ಪುಟಗಳು

ವರಮಹಾಲಕ್ಷ್ಮಿ ವ್ರತ

ವರಮಹಾಲಕ್ಷ್ಮಿ ಹಬ್ಬವು ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲೊಂದು.
ಮಹಾಲಕ್ಷ್ಮಿಯನ್ನು ವಿಶೇಷವಾಗಿ ಪೂಜಿಸುವ ಈ ಹಬ್ಬವನ್ನು ಶ್ರಾವಣ ಮಾಸದ ಶ್ರಾವಣ ಮಾಸದ ಎರಡನೆಯ ಶುಕ್ರವಾರದಂದು , ಹುಣ್ಣಿಮೆಗೆ ಅತಿ ಹತ್ತಿರವಾದ ಶುಕ್ರವಾರ - ಈ ವ್ರತವನ್ನು ಆಚರಿಸುವ ಪದ್ಧತಿ ಇದೆ. ಕಾರಣಾಂತರಗಳಿಂದ ಆ ದಿನದಂದು ವ್ರತವನ್ನು ಮಾಡಲಾಗದಿದ್ದವರು ನವರಾತ್ರಿಯ ಶುಕ್ರವಾರದಂದು ಮಾಡಬಹುದು.

" ಯಾ ರಕ್ತಾ೦ಬುಜ ವಾಸಿನಿ, ವಿಲಾಸಿನಿ, ಚ೦ಡಾಶು ತೇಜಸ್ವಿನಿ
  ಆ ರಕ್ತ ರುದಿರಾ೦ಬರ ಹರಿಸಖಿ ಯಾಶ್ರಿ ಮನೋಹ್ಲಾದಿನಿ,
ಯಾ ರತ್ನಾಕರ,ಮ೦ತನಾತ್ಪ್ರ ಘಟಿತ  ವಿಶ್ಣೋಶ್ಛ ಯಾ ಗೇಹಿನಿ
   ಸಾಮಾ೦ಪಾತು, ಮನೋರಮ ಪದ್ಮಾವತಿ "

ವ್ರತ ಆಚರಿಸುವ ವಿಧಾನ

ಶುಕ್ರವಾರದ ದಿನ, ಸಾಯಂಕಾಲದವರೆವಿಗೂ ಉಪವಾಸ ಇರಬೇಕು. ವ್ರತ ಮಾಡುವವರು ಸಂಕಲ್ಪ ಮಾಡಿ ದೇವಿಯನ್ನು ಕಲಶ ಮತ್ತು ವಿಗ್ರಹಗಳಲ್ಲಿ ಆವಾಹನೆ ಮಾಡಿ ಪೂಜಿಸುವರು. ಕಲಶದಲ್ಲಿ ಅಕ್ಕಿ ತುಂಬಿಸಿ ಖರ್ಜೂರ, ಗೋಡಂಬಿ,ದ್ರಾಕ್ಷಿ, ಬಾದಾಮಿ, ಕಲ್ಲುಸಕ್ಕರೆ ಮತ್ತು ಕೆಲವು ಹಣ್ಣುಗಳನ್ನು ಇರಿಸುವರು. ಈ ಕಳಸಕ್ಕೆ ಲಕ್ಷ್ಮೀ ಕಳಸ ಎನ್ನುತ್ತಾರೆ. ಅದರ ಮೇಲೆ ಚಿನ್ನ ಅಥವಾ ಬೆಳ್ಳಿಯಿಂದ ತಯಾರಿಸಿದ ಮುಖವಾಡವನ್ನಿಟ್ಟು ಅಥವಾ ತೆಂಗಿನಕಾಯಿಗೆ ಹಳದಿಯ ಹಿಟ್ಟಿನಿಂದ ಮೂಗು ಕಣ್ಣು ಕಿವಿ ಮಾಡಿ, ಒಡವೆಗಳನ್ನು ಏರಿಸಿ, ಸೀರೆ ಉಡಿಸಿ, ಅಲಂಕಾರ ಮಾಡಲಾಗುತ್ತದೆ.

