ಪುಟಗಳು

ಸೊಂಡೂರು ಭೂ ಹೋರಾಟ


ಕೋಟ್ಯಂತರ ಬೆಲೆ ಬಾಳುವ ಕಬ್ಬಿಣದ ಅದಿರು, ದಟ್ಟವಾದ ಕಾಡು, ಫಲವತ್ತಾದ ಜಮೀನನ್ನು ಹೊಂದಿದ ಸೊಂಡೂರು ಪ್ರದೇಶದ ಭೂಹೋರಾಟ ವಿಶಿಷ್ಟವಾದುದು. ಯಾಕೆಂದರೆ ಇದು ಒಬ್ಬ ಭೂಮಾಲಿಕನ ವಿರುದ್ಧ ಮಾತ್ರವಲ್ಲ. ಮಾಜಿ ದೊರೆ ಹಾಗೂ ಹಾಲಿ ಅಧಿಕಾರದಲ್ಲಿದ್ದ ಮಂತ್ರಿಯ ವಿರುದ್ಧ ಸಂಘಟನೆಗೊಂಡ ಚಳವಳಿ ಆಗಿತ್ತು. ಸ್ವತಂತ್ರ ಪ್ರಾಂತ್ಯವಾಗಿದ್ದ ಸೊಂಡೂರು ಬ್ರಿಟೀಷರು ಭಾರತ ಬಿಟ್ಟುಕೊಟ್ಟ ಬಳಿಕ ಭಾರತದೊಂದಿಗೆ ವಿಲೀನಗೊಳ್ಳಲು ನಿರಾಕರಿಸಿದ ಪ್ರಾಂತ್ಯವೂ ಹೌದು. ಸೊಂಡೂರು ರಾಜಮನೆತನ ಕಾಂಗ್ರೇಸ್ ಚಳವಳಿಯನ್ನು ನಿಷೇಧಿಸಿತ್ತು. ಮುಂದೆ ಇದೇ ವಂಶದವರು ಅರಸು ಮಂತ್ರಿ ಮಂಡಲದಲ್ಲಿ ದೀರ್ಘಕಾಲ ಅರ್ಥ ಸಚಿವರೂ ಆಗಿದ್ದರು!
ಕರ್ನಾಟಕದ ಸಮಾಜವಾದಿ ಚಳವಳಿಗಳ ಅಧ್ಯಯನಕ್ಕೆ ಕನ್ನಡ ವಿವಿಯಲ್ಲಿ ಸ್ಥಾಪಿಸಲಾಗಿರುವ ರಾಮಮನೋಹರ ಲೋಹಿಯಾ ಅಧ್ಯಯನ ಪೀಠದ ಸಂಚಾಲಕ ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ಅರುಣ್ ಅವರು ಅನೇಕ ಹಳ್ಳಿಗಳನ್ನು ತಿರುಗಾಡಿ, ಹೋರಾಟದಲ್ಲಿ ಪಾಲುಗೊಂಡ ಜನರನ್ನು, ಹಲವು ನಾಯಕರನ್ನು ಭೇಟಿ ಮಾಡಿ ಪೋಲೀಸ್ ಇಲಾಖೆ ದಾಖಲೆಗಳು, ವಿಧಾನಸಭೆಯ ಕಲಾಪಗಳನ್ನು ಪರಿಶೀಲಿಸಿ ಈ ಪುಸ್ತಕವನ್ನು ಸಿದ್ಧಪಡಿಸಿದ್ದಾರೆ. ಪ್ರಸಾರಾಂಗ ಪ್ರಕಟಿಸಿದ ಹಲವು ದಪ್ಪ ಗಾತ್ರದ ಪುಸ್ತಕಗಳು ಇತ್ತೀಚೆಗೆ ವಿವಾದಕ್ಕೆ ಒಳಗಾಗಿದ್ದವು. ಇಂತಹ ಆರೋಪಗಳಿಗೆ ಈ ಪುಸ್ತಕ ಸ್ವಲ್ಪ ಮಟ್ಟಿಗೆ ಹೊರತಾಗಿದೆ. ಕೆ.ಕೆ.ಮಕಾಳಿಯವರ ಮುಖಪುಟ ವಿನ್ಯಾಸ, ಸರಳ-ಅರ್ಥಪೂರ್ಣವಾಗಿದೆ. ಭಾರಿ ಪ್ರಮಾಣದ ಗಣಿಗಾರಿಕೆಯಿಂದ ಬಳ್ಳಾರಿ ಜಿಲ್ಲೆಯ ಕೃಷಿಯೇ ಇಂದು ನಾಶವಾಗಿ ಹೋಗಿದೆ. ಪ್ರಸ್ತುತತೆಗಿಂತ ಹೆಚ್ಚಾಗಿ ಹಿಂದೆ ಹೀಗಿತ್ತು ಎಂಬ ಇತಿಹಾಸದ ಅಧ್ಯಯನಕ್ಕೆ ಪುಸ್ತಕ ಸಹಕಾರಿಯಾಗಬಲ್ಲದು.
