ಚಂದ್ರವಳ್ಳಿ
ಚಿತ್ರದುರ್ಗದ ವಾಯುವ್ಯ ಬೆಟ್ಟದ ತಪ್ಪಲಿನ ಪ್ರದೇಶವೇ ‘ಚಂದ್ರವಳ್ಳಿ’. ಅಂಕಲಿಮಠದಿಂದ ಆಂಜನೇಯಗುಡಿವರೆಗೂ ಉತ್ತರ-ದಕ್ಷಿಣಾದಿಯೋಪಾದಿಯಲ್ಲಿ ಈ ಪ್ರದೇಶ ಹಬ್ಬಿದೆ. ಈ ಪ್ರದೇಶದಲ್ಲಿ ಉತ್ಖನನ, ಭೂಸಂಶೋಧನೆ ನಡೆಸಿದಾಗ ಈ ಪ್ರದೇಶದಲ್ಲಿ ದೊರೆತ ವಸ್ತುಗಳ ನಾಣ್ಯಗಳು, ಕಟ್ಟಡದ ಅವಶೇಷಗಳಿಂದ ಇಲ್ಲಿ ಚಂದ್ರವಳ್ಳಿ (ಚಂದನಾವತಿ) ಎಂಬ ದೊಡ್ಡ ನಗರವಿದ್ದುದಾಗಿಯೂ, ಪ್ರಾಚೀನ ಸಂಸ್ಕೃತಿಯ ತಾಣವಾಗಿದ್ದಿತೆಂದು, ಈ ಸಂಸ್ಕೃತಿ ಹರಪ್ಪ, ಮೆಹೊಂಜೋದಾರ ಸಂಸ್ಕೃತಿಗೆ ಸಮಾನವೆಂದು ಸಂಶೋಧಕರ ಅಭಿಪ್ರಾಯ.
ಇಲ್ಲಿ ದೊರೆತ ಸಾವಿರಕ್ಕೂ ಮಿಗಿಲಾದ ವಸ್ತುಗಳಿಂದ ಕ್ರಿಸ್ತ ಪೂರ್ವದಲ್ಲಿಯೇ ಚಂದ್ರವಳ್ಳಿ ಪ್ರದೇಶವು ನಾಗರೀಕವಾಗಿದ್ದಿತೆಂದು ತಿಳಿದು ಬಂದಿದೆ. ಇಲ್ಲಿ ಕ್ರಿ.ಪೂ. 139ರಲ್ಲಿ ರ್ಹ್ಯಾ ಉಂಗಿಯ ಹಿತ್ತಾಳೆ ನಾಣ್ಯ, ರೋಮ್ ಚಕ್ರವರ್ತಿಯ ಅಗಸ್ಟಸ್ ನ ಬೆಳ್ಳಿಯ ನಾಣ್ಯ, ವೀರ ಬಲ್ಲಾಳನ ನಾಣ್ಯ ದೊರೆತಿವೆ. ಇಲ್ಲಿ ದೊರೆಕಿರುವ ಶಾತವಾಹನರ ನಾಣ್ಯಗಳ ಮೇಲೆ ‘ಪುಲುಮಾಯಿ’, ‘ಮಹಾರಥಿ’ ಮುಂತಾದವರ ಹೆಸರುಗಳಿವೆ. ಹಲವಾರು ಆಧಾರಗಳಿಂದ ಮೌರ್ಯ ಚಕ್ರವರ್ತಿ ಅಶೋಕನ ಕಾಲದಿಂದ ಕದಂಬರ ಮಯೂರವರ್ಮನ ಕಾಲದವರೆಗೂ ಈ ಪ್ರದೇಶದಲ್ಲಿ ಬೌದ್ಧ ಮತ ಪ್ರಚಾರದಲ್ಲಿತೆಂದು ತಿಳಿಯಬಹುದಾಗಿದೆ.
