ಪುಟಗಳು

ಗಾಂಚಾಲಿ ಬಿಟ್ಟು ಕನ್ನಡ ಬಳಸುವವರಿಗೆ ಜೈ

Fight for Kannada on Facebook (pic : ganeshwallpapers.com)
 
"ಪರಿಭಾಷಿಗರು ಕನ್ನಡ ಬಳಸಬೇಕಾದರೆ ಬಾರುಕೋಲು ಹಿಡಿಯಲೇಬೇಕು. ಅನ್ಯ ದಾರಿಯೇ ಇಲ್ಲ" ಹೀಗಂತ ಸುಮಾರು ಹನ್ನೆರಡು ವರ್ಷಗಳ ಹಿಂದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಕವಿ ಚಂದ್ರಶೇಖರ ಪಾಟೀಲ ಅವರು ಮಾತಿನ ಚಾಟಿ ಬೀಸಿದ್ದರು. ಇಂದಿನ ಕಅಪ್ರಾದ ಅಧ್ಯಕ್ಷರಾಗಿರುವ 'ಮುಖ್ಯಮಂತ್ರಿ' ಚಂದ್ರು ಅವರು ಹೊರರಾಜ್ಯಗಳಿಂದ ಇಲ್ಲಿ ಬರೆಸಿರುವವರು ಪ್ರಾಥಮಿಕ ಕನ್ನಡ ಭಾಷೆಯಲ್ಲಿ ತೇರ್ಗಡೆಯಾಗಬೇಕು ಎಂಬ ಫರ್ಮಾನು ಹೊರಡಿಸಬೇಕೆಂದು ವಿಧಾನಸೌಧದ ಕಡೆ ಒಂದು ಕಲ್ಲು ಬೀರಿದ್ದಾರೆ.

ಈ ಪ್ರಸ್ತಾವನೆಗೆ ಫೇಸ್ ಬುಕ್ ನಲ್ಲಿ ಪ್ರಭೃತಿಯೊಬ್ಬ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿ, ಕನ್ನಡರೆಲ್ಲರಿಂದ ಉಗಿಸಿಕೊಂಡು, ಕರ್ಚೀಫಿನಿಂದ ಮುಖ ಒರೆಸಿಕೊಂಡು ಕ್ಷಮಾಪಣೆ ಪತ್ರ ಬರೆದಿದ್ದಾನೆ. ಫೇಸ್ ಬುಕ್ಕಿನಲ್ಲಿ ಕನ್ನಡ ದ್ವೇಷಿಗಳ ವಿರುದ್ಧ ಕನ್ನಡ ಪ್ರೇಮಿಗಳು ಯುದ್ಧವನ್ನೇ ಸಾರಿದ್ದಾರೆ. 'ಕನ್ನಡ ದ್ವೇಷಿಗಳ ವಿರುದ್ಧ ಕರ್ನಾಟಕ' ಎಂಬ ಗುಂಪು ಕಟ್ಟಿಕೊಂಡಿರುವ ಕನ್ನಡದ ಕಟ್ಟಾಳುಗಳು ಕನ್ನಡದ ಉಳಿವಿಗಾಗಿ ತಮ್ಮ ಕೈಲಾದ ಯತ್ನವನ್ನು ಮಾಡುತ್ತಿದ್ದಾರೆ. ಯುದ್ಧರಂಗಕ್ಕಿಳಿಯದೆ ಯುದ್ಧ ಗೆಲ್ಲುವುದು ಅಸಾಧ್ಯ!

ಆದರೆ, ಬೆಂಗಳೂರನ್ನು ಬಂದು ಬಂದು ತುಂಬುತ್ತಿರುವ ಅನ್ಯಭಾಷಿಕರು ಕನ್ನಡ ಕಲಿಯುವಂತೆ ಮಾಡುವುದು ಹೇಗೆ? ಕನ್ನಡ ಮಣ್ಣಿನ ವಾಸನೆ, ನೀರು, ಗಾಳಿ ಕುಡಿದು ಆಹಾರ ತಿನ್ನುವ ಪರಭಾಷಿಕರು ತಾವಾಗಿಯೇ ಕನ್ನಡ ಮೇಲೆ ಪ್ರೀತಿ ಗಳಿಸಿಕೊಂಡು ಕನ್ನಡ ಕಲಿಯುತ್ತಾರೆಂದು ಕೂಡಲು ಸಾಧ್ಯವೆ? ಬೆಂಗಳೂರೇ ಕಾಸ್ಮೋಪಾಲಿಟನ್ ಸಿಟಿಯಾಗಿರುವಾಗ, ಕನ್ನಡದವರೇ ಇಂಗ್ಲಿಷ್ ನಲ್ಲಿ ಟುಸ್ ಪುಸ್ ಅಂತ ಮಾತಾಡುವಾಗ ತಾವೇಕೆ ಕನ್ನಡ ಕಲಿಯಬೇಕು ಎಂಬ ಉಢಾಫೆ ಬೆಳೆಸಿಕೊಂಡಿರುವ ಇಂಥವರಿಗೆ ಕನ್ನಡ ಕಲಿಸುವುದು ಹೇಗೆ? ನಮ್ಮವರಲ್ಲಿಯೇ ಕನ್ನಡ ಪ್ರೀತಿ ಬೆಳೆಸುವುದು ಹೇಗೆ?

