ಪುಟಗಳು

ಬೆಳಗಾವಿ ಮೆರವಣಿಗೆಯಲ್ಲಿ ಕನ್ನಡಿಗರ ದರ್ಬಾರು

ತಾಯಿ ಭುವನೇಶ್ವರಿ ಪ್ರತಿಮೆ ಹೊತ್ತ ಬಲರಾಮ ಗಾಂಭೀರ್ಯದ ನಡೆ, ಕನ್ನಡ ಅಭಿಮಾನಿಗಳ ಜಯ ಘೋಷಣೆಗಳ ಸಂಭ್ರಮದ ನುಡಿ, ಎಲ್ಲೆಡೆ ಹೆಮ್ಮೆಯ ಹಬ್ಬದ ವಾತಾವರಣ. ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಗೃಹ ಸಚಿವ ಆರ್ ಅಶೋಕ್ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಸುಮಾರು 100 ಅಡಿ ಉದ್ದದ ಕನ್ನಡ ಬಾವುಟ ಹಿಡಿದ ಪ್ರವೀಣ್ ಕುಮಾರ್ ಶೆಟ್ಟಿ ನೇತೃತ್ವದ ಕನ್ನಡ ರಕ್ಷಣಾ ವೇದಿಕೆ ಬಳಗದವರು ’ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ’ ಎಂದು ಜಯಧ್ವನಿ ಮೊಳಗಿಸುತ್ತಿದ್ದಾರೆ. ಇನ್ನೊಂದೆಡೆ ಸುಮಾರು 6 ಸಾವಿರಕ್ಕೂ ಅಧಿಕ ಕಲಾವಿದರು ಏರುತ್ತಿರುವ ಬಿಸಿಲನ್ನು ಲೆಕ್ಕಿಸದೆ ಕಲಾ ಪ್ರದರ್ಶನದಲ್ಲಿ ತೊಡಗಿದ್ದಾರೆ.


ಬಲರಾಮನ ಜೊತೆಗೆ ಕೃಷ್ಣಾ, ಸುಧಾ ಆನೆಗಳು ಸಾಗುತ್ತಿರುವ ರೀತಿ ಮೈಸೂರು ದಸರಾ ವೈಭವನ್ನು ನೆನಪಿಸುವಂತಿದೆ. ಪೂರ್ಣಕುಂಭ ಕಲಶ ಹೊತ್ತ 1001 ಮಹಿಳೆಯರು ಕನ್ನಡ ಹಬ್ಬದ ವಾತಾವರಣವನ್ನು ಸೃಷ್ಟಿಸಿದ್ದಾರೆ. ನಂದಿ ಧ್ವಜ ಪೂಜೆ ಪೂರೈಸಿದ ನಂತರ ಸಚಿವ ಅಶೋಕ್, ಗೋವಿಂದ ಕಾರಜೋಳ ಮುಂತಾದ ಜನ ಪ್ರತಿನಿಧಿಗಳ ಸಮೂಹ ತಮ್ಮ ಗೂಟದ ಕಾರಿನತ್ತ ತೆರಳದೆ ಮೆರವಣಿಗೆಯಲ್ಲಿ ಪಾಲ್ಗೊಂಡು ಕನ್ನಡ ಅಭಿಮಾನಿಗಳ ಹರ್ಷವನ್ನು ಹೆಚ್ಚಿಸಿದರು. ಸಿನಿ ನಟ ನಟಿಯರು ವೋಲ್ವೋ ಬಸ್ ನಲ್ಲೇ ಮೆರವಣಿಗೆ ಸುತ್ತಾ ಸುತ್ತಾಟ ನಡೆಸಿದ್ದು ಅಭಿಮಾನಿಗಳನ್ನು ಕೆರಳಿಸಿತ್ತು.