ಇಲ್ಲಿಯ ಭೈರವೇಶ್ವರ ದೇವಾಲಯದ ಬಳಿಯ ಮಯೂರವರ್ಮನ ಶಾಸನದಿಂದ ಈ ಪ್ರದೇಶದಲ್ಲಿ ಆಗಲೇ ಇದ್ದ ‘ತಟಾಕ(ಕೆರೆ)’ಯನ್ನು ದುರಸ್ಥಿ ಮಾಡಿಸಿದನೆಂದು ತಿಳಿದು ಬರುತ್ತದೆ. ಈಗ ಅದೇ ಪ್ರದೇಶದಲ್ಲಿ ಸರ್ಕಾರವು ಸುಂದರವಾದ ಕೆರೆಯನ್ನು ಕಟ್ಟಿಸಿ ನೆನಪನ್ನು ಚಿರಸ್ಥಾಯಿಯಾಗಿಸಿದ್ದಾರೆ. ಇದೇ ಚಂದ್ರವಳ್ಳಿ ಪ್ರದೇಶದಲ್ಲಿ ಶ್ರೀ ಹುಲಿಗೊಂದಿ ಭೈರವೇಶ್ವರ ದೇವಾಲಯವು, ಚಂದ್ರವಳ್ಳಿ ಕೆರೆ, ಅಂಕಲಿಮಠ, ಪಂಚಲಿಂಗೇಶ್ವರ ಗುಹಾಂತರ ದೇವಾಲಯ, ಧವಳಪ್ಪನ ಗುಡ್ಡ, ಬಾಲಾಂಜನೇಯ ಪ್ರೇಕ್ಷಣೀಯ ಸ್ಥಳಗಳಾಗಿವೆ.
ಪಂಚಲಿಂಗೇಶ್ವರ ದೇವಾಲಯ:
ಹುಲಿಗೊಂದಿಯಲ್ಲಿರುವ ಪ್ರಸಿದ್ಧ ಅಂಕಲಿಮಠಕ್ಕೆ ಹೊಂದಿಕೊಂಡಂತೆ ಇರುವ ಬೃಹತ್ ಬಂಡೆಗಳ ಅಡಿಯಲ್ಲಿ ಪಾಂಡವರಿಂದ ಪ್ರತಿಷ್ಟಾಪಿಸಲ್ಪಟ್ಟಿವೆಯೆಂದು ಹೇಳಲಾಗುವ ಐದು ಲಿಂಗಗಳಿರುವ ದೇಗುಲವೇ ಈ ಪಂಚಲಿಂಗೇಶ್ವರ ದೇವಾಲಯ.
ಚಿತ್ರದುರ್ಗದ ಪ್ರಾಚ್ಯವಸ್ತು ಸಂಗ್ರಹಾಲಯ
ಚಿತ್ರದುರ್ಗ ಜಿಲ್ಲೆಗೆ ಒಂದು ಇತಿಹಾಸವಿದೆ. ಅದರ ಅರಿವೂ ಇಲ್ಲಿಯ ಪ್ರಾಚ್ಯಕಾಲದ ಸಂಸ್ಕೃತಿಯ ವೈಭವದ ಸ್ಮರಣೆಯೂ, ಕನ್ನಡಿಗರ ಮನದಲ್ಲಿ ಮೂಡಬೇಕು. ಭವ್ಯ ಕನ್ನಡದ ಇತಿಹಾಸ ಕಣ್ಣ ಮುಂದೆ ಕಟ್ಟಿ, ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಬೇಕು. ಯುವಜನ ಸಮೂಹಕ್ಕೆ ಚೇತನದಾಯಕವಾಗಬೇಕು” ಎಂಬ ಗುರಿಯನ್ನಿಟ್ಟಿಕೊಂಡು ಕೀರ್ತಿಶೇಷ ಹುಲ್ಲೂರು ಶ್ರೀನಿವಾಸ ಜೋಯಿಸರು ಜಿಲ್ಲೆಯ ಕೇಂದ್ರವಾದ ಚಿತ್ರದುರ್ಗದಲ್ಲಿ ಒಂದು ಐತಿಹಾಸಿಕ ವಸ್ತು ಸಂಗ್ರಹಾಲಯವನ್ನು ನಿರ್ಮಿಸಬೇಕೆಂಬ ಇವರ ಆಕಾಂಕ್ಷೆಗೆ, ಮೈಸೂರು ಸರ್ಕಾರವು ಸಂಗ್ರಹಾಲಯದ ಸ್ಥಾಪನೆಗೆ ಅನುಮತಿ ನೀಡಿತು. 1951ರ ಆಗಸ್ಟ್ ತಿಂಗಳಲ್ಲಿ ಮಾನ್ಯ ರಾಜ್ಯಪಾಲ ಶ್ರೀ ಜಯಚಾಮರಾಜ ಒಡೆಯರಿಂದ ಆರಂಭೋತ್ಸವವು ನೆರವೇರಿಸಲ್ಪಟ್ಟಿತು. ಅದಕ್ಕೆ ಪ್ರಥಮ ಗೌರವ ಕ್ಯೂರೇಟರವರಾಗಿ ಹುಲ್ಲೂರು ಶ್ರೀನಿವಾಸ ಜೋಯಿಸರು ನೇಮಿಸಲ್ಪಟ್ಟರು.