ಸಾಮ, ಭೇದದಿಂದ ಕನ್ನಡ ಕಲಿಸುವುದು ಸಾಧ್ಯವೇ ಇಲ್ಲ, ಕಲಿಸಲು ಯಾರಿಗೆ ತಾಳ್ಮೆಯೂ ಇಲ್ಲ. ಇರುವುದೊಂದೇ ದಂಡೋಪಾಯ. ಇದನ್ನು ಮನಗಂಡಿರುವ ವೀರೋಚಿತ ಕನ್ನಡ ಯುವಕರ ಪಡೆ ಫೇಸ್ ಬುಕ್ ನಲ್ಲಿ 'ಗಾಂಚಲಿ ಬಿಡಿ ಕನ್ನಡ ಮಾತಾಡಿ' ಎಂಬ ತಂಡ ಕಟ್ಟಿರುವ ಸಾವಿರಕ್ಕೆ ಹತ್ತಿರದ ಕನ್ನಡಿಗರ ಗ್ಯಾಂಗ್ ಕನ್ನಡದ ಅವಸಾನವಾಗಲು ಬಿಡುವುದಿಲ್ಲ ಎಂದು ತೊಡೆತಟ್ಟಿ ನಿಂತಿದೆ.

ಕನ್ನಡ ನಾಡಿನ ಸಂಸ್ಕೃತಿ, ಸಾಹಿತ್ಯ ಶ್ರೀಮಂತಿಕೆಯನ್ನು ಹೊಗಳಲು ಮತ್ತು ಹಬ್ಬಿಸುವ ಕೆಲಸಕ್ಕೆ ಮಾತ್ರ ಈ ಗುಂಪಿನ ಚಟುವಟಿಕೆ ಸೀಮಿತವಾಗದಿರಲಿ. ಗಾಂಚಲಿ ಬಿಡು ಕನ್ನಡ ಮಾತಾಡು ಎಂಬ ನುಡಿಗಳಲಿ ಇರುವ ಗತ್ತು ನಮ್ಮ ನಡೆಗಳಲೂ ಅವ್ಯಾಹತವಾಗಿ ಮುಂದುವರೆಯಲಿ. ಕನ್ನಡವನ್ನು ಉಳಿಸುವ ಬಗ್ಗೆ ಮಾತ್ರವಲ್ಲ, ಕನ್ನಡವನ್ನು ಅನ್ಯಭಾಷಿಕರಲ್ಲಿ ಬಿತ್ತುವ ಕೆಲಸವೂ ನಮ್ಮ ಕನ್ನಡಿಗರಿಂದ ಆಗಬೇಕಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡ ಮಾತಾಡಲು ಅಸಹ್ಯ ಪಟ್ಟುಕೊಳ್ಳುವ ಕನ್ನಡಿಗರನ್ನು ಮುಂದೆ ನಿಲ್ಲಿಸಿಕೊಂಡೇ, ಗಾಂಚಲಿ ಬಿಡು ಕನ್ನಡ ಮಾತಾಡು ಎಂದು ಧೈರ್ಯವಾಗಿ ಹೇಳಬೇಕಿದೆ. ಕನ್ನಡ ಪರವಾಗಿ ಚಂದ್ರ ಮತ್ತು ಚಂದ್ರುಗಳಿಬ್ಬರು ಊದಿರುವ ಯುದ್ಧ ಕಹಳೆಗೆ ಕನ್ನಡಿಗರು ಪ್ರತಿಸ್ಪಂದಿಸಬೇಕಿದೆ. ಫೇಸ್ ಬುಕ್ ಕನ್ನಡಿಗರಿಗೆ ಜೈ, ಕನ್ನಡಕ್ಕಾಗಿ ಗುಂಪು ಕಟ್ಟಿಕೊಂಡು ಕನ್ನಡದ ರಕ್ಷಣೆಗಾಗಿ ಟೊಂಕಕಟ್ಟಿ ನಿಂತಿರುವ ಕನ್ನಡಿಗರಿಗೆ ಜಯಸಿಗಲಿ. [ದಟ್ಸ್ ಕನ್ನಡ ಫೇಸ್ ಬುಕ್ ಫ್ಯಾನ್ ಕ್ಲಬ್ ಸೇರಿಸಿ]