ಪುಟಗಳು

'ಅನಂತ' ದೇಗುಲ ನಿಧಿ ಬೆಳಕಿಗೆ ಬರಲು ಕಾರಣವೇನು?


ತಿರುವನಂತಪುರಂ, ಜುಲೈ 3: ಕೇರಳ ರಾಜಧಾನಿ ತಿರುವನಂತಪುರಂನ ಅನಂತ ಪದ್ಮನಾಭಸ್ವಾಮಿ ಸದ್ಯಕ್ಕೆ 1 ಲಕ್ಷ ಕೋಟಿ ರು. ನಷ್ಟು ಶ್ರೀಮಂತ! ಮುಂದೆ ಇನ್ನೂ ಹೆಚ್ಚಾಗಬಹುದು. ಇಷ್ಟಕ್ಕೂ ಶತಮಾನಗಳಿಂದ ಕತ್ತಲೆಯ ಕೋಟೆಯಲ್ಲಿ ಗುಪ್ತವಾಗಿದ್ದ ಈ ನಿಧಿ ಈಗ ಬೆಳಕಿಗೆ ಬರುತ್ತಿರುವುದಕ್ಕೆ ಕಾರಣವಾದರೂ ಏನು ಎಂಬ ಕುತೂಹಲದ ಪ್ರಶ್ನೆಗೆ ಉತ್ತರ ...

ಟಿ.ಪಿ. ಸುಂದರರಾಜನ್ ಎಂಬ ವಕೀಲರು ಈ ದೇವಸ್ಥಾನದ ಆಸ್ತಿ ದುರ್ಬಳಕೆ ಆಗುತ್ತಿದೆ ಎಂದು ಕೋರ್ಟ್ ಮೊರೆಹೋಗಿದ್ದರು. ಆಗ ನೆಲಮಾಳಿಗೆಯನ್ನು ತೆರೆದು ಒಳಗೇನಿದೆಯೋ ಪರಿಶೋಧಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿತು. ಅದರಂತೆ ಈಗ ಶೋಧ ಕಾರ್ಯ ಆರಂಭವಾಗಿದೆ ಎಂದು ಸರಳವಾಗಿ ಹೇಳಬಹುದು.

ಅದಕ್ಕೂ ಮುನ್ನ 2007ರಲ್ಲಿ ಏನಾಗಿತ್ತೆಂದರೆ... ಮಾರ್ತಾಂಡ ವರ್ಮಾ ನೇತೃತ್ವದ ದೇವಸ್ಥಾನದ ಟ್ರಸ್ಟ್ ಸದಸ್ಯರು ನೆಲಮಾಳಿಗೆಯನ್ನು ತೆರೆದು ನಿಧಿಗಳ ಫೋಟೋ ತೆಗೆದು ಆಲ್ಬಂ ತಯಾರಿಸಲು ನಿರ್ಧರಿಸಿದ್ದರು. ಟ್ರಸ್ಟ್ ಸೂಚನೆಯಂತೆ ಗ್ಯಾಸ್ ಕಟ್ಟರ್ ಬಳಸಿ ಶತಮಾನಗಳಿಂದ ಮುಚ್ಚಿಡಲಾದ ನೆಲಮಾಳಿಗೆಯ ಬಾಗಿಲನ್ನು ಒಡೆದು ಸುರಂಗ ಮಾರ್ಗದಲ್ಲಿ ಒಳಗಿನ ಗುಹೆಗೆ ಇಳಿದಾಗ ಯಾವುದೇ ನಿಧಿ ಕಾಣಿಸಿರಲಿಲ್ಲ. ಕೇವಲ ಕಲ್ಲು ಮಣ್ಣು ತುಂಬಿತ್ತು. ಗುಪ್ತ ನಿಧಿ ಅಂಥಹುದೇನೂ ಇಲ್ಲವೆಂದು ಟ್ರಸ್ಟ್ ಸದಸ್ಯರು ಸುಮ್ಮನಾದರು.

ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು. 2007ರ ಆಗಸ್ಟ್ 3ರಂದು ಈ ಕುರಿತು ದೇವಸ್ಥಾನದ ಎಕ್ಸಿಕ್ಯೂಟಿವ್ ಅಧಿಕಾರಿ ಮಾರ್ತಾಂಡ ವರ್ಮಾ ಒಂದು ಸರ್ಕ್ಯುಲರ್ ಹೊರಡಿಸಿ, ಇದೆಲ್ಲ ಟ್ರಸ್ಟ್ ನ ಹಕ್ಕು ಎಂದು ಪ್ರತಿಪಾದಿಸಿದರು. ಆದರೆ ಇದರ ವಿರುದ್ಧ ಸುಂದರರಾಜನ್ ನ್ಯಾಯಾಲಯದಲ್ಲಿ ದಾವೆ ಹೂಡಿದರು. ಆಗ 2007ರ ಡಿಸೆಂಬರ್ ತಿಂಗಳಲ್ಲಿ ಸ್ಥಳೀಯ ನ್ಯಾಯಾಲಯ ಸರ್ಕ್ಯುಲರ್ ಕ್ರಮಕ್ಕೆ ತಡೆಯಾಜ್ಞೆ ನೀಡಿತು.

ಇದರ ವಿರುದ್ಧ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ ಮರ್ತಾಂಡ ವರ್ಮರಿಂದಾಗಿ ಕ್ಷೇತ್ರಾಡಳಿತ ಟ್ರಸ್ಟ್ ಅಧೀನದಲ್ಲೇ ಉಳಿಯಿತು. ಆದರೆ ದೇವಸ್ಥಾನದ ವ್ಯಾಪ್ತಿಯಲ್ಲಿರುವ ನಿಧಿಯ ಗಣತಿ ನಡೆಸುವಂತೆ ಕೋರ್ಟ್ ಆದೇಶಿಸಿತು.

ಸುಪ್ರೀಂಕೋರ್ಟ್ ನಿಯೋಜಿಸಿದ ಆಯೋಗದ ಸದಸ್ಯರು ನೆಲಮಾಳಿಗೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು. ಆ ಸಂದರ್ಭದಲ್ಲಿ ಚಪ್ಪಡಿಯಾಕಾರದ ಕಗ್ಗಲ್ಲನ್ನು ಕಂಡು ಕುತೂಹಲಗೊಂಡ ಸದಸ್ಯರು ಅದನ್ನು ಸರಿಸಿದಾಗ ಕಿರಿದಾದ ಸುರಂಗ ಮಾರ್ಗ ಕಾಣಿಸಿಕೊಂಡಿತು. ಆ ಮಾರ್ಗವಾಗಿ ಇಳಿದುಹೋದಾಗ ಈ ಮಹಾ ಸಂಪತ್ತು ಬೆಳಕಿಗೆ ಬಂದಿದೆ.

ನೆಲಮಾಳಿಗೆಯಲ್ಲಿ ಒಟ್ಟು 6 ಕೊಠಡಿಗಳಿದ್ದು, 20 ಅಡಿಗೂ ಹೆಚ್ಚು ಆಳದಲ್ಲಿ ಸಂತ್ತನ್ನು ಹುದುಗಿಡಿಸಲಾಗಿದೆ. ಎ, ಬಿ, ಸಿ, ಡಿ ಮತ್ತು ಇ ಎಂದು ಕೊಠಡಿಗಳಿಗೆ ನಾಮಕರಣ ಮಾಡಲಾಗಿದೆ. ಇದುವರೆಗೆ ಐದು ಕೊಠಡಿಗಳ ತಲಾಶೆ ನಡೆದಿದೆ. ಜುಲೈ 10ರೊಳಗಾಗಿ ಸಂಪೂರ್ಣ ಶೋಧ ಕಾರ್ಯ ಮುಕ್ತಾಯವಾಗುವ ಅಂದಾಜಿದೆ.

ಈ ಮಧ್ಯೆ, ನೆಲ ಮಾಳಿಗೆಗೆ ಕಾಂಕ್ರೀಟ್ ಮಾಡಲು ತೀರ್ಮಾನಿಸಲಾಗಿದೆ. ಸುರಂಗ ಮಾರ್ಗದ ಮೂಲಕ ಮೇಲಿನ ದೇವಸ್ಥಾನಕ್ಕೆ ಅಪಾಯವಾಗುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ. ಇದರ ಜತೆಗೆ ನೆಲಮಾಳಿಗೆಯೊಳಗೆ ಅತ್ಯಾಧುನಿಕ ಭದ್ರತಾ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚಿಂತನೆ ನಡೆದಿದೆ. ಅಂತಿಮವಾಘಿ ಅಷ್ಟೂ ನಿಧಿನ್ನು ಆಯಾ ನೆಲ ಮಾಳಿಗೆಗಳ ಒಳಗಡೆಯೇ ಸಂರಕ್ಷಿಸಿಡಲು ತೀರ್ಮಾನಿಸಲಾಗಿದೆ

ಶ್ರೀಕೃಷ್ಣದೇವರಾಯನ ನಿಧಿ ಅನಂತಪದ್ಮನಾಭ ದೇವಸ್ಥಾನದಲ್ಲಿ ಪತ್ತೆ!