ಪ್ರಾಚ್ಯ ವಸ್ತುಸಂಗ್ರಹಲಾಯಗಳನ್ನು ಪ್ರವೇಶಿಸಿದಾಗ ಸಾಹಸಿಗಳೆನಿಸಿದ ಚಿತ್ರದುರ್ಗದ ಪಾಳೆಯಗಾರರ ಕಾಲದಲ್ಲಿ ಉಪಯೋಗಿಸುತ್ತಿದ್ದ ಕತ್ತಿ, ಈಟಿ, ಸುರಗಿ, ಕೈಅಂಬು, ನೂರಾರು ಶತ್ರು ಸೈನಿಕರ ಗುಂಪನ್ನು ಒಬ್ಬನೇ ಎದುರಿಸಿ ರಕ್ಷಿಸಿಕೊಳ್ಳಲು ನೆರವಾಗುತ್ತಿದ್ದ ಪರಿಘಾಯುಧ, ಚಕಮಕಿ (Flint), ಕಲ್ಲಿನಿಂದ ಬೆಂಕಿ ಉತ್ಪನ್ನವಾಗಿ ಗುಂಡು ಹಾರುತ್ತಿದ್ದ ಪಾಳೆಯಗಾರರ ಕಾಲದ ಒಂದು ಬಂದೂಕು., ಸಿಡಿಗುಂಡುಗಳು, ಮಾಯಕೊಂಡದ ಮಣ್ಣಿನಲ್ಲಿ ವೀರಾವೇಶದಿಂದ ಯುದ್ಧ ಮಾಡಿ ವೀರಸ್ವರ್ಗವನ್ನು ಪಡೆದ ಚಿತ್ರದುರ್ಗ ಪಾಳೆಯಗಾರ ಹಿರಿಯ ಮೆದಕೇರಿನಾಯಕನ ಸಮಾಧಿಯಲ್ಲಿ ದೊರೆತ ಉಕ್ಕಿನ ಕತ್ತಿ, ಪಟ್ಟದ ಕುದುರೆ ಹಲ್ಲುಗಳು, ಬಹುಮುಖ್ಯವಾದ ಸಂಗ್ರಹಗಳು. ಇದಲ್ಲದೇ ಯೋಧರ ಧರಿಸುತ್ತಿದ್ದ ಉಕ್ಕಿನ ಅಂಗಿ ಅಪೂರ್ವವಾದ ಸಂಗ್ರಹವೂ ಇಲ್ಲಿದೆ.
ಸಂಗ್ರಹಾಲಯದಲ್ಲಿ ಜೋಡಿಸಲ್ಪಟ್ಟಿರುವ ವಾರಹಿ, ಬ್ರಾಹ್ಮೀ, ಮಹೇಶ್ವರಿ, ಇಂದ್ರಾಣಿ, ಚಾಮುಂಡೇಶ್ವರಿ, ಭಿಕ್ಷಾಟನ ಶಿವ, ಸೂರ್ಯ ನಾರಾಯಣ, ಭೈರವ ಶಿಲ್ಪಗಳೆಲ್ಲವೂ ಹೊಯ್ಸಳರ ಕಾಲಕ್ಕೂ ಮುಂಚಿನವು ಎನ್ನಲಾಗಿದೆ. ದ್ವಿಬಾಹು ಗಣೇಶ, ವೀರಭದ್ರ, ಬಸವ, ನಾಗಕನ್ನಿಕಾ, ಇವುಗಳೊಂದಿಗೆ ಹಲವಾರು ಮಾಸ್ತಿ-ವೀರಗಲ್ಲುಗಳ ಸಂಗ್ರಹವೇ ಇಲ್ಲಿದೆ.
