ಪುಟಗಳು

ಪರಮಾತ್ಮ ಹಾಡು & ಸಾಹಿತ್ಯ ಸೂಪರ್ ಬಿಡಿ ಭಟ್ರೇ - ಬಾಲರಾಜ್ ತಂತ್ರಿ

ಯೋಗರಾಜ್ ಭಟ್ ಮತ್ತು ಪುನೀತ್ ಕಾಂಬಿನೇಶನ್ ಚಿತ್ರವೆಂದ ಮೇಲೆ ಪ್ರೇಕ್ಷಕರಿಗೆ ನಿರೀಕ್ಷೆ ಸಹಜ. ಭಟ್ರ ಚಿತ್ರವೆಂದರೆ ಹಾಡಿಗೆ ಪ್ರಾಮುಖ್ಯತೆ ಜಾಸ್ತಿ. ಈ ಆಲ್ಬಮ್‌ನಲ್ಲಿ ಹಾಡಿನ ಟ್ಯೂನ್ ಜೊತೆ ಸಾಹಿತ್ಯದ ಮೇಲೂ ಒಲವು ತೋರಿದ್ದಾರೆ ನಿರ್ದೇಶಕರು. ಪಡ್ಡೆ ಹುಡುಗರಿಗೆ ಮತ್ತು ಅಪ್ಪಟ ಸಂಗೀತ ಪ್ರಿಯರಿಗೆ ಸಮವಾಗುವಂತೆ ಆಲ್ಬಮ್‌ನಲ್ಲಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಬಹು ನಿರೀಕ್ಷಿತ ಪರಮಾತ್ಮ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ಬುಧವಾರ ( ಸೆ.14) ಬೆಂಗಳೂರಿನಲ್ಲಿ ನಡೆಯಲಿದೆ.

ಯಾವನಿಗೆ ಗೊತ್ತು... ಅವ್ಳು ಸಿಕ್ತಾಳ...( ಹಾಡಿರುವವರು: ಟಿಪ್ಪು)
ಸಾಹಿತ್ಯ: ಯೋಗರಾಜ್ ಭಟ್
ವಿಶಿಷ್ಟ ಸಾಹಿತ್ಯ ಮತ್ತು ಸಂಗೀತವಿರುವ ಹಾಡು. ಸ್ಲೋ ಬಿಟ್ ನಿಂದ ಫಾಸ್ಟ್ ಬಿಟ್‌ನಲ್ಲಿ ಸಾಗುವ ಹಾಡು, ಪಡ್ಡೆ ಹುಡುಗರಿಗಾಗಿಯೇ ಭಟ್ರು ವಿಭಿನ್ನ ರೀತಿಯಲ್ಲಿ ಸಾಹಿತ್ಯ ನೀಡಿದ್ದಾರೆ.

ಪರವಶನಾದೆನು...ಅರಿಯುವ ಮುನ್ನವೇ (ಹಾಡಿರುವವರು: ಸೋನು ನಿಗಮ್)
ಸಾಹಿತ್ಯ: ಜಯಂತ್ ಕಾಯ್ಕಿಣಿ
ಮೆಲೋಡಿಯಸ್ ಟ್ಯೂನ್. ಅಬ್ಬರದ ಸಂಗೀತ ನೀಡದೆ ಶಿಸ್ತುಬದ್ಧ ಸಂಗೀತ ನೀಡಿರುವ ಹರಿಕೃಷ್ಣ ತನ್ನ ಹಿಟ್ ಹಾಡುಗಳ ಬತ್ತಳಿಕೆಗೆ ಇನ್ನೊಂದು ಹಾಡನ್ನು ಸೇರಿಸಿಕೊಂಡಿದ್ದಾರೆ. ಹಾಡಿನ ಸಾಹಿತ್ಯದ ಬಗ್ಗೆ ಕಾಯ್ಕಿಣಿ ಸಾಹೇಬ್ರುಗೆ ನಮ್ಮ ಕಡೆಯಿಂದ ಒಂದು ಸಲಾಂ.

ಕತ್ಲಲ್ಲಿ ಕರಡಿಗೆ... ಜಾಮೂನು ತಿನಿಸೋಕೆ ಯಾವತ್ತೂ ಹೋಗಬಾರ್ದೂರಿ (ಹಾಡಿರುವವರು: ಯೋಗರಾಜ್ ಭಟ್ )
ಸಾಹಿತ್ಯ: ಯೋಗರಾಜ್ ಭಟ್
ಜಾನಪದ ಬಿಟ್‌ನಲ್ಲಿ ಸಾಗುವ ಹಾಡು. ಎರಡೆರಡು ಹುಡುಗಿಯರನ್ನು ಪ್ರೀತಿಸಿದರೆ ಜೀವನ ಎಲ್ಲಿಗೆ ಸಾಗುತ್ತದೆ ಎನ್ನುವುದನ್ನು ಭಟ್ರು ತಮ್ಮ ಎಂದಿನ ಶೈಲಿಯಲ್ಲಿ ಹೇಳಿದ್ದಾರೆ ಮತ್ತು ಹಾಡಿದ್ದಾರೆ. ಹಾಡಿನ ಟ್ಯೂನ್ ಅಷ್ಟಕಷ್ಟೇ ಆದರೂ ಸಾಹಿತ್ಯದ ಮೂಲಕ ಹಿಟ್ ಆದರೆ ಅಚ್ಚರಿ ಪಡಬೇಕಾಗಿಲ್ಲ.