ತಿರುವನಂತಪುರಂ, ಜುಲೈ 4: ಇಲ್ಲಿನ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಪತ್ತೆಯಾಗಿರುವ ಸುಮಾರು 1 ಲಕ್ಷ ಕೋಟಿ ರುಪಾಯಿಗೂ ಹೆಚ್ಚು ಬೆಲೆಬಾಳುವ ಸಂಪತ್ತಿಗೆ ಹಂಪಿ ವಿಜಯನಗರ ಸಾಮ್ರಾಜ್ಯದ ರಾಜ ಶ್ರೀ ಕೃಷ್ಣದೇವರಾಯನೂ ಕೊಡುಗೆ ಸಲ್ಲಿಸಿದ್ದಾನೆ. ಕೃಷ್ಣದೇವರಾಯನ ಆಡಳಿತ ಕಾಲದ ಚಿನ್ನದ ನಾಣ್ಯಗಳೂ ಇಲ್ಲಿ ಪತ್ತೆಯಾಗಿವೆ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ 'ದಿ ಹಿಂದೂ' ಪತ್ರಿಕೆ ಸೋಮವಾರ ವರದಿ ಮಾಡಿದೆ.

'ಶ್ರೀ ಕೃಷ್ಣದೇವರಾಯ ಆಡಳಿತ ಕಾಲದ ಚಿನ್ನದ ನಾಣ್ಯಗಳೂ ಪತ್ತೆಯಾಗಿವೆ. 29- 9-1109 ಎಂಬ ದಿನಾಂಕವಿರುವ ಕೆತ್ತನೆಯೂ ಲಭಿಸಿದೆ. ವಿಜಯನಗರ ಸಾಮ್ರಾಜ್ಯದ ಹಲವು ಆಭರಣಗಳು ಮುಖ್ಯಪ್ರಾಣ ದೇವ ಅನಂತಪದ್ಮನಾಭ ಸ್ವಾಮಿಯನ್ನು ಅಲಂಕರಿಸಿವೆ' ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದರಿಂದ, ಶ್ರೀ ಕೃಷ್ಣದೇವರಾಯ ತನಗೆ ಆಪತ್ತು ಒದಗಿರುವುದನ್ನು ಅರಿತು ತನ್ನ ಸಾಮ್ರಾಜ್ಯದ ಸಂಪತ್ತನ್ನು ಅನೇಕ ಆನೆಗಳ ಮೇಲೆ ಸಾಗಿಸಿದನು ಎಂಬುದಕ್ಕೆ ಇದು ಪುಷ್ಟಿ ನೀಡುತ್ತದೆ. ತನ್ನ ವಿಜಯನಗರ ಸಾಮ್ರಾಜ್ಯದ ಸಂಪತ್ತನ್ನು ಕೃಷ್ಣದೇವರಾಯನ ತಿರುಪತಿ ಬೆಟ್ಟಕ್ಕೂ ಸಾಗಿಸಿದ್ದ ಎಂದೂ ಅನೇಕ ಇತಿಹಾಸಕಾರರು ಈಗಾಗಲೇ ಅಭಿಪ್ರಾಯಪಟ್ಟಿರುವುದು ಇಲ್ಲಿ ದಾಖಲಾರ್ಹ

'ಅನಂತ' ನಿಧಿ: ಕರ್ನಾಟಕ ದೇಗುಲಗಳ ಮೇಲೂ ಬಿತ್ತು ಕಣ್ಣು!

vijaynagar kingdom
ಬೆಂಗಳೂರು, ಜುಲೈ 4: ಕೇರಳದ ಅನಂತ ಪದ್ಮನಾಭ ದೇವಸ್ಥಾನದ ಖಜಾನೆಯಲ್ಲಿ ಒಂದು ಲಕ್ಷ ಕೋಟಿ ಸಂಪತ್ತು ಸಿಕ್ಕಿರುವ ಬೆನ್ನಲ್ಲೇ ಕರ್ನಾಟಕದ ಪ್ರಾಚೀನ ದೇವಾಲಯಗಳಲ್ಲಿನ ನಿಧಿ ಸಂಪತ್ತು ಬಗ್ಗೆ ಜಿಜ್ಞಾಸೆ ಶುರುವಾಗಿದೆ. ಅದರಲ್ಲಿಯೂ ಹಂಪಿ ಸಾಮ್ರಾಜ್ಯ ಮತ್ತು ಅಲ್ಲಿನ ಪ್ರಾಚೀನ ದೇವಾಲಯಗಳ ಚಿನ್ನಾಭರಣ, ವಜ್ರ ವೈಢೂರ್ಯಗಳ ಬಗ್ಗೆ ಇತಿಹಾಸಕಾರರು ಪ್ರಶ್ನಿಸಿದ್ದಾರೆ.

