ಪುಟಗಳು

ಕನಕದಾಸರು (KANAKADASARU)


ಶ್ರೀ ಕನಕದಾಸರು (೧೫೦೯-೧೬೦೯) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪ೦ಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕವಿಗಳು, ಮತ್ತು ಪುರಂದರದಾಸರೊ೦ದಿಗೆ ಕರ್ನಾಟಕ ಸ೦ಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.

ಕನಕದಾಸರು ದಂಡನಾಯಕನಾಗಿದ್ದು ಯಾವುದೋ ಯುಧ್ಧದಲ್ಲಿ ಸೋತ ಅವರಿಗೆ ಉಪರತಿ ಉಂಟಾಗಿ ಹರಿ ಭಕ್ತರಾದರಂತೆ. ಕನಕದಾಸರ ಊರು ಕಾಗಿನೆಲೆ (ಈಗ ಹಾವೇರಿ ಜಿಲ್ಲೆಯಲ್ಲಿದೆ). ಕನಕದಾಸರ ಕೀರ್ತನೆಗಳು ಕಾಗಿನೆಲೆಯ ಕೇಶವನಿಗೆ ಅರ್ಪಿತವಾಗಿರುವುದನ್ನು ಗಮನಿಸಬಹುದು. ಜನಪ್ರಿಯ ನ೦ಬಿಕೆಯ೦ತೆ, ಕನಕದಾಸರು ಕುರುಬ ವ೦ಶಕ್ಕೆ ಸೇರಿದವರು. ಕಾಗಿನೆಲೆಯ ಆದಿಕೇಶವನ ಭಕ್ತರಾದ ಕನಕದಾಸರು ಜಾತಿಪದ್ಧತಿಯ ತಾರತಮ್ಯಗಳನ್ನು ಅಲ್ಲಗಳೆದರು. ಕನಕದಾಸರು ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರು.

ವ್ಯಾಸರಾಯದಿ೦ದ ಮಧ್ವ ತತ್ವಶಾಸ್ತ್ರವನ್ನು ಕಲಿತು ಒಪ್ಪಿಕೊ೦ಡ ಕನಕದಾಸರು ಉಡುಪಿ ಶ್ರೀ ಕೃಷ್ಣನ ಭಕ್ತರು. ಅನೇಕರ ನ೦ಬಿಕೆಯ೦ತೆ ಉಡುಪಿಯ ದೇವಸ್ಥಾನದಲ್ಲಿ ಅವರಿಗೆ ಪ್ರವೇಶ ದೊರೆಯದಾದಾಗ ದೇವಸ್ಥಾನದ ಹಿ೦ದೆ ನಿ೦ತು ಹಾಡತೊಡಗಿದರ೦ತೆ ("ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ"). ಹಿ೦ದುಗಡೆಯ ಗೋಡೆ ಒಡೆದು ಕೃಷ್ಣನ ವಿಗ್ರಹ ಹಿಮ್ಮುಖವಾಗಿ ತಿರುಗಿತ೦ತೆ (ಈಗಲೂ ಉಡುಪಿ ಕೃಷ್ಣನ ದೇವಸ್ಥಾನದ ಹಿ೦ದುಗಡೆಯ ಗೋಡೆಯಲ್ಲಿ ಬಿರುಕನ್ನು ಕಾಣಬಹುದು - ಇಲ್ಲಿ ಒ೦ದು ಕಿಟಕಿಯನ್ನು ನಿರ್ಮಿಸಿ ಕನಕನ ಕಿ೦ಡಿ ಎ೦ದು ಕರೆಯಲಾಗಿದೆ).

ಸಾಹಿತ್ಯ
ಕನಕದಾಸರು ಸುಮಾರು ೨೦೦ ಕೀರ್ತನೆಗಳನ್ನು ರಚಿಸಿ ಹಾಡಿದ್ದಾರೆ. ಅವರ ಐದು ಮುಖ್ಯ ಕಾವ್ಯಕೃತಿಗಳು ಇಂತಿವೆ:

ಮೋಹನತರ೦ಗಿಣಿ
ನಳಚರಿತ್ರೆ
ರಾಮಧಾನ್ಯಚರಿತೆ
ಹರಿಭಕ್ತಿಸಾರ
ನೃಸಿ೦ಹಸ್ತವ (ಉಪಲಬ್ದವಿಲ್ಲ)

ಮೋಹನತರಂಗಿಣಿ

ಮೋಹನತರಂಗಿಣಿ ಅಥವಾ ಕೃಷ್ಣಚರಿತೆ ಎಂಬ ಸಾಂಗತ್ಯ ಕಾವ್ಯದಲ್ಲಿ ಕನಕದಾಸರ ಸಮಕಾಲೀನ ಜೀವನ ಚಿತ್ರಗಳು ಹಾಗೂ ಪೌರಾಣಿಕ ಕಥೆಗಳು ಅಚ್ಚಗನ್ನಡದಲ್ಲಿ ನಿರೂಪಿತವಾಗಿವೆ.

ದಣ್ಣಾಯಕನಾಗಿ ಕನಕ ಆಗಾಗ್ಗೆ ರಾಜಧಾನಿ ವಿಜಯನಗರಕ್ಕೆ ಹೋಗಬೇಕಾಗಿತ್ತು. ವಿಜಯನಗರ ಸಾಮ್ರಾಜ್ಯದ ರಾಜವೈಭವ, ರಾಜಸಭೆ, ರಾಜಪರಿವಾರದ ಸರಸ ಸುಮ್ಮಾನ, ಶೃಂಗಾರ ಜೀವನ, ಜಲಕ್ರೀಡ, ಓಕುಳಿಯಾಟ, ನವರಾತ್ರಿ, ವಿಜಯನಗರದ ಪುರರಚನೆ, ಉದ್ಯಾನವನ, ಪ್ರಜೆಗಳ ವೇಷಭೂಷಣ, ರಾಜ್ಯದ ಯುದ್ಧವಿಧಾನ ಇತ್ಯಾದಿಗಳು ಅವನ ಮನಸೂರೆಗೊಂಡಿದ್ದವು. ಕವಿಯೂ ಆಗಿದ್ದ ಕನಕ ತನ್ನ ಅನುಭವವನ್ನೆಲ್ಲ ಬರಹರೂಪಕ್ಕೆ ತಂದ. ಆ ಬರಹವೇ ಇಂದು ನಮಗೆ ಲಭ್ಯವಿರುವ ಮೋಹನತರಂಗಿಣಿ. ಕನಕನ ಯೌವನಕಾಲದಲ್ಲಿ ರಚಿತವಾದ ತರಂಗಿಣಿಯ ಒಡಲಲ್ಲಿ ಯುದ್ಧದ ವರ್ಣನೆಗಳು ಹೆಚ್ಚೆನ್ನಬಹುದು. ಏಕೆಂದರೆ ಕನಕ ಸ್ವತಃ ಕಲಿಯಾಗಿದ್ದವನೇ ತಾನೇ? ಶಂಬರಾಸುರ ವಧೆ, ಬಾಣಾಸುರ ವಧೆ, ಹರಿಹರ ಯುದ್ಧ ಹೀಗೆ ರೌದ್ರ ರಸವೇ ಹರಿದಿದೆ ಇಲ್ಲಿ.

ಮೋಹನತರಂಗಿಣಿಯಲ್ಲಿ ದಾಸರು ಕೃಷ್ಣಚರಿತ್ರೆಯನ್ನು ಹೇಳುತ್ತಾ ತಮ್ಮ ಅಧಿರಾಜ ಕೃಷ್ಣದೇವರಾಯನನ್ನೇ ಕೃಷ್ಣನಿಗೆ ಹೋಲಿಸುತ್ತಾರೆ. ಅವರ ದ್ವಾರಕಾಪುರಿ ಸ್ವಯಂ ವಿಜಯನಗರವೇ ಆಗಿದೆ.

ಸೋಮಸೂರಿಯ ವೀಥಿಯಿಕ್ಕೆಲದಲಿ
ಹೇಮನಿರ್ಮಿತ ಸೌಧದೋಳಿ
ರಾಮಣೀಯತೆವೆತ್ತ ಕಳಸದಂಗಡಿಯಿರ್ದು
ವಾ ಮಹಾ ದ್ವಾರಕಾಪುರದೆ
ಓರಂತೆ ಮರಕಾಲರು ಹಡಗಿನ ವ್ಯವ
ಹಾರದಿ ಗಳಿಸಿದ ಹಣವ
ಭಾರಸಂಖ್ಯೆಯಲಿ ತೂಗುವರು ಬೇಡಿದರೆ ಕು
ಬೇರಂಗೆ ಕಡವ ಕುಡುವರು
ವಿಜಯನಗರ ಸಾಮ್ರಾಜ್ಯದ ವರ್ಣನೆಯನ್ನು ವಿದೇಶೀಯರು ಹೊಗಳಿರುವುದನ್ನು ನಾವು ಬಲ್ಲೆವು. ಕನಕದಾಸರ ಬಣ್ಣನೆಯೂ ಇಲ್ಲಿ ವಿಭಿನ್ನವಾಗೇನೂ ಇಲ್ಲ.


ನಳಚರಿತ್ರೆ

ನಳಚರಿತ್ರೆ ಹಾಗೂ ರಾಮಧಾನ್ಯಚರಿತ್ರೆಗಳು ಭಾಮಿನೀಷಟ್ಪದಿಯಲ್ಲಿದ್ದು ಸಾಂಪ್ರದಾಯಿಕ ವಸ್ತುವನ್ನು ನಿತ್ಯನೂತನ ಶೈಲಿಯಲ್ಲಿ ನಿರೂಪಿಸುವ ಅದ್ಭುತ ಕಲ್ಪನಾಮೋಡಿಗೆ ಕೈಗನ್ನಡಿಯಾಗಿವೆ.

ಮಹಾಭಾರತದಂತಹ ರಾಷ್ಟ್ರಕಾವ್ಯಕ್ಕೆ ಪ್ರೇರಣೆಯಾದ ಉಜ್ವಲ ಆರ್ಯೇತರ ಪ್ರೇಮಕಥೆ ನಳದಮಯಂತಿಯರ ಕಥೆ. ೧೩ನೇ ಶತಮಾನದ ನಳಚಂಪುವಿಗಿಂತ ಈ ನಳಚರಿತ್ರೆ ಹೃದಯಸ್ಪರ್ಶಿಯಾದ ಚಿತ್ರಣಗಳಿಂದ ಚಿರಂತನ ಪ್ರೇಮದ ಕಥನದಿಂದ ಅಶ್ಲೀಲತೆಯ ಸೋಂಕಿಲ್ಲದ ಶೃಂಗಾರ ವರ್ಣನೆಯಿಂದ ಶೋಭಿಸುತ್ತಾ ಇಂದಿಗೂ ಅತ್ಯಂತ ಜನಪ್ರಿಯವಾಗಿದೆ.

ನಳ ಮತ್ತು ದಮಯಂತಿಯರು ಹಂಸದ ಮೂಲಕ ಪ್ರೇಮಸಂದೇಶಗಳನ್ನು ಕಳಿಸುವುದು, ಅವರ ಸಂತೋಷ-ಆಮೋದ-ಪ್ರಮೋದ ನಂತರದ ಕಷ್ಟಕಾಲ ಹಾಗೂ ಅದರ ನಂತರದ ಪುನರ್ಮಿಲನ ಹೀಗೆ ಎಲ್ಲರಿಗೂ ಈ ಕಥೆ ಚಿರನೂತನ. ಕಷ್ಟಕಾಲದಲ್ಲಿ ಕಾಡಿನಲ್ಲಿ ಮಲಗಿರುವಾಗ್ಗೆ ದಮಯಂತಿಯನ್ನು ಕುರಿತು ನಳ:

ಲಲಿತ ಹೇಮದ ತೂಗಮಂಚದ
ಹೊಳೆವ ಮೇಲ್ವಾಸಿನಲಿ ಮಲಗುವ
ಲಲನೆಗೀ ವಿಧಿ ಬಂದುದೇ ಹಾ! ಎನುತ ಬಿಸುಸುಯ್ದ (೫-೨)
ಹೀಗೆ ನಳಚರಿತ್ರೆಯಲ್ಲಿ ಕರುಣರಸಕ್ಕೇ ಪ್ರಾಧಾನ್ಯತೆ.

ಇನ್ನು ನಳಚರಿತ್ರೆಯಲ್ಲಿನ ಶೃಂಗಾರರಸದ ಬಗ್ಗೆ ಹೇಳುವುದಾದರೆ ಅದು ಫ್ರೌಢಶೃಂಗಾರ ಎನ್ನಬಹುದೇನೋ? ಅಲ್ಲಿ ಮೋಹನ ತರಂಗಿಣಿಯಲ್ಲಿ ಅದು ಕಣ್ಣು ಕುಕ್ಕುವ ಶೃಂಗಾರ, ಆದರೂ ಅದು ಹುಳಿಮಾವಿನಂತೆ ಹಂಚಿ ತಿನ್ನಲಾಗದು, ಮುಕ್ತವಾಗಿ ಚರ್ಚಿಸಲಾಗದು. ನಳಚರಿತ್ರೆಯ ಶೃಂಗಾರವಾದರೆ ಮಲ್ಲಿಗೆ ಮಾವಿನ ಹಾಗೆ, ಮಧುರ ರುಚಿ, ಮಧುರ ಸುವಾಸನೆ.


ರಾಮಧಾನ್ಯಚರಿತೆ

ರಾಮಧಾನ್ಯಚರಿತ್ರೆಯಲ್ಲಿ ಧನಿಕರ ಆಹಾರಧಾನ್ಯ ಅಕ್ಕಿ ಹಾಗೂ ಕೆಳವರ್ಗದವರ ಆಹಾರಧಾನ್ಯ ರಾಗಿಯ ನಡುವಿನ ಸಂಭಾಷಣೆಯ ಮೂಲಕ ರಾಗಿ ಹೇಗೆ ತನ್ನ ಔನ್ನತ್ಯವನ್ನು ಸಾಬೀತು ಪಡಿಸುತ್ತದೆ ಹಾಗೂ ರಾಮಧಾನ್ಯವೆಂಬ ಹೆಸರು ಪಡೆಯುತ್ತದೆ ಎಂದು ನಿರೂಪಿಸಲಾಗಿದೆ. ಇದರಲ್ಲಿ ಯುದ್ಧದ ಸನ್ನಿವೇಶ ಇಲ್ಲವಾದರೂ ವೀರರಸದ ಮಾತುಗಳಿಗೆ ಕೊರತೆಯಿಲ್ಲ.

ನುಡಿಗೆ ಹೇಸದ ಭಂಡ ನಿನ್ನೊಳು ಕೊಡುವರೇ ಮಾರುತ್ತರವ ಕಡುಜಡವಲಾ, ನಿನ್ನೊಡನೆ ಮಾತೇಕೆ?
ಹೆಣದ ಬಾಯಿಗೆ ತುತ್ತು ನೀನಹೆ ನಿನ್ನ ಜನ್ಮ ನಿರರ್ಥಕವಲಾ
ಎಲವೋ ನೀನೆಲ್ಲಿಹೆಯೋ ನಿನ್ನಯ ಬಳಗವದು...
ಮುಂತಾದ ಮಾತುಗಳಲ್ಲಿ ಕನಕದಾಸರು ರಾಗಿಯ ನೆಪವಿಡಿದು ತಮ್ಮದೇ ಆತ್ಮಕಥೆಯನ್ನು ಹೇಳುತ್ತಿರುವಂತೆ ತೋರುತ್ತದೆ. ಸಮಾಜದ ಮೇಲ್ವರ್ಗದವರ ಆಹಾರಧಾನ್ಯ ಭತ್ತ ಹಾಗೂ ಕೆಳವರ್ಗದವರ ಆಹಾರಧಾನ್ಯ ರಾಗಿಯ ನಡುವಿನ ಸಂಭಾಷಣೆಯನ್ನು ನಿರೂಪಿಸುವ ಕನಕದಾಸರ ಸೃಜನಶೀಲತೆ ಅತಿಶಯ. ಒಂದು ರೀತಿಯಲ್ಲಿ ರಾಮಧಾನ್ಯಚರಿತ್ರೆ ಇಂದಿನ ಬಂಡಾಯ ಸಾಹಿತ್ಯದ ಬೇರು ಎಂದರೆ ತಪ್ಪಾಗಲಾರದು.


ಹರಿಭಕ್ತಿಸಾರ

ಹರಿಭಕ್ತಿಸಾರ ೧೧೦ ಭಕ್ತಿಪದ್ಯಗಳಿರುವ ಗ್ರಂಥ. ಭಾಮಿನೀ ಷಟ್ಪದಿಯಲ್ಲಿ ಸರಳಗನ್ನಡದಲ್ಲಿ ರಚಿತವಾಗಿರುವ ಈ ಗ್ರಂಥ ಕನ್ನಡದ ಭಗವದ್ಗೀತೆಯೆನ್ನಬಹುದು.

ಒಟ್ಟಿನಲ್ಲಿ ಕನಕದಾಸರ ಎಲ್ಲ ಕಾವ್ಯಗಳೂ ಕವಿಸಹಜವಾದ ವರ್ಣನೆಗಳಿಂದಲೂ ಉಪಮೆಗಳಿಂದಲೂ ಶ್ರೀಮಂತವಾಗಿದ್ದು ಅವರ ಕಾವ್ಯ ಕೌಶಲಕ್ಕೆ ಎಲ್ಲರೂ ಬೆರಗಾಗುವಂತೆ ಮಾಡಿದೆಯೆಂದರೆ ಉತ್ಪ್ರೇಕ್ಷೆಯಲ್ಲ.


ಕೀರ್ತನೆಗಳು

ಕನಕದಾಸರ ಭಕ್ತಿಪಾರಮ್ಯವನ್ನು ಅವರ ಕೀರ್ತನೆಗಳಲ್ಲಿ ಕಾಣಬಹುದು. ಶ್ರೀಹರಿಯನ್ನು ತಮ್ಮ ಧಣಿಯಾಗಿ, ಇನಿಯನಾಗಿ, ಅಣೋರಣೀಯನಾಗಿ, ಮಹತೋಮಹೀಯನಾಗಿ ಅವರು ಕಂಡಿದ್ದಾರೆ. ಬಾ ರಂಗ ಎನ್ನ ಮನಕೆ ಎಂದು ಹೃದಯ ಸದನಕ್ಕೆ ಕರೆದು ನೆಲೆ ನಿಲ್ಲಿಸಿಕೊಂಡ ಅನುಭಾವ ಅವರದು. ಒಳಗಣ್ಣಿನಿಂದ ಅವನ ಕಂಡು

ಕಂಡೆ ನಾ ತಂಡ ತಂಡ ಹಿಂಡು ದೈವ ಪ್ರಚಂಡರಿಪು ಗಂಡ ಉದ್ಧಂಡ ನರಸಿಂಹನ
ಎಂದು ಸಂತೋಷಪಟ್ಟಿದ್ದಾರೆ.

ಎಲ್ಲಿ ನೋಡಿದರಲ್ಲಿ ರಾಮ
ಎಂಬ ಅನುಭೂತಿಯಲ್ಲಿ ಹರಿಯನ್ನು ಕಂಡ ಬಳಿಕ

ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು
ಎಂಬ ಧನ್ಯತಾಭಾವ.

ಮೊದಲೊಮ್ಮೆ

ದಾಸದಾಸರ ಮನೆಯ ದಾಸಿಯರ ಮಗ ಮಂಕುದಾಸ ಮರುಳುದಾಸ ನರಜನ್ಮಹುಳು ಪರಮಪಾಪಿ
ಎಂದು ಕರೆದುಕೊಂಡಿದ್ದ ಅವರು ಜೀವ ಮಾಗಿ ಹಣ್ಣಾದಂತೆ ಪರಮಾತ್ಮನ ಸಾಕ್ಷಾತ್ಕಾರವಾದಂತೆ

ಆತನೊಲಿದ ಮೇಲೆ ಇನ್ಯಾತರ ಕುಲವಯ್ಯಾ
ಎಂದುಕೊಳ್ಳುತ್ತಾರೆ.

ಜೈನ ವೀರಶೈವರ ಕಿತ್ತಾಟ, ಮುಸಲ್ಮಾನ ಪ್ರಾಬಲ್ಯ ಇವುಗಳಿಂದ ಸೊರಗಿಹೋಗಿದ್ದ ವೈದಿಕ ಧರ್ಮಕ್ಕೆ ಪುನಶ್ಚೇತನ ನೀಡಲು ವ್ಯಾಸರಂಥವರು ಶ್ರಮಿಸುತ್ತಿದ್ದ ಕಾಲವದು. ವೈದಿಕ ಸಂಸ್ಕೃತಿಯ ಉತ್ಥಾನಕ್ಕೆಂದು ಹುಟ್ಟುಹಾಕಲಾದ ವಿಜಯನಗರ ಸಾಮ್ರಾಜ್ಯ ಕೃಷ್ಣದೇವರಾಯನ ಅಳಿವಿನ ನಂತರ ಪತನದ ಹಾದಿ ಹಿಡಿದಿತ್ತು. ಇಂಥಲ್ಲಿ ಕನಕದಾಸರಂಥವರ ಕಾವ್ಯಕೃಷಿ ಹಾಗೂ ಸಾರ್ವಜನಿಕ ಜೀವನ ವ್ಯಾಸರಿಗೆ ಬೆಂಬಲದ ಶ್ರೀರಕ್ಷೆಯಾಗಿದ್ದವು.

ನಾವು ಕುರುಬರು ನಮ್ಮ ದೇವರು ಬೀರಯ್ಯ
ಕಾವ ನಮ್ಮಜ್ಜ ನರಕುರಿ ಹಿಂಡುಗಳ
ಎಂದು ವಿನೀತ ಜಾತಿ ಭಾವನೆ ತೋರಿದ್ದ ಕನಕದಾಸರು ವ್ಯಾಸ ಸಂಪರ್ಕದ ನಂತರ

ಕುಲಕುಲಕುಲವೆಂದು ಹೊಡೆದಾಡದಿರಿ
ಎಂದು ಜಂಕಿಸಿ ಕೇಳುವ ಹಾಗಾದರು.

ಇಂಥ ನಡವಳಿಕೆಗಳಿಂದ ವೈದಿಕ ಧರ್ಮದ ಗುತ್ತಿಗೆ ತಮ್ಮದು ಎಂದು ಭಾವಿಸಿದ್ದ ಬ್ರಾಹ್ಮಣರಿಗೆ ಕನಕದಾಸರು ಬಿಸಿತುಪ್ಪವಾದರು. ಹಿಂದೂ ಸಮಾಜದಲ್ಲಿ ಈ ಬ್ರಾಹ್ಮಣ ಬ್ರಾಹ್ಮಣೇತರ ಕಂದರ ದೊಡ್ಡದಾಗುತ್ತಾ ಹೋದಂತೆ ವ್ಯಾಸಪೀಠದ ಜೊತೆಗೆ ದಾಸಕೂಟದ ರಚನೆಯೂ ಆಗಬೇಕಾದಂತಹ ಅನಿವಾರ್ಯತೆ ಮೂಡಿತು.

