ಪುಟಗಳು

ಕೊಲೆಸ್ಟ್ರಾಲ್ ಗೆ ಸೂಪರ್ ಫುಡ್ ಯಾವುದು?

ಎಲ್ಲಿಯವರೆಗೂ ಬೊಜ್ಜಿನ ಸಮಸ್ಯೆ ಇರುತ್ತೋ ಅಲ್ಲಿಯವರೆಗೂ ಅದನ್ನು ಕರಗಿಸುವ ಮಾರ್ಗವೂ ಒಂದೊಂದಾಗಿ ಹುಟ್ಟಿಕೊಳ್ಳುತ್ತಲೇ ಇರುತ್ತೆ. ದಿನ ನಿತ್ಯವೂ ಬೊಜ್ಜನ್ನು ಕರಗಿಸುವ ಹಲವು ವಿಧಾನಗಳನ್ನು ನೀವು ನೋಡುತ್ತಲೇ ಇರ್ತೀರ. ಆದರೆ ಇಲ್ಲೊಂದು ಸರಳ ಮಾರ್ಗವಿದೆ.

ಹಸಿವು ನೀಗಿಸುವುದರೊಂದಿಗೆ ಬೊಜ್ಜನ್ನೂ ನಿಯಂತ್ರಿಸುವ ಕೆಲವು ಸೂಪರ್ ಫುಡ್ ಗಳನ್ನು ಇಲ್ಲಿ ನೀಡಲಾಗಿದೆ. ಈ ಆಹಾರ ದೇಹಕ್ಕೆ ಎರಡು ಪಟ್ಟು ಪ್ರಯೋಜನ ನೀಡುತ್ತೆ ಅನ್ನೋದು ತಜ್ಞರ ಅಭಿಪ್ರಾಯ. ಇವುಗಳು ದೇಹವನ್ನು ಶುದ್ಧೀಕರಣಗೊಳಿಸುವುದರೊಂದಿಗೆ ಅಗತ್ಯ ಶಕ್ತಿಯನ್ನೂ ನೀಡಿ ದೇಹವೂ ಫಿಟ್ ಆಗಿರುವಂತೆ ನೋಡಿಕೊಳ್ಳುತ್ತೆ.

ಫಿಟ್ ಆಗಿರಲು ಅವಶ್ಯಕವಾದ ಆಹಾರ:

1. ಪರಿಶುದ್ಧ ಆಲಿವ್ ಎಣ್ಣೆ: ಪರಿಶುದ್ಧ ಆಲಿವ್ ಎಣ್ಣೆ ಎಂದು ಇಲ್ಲಿ ಒತ್ತಿ ಹೇಳಲಾಗಿದೆ. ಏಕೆಂದರೆ ಸಂಸ್ಕರಿದ ಆಲಿವ್ ಎಣ್ಣೆಯಲ್ಲಿ ದೇಹಕ್ಕೆ ಅಗತ್ಯವಾದ ಒಮೆಗಾ3 ಫ್ಯಾಟಿ ಆಸಿಡ್ ಇರುವುದಿಲ್ಲ. ಆದ್ದರಿಂದ ಅದನ್ನು ಕಚ್ಛಾ ಬಳಸಬೇಕು. ಆಲಿವ್ ಎಣ್ಣೆಯನ್ನು ಬಿಸಿ ಮಾಡಿದರೂ ಅದರಲ್ಲಿನ ಸತ್ವ ಬೇಗನೆ ನಶಿಸಿಹೋಗುತ್ತದೆ. ಆದ್ದರಿಂದ ಹಸಿಯಾದ ಸಲಾಡ್ ನೊಂದಿಗೆ ಎಣ್ಣೆಯನ್ನು ಹಾಗೇ ಬೆರೆಸಿ ಸೇವಿಸಿದರೆ ಕೆಟ್ಟ ಬೊಜ್ಜನ್ನು ಬೇಗನೆ ಕಳೆದುಕೊಳ್ಳಬಹುದು.