ಶಾಸನ ವಿಭಾಗದಲ್ಲಿ ಚಿತ್ರದುರ್ಗಕ್ಕೆ ಸಂಭಂಧಪಟ್ಟ ಅಮೂಲ್ಯವಾದ ಶಿಲಾಶಾಸನ ಇಲ್ಲಿದೆ. ಚಿತ್ರದುರ್ಗವೂ ಕ್ರಿ.ಶ. ಹನ್ನೊಂದನೇ ಶತಮಾನದಲ್ಲಿ ಸೂಳ್ಗಲ್ಲು ಎಂಬ ಹೆಸರು ಹೊಂದಿತ್ತೆಂಬುದಕ್ಕೆ ಈ ಶಾಸನವೇ ಸಾಕ್ಷಿ. ಚಿತ್ರದುರ್ಗದ ಪಾಳೆಯಗಾರರ ಕಾಲದ ತಾಮ್ರಪಟ್ಟ ದಾನಶಾಸನವು, ಭರಮಣ್ಣನಾಯಕನ ಘಂಟೆ ಶಾಸನವು ಮುಖ್ಯ ಸಂಗ್ರಹಗಳು.
ಚಂದ್ರವಳ್ಳಿ ಮತ್ತು ಬ್ರಹ್ಮಗಿರಿ ಪ್ರದೇಶಗಳಲ್ಲಿರುವ ಪ್ರಾಚೀನ ನಿವೇಶನಗಳ ಭೂಸಂಶೋಧನೆಯಲ್ಲಿ ದೊರೆತ ಅತ್ಯಮೂಲ್ಯ ವಸ್ತುಗಳು ಸಂಗ್ರಹಾಲಯದ ಎರಡನೇ ಕೊಠಡಿಯಲ್ಲಿವೆ. ಇವುಗಳಲ್ಲಿ ಚಂದ್ರವಳ್ಳಿಯ ರೋಮ್ ಮತ್ತು ಚೀನಾ ದೇಶದ ನಾಣ್ಯಗಳು, ಶಾತವಾಹನರ ಕಾಲದ ನಾಣ್ಯಗಳು, ಗುಹೆಗಳಲ್ಲಿ ದೊರೆತ ನವಶಿಲಾಯುಗದ ನಯವಾದ ಕಲ್ಲಿನ ಆಯುಧಗಳು, ಭೂಸಂಶೋಧನೆಯಲ್ಲಿ ದೊರೆತ ಭಾರಿ ಇಟ್ಟಿಗೆಗಳು, ವಿವಿಧ ಮಣಿಗಳು, ದಂತದ ಮತ್ತು ಗಾಜಿನ ಬಣ್ಣಬಣ್ಣದ ಬಳೆಗಳು, ಪ್ರಾಚ್ಯಕಾಲದ ಮಹಿಳೆಯರ ಅಭಿರುಚಿಯನ್ನು ವ್ಯಕ್ತಪಡಿಸುತ್ತದೆ.
ಸಂಗ್ರಹಾಲಯದಲ್ಲಿ ಪ್ರಾಚೀನ ತಾಳೆಗರಿಗಳ ಹಸ್ತಪ್ರತಿಗಳ ಸಂಗ್ರಹಗಳಿವೆ. ಇದೇ ವಿಭಾಗದಲ್ಲಿ ಚಿತ್ರದುರ್ಗ ಜಿಲ್ಲೆಯ ದೊಡ್ಡೇರಿ ಗ್ರಾಮದಲ್ಲಿ ತಯಾರಿಸುತ್ತಿದ್ದ ವಿಶಿಷ್ಟ ಕಾಗದವನ್ನು ನೋಡಬಹುದು.