ಕನಕದಾಸ
ದಾಸ ಸಾಹಿತ್ಯದಲ್ಲಿಯೆ ವಿಶಿಷ್ಟ ವ್ಯಕ್ತಿತ್ವದವರು ಕನಕದಾಸರು. ಈಗಿನ ಹಾವೇರಿ ಜಿಲ್ಲೆಯ ಬಂಕಾಪೂರ ಪ್ರದೇಶಕ್ಕೆ ಕುರುಬ ಜನಾಂಗದ ಬೀರಪ್ಪನೆಂಬಾತನು ಡಣ್ಣಾಯಕನಾಗಿದ್ದ. ಆತನ ಪತ್ನಿ ಬಚ್ಚಮ್ಮ. ಈ ದಂಪತಿಗಳ ಏಕೈಕ ಪುತ್ರನೇ ತಿಮ್ಮಪ್ಪ. ತಂದೆಯ ಅಕಾಲ ಮೃತ್ಯುವಿನಿಂದ ಕಿರಿಯ ವಯಸ್ಸಿನಲ್ಲಿ ತಿಮ್ಮಪ್ಪ ನಾಯಕನಾದ. ಯಾವುದೋ ಕಾರಣಕ್ಕೆ ಭೂಮಿಯನ್ನು ಅಗೆಯಿಸುತ್ತಿರುವಾಗ ಅಪಾರ ನಿಧಿ ದೊರೆಯಿತು. ಅದನ್ನು ತನ್ನ ವಿಲಾಸಿ ಜೀವನಕ್ಕೆ ಬಳಸಿಕೊಳ್ಳದೆ ಪ್ರಜೆಗಳ ಹಿತರಕ್ಷಣೆಗೆ ಹಾಗೂ ಧಾರ್ಮಿಕ ಕಾರ್ಯಗಳಿಗಾಗಿ ಬಳಸಿ ಜನರಿಂದ ಕನಕದಾಸನೆಂಬ ಪ್ರಶಂಸೆಗೆ ಪಾತ್ರನಾದ. ಯುದ್ಧಭೂಮಿಯಲ್ಲಿ ಬಲವಾಗಿ ಗಾಯಗೊಂಡು ಮರಣಾವಸ್ಥೆಯಲ್ಲಿರುವಾಗ ಯಾವುದೋ ಚೇತನ ಶಕ್ತಿ ಶುಶ್ರೂಷೆಯನ್ನು ಮಾಡಿದಂತಾಗಿ, ‘ಕನಕಾ ಇನ್ನಾದರೂ ನನ್ನ ದಾಸನಾಗು’ ಎಂದು ಅಶರೀರವಾಣಿ ಆಯಿತಂತೆ. ಇವರ ಕಾಲಮಾನವನ್ನು (೧೫೦೮-೧೯೦೬) ಹದಿನಾರನೇ ಶತಮಾನ ಎಂಬ ಒಮ್ಮತ ಅಭಿಪ್ರಾಯಕ್ಕೆ ಬರಲಾಗಿದೆ. ನವಂಬರ್ ೨೭ ರಂದು ಸಂತ ಕನಕದಾಸರ ಜಯಂತಿಯನ್ನು ಆಚರಿಸಲಾಗುತ್ತದೆ.

ಹಾವೇರಿ ಜಿಲ್ಲೆಯ ಕಾಗಿನೆಲೆ ಕನಕದಾಸರ ಕರ್ಮಭೂಮಿ ಆಗಿತ್ತು. ಈಗ ಅದರ ಅಭಿವೃದ್ಧಿಗೆ ಕರ್ನಾಟಕ ಸರ್ಕಾರ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿತು. ಕನಕದಾಸರ ಹುಟ್ಟೂರು ಬಾಡ. ಇದೂ ಹಾವೇರಿ ಜಿಲ್ಲೆಯಲ್ಲಿದೆ. ಈ ಬಾಡದಲ್ಲಿ ಕನಕದಾಸರ ಅರಮನೆ ಇದ್ದ ಬಗ್ಗೆ ದಾಖಲೆಗಳು ದೊರಕಿವೆ. ಅದರ ಉತ್ಖನನ ಕಾರ್ಯ ಸಾಗಿದೆ. ಬಾಡದ ಅಭಿವೃದ್ಧಿಯನ್ನು ಪ್ರಾಧಿಕಾರ ಕೈಗೆತ್ತಿಕೊಂಡಿದೆ. ಕೆಲವು ಸ್ಥಳಗಳು ವ್ಯಕ್ತಿ ಮಹಿಮೆಯಿಂದಾಗಿ ಪ್ರಖ್ಯಾತಿಗೆ ಬರುತ್ತವೆ. ಕೆಲವು ಸ್ಥಳಗಳ ಮಹಿಮೆಯಿಂದಾಗಿ ವ್ಯಕ್ತಿಗಳು ಪ್ರಖ್ಯಾತಿ ಪಡೆಯುತ್ತಾರೆ. ಕಾಗಿನೆಲೆ, ಬಾಡ ಹಾಗೂ ಕನಕದಾಸರು ಸಂದರ್ಶಿಸಿದ ಸ್ಥಳಗಳು ಕನಕದಾಸರ ಮಹತ್ವದೊಂದಿಗೇ ಮಹತ್ವ ಪಡೆದಿವೆ. ಇದು ಇತಿಹಾಸ. ಸಂಸ್ಕೃತಿಯ ಅಂತಸ್ಸತ್ವ.


ಉಚ್ಛಕುಲದ ಮಾಧ್ವ ಬ್ರಾಹ್ಮಣರು ಶಾಸ್ತ್ರಾಧ್ಯಯನ-ತರ್ಕ-ವ್ಯಾಕರಣಾದಿ ವಿಶಿಷ್ಟ ಜ್ಞಾನಸಂಪನ್ನರಾಗಿ ಶಬ್ದಶಬ್ದಗಳನ್ನು ತಿಕ್ಕಿ ತೀಡಿ ನಿಷ್ಪತ್ತಿ ಹಿಡಿದು ಸಿದ್ಧಾಂತ ಪ್ರಮೇಯಗಳನ್ನು ಮಂಡಿಸುವುದೇ ಮುಂತಾದ ಪ್ರಕ್ರಿಯೆಗಳನ್ನು ವ್ಯಾಸಪೀಠದಲ್ಲಿ ನಡೆಯಿಸುತ್ತಿದ್ದರು. ಇನ್ನು ಪುರಂದರ, ಕನಕ, ಜಗನ್ನಾಥ ಮೊದಲಾದವರ ಪ್ರಾತಿನಿಧಿಕ ಸಂಘಟನೆಯೇ ದಾಸಕೂಟ. ಇವರೂ ಮಾಧ್ವಮತ ಪ್ರಮೇಯಗಳನ್ನೇ ಪಸರಿಸುತ್ತಾ ಆಚರಿಸುತ್ತಿದ್ದರಾದರೂ ಅವುಗಳನ್ನು ಅರಿಯಲು ಸಂಸ್ಕೃತಜ್ಞಾನದ ಅನಿವಾರ್ಯತೆ ಇವರಿಗಿಲ್ಲ. ಜಾತಿಗೀತಿಗಳ ಕಟ್ಟುಪಾಡಿಲ್ಲದ ಇವರು ಶಾಸ್ತ್ರಾಧ್ಯಯನದ ಅನಿವಾರ್ಯತೆ ಇಲ್ಲದೆ ತಮ್ಮ ಅನುಭಾವದಿಂದ ಹೊರಹೊಮ್ಮುವ ಭಕ್ತಿಭಾವನೆಗಳನ್ನು ತಮ್ಮ ತಾಯ್ನುಡಿಯಲ್ಲಿ ಹಾಡಿ ಲೋಕಪಾವನವನ್ನೂ ಆತ್ಮೋದ್ಧಾರವನ್ನೂ ಮಾಡಬೇಕೆನ್ನುವವರು. ಇಂಥಾ ದಾಸಕೂಟವನ್ನು ಹುಟ್ಟುಹಾಕಿ ಪೋಷಿಸಿ ಬೆಳೆಸಿದವರು ವ್ಯಾಸರಾಯರು ಹಾಗೂ ವಾದಿರಾಜರು.

ಇಷ್ಟಿದ್ದರೂ ದಾಸಕೂಟ ವ್ಯಾಸಪೀಠಗಳ ನಡುವೆ ಆಗಿಂದಾಗ್ಗೆ ಘರ್ಷಣೆಗಳು ನಡೆದೇ ಇದ್ದವು. ಈ ಕುರಿತು ಕನಕ ಪುರಂದರರ ಕೀರ್ತನೆಗಳೇ ನಮಗೆ ಸೂಚ್ಯವಾಗಿ ಹೇಳುತ್ತವೆ.

ಕುಲಕುಲವೆನ್ನುತಿಹರು ಕುಲವಾವುದು ಸತ್ಯ ಸುಖವುಳ್ಳ ಜನರಿಗೆ . . .
ತೀರ್ಥವನು ಪಿಡಿದವರು ತಿರುನಾಮಧಾರಿಗಳೇ
ಜನ್ಮ ಸಾರ್ಥಕವಿರದವರು ಭಾಗವತರಹುದೇ . . .
ಆವ ಕುಲವಾದರೇನು ಆವನಾದರೇನು ಆತ್ಮಭಾವವರಿತ ಮೇಲೆ . . .
ಅವರ ಕೀರ್ತನೆಗಳಲ್ಲಿ ಅವರ ಸ೦ದೇಶ ನೇರ ಮತ್ತು ಖಚಿತ. ಹಾಗೆಯೇ ಅಮೂರ್ತವಾದ ಪ್ರತಿಮಾನಿರೂಪಣೆಯಲ್ಲಿ ಪರಿಣತಿ, ಹಾಗೂ ಕನ್ನಡ ಸಾಹಿತ್ಯ ಮತ್ತು ಸ೦ಸ್ಕೃತ ಸಾಹಿತ್ಯಗಳ ಪರಿಚಯವನ್ನು ಅವರ ಸಾಹಿತ್ಯದಲ್ಲಿ ಕಾಣಬಹುದು.


ಕನಕನ ಕಿಂಡಿ
ಉಡುಪಿಯ ಕನಕನ ಕಿಂಡಿಯ ಬಗ್ಗೆ ಸ್ವತಃ ಕನಕದಾಸರ ಕೃತಿಗಳಲ್ಲಾಗಲೀ ಇತರೆ ಕೃತಿಗಳಲ್ಲಾಗಲೀ ಮಠದ ದಾಖಲೆಗಳಲ್ಲಾಗಲೀ ಚರಿತ್ರೆಯ ಪುಟಗಳಲ್ಲಾಗಲೀ ಶಾಸನಗಳಲ್ಲಾಗಲೀ ಎಲ್ಲಿಯೂ ಪ್ರಸ್ತಾಪವಾಗಿಲ್ಲ. ಇನ್ನು ಉಡುಪಿಯ ಆ ದೇವಾಲಯವಾದರೋ ಆಗಮಾದಿಗಳಲ್ಲಿ ಹೇಳಿರುವ ವಾಸ್ತುವಿನ್ಯಾಸದನ್ವಯ ಕಟ್ಟಿಯೂ ಇಲ್ಲ. ಅಲ್ಲಿ ಬಲಿಕಲ್ಲು, ಧ್ವಜಸ್ತಂಭ, ಅಂತರಾಳ, ಅರ್ಧಮಂಟಪ, ಪ್ರದಕ್ಷಿಣಾಪಥಗಳೂ ಇಲ್ಲ. ಇನ್ನು ಪ್ರಾಣದೇವರ ಪ್ರತಿಷ್ಠಾಪನೆಯೂ ವಿಭಿನ್ನವೇ. ಉಡುಪಿಯ ಶ್ರೀಕೃಷ್ಣ ವಿಗ್ರಹವನ್ನು ಮಧ್ವಾಚಾರ್ಯರು ಕ್ರಿಸ್ತಶಕ ೧೨೩೮ (ಶಕವರ್ಷ ೧೧೬೦ ಹೇವಿಲಂಬಿ ಸಂವತ್ಸರ ಮಾಘ ಶುದ್ಧ ತದಿಗೆ) ನೇ ವರ್ಷದಲ್ಲಿ ಪಶ್ಚಿಮಾಭಿಮುಖಿಯಾಗಿ ಪ್ರತಿಷ್ಠೆ ಮಾಡಿದ್ದರಾಗಲೀ ಪೂರ್ವಾಭಿಮುಖವಾಗಿ ಅಲ್ಲ. ತಮಗೆ ಪಶ್ಚಿಮ ಸಮುದ್ರದಿಂದ ಲಭ್ಯವಾದ ಆ ಮೂರ್ತಿಯನ್ನು ಪಶ್ಚಿಮಕ್ಕೇ ಮುಖಮಾಡಿ ಪ್ರತಿಷ್ಠಿಸಿ ಪಶ್ಚಿಮ ಸಮುದ್ರಾಧೀಶ್ವರನನ್ನಾಗಿ ಕರೆದರೆನ್ನುವುದೇ ಸತ್ಯಸ್ಯ ಸತ್ಯ. ಇದಕ್ಕೆ ದಾಖಲೆಯಾಗಿ ಕನಕದಾಸರ ಸಮಕಾಲೀನರಾದ ಸುರೋತ್ತಮ ತೀರ್ಥರ ಹೇಳಿಕೆ,ಅದರ ತಾತ್ಪರ್ಯ ಹೀಗಿದೆ:'ದೇವತಾವಿಗ್ರಹಗಳನ್ನು ಪೂರ್ವಾಭಿಮುಖಿಯಾಗಿಯೇ ಸ್ಥಾಪಿಸಬೇಕೆಂದು ಏನೂ ಇಲ್ಲ, ಆದ್ದರಿಂದಲೇ ಮಧ್ವರು ಈ ಕೃಷ್ಣನ ಪ್ರತಿಮೆಯನ್ನು ಪಶ್ಚಿಮಾಭಿಮುಖಿಯಾಗಿ ಸ್ಥಾಪಿಸಿದ್ದಾರೆ". ಮಧ್ವರು ಶ್ರೀಕೃಷ್ಣಪಾದಾಂಬುಜಾರ್ಚಕರಾಗಿ ತಮ್ಮ ಮತ್ತು ತಮ್ಮ ಎಂಟು ಮಂದಿ ಶಿಷ್ಯರು ಮತ್ತು ಅವರ ಪರಂಪರೆಯವರ ನಿತ್ಯಾರ್ಚನೆಗಾಗಿ ಸ್ಥಾಪಿಸಿದ ಮೂರ್ತಿ ಇದು. ಈ ಮೂರ್ತಿ ಮತ್ತು ಅದರ ಅರ್ಚನೆ ಮಠದ ಖಾಸಗಿ ಕ್ರಿಯೆಗಳಾಗಿದ್ದು ಸಾರ್ವಜನಿಕರಿಗೆ ತೆರೆದಿಟ್ಟದ್ದಲ್ಲ.

ವಾದಿರಾಜರು, ಪುರಂದರದಾಸರು, ಕನಕದಾಸರು ತ್ರಿವೇಣೀಸಂಗಮದಂತೆ. ಅವರು ಮೂರು ಮಂದಿಯೂ ಒಂದೇ ಓರಗೆಯವರು ಒಂದೇ ಮನಸ್ಸಿನವರು. ಪರಸ್ಪರ ಗೌರವಾದರಗಳನ್ನು ಹೊಂದಿದ್ದವರು. ಪ್ರತಿಯೊಬ್ಬರಿಗೂ ಇನ್ನಿಬ್ಬರ ಪ್ರೌಢಿಮೆ ಔನ್ನತ್ಯಗಳ ಅರಿವಿತ್ತು. ೧೨೦ ವರ್ಷಗಳ ಕಾಲ ಬದುಕಿದ್ದ ವಾದಿರಾಜ(೧೪೮೦-೧೬೦೦)ರಿಗೆ ತಮ್ಮ ಮಠದಲ್ಲಿ ಸರ್ವಾಂಗೀಣ ಸುಧಾರಣೆ ತರುವ ತವಕ ಇತ್ತಾದರೂ ಅಲ್ಲಿ ಭದ್ರವಾಗಿ ಬೇರೂರಿದ್ದ ಮಡಿವಂತಿಕೆಯನ್ನು ಹೋಗಲಾಡಿಸಲು ಅವರಿಂದಾಗಿರಲಿಲ್ಲ. ವಾದಿರಾಜರೊಂದಿಗೆ ತಮಗಿದ್ದ ಸ್ನೇಹವನ್ನು ದುರುಪಯೋಗಪಡಿಸಿಕೊಂಡು ಮಠದಲ್ಲಿ ಪ್ರವೇಶ ಪಡೆಯುವ ದಾರ್ಷ್ಟ್ಯವೂ ಕನಕರಿಗಿರಲಿಲ್ಲ. ಕೃಷ್ಣನ ಮೂರ್ತಿಯ ಎದುರು ದರ್ಶನಾಪೇಕ್ಷೀ ಭಕ್ತರ ಅನುಕೂಲಕ್ಕಾಗಿ ಇದ್ದ ಧೂಳಿದರ್ಶನ ಕಿಂಡಿಯ ಬಳಿ ವಾದಿರಾಜರೂ ಕನಕದಾಸರೂ ಲೋಕಾಭಿರಾಮದ ಮಾತುಗಳನ್ನಾಡುತ್ತಿದ್ದರು. ಅದೇ ಕಿಂಡಿಯೇ ಮುಂದೆ ಕನಕನ ಕಿಂಡಿಯಾಯಿತು ಹೊರತು ಸಿನಿಮೀಯವಾಗಿ ಅಲ್ಲ. ಕನಕದಾಸರು ಪುಣ್ಯಪುರುಷರೆಂದು ಬಿಂಬಿಸಲು ಅವರ ಕಾವ್ಯಕೃಷಿಯೇ ಮಹತ್ತಾದ ಸಾಕ್ಷಿಯಾಗಿ ನಿಲ್ಲುವುದರಿಂದ ಕಿಂಡಿಯ ಸಹಾಯ ಅವರಿಗೆ ಬೇಕಾಗಿಯೂ ಇಲ್ಲ.

ಹೀಗೆ ಕನಕದಾಸರ ಸಾಹಿತ್ಯಕೃತಿಗಳು, ಅವರ ಬಗೆಗಿನ ಐತಿಹ್ಯಗಳು, ಅವರ ಕುರಿತು ಇತರೆ ಸಾಹಿತ್ಯಗಳಲ್ಲಿ ಅಥವಾ ಶಾಸನಗಳಲ್ಲಿನ ಮಾಹಿತಿಗಳನ್ನು ಕ್ರೋಢೀಕರಿಸಿ ಕನಕದಾಸರ ಸ್ಥೂಲ ಜೀವನ ಚಿತ್ರಣವನ್ನು ರಚಿಸಬಹುದಲ್ಲದೆ ಪರಿಪೂರ್ಣ ಜೀವನಚರಿತ್ರೆಯ ನಿರೂಪಣೆ ಸಾಧ್ಯವಿಲ್ಲದ ಮಾತು. ಆದರೆ ವಿದ್ವತ್ ನೆಲೆಯಲ್ಲಿ ವಿದ್ವತ್ಸಂಪನ್ನ ಕನಕದಾಸರು ಕುಲಾತೀತರಾಗಿ ಕಾಲಾತೀತರಾಗಿ ಕನ್ನಡ ಸಾರಸ್ವತ ಲೋಕದ ಪ್ರಜ್ವಲ ತಾರೆಯಾಗಿದ್ದಾರೆ.ವೆ೦ಕಟೇಷ್ ಹೊಸುರ್

ಕನಕದಾಸರ ಒ೦ದು ಕೀರ್ತನೆ
ಕನಕದಾಸರ ಕಾವ್ಯದ ಸರಾಗತೆಗೆ ಒ೦ದು ಉದಾಹರಣೆ:

ನೀ ಮಾಯೆಯೊಳಗೊ, ನಿನ್ನೊಳು ಮಾಯೆಯೊ
ನೀ ದೇಹದೊಳಗೊ, ನಿನ್ನೊಳು ದೇಹವೊ
ಬಯಲು ಆಲಯದೊಳಗೊ, ಆಲಯವು ಬಯಲೊಳೊಗೊ
ಬಯಲು ಆಲಯವೆರಡು ನಯನದೊಳಗೊ
ನಯನ ಬುದ್ಧಿಯೊಳಗೊ, ಬುದ್ಧಿ ನಯನದೊಳಗೊ
ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ
ಸವಿಯು ಸಕ್ಕರೆಯೊಳಗೊ, ಸಕ್ಕರೆಯು ಸವಿಯೊಳಗೊ
ಸವಿಯು ಸಕ್ಕರೆಯೆರಡು ಜಿಹ್ವೆಯೊಳಗೊ
ಜಿಹ್ವೆ ಮನಸಿನೊಳಗೊ, ಮನಸು ಜಿಹ್ವೆಯೊಳಗೊ
ಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ
ಕುಸುಮದೊಳು ಗ೦ಧವೊ, ಗ೦ಧದೊಳು ಕುಸುಮವೊ
ಕುಸುಮ ಗ೦ಧಗಳೆರಡು ಘ್ರಾಣದೊಳಗೊ
ಅಸಮಭವ ಕಾಗಿನೆಲೆಯಾದಿ ಕೇಶವರಾಯ
ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೊ

ಕನಕದಾಸರು

1. ಲೇಖಕನ ಹೆಸರು: ಕನಕದಾಸರು

2. ಕಾಲ: ಕ್ರಿ.ಶ. 1508-1606 (ಸುಮಾರು)

3. ಸ್ಥಳ: ಧಾರವಾಡ ಜಿಲ್ಲೆಯ ಕಾಗಿನೆಲೆ ಎಂಬ ಹಳ್ಳಿ

4. ಮತ-ಧರ್ಮ: ಕುರುಬರು (ಬೇಡರು)

5. ರಾಜಾಶ್ರಯ: ಸ್ವತಃ ಕನಕದಾಸರೇ ಹಾವೇರಿ ಜಿಲ್ಲೆಯಲ್ಲಿರುವ ಬಾಡ ಎಂಬ ಊರಿನ ರಾಜರಾಗಿದ್ದರು.

6. ಬಿರುದುಗಳು: ಭಕ್ತ ಕನಕದಾಸ

7. ಕಿರು ಪರಿಚಯ: ಕನಕದಾಸರು ಕನ್ನಡದ ಪ್ರಮುಖ ಸಂತ ಕವಿಗಳಲ್ಲಿ ಒಬ್ಬರು. ಅವರು ಮೇಲು ಜಾತಿ ಮತ್ತು ವರ್ಗಗಳವರು ಒಡ್ಡಿದ ಅಗ್ನಿಪರೀಕ್ಷೆಯಲ್ಲಿ ಪಾಡುಪಟ್ಟು, ತನ್ನ ಭಕ್ತಿ-ಪ್ರತಿಭೆಗಳನ್ನು ತೋರಿಸಬೇಕಾಯಿತು. ಅವರು ಅನುಭವಿಸಿದ ತಲ್ಲಣಗಳು ಮತ್ತು ಇಕ್ಕಟ್ಟುಗಳು ಅವರ ಕೃತಿಗಳಲ್ಲಿ ಹಲವು ಬಗೆಗಳಲ್ಲಿ ಮೂಡಿಬಂದಿವೆ. ಕನಕದಾಸರು ಕೀರ್ತನೆಗಳು ಮತ್ತು ಕಾವ್ಯಗಳು ಎರಡನ್ನೂ ರಚಿಸಿದ ಕೆಲವೇ ಕೆಲವು ಹರಿದಾಸರಲ್ಲಿ ಒಬ್ಬರೆಂಬ ಸಂಗತಿಯನ್ನು ಗಮನಿಸಬೇಕು.