2. ದುಂಡು ಮೆಣಸಿನ ಕಾಯಿ ಅಥವಾ ಕ್ಯಾಪ್ಸಿಕಂ: ಕ್ಯಾಪ್ಸಿಕಂನಿಂದ ಅನೇಕ ಉಪಯೋಗವಿದೆ. ಕ್ಯಾಪ್ಸಿಕಂನಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುವ ವಿಶೇಷ ಗುಣವಿರುವುದರೊಂದಿಗೆ ಇದರಲ್ಲಿರುವ ಹೇರಳ ಆಂಡಿಯಾಕ್ಸಿಡಂಟ್ ಬೇಗನೆ ಸುಕ್ಕು ಮೂಡುವುದನ್ನು ತಡೆಯುತ್ತದೆ. ಅದರಲ್ಲೂ ಕೆಂಪು ಮತ್ತು ಹಳದಿ ಕ್ಯಾಪ್ಸಿಕಂ ನಲ್ಲಿ ಹೆಚ್ಚು ಪೋಷಕಾಂಶವಿದೆ.

3. ಬಾದಾಮಿ: ಬಾದಾಮಿಯನ್ನು ಈ ಸೂಪರ್ ಫುಡ್ ಪಟ್ಟಿಗೆ ಇತ್ತೀಚೆಗಷ್ಟೆ ಸೇರಿಸಲಾಗಿದೆ. ಬಾದಾಮಿಯಲ್ಲಿ ಹೇರಳ ಪೋಷಕಾಂಶವಿರುವುದರಿಂದ ಪ್ರಾಮುಖ್ಯತೆ ಪಡೆದುಕೊಂಡಿದೆ. ಬಾದಾಮಿಯನ್ನು ನೀರಿನಲ್ಲಿ ನೆನೆಸಿ ಬೆಳಗ್ಗೆ ಹೊತ್ತು ತಿಂದರೆ ದಿನವಿಡೀ ಚೈತನ್ಯದಿಂದಿರಲು ಹೆಚ್ಚು ಶಕ್ತಿಯನ್ನು ದೇಹಕ್ಕೆ ಒದಗಿಸುತ್ತೆ.

4. ದ್ರಾಕ್ಷಿ: ಯಾವುದೇ ರೀತಿಯ, ಬಣ್ಣದ ದ್ರಾಕ್ಷಿ ಬೊಜ್ಜು ಕರಗಿಸುವುದಕ್ಕೆ ಉತ್ತಮ ಮಾರ್ಗ. ಅದರಲ್ಲೂ ಕಪ್ಪು ದ್ರಾಕ್ಷಿಯಲ್ಲಿ ಹೆಚ್ಚು ಪೋಷಕಾಂಶವಿದೆ. ಬೆರಿಗಳಲ್ಲಿ ಒಂದಾಗಿರುವ ಸ್ಟ್ರಾಬೆರಿಯಲ್ಲಿ ವಿಟಮಿನ್ ಸಿ ಮತ್ತು ಆಂಟಿಯಾಕ್ಸಿಡಂಟ್ ಮತ್ತು ಫೋಟೊಕೆಮಿಕಲ್ಸ್ ಬೊಜ್ಜು ಕರಗಿಸಿ ದೇಹವನ್ನು ಸ್ಲಿಮ್ ಮಾಡುತ್ತದೆ.

5. ಹಸಿರು ತರಕಾರಿ: ಎಲ್ಲಕ್ಕಿಂತ ಹೆಚ್ಚು ಪೋಷಕಾಂಶ ನೀಡುವುದರಲ್ಲಿ ತರಕಾರಿಯದ್ದು ಮೇಲುಗೈ. ತರಕಾರಿಗಳಲ್ಲಿ ವಿಟಮಿನ್ ಎ, ಕೆ, ಫೊಲೆಟ್ ಹಾಗೂ ಆಂಟಿಯಾಕ್ಸಿಡಂಟ್ ಹೇರಳವಾಗಿರುತ್ತೆ. ತರಕಾರಿ ಸೇವನೆ ಎಲ್ಲ ರೀತಿಯಿಂದಲೂ ಒಳ್ಳೆಯದು. ರಕ್ತ, ತ್ವಚೆ, ಕೂದಲು ಮತ್ತು ತಾರುಣ್ಯ ಎಲ್ಲವೂ ತರಕಾರಿಗಳ ಮೇಲೆ ಅವಲಂಬಿತವಾಗಿದೆ.