(ಆಧಾರ: “ಚಿತ್ರದುರ್ಗ ಪ್ರಾಚ್ಯವಸ್ತು ಸಂಗ್ರಹಲಾಯ” – ಹೆಚ್.ಎಸ್.ಪಾಂಡುರಂಗ ಜೋಯಿಸರು)
ಚಿತ್ರದುರ್ಗದ ಕೋಟೆಯೊಳಗಿನ ಸ್ಥಳಗಳು
ಉಚ್ಚಂಗಮ್ಮನ ದೇವಾಲಯ:ದೊಡ್ಡಪೇಟೆ, ಚಿಕ್ಕಪೇಟೆಗಳು ಹಾಗೂ ಬೆಟ್ಟಕ್ಕೆ ಹೋಗುವ ಮಾರ್ಗ ಸಂಧಿಸುವ ಸ್ಥಳದಲ್ಲಿ ಉಚ್ಚಂಗಮ್ಮನ ಭವ್ಯಮಂದಿರವಿದೆ. ಕ್ರಿ.ಶ. 1674 ರವರೆಗೆ ಚಿತ್ರದುರ್ಗದ ಪಾಳೆಯಗಾರನಾಗಿದ್ದ ಇಮ್ಮಡಿ ಮೆದಕೇರಿನಾಯಕನು ಕ್ರಿ.ಶ. 1665 ರಲ್ಲಿ ಉಚ್ಚಂಗಿದುರ್ಗದಿಂದ ಉತ್ಸವಾಂಬೆಯ ಉತ್ಸವ ಮೂರ್ತಿಗಳನ್ನು ತಂದು ಇಲ್ಲಿ ಚಿಕ್ಕಗುಡಿ ಕಟ್ಟಿಸಿ, ಮೂರ್ತಿಗಳನ್ನು ಪ್ರತಿಷ್ಟಾಪಿಸಿದರು. ಆಗ ಗುಡಿ ಕೇವಲ 22 ಅಂಕಣಗಳಿಂದ ಕೂಡಿತ್ತು. ಮುಂದೆ ಬಿಚ್ಚುಗತ್ತಿ ಭರಮಣ್ಣನಾಯಕನು ಗುಡಿಯ ಸುತ್ತ 108 ಅಂಕಣಗಳ ಭವ್ಯ ಕಲ್ಲುಮಂಟಪಗಳನ್ನು ಐದು ಅಂತಸ್ತಿನ ಭವ್ಯ ಮಹಾದ್ವಾರವನ್ನು, ಗುಡಿಯ ಆವರಣದಲ್ಲಿ ಮಾತಂಗಿ, ಮಾವು ರಾಣಿಯರ ಎರಡು ಚಿಕ್ಕ ದೇವಮಂದಿರಗಳನ್ನು ಕಟ್ಟಿಸಿದನು. ಈ ದೇವಾಲಯದ ಎದುರಿಗೆ ಉಯ್ಯಾಲೆ ಕಂಬ, ದೊಡ್ಡ ದೀಪಾಲೆ ಕಂಬ ಹಾಗೂ ಒಂದು ಸುಂದರ ಚಿಕ್ಕ ಬಾವಿಯಿದೆ.
ಪೂರ್ವ ದಿಕ್ಕಿಗಿರುವ ಈ ಮಹಾದ್ವಾರವು ಪಾಳೆಯಗಾರರ ಮನೆದೇವರಾದ ನೀರ್ಥಡಿ ರಂಗನಾಥನ ಹೆಸರಿನಲ್ಲಿ “ರಂಗಯ್ಯನ ಬಾಗಿಲು” ಎಂದು ಹೆಸರಾಗಿದೆ. ಇದು ಹೊರಸುತ್ತಿನ ಕೋಟೆಯ ಭಾಗವಾಗಿದ್ದು, ಇಡೀ ಊರನ್ನೇ ಸುತ್ತಿ 12 ಕಿ.ಮೀ. ಉದ್ದವಾಗಿದ್ದು, ಬೆಟ್ಟದ ಹಿಂಭಾಗವೆಂದರೆ ಆವರಿಸಿದೆ. ಈಗ ಇಲ್ಲಿ ಸರ್ಕಾರದ ಪ್ರಾಚ್ಯವಸ್ತು ಸಂಗ್ರಹಲಾಯವೂ ಇದೆ.