ಕಾಲೇಜ್ ಗೇಟಿಗೆ..ಫೇಲ್ ಆಗಿ ಬಂದವರೋ ಚೊಂಬೆಶ್ವರ (ಹಾಡಿರುವವರು: ಹರಿಕೃಷ್ಣ)
ಸಾಹಿತ್ಯ: ಯೋಗರಾಜ್ ಭಟ್
ಮಾರ್ಕ್ ಕಾರ್ಡ್ಸ್ ನಲ್ಲಿ ಸೊನ್ನೆ ರೌಂಡ್ ಆಗಿ ಕಾಣುವುದು ಏನ್ ಮಾಡ್ಲಿ..ಏನ್ಮಾ ಮಾಡ್ಲಿ... ಚೊಂಬೆಶ್ವರ. ಪಾಸ್ ಆಗಿ ಒಂದೇಸಲ ಏನ್ ಮಾಡ್ಲಿ. ದಡ್ಡ ವಿಧ್ಯಾರ್ಥಿಯೊಬ್ಬ ತನ್ನ ಪದವಿ ಮುಗಿಸಲು ಪರೆದಾಡುವ ರೀತಿಯನ್ನು ಭಟ್ರು ಹಾಡಿನ ಮೂಲಕ ತಿಳಿಸಿದ್ದಾರೆ. ಈ ಹಾಡು ಸ್ವಲ್ಪ ದಿನದಲ್ಲೇ ಕಾಲೇಜ್ ಹುಡುಗ/ಹುಡುಗಿಯರ ಬಾಯಲ್ಲಿ ಗುನುಗುವುದರಲ್ಲಿ ಅನುಮಾನವಿಲ್ಲ.

ಹೆಸರು ಪೂರ್ತಿ, ತುಟಿಯ ಕಚ್ಚಿ ಕೊಳ್ಳಲೇ (ಹಾಡಿರುವವರು: ವಾಣಿ ಹರಿಕೃಷ್ಣ)
ಸಾಹಿತ್ಯ: ಯೋಗರಾಜ್ ಭಟ್
ಕಿವಿಗೆ ಮುದ ನೀಡುವ ಹಾಡು. ಇಂತಹ ಟ್ಯೂನ್ ಇರುವ ಹಾಡನ್ನು ಶ್ರೇಯಾ ಕಂಠಸಿರಿಯಲ್ಲಿ ಕೇಳಿರುವ ನಮಗೆ ಅವರೇ ಈ ಹಾಡನ್ನು ಹಾಡಿದ್ದರೆ ಚೆನ್ನಾಗಿರುತ್ತಿತ್ತೇನೋ ಅಂದು ಅನಿಸದೇ ಇರದು.

ತನ್ಮಯಲಾದೆನು... ತಿಳಿಯುವ ಮುನ್ನವೇ ಕಣ್ಮರೆ ಆಗಲೇ ಹೇಳು... (ಹಾಡಿರುವವರು: ಶ್ರೇಯಾ ಘೋಶಾಲ್)
ಸಾಹಿತ್ಯ: ಜಯಂತ್ ಕಾಯ್ಕಿಣಿ
ಆಲ್ಬಮ್‌ನ ಮತ್ತೊಂದು ಸೂಪರ್ ಟ್ರ್ಯಾಕ್. ಎಂದಿನಂತೆ ಶ್ರೇಯಾ ಮಸ್ತ್ ಆಗಿ ಹಾಡಿದ್ದಾರೆ. ಸದ್ಯಕ್ಕಂತೂ ಮೆಲೋಡಿಯಸ್ ಹಾಡೆಂದರೆ ಅದು ಶ್ರೇಯಾ ಹಾಡಿದರನೇ ಸೂಕ್ತ ಎನ್ನುವ ಮಟ್ಟಿಗೆ ಕನ್ನಡ ಚಿತ್ರರಂಗ ಬಂದ ಹಾಗಿದೆ. ಹಾಗೇ... ಉಚ್ಚಾರ ತಪ್ಪಿಲ್ಲದೆ ಹಾಡುವ ಶ್ರೇಯಾ ಅದನ್ನು ಉಳಿಸಿಕೊಂಡಿದ್ದಾರೆ ಕೂಡಾ.