ಸಿಕ್ಸ್ ಪ್ಯಾಕ್ ಪಡೆಯಲು ಬೇಕು ನಾಲ್ಕು ಪೋಷಕಾಂಶ



ಗಟ್ಟಿಮುಟ್ಟಾದ ಶರೀರವನ್ನು ನೋಡಿದಾಗ ಅದು ಜಿಮ್ ಬಾಡಿ ಎಂದು ಗೊತ್ತಾಗುತ್ತೆ. ದೈಹಿಕವಾಗಿ ಕಠಿಣ ಪರಿಶ್ರಮವನ್ನು ಹೊಂದಿರುವವರು ಕೂಡ ಗಟ್ಟಿಮುಟ್ಟಾದ ಶರೀರವನ್ನು ಹೊಂದಿರುತ್ತಾರೆ.

ಗಟ್ಟಿಮುಟ್ಟಾದ ಶರೀರಕ್ಕೆ ಜಿಮ್ ಮಾತ್ರ ಸಾಲದು ಅದಕ್ಕೆ ತಕ್ಕದಾದ ಆಹಾರಕ್ರಮ ಹೊಂದಿರಬೇಕು. ಸ್ನಾಯುಗಳು ಬಲವಾಗಲು
ಈ ಕೆಳಗಿನ ಪೋಷಕಾಂಶವಿರುವ ಅಹಾರವನ್ನು ಕಡ್ಡಾಯವಾಗಿ ಸೇವಿಸಬೇಕು.

1. ಪ್ರೊಟೀನ್: ಅಮೈನೊ ಅಸಿಡ್ ಇರುವ ಆಹಾರದಲ್ಲಿ ಹೆಚ್ಚು ಪ್ರೊಟೀನ್ ಅಂಶವಿರುತ್ತದೆ. ಇದು ದೇಹದ ಬೆಳವಣಿಗೆಗೆ ಮತ್ತು ದೇಹದ ಭಾಗಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗಿದೆ. ಬೀನ್ಸ್, ಬಾದಾಮಿ, ಪಾಲಾಕ್ ಸೊಪ್ಪು, ಮೀನು, ಮಾಂಸ, ಕಾರ್ಬೋಹೈಡ್ರೇಟ್ ಇರುವ ಆಹಾರಗಳಲ್ಲಿ ಅಧಿಕ ಪ್ರೊಟೀನ್ ಇರುತ್ತದೆ.

2. ವಿಟಮಿನ್:
ಖನಿಜಾಂಶವಿರುವ ಆಹಾರಗಳ ಸೇವನೆ ದೇಹದಲ್ಲಿ ಸ್ನಾಯುಗಳನ್ನು ಬಲಪಡಿಸುತ್ತದೆ. ಮೊಟ್ಟೆ. ಅಣಬೆ, ಈರುಳ್ಳಿ, ಮಾಂಸ, ಟರ್ಕಿ ಕೋಳಿಯ ಲಿವರ್, ಸಿಹಿಗೆಣಸು, ಪಾಲಾಕ್, ಬ್ರೊಕೊಲಿಗಳಲ್ಲಿರುವ ವಿಟಮಿನ್ ಗಳು ದೇಹದ ಆರೋಗ್ಯವನ್ನು ಹೆಚ್ಚಿಸುತ್ತದೆ.

3. ಕಾರ್ಬೋಹೈಡ್ರೇಟ್:
ಸರಿಯಾದ ಪ್ರಮಾಣವನ್ನು ತೂಕವನ್ನು ಹೊಂದಿರಬೇಕೆಂದರೆ ಕಾರ್ಬೋಹೈಡ್ರೇಟ್ ಮತ್ತು ಒಳ್ಳೆಯ ಕೊಬ್ಬಿನಂಶ (ಒಮೆಗಾ ಕೊಬ್ಬು) ಆಹಾರದಲ್ಲಿ ಇರಬೇಕು. ಒಮೆಗಾ3 ಕೊಬ್ಬಿನಂಶ ಮೀನಿನಲ್ಲಿ ಹೆಚ್ಚಾಗಿ ಇರುತ್ತದೆ. ಇದು ದೇಹದವನ್ನು ಫಿಟ್ ಆಗಿಡಲು ಸಹಾಯ ಮಾಡುತ್ತದೆ. ಅಕ್ಕಿ, ಬಾರ್ಲಿ, ಜೋಳ, ಓಟ್ ಮೀಲ್, ಪೈನಾಪಲ್, ಸ್ಟ್ರಾಬರಿ, ಕರ್ಜೂರಗಳಲ್ಲಿ ಅಧಿಕ ಕಾರ್ಬೋಹೈಡ್ರೇಟ್ ಇರುತ್ತದೆ.