ಆ ಕಾಲದ ಸಾಹಿತ್ಯಸಂದರ್ಭದಲ್ಲಿ ಕನಕದಾಸರಿಗೆ ವಿಶಿಷ್ಟವಾದ ಹಿನ್ನೆಲೆಯಿತ್ತು. ಅವರು ಹಿಂದುಳಿದ ಜಾತಿಯಲ್ಲಿ ಹುಟ್ಟಿದವರು, ಆದರೆ, ಅವರು ಸಾಮಂತ ರಾಜರೋ ಪಾಳೆಯಗಾರರೋ ಆಗಿದ್ದುದರಿಂದ ಅವರಿಗೆ ಯುದ್ಧ ಮತ್ತು ಆಡಳಿತಗಳ ನೇರವಾದ ಅನುಭವವಿತ್ತು. ಅವರ ತವರು ನೆಲವಾದ ಕಾಗಿನೆಲೆಯಲ್ಲಿ ಇಂದಿಗೂ ಇರುವ ಆದಿಕೇಶವನ ಗುಡಿಯ ದೇವತೆಯಾದ ಕೇಶವನು ಅವರ ಆರಾಧ್ಯದೈವವಾಗಿದ್ದು ಅವೆರ ಅಂಕಿತವಾದ ‘ಕಾಗಿನೆಲೆಯಾದಿಕೇಶವರಾಯ‘ ಎನ್ನುವುದು ಅಲ್ಲಿಂದಲೇ ಬಂದಿದೆ. ಅವರು ಕರ್ನಾಟಕ ಹಾಗೂ ಮಹಾರಾಷ್ಟ್ರಗಳಲ್ಲಿ ಮಾಡಿದ ನಿರಂತರವಾದ ತಿರುಗಾಟಗಳು ಮತ್ತು ಮತಾಂಧರಾದ ಧಾರ್ಮಿಕ ಮುಖಂಡರೊಂದಿಗಿನ ಅವರ ಮುಖಾಮುಖಿಗಳು ಸಾಹಸ-ವಿಷಾದಗಳೀಂದ ಕೂಡಿವೆ. ಅವರ ಯಾತನೆಗಳು, ಭಾವಗೀತೆಯಂತಹ ಕೀರ್ತನೆಗಳಲ್ಲಿ ಬಹಳ ಸಮರ್ಥವಾದ ಅಭಿವ್ಯಕ್ತಿಯನ್ನು ಪಡೆದಿವೆ. ಕನಕದಾಸರ ಹಿರಿಯರೂ ಸಮಕಾಲೀನರೂ ಆದ ವ್ಯಾಸರಾಯರು, ಪುರಂದರದಾಸರು ಮುಂತಾದವರು ಅವರ ಭಕ್ತಿ ಮತ್ತು ಪ್ರತಿಭೆಗಳನ್ನು ಮೆಚ್ಚಿ ಕೊಂಡಾಡಿದ್ದಾರೆ. ಆದರೆ, ಮತಾಂಧರಾದ ಮೇಲುಜಾತಿಗಳವರು ಅವರ ಯೋಗ್ಯತೆಯನ್ನು ಪ್ರಶ್ನಿಸಿದರು. ಅವರು ಶ್ರೀವೈಷ್ಣವ ಸಿದ್ಧಾಂತವನ್ನು ಇಷ್ಟಪಟ್ಟಿದ್ದರೆಂಬ ಊಹಾಪೋಹಗಳಿವೆ. ಅದೇನೇ ಇರಲಿ, ದ್ವೈತ ತಾತ್ವಿಕತೆಯ ಮೂಲ ನೆಲೆಗಳಿಗೆ ಕೊಂಚವಾದರೂ ನಿಷ್ಠೆಯನ್ನು ತೋರಿಸುವುದು ಅವರಿಗೆ ಅನಿವಾರ್ಯವಾಗಿತ್ತು. ಆದ್ದರಿಂದಲೇ, ಅವರ ಅನೇಕ ಕೀರ್ತನೆಗಳು ಆ ಧರ್ಮದ ಚೌಕಟ್ಟನಲ್ಲಿ ರಚಿತವಾಗಿವೆ. ಆದರೆ, ಅವರು ಅಂತರಂಗದ ಭಾವನೆಗಳಿಗೆ ಕಟ್ಟುಪಾಡಿಲ್ಲದೆ, ನುಡಿಗೊಡುವ ಅನೇಕ ಕೀರ್ತನೆಗಳನ್ನು ಹಾಡಿಕೊಂಡಿದ್ದಾರೆ. ಕನಕದಾಸರ ಕೀರ್ತನೆಗಳು ಈ ವ್ಯಥೆಯಿಂದ ಆರ್ದ್ರವಾಗಿದ್ದು, ಜಾತಿಪದ್ಧತಿಯ ಪರಿಣಾಮವಾದ ಅಸಮಾನತೆಯ ವಿರುದ್ಧ ಗಟ್ಟಿಯಾದ ದನಿಯೆತ್ತುತ್ತವೆ. ಅನೇಕ ಕೀರ್ತನೆಗಳು ದ್ವೈತಸಿದ್ಧಾಂತದ ಚೌಕಟ್ಟಿನಿಂದ ಆಚೆಗೆ ಹೋಗುವುದಿಲ್ಲವೆನ್ನುವುದು ನಿಜವಾದರೂ ಅವುಗಳೊಳಗೆ ಆಳವಾದ ವಿಷಾದವೂ ಇದೆ

ಭಾಮಿನಿ ಷಟ್ಪದಿಯಲ್ಲಿ ರಚಿತವಾಗಿರುವ ‘ನಳಚರಿತೆ‘ ಕನ್ನಡದ ಜನಪ್ರಿಯ ಕಾವ್ಯಗಳಲ್ಲಿ ಒಂದು. ಇದರಲ್ಲಿ ಒಂಬತ್ತು ಅಧ್ಯಾಯಗಳಿದ್ದು ಅವು ಸುಮಾರು 480 ಪದ್ಯಗಳನ್ನು ಒಳಗೊಂಡಿವೆ. ಒಂದು ನೆಲೆಯಲ್ಲಿ ಇದು ನಿಜವಾದ ಪ್ರೇಮಿಗಳು ಎದುರಿಸುವ ಪಡಿಪಾಟಲುಗಳನ್ನು ನಿರೂಪಿಸುವುದರಿಂದಲೇ ಆತ್ಮೀಯವಾಗುತ್ತದೆ. ಮಹಾಭಾರತದಿಂದ ತೆಗೆದುಕೊಳ್ಳಲಾಗಿರುವ ಈ ಉಪಾಖ್ಯಾನವು ನಳ-ದಮಯಂತಿಯರ ಜೀವನವನ್ನು ಸರಳವಾದರೂ ಶಕ್ತಿಶಾಲಿಯಾದ ಶೈಲಿಯಲ್ಲಿ ನಿರೂಪಿಸುತ್ತದೆ. ಇ ದಂಪತಿಗಳು ಎದುರಿಸಿದ ಕಾಡು ಮತ್ತು ಕಾಳ್ಗಿಚ್ಚುಗಳ ವರ್ಣನೆಯು ಬಹಳ ಸಹಜವಾಗಿದೆ. ಈ ಕಾವ್ಯವು ತನ್ನ ಅನೇಕ ಆಶಯಗಳನ್ನು ಜಾನಪದದಿಂದ ತೆಗೆದುಕೊಂಡಿದೆ. ‘ನಳಚರಿತೆ‘ ಮುಖ್ಯವಾಗಿ ಮನುಷ್ಯಜೀವಿಗಳ ಕಷ್ಟಸುಖಗಳ ಹಂಚಿಕೊಳ್ಳುವಿಕೆಯೇ ವಿನಾ ತಾತ್ವಿಕವಾದ ಉಪದೇಶವಲ್ಲ.

‘ಮೋಹನತರಂಗಿಣಿ‘ ಸಾಂಗತ್ಯವೆಂಬ ಛಂದೋಪ್ರಕಾರವನ್ನು ಬಳಸಿಕೊಂಡಿರುವ ದೊಡ್ಡ ಗಾತ್ರದ ಕಾವ್ಯ. ಈ ಕಾವ್ಯವು ಕೃಷ್ಣನ ಮೊಮ್ಮಗನಾದ ಅನಿರುದ್ಧ ಮತ್ತು ಬಾಣಾಸುರನ ಮಗಳಾದ ಉಷಾರ ಪ್ರಣಯಕಥೆಯನ್ನು ವಸ್ತುವಾಗಿ ಹೊಂದಿದೆ. ಈ ಕಾವ್ಯವು ಕೂಡ ಯಾವುದೇ ಕೃಷ್ಣಕಥೆಯ ಮೂಲ ಆಕರಗಳಾದ ಭಾಗವತ, ಹರಿವಂಶ, ವಿಷ್ಣುಪುರಾಣ ಮತ್ತು ಮಹಾಭಾರತಗಳಿಂದ ತನಗೆ ಅಗತ್ಯವಾದ ವಿವರಗಳನ್ನು ತೆಗೆದುಕೊಂಡಿದೆ. ಮನ್ಮಥನ ಹುಟ್ಟು, ಶಂಬರಾಸುರನ ವಧೆ, ಉಷಾ ಮತ್ತು ಅನಿರುದ್ಧರ ಪ್ರಣಯ, ಬಾಣಾಸುರವಧೆ ಮುಂತಾದವು ಈ ಕಾವ್ಯದ ಮುಖ್ಯ ಘಟನೆಗಳು. ಅದೆಲ್ಲಕ್ಕಿಂತ ಮುಖ್ಯವಾಗಿ ಮೋಹನತರಂಗಿಣಿಯು ತನ್ನ ಕಾಲದ ಕರ್ನಾಟಕದ ಜೀವನಶೈಲಿಯ ಮೇಲೆ ಬೆಳಕು ಚೆಲ್ಲುತ್ತದೆ. ನಿಧಾನಗತಿಯ ಹಾಗೂ ಗೇಯತೆಯ ಕಡೆಗೆ ಒಲಿಯುವ ಸಾಂಗತ್ಯದ ಛಂದಸ್ಸು, ಈ ಕಾವ್ಯದ ವಸ್ತುವಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ.

‘ರಾಮಧಾನ್ಯಚರಿತ್ರೆ‘ಯು ಇಡೀ ಕನ್ನಡ ಸಾಹಿತ್ಯಚರಿತ್ರೆಯಲ್ಲಿಯೇ ಬಹಳ ಅನನ್ಯವಾದ ಕಾವ್ಯ. ಜಾತಿಪದ್ಧತಿ ಮತ್ತು ಜನಾಂಗಿಕ ಭೇದದಿಂದ ಉಂಟಾಗುವ ದಾರುಣ ಯಾತನೆಯನ್ನು ಬಹಳ ಸಾಂಕೇತಿಕವಾಗಿ ಮತ್ತು ಅನುಪಮವಾದ ಕಲ್ಪನಾಶಕ್ತಿಯ ಬಲದಿಂದ ಕಟ್ಟಿಕೊಡುವುದು ಈ ಕಾವ್ಯದ ಹೆಗ್ಗಳಿಕೆ. ಅದು ಅಹಂಕಾರಿಯಾದ ಬತ್ತ ಮತ್ತು ವಿನಯದಿಂದ ತಲೆಬಾಗಿದ, ಜನಸಾಮಾನ್ಯರ ಆಹಾರವಾದ ನರೆದಲೆಗಳ ನಡುವೆ ನಡೆಯುವ ಕಾಲ್ಪನಿಕವಾದ ಮುಖಾಮುಖಿಯ ಕಥನ. ಅವರಿಬ್ಬರ ನಡುವೆ ಯಾರು ಶ್ರೇಷ್ಠರೆನ್ನುವ ವಿಷಯದಲ್ಲಿ ಜಗಳ ನಡೆಯುತ್ತದೆ. ಕೊನೆಯ ತೀರ್ಮಾನವನ್ನು ಕೊಡುವ ಕೆಲಸವನ್ನು ರಾಮನು ನಿರ್ವಹಿಸಬೇಕಾಗುತ್ತದೆ. ಅವನು ಒಂದು ಪರೀಕ್ಷಯನ್ನು ಮಾಡಿ ನರೆದಲೆಗದ ಪರವಾದ ತೀರ್ಮಾನವನ್ನು ಕೊಡುತ್ತಾನೆ. ಅದನ್ನು ರಾಗಿ ಎಂದು ಕರೆಯುತ್ತಾನೆ. (ರಾಘವ ಧಾನ್ಯ) ಈ ಕಾವ್ಯಕ್ಕೆ ಇರುವ ಸಾಂಕೇತಿಕ ಹಾಗೂ ಸಾಮಾಜಿಕವಾದ ಮಹತ್ವವನ್ನು ಕನ್ನಡ ಸಾಹಿತ್ಯದ ಪ್ರಧಾನಧಾರೆಯು ಗುರುತಿಸಿದ್ದು ಈಚೆಗೆ. ಹಿಂದುಳಿದ ವರ್ಗಗಳು ಮುಂದೆ ಬಂದಿದ್ದಕ್ಕೂ ಈ ಕಾವ್ಯದ ಮರುಹುಟ್ಟಿಗೂ ಇರುವ ಸಂಬಂಧವು ಕಾಕತಾಳೀಯವಲ್ಲ. ಈ ಕಾವ್ಯವನ್ನು ಅಂಚಿಗೆ ತಳ್ಳಿ, ಕಡಿಮೆ ಆಸ್ಫೋಟಕವಾದ ಕಾವ್ಯಗಳನ್ನು ಹೊಗಳಿರುವುದು, ಕನ್ನಡ ಸಾಹಿತ್ಯವಿಮರ್ಶೆಯ ಮಾನದಂಡಗಳ ಬಗ್ಗೆ, ಮುಖ್ಯವಾದ ಸತ್ಯಗಳನ್ನು ಹೇಳುತ್ತದೆ.

‘ಕನಕನ ಮುಂಡಿಗೆಗಳು‘, ಒಗಟಿನ ಹೊರ ಆವರಣದೊಳಗೆ, ಮಹತ್ವದ ತಾತ್ವಿಕ ಸಂಗತಿಗಳನ್ನು ಹೊಂದಿರುವ, ಚಿಕ್ಕ ಗೇಯ ಕವಿತೆಗಳನ್ನು ಒಳಗೊಳ್ಳುತ್ತವೆ. ಇವುಗಳನ್ನು ಅರ್ಥ ಮಾಡಿಕೊಳ್ಳು ತಾಂತ್ರಿಕವಾದ ಪರಿಭಾಷೆಯ ನಿಕಟ ಪರಿಚಯ ಇರಬೇಕು. ‘ಹರಿಭಕ್ತಸಾರ‘ದಲ್ಲಿ ಭಾಮಿನಿ ಷಟ್ಪದಿಯಲ್ಲಿ ರಚಿತವಾಗಿರುವ 110 ಪದ್ಯಗಳಿವೆ. ಅವು ಕನಕದಾಸರ ಜೀವನದೃಷ್ಟಿ ಮತ್ತು ನೈತಿಕ ನೆಲೆಗಟ್ಟನ್ನು ಬಹಳ ಭಾವನಾತ್ಮಕವೂ ಸರಳವೂ ಆದ ಶೈಲಿಯಲ್ಲಿ ಹೇಳುತ್ತದೆ.

ಒಟ್ಟಂದದಲ್ಲಿ ಹೇಳುವುದಾದರೆ, ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ಕನಕದಾಸರಿಗೆ ವಿಶಿಷ್ಟವಾದ ಸ್ಥಾನವಿದೆ. ನಮ್ಮ ಸಮಕಾಲೀನ ವಾತಾವರಣದಲ್ಲಿ ಅವರ ಕಾವ್ಯ ಮತ್ತು ಜೀವನಗಳು ಸ್ಫೂರ್ತಿದಾಯಕವಾಗಿವೆ. ಏಕೆಂದರೆ, ಇಂದು ಹಿಂದುಳಿದ ವರ್ಗಗಳ ಕಲಾಪ್ರತಿಭೆ ಮತ್ತು ಸಾರ್ವಜನಿಕ ಸಮ್ಮತಿಯನ್ನು ಪಡೆಯುವ ಅವರ ಪ್ರಯತ್ನಗಳು ಮುನ್ನೆಲೆಗೆ ಬಂದಿವೆ.



ಕೃತಿಗಳು:

ಅ, ಮೋಹನತರಂಗಿಣಿ:

ಮೊದಲ ಆವೃತ್ತಿ: 1913. ಎಂ.ಎ. ರಾಮಾನುಜ ಅಯ್ಯಂಗಾರ್, ಕರ್ನಾಟಕ ಕಾವ್ಯಕಲಾನಿಧಿ ಮಾಲೆ, ಮೈಸೂರು.

ನಂತರದ ಆವೃತ್ತಿಗಳು: ಆರ್.ಸಿ. ಹಿರೇಮಠ, (1973), ಎಸ್.ಎಸ್. ಕೋತಿನ(1984) (ಗದ್ಯಾನುವಾದ ಸಹಿತ), ಜಿ.ಜಿ. ಮಂಜುನಾಥನ್, (1999) ಮತ್ತು ಬಿ.ಎಸ್.ಸಣ್ಣಯ್ಯ, 1963 (ಸಂಗ್ರಹ ಆವೃತ್ತಿ)

ಆ. ನಳಚರಿತ್ರೆ:

ಮೊದಲ ಆವೃತ್ತಿ: 1888, ಸಂ. ??, ವಿಚಾರದರ್ಪಣ ಮುದ್ರಾಕ್ಷರಶಾಲೆ, ಬೆಂಗಳೂರು

ನಂತರದ ಆವೃತ್ತಿಗಳು: ಎಸ್.ಜಿ. ನರಸಿಂಹಾಚಾರ್ ಮತ್ತು ಎಂ.ಎ. ರಾಮಾನುಜ ಅಯ್ಯಂಗಾರ್(1903) ಕರ್ನಾಟಕ ಕಾವ್ಯಕಲಾನಿಧಿ, ಪಿ.ಆರ್.ಕರಿಬಸವಶಾಸ್ತ್ರೀ, 1925, ಎಚ್.ಎಂ. ಶಂಕರನಾರಾಯಣರಾವ್, 1953, ದೇ.ಜವರೇಗೌಡ, 1985, ಹತ್ತೂರು ಶಂಕರನಾರಾಯಣರಾವ್, 1976, ಬಿ.ವಿ. ಶಿರೂರ, 1981.

ಇ. ಹರಿಭಕ್ತಿಸಾರ:

ಮೊದಲ ಆವೃತ್ತಿ: 1868, ಸರಸ್ವತೀ ನಿಲಯ ಮುದ್ರಾಕ್ಷರ ಶಾಲಾ, ಮದ್ರಾಸು

ನಂತರದ ಆವೃತ್ತಿಗಳು: ತಿರುಮಲೆ ಶ್ರೀನಿವಾಸಾಚಾರ್ಯ, ಬಿ. ಕೋದಂಡರಾಮಶೆಟ್ಟಿ (1923), ಶ್ರೀನಿವಾಸ ತಂತ್ರಿ,(1940), ಬಿ.ಶಿವಮೂರ್ತಿಶಾಸ್ತ್ರೀ ಮತ್ತು ಕೆ.ಎಂ.ಕೃಷ್ಣರಾವ್ ಮತ್ತು ಎನ. ರಂಗನಾಥಶರ್ಮ, 1972.

ಈ. ರಾಮಧಾನ್ಯಚರಿತ್ರೆ:

ಮೊದಲ ಆವೃತ್ತಿ: 1963, ಸಂ, ಕೆ.ಸಿ.ಪಂಚಲಿಂಗೇ ಗೌಡ, ಮೈಸೂರು.

ನಂತರದ ಆವೃತ್ತಿ: 1965, ಸಂ. ದೇ. ಜವರೇಗೌಡ, ಮೈಸೂರು.

ಉ. ಕೀರ್ತನೆಗಳು:

ಮೊದಲ ಆವೃತ್ತಿ: 1850, ಇತರ ಕೀರ್ತನಕಾರರೊಂದಿಗೆ

ನಂತರದ ಆವೃತ್ತಿಗಳು: 1965, ಬಿ.ಶಿವಮೂರ್ತಿಶಾಸ್ತ್ರೀ ಮತ್ತು ಕೆ.ಎಂ. ಕೃಷ್ಣರಾವ್, 1972, ಬೆಟಗೇರಿ ಕೃಷ್ಣಶರ್ಮ ಮತ್ತು ಬೆಂಗೇರಿ ಹುಚ್ಚೂರಾವ್, 1999 ಸುಧಾಕರ (ಕೀರ್ತನೆಗಳು ಮತ್ತು ಮುಂಡಿಗೆಗಳು)

ಊ: ಕನಕನ ಮುಂಡಿಗೆಗಳು

ಋ: ನೃಸಿಂಹಸ್ತವ (ಇನ್ನೂ ಸಿಕ್ಕಿಲ್ಲ)

9. ಮುಂದಿನ ಓದು ಮತ್ತು ಲಿಂಕುಗಳು:

ಅ. ಕನಕದಾಸರ ಜೀವನಚರಿತ್ರೆ ಮತ್ತು ಪದಗಳು, ಕಲಮದಾನಿ ಗುರುರಾಯ, 1965.

ಆ. ಮಹಾತ್ಮಾ ಕನಕದಾಸ ಪ್ರಶಸ್ತಿ, 1965

ಇ. ಕನಕ ಮಹಿಮಾದರ್ಶ, ಭೀಮಾಚಾರ್ಯ ವಡವಿ, 1926

ಈ. ಕವಿ ಕನಕದಾಸರು, ಕಟ್ಟಿ ಶೇಷಾಚಾರ್ಯ, 1938

ಉ. Kanakadasa: he Golden Servant of Lord Hari by Basavaraja Naikar, National Book Trust, New Delhi.

ಊ: Kanakadasa: Philosopher-Poet-Haridasa: A Transcreation of his Bhakti Poems, Haribhsktisara, B.S. Rao, 2001, East West Books, Madras.

ಋ. Compositions of Sri Kanaka Dasa


ಕನಕದಾಸ
http://kagineledevelopmentauthority.com/AboutKanakadaasa.html

ದಾಸ ಸಾಹಿತ್ಯದಲ್ಲಿಯೆ ವಿಶಿಷ್ಟ ವ್ಯಕ್ತಿತ್ವದವರು ಕನಕದಾಸರು. ಈಗಿನ ಹಾವೇರಿ ಜಿಲ್ಲೆಯ ಬಂಕಾಪೂರ ಪ್ರದೇಶಕ್ಕೆ ಕುರುಬ ಜನಾಂಗದ ಬೀರಪ್ಪನೆಂಬಾತನು ಡಣ್ಣಾಯಕನಾಗಿದ್ದ. ಆತನ ಪತ್ನಿ ಬಚ್ಚಮ್ಮ. ಈ ದಂಪತಿಗಳ ಏಕೈಕ ಪುತ್ರನೇ ತಿಮ್ಮಪ್ಪ. ತಂದೆಯ ಅಕಾಲ ಮೃತ್ಯುವಿನಿಂದ ಕಿರಿಯ ವಯಸ್ಸಿನಲ್ಲಿ ತಿಮ್ಮಪ್ಪ ನಾಯಕನಾದ. ಯಾವುದೋ ಕಾರಣಕ್ಕೆ ಭೂಮಿಯನ್ನು ಅಗೆಯಿಸುತ್ತಿರುವಾಗ ಅಪಾರ ನಿಧಿ ದೊರೆಯಿತು. ಅದನ್ನು ತನ್ನ ವಿಲಾಸಿ ಜೀವನಕ್ಕೆ ಬಳಸಿಕೊಳ್ಳದೆ ಪ್ರಜೆಗಳ ಹಿತರಕ್ಷಣೆಗೆ ಹಾಗೂ ಧಾರ್ಮಿಕ ಕಾರ್ಯಗಳಿಗಾಗಿ ಬಳಸಿ ಜನರಿಂದ ಕನಕದಾಸನೆಂಬ ಪ್ರಶಂಸೆಗೆ ಪಾತ್ರನಾದ. ಯುದ್ಧಭೂಮಿಯಲ್ಲಿ ಬಲವಾಗಿ ಗಾಯಗೊಂಡು ಮರಣಾವಸ್ಥೆಯಲ್ಲಿರುವಾಗ ಯಾವುದೋ ಚೇತನ ಶಕ್ತಿ ಶುಶ್ರೂಷೆಯನ್ನು ಮಾಡಿದಂತಾಗಿ, ‘ಕನಕಾ ಇನ್ನಾದರೂ ನನ್ನ ದಾಸನಾಗು’ ಎಂದು ಅಶರೀರವಾಣಿ ಆಯಿತಂತೆ. ಇವರ ಕಾಲಮಾನವನ್ನು (೧೫೦೮-೧೯೦೬) ಹದಿನಾರನೇ ಶತಮಾನ ಎಂಬ ಒಮ್ಮತ ಅಭಿಪ್ರಾಯಕ್ಕೆ ಬರಲಾಗಿದೆ. ನವಂಬರ್ ೨೭ ರಂದು ಸಂತ ಕನಕದಾಸರ ಜಯಂತಿಯನ್ನು ಆಚರಿಸಲಾಗುತ್ತದೆ.

ಹಾವೇರಿ ಜಿಲ್ಲೆಯ ಕಾಗಿನೆಲೆ ಕನಕದಾಸರ ಕರ್ಮಭೂಮಿ ಆಗಿತ್ತು. ಈಗ ಅದರ ಅಭಿವೃದ್ಧಿಗೆ ಕರ್ನಾಟಕ ಸರ್ಕಾರ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿತು. ಕನಕದಾಸರ ಹುಟ್ಟೂರು ಬಾಡ. ಇದೂ ಹಾವೇರಿ ಜಿಲ್ಲೆಯಲ್ಲಿದೆ. ಈ ಬಾಡದಲ್ಲಿ ಕನಕದಾಸರ ಅರಮನೆ ಇದ್ದ ಬಗ್ಗೆ ದಾಖಲೆಗಳು ದೊರಕಿವೆ. ಅದರ ಉತ್ಖನನ ಕಾರ್ಯ ಸಾಗಿದೆ. ಬಾಡದ ಅಭಿವೃದ್ಧಿಯನ್ನು ಪ್ರಾಧಿಕಾರ ಕೈಗೆತ್ತಿಕೊಂಡಿದೆ. ಕೆಲವು ಸ್ಥಳಗಳು ವ್ಯಕ್ತಿ ಮಹಿಮೆಯಿಂದಾಗಿ ಪ್ರಖ್ಯಾತಿಗೆ ಬರುತ್ತವೆ. ಕೆಲವು ಸ್ಥಳಗಳ ಮಹಿಮೆಯಿಂದಾಗಿ ವ್ಯಕ್ತಿಗಳು ಪ್ರಖ್ಯಾತಿ ಪಡೆಯುತ್ತಾರೆ. ಕಾಗಿನೆಲೆ, ಬಾಡ ಹಾಗೂ ಕನಕದಾಸರು ಸಂದರ್ಶಿಸಿದ ಸ್ಥಳಗಳು ಕನಕದಾಸರ ಮಹತ್ವದೊಂದಿಗೇ ಮಹತ್ವ ಪಡೆದಿವೆ. ಇದು ಇತಿಹಾಸ. ಸಂಸ್ಕೃತಿಯ ಅಂತಸ್ಸತ್ವ.