ದೇವಾಲಯದಲ್ಲಿ ಉತ್ಸವಾಂಬೆ (ಉಚ್ಚಂಗಮ್ಮ) ಮತ್ತು ಪರಶುರಾಮರ ಮೂರ್ತಿಗಳಿವೆ. ಕೆತ್ತನೆಗಳಿಂದ ಕೂಡಿದ ಕಲ್ಲುಮಂಟಪ ಕಲಾತ್ಮಕವಾಗಿದೆ. ದೇವಾಲಯದ ಹಿಂಭಾಗದ ಗುಪ್ತದ್ವಾರದಿಂದ ನೇರವಾಗಿ ಬೆಟ್ಟಕ್ಕೆ ಹೋಗಬಹುದು. ಪ್ರತಿವರ್ಷ ದೇವಿಯ ಸಿಡಿ ಹಾಗೂ ನವರಾತ್ರಿ ಉತ್ಸವಗಳು ನಡೆಯುತ್ತವೆ. ತಿಪ್ಪಿನಘಟ್ಟಮ್ಮ, ಬರಗೇರಮ್ಮ ಭೇಟಿ ಉತ್ಸವಗಳು ಈ ದೇವಾಲಯದ ಮುಂದೆಯೇ ನಡೆಯುತ್ತವೆ.
ಕರಿವರ್ತಿ ಈಶ್ವರ ದೇವಾಲಯ:
ಕಾಮನ ಬಾಗಿಲಿಂದ ಬೆಟ್ಟದ ಮೇಲಕ್ಕೆ ಹೋಗದೇ, ಕಂದಕದ ದಾರಿಯನ್ನೇ ಹಿಡಿದು ಸಾಗಿದರೆ ಶ್ರೀ ರಾಮದೇವರ ಒಡ್ಡಿಗೆ ಹೋಗುವ ಮಾರ್ಗದಲ್ಲಿ ಕರಿವರ್ತಿ ಈಶ್ವರ ದೇವಾಲಯವಿದೆ. ಈ ದೇವಾಲಯದ ಎದುರು ಒಂದು ಸುಂದರವಾದ ಪುಟ್ಟ ಕಲ್ಯಾಣ ಒಂದೊಂದಿದೆ. (ಕಹಳೆ ಬತೇರಿಯ ಪೂರ್ವಕ್ಕೆ). ಈ ದೇವಾಲಯ ಹೊಯ್ಸಳ ಶೈಲಿಯಲ್ಲಿ ಕಟ್ಟಲ್ಪಟ್ಟು, ಸುಂದರ ಭುವನೇಶ್ವರಿ ನವರಂಗಗಳಿಂದ ಕೂಡಿದ್ದು, ಇಲ್ಲಿಯ ಕಂಬಗಳ ಮೇಲೆ, ದೇವಾಲಯದ ಗೋಡೆಗಳ ಮೇಲೆ ಗೋಪಿಕಾ ಸ್ತ್ರೀಯರು, ಕಾಳಿಂಗ ಮರ್ಧನ, ನೃತ್ಯ ಗಣಪತಿ, ಮಹಿಷಾಸುರ ಮರ್ಧಿನಿ, ನರಸಿಂಹ ಮುಂತಾದ ಕೆತ್ತನೆಗಳಿಂದ ತುಂಬಿದೆ.
ಒಂಟಿಕಾಲು ಬಸವ:
ಬೆಟ್ಟಕ್ಕೆ ಹೋಗುವ ಮಾರ್ಗದ ಬಲಬದಿ, ಬೆಟ್ಟದ ಏರಿಯ ಮೇಲೆ ದೊಡ್ಡ ಬಂಡೆಗೆ ಹೊಂದಿದಂತೆ ನಿಂತಿರುವ ಒಂಟಿ ಕಂಬದ ಮೇಲೆ ಪೆಟ್ಟಿಗೆಯಂತಹ ಚಿಕ್ಕ ಗುಡಿಯೊಂದಿದೆ. ಈ ಗುಡಿಯಲ್ಲಿ ಚಿಕ್ಕ ಬಸವನ ವಿಗ್ರಹ ಒಂದಿದೆ. ಇದಕ್ಕೆ ಒಂಟಿ ಕಾಲು ಬಸವನಗುಡಿ ಎನ್ನುತ್ತಾರೆ.