ದಕ್ಷಿಣ ಭಾರತದ ಅತ್ಯಂತ ಶ್ರೀಮಂತ ರಾಜಮನೆತನ ಹಂಪಿ ವಿಜಯನಗರ ಸಾಮ್ರಾಜ್ಯ. 13ನೇ ಶತಮಾನದಲ್ಲಿ ರಾಜರು ಕಟ್ಟಿಸಿದ ಅತ್ಯಂತ ಪ್ರಾಚೀನವಾದ ಬಹಳಷ್ಟು ದೇವಸ್ಥಾನಗಳು ಈಗಲೂ ಹಂಪಿಯಲ್ಲಿವೆ. ಅಲ್ಲದೆ ಕರ್ನಾಟಕದಲ್ಲಿ ರಾಜ ಮನೆತನದ ಆಳ್ವಿಕೆಯಲ್ಲಿ ಅತಿ ಹೆಚ್ಚು ದೇವಾಲಯಗಳು ಇದ್ದಿದ್ದು ಕೂಡ ಹಂಪಿಯಲ್ಲೇ.

ಶಾಸನಗಳ ಪ್ರಕಾರ ಹಂಪಿಯಲ್ಲಿ ಪ್ರಾಚೀನ ಕಾಲದ 70ಕ್ಕೂ ಅಧಿಕ ದೇವಸ್ಥಾನಗಳಿವೆ. ಆ ಎಲ್ಲಾ ದೇವಾಲಯಗಳಿಗೂ ರಾಜರು ದಾನ ರೂಪದಲ್ಲಿ ಚಿನ್ನದ ನಾಣ್ಯ, ವಜ್ರ, ವೈಢೂರ್ಯ ನೀಡುತ್ತಿದ್ದರು. ಆದರೆ ಈಗ ಹಂಪಿಯಲ್ಲಿ ನಾಲ್ಕೈದು ದೇವಾಲಯ ಹೊರತುಪಡಿಸಿದರೆ ಉಳಿದೆಲ್ಲವೂ ಪಾಳು ಬಿದ್ದಿವೆ. ಇವುಗಳ ಉತ್ಖನನ ನಡೆಸಿದರೆ ಪದ್ಮನಾಭ ದೇವಸ್ಥಾನದ ಹತ್ತು ಪಟ್ಟು ಸಂಪತ್ತು ಸಿಗಬಹುದು ಎನ್ನುವುದು ಇತಿಹಾಸಜ್ಞರ ಅಭಿಪ್ರಾಯ.

ತಿರುವಾಂಕೂರಿನ ರಾಜ ಮಾರ್ತಾಂಡ ವರ್ಮ ಕಟ್ಟಿಸಿದ್ದ ಸಣ್ಣ ಪದ್ಮನಾಭ ದೇವಸ್ಥಾನದಲ್ಲಿ ಟನ್‌ಗಟ್ಟಲೆ ಚಿನ್ನಾಭರಣ ಸಿಕ್ಕಿರಬೇಕಾದರೆ ದಕ್ಷಿಣ ಭಾರತದಲ್ಲೇ ಅತ್ಯಂತ ಶ್ರೀಮಂತ ರಾಜ ಮನೆತನಕ್ಕೆ ಸೇರಿದ ವಿರೂಪಾಕ್ಷ ದೇವಸ್ಥಾನದ ಸಂಪತ್ತು ಎಲ್ಲಿ ಹೋಗಿವೆ ಎನ್ನುವ ಪ್ರಶ್ನೆ ಸಹಜ.