ದಾಸ ಪರಂಪರೆಯ ಹುಟ್ಟು
ಕನ್ನಡ ಸಾಹಿತ್ಯ ಪರಂಪರೆಯಲ್ಲಿ ವಚನ ಸಾಹಿತ್ಯ ಹಾಗೂ ದಾಸ ಸಾಹಿತ್ಯಗಳೆರಡೂ ಪ್ರಮುಖ ಘಟ್ಟಗಳು. ಸಂಸ್ಕೃತಭೂಯಿಷ್ಠವಾದ ಕನ್ನಡ ಪದಗಳಿಂದ, ಜನಸಾಮಾನ್ಯರಿಗೆ ಕಬ್ಬಿಣದ ಕಡಲೆಯಾಗಿದ್ದ ಕಾವ್ಯ ಸ್ವರೂಪದಲ್ಲಿ ಮಾತ್ರವೇ ನೋಡ ಸಿಗುತ್ತಿದ್ದ ಸಾಹಿತ್ಯ ಜನರ ಬಳಿ ಸುಳಿದುದೇ ಈ ಹೊಸ ಸಾಹಿತ್ಯ ಪ್ರಕಾರಗಳಿಂದ.

೧೨ ನೇ ಶತಮಾನದಲ್ಲಿ ಮೊದಲ್ಗೊಂಡ ರಗಳೆ, ವಚನ ಸಾಹಿತ್ಯ ಪ್ರಕಾರದ ಮೂಲಕ ಶಿವಶರಣರ, ವಚನಕಾರರ ಮೂಲಕ ಜನಮನ ತಟ್ಟಲು ಮುಂದಾಯಿತು. ಇದರ ನಂತರ, ೧೩ನೇ ಶತಮಾನದಲ್ಲಿ ನರಹರಿತೀರ್ಥದಾಸರಿಂದ ಆರಂಭಗೊಂಡ ದಾಸ ಸಾಹಿತ್ಯ, ಮುಂದಿನ ಐದು ಶತಮಾನಗಳ ಕಾಲ ಜನಸಾಮಾನ್ಯರ ಮನೆ-ಮನ ಮುಟ್ಟಿತು. ಈ ಪೈಕಿ, ೧೬ ನೇ ಶತಮಾನದಲ್ಲಿ ಬಾಳಿ ಬೆಳಗಿದ ಪುರಂದರದಾಸ-ಕನಕದಾಸರ ಕಾಲವನ್ನು ದಾಸ ಸಾಹಿತ್ಯದ ಸುವರ್ಣ ಯುಗವೆಂದು, ಪುರಂದರದಾಸ ಹಾಗೂ ಕನಕದಾಸರನ್ನು ದಾಸ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ. ದಾಸ ಸಾಹಿತ್ಯದ ಮೂಲಕ ಸಾಹಿತ್ಯವನ್ನು ಇನ್ನಷ್ಟು ಸರಳಗೊಳಿಸಿದ, ಕನ್ನಡ ಸಾಹಿತ್ಯಕ್ಕೆ ಹೊಸತನ ತುಂಬಿದ ಕನಕದಾಸರನ್ನು ಹೊಸಗನ್ನಡ ಸಾಹಿತ್ಯದ ಕೋಗಿಲೆ ಎಂದು, ಕದಾಸ ಸಾಹಿತ್ಯ ಬನದ ಕೋಗಿಲೆ ಎಂದು ಪ್ರಾಜ್ಞರು ಕರೆದುದುಂಟು

ಕನ್ನಡ ಸಾಹಿತ್ಯದಲ್ಲಿ ೧೨ ನೇ ಶತಮಾನದ ವಚನ ಸಾಹಿತ್ಯ ಹಾಗೂ ೧೬ ನೇ ಶತಮಾನದ ದಾಸ ಸಾಹಿತ್ಯ ಹೆಚ್ಚು ಜನಮುಖಿಯಾದವು. ವಚನ ಸಾಹಿತ್ಯದ ಸಮರತೆ ಹಾಗೂ ವ್ಯಾಪಕತೆ ದಾಸ ಸಾಹಿತ್ಯಕ್ಕೆ ಇರದ್ದಿದ್ದರೂ, ಜಾತಿ-ನೀತಿ ಮತ್ತು ಕರ್ಮಠತನದ ಉಡದ ಪಟ್ಟಿನ ನಡುವೆಯೂ, ಕನಕದಾಸರು ತಮ್ಮ ವಿಷ್ಣು ಭಕ್ತಿಯ ಜನತೆಯಲ್ಲಿ ಸಾಮಾಜಿಕ ಚಿಂತನೆ, ಕಾವ್ಯ ಮತ್ತು ಕೀರ್ತನೆಗಳ ಮೂಲಕ ಸಾಹಿತ್ಯ ಹಾಗೂ ಸಂಗೀತಕ್ಕೆ ಮಹತ್ತರ ಕಾಣಿಕೆ ಸಲ್ಲಿಸಿ, ದಾಸ ಸಾಹಿತ್ಯದ ತೂಕವನ್ನು ಮತ್ತಷ್ಟು ಹೆಚ್ಚಿಸಿದರು.

ಕನಕದಾಸರು (೧೫೦೮-೧೬೦೬) ಸಾಮಾನ್ಯ ಕಾಲದಲ್ಲಿ (ಕುರುಬ) ಹುಟ್ಟಿದರೂ ತಮ್ಮ ಸ್ವಸಾಮರ್ಥ್ಯ ಮತ್ತು ಪ್ರತಿಭೆಯಿಂದ ಹಿರಿಮೆ ಗಳಿಸಿದವರು. ಕನಕರು ಕೆಳಸ್ತರದಿಂದ ಬಂದವರಾದ್ದರಿಂದ, ಕೆಳಜಾತಿಯವರ ನೋವಿನ ಅರಿವು ಹಾಗೂ ಡಣ್ಣಾಯಕ(ಒಂದು ಪ್ರದೇಶದ ಮುಖ್ಯಸ್ಥ)ರಾಗಿದ್ದರಿಂದ ಮೇಲ್ವರ್ಗದ ಜೀವನದ ಅನುಭವ ಅವರದಾಗಿತ್ತು. ತಮ್ಮ ಸಮಕಾಲೀನ ದಾಸರಂತೆ ನಡೆದ ದಾರಿಯಲ್ಲೇ ನಡೆಯದ ಕನಕದಾಸರು, ಏಕಮುಖಿಯಾಗಿ ಕೇವಲ ಹರಿಯನ್ನು ಹೊಗಳದೆ, ಆರು ಬದುಕಿದರಯ್ಯ ಹರಿ ನಿನ್ನ ನಂಬಿ ಎಂದು ವೈಚಾರಿಕ ನೆಲೆಯಲ್ಲಿ ಹರಿಯನ್ನು ಪ್ರಶ್ನಿಸಿದ್ದೂ ಉಂಟು. ಅವರ ವೈಚಾರಿಕ ಮನೋಭಾವದಿಂದಾಗಿ, ಅವರು ತಮ್ಮ ಸಮಕಾಲೀನ ಬದುಕಿನ ನೈಜ ಚಿತ್ರಣವನ್ನು ಮುಂದಿನ ಜನಾಂಗಕ್ಕೆ ಕೊಡಲು ಸಾಧ್ಯವಾಗದೆ ಇರುವ ಕಾರಣಕ್ಕಾಗಿಯೇ ಕನಕದಾಸರು ದಾಸರಲ್ಲಿ ಅತೀ ಮುಖ್ಯರೆನ್ನಿಸುತ್ತಾರೆ

ಕನಕದಾಸರ ಜೀವನ ಸಂದೇಶ
- ಡಾ.ಜಗನ್ನಾಥ ಆರ್.ಗೇನಣ್ಣವರ
ದಾಸ ಸಾಹಿತ್ಯದಲ್ಲಿ ದಿಗ್ಗಜರೆನಿಸಿಕೊಂಡವರಲ್ಲಿ ಸಂತಶ್ರೀ ಕನಕದಾಸರು ಒಬ್ಬರು. ಇವರಿಗೆ ದಾಸಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನವಿದೆ. ಸಂತಶ್ರೀ ಕನಕದಾಸರು ಸಮಾಜದ ಕೆಳಸ್ತರದಿಂದ ಬಂದವರಾಗಿದ್ದರಿಂದ ಕೆಳಜಾತಿಯವರ ನೋವಿನ ಅರಿವು ಹಾಗೂ ಡಣ್ಣಾಯಕರಾಗಿದ್ದರಿಂದ ಮೇಲ್ವರ್ಗದವರ ವೈಭವದ ಜೀವನದ ಅನುಭವ ಅವರಿಗೆ ಇತ್ತು. ತಮ್ಮ ಸಮಕಾಲೀನ ದಾಸರಂತೆ ಸಾಹಿತ್ಯದಲ್ಲಿ ಹರಿಯನ್ನು ‘ಎಲ್ಲಿರುವನೋ ರಂಗ ಎಂಬ ಸಂಶಯ ಬೇಡ’ ಎಂದು ಏಕಮುಖಿಯಾಗಿ ಹೊಗಳದೆ ‘ಆರು ಬದುಕಿದರಯ್ಯ ಹರಿ ನಿನ್ನ ನಂಬಿ’ ಎಂದು ಪ್ರಶ್ನಿಸಿದ್ದೂ ಉಂಟು. ಇವರು ತಮ್ಮ ಕಾವ್ಯ ಕೀರ್ತನೆಗಳಲ್ಲಿ ಸಮಕಾಲೀನ ಜನಜೀವನದ ಚಿತ್ರಣವನ್ನು ಬಹು ಮಾರ್ಮಿಕವಾಗಿ ಚಿತ್ರಿಸಿದ್ದಾರೆ.

ವಿಜಯನಗರ ಆಡಳಿತಕ್ಕೆ ಒಳಪಟ್ಟ ಬಾಡ ಪ್ರದೇಶ ಅಂದಿನ ೭೮ ಗ್ರಾಮಗಳ ಹೋಬಳಿಯಾಗಿತ್ತು. (ಈಗಿನ ಹಾವೇರಿ ಜಿಲ್ಲೆಯ ಶಿಗ್ಗಾಂವ ಮತ್ತು ಬಂಕಾಪೂರ ಪ್ರದೇಶ) ಇದರ ನಾಡಗೌಡಿಕೆ ಮತ್ತು ಡಣ್ಣಾಯಕ ಅಧಿಕಾರವು ಬೀರಪ್ಪನೆಂಬಾತನಿಗಿತ್ತು. ಬಚ್ಚಮ್ಮ ಆತನ ಮಡದಿ. ಇವರು ಹಾಲು ಮತದ ಕುರುಬ ಜಾತಿಗೆ ಸೇರಿದವರಾಗಿದ್ದರು. ಆಸ್ತಿ-ಅಂತಸ್ತುಗಳಿಗೇನೂ ಕೊರತೆ ಇರಲಿಲ್ಲ. ಆದರೆ ಆತನಿಗೆ ಸಂತಾನ ಭಾಗ್ಯವೇ ಇರಲಿಲ್ಲ. ಹಲವು ದೇವತೆಗಳಿಗೆ ಹರಕೆ ಹೊತ್ತರೂ ಮಕ್ಕಳಾಗಲಿಲ್ಲ. ಆ ಕಾಲದಲ್ಲಿ ಪ್ರತಿಷ್ಠಿತ ವರ್ಗದವರಿಂದ ಪೂಜೆಗೊಂಡು ಪ್ರಸಿದ್ಧಿ ಹೊಂದಿದ್ದ ತಿರುಪತಿ ತಿಮ್ಮಪ್ಪನತ್ತ ದಂಪತಿಗಳು ವಾಲಿದರು. ವಿಜಯನಗರದ ಅರಸರು ಶ್ರೀ ವೈಷ್ಣವ ಮತವನ್ನು ಮೊದಲೇ ಸ್ವೀಕರಿಸಿದ್ದರು. ಅವರ ಅಧೀನ ಡಣ್ಣಾಯಕನಾಗಿದ್ದ ಬೀರಪ್ಪನ ಮೇಲೂ ಆ ಮತದ ಪ್ರಭಾವವಾಗಿರುವುದು ಸ್ವಾಭಾವಿಕ. ತಿರುಪತಿಗೆ ಹೋಗಿ ತಿಮ್ಮಪ್ಪನ ದರ್ಶನ ಪಡೆದು ತಮ್ಮ ಅಳಲನ್ನು ತೋಡಿಕೊಂಡರು. ತಿಮ್ಮಪ್ಪನ ವರ ಪ್ರಸಾದದಿಂದ ಜನಿಸಿದ ಮಗುವಿಗೆ ತಿಮ್ಮಪ್ಪನೆಂದು ನಾಮಕರಣ ಮಾಡಿದರು. ತಿಮ್ಮಪ್ಪನ ಬೆಳವಣಿಗೆಯಾದಂತೆಲ್ಲ ತಂದೆ ತಾಯಿಗಳ ಆಶೆಗಳು ಅಂಕುರವಡೆದವು. ಬೀರೇಗೌಡನು ಮಗನ ವಿದ್ಯಾಭ್ಯಾಸಕ್ಕೆ ಸಕಲ ಸೌಕರ್ಯಗಳನ್ನು ಒದಗಿಸುವಲ್ಲಿ ಸಫಲನಾದನು. ಕತ್ತಿವರಸೆ, ಕುಸ್ತಿ, ಅಶ್ವವಿದ್ಯೆ, ಬೇಟೆಯಾಡುವ ಇನ್ನು ಮುಂತಾದ ವಿದ್ಯೆಗಳಲ್ಲಿ ಮಗನನ್ನು ಪ್ರವೀಣನನ್ನಾಗಿ ಮಾಡಲು ಪ್ರೋತ್ಸಾಹಿಸಿದನು. ಜೊತೆಗೆ ಓದು, ಬರಹ, ಮತ-ಧರ್ಮ, ಸಾಹಿತ್ಯ-ಸಂಗೀತ, ಶಾಸ್ತ್ರ-ಪುರಾಣ ಇತ್ಯಾದಿಗಳ ಅಭ್ಯಾಸಕ್ಕೂ ವ್ಯವಸ್ಥಿತ ಏರ್ಪಾಡನ್ನು ಮಾಡಿದನು. ಹೀಗೆ ತರಬೇತಿದಾರನಾದ ತಿಮ್ಮಪ್ಪನಿಗೆ ಯುದ್ಧವೆಂದರೆ ಎಲ್ಲಿಲ್ಲದ ಹರುಷ. ಇದಕ್ಕೆ ಸಾಕ್ಷಿಯೆಂಬಂತೆ ತಾವೇ ತಮ್ಮ ಒಂದು ಕೀರ್ತನೆಯಲ್ಲಿ...

ಪರ ಬಲವ ಕಂಡರೆ ಉರಿದು ಬೆಂಕಿಯಹ ಮನವ
ಸೆರೆ ಹಾಕಿ ನಿಲ್ಲಿಸಿದೆ ಹರಿಯೆ
ಕನಕ ದಳದಲಿ ಬಂದು ಕಲೆತನೆಂದರೆ ಫೌಜು
ಕನಕು ಮನಕಾಗುವುದು ಹರಿಯೆ

ಈ ರೀತಿಯಾಗಿ ತಮ್ಮ ಶೌರ್ಯವನ್ನು ಧೀರತನವನ್ನು ಮೇಲಿನ ಕೀರ್ತನೆಯಲ್ಲಿ ಪ್ರಸ್ತಾಪಿಸಿದ್ದಾರೆ. ವಿದ್ಯಾವಂತನಾಗಿ ತಿಮ್ಮಪ್ಪ ಬೆಳೆಯುತ್ತಿರುವಾಗ, ಆಕಸ್ಮಿಕವಾಗಿ ನಡೆದ ಯುದ್ಧದಲ್ಲಿ ತಂದೆ ಬೀರಪ್ಪ ಮರಣವನ್ನಪ್ಪುತ್ತಾನೆ. ತಾಯಿ ಬಚ್ಚಮ್ಮ ಚಿಕ್ಕವಯಸ್ಸಿನ ತಿಮ್ಮಪ್ಪನಿಗೆ ಡಣ್ಣಾಯಕ ಅಧಿಕಾರವನ್ನು ವಹಿಸಿ, ಆಡಳಿತವನ್ನು ಮುಂದುವರಿಸುತ್ತಾಳೆ. ತಿಮ್ಮಪ್ಪನಾಯಕ ಯಾವುದೋ ಕಾರಣಕ್ಕೆ ಭೂಮಿಯನ್ನು ಅಗೆಯಿಸುತ್ತಿರುವಾಗ ಅಪಾರ ನಿಧಿ ದೊರೆಯುತ್ತದೆ. ಅದನ್ನು ತನ್ನ ವಿಲಾಸಿ ಜೀವನಕ್ಕೆ ಬಳಸಿಕೊಳ್ಳದೆ ದೀನ-ದಲಿತರಿಗೆ ದಾನ ಧರ್ಮ ಮಾಡಿ, ಮಿಕ್ಕಿದ್ದರಲ್ಲಿ ಜನಹಿತಕ್ಕಾಗಿ ಕೆರೆ ಕಟ್ಟೆಗಳನ್ನು ಕಟ್ಟಿಸುವುದರ ಮೂಲಕ ಜನರ ಪ್ರೀತಿಗೆ ಪಾತ್ರನಾಗುತ್ತಾನೆ. ಅಂದಿನಿಂದ ಪ್ರಜೆಗಳು ಅವನನ್ನು ‘ಕನಕನಾಯಕ’ ಎಂದು ಕರೆಯುತ್ತಾರೆ. ಕನಕನಾಯಕನಿಗೆ ವಿವಾಹವಾಗಿ ಸಂತಾನ ಭಾಗ್ಯವೂ ಆಗಿತ್ತು ಎನ್ನುವುದಕ್ಕೆ ಹರಿಭಕ್ತಿಸಾರದ ಒಂದು ಪದ್ಯ ಪುಷ್ಟಿಯನ್ನು ಕೊಡುತ್ತದೆ.

ಒಡೆಯ ನೀನೆಂದರಿತು ನಾ ನಿ
ನ್ನಡಿಯ ಭಜಿಸದೆ ದುರಳನಾದೆನು
ಮಡದಿ ಮಕ್ಕಳ ಮೋಹದಲಿ ಮನ ಸಿಲುಕುತಡಿಗಡಿಗೆ
ಮಡದಿ ಯಾರೀ ಮಕ್ಕಳ್ಯಾರೀ
ಒಡಲಿಗೊಡೆಯನು ನೀನು ನೀ ಕೈ
ವಿಡಿದು ಮುದದಲಿ ಬಿಡದೆ ರಕ್ಷಿಸು ನಮ್ಮನನವರತ

ಆದರೆ ಮಗು ಬಹುಕಾಲದವರೆಗೆ ಬದುಕಿರಲಿಲ್ಲ. ಹೆಂಡತಿ ಬಹುಕಾಲದವರೆಗೆ ಜೀವಿಸಿದ್ದಳು. ಅವಳೇ ‘ಸುಜ್ಞಾನವಧೂಟಿ’. ಕನಕದಾಸರೇ ಮೋಹನ ತರಂಗಿಣಿಯಲ್ಲಿ...

ಕೃತಿವೇಳ್ದ ಕನಕ ದಾಸೋತ್ತಮ ಕೇಳ್ದವ
ಳತಿ ಸುಜ್ಞಾನವಧೂಟಿ

ಎಂದು ತಮ್ಮ ಕಾವ್ಯದಲ್ಲಿ ಹೇಳಿಕೊಂಡಿದ್ದಾರೆ. ಕಾವ್ಯವನ್ನು ಮಡದಿಗೆ ಹೇಳುವುದು ನಮ್ಮ ಕನ್ನಡ ಸಾಹಿತ್ಯದಲ್ಲಿ ಹೊಸದೇನಲ್ಲ. ಕನಕದಾಸರ ಪೂರ್ವದ ನಾಗವರ್ಮ ಹಾಗೂ ಅವರ ತರುವಾಯದ ಮುದ್ದಣನನ್ನು ನೆನೆಯಬಹುದು. ನಾಗವರ್ಮ, ಮುದ್ದಣರು ತಮ್ಮ ಸಹಧರ್ಮಿಣಿಯರ ರೂಪ-ಲಾವಣ್ಯ ಅವಳೊಂದಿಗಿನ ಸರಸ-ಸಲ್ಲಾಪದ ಮಾತುಗಳನ್ನು ಕಾವ್ಯದೊಂದಿಗೆ ವರ್ಣಿಸಿದ್ದಾರೆ. ಈ ಮಾತಿಗೆ ಕನಕದಾಸರೂ ಕೂಡ ಹೊರತಾಗಿಲ್ಲ.

ಕಕ್ಕಸ ಕುಚದ ಕಾಮಿನಿಯರ ಕಂಡು
ಕಣ್ಣಿಕ್ಕದಂತೆನ್ನ ಚಿತ್ತವನು
ಅಕ್ಕೊತ್ತೆಗೊಂಡ ಭಾಮಿನಿರನ್ನೆ ಲಾಲಿಸು
ಸಕ್ಕರೆಯಂತ ಮಾತುಗಳ

ಎಂಬ ಪದ್ಯದಲ್ಲಿ ತಮ್ಮ ಮಡದಿಯ ರೂಪವನ್ನು ಚಿತ್ರಿಸಿದರೆ, ಮುಂದಿನ ಪದ್ಯಗಳಲ್ಲಿ ಅವಳ ಗುಣಗಾನವನ್ನು ಮಾಡಿದ್ದಾರೆ.

ಅಪಾರ ಗುಣಪೂರಿತೆ ಸತ್ಕಮನೀಯ
ರೂಪಸ್ಥೆ ಲಾಲಿಸು ನಿನ್ನ

ಹಾಗೂ

ಜತೆಯಗಲದೆ ನಿನ್ನಂತೆ ಕೇಳುವ ಗುಣಾ
ನ್ವಿತೆಯರ ತೋರಾಯತಾಕ್ಷಿ

ಎಂದು ಅವಳ ಮೇಲೆ ತಮಗಿದ್ದ ಪ್ರೇಮದ ಅಭಿಮಾನವನ್ನು ಕಾವ್ಯದ ಮೂಲಕ ಅಭಿವ್ಯಕ್ತಿಸಿದ್ದಾರೆ. ಕನಕನಾಯಕನಿಗೆ ಮಗನಿದ್ದನೆಂಬುದು ಲೋಕವಾರ್ತೆ. ಮದುವೆಯಾದ ಕೆಲವು ದಿನಗಳ ತರುವಾಯ ತಾಯಿಯ, ಮಗನ ಮರಣದ ನಂತರ ಸಂಸಾರದ ವ್ಯಾಮೋಹವನ್ನು ಕಳೆದುಕೊಂಡಂತೆ ತೋರುತ್ತದೆ.

ಕೆಂಚೆ ನೀ ಕೇಳು ಕೇವಲ ಜಾಣೆ ರಹಿತ ಪ್ರ
ಪಂಚೆ ಮತ್ಕೃತಿ ರಸವಱತ
ಬೆಂಚೆಯೆಂದೆನಬೇಡ ಶೃಂಗಾರ ರಸಪೂರ್ಣ
ವಂಚೆ ನಡೆಯಳೆ ಮಿಶ್ರಮಿಸು

ಕನಕದಾಸರೊಂದಿಗೆ ಅವರ ಮಡದಿ ಬಹುಕಾಲ ಜೀವಿಸಿದ್ದಳು. ಆದರೆ ಅವಳು ಪ್ರಾಪಂಚಿಕ ಬದುಕಿಗೆ ವಿಮುಖಳಾಗಿದ್ದಳು ಎನ್ನುವ ಮಾತು ಗಮನಾರ್ಹ.

