ: ರೂ.120/-
ಕೃಪೆ : ವಿಜಯ ಕರ್ನಾಟಕ