ಇತಿಹಾಸಕಾರರು ಹಾಗೂ ಶಾಸನ ತಜ್ಞರು ಹೇಳುವ ಪ್ರಕಾರ ಹಂಪಿಯಲ್ಲಿ ಬಹಳಷ್ಟು ಕಡೆ ಅಪಾರ ಸಂಪತ್ತು ಸಂಗ್ರಹದ ನಿಧಿಗಳು ಇರುವುದು ಗ್ಯಾರಂಟಿ. ಅದರಲ್ಲಿಯೂ ವಿರೂಪಾಕ್ಷನ ಗುಡಿ, ಕಮಲಾಪುರದ ರಾಜರ ಅರಮನೆಯಾದ ಮಹಾನವಮಿ ದಿಬ್ಬ, ಅನೆಗೊಂದಿ ಆಂಜನೇಯ ಗುಡಿ, ಕೃಷ್ಣಸ್ವಾಮಿ ದೇವಸ್ಥಾನ, ತುಂಗಭದ್ರ ದಡದ ವಿಜಯ ವಿಠಲ ದೇವಸ್ಥಾನ, ಕಮಲಾಪುರದ ಪಟ್ಟಾಭಿರಾಮ ದೇವಸ್ಥಾನ, ಮಾತಂಗ ಪರ್ವತದ ಬುಡದಲ್ಲಿರುವ ಅಚ್ಚುತರಾಯ ದೇವಾಲಯ ಸುತ್ತಮುತ್ತ ಇಂಥ ಸಂಪತ್ತಿನ ನಿಧಿ ಇರುವುದು ಖಚಿತ. ಆದರೆ ಅವು ನಿರ್ಧಿಷ್ಟವಾಗಿ ಎಲ್ಲಿವೆ ಎನ್ನುವುದು ಯಾರಿಗೂ ಗೊತ್ತಿಲ್ಲ.

ಈ ಮಧ್ಯೆ ವಿಜಯನಗರ ಸಾಮ್ರಾಜ್ಯದ ಖಜಾನೆ ಎಲ್ಲಿದೆ ಎನ್ನುವುದು ಶಾಸನ, ದಾಖಲೆಗಳಲ್ಲಿಯೂ ಇಲ್ಲ. ಸುರಕ್ಷತೆ ದೃಷ್ಟಿಯಿಂದ ರಾಜರು ತಮ್ಮ ಖಜಾನೆಯನ್ನು ಬಹಳ ಗೌಪ್ಯವಾಗಿಟ್ಟಿದ್ದರು. ಆದರೆ ವಿಶಾಲ ಹಂಪಿಯಲ್ಲಿ ಖಜಾನೆ ಇತ್ತು ಮತ್ತು ಅದನ್ನು ಸಂಪೂರ್ಣವಾಗಿ ಬ್ರಿಟಿಷರಿಂದ ದೋಚಲು ಆಗಿರಲಿಲ್ಲ. ಹಾಗಾದರೆ ರಾಜರ ಖಜಾನೆ ಎಲ್ಲಿದೆ ಎನ್ನುವುದು ಕೂಡ ಬಿಲಿಯನ್‌ ಡಾಲರ್ ಪ್ರಶ್ನೆಯಾಗಿ ಉಳಿದಿದೆ.

ವಿರೂಪಾಕ್ಷನ ದೇವಸ್ಥಾನದ ಭುವನೇಶ್ವರಿ ಗರ್ಭಗುಡಿ ಪೂರ್ವ ದಿಕ್ಕಿಗೆ ಸುಮಾರು 100 ಮೀಟರ್ ದೂರದಲ್ಲಿ ಅಪಾರ ಸಂಪತ್ತಿನ ಸಂಗ್ರಹ ಇದೆ ಎಂದು ಹೇಳಲಾಗುತ್ತಿದೆ. ಹಂಪಿ ಸುತ್ತಮುತ್ತ ಬಹಳಷ್ಟು ಕಡೆ ಸುವರ್ಣ ನಾಣ್ಯ ಹೂತಿಟ್ಟಿರುವ ಬಗ್ಗೆ ಶಾಸನಗಳು ಉಲ್ಲೇಖಿಸಿವೆ.

ಈ ಮಧ್ಯೆ, 'ಆದರೆ ಹಂಪಿಯಲ್ಲಿ ಇರಬಹುದಾದ ಸಂಪತ್ತು ಶೋಧನೆ ವೈಜ್ಞಾನಿಕವಾಗಿ ನಡೆಯಬೇಕು. ಶೋಧನೆಯಿಂದ ಯಾವುದೇ ಕಾರಣಕ್ಕೂ ಹಂಪಿ ಪರಂಪರೆ, ಸ್ಮಾರಕ ಅಥವಾ ಇತಿಹಾಸಕ್ಕೆ ಧಕ್ಕೆಯಾಗಬಾರದ್ದು' ಎಂದು ಡಾ. ಡಿ.ವಿ. ಪರಮಶಿವಮೂರ್ತಿ, ಹಂಪಿ ಕನ್ನಡ ವಿವಿ ಶಾಸನಶಾಸ್ತ್ರ ವಿಭಾಗ ಮುಖ್ಯಸ್ಥರು ಎಚ್ಚರಿಸಿದ್ದಾರೆ.