ಕನಕನಾಯಕನು ಮೇಲಿಂದ ಮೇಲೆ ಹಲವು ಆಘಾತಗಳಲ್ಲಿ ತಲ್ಲಣಗೊಂಡು ಅಧಿಕಾರ ನಡೆಸುತ್ತಿರುವಾಗಲೇ ಮತ್ತೆ ಯುದ್ಧ ಮಾಡುವ ಸಂದರ್ಭ ಒದಗಿಬರುತ್ತದೆ. ಇದು ಯಾವ ಯುದ್ಧದ ಪ್ರಸಂಗವೆಂದು ನಿಖರವಾಗಿ ಹೇಳಲು ಇಲ್ಲಿಯವರೆಗೆ ಲಿಖಿತ ಆಧಾರಗಳು ದೊರೆತಿಲ್ಲ, ಲೋಕವಾರ್ತೆ ಮಾತ್ರ ಸಾಕ್ಷಿ. ವೈರಿ ಪಡೆಯವರು ಕನಕನಾಯಕನನ್ನು ಹೊಡೆದಾಗ ಪ್ರಜ್ಞೆತಪ್ಪಿ ರಕ್ತದ ಮಡುವಿನಲ್ಲಿ ಬಿದ್ದಿರಲು, ಅಗೋಚರ ಶಕ್ತಿ ಪ್ರಸನ್ನವಾದಂತಾಗಿ ಕನಕನಾಯಕನಿಗೆ ಆರೈಕೆಯನ್ನು ಮಾಡಿ, ಕನಕಾ ನನ್ನ ದಾಸನಾಗು ಎಂದು ಆಕಾಶವಾಣಿ ಆದಂತಾಯಿತಂತೆ. ಅದನ್ನೇ ಕನಕದಾಸರು ತಮ್ಮ ಕೀರ್ತನೆಯಲ್ಲಿ...

ರಣದೊಳಗೆ ಅಂಗಾಂಗ ಖಂಡ ತುಂಡಾಗಿ ಪ್ರತಿ
ರಣವನುತ್ತರಿಸಿ ಮರಣವ ತಾಳಿರೆ
ಪ್ರಣವ ಗೋಚರ ನೀನು ಗೋಚರಿಸಿ ಬಂದೆನ್ನ
ಹೆಣಕೆ ಪ್ರಾಣವ ಪ್ರಯೋಗಿಸಿದಂತರಾತ್ಮ

ಎಂದು ಹೇಳಿಕೊಂಡಿದ್ದಾರೆ. ಹೆಣಕ್ಕೆ ಪ್ರಾಣವನಿತ್ತ ಶಕ್ತಿ ಅದು ಬೇರೆ ಯಾರೂ ಅಲ್ಲ, ಸಾಕ್ಷಾತ್ ಶ್ರೀ ಹರಿಯೇ ಪ್ರತ್ಯಕ್ಷನಾದನೆಂದು, ಸಂಸಾರದ ಹಂಗು ತೊರೆದು, ಡಣ್ಣಾಯಕ ಪದವಿ ಬಿಟ್ಟು ಕನಕನಾಯಕ ಹೋಗಿ ಕನಕದಾಸರಾದರು. ಯುದ್ಧದ ಸಂದರ್ಭದಲ್ಲಿ ಸಾಮ್ರಾಟ ಅಶೋಕನ ಮೇಲೆ ಯಾವ ರೀತಿ ಸಾವು-ನೋವುಗಳು ಪರಿಣಾಮ ಬೀರಿದವೋ ಹಾಗೆಯೇ ಕನಕನಾಯಕನ ಮೇಲೂ ಆ ನೋವಿನ ಪರಿಣಾಮವಾಗಿರಬೇಕು. ಕನಕದಾಸರು ದಾಸರಾದ ಕಾಲ ಯಾವುದು? ಅವರು ದಾಸ ದೀಕ್ಷೆಯನ್ನು ಯಾರಿಂದ ಪಡೆದರು? ಅವರಿಗೆ ಯಾವ ಗುರುಗಳು ಅಂಕಿತನಾಮವನ್ನು ದಯಪಾಲಿಸಿದರು? ಎಂಬ ಪ್ರಶ್ನೆಗಳಿಗೆ ಉತ್ತರ ನಿಗೂಢವಾಗಿದೆ. ಹಲವು ದಾಸರಿಗೆ ದೀಕ್ಷೆಯನ್ನು ಕೊಟ್ಟ ವ್ಯಾಸರಾಯರೇ ಕನಕದಾಸರಿಗೂ ಗುರುಗಳೆಂದು ಹಲವರು ವಾದಿಸಿದ್ದಾರೆ. ಗುರುಗಳಿಂದ ದೀಕ್ಷೆ ಪಡೆದ ದಾಸರೆಲ್ಲರು ಗುರು ಹೇಳಿದ ಅಂಕಿತನಾಮವನ್ನೇ ಬಳಸಿದ್ದಾರೆ. ಉದಾ: ಶ್ರೀ ವ್ಯಾಸರಾಯರಿಂದ ಅಂಕಿತನಾಮವನ್ನು ಪಡೆದ ಪುರಂದರದಾಸರು ‘ಪುರಂದರ ವಿಠಲ’ನೆಂದೇ ತಮ್ಮ ಕೀರ್ತನೆಗಳಲ್ಲಿ ಬಳಸಿದ್ದಾರೆ.

ಕನಕದಾಸರು ಈ ಮಾತಿಗೆ ಹೊರತಾಗಿದ್ದಾರೆ. ಅವರು ಕಾಗಿನೆಲೆ ಆದಿಕೇಶವ, ಬಾಡದಾದಿಕೇಶವ, ಆದಿಕೇಶವರಾಯನೆಂದು ಹಲವು ಬಗೆಯಾಗಿ ಅಂಕಿತನಾಮವನ್ನು ಬಳಸಿದ್ದಾರೆ. ತೀರ್ಥಯಾತ್ರೆಗೆ ಹೋದ ಸ್ಥಳಗಳನ್ನು ಸಮೀಕರಿಸಿದ್ದಾರೆ. ದಾಸ ಸಾಹಿತ್ಯದಲ್ಲಿ ಬರುವ ಪ್ರಮುಖ ದಾಸರು ಶ್ರೀಪಾದರಾಯರು: ರಂಗವಿಠಲ, ಪುರಂದರದಾಸರು ಪುರಂದರ ವಿಠಲ, ವಿಜಯದಾಸರು ವಿಜಯವಿಠಲ, ಗೋಪಾಲ ದಾಸರು ಗೋಪಾಲ ವಿಠಲ, ಜಗನ್ನಾಥದಾಸರು ಜಗನ್ನಾಥ ವಿಠಲನೆಂದು ಬಳಸಿದ್ದಾರೆ. ಇಲ್ಲಿ ‘ವಿಠಲ’ನೆಂಬ ಶಬ್ದ ಬಂದಿದೆ. ಆದರೆ ಕನಕದಾಸರ ಅಂಕಿತದಲ್ಲಿಯ ‘ಕೇಶವ’ನೆಂಬ ಶಬ್ದವು ವಿಶಿಷ್ಟವಾಗಿದೆ. ಕನಕದಾಸರು ತಮ್ಮ ಮೋಹನ ತರಂಗಿಣಿಯಲ್ಲಿ...

ಶ್ರೀ ಮದ್ಗುರುರಾಯ ದುರಿತ ವಿಜೇಯ ದು
ಷ್ಕಾಮ ವಿಚ್ಛೇದನಾಹ್ಲಾದ
ತಾಮಸಗುಣನಾಶ ಸಾತ್ವಿಕೋಲ್ಲಾಸ ಶ್ರೀ
ರಾಮಾನುಜ ಮುನಿ ಶರಣ


ಈ ಪದ್ಯದಲ್ಲಿ ರಾಮಾನುಜ ಮುನಿಗೆ ಶರಣು ಮಾಡಿದ್ದಾರೆ.

ಈ ರೀತಿಯ ಪೆಂಪುವಡೆದ ಸದ್ಗುರುಕರ
ವಾರಿಜೋದ್ಭವ ಶಿಷ್ಯ ಜನರ
ಪ್ರೇರಿಸಿ ಚತುರ್ವಿಧ ಫಲವೀವ ತಾತಾ
ಚಾರಿಯರಡಿಗೆ ಱಗುವೆನು

ಈ ಪದ್ಯದಲ್ಲಿ ರಾಮಾನುಜಾಚಾರ್ಯ ಪರಂಪರೆಯ ತಿರುಮಲೈ ತಾತಾಚಾರಿಯವರ ಅಡಿಗೆರಗುತ್ತಾರೆ. ಕೀರ್ತನೆಯಲ್ಲಿಯೂ ಸಹ “ರಾಮಾನುಜರೇ ನಮೋ ನಮೋ’’ “ನೃಸಿಂಹಸ್ತವ’’ ಕೃತಿಯಲ್ಲಿಯೂ ಪ್ರಾರಂಭದ ಪದ್ಯಗಳಲ್ಲಿ ರಾಮಾನುಜರನ್ನು ಸ್ತುತಿಸಿರುವುದಾಗಿ ವಿದ್ವಾಂಸರ ಅಭಿಪ್ರಾಯವಿದೆ. ಒಂದು ಕೀರ್ತನೆಯಲ್ಲಿ ಮಾತ್ರ “ಪ್ರಸಿದ್ಧ ವ್ಯಾಸರಾಯರೆಂಬ ಕೂಸು ’’ ಎಂದು ವಿಶಿಷ್ಟವಾಗಿ ಸ್ತುತಿಸಿದ್ದಾರೆ. ಕನಕದಾಸರು ಶ್ರೀವೈಷ್ಣವ ಹಾಗೂ ಮಾಧ್ವಮತದ ಗುರುಗಳನ್ನು ಸ್ತುತಿಸಿದ್ದಾರೆ. ಹೀಗೆ ಇಬ್ಬರನ್ನೂ ಸ್ತುತಿಸಲು ಕಾರಣಗಳೇನು? ಮತ್ತು ತೀರ್ಥಕ್ಷೇತ್ರಕ್ಕೆ ಹೋದ ಕಡೆಗಳಲ್ಲಿ ಅಲ್ಲಿಯ ದೇವತೆಗಳ ಅಂಕಿತ ನಾಮಗಳನ್ನು ಯಾಕೆ ಬಳಸಿದರು ಎಂಬ ಪ್ರಶ್ನೆಗಳಿಗೆ ಉತ್ತರವಾಗಿ, ಅವರು ಯಾರಿಂದಲೂ ದೀಕ್ಷೆಯನ್ನು ಪಡೆದುಕೊಂಡಿಲ್ಲವೆಂದು ಹೇಳಬಹುದು. ಆದ್ದರಿಂದ ಕನಕದಾಸರು ಯಾವುದೇ ಒಂದು ಮತಕ್ಕೆ ಸೀಮಿತರಾಗದೆ; ಶೈವ, ಶ್ರೀವೈಷ್ಣವ ಹಾಗೂ ಮಾಧ್ವ ಮತಗಳಲ್ಲಿಯ ಉತ್ತಮ ವಿಚಾರಗಳಿಗೆ ಪ್ರಭಾವಿತರಾಗಿ ಭಾಗವತರಾದರೆಂದು ಹೇಳಬೇಕು. ರಾಮಾನುಜೀಯರಾಗಿದ್ದ ತಾತಾಚಾರಿಯವರ ಹಾಗೂ ಮಾಧ್ವರಾಗಿದ್ದ ವ್ಯಾಸರಾಯರ ಪ್ರಭಾವಕ್ಕೊಳಗಾಗಿ ಹರಿದಾಸರಾದರೆಂದು ಸಂದೇಹವಿಲ್ಲದೆ ಹೇಳಬಹುದು. ಈ ಕಾರಣದಿಂದಲೇ ಸಂತ ಶ್ರೀ ಕನಕದಾಸರು ಭೇದ-ಭಾವ ಮಾಡದೆ ಇಡೀ ಮಾನವ ಕುಲದ ಒಳಿತನ್ನು ಬಯಸಿದ್ದಾರೆ. ವಿಶ್ವಮಾನವ, ಸಮಾಜ ಸುಧಾರಕ ಮತ್ತು ಹರಿದಾಸ ಶ್ರೇಷ್ಠರಾಗಿ ಪ್ರಖ್ಯಾತಗೊಂಡಿದ್ದಾರೆ.

ಕನಕದಾಸರ ಮತ

ಕನಕದಾಸರು ಬೇಡ, ಕಬ್ಬಲಿಗ ಜನಾಂಗದವರೆಂಬುದಕ್ಕೆ ಯಾವುದೇ ದಾಖಲೆ ಮತ್ತು ಸಾಕ್ಷಾಧಾರಗಳಿಲ್ಲದೆ ವಾದವನ್ನು ಸೃಷ್ಟಿಸಿರುವುದು ನ್ಯಾಯಸಮ್ಮತವಾದುದಲ್ಲ. ಕನಕದಾಸರ ಸಾಹಿತ್ಯ ಮತ್ತು ಅವರ ಕೀರ್ತನೆಗಳನ್ನು ಅವಲೋಕಿಸಿದಾಗ ಕುರುಬ ಜನಾಂಗಕ್ಕೆ ಸೇರಿದವರೆಂದು ವಿದಿತವಾಗುತ್ತದೆ. ಕನಕದಾಸರ ತಂದೆ ಬೀರಪ್ಪನೆಂಬುದನ್ನು ಒಪ್ಪುತ್ತಾರೆ. ವ್ಯಾಸರಾಯರ “ಕುರುಬಗೇಕೋ ಕೋಣ ಮಂತ್ರ’’ ಎಂಬ ಹೇಳಿಕೆಯನ್ನು ಒಪ್ಪುತ್ತಾರೆ. ಮತ್ತೆ ಕನಕದಾಸರ ಮತದಲ್ಲಿ ಭಿನ್ನತೆಯನ್ನು ಹುಟ್ಟಿಸುವುದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ಯೋಚಿಸಬೇಕಾಗಿದೆ.

ಕನಕದಾಸರು ತಮ್ಮ ಸಾಹಿತ್ಯದಲ್ಲಿ ತಮ್ಮ ಜೀವನಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಬಿಂಬಿಸಿದ್ದಾರೆ. ಅವರ ಸಾಹಿತ್ಯದ ಈ ಸಾಲುಗಳನ್ನು ಪರಿಶೀಲಿಸಬಹುದು.

ನಾವು ಕುರುಬರು ನಮ್ಮ ದೇವರು ಬೀರಯ್ಯ
ಕಾವ ನಮ್ಮಜ್ಜ ನರಕುರಿಯ ಹಿಂಡುಗಳ ಪ
ಕಲಿಯುಗಕೆ ಗೌಡನಿವ ಸಂಗಾತಿ ಮಂತ್ರಿಸುತ
ಕಲಿಯುಗಂಗಳನ್ನೆಲ್ಲ ಪೊರೆವಾತ ನೀತ
ಜಲಜಾಕ್ಷ ಕಾಗಿಲೆಯಾದಿಕೇಶವನ ಮನ
ವೋಲಿಸಿ ಭಜಿಸದ ಮನುಜ ಹುಚ್ಚು ಕುರುಬ

ಇಲ್ಲಿ ಕುರಿಕಾಯುವವನ ಜೀವನ ವೃತ್ತಾಂತವನ್ನು ಚಿತ್ರಿಸಿದ್ದಾರೆ. ಮೇಲಾಗಿ ನಾವು ಕುರುಬರು. ತಮ್ಮ ಕುಲದೈವ ಬೀರಪ್ಪನೆಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಕಡೆಯಲ್ಲಿ “ಭಜಿಸದ ಮನುಜ ಹುಚ್ಚು ಕುರುಬ’’ ಎಂಬ ಮಾತು ಆಗಿನ ಪರಿಸ್ಥಿತಿಗನುಗುಣವಾಗಿ ಹೇಳಿದಂತಿದೆ.

ದಾಸದಾಸರ ಮನೆಯ ದಾಸಿಯರ ಮಗ ನಾನು
ಸಾಸಿರ ನಾಮದೊಡೆಯ ರಂಗಯ್ಯನ ಮನೆಯ ಪ
ಹಲವು ದಾಸರ ಮನೆಯ ಹೊಲೆಯ ದಾಸನು ನಾನು
ಕುಲವಿಲ್ಲದ ದಾಸ ಕುರುಬದಾಸ

ಎಂದು ಹೇಳಿಕೊಂಡಿದ್ದಾರೆ. ಇದೇ ಕೀರ್ತನೆಯಲ್ಲಿ ಶಂಕುದಾಸ, ಮಂಕುದಾಸ, ಮರುಳದಾಸ, ಆಳುದಾಸ, ಕೀಳುದಾಸ, ಮೂಳದಾಸ, ಅಡಿದಾಸ ಎಂದು ಸಂಬೋಧಿಸಿಕೊಂಡಿದ್ದಾರೆ. ಆದರೆ “ಕಾಳಿದಾಸರ ಮನೆಯ ಕೀಳುದಾಸನು ನಾನು’’ ಹಾಗೂ “ಕುಲವಿಲ್ಲದ ದಾಸ ಕುರುಬದಾಸ’’ ಎಂಬ ಸಾಲುಗಳು ಗಮನಾರ್ಹವಾಗಿವೆ.

ದ್ಯಾವಿ ನಮ್ಮ ದ್ಯಾವರು ಬಂದರು ಬನ್ನಿರೆ,
ನೋಡ ಬನ್ನಿರೆ

ಎಂಬ ದಾಟಿಯು ಕುರುಬರ ಸಂಪ್ರದಾಯದ ಡೊಳ್ಳಿನ ಗತ್ತು. ಈ ಕೀರ್ತನೆಯ ತುಂಬೆಲ್ಲ ಬೀರಪ್ಪನನ್ನು ರಂಗಯ್ಯನಲ್ಲಿ ಕಂಡಂತೆ ಭಾಸವಾಗುತ್ತದೆ. ಅವರ ಉಡುಪು ಕೂಡ ಕುರುಬರೆಂದು ಹೇಳುತ್ತದೆ. ಕಂಬಳಿ ನೇಯುವ ಮತ್ತು ಧರಿಸುವ ಪ್ರಕ್ರಿಯೆ ವಿಶೇಷ. ಕನಕದಾಸರನ್ನು ಬಿಟ್ಟರೆ ಕುರುಬ ಶಬ್ದವನ್ನು ಯಾವ ದಾಸರೂ ಬಳಸಿಲ್ಲ. ಆ ಶಬ್ದವನ್ನೇ ದ್ವೇಷಿಸಿದಂತಿದೆ. ಒಂದು ವೇಳೆ ತಪ್ಪಿ ಬಳಸಿದರೂ ನಾನು, ನಾವು ಕುರುಬರು ಎಂದು ಬಳಸಿಲ್ಲ. ಕಾರಣ ಅವರು ಕುರುಬರಲ್ಲ. ಈ ಮೇಲಿನ ಆಧಾರಗಳಿಂದ ಕನಕದಾಸರು ಕುರುಬ ಜನಾಂಗಕ್ಕೆ ಸೇರಿದವರೆಂದು ದೃಢವಾದ ಮೇಲೂ ವಾದಕ್ಕಿಳಿದರೆ ಈ ಕೆಳಗಿನ ಆಧಾರವನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

ಯಮನು ಮುನ್ನೆ ಮಾಂಡವ್ಯಶಾಪದಿಂದೆರಡು ಜ
ನುಮ ಶೂದ್ರ ಯೋನಿಯೊಳಗೆ ಪುಟ್ಟಿದನು. ಮೊದಲ ಜ
ನುಮ ವಿದುರನಾಗಿ, ಬಳಿಕ ಕುರುಬರ ಕುಲದಲಿ ಜನಿಸಿದೇನಗೀಜ
ನುಮದಲಿ ಮುಕ್ತಿ ಎಂತು ಎಂಬೆ

ಈ ಮಾತನ್ನಂತೂ ಎಂದೂ ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಅದು ಅವರಿಗೆ ಸಾಧುವು ಅಲ್ಲ. ಏಕೆಂದರೆ ಈ ಮಾತಿನಿಂದ ಕನಕದಾಸರು “ಕುರುಬ ಜನಾಂಗ’’ಕ್ಕೆ ಸೇರಿದವರೆಂದು ಸ್ಪಷ್ಟವಾಗಿ ಹೇಳಬಹುದು.

ಒಬ್ಬ ಮಹಾತ್ಮನನ್ನು ಒಂದು ಜಾತಿಯಿಂದ ಗುರುತಿಸುವ ಪದ್ಧತಿ ತೊಲಗಬೇಕು. ಇಲ್ಲದಿದ್ದರೆ ಆ ಮಹಾತ್ಮರ ಧೀಮಂತಿಕೆಗೆ ಕುಂದುಂಟು ಮಾಡಿದಂತಾಗುತ್ತದೆ. ಅವರನ್ನು ಜಾತಿಯ ಬಲೆಯಿಂದ ಬಿಡಿಸಿ ವಿಶ್ವಮಾನವದತ್ತ ಒಯ್ಯಬೇಕು. ಎಲ್ಲ ವ್ಯಕ್ತಿಗಳೂ ಅವರನ್ನು ಗೌರವಿಸುವಂತಾಗಬೇಕು. ಹೀಗೆ ಮಾಡಿದಲ್ಲಿ ಮಾತ್ರ ಸಂತ ಶ್ರೀ ಕನಕದಾಸರಂತಹ ಮಹಾತ್ಮರಿಗೆ ವಿಶ್ವಮಾನ್ಯ ಸ್ಥಾನ ಲಭಿಸಿದಂತಾಗುತ್ತದೆ.

ಕನಕದಾಸರ ಕಾಲ
ಅನೇಕ ವಿದ್ವಾಂಸರು ಕನಕದಾಸರ ಕಾಲ ನಿರ್ಣಯ ಕುರಿತು ಪ್ರಯಾಸ ಪಟ್ಟಿದ್ದಾರೆ. ಆದರೆ ಯಾವುದು ನಿಖರವೆಂದು ಹೇಳಲು ಸಾಧ್ಯವಾಗಿಲ್ಲ. ಕಾರಣ ಹಲವು ಭಿನ್ನಾಭಿಪ್ರಾಯಗಳಿವೆ. ಆದರೂ ಅವರ ಸಾಹಿತ್ಯದಲ್ಲಿ ಮೂಡಿಬಂದ ಸಮಕಾಲೀನ ಜನಜೀವನ ಚಿತ್ರ, ಪೂರ್ವದ ಕವಿಗಳನ್ನು ಅವರು ಸ್ಮರಿಸಿರುವುದರಿಂದ ಹಾಗೂ ನಂತರದ ಕವಿಗಳು ಕನಕದಾಸರನ್ನು ಸ್ಮರಿಸಿರುವುದರಿಂದ ಅವರ ಕಾಲವನ್ನು ನಿರ್ಣಯಿಸಲು ಸಾಧ್ಯವಾಗುತ್ತದೆ.

ಉರಗಾಲಯವೆ ಪೆಸರ್ವಡೆದನ ಮತ್ಸೋ
ದರ ಜಾತೆಯಾತ್ಮ ಸಂಭವನ
ವರ ಪುರಾಣಂಗಳ ಕನ್ನಡಿಸಿದ ಕವೀ
ಶ್ವರರ ಕೊಂಡಾಡುವೆ ಮುದದಿ

ಮೇಲಿನ ‘ಮೋಹನ ತರಂಗಿಣಿ’ ಕೃತಿಯ ಪದ್ಯದಲ್ಲಿ ಕನಕದಾಸರೇ ಉಲ್ಲೇಖಿಸಿರುವಂತೆ ಗದುಗಿನ ಭಾರತವನ್ನು ಬರೆದ ಕುಮಾರವ್ಯಾಸನನ್ನು, ತೊರವೆ ರಾಮಾಯಣವನ್ನು ಬರೆದ ಕುಮಾರ ವಾಲ್ಮೀಕಿಯನ್ನು ಸ್ಮರಿಸಿರುವುದರಿಂದ ಅವರೀರ್ವರಿಗಿಂತ ಕನಕದಾಸರು ಈಚಿನವರಾಗಿದ್ದಂತೂ ಖಚಿತ. ೧೭ನೇ ಶತಮಾನದ ಕಾಖಂಡಕಿ ಮಹಿಪತಿರಾಯರ ಮಗನಾದ ಕಾಖಂಡಕಿ ಕೃಷ್ಣರಾಯರು ಹರಿದಾಸ ಪರಂಪರೆಯನ್ನು ಸ್ಮರಿಸುತ್ತ “ನೆರೆ ತಾಲಪಾಕರ ಸಂತಮತಿ ಕನಕರ ಹರಿಭಕ್ತಿ ಉಲ್ಲಾಸಕರ’’ ಎಂದು ತೆಲುಗಿನ ಅನ್ನಮಾಚಾರ್ಯರನ್ನು ಕನ್ನಡದ ಕನಕದಾಸರನ್ನೂ ಜೊತೆಯಲ್ಲಿ ನೆನೆದಿರುವುದರಿಂದ ಆ ಕಾಲಕ್ಕಿಂತ ಹಿಂದಿನವರು ಎಂಬುದು ಸ್ಪಷ್ಟವಾಗುತ್ತದೆ.