ಈ ಪೂಜೆಯಲ್ಲಿ ವಿಶೇಷವಾದ ದಾರಗಳಿಗೆ ಪೂಜೆಯನ್ನು ಸಲ್ಲಿಸುವರು. ಈ ದಾರವನ್ನು ದೋರವೆಂದು ಕರೆವರು. ಹೊಸದಾದ ೧೨ ದಾರಗಳಿಗೆ ೧೨ ಗಂಟುಗಳನ್ನು ಹಾಕಿ, ಅದನ್ನು ಸ್ವಲ್ಪ ನೀರಿನಲ್ಲಿ ನೆನೆಸಿ ಅರಿಶಿನ ಹಚ್ಚಿ ದೇವಿಯ ಪಕ್ಕದಲ್ಲಿರಿಸಿ ಆರಾಧಿಸಿ ಪೂಜಿಸುವರು. ಈ ದಾರಗಳಿಗೆ ಅರಿಶಿನ, ಕುಂಕುಮ, ಹೂವು, ಪತ್ರೆಗಳಿಂದ ಪೂಜಿಸಿ, ನೈವೇದ್ಯ ಮಾಡುವರು. ಹನ್ನೆರಡು ಹೆಸರುಗಳನ್ನು ಉಚ್ಚರಿಸಿ ದ್ವಾದಶನಾಮಾವಳಿಯೆಂದು ಪೂಜಿಸುವರು. ಆ ನಾಮಾವಳಿಗಳು ಹೀಗಿವೆ -ರಮೆ, ಸರ್ವಮಂಗಳೆ, ಕಮಲವಾಸಿನೆ, ಮನ್ಮಥಜನನಿ, ವಿಷ್ಣುವಲ್ಲಭೆ, ಕ್ಷೀರಾಬ್ಧಿಕನ್ಯಕೆ, ಲೋಕಮಾತೆ, ಭಾರ್ಗವಿ, ಪದ್ಮಹಸ್ತೆ, ಪುಷ್ಪೆ, ತುಷ್ಟೆ ಮತ್ತು ವರಲಕ್ಷ್ಮಿ. ಈ ದಾರಕ್ಕಾಗಿ ವಿಶೇಷವಾದ ನೈವೇದ್ಯವಾದ ಸಜ್ಜಪ್ಪವನ್ನು ಅರ್ಪಿಸುವರು. ಅಂದು ಶ್ರೀಸೂಕ್ತವನ್ನು ಪಠಿಸುವುದೂ ಒಳ್ಳೆಯದು. ದೇವಿಯ ಮೂರ್ತಿಗೂ ಅರಿಶಿನ, ಕುಂಕುಮ,ಹೂವು, ಪತ್ರೆ ಮತ್ತು ಅಕ್ಷತೆಯಿಂದ ಪೂಜೆಯನ್ನು ಸಲ್ಲಿಸಿದ ಬಳಿಕ, ಪೂಜಿಸಿದ ಹೆಣ್ಣುಮಕ್ಕಳು ಆ ದಾರಗಳಿಗೆ ಹೂವನ್ನು ಕಟ್ಟಿ, ಹಿರಿಯರಿಂದ ಕಂಕಣದಂತೆ ಬಲಗೈಗೆ ಕಟ್ಟಿಸಿಕೊಳ್ಳುವರು. ಹಾಗೆ ಕಟ್ಟಿಸಿಕೊಂಡ ನಂತರ ಆ ಹಿರಿಯರಿಗೆ ನಮಸ್ಕರಿಸಿ ದಕ್ಷಿಣೆಯೊಂದಿಗೆ ದಾನವನ್ನು ಕೊಡುವರು. ಈ ಸಮಯದಲ್ಲಿ ಹೇಳುವ ಶ್ಲೋಕ ಹೀಗಿದೆ.
ದ್ವಾದಶಗ್ರಂಥಿ ಸಂಯುಕ್ತಂ ಕೃತಂ ದ್ವಾದಶತಂತುಭಿ:
ಧಾರಯಾಮಿ ಮಹಾದೇವಿ ಸೂತ್ರಂ ತೇ ಸರ್ವಮಂಗಳೇ