ಶೀರ್ಷಿಕೆ: ಸೊಂಡೂರು ಭೂ ಹೋರಾಟ ಲೇಖಕರು: ಅರುಣ್ ಜೋಳದ ಕೂಡ್ಲಿಗಿ ಪ್ರಕಾಶಕರು: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ಪುಟಗಳು :174 ಬೆಲೆ:ರೂ.80/

ವಸ್ತುನಿಷ್ಟ ವ್ಯಕ್ತಿ ಚಿತ್ರಣ.








































ಇಪ್ಪತ್ತನೆಯ ಶತಮಾನದಲ್ಲಿ ಕನ್ನಡ ಸಾಹಿತ್ಯವನ್ನು ತಮ್ಮ ವೈವಿಧ್ಯಮಯ ಬರವಣಿಗೆಗಳಿಂದ ಶ್ರೀಮಂತಗೊಳಿಸಿದವರಲ್ಲಿ ಪಿ.ಲಂಕೇಶ್ ಅವರೂ ಒಬ್ಬರು. ಭಾರತದ ಸಾಹಿತ್ಯ ಅಕಾಡೆಮಿಯು `ಭಾರತೀಯ ಸಾಹಿತ್ಯ ನಿರ್ಮಾಪಕರು ಮಾಲಿಕೆಯಲ್ಲಿ ಲಂಕೇಶ್ ಅವರ ಸಮಗ್ರ ವ್ಯಕ್ತಿತ್ವ ಹಾಗೂ ಬರವಣಿಗೆಯನ್ನು ಕುರಿತು ಪ್ರಕಟಿಸಿದ ಪರಿಚಯ ರೂಪದ ಪುಸ್ತಕ ಇದು. ಲಂಕೇಶ್ ಅವರು ಅಧ್ಯಾಪಕರಾಗಿ, ಕವಿಯಾಗಿ, ನಾಟಕಕಾರರಾಗಿ, ವಿಮರ್ಶಕರಾಗಿ, ಪತ್ರಕರ್ತರಾಗಿ ಕ್ರಿಯಾಶೀಲರಾಗಿದ್ದ ಸುದೀರ್ಘ ಅವಧಿಯಲ್ಲಿ ಅವರ ಒಡನಾಡಿಯಾಗಿದ್ದ ಕೆ.ಮರುಳಸಿದ್ದಪ್ಪ ಅವರು ಈ ಕೃತಿಯನ್ನು ಬರೆದಿದ್ದಾರೆ. ಅತಿ ಪರಿಚಯದಿಂದ ವಸ್ತುನಿಷ್ಠತೆಗೆ ಭಂಗ ಬರಬಹುದೆಂಬ ಆಕ್ಷೇಪಕ್ಕೆ ಆಸ್ಪದವೇ ಇಲ್ಲದಂತೆ ಅವರು ಲಂಕೇಶ್ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಿದ್ದಾರೆ. ಗುಣಗಳನ್ನು ಮಾತ್ರವಲ್ಲದೆ ದೋಷಗಳನ್ನೂ ನಿರ್ದಾಕ್ಷಿಣ್ಯವಾಗಿ ನಮೂದಿಸಿದ್ದಾರೆ. ಆದ್ದರಿಂದಲೇ ಇದು ಲಂಕೇಶ್ ಅವರ ವ್ಯಕ್ತಿತ್ವವನ್ನು ಸರಿಯಾಗಿ ಬಿಚ್ಚಿಡುತ್ತದೆ. ಸಾಹಿತ್ಯದ ವಿದ್ಯಾರ್ಥಿಗಳಿಗೆ ಲಂಕೇಶ್ ಅವರ ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸೂಕ್ತವಾದ ಪೂರಕ ಹಿನ್ನೆಲೆಯನ್ನು ನೀಡುತ್ತದೆ.