ಕನಕದಾಸರು ಯುದ್ಧ ವರ್ಣನೆಯನ್ನು ಮಾಡುತ್ತ

ರಾಜರು ರಕ್ಕಸು ಮಾಂತರು ಲಾಳಿಬಿ
ಲ್ಲೊಜರು ಪೆಟಲಂಬಿನವರು
ತೇಜೋಮಯ ಬಾಣಗಾರರು ತುಖಗ
ರಾಜನೆರಂಕೆಯಿಕ್ಕೆಲದಿ

ಪೆಟಲಂಬಿನವರು (ತುಬಾಕಿಯವರು) ಎಂಬ ಶಬ್ದ ಪ್ರಯೋಗ ಮಾಡಿದ್ದಾರೆ. ಪೆಟಲಂಬುಗಳ ಬಳಕೆಯಾದದ್ದು ೧೫೨೦ರಲ್ಲಿ ಜರುಗಿದ ರಾಯಚೂರು ಯುದ್ಧದಲ್ಲಿ. ಆ ಕಾಲದಲ್ಲಿ ಕನಕದಾಸರು ಜೀವಿಸಿದ್ದರೆಂದು ವೇದ್ಯವಾಗುತ್ತದೆ.

ಶ್ರೀಕೃಷ್ಣದೇವರಾಯ ೧೫೦೯ರಿಂದ ೧೫೨೯ರವರೆಗೆ ಆಳಿದ ದ್ವಾರಕೆಯ ಶ್ರೀಕೃಷ್ಣನೊಂದಿಗೆ ವಿಜಯನಗರದ ಶ್ರೀಕೃಷ್ಣದೇವರಾಯನನ್ನು ಸಮೀಕರಿಸಿ ಮೋಹನ ತರಂಗಿಣಿ ಎಂಬ ಕೃತಿ ಬರೆದಿದ್ದಾರೆ. ಅಲ್ಲದೆ ವಿಜಯನಗರದ ಜನಜೀವನವನ್ನು ತಮ್ಮ ಕಾವ್ಯದಲ್ಲಿ ಚಿತ್ರಿಸಿದ್ದಾರೆ. ಆದ್ದರಿಂದ ಕನಕದಾಸರು ಶ್ರೀಕೃಷ್ಣದೇವರಾಯನ ಕಾಲದಲ್ಲಿದ್ದರೆಂಬುದು ನಿಸ್ಸಂಶಯ.

ಏಕೆ ನಡುಗಿದೆ ತಾಯೆ ಭೂಮಿ ನಡುರಾತ್ರಿಯೊಳು- ಜಗ
ದೇಕ ಪೊಡವಿಗೊಡೆಯನ ರಾಣಿ ಪರಮ ಕಲ್ಯಾಣಿ

ಎಂಬ ಕೀರ್ತನೆಯನ್ನು ಹಾಡಿದ್ದಾರೆ. ಕನಕದಾಸರ ಜೀವಿತಾವಧಿಗೆ ಸರಿಹೊಂದುವ ಒಂದು ಶಾಸನವು ಭೂಕಂಪನವನ್ನು ಕುರಿತು ಹೇಳುತ್ತದೆ. ಆದ್ದರಿಂದ ಅದು ಭೀಕರವಾದ ಭೂಕಂಪನವೇ ಆಗಿರಬೇಕು. ಬೆಂಗಳೂರು ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಸೋಮಪುರ ಹೋಬಳಿಯ ಬಿಲ್ಲನಕೋಟೆ ಎಂಬ ಗ್ರಾಮದ ಬಂಡೆಯ ಮೇಲೆ ಕಲಿ ವರುಷ ೪೬೦೮ನೇ ಪ್ರಭವ ಸಂವತ್ಸರದ ಶ್ರಾವನ ಸುದ ೬ ಗುಲು ಭೂಮಿ ನಡುಗಿತು, ವಾರಳಲೂ ಬಿಲ್ಲನ ಕೊಡೆಯ (ಕೋಟೆಯ) ಖಬಿನಗೆಲಸಿ (ಕಬ್ಬಿಣದ ಕೆಲಸಗಾರ) ವೀರಯ್ಯನ ಮಗ ದೊಡ ವೀರೈಯ ಹೊಯಿದ ಸೇಸನ ಎಂಬ ಶಾಸನವಿದೆ. ಇದರ ಕಾಲ ೧೫-೧೭-೧೫೦೭. ಗುರುವಾರಕ್ಕೆ ಸರಿ ಹೊಂದುತ್ತದೆ. ಅನಿರುದ್ಧನ ಜನನವನ್ನು ತಿಳಿಸುವ ಮೋಹನ ತರಂಗಿಣಿಯ ಈ ಪದ್ಯ.

ಆನಂದ ಸವಂತ್ಸರ ಮಾಘಶುದ್ಧನ
ವೀನ ಪಂಚಮಿ ರವಿವಾರ
ಭಾನುವುದಯದ ಸ್ವಾತಿಯ ನಕ್ಷತ್ರದೆ
ತಾನುದಿಸಿದ ಗಂಡು ಮಗನು

ಇದು ೧೫-೨-೧೪೬೫ ಭಾನುವಾರ ಸಮದೂಗುತ್ತದೆ. ಅನಿರುದ್ಧನ ಜನನದ ಕಾಲಕ್ಕೆ ಕನಕದಾಸರು ತಮ್ಮ ಜನನ ಕಾಲವನ್ನು ಸಮನಾಗಿಸಿದ್ದಾರೆ. ಆದ್ದರಿಂದ ಕನಕದಾಸರ ಜನನದ ಕಾಲ ೧೫-೦೨-೧೪೬೫. ಪುರಂದರದಾಸರ ಕಾಲ ೧೪೮೪-೧೫೬೪ ಎಂದಾಗಿದೆ. ಪುರಂದರದಾಸರು ಕಾಲವಾದ ಮೇಲೆ ಕನಕದಾಸರು ಬಾಳಿದ್ದರು ಎಂಬ ಐತಿಹ್ಯವಿದೆ. ಒಟ್ಟಾರೆ ಕನಕದಾಸರು ೯೮ ವರ್ಷಗಳ ಕಾಲ ಬದುಕಿದ್ದರೆಂಬಲ್ಲಿ ವಿದ್ವಾಂಸರಲ್ಲಿ ಏಕಾಭಿಪ್ರಾಯವಿದೆ. ಆದ್ದರಿಂದ ಕನಕದಾಸರ ಮರಣ ಕಾಲವನ್ನು ೧೫೬೩ಕ್ಕೆ ಎಂದು ಒಪ್ಪಿದ್ದಾರೆ. ಒಟ್ಟಿನಲ್ಲಿ ಕನಕದಾಸರ ಜನನ ಮರಣದ ಕಾಲವನ್ನು ೧೪೬೫ ರಿಂದ ೧೫೬೩ ಎಂದು ಒಪ್ಪಬಹುದು.

ಕನಕದಾಸರ ಸಾಹಿತ್ಯ
ಕನಕದಾಸರು ಕೇವಲ ಹರಿ ಭಕ್ತರಾಗಿ, ವೈಷ್ಣವ ಮತಾನುಯಾಯಿಯಾಗಿ ಉಳಿಯದೆ ಶೈವ, ಶ್ರೀ ವೈಷ್ಣವ ಮತ್ತು ಮಾಧ್ವ ಮತಗಳಲ್ಲಿಯ ಉತ್ತಮಾಂಶಗಳಿಂದ ಪ್ರಭಾವಿತರಾಗಿದ್ದರು. ರಾಮಾನುಜೀಯರಾಗಿದ್ದ ತಾತಾಚಾರಿಯವರ ಹಾಗೂ ಮಾಧ್ವರಾಗಿದ್ದ ವ್ಯಾಸರಾಯರ ಪ್ರಭಾವಕ್ಕೊಳಗಾಗಿ ಹರಿದಾಸರಲ್ಲದೆ, ತಮ್ಮ ಬರವಣಿಗೆಯಲ್ಲಿ ಜಾತಿ-ಮತ-ಪಂಥ ಮೀರಿದ ಸಮಾನತೆಯನ್ನು ಬೋಧಿಸಿದರು. ಕನಕದಾಸರು ತಮ್ಮ ಜೀವಿತಾವಧಿಯಲ್ಲಿ ಎರಡು ಕಾವ್ಯಗಳನ್ನು ರಚಿಸಿದ್ದಾರೆ. ಮೋಹನ ತರಂಗಿಣಿ (ಶೃಂಗಾರ ರಸ ಕಾವ್ಯ) ಮತ್ತು ನಳ ಚರಿತ್ರೆ (ನಳ-ದಮಯಂತಿಯರ ಪ್ರೇಮ ಕಾವ್ಯ) ಅವರ ಕಾವ್ಯತ್ವಕ್ಕೆ ಹಿಡಿದ ಕನ್ನಡಿಯಂತಿವೆ. ಹರಿಭಕ್ತ ಸಾರ (ಅನುಭಾವ ಲಘುಕಾವ್ಯ) ಮತ್ತು ರಾಮಧಾನ್ಯ ಚರಿತ್ರೆ(ಸಾಮಾಜಿಕ ಆಶಯವನ್ನೊಳಗೂಂಡ ಲಘುಕಾವ್ಯ)ಗಳು ಕನಕರ ವೈವಿಧ್ಯಮಯ ಮತ್ತು ಜನಪರ ನಿಲುವಿಗೆ ಸಾಕ್ಷಿಯಂತಿವೆ. ಕನಕರ ಮುಂಡಿಗೆಗಳು, ಜಾನಪದೀಯ ಸೊಗಡಿನ ಪದಗಳು, ಭಾಮಿನಿಷಟ್ಪದಿಯಲ್ಲಿ ಬರೆದು ನರಸಿಂಹಸ್ತವನಗಳು ಉಲ್ಲೇಖಾರ್ಹ. ಕನಕರು ತಮ್ಮ ಎರಡೂ ಕಾವ್ಯಗಳನ್ನು ಚೆನ್ನಿಗರಾಯ ಮತ್ತು ಕಾಗಿನೆಲೆ ಆಧಿಕೇಶವನಿಗೆ ಅಪಿ೯ಸಿದ್ದಾರೆ. ತಮ್ಮ ಕೀರ್ತನೆ ಮತ್ತು ಪದಗಳ ಮೂಲಕ ನಾಡಿನ ಜನರ ನಾಲಿಗೆಯ ಮೇಲೆ ಇಂದಿಗೂ ನಲಿದಾಡುತ್ತಿದ್ದಾರೆ.

ಕನಕದಾಸರು ಅಂದಿನ ಸಮಾಜ ವ್ಯವಸ್ಥೆಯಲ್ಲಿ ಅನುಭವಿಸಿದ ನೋವೇ ಅವರ ಕೀರ್ತನೆ ಹಾಗೂ ಪದಗಳಲ್ಲಿ ಹಾಡಾಗಿ ಹರಿದಿದೆ. ಜಾತಿ ವ್ಯವಸ್ಥೆಯನ್ನು ವಿರೋಧಿಸಿದಂತೆ ಕನಕರು ಜನರಲ್ಲಿ ತಮ್ಮ ಕೀರ್ತನೆಗಳ ಮೂಲಕ ಆದ್ಯಾತ್ಮಿಕ, ಸಾಮಾಜಿಕ ಹಾಗೂ ವೈಚಾರಿಕ ಪ್ರಜ್ಞೆಯನ್ನು ಬಿತ್ತಿದ್ದು, ಈ ಮೂರು ಅಂಶಗಳಿಂದ ಅವರ ಸಾಹಿತ್ಯ ಮುಪ್ಪುರಿಗೊಂಡಿದೆ.

ಸಮಾಜದಲ್ಲಿ ಸಮತಾ ಸಮಾಜ ನಿಮಾ೯ಣವಾಗಲೆಂಬ ಆಶಯದಿಂದ ಅವರು ಸಮಾಜವನ್ನು ಹಲ ಬಗೆಯಲ್ಲಿ ಪ್ರಶ್ನಿಸಿದ್ದಾರೆ. ಕನಕರ ಕೆಲ ಸಕಾಲಿಕ ಪ್ರಶ್ನೆಗಳಿಗೆ ನಾವು ಇಂದಿಗೂ ಉತ್ತರ ಹುಡುಕಬೇಕಿದೆ. ಉದಾ: ಸತ್ಯವಂತರ ಸಂಗವಿರಲು ತೀರ್ಥವ್ಯಾತಕೆ? ನೇಮವಿಲ್ಲದೆ ಹೋಮವ್ಯಾತಕೆ? ಹೊಲೆಯ ಹೊರಗಿಹನೆ? ಇನ್ನೆಷ್ಟು ಕಾಲ ನೀನು ಮಲಗಿದ್ದರೂ, ನಿನ್ನನೆಬ್ಬಿಸುವವರನೊಬ್ಬರನು ಕಾಣೆ, ‘ಉತ್ತಮ ಪ್ರಭುತ್ವ ಲೊಳಲೊಟ್ಟೆ’. ನಾಲ್ಕು ಶತಮಾನಗಳ ಹಿಂದಿನ ಕನಕರ ಆತಂಕಗಳು ಇಂದಿನ ಜ್ವಲಂತ ಪ್ರಶ್ನೆಗಳಾಗಿ ಉಳಿದಿರುವುದು ಮಾತ್ರ ವಿಷಾದನೀಯ.

ಕನಕದಾಸರು ದಾಸ ಪಂಥದ ವಚನಕಾರರು ಮಾತ್ರವಲ್ಲ, ಎಲ್ಲ ಮತೀಯ ಬಂಧನಗಳಿಂದ ಪಾರಾಗಿ, ಸಾಮಾಜಿಕ ಕಟ್ಟು-ನಿಟ್ಟುಗಳಿಂದ ಮುಕ್ತರಾಗಿ, ಅಧ್ಯಾತ್ಮ ಸಿದ್ದಿಯ ಶಿಖರವನ್ನೇರಿದ ವಿಶ್ವಬಂಧು, ಸಂತ ಕವಿಯೆಂದು ದೇ.ಜವರೇಗೌಡರು ಕನಕದಾಸರ ವ್ಯಕ್ತಿತ್ವವನ್ನು ಬಣ್ಣಿಸಿರುವುದು ಯಥಾರ್ಥವಾಗಿದೆ.

ಹರಿಭಕ್ತಿಸಾರ
ಪ್ರಾಚೀನ ಕಾಲದಿಂದಲೂ ಕನ್ನಡ ಭೂಮಿ ಭಕ್ತಿಗೆ ಹೆಸರಾದ ತಾಣವಾಗಿದೆ. ೧೨ನೇ ಶತಮಾನದ ಶರಣ-ಶರಣೆಯರು, ೧೬ನೇ ಶತಮಾನದ ಹರಿದಾಸರು ಅದಕ್ಕೆ ಸಾಕ್ಷಿ ಎಂಬಂತೆ ಕಂಗೊಳಿಸುತ್ತಾರೆ. ಈ ಎರಡು ವಾಹಿನಿಗಳಲ್ಲಿ ದಾಸ ಸಾಹಿತ್ಯವೂ ಒಂದು. ಹರಿದಾಸ ಕೂಟದಲ್ಲಿ ಕನಕದಾಸರ ಪಾತ್ರ ಪ್ರಶಂಸನೀಯ. ಭಕ್ತ ಕನಕದಾಸರು ಎಂಬ ಮಾತಿಗೆ ಎರಡಿಲ್ಲ ಎಂಬಂತೆ “ಹರಿಭಕ್ತಿಸಾರ’’ ಕೃತಿ ರಚಿಸಿ ಭಕ್ತಿಪಂಥಕ್ಕೆ ಅದನ್ನು ಸಮರ್ಪಿಸಿದ್ದಾರೆ. ಹರಿಭಕ್ತಿಸಾರವು ಹಾಡಲು ಅನುಕೂಲ ಮತ್ತು ಗಮಕಕ್ಕೆ ಅಳವಡಿಸುವಂತೆ ಭಾಮಿನಿ ಷಟ್ಪದಿಯಲ್ಲಿದೆ. ಪ್ರತಿಯೊಂದು ಪದ್ಯದ ಕೊನೆಯಲ್ಲೂ “ರಕ್ಷಿಸು ನಮ್ಮನನವರತ’’ ಎಂದು ಬರುತ್ತದೆ. ಇದು ಕಾವ್ಯದ ವೈಶಿಷ್ಟ್ಯ.

ಶ್ರೀಯರಸ ಗಾಂಗೇಯನುತ ಕೌಂ
ತೇಯವಂದಿತ ಚರಣ ಕಮಲದ
ಳಾಯ ತಾಂಬಕರೂಪ ಚಿನ್ಮಯ ದೇವಕೀತನಯ
ರಾಯ ರಘುಕುಲವರ್ಯ ಭೂಸುರ
ಪ್ರೀಯ ವರಪುರ ನಿಲಯ ಚೆನ್ನಿಗ
ರಾಯ ಚರೋಪಾಯ ರಕ್ಷಿಸು ನಮ್ಮನನವರತ

ಲಕ್ಷ್ಮೀಪತಿ, ಭೀಷ್ಮಸುತ, ಪಾಂಡವವಂದಿತ ಚರಣ, ತಾವರೆಯ ದಳದಂತೆ ವಿಶಾಲವಾದ ಕಣ್ಣುಳ್ಳವನೆ, ಜ್ಞಾನಮೂರ್ತಿ, ದೇವಕೀಸುತ, ರಘುಕುಲದ ರಾಜಾದಿರಾಜ ಶ್ರೀರಾಮಚಂದ್ರ, ಬ್ರಾಹ್ಮಣ ಪ್ರಿಯ, ವರಪುರ (ಬೇಲೂರು) ನಿವಾಸ, ಸುಂದರಾಂಗ ಚೆನ್ನಕೇಶವ, ಜಾಣ್ಮೆಯ ಉಪಾಶೀಲ ಸದಾ ನಮ್ಮನ್ನು ರಕ್ಷಿಸು ಎಂದು ಪ್ರಾರಂಭವಾಗುತ್ತದೆ.

ಹಸಿವರಿತು ತಾಯ್ತನ್ನ ಶಿಶುವಿಗೆ
ಒಸೆದು ಮೊಲೆ ಕೊಡುವಂತೆ ನೀ ಪೋ
ಷಿಸದೆ ಬೇರಿನ್ನಾರು ಪೋಷಕರಾಗಿ ಸಲಹುವರು
ಬಸಿರೊಳಗೆ ಬ್ರಹ್ಮಾಂಡ ಕೋಟಿಯ ಪಸರಿಸಿದ ಪರಮಾತ್ಮ ನೀನೆಂ
ದುಸಿರುತಿವೆ ವೇದಗಳು ರಕ್ಷಿಸು ನಮ್ಮನನವರತ

ತಾಯಿ ತನ್ನ ಮಗುವಿಗೆ ಹಸಿವಾಗಿದೆಯೆಂದರಿತು ತಾನಾಗಿ ಮೊಲೆ ಹಾಲನ್ನಿತ್ತು ಪೊರೆಯುತ್ತಾಳಲ್ಲವೆ? ಆ ರೀತಿಯಾಗಿ ನನ್ನನ್ನು ನೀನೆ ಸಲುಹಬೇಕಲ್ಲದೆ ನನಗೆ ಬೇರೆ ಪೋಷಕರು ಯಾರಿದ್ದಾರೆ? ನಿನ್ನ ಉದರದೊಳಗೆ ಬ್ರಹ್ಮಾಂಡಗಳನ್ನಿರಿಸಿ ಪಾಲಿಸುವ ಪರಮಾತ್ಮ ನೀನು ಎಂದು ವೇದಗಳು ಘೋಷಿಸುತ್ತವೆ. ಸ್ವಾಮಿ, ನನ್ನನ್ನು ಸಲಹು ಎಂಬ ಮುಗ್ಧ ಪ್ರಾರ್ಥನೆ ಇದೆ.

ದೀನ ನಾನು ಸಮಸ್ತ ಲೋಕಕೆ
ದಾನಿ ನೀನು ವಿಚಾರಿಸಲು ಮತಿ
ಹೀನ ನಾನು ಮಹಾಮಹಿಮ ಕೈವಲ್ಯಪತಿ ನೀನು
ಏನ ಬಲ್ಲೆನು ನಾನು ನೆರೆ ಸು
ಜ್ಞಾನ ಮೂರುತಿ ನೀನು ನಿನ್ನಸ
ಮಾನರುಂಟೇ ದೇವ ರಕ್ಷಿಸು ನಮ್ಮನನವರತ

ಇಲ್ಲಿ ಭಕ್ತನಾದವನು ಭಗವಂತನಲ್ಲಿ ಪ್ರಾರ್ಥನೆಯನ್ನು ಸಲ್ಲಿಸುತ್ತ ತನ್ನನ್ನು ಪಾಲಿಸೆಂದು ಬೇಡಿಕೊಳ್ಳುತ್ತಾನೆ ಎಂಬ ಭಾವವಿದೆ.

ಗತಿವಿಹೀನರಿಗಾರು ನೀನೇ
ಗತಿ ಕಣಾ ಪತಿಕರಿಸಿಕೊಂಡು ಸ
ದ್ಗತಿಯ ನೀನೆಲೆ ದೇವ ನಿನಗಪರಾ ನಾನಲ್ಲ
ಶ್ರುತಿವಚನವಾಡುವುದು ಶರಣಾ
ಗತರ ಸೇವಕನೆಂದು ನಿನ್ನನ್ನು
ಮತವಿಡಿದು ನಂಬಿದೆನು ರಕ್ಷಿಸು ನಮ್ಮನನವರತ

ಮಾನರುಂಟೇ ದೇವ ರಕ್ಷಿಸು ನಮ್ಮನನವರತ
ಹೇ ದೇವ, ಗತಿಯಿಲ್ಲದವರಿಗೆ ನೀನೇ ಗತಿ, ನನಗೆ ಸದ್ಗತಿಯನ್ನು ಕೊಡು, ಶರಣಾಗತರನ್ನು ಕಾಪಾಡುವೆಯೆಂದು ವೇದಗಳು ಘೋಷಿಸುತ್ತವೆ. ಆದ್ದರಿಂದ ನಿನ್ನನ್ನೆ ನಂಬಿರುವ ನನ್ನನ್ನು ನೀನೇ ಸಲಹು ಎಂಬ ಶರಣಾಗತಿಯ ಮನೋಭಾವ ವ್ಯಕ್ತವಾಗಿದೆ.