4. ಗ್ಲುಟಾಮೈನ್:
ಎಲುಬು ಮತ್ತು ಸ್ನಾಯುಗಳನ್ನು ಬಲವಾಗಿಡಲು ಗ್ಲುಟಾಮೈನ್ ಅವಶ್ಯಕ. ಗ್ಲುಟಾಮೈನ್ ಒತ್ತಡವನ್ನು ಕಡಿಮೆ ಮಾಡುತ್ತದೆ. ಈ ಗ್ಲುಟಾಮಿನ್ ಎಲೆಕೋಸು, ಹಾಲಿನ ಉತ್ಪನ್ನಗಳಲ್ಲಿ, ಚಿಕ್ಕನ್, ಹಂದಿ ಮಾಂಸ ಮತ್ತು ಮೀನಿನಲ್ಲಿ ಹೆಚ್ಚಾಗಿ ಇರುತ್ತದೆ.

ಇಷ್ಟಲ್ಲದೆ ದಿನವೂ ಒಂದು ಲೀಟರ್ ನೀರನ್ನು ಕುಡಿಯಬೇಕು, ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಹೀಗೆ ಮಾಡಿದರೆ ನೀವು ಬಯಸಿದಂತಹ ಸದೃಢವಾದ ಮೈಕಟ್ಟನ್ನು ಪಡೆಯಬಹುದು.

ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ



Lalbagh Flower Show 2012 
ಈ ವಾರ ಲಾಲ್ ಬಾಗ್ ಎಂದಿನಂತಿಲ್ಲ. ಸಸ್ಯಕಾಶಿಯ ಹೂದೋಟದ ಹೂವುಗಳು ಪುಳಕಗೊಂಡಿವೆ. ದೇವದಾರು, ತೇಗ, ಸಾಗುವಾನಿ, ಮಾವು, ನೀಲಗಿರಿ ಮರಗಳು ಗಾಜಿನ ಮನೆಯತ್ತ ಕಣ್ಣು ನೆಟ್ಟಿವೆ. ಈಗಷ್ಟೇ ಚಿಗುರಿದ ಎಲೆಚಿಗುರುಗಳು ಅಚ್ಚರಿಯ ನೋಟ ಬೀರುತ್ತಿವೆ. ಲಾಲ್ ಬಾಗ್ ಗಣರಾಜ್ಯದ ಸಂಭ್ರಮದಲ್ಲಿದೆ. ಗಾಜಿನ ಮನೆ ಫಲಪುಷ್ಪ ಅಲಂಕಾರ, ಆವಿಷ್ಕಾರಗಳಿಂದ ಮದುವಣಗಿತ್ತಿಯಂತೆ ಪೋಸ್ ನೀಡುತ್ತಿದೆ. ಲಾಲ್ ಬಾಗ್ ನೊಳಗೆ ಜಾತ್ರೆಯ ಗೌಜುಗದ್ದಲ ಕೇಳಿಬರುತ್ತಿದೆ.

ಭಾನುವಾರ (ಜ.22) ಡಬಲ್ ರೋಡ್, ಜಯನಗರ ಬಳಿ ದಿನನಿತ್ಯ ನೋಡುತ್ತಿದ್ದ ಟ್ರಾಫಿಕ್ ಪೊಲೀಸರು ಲಾಲ್ ಬಾಗ್ ಒಳಗಡೆ ವಾಹನ ಪಾರ್ಕಿಂಗ್ ಮಾಡಿಸುವಲ್ಲಿ ಬ್ಯುಸಿಯಾಗಿದ್ದರು. ಹೆಚ್ಚಿನ ಬೆಂಗಳೂರಿಗರೂ ಎಲ್ಲಾ ಕೆಲಸ ಕಾರ್ಯಕ್ರಮವನ್ನು ಬಿಟ್ಟು ಲಾಲ್ ಬಾಗ್ ಫಲಪುಷ್ಪ ಸೊಬಗು ನೋಡಲು ಆಗಮಿಸಿದ್ದರು. ಗಾಜಿನ ಮನೆಯ ಹೊರಭಾಗದಲ್ಲಿ ಚೆಂಡು ಹೂವುಗಳು, ಬಣ್ಣ ಬಣ್ಣದ ಬಗೆಬಗೆ ಜಾತಿ ಹೂವುಗಳು ನಗೆ ಬೀರುತ್ತಿದ್ದವು.