ಜನಪದ ವೈಭವ: ಪೂಜಾ ಕುಣಿತ, ಪಟ ಕುಣಿತ, ಕೋಲಾಟ, ಕಂಸಾಳೆ, ವೀರಗಾಸೆ, ಡೊಳ್ಳು ಕುಣಿತ, ಹುಲಿ ವೇಷ, ಕುದುರೆ ಕುಣಿತ, ತಮಟೆ ಬಡಿತ, ಯಕ್ಷಗಾನದ ವೇಷಗಳು, ಒಂದೇ ಎರಡೇ ಮಾತು ಬರದ ಮೂಗ ಕೂಡಾ ಕನ್ನಡ ಕನ್ನಡ ಎಂದು ಕೂಗುವಂತೆ ಮಾಡಿದೆ. ಕಾಲಿಲ್ಲದವ ಕೂಡಾ ಕನ್ನಡ ಎಂದು ಕುಣಿದಾಡುವಂತೆ ಮಾಡಿದೆ. ನಾಡಿನ ವಿವಿಧೆಡೆಗಳಿಂದ ಬಂದಿರುವ ಸುಮಾರು ಆರು ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದಾರೆ. ಸುಮಾರು 6 ಕಿ.ಮೀ ದೂರ ಸಾಗುವ ಈ ಮೆರವಣಿಗೆಯಲ್ಲಿ ದಣಿವಿಲ್ಲದೆ ಕುಣಿವ ಈ ಸಾಂಸ್ಕೃತಿಕ ರಾಯಭಾರಿಗಳಿಗೆ ನಮೋ ನಮಃ

ಮರಾಠಿ ಗೋಡಾ ಥಕ ಥೈ ಥಕ ಕೈ: ಮೆರವಣಿಯಲ್ಲಿ ಪಾಲ್ಗೊಂಡ ಚಿಣ್ಣರು, ಬಿಳಿ ಕುದುರೆ ಹಿಂದೆ ಮುಂದೆ ಸುತ್ತುತ್ತಿದ್ದರು. ಮೈಸೂರಿನಿಂದ ಬಂದ ಒಟ್ಟು 45 ಕುದುರೆಗಳ ಅಶ್ವದಳದ ಲೆಫ್ಟ್ ರೈಟ್ ಮೆರವಣಿಗೆ ಒಂದು ಕಡೆ ಸಾಗಿದ್ದರೆ, ಮಹಾರಾಷ್ಟ್ರದಿಂದ ಬಂದಿರುವ ಬಿಳಿ ಕುದುರೆ ಸೂರಜ್, ಲಕ್ಷ್ಮಣ್ ಜೋಡಿ ಎಲ್ಲರನ್ನೂ ಮೋಡಿ ಮಾಡುತ್ತಿದೆ. ಆಕರ್ಷಕವಾದ ಈ ಬಿಳಿ ಕುದುರೆಗಳು ಸಂಗೀತದ ಮೋಡಿಗೆ ಸಿಲುಕಿದಂತೆ ಥಕ ಥೈ ಥಕ ಥೈ ಎಂದು ಹೆಜ್ಜೆ ಹಾಕುವುದು, ಕೆನೆಯುವುದು ನೋಡುವುದೇ ಆನಂದ. ಮಾತುಂಗದಿಂದ ಬಂದಿರುವ ಕನ್ನಡ ಸಂಘ ಸೇರಿದಂತೆ ಸುಮಾರು 250ಕ್ಕೂ ಹೊರರಾಜ್ಯದಿಂದ ಬಂದಿರುವ ಕಲಾವಿದರೂ ಈ ಕನ್ನಡ ಮೆರವಣಿಗೆಯಲ್ಲಿ ಪಾಲ್ಗೊಂಡಿರುವುದು ವಿಶೇಷ. ಗಡಿನಾಡಿನ ನಗರ ಬೆಳಗಾವಿಯು ಕರ್ನಾಟಕದ ಎರಡನೇ ರಾಜಧಾನಿಯಾಗಲಿ ಎಂಬ ಆಶಯವನ್ನು ಮೆರವಣಿಗೆ ಹೊರಟ್ಟಿದ್ದವರಲ್ಲಿ ಹೆಚ್ಚು ಜನರ ಅಭಿಪ್ರಾಯವಾಗಿದೆ