ಕೇಳುವುದು ಹರಿಕಥೆಯ ಕೇಳಲು
ಹೇಳುವುದು ಹರಿಭಕ್ತಿ ಮನದಲಿ
ತಾಳವುದು ಹಿರಿದಾಗಿ ನಿನ್ನಯ ಚರಣ ಸೇವೆಯಲಿ
ಉಳಿಗವ ಮಾಡುವುದು ವಿಷಯವ
ಹೂಳುವುದು ನಿಜ ಮುಕ್ತಿ ಕಾಂತೆಯ
ನಾಳುವುದು ಕೃಪೆ ಮಾಡಿ ರಕ್ಷಿಸು ನಮ್ಮನನವರತ

ಹರಿಭಕ್ತಿಸಾರ, ಹರಿಕಥೆ ಎಂದು ಹೇಳಿದ್ದರೂ ಇಲ್ಲಿ ಯಾವುದೇ ಒಂದು ಕಥೆಯನ್ನು ಹೇಳಲಾಗಿಲ್ಲ. ದೇವರಲ್ಲಿ ಮೊರೆ, ಪ್ರಾರ್ಥನೆಯೇ ಇದೆ ಹೊರತು ಯಾರೊಬ್ಬರ ಕಥೆಯೂ ಇಲ್ಲಿಲ್ಲ. ಶ್ರೀಹರಿಯ ಕರುಣೆ, ಮಹಿಮೆ, ಲೀಲೆ, ಭಕ್ತೋದ್ಧಾರ ಕಾರ್ಯ ಮೊದಲಾದವುಗಳನ್ನು ಕೊಂಡಾಡುವ ಸ್ತೋತ್ರರೂಪದ ಪದ್ಯಗಳಿವೆ. ಅವುಗಳನ್ನು ಹೇಳುವಾಗ ಭಕ್ತರ-ಭಗವಂತನ ಸಂಬಂಧದ ಕಥೆಗಳು ಇಲ್ಲಿ ಸೂಚಿತವಾಗಿವೆ. ರಾಮಾಯಣ, ಮಹಾಭಾರತ, ಭಾಗವತ ಇತ್ಯಾದಿ ಪುರಾಣ ಕಥೆಗಳನ್ನು ಇಲ್ಲಿ ಸ್ಮರಿಸಿಕೊಳ್ಳಬೇಕಾಗುತ್ತದೆ. ಹರಿಭಕ್ತಿಸಾರದಲ್ಲಿ ಜ್ಞಾನ ಭಕ್ತಿ, ವೈರಾಗ್ಯದ್ಯೋತಕವಾದ ಮಾತುಗಳು ಸಾಕಷ್ಟು ದೊರೆಯುತ್ತವೆ. ಈ ಕೃತಿಯಲ್ಲಿ ಕನಕದಾಸರು ಭಕ್ತಿ-ನೀತಿ-ವೈರಾಗ್ಯದ ತುದಿಯನ್ನು ತಲುಪಿಸಿದ್ದಾರೆ. ಭಕ್ತಿಯ ರಸಭರಿತವಾದ ಈ ಕೃತಿ ಆಶಾಕವಿತೆಯಂತೆ ರಚನೆಗೊಂಡಿದೆ ಎನ್ನುವಲ್ಲಿ ಎರಡು ಮಾತಿಲ್ಲ.

ರಾಮಧಾನ್ಯ ಚರಿತೆ
ರಾಮಧಾನ್ಯದ ಕೃತಿಯನೀ ಜ
ಧಾಮವೆಲ್ಲಾ ದರಿಸುವಂದದಿ
ಭೂಮಿಗಚ್ಚರಿಯಾಗಿ ಪೇಳುವೇನೀ ಮಹಾಕಥೆಯ

ಎಂದು ಹೇಳುವ, ಕನಕದಾಸರು ನಿಜವಾಗಿಯೂ ಅಚ್ಚರಿಯಾದ ಕಾವ್ಯವನ್ನು ರಚಿಸಿದ್ದಾರೆ. ಪಂಚತಂತ್ರದಲ್ಲಿ ಪ್ರಾಣಿಗಳನ್ನು ರೂಪಕಗಳಾಗಿ ಬಳಸಿಕೊಂಡಂತೆ, ಇಲ್ಲಿ ಧಾನ್ಯಗಳನ್ನು ಬಳಸಿರುವುದು ವಿಶೇಷವಾಗಿದೆ. ಇಂದಿನ ಬಂಡಾಯ ಸಾಹಿತ್ಯದ ಮೂಲ ಬೇರು “ರಾಮಧಾನ್ಯ ಚರಿತ್ರೆ ’’ ಎಂದು ಹೇಳಬಹುದು. ಕನಕದಾಸರು ಅನುಭವಿಸಿದ ಜಾತಿಯ ತೊಂದರೆಯನ್ನು ಹಾಗೂ ಆ ಕಾಲದ ಜಾತಿ ಆಧಾರಿತ ಸಮಾಜವನ್ನು ಈ ಕಾವ್ಯ ಪ್ರತಿಬಿಂಬಿಸುತ್ತದೆ. ವ್ರೀಹಿ-ನರೆದಲಗ(ಭತ್ತ-ರಾಗಿ)ಗಳು ಕಾವ್ಯದ ಎರಡು ಪಾತ್ರಗಳು. ಭತ್ತ ಮೇಲ್ವರ್ಗದವರ ಪ್ರತಿನಿಧಿ: ರಾಗಿ ಕೆಳವರ್ಗದವರ ಸಂಕೇತ. ಧರೆಯನೆಲ್ಲವ ಸೋತ ಸಹೋದರರೊಡಗೂಡಿ ಧರ್ಮರಾಜ ಕಾಮ್ಯಕವನದಲ್ಲಿರುತ್ತಾನೆ. ಅವರ ಕ್ಷೇಮ ಸಮಾಚಾರ ವಿಚಾರಿಸಲು ಬಂದ ಶಾಂಡಿಲ್ಯ ಮುನಿ ಧರ್ಮರಾಜನ ಮನಶಾಂತಿಗೆ ಈ ಕಥೆಯನ್ನು ಹೇಳುತ್ತಾನೆ.

ಅಷ್ಟಾದಶ ಹಾಗೂ ಅನಾವಶ್ಯಕ ವರ್ಣನೆಗಳಿಲ್ಲದೆ ಕಥೆ ಪ್ರಾರಂಭವಾಗುತ್ತದೆ. ದಶರಥನ ಆಜ್ಞೆಯಂತೆ ಶ್ರೀರಾಮನು ಪತ್ನಿ ಸೀತೆ ಮತ್ತು ತಮ್ಮನಾದ ಲಕ್ಷ್ಮಣ ಸಹಿತ ವನವಾಸಕ್ಕೆ ತೆರಳುತ್ತಾನೆ. ಇತ್ತ ಪರ್ಣಕುಟೀರದಲ್ಲಿ ಏಕೈಕ ಸೀತೆ ಇರುವುದನ್ನು ಸಾಸಿ ರಾವಣನು ಸೀತೆಯನ್ನು ಅಪಹರಿಸಿಕೊಂಡು ಹೋಗುತ್ತಾನೆ. ಪತ್ನಿಯನ್ನು ಮರಳಿ ತರುವುದಕ್ಕಾಗಿ ಸೈನ್ಯದೊಡಗೂಡಿ ಲಂಕಾಪತಿ ರಾವಣನೊಂದಿಗೆ ಯುದ್ಧ ಮಾಡಿ ರಾವಣ ಹತನಾದ ಬಳಿಕ ವಿಭೀಷಣನಿಗೆ ಉತ್ತರಾಧಿಕಾರಿಯೆಂದು ಪಟ್ಟಗಟ್ಟುತ್ತಾನೆ. ವಿಜಯೋನ್ಮತ್ತನಾದ ಶ್ರೀರಾಮನು ಮರಳಿ ಬರುವಾಗ ಮುನಿಶ್ರೇಷ್ಠ ಗೌತಮರ ಅತಿಥಿಯಾಗಿ ಉಳಿಯುತ್ತಾನೆ. ಅವರಿಗಾಗಿ ಮಾಡಲ್ಪಟ್ಟ ಮೃಷ್ಠಾನ್ನ ಭೋಜನ ಏರ್ಪಾಟು ವರ್ಣಾತೀತವಾಗಿದೆ. ಅವರೆಲ್ಲ ಹಾಲ್ಜೇನು, ಸಕ್ಕರೆ ಮೊದಲಾದ ನವಧಾನ್ಯಗಳ ರುಚಿಗೆ ಮಾರುಹೋಗಿ ಆ ಎಲ್ಲ ಧಾನ್ಯಗಳನ್ನು ನೋಡಲು ಕುತೂಹಲರಾಗುತ್ತಾರೆ.

ನರೆದಲಗನಿದು ನೆಲ್ಲು ಹಾರಕ
ಬರಗು ಜೋಳವು ಕಂಬು ಸಾಮೆಯು
ಉರುತರದ ನವಣೆಯಿದು ನವಧಾನ್ಯವೆಂದೆನಲು
ಮೆರೆವ ರಾಗಿಯ ಕಂಡು ಇದರೊಳು
ಪರಮಸಾರದ ಹೃದಯನಾರೆಂ
ದರಸಿ ಕೇಳಿದನಲ್ಲಿರುತಿಹ ಮಹಾಮುನಿಶ್ವರರ

ಆಗ ಕೆಲವರು ಗೋ ಶ್ರೇಷ್ಠವೆಂದು, ಕೆಲವರು ಸಾಮೆ, ಕೆಲವರು ನವಣೆ, ಕಂಬು, ಜೋಳ, ಕೆಲವರು ಹಾರಕವೆಂದು, ಕೆಲವರು ನೆಲ್ಲಿನ ಮಹತ್ವವನ್ನು, ಇನ್ನೂ ಕೆಲವರು ರಾಗಿಯ ಮಹತ್ವವನ್ನು ಅರಸನ ಸಮ್ಮುಖದಲ್ಲಿ ಹೇಳುತ್ತಿರುವಾಗ ಗೌತಮ ಮುನಿಗಳು ಹಲವು ಭಿನ್ನ ವಿಚಾರಗಳೇಕೆ ಒಂದನ್ನೇ ಹೇಳಿರೆಂದರು. ನಂತರ ಮುನಿಗಳೆ ನಮ್ಮ ದೇಶಕ್ಕೆ ರಾಗಿಯೇ ಶ್ರೇಷ್ಠ ಎನ್ನುತ್ತಾರೆ.

ಲೇಸನಾಡಿದೆ ಮುನಿಪ ಗೌತಮ
ದೋಷರಹಿತನು ಪಕ್ಷಪಾತವ
ನೀಸುಪರಿಯಲಿ ಮಾಡುವರೆ ಶಿವಯೆಂದನಾ ವ್ರಿಹೀಗ

ಏನೆಲವೋ ನರೆದಲೆಗ ನೀನು ಸ
ಮಾನವೇ ಯೆನಗಿಲ್ಲಿ ನಮ್ಮನು
ದಾನವಾಂತಕ ಬಲ್ಲನಿಬ್ಬರ ಹೆಚ್ಚು ಕುಂದುಗಳ
ಜಾನಕೀಪತಿಯ ಸನಿಹದಲಿ ಕುಲ
ಹೀನ ನೀನು ಪ್ರತಿಷ್ಠ ಸುಡು ಮತಿ
ಹೀನ ನೀನೆಂದೆನುತ ಖತಿಯಲಿ ಬೈದು ಭಂಗಿಸಿದ

ಭತ್ತ, ರಾಗಿಯನ್ನು ಹಲವು ರೀತಿಯಿಂದ ಹೀಯಾಳಿಸುತ್ತದೆ. ಇದನ್ನು ಕೇಳಿ ಕೋಪಗೊಂಡ ರಾಗಿ ಈ ತೆರನಾಗಿ ಹೇಳುತ್ತದೆ.

ಬಲ್ಲಿದರು ಬರೆ ಬಡವರಲಿ ನಿ
ನ್ನಲ್ಲಿ ಯುಂಟು ಉಪೇಕ್ಷೆ ನಮ್ಮಲಿ
ಸಲ್ಲದೀ ಪರಿಪಕ್ಷಪಾತವದಿಲ್ಲ ಭಾವಿಸಲು
ಬಲ್ಲಿದರು ಬಡವರುಗಳೆನ್ನದೆ
ಎಲ್ಲರನು ರಕ್ಷಿಸುವೇ ನಿರ್ದಯ
ನಲ್ಲ ತಾ ನಿನ್ನಂತೆ ಎಲ ಕುಟಿಲಾತ್ಮ ಹೋಗೆಂದು

ಹೀಗೆ ಭತ್ತ ರಾಗಿಯ ಮಧ್ಯೆ ವಾಗ್ವಾದ ಬೆಳೆಯಿತು. ಇದನ್ನು ಮಧ್ಯದಲ್ಲಿ ತಡೆದು ಆರು ತಿಂಗಳು ಸೆರೆಯಲ್ಲಿಡಲು ರಾಮನು ಆಜ್ಞೆ ಮಾಡುತ್ತಾನೆ. ತಾನು ಸಂಚಾರಗೈಯುತ್ತ ಅಯೋಧ್ಯೆಗೆ ಹೋಗಿ, ಪಟ್ಟಾಕಾರ ವಹಿಸಿಕೊಳ್ಳುತ್ತಾನೆ. ಅಷ್ಟರಲ್ಲಿ ಆರು ತಿಂಗಳು ಗತಿಸಿ ಹೋಗಿರುತ್ತದೆ. ನರೆದಲಗ ಮತ್ತು ವ್ರೀಹಿಯ ನೆನಪಾಗಿ ಕರೆದುಕೊಂಡು ಬರಲು ಕಳುಹಿಸುತ್ತಾನೆ. ಇಬ್ಬರನ್ನು ಸಭೆಗೆ ತಂದಾಗ ಭತ್ತವು ಕಳೆಗುಂದಿ ಉಪಯೋಗಕ್ಕೆ ಬಾರದಂತಾಗಿರುತ್ತದೆ. ರಾಗಿಗೆ ಯಾವುದೇ ರೀತಿಯ ಕುಂದುಂಟಾಗಿರುವುದಿಲ್ಲ. ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ. ರಾಮನೂ ಕೂಡ ಮೆಚ್ಚಿ ಈ ಕೆಳಗಿನಂತೆ ನುಡಿಯುತ್ತಾನೆ.

ಸುರ ಮುನಿಗಳಿಂತೆನಲು ಭೂಸುರ
ವರರು ಸಂತೋಷಿಸಲು ಸಭಿಕರು
ನರೆದಲಗ ನೀ ಬಾರೆನುತ ರಾಮನೃಪಾಲ ನೆರೆಮೆಚ್ಚಿ
ಕರೆದು ಕೊಟ್ಟನು ತನ್ನ ನಾಮವ
ಧರೆಗೆ ರಾಘವನೆಂಬ ಪೆಸರಾ
ಯ್ತಿರದೆ ವ್ರಿಹೀನಾಚಿದನು ಸಭೆಯಲಿ ಶಿರವ ಬಾಗಿಸಿದ
ಕೊನೆಗೆ ರಾಮನು ಇಬ್ಬರನ್ನೂ ಕರೆದು
ದೇವರಿಗೆ ಪರಮಾನ್ನ ನೀ ಮನು
ಜಾವಳಿಗೆ ಪಕ್ವಾನ್ನ ವೀತನು
ನೀವು ಧರೆಯೊಳಗ್ಗಿಬ್ಬರತಿ ಹಿತದಲಿ ನೀವಿಹುದು
ನಾವು ಕೊಟ್ಟೆವು ವರವ ಸಲ್ಲುವು
ದಾವ ಕಾಲದಲ್ಲಿನ್ನು ನೀವೇ
ಪಾವನರು ಪರಮ ಸುಖಿಯೆಂದು ಪಚರಿಸಿದನು ನೃಪತಿ

ನೀವಿಬ್ಬರೂ ಭೇದ-ಭಾವ ತೋರಬಾರದೆಂದು ಅರಹುತ್ತಾನೆ.

ಕನಕದಾಸರು ನಿರ್ಜೀವ ವಸ್ತುಗಳ ಕದನವನ್ನು ಮುಂದಿಟ್ಟುಕೊಂಡು ಸಮಕಾಲೀನ ಜಾತಿ ವ್ಯವಸ್ಥೆಯನ್ನು ಪ್ರತಿಬಿಂಬಿಸಿದ್ದಾರೆ. ಇಡೀ ಮೇಲ್ವರ್ಗದ ಸಮಾಜದೆದುರು ನಿಂತು ಇಂತಹ ಮಾತುಗಳನ್ನಾಡಿದ ಕನಕದಾಸರು ನಿಜವಾಗ್ಯೂ ಧೈರ್ಯಶಾಲಿ. ಇವರ ಪ್ರಗತಿಪರ ಧೋರಣೆಗಳಿಂದ “ರಾಮಧಾನ್ಯ ಚರಿತ್ರೆ’’ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಒಂದು ವಿಶಿಷ್ಟ ಕೃತಿಯಾಗಿ ಗಮನ ಸೆಳೆಯುತ್ತದೆ.

ನಳ ಚರಿತ್ರೆ
ಜನಪದದಷ್ಟೇ ಪ್ರಾಚೀನತೆ ಮತ್ತು ಜನಪ್ರಿಯತೆಯನ್ನು ಹೊಂದಿದ ನಳದಮಯಂತಿಯರ ಕಥೆ ರಮ್ಯವಾಗಿದೆ. ಮಹಾಭಾರತದ ವನಪರ್ವದಲ್ಲಿ ವಿಸ್ತಾರವಾಗಿ ನಿರೂಪಿತವಾಗಿರುವ ನಳೋಪಾಖ್ಯಾನವೇ ಕನಕದಾಸರ ‘ನಳಚರಿತ್ರೆ’ಗೆ ಮೂಲ ಆಕರವಾಗಿದೆ. ಈ ಕೃತಿಯಲ್ಲಿ ತೊಡಕಿಲ್ಲದ ವರ್ಣನೆಗಳು, ಶೀಘ್ರಗತಿಯ ಕ್ರಿಯೆ, ಯಾವುದೇ ಅಲಂಕಾರಗಳ ಭಾರವಿಲ್ಲದೆ ಸರಳ ಸುಂದರವಾದ ದೇಶೀಯ ಶೈಲಿ ಇವೆಲ್ಲಕ್ಕೂ ಮಿಗಿಲಾಗಿ ನಳ-ದಮಯಂತಿಯರ ಪ್ರೇಮ ಲೋಕಕ್ಕೆ ಆದರ್ಶಮಯವಾಗಿದೆ.

ನಮ್ಮ ಪ್ರಾಚೀನ ಕನ್ನಡ ಕವಿಗಳಿಗೆ ಕಾವ್ಯಾರಂಭದಲ್ಲಿ ತಮ್ಮ ಇಷ್ಟ ದೇವತೆಯನ್ನು ಮನಃಪೂರ್ವಕವಾಗಿ ಸ್ತುತಿಸುವುದು ಎಲ್ಲಿಲ್ಲದ ಹಂಬಲ. ಕನಕದಾಸರೂ ಈ ಮಾತಿಗೆ ಹೊರತಾಗಿಲ್ಲ.

ಶ್ರೀ ರಮಣ ಸರಸಿಜದಳಾಕ್ಷಮು
ರಾರಿ ಸಚರಾಚರಭರಿತ ದುರಿ
ತಾರಿ ನಿತ್ಯಾನಂದ ನಿರ್ಜರನಿಕರ ದಾತಾರ
ವಾರಿಜಾಂಬಕ ವರಗುಣಾಶ್ರಯ
ಮಾರಪಿತ ವೇದಾಂತನುತ ಸಾ
ಕಾರ ಚೆನ್ನಿಗರಾಯ ಪಾಲಿಸು ಜಗಕೆ ಮಂಗಳವ

ಎಂದು ಪ್ರಾರ್ಥಿಸುತ್ತಾರೆ. ಮುಂದಿನ ಪದ್ಯಗಳಲ್ಲಿ ಕಥೆಗೆ ಅನುವು ಮಾಡುಕೊಡುತ್ತಾರೆ. ಮಹಾಭಾರತದ ಪಾಂಡವರು ಜೂಜಿನಲ್ಲಿ ಸಕಲ ರಾಜವೈಭೋಗವನ್ನು ಕಳೆದುಕೊಂಡು, ಅಡವಿಯ ಸಂಚಾರದಲ್ಲಿದ್ದಾಗ ಅರ್ಜುನನು ಇಂದ್ರಲೋಕಕ್ಕೆ ಹೋಗಿ ತಿರುಗಿ ಬಾರದೇ ಇದ್ದ ಸಮಯದಲ್ಲಿ ಧರ್ಮರಾಯನು ಚಿಂತೆಗೀಡಾಗಿ, ತಮಗೆ ಒದಗಿಬಂದ ಪರಿಸ್ಥಿತಿಯನ್ನು ನೆನೆದು ದುಃಖಿತನಾಗಿರುತ್ತಾನೆ. ಅದೇ ಸಮಯಕ್ಕೆ ಆ ಕಾಮ್ಯಕವನಕ್ಕೆ ಮುನಿ ಸಮೂಹದೊಡಗೂಡಿ ರೋಮಶ ಮುನಿಗಳು ಆಗಮಿಸುತ್ತಾರೆ. ಕ್ಷೇಮ ಸಮಾಚಾರದ ವಿಚಾರ ನಡೆದಾಗ ಧರ್ಮರಾಜನು ತನ್ನಂತೆ ಅಷ್ಟೈಶ್ವರ್ಯವನ್ನು ಕಳೆದುಕೊಂಡು ದಿಕ್ಕೆಟ್ಟು ಕಾಡಿನಲ್ಲಲೆದವರು ಯಾರಿದ್ದಾರೆ ಎಂದು ತನ್ನ ಸ್ಥಿತಿಯನ್ನು (ಅಳಲನ್ನು) ತೋಡಿಕೊಳ್ಳುತ್ತಾನೆ. ಎಲೋ ಧರ್ಮಜನೆ ಈ ಹಿಂದೆ ನಳಮಹಾರಾಜ, ಹರಿಶ್ಚಂದ್ರ, ರಾಮಚಂದ್ರ ಮೊದಲಾದವರು ಹೇಳಲಾರದಷ್ಟು ತೊಂದರೆಯನ್ನು ಅನುಭವಿಸಿದ್ದಾರೆ ಎನ್ನಲು ಹಾಗಾದರೆ, ನಳ ಮಹಾರಾಜನ ಕಥೆಯನ್ನು ಹೇಳಬೇಕೆನಲು ರೋಮಶ ಮುನಿಗಳು ನಳರಾಜ ಪಟ್ಟ ಘೋರ ಕಷ್ಟದ ಕಥೆಯನ್ನು ಹೇಳಲು ಪ್ರಾರಂಭಿಸುತ್ತಾರೆ.

ಇಡೀ ಭೂ ಲೋಕಕ್ಕೆ ಮುಕುಟವೆಂಬಂತೆ ಹೊಳೆವ ನಿಷಧ ನಗರದ ವೀರಸೇನ ಅರಸನ ಪುತ್ರನಾಗಿ ನಳಭೂವರನು ಜನಿಸಿದನು. ನಿಷಧ ದೇಶದ ದೊರೆಯಾದ ನಳನು ಸುಂದರನೂ, ವೀರನೂ, ಗುಣಸಂಪನ್ನನೂ, ಸಕಲವಿದ್ಯಾಪಾರಂಗತನಾಗಿ ಕಥೆಯಲ್ಲಿ ಕಾಣಿಸಿಕೊಳ್ಳುತ್ತಾನೆ. ಅದರಂತೆಯೇ ವಿದರ್ಭದೇಶದ ದಮಯಂತಿಯು ಭೀಮನೃಪಾಲನ ಏಕಮಾತ್ರ ಪುತ್ರಿಯಾಗಿ ಚಲುವೆಯಾಗಿ ಕಂಗೊಳಿಸಿದ್ದಾಳೆ. ರಾಜಧೂತರಿಂದ ಒಬ್ಬರ ಚೆಲುವು ಒಬ್ಬರರಿತು, ವಿರಹ ಬಾಧೆಯಿಂದ ಬಳಲುವ ಸನ್ನಿವೇಶವನ್ನು ಕನಕದಾಸರು ಬಹು ರಮ್ಯವಾಗಿ ಚಿತ್ರಿಸಿದ್ದಾರೆ. ಸಂಸ್ಕೃತ ಕವಿ ಕಾಳಿದಾಸ ಮೇಘಗಳ ಮೂಲಕ ಸಂದೇಶವನ್ನು ಕಳುಹಿಸಿದರೆ, ಇಲ್ಲಿ ಕನಕದಾಸರು ಹಂಸದ ಮೂಲಕ ಪರಸ್ಪರ ತಮ್ಮ ವ್ಯಥ್ಯೆಯನ್ನು ತೋಡಿಕೊಂಡು, ವಿವಾಹ ಸನ್ನಾಹಕ್ಕೆ ಬರುವಂತೆ ಮಾಡಿದ್ದಾರೆ. ತನ್ನ ಮುದ್ದಿನ ಮಗಳ ಮನದ ಇಂಗಿತವನ್ನರಿತ ಭೀಮನೃಪಾಲ ಸ್ವಯಂವರವನ್ನು ಏರ್ಪಡಿಸುತ್ತಾನೆ. ದಮಯಂತಿಗೆ ಮೋಹಿತರಾದ ಇಂದ್ರಾದಿ ದೇವತೆಗಳೇ ಸ್ವಯಂವರಕ್ಕೆ ಆಗಮಿಸಿ, ದಮಯಂತಿಯನ್ನು ಮದುವೆಯಾಗಬೇಕೆಂದು ವಿವಿಧ ರೀತಿಯಾಗಿ ಪರಿತಪಿಸುತ್ತಾರೆ. ಆದರೆ ದಮಯಂತಿ ನಿಜ ಪ್ರೀತಿಗೆ ಬೆಲೆಕೊಟ್ಟು ಸ್ವಯಂವರದಲ್ಲಿ ದೇವತೆಗಳನ್ನು ಗೇಲಿ ಮಾಡಿ, ನಳಮಹಾರಾಜನ ಪತ್ನಿಯಾಗುತ್ತಾಳೆ.