ಸಸ್ಯಕಾಶಿಯ ಗಾಜಿನ ಮನೆಯೊಳಗೆ ರಾಶಿರಾಶಿ ಜನರು ಸಾಲು ಸಾಲಾಗಿ ಹೋಗುತ್ತಿದ್ದರು. ಕ್ಯಾಮರಾ, ಪರ್ಸ್, ಮೊಬೈಲ್ ಹುಷಾರಾಗಿ ನೋಡಿಕೊಳ್ಳಿ ಅಂತ ಅನೌನ್ಸ್ ಕೇಳಿಬರುತ್ತಿತ್ತು. ಪೊಲೀಸರಂತೂ ಹೂವುಗಳನ್ನು ಕಾಯುವುದರಲ್ಲಿ ಸುಸ್ತಾಗಿದ್ದರು. ಪಕ್ಕಕ್ಕೆ ಬರ್ರಿ, ಹೂಹಾಸಿಗೆ ತುಳಿಯಬೇಡ್ರಿ, ಫೋಟೊ ತೆಗಿತಾ ನಿಲ್ ಬ್ಯಾಡ್ರಿ.. ಮುಂದೆ ಹೋಗ್ರಿ" ಅಂತ ಬೊಬ್ಬೆಗಳು ಕೇಳಿಬರುತ್ತಿದ್ದವು. ದುಂಬಿಗಳಂತೆ ಹೂವಿನ ಮನೆಯ ಸುತ್ತ ಜನಸಾಗರ ಮುತ್ತಿತ್ತು.

"ಬುದ್ಧನ ಪ್ರತಿಮೆ ಮತ್ತು ಗುಹೆಯಿಂದ ನೀರು ಬೀಳುವಂತೆ ಹೂ ನದಿ ವಿನ್ಯಾಸ ಮಾಡಿದ್ದು ತುಂಬಾ ಇಷ್ಟವಾಯಿತು" ಎಂದು ಮುನೇಶ್ವರ ಬ್ಲಾಕಿನ ಕೃಷ್ಣಕುಮಾರಿ ಹೇಳಿದಾಗ ಅವರ ಪಕ್ಕದಲ್ಲಿದ್ದ 15 ವರ್ಷದ ನೇತ್ರ "ಕಳೆದ ವರ್ಷದ ಪ್ರದರ್ಶನಕ್ಕಿಂತಲೂ ಸೂಪರ್" ಎಂಬ ಕಾಂಪ್ಲಿಮೆಂಟ್ ಕೊಟ್ಟಳು. "ರಷ್ ನಲ್ಲಿ ಒಮ್ಮೆ ಹಾಗೆ ಹೋಗಿ ಬಂದೆ. ಈಗ ಎರಡನೇ ಸಾರಿ ಗಾಜಿನ ಮನೆಗೆ ಪ್ರವೇಶಿಸುತ್ತಿದ್ದೇನೆ" ಎಂದು ಕಾಕ್ಸ್ ಟೌನ್ ನಿವಾಸಿ ನಬಿಹಾ ಹೇಳಿದ್ದು ಸುಳ್ಳಲ್ಲ. ಅಲ್ಲಿನ ರಷ್, ತಳ್ಳಾಟ ನೋಡಿ ಶಾಂತಮೂರ್ತಿ ಹೂವಿನ ಬುದ್ಧನಿಗೂ ಕಸಿವಿಸಿಯಾಗಿದ್ದಿರಬಹುದು.