ಪಾಳ್ಯದ ಲಂಕೇಶ್ (1935-2000), ತಮ್ಮ ಸಾಹಿತ್ಯ ಬರಹಗಳಿಂದ ಕರ್ನಾಟಕದ ಸಾಂಸ್ಕೃತಿಕ ಕ್ಷೇತ್ರವನ್ನು ಸಮೃದ್ಧಗೊಳಿಸಿದ ಹಲವು ಪ್ರತಿಭಾವಂತರನ್ನು ನೀಡಿದ ಶಿವಮೊಗ್ಗ ಜಿಲ್ಲೆಯವರು. ಇಂಗ್ಲೀಷ್ ಉಪನ್ಯಾಸಕರಾಗಿ ವೃತ್ತಿಯನ್ನು ಆರಂಭಿಸಿದ್ದರೂ ಕವನ, ಕತೆ, ನಾಟಕ, ಕಾದಂಬರಿ, ವಿಮರ್ಶೆ, ಸಂಪಾದಿತ ಕೃತಿಗಳ ಮೂಲಕ ಸಾಹಿತ್ಯ ವಲಯಕ್ಕೆ ಪರಿಚಿತರಾದರು. ಬರವಣಿಗೆಗೆ ಮಾತ್ರ ಸೀಮಿತವಾಗದೆ ಚಲನಚಿತ್ರ ನಿರ್ದೇಶನಕ್ಕೂ ಕೈ ಹಾಕಿ ಯಶಸ್ವಿಯಾದರು. ಉಪನ್ಯಾಸ ವೃತ್ತಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಸ್ವತಂತ್ರವಾಗಿ ತಮ್ಮದೇ ಹೆಸರಿನ ವಾರಪತ್ರಿಕೆಯನ್ನು ಹೊರತಂದು ಅದರಲ್ಲೂ ತಮ್ಮ ಛಾಪನ್ನು ಮೂಡಿಸಿದರು. ಮಹತ್ವದ ಸೃಜನಶೀಲ ಬರಹಗಾರ ಎಂಬಷ್ಟಕ್ಕೆ ಲಂಕೇಶರ ವ್ಯಕ್ತಿತ್ವದ ಚಿತ್ರಣ ಪೂರ್ಣಗೊಳ್ಳುವುದಿಲ್ಲ; ಅವರು ತಮ್ಮ ಪತ್ರಿಕೆಯ ಮೂಲಕ ಒಂದು ಜೀವಂತ ಸಂಸ್ಕೃತಿ ನಿರ್ಮಾಣಕ್ಕಾಗಿ ದುಡಿದವರು. ಕಳೆದ ಶತಮಾನದ ಎಂಬತ್ತರ ದಶಕದಿಂದ ಕನ್ನಡ ನಾಡಿನ ವೈಚಾರಿಕತೆ, ಸಾಮಾಜಿಕ ಬದ್ಧತೆ ಮತ್ತು ಪ್ರಗತಿಪರ ರಾಜಕೀಯ ಚಿಂತನೆಯ ಹಿಂದೆ ಲಂಕೇಶರ ಕೊಡುಗೆ ನಿರ್ವಿವಾದ – ಎಂಬುದನ್ನು ಅವರ ಬರವಣಿಗೆಗಳನ್ನೇ ಆಧರಿಸಿ ಇಲ್ಲಿ ಪ್ರತಿಪಾದಿಸಲಾಗಿದೆ. ಹತ್ತು ಅಧ್ಯಾಯಗಳಿಗೆ ವಿಸ್ತರಿಸಿದ ಈ ಕೃತಿಯಲ್ಲಿ ಲಂಕೇಶರ ವರ್ಣಮಯ ವ್ಯಕ್ತಿತ್ವ ಹಾಗೂ ಬಹುಮುಖ ಪ್ರತಿಭೆಯ ಸಮಗ್ರ ಚಿತ್ರಣವನ್ನು ಮರುಳಸಿದ್ದಪ್ಪನವರು ಸಮರ್ಪಕವಾಗಿ ಕಟ್ಟಿಕೊಟ್ಟಿದ್ದಾರೆ.
ಶೀರ್ಷಿಕೆ: ಪಿ.ಲಂಕೇಶ್ ಲೇಖಕರು: ಕೆ. ಮರುಳಸಿದ್ದಪ್ಪ ಪ್ರಕಾಶಕರು: ಸಾಹಿತ್ಯ ಅಕಾಡಮಿ, ನವದೆಹಲಿ ಪುಟಗಳು:178 ಬೆಲೆ:ರೂ.40/-