ನಳ-ದಮಯಂತಿಯರ ಪ್ರೇಮವನ್ನು ಕಂಡು ದೇವತೆಗಳು ಇಬ್ಬರಿಗೂ ಆಶೀರ್ವದಿಸಿ ತಮ್ಮ ಸ್ವಸ್ಥಾನಕ್ಕೆ ತೆರಳುತ್ತಿರುತ್ತಾರೆ. ಅವರಿಗೆ ಕಲಿ ಎದುರಾಗಿ ವಿವಾಹದ ವಿಷಯ ಅರಿತು, ನಳನನ್ನು ಭ್ರಷ್ಟನನ್ನಾಗಿ ಮಾಡಿ ಅಡವಿಗಟ್ಟುತ್ತೇನೆಂಬ ನಿರ್ಧಾರವನ್ನು ದೇವತೆಗಳಿಗೆ ಅರಹುತ್ತಾನೆ. ಇದರಿಂದ ದೇವತೆಗಳು ಗಲಿಬಿಲಿಗೊಳ್ಳುತ್ತಾರೆ. ಇತ್ತ ಕಲಿಯು ಬ್ರಾಹ್ಮಣ ವೇಷಧಾರಿಯಾಗಿ ಆಸ್ಥಾನವನ್ನು ಪ್ರವೇಶಿಸುತ್ತಾನೆ. ನಳನ ಮದುವೆಯ ಸಮಯ ಸಾಧಿಸಿಕೊಂಡು ಪುಷ್ಕರನೊಡನೆ ಜೂಜಾಡುವಂತೆ ಮಾಡಿ, ನಳನು ಸಕಲ ಸಾಮ್ರಾಜ್ಯವೆಲ್ಲ ಸೋತು ನಿರ್ಗತಿಕನಾಗುವಂತೆ ಮಾಡುತ್ತಾನೆ. ಸಕಲ ರಾಜ ಪೋಷಾಕುಗಳನ್ನು ಕಳಚಿ ನಳ ಅಡವಿಗೆ ಹೊರಡಲು ಸಿದ್ಧನಾಗುತ್ತಾನೆ. ದಮಯಂತಿಯು ಮಕ್ಕಳನ್ನು ತನ್ನ ತವರಿಗೆ ಕಳುಹಿಸಿ ತಾನೂ ಕೂಡ ನಳನೊಂದಿಗೆ ಕಾಡಿಗೆ ಹೊರಡುತ್ತಾಳೆ. ದಾರಿಯಲ್ಲಿ ನಳ ತನಗೊದಗಿ ಬಂದ ದುರಾವಸ್ಥೆ ಕಂಡು ಮರುಗುತ್ತಾನೆ. ಸಹಧರ್ಮಿಣಿಗೆ ತವರು ಮನೆಗೆ ತೆರಳಿ ಸುಖವಾಗಿರಲು ಪರಿಪರಿಯಾಗಿ ತಿಳಿಯಪಡಿಸುತ್ತಾನೆ. ಸದಾ ಪತಿಯ ಭಕ್ತಿಯಲ್ಲಿರುವ ದಮಯಂತಿ ಅದಕ್ಕೊಪ್ಪದೆ, ಕಷ್ಟ ಕಾರ್ಪಣ್ಯಗಳನ್ನೆದುರಿಸುತ್ತಾ ಅರಣ್ಯದಲ್ಲಿ ಪತಿಯೊಂದಿಗೆ ಸಾಗುತ್ತಿರುತ್ತಾಳೆ. ಕಾನನದಲ್ಲಿ ಜಗನ್ಮೋಹನ ಪಕ್ಷಿಗಳು ನಳನ ಮನಸೆಳೆಯುತ್ತವೆ. ಅವುಗಳನ್ನು ಹಿಡಿಯಲು ತನ್ನ ಮೈಮೇಲಿನ ಪಂಜೆಯನ್ನು ಬೀಸಲು ಅದನ್ನು ಎತ್ತಿಕೊಂಡು ನಭಕ್ಕೆ ಹಾರಿಹೋಗುತ್ತವೆ. ಆಗ ನಳನು ಲಜ್ಜೆಯಳಿದು ಹೆಂಡತಿ ಹರಿದುಕೊಟ್ಟ ಸೀರೆಯನ್ನು ಧರಿಸಿಕೊಂಡು ಸಾಗುತ್ತಿರುತ್ತಾನೆ. ಅತ್ತ ಸೂರ್ಯ ಒಡಲು ಸೇರುತ್ತಾನೆ. ಕನಕದಾಸರು ಈ ಪ್ರಸಂಗವನ್ನು ಬಹು ಕರುಣಾಜನಕವಾಗಿ ಚಿತ್ರಿಸಿದ್ದಾರೆ.

ಆಗ ರಾತ್ರಿಯ ಸಮಯವಾಗಿರುತ್ತದೆ ಕಾಡಿನಲ್ಲಿ ಅಲೆದು ದಣಿವಾದುದರಿಂದ ದಮಯಂತಿ ಬೇಗ ನಿದ್ರೆ ಹೋಗುತ್ತಾಳೆ. ಇದೇ ಸ್ಥಿತಿಯಲ್ಲಿ ಇವಳನ್ನು ಬಿಟ್ಟು ಹೋದರೆ ತವರು ಮನೆಗೆ ಹೋಗಬಹುದೆಂದು ಭಾವಿಸಿ ಅವಳನ್ನು ಘೋರಾರಣ್ಯದಲ್ಲಿ ಬಿಟ್ಟು ಮುಂದೆ ಹೋಗುತ್ತಾನೆ. ಅಲ್ಲಿ ಕಾಡ್ಗಿಚ್ಚಿಗೆ ಬಲಿಯಾಗಿ ಸರ್ಪವೊಂದು ನರಳುತ್ತಿರುವುದನ್ನು ಕಂಡು ನಳನು ಅದನ್ನು ಪಾರುಮಾಡಲು ಹೋಗುತ್ತಾನೆ. ಅದು ಅವನನ್ನೇ ಕಚ್ಚಲು ನಳನ ರೂಪ ವಿಕಾರವಾಗುತ್ತದೆ.

ದೊಡ್ಡ ಹೊಟ್ಟೆಯ ಗೂನು ಬೆನ್ನಿನ
ಅಡ್ಡ ಮೋರೆಯ ಗಂಟು ಮೂಗಿನ
ದೊಡ್ಡ ಕೈಕಾಲುಗಳ ಉದರಿ ರೋಮಮೀಸೆಗಳ
ಜಡ್ಡು ದೇಹದ ಗುಜ್ಜ ಗೊರಲಿನ
ಗಿಡ್ಡ ರೂಪಿನ ಹರಕು ಗಡ್ಡದ
ಹೆಡ್ಡನಾದ ಕುರೂಪಿತನದಲಿ ನೃಪತಿ ವಿಷದಲಿ

ಈ ತೆರನಾದ ದೇಹವನ್ನು ಹೊತ್ತು, ಆ ಕಾರ್ಕೋಟಕನ ಸೂಚನೆಯಂತೆ ನಳ ಮುಂದೆ ಅಯೋಧ್ಯೆಗೆ ಹೋಗಿ ಅಲ್ಲಿಯ ಅರಸನಾದ ಋತುಪರ್ಣ ರಾಜನಲ್ಲಿ ಬಾಹುಕನೆಂಬ ಹೆಸರಿನಿಂದ ಸಾರಥಿಯಾಗಿ ಜೀವನ ಕಳೆಯಲು ನಿರತನಾಗುತ್ತಾನೆ. ತನ್ನ ಸಾಮರ್ಥ್ಯದ ಬಲದಿಂದ ರಾಜನ ಪ್ರೀತಿಗೆ ಪಾತ್ರನಾಗಿ ಇಬ್ಬರು ತುಂಬಾ ಹತ್ತಿರವಾಗುತ್ತಾರೆ. ಇತ್ತ ದಮಯಂತಿ ಎಚ್ಚರಗೊಂಡು ಪತಿಯನ್ನು ಕಾಣದೆ,

ಕಾಣಿರೇ ಅರಸಂಚೆಗಳೆ ನೀವ್
ಕಾಣಿರೇ ನಿಜಪತಿಯ ಶುಕ ಪಿಕ
ಕಾಣಿರೇ ಮೃಗ ಪಕ್ಷಿಗಳೆ ನಳಚಕ್ರವರ್ತಿಯನು
ಕಾಣಿರೇ ತರುಲತೆಗಳಿನಿಯನ
ಕಾಣಿರೇ ನಿವೆಂದು ಶೋಕದೊ
ಳೇಣ ಲೋಚನೆ ಹಲುಬಿದಳು ಹಲವಂಗದಲಿ ಪತಿಯ

ಎಂದು ಹೀಗೆ ನಾನಾ ರೀತಿಯಲ್ಲಿ ಪರಿತಪಿಸುತ್ತಾಳೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಘೋರ ಸರ್ಪವು ವಿಷಕಾರುತ್ತ ಬಂದು ಚಂದ್ರನನ್ನು ರಾಹುನುಂಗುವಂತೆ ಅವಳನ್ನು ನುಂಗತೊಡಗುವುದು. ಆಗ ಅವಳ ಮೊರೆಯನ್ನು ಕೇಳಿದ ಬೇಡನು ಹಾವನ್ನು ಹತಮಾಡಿ ಕಾಪಾಡುತ್ತಾನೆ. ಸಾವಿನ ದವಡೆಯಿಂದುಳಿಸಿದ ಬೇಡನು ದಮಯಂತಿಯಲ್ಲಿ ಮೋಹಪರವಶನಾದಾಗ.

ಇಂದೆನಗೆ ಅಸುವಿತ್ತು ಸಲಹಿದ
ತಂದೆಯಲ್ಲವೆ ನೀನು ಕೇಳು ಪು
ಳಿಂದ ಮುಳಿದರೆ ಶಪಿಸುವೆನು ಹೋಗೆಂದಳಿಂದು ಮುಖಿ

ದಮಯಂತಿಯಾಡಿದ ಮಾತು ಕೇಳಿ ಬೇಡನು ಹೊರಟುಹೋದನು. ಇಲ್ಲಿ ದಮಯಂತಿ ಭಾರತೀಯ ಸಂಸ್ಕೃತಿಯ ನಾರಿಯಾಗಿ ಗೋಚರಿಸಿದ್ದಾಳೆ. ಮುಂದೆ ದಮಯಂತಿ ವರ್ತಕರ ಸಹಾಯದಿಂದ ಚೇದಿನಗರವನ್ನು ಪ್ರವೇಶಿಸುತ್ತಾಳೆ. ಅಲ್ಲಿಯ ಅರಸನ ಮಗಳಾದ ಸುನೀತಿಯಲ್ಲಿ ಸೈರಂದ್ರಿತನವನ್ನು ವಹಿಸಿಕೊಂಡು ಜೀವನ ಹೊರೆಯುತ್ತಾಳೆ. ಚೇದಿರಾಜನ ಮಡದಿ ದಮಯಂತಿಯನ್ನು ಸ್ವಂತ ಮಗಳಂತೆ ಕಂಡರೂ, ದಮಯಂತಿಯ ಮನಸ್ಸು ಸದಾ ನಳನ ಧ್ಯಾನದಲ್ಲಿರುತ್ತದೆ. ಚಿಂತೆಯಲ್ಲಿ ಸೊರಗಿ ಕೋಲಿನಂತೆ ತೆಳುವಾಗಿ (ಸೊರಗಿ) ಕಡೆಗೂ ತಂದೆಯ ಮನೆ ಸೇರುತ್ತಾಳೆ. ತಂದೆಯ ಅರಮನೆಯಲ್ಲಿದ್ದರೂ ಅವಳಿಗೆ ನಳನಲ್ಲಿದ್ದ ಪ್ರೀತಿ ವಾತ್ಸಲ್ಯ ಕಡಿಮೆಯಾಗಲಿಲ್ಲ. ಆಹಾರ, ನಿದ್ರೆ ತೊರೆದು ಚಿಂತಿಸತೊಡಗಿದಾಗ, ಮಗಳ ಅವ್ಯವಸ್ಥೆಯನ್ನು ಕಂಡು ಭೀಮನೃಪಾಲನೂ ಚಿಂತೆಗೀಡಾಗಿ, ಭಟರಿಂದ ನಾಡಿನಲ್ಲೆಲ್ಲಾ ಹುಡುಕಿಸುತ್ತಾನೆ. ಇದರಿಂದ ನಳನು ಋತುಪರ್ಣ ಅರಸನಲ್ಲಿ ಸಾರಥಿಯಾಗಿರುವನೆಂಬ ಸಂಗತಿಯನ್ನು ದೇಶಭಟರ ಹಾಗೂ ಬ್ರಾಹ್ಮಣರ ಮೂಲಕ ರಾಜನು ಅರಿತುಕೊಳ್ಳುತ್ತಾನೆ. ಅವನನ್ನು ಕರೆಯಿಸುವ ಉಪಾಯವಾಗಿ ಮಗಳಲ್ಲಿ ನಿವೇಧಿಸಿಕೊಂಡು ಮರುಸ್ವಯಂವರವನ್ನು ಏರ್ಪಡಿಸುತ್ತಾನೆ. ದಮಯಂತಿಯ ಸ್ವಯಂವರದ ಸುದ್ದಿ ಅರಿತು ಋತುಪರ್ಣರಾಜ ತನ್ನ ಸಾರಥಿಯಾದ ಬಾಹುಕನನ್ನು (ಅಲ್ಲಿ ನಳನಿಗೆ ಬಾಹುಕನೆಂಬ ಹೆಸರು ಇರುತ್ತದೆ) ಕರೆಯಿಸಿ ರಥವನ್ನು ಸಿದ್ಧಗೊಳಿಸಲು ತಿಳಿಸುತ್ತಾನೆ. ಈ ಸುದ್ದಿ ಕೇಳಿದ ನಳನು ಒಳಗೊಳಗೆ ಮರುಗುತ್ತ ರಥವನ್ನು ಸಿದ್ಧಮಾಡುತ್ತಾನೆ.

ಅರಸನಾಜ್ಞೆಯಂತೆ ನಳನು ರಥವನ್ನು ವಾಯು ವೇಗದಲ್ಲಿ ಹಾರಿಸತೊಡಗಿದನು. ದಾರಿಯನ್ನು ಸಾಗುವಾಗ ಋತುಪರ್ಣನಿಗೆ ತಾನು ಅರಿತ ಅಕ್ಷ ಹೃದಯವನ್ನು ತಿಳಿಸಿಕೊಡುತ್ತಾನೆ. ರಾಜ ನಳನಿಂದ ಅಶ್ವ ಹೃದಯದ ರಹಸ್ಯವನ್ನು ಅರಿಯುತ್ತಾನೆ. ಅಷ್ಟರಲ್ಲಿ ವಿದರ್ಭ ನಗರವನ್ನು ಪ್ರವೇಶಿಸುತ್ತಾರೆ. ಆದರೆ ಅಲ್ಲಿ ಸಂಭ್ರಮದ ವಾತಾವರಣವಿರಲಿಲ್ಲ. ರಾಜನೊಡನೆ ಬಂದ ಬಾಹುಕ ನಳನೋ? ಬೇರಾರೋ? ಎಂಬ ಸಂಶಯ ದಮಯಂತಿಯ ಮನದಲ್ಲಿ ಮೂಡಿತು. ಅವನನ್ನು ಪರೀಕ್ಷಿಸಲು ಹಲವು ಉಪಾಯಗಳನ್ನು ಹೂಡುತ್ತಾಳೆ. ಆತನ ರೀತಿ-ನೀತಿಗಳನ್ನು, ಪಾಕಶಾಸ್ತ್ರದ ಬಗ್ಗೆ, ಪರೋಕ್ಷ ಮತ್ತು ಪ್ರತ್ಯಕ್ಷವಾಗಿ ಪರೀಕ್ಷೆಮಾಡಿ ನಳನೇ ಇರಬಹುದೆಂದು ಊಹಿಸುತ್ತಾಳೆ. ತನ್ನ ಮಕ್ಕಳನ್ನು ದಮಯಂತಿ ಆ ಬಾಹುಕನಲ್ಲಿ ಕಳುಹಿಸುತ್ತಾಳೆ. ಆ ಮಕ್ಕಳನ್ನು ಎತ್ತಿಕೊಂಡು ಮುದ್ದಾಡಿ ಅಕ್ಕರೆಗರಿಯುವುದನ್ನು ಕಂಡು ಈತನೇ ನಳನೆಂದು ದಮಯಂತಿಯು ತಿಳಿದು, ಆ ಸಂತೋಷದ ಕ್ಷಣದಲ್ಲಿ ಕಂಬನಿ ಮಿಡಿಯುತ್ತಾಳೆ. ತದನಂತರ ತಂದೆ-ತಾಯಿಗಳಿಗೆ ತಿಳಿಸಿ, ನಳನನ್ನು ಅಂತಃಪುರಕ್ಕೆ ಕರೆಯಿಸಿಕೊಂಡು ಮರು ಸ್ವಯಂವರ ಏರ್ಪಡಿಸಿ ಮಾಡಿದ ತನ್ನ ತಪ್ಪನ್ನು ಮನ್ನಿಸುವಂತೆ ಕೇಳಿಕೊಳ್ಳುತ್ತಾಳಲ್ಲದೆ ತನ್ನನ್ನು ಕಾಪಾಡಬೇಕೆಂದು ಮೊರೆ ಹೋಗುತ್ತಾಳೆ. ಹಲವು ದಿನಗಳ ನಂತರ ನಳ-ದಮಯಂತಿಯರ ಸಮಾಗಮವಾಗುತ್ತದೆ. ಕಾರ್ಕೊಟಿಕನ ಸಲಹೆಯಂತೆ ನಳ ಜಗನ್ಮೋಹನ ಪಕ್ಷಿಗಳನ್ನು ನೆನೆಯಲು ಅವನ ಉಡುಗೆಗಳು ಮರಳಿ ಬಂದು ವಿಕಾರರೂಪ ಮಾಯವಾಗಿ, ಮೋಹಕ ಕಾಂತಿಯುತ ಶರೀರಧಾರಿಯಾಗಿ ಶೋಭಿಸತೊಡಗುವನು. ಈ ಸಂತೋಷದ ಸಂದರ್ಭದಲ್ಲಿ ಮಂಗಳ ವಾದ್ಯಗಳು ಮೊಳಗಿದವು. ದೇವ-ದೇವಾಂಗನೆಯರು ಮಂಗಳಾಕ್ಷತೆ ಹಾಕಿ ಹರಸುತ್ತಾರೆ. ಭೀಮನೃಪಾಲರಿಂದ ಬೀಳ್ಕೊಂಡ ಸತಿ-ಪತಿಗಳು ಮರಳಿ ತಮ್ಮ ರಾಜ್ಯ ಸೇರುತ್ತಾರೆ. ಕಳೆದು ಹೋದ ರಾಜ ವೈಭೋಗವನ್ನು ಪುಷ್ಕರನಿಂದ ಮರಳಿ ಪಡೆಯುತ್ತಾನೆ. ಕಲಿಪುರಷ ನಳನ ಸತ್ಯನಿಷ್ಠೆಯನ್ನು ನೋಡಿ ಹೊರಟು ಹೋಗುತ್ತಾನೆ. ಅನೇಕ ರೀತಿಯಲ್ಲಿ ಪರಿಪರಿಯಾಗಿ ಕಷ್ಟ-ಕಾರ್ಪಣ್ಯಗಳನ್ನು ಅನುಭವಿಸಿಯೂ ತಮ್ಮಿಂದ ಕಳೆದುಕೊಂಡು ಹೋಗಿದ್ದ ಸುಖ-ಸಾಮ್ರಾಜ್ಯವನ್ನು ಪಡೆಯುವಲ್ಲಿ ದಂಪತಿಗಳಿಬ್ಬರೂ ತೆಗೆದುಕೊಂಡ ಸಂಯಮ ಅನನ್ಯವಾಗಿದೆ. ಸತಿ-ಪತಿಗಳಿಬ್ಬರೊಂದಾಗಿ ಸುಖವನ್ನು ಪಡೆದು ಭಗವಂತನ ಕೃಪೆಗೆ ಪಾತ್ರರಾಗಿರುವ ಚಿತ್ರಣ ಕನಕದಾಸರ ಕುಂಚದಲ್ಲಿ ಬಹು ವಿಶಿಷ್ಟವಾಗಿ ಅರಳಿದೆ. ರೋಮಶ ಮಹಾ ಮುನಿಗಳು ಈ ರೀತಿಯಾಗಿ ಕಥೆ ಹೇಳಿ ಧರ್ಮರಾಜನ ಮನಸ್ಸಿನ ಉದ್ವಿಘ್ನತೆಯನ್ನು ನಿವಾರಿಸಿದ್ದಾರೆ. ‘ನಳಚರಿತ್ರೆ’ ಜನ-ಮನದ ಕದ ತಟ್ಟುವಂತೆ ಮಾಡುವಲ್ಲಿ ಕನಕದಾಸರು ಯಶಸ್ಸನ್ನು ಸಾಧಿಸಿದ್ದಾರೆ.

ನಳಚರಿತ್ರೆಯಲ್ಲಿ ಪ್ರಮುಖವಾಗಿ ಬರುವ ಪಾತ್ರಗಳು ಎರಡು. ಇಲ್ಲಿ ಬರುವ ಇತರ ಪಾತ್ರಗಳು ಬೇಸರವನ್ನುಂಟು ಮಾಡುವುದಿಲ್ಲ. ನಳನಿಗಿಂತಲೂ ದಮಯಂತಿಯ ಪಾತ್ರ ಪ್ರಮುಖವಾಗಿದೆ. ಮೇಲ್ನೋಟಕ್ಕೆ ‘ನಳಚರಿತ್ರೆ’ ಎಂದು ಹೆಸರು ಹೊತ್ತು ಬಂದರೂ, ಇದರಲ್ಲಿ ಸ್ತ್ರೀಪರ ಚಿಂತನೆಗೆ ಧಾರಾಳವಾದ ಅವಕಾಶವಿದೆ. ಕನಕದಾಸರು ದಮಯಂತಿ ಪಾತ್ರಕ್ಕೆ ಹೆಚ್ಚಿನ ಮೆರುಗನ್ನು ತಂದಿದ್ದಾರೆ. ಇದರಿಂದ ಕನಕದಾಸರ ಸ್ತ್ರೀಪರ ಕಾಳಜಿಯನ್ನು ಗುರುತಿಸಬಹುದಾಗಿದೆ. ಪಾತ್ರಗಳ ವೈಶಿಷ್ಟ್ಯವೂ ಈ ಕಾವ್ಯ ಜನಪ್ರಿಯವಾಗಲಿಕ್ಕೆ ಕಾರಣವಾಗಿದೆ.

ಮೂಲ ಕಥೆಗೂ ಹಾಗೂ ಪ್ರಸ್ತುತ ಕಾವ್ಯಕ್ಕೂ ಹೋಲಿಸಿದಾಗ ಪಾತ್ರಗಳಲ್ಲಿ ಅಲ್ಲಲ್ಲಿ ವ್ಯತ್ಯಾಸಗಳು ಕಂಡುಬಂದರೂ, ಕಥೆಗೆ ಯಾವುದೇ ರೀತಿಯಾಗಿ ಎರಡು ಬಗೆಯದ ಕನಕದಾಸರು ಜಾಣ್ಮೆಯನ್ನು ಮೆರೆದಿದ್ದಾರೆ.

ದುರ್ಜನರ ಮನೆಯ ಪಾಯಸಾನ್ನಕಿಂತ
ಸಜ್ಜನರ ಮನೆಯ ರಬ್ಬಳಿಗೆ ಲೇಸು
ಹೆಜ್ಜೆಗೆ ಸಾವಿರ ಹೊನ್ನವಿತ್ತರೂ ಬೇಡ- ಬಲು
ದುರ್ಜನರ ಸಂಗ ಬಲು ಭಂಗ ಹರಿಯೆ