ಹೆಚ್ಚು ಗಮನ ಸೆಳೆಯುತ್ತಿದ್ದದ್ದು ದಕ್ಷಿಣ ಕೊರಿಯಾ ಮಾದರಿಯ 30 ಅಡಿ ಎತ್ತರದ ಬುದ್ಧ ಸ್ತೂಪ ಮತ್ತು ಹೂನದಿ. 50 ಲಕ್ಷ ಗುಲಾಬಿ, 1.50 ಲಕ್ಷ ಕಾರ್ನೇಷನ್, 25 ಸಾವಿರ ಆರ್ಕಿಡ್ಸ್ ಹೂವು ಗೊಂಚಲು, ಡ್ರಸಿನಾ, ಲೆದರ್ ಲೀಫ್, ಮೈಸೂರು ಮಲ್ಲಿಗೆ, ಸುಗಂಧ ರಾಜ ಹೀಗೆ ನಾನಾ ಬಗೆಯ ಹೂವುಗಳಿಂದ ನಿರ್ಮಿಸಲಾಗಿದೆ. ಹೂ ನದಿ ಕೂಡ ಪ್ರಮುಖ ಆಕರ್ಷಣೆ. ಗುಹೆ ಆಕಾರದ ಹೂವಿನ ವಿನ್ಯಾಸದಿಂದ ನೀರು ಹರಿದು ಬರುವಂತೆ ವಿನ್ಯಾಸ ಮಾಡಿದ್ದು ಎಲ್ಲರ ಗಮನಸೆಳೆಯಿತು. ಉಳಿದಂತೆ ಗಾಜಿನ ಮನೆಯ ಮೂಲೆ ಮೂಲೆ ಬಿಡದಂತೆ ಹೂವಿನ ನವಿಲು, ಪಕ್ಷಿಗಳು, ಹೂಗೊಂಚಲುಗಳು, ಚಿತ್ತಾರಗಳು ಆವರಿಸಿದ್ದವು.

ಗಾಜಿನ ಮನೆ ಮಾತ್ರವಲ್ಲದೇ ಹೊರಭಾಗದಲ್ಲಿದ್ದ ಸಾಲು ಸಾಲು ಮಳಿಗೆಗಳಲ್ಲೂ ವ್ಯವಹಾರ ಜೋರಾಗಿತ್ತು. ಚಟ್ನಿಪುಡಿಯಿಂದ ಹಿಡಿದು ಕರಕುಶಲ ವಸ್ತುಗಳು ಲಭಿಸುತ್ತಿದ್ದವು. ಲಾಲ್ ಬಾಗ್ ಕೆರೆಯಲ್ಲಿದ್ದ ಹೂವಿನ ತೆಪ್ಪ ಕೂಡ ಆಕರ್ಷಕ. ನಮಗೆ ಸಿಕ್ಕ ಮಾಹಿತಿ ಪ್ರಕಾರ ಭಾನುವಾರ ಒಂದು ಲಕ್ಷಕ್ಕಿಂತಲೂ ಹೆಚ್ಚು ಜನರು ಲಾಲ್ ಬಾಗ್ ಗೆ ಭೇಟಿ ನೀಡಿದ್ದರು. ಆರಂಭದ ಎರಡು ದಿನಗಳಲ್ಲಿ ಸುಮಾರು 50 ಸಾವಿರ ಜನರು ಭೇಟಿ ನೀಡಿದ್ದಾರಂತೆ.

ಲಾಲ್ ಬಾಗ್ ಫಲಪುಷ್ಪ ಪ್ರದರ್ಶನದ ಟಿಕೇಟ್ ದರ ಒಬ್ಬರಿಗೆ 50 ರುಪಾಯಿ. ತಲಾ ಇಬ್ಬರಿಗೆ 90 ರುಪಾಯಿ. ಈ ಪ್ರದರ್ಶನ ಜನವರಿ 29ಕ್ಕೆ ಕೊನೆಗೊಳ್ಳಲಿದೆ. ಗಣರಾಜ್ಯದಂದು ಮತ್ತು ಕೊನೆಯ ದಿನ ಲಕ್ಷಕ್ಕಿಂತ ಹೆಚ್ಚು ಜನರು ಭೇಟಿ ನೀಡುವ ನಿರೀಕ್ಷೆಯಿದೆ. ಹೂವಿನಲ್ಲಿ ಹುಳಗಳಿರುವಂತೆ ಫಲಪುಷ್ಪ ಪ್ರದರ್ಶನಕ್ಕೆ ಕಿಸೆ ಕಳ್ಳರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರಂತೆ. ಸೇಫ್ ಆಗಿ ಹೋಗಿಬನ್ನಿ. ನೂರು ವರ್ಷದ ಇತಿಹಾಸ ಹೊಂದಿರುವ ಹೂವಿನ ಪ್ರದರ್ಶನ ಮಿಸ್ ಮಾಡಿಕೊಳ್ಳಬೇಡಿ. ಅಲ್ಲಿಗೆ ಹೋಗುವ ಮುನ್ನ ಈ ಗ್ಯಾಲರಿ ಲೋಕಕ್ಕೆ ಭೇಟಿ ನೀಡಿ ಕಣ್ಮನ ತಂಪಾಗಿಸಿಕೊಳ್ಳಿ.

Pink Floyd - Wish You Were Here