ಸಾನಂದ ಗಣಪತಿ ಮಂದಿರ:
ಬೆಟ್ಟವನ್ನು ಹತ್ತುವಾಗ ಟೀಕಿನ ಬಾಗಿಲನ್ನು ದಾಟಿದರೆ ಏಕನಾಥೇಶ್ವರಿಯ ಪಾದಗಳು ಸಿಗುತ್ತವೆ. ಸ್ವಲ್ಪ ಮುಂದೆ ಹೋದರೆ ದೊಡ್ಡ ಬಂಡೆಯ ಮೇಲೆ ಗಣಪತಿ ವಿಗ್ರಹ ಕೆತ್ತಿ, ಒಂದು ಗುಡಿ ನಿರ್ಮಿಸಿದ್ದಾರೆ. ಇದೇ ಸಾನಂದ ಗಣಪತಿ ಮಂದಿರ. ಪಕ್ಕದಲ್ಲೇ ಗರಡಿ ಮನೆ ಎನ್ನಲಾಗುವ ಕಲ್ಲಿನ ಮಂಟಪ ಇದೆ.
ಬನಶಂಕರಿ ದೇವಾಲಯ:
ಬೆಟ್ಟದ ಮೇಲೆ ಬೀಸುವ ಕಲ್ಲನ್ನು ನೋಡಲು ಹೋಗುವ ದಾರಿಯಲ್ಲಿ ಬಲಗಡೆ ಹುಟ್ಟುಬಂಡೆಯಲ್ಲಿ ನೆಲಗವಿಯಲ್ಲಿ ಬನಶಂಕರಿ ದೇವಿ ಅಂಗಹೀನಳಾಗಿ ಸರ್ವಾಲಂಕಾರ ಭೂಷಿತೆಯಾಗಿ, ಪದ್ಮಾಸೀನಳಾಗಿದ್ದಾಳೆ. ಕೋಟೆ ಕಟ್ಟುವುದಕ್ಕೆ ಮೊದಲೇ ಈ ವನದ ಮಧ್ಯೆ ದೇವಿ ನೆಲಸಿರಬೇಕು. ಈ ದೇವಾಲಯದ ಬಳಿ ಹಲವಾರು ನಾಗರ ಕಲ್ಲುಗಳಿವೆ.
ಚಳ್ಳಕೆರೆಮ್ಮನ ಗುಡಿ:
ಬಂಡೆಯಡಿಯೊಂದರಲ್ಲಿ ಬನಶಂಕರಿ ಗುಡಿಯ ಬಲಭಾಗದಲ್ಲಿ ಈ ಗುಡಿ ಇದೆ. ಈ ಗುಡಿಯ ಎದುರಿಗೆ ಆಳವಾದ ಗುಂಡಿಯೊಂದಿದೆ. ಇದು ಹಗೇವು ಇರಬಹುದು. ಮುಂದೆ ಕೊನೆಯ ಹಿರೇಮೆದಕೇರಿನಾಯಕನು ಇಲ್ಲಿಯ ವಿಗ್ರಹವನ್ನು ತೆಗೆದುಕೊಂಡು ಹೋಗಿ, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ ಪ್ರತಿಷ್ಟಾಪಿಸಿದ. ಅಲ್ಲೊಂದು ದೇವಸ್ಥಾನ ನಿರ್ಮಿಸಿದನು.
ತುಪ್ಪದ ಕೊಳ:
ಸಂಪಿಗೆ ಸಿದ್ದೇಶ್ವರ ದೇವಾಲಯದ ಬೃಹತ್ ಬಂಡೆಗಳ ಸಮೂಹಕ್ಕೆ ತುಪ್ಪದ ಕೊಳ ಎನ್ನುತ್ತಾರೆ. ದೇವಾಲಯದ ಪಕ್ಕದ ಚಿಕ್ಕಚಿಕ್ಕ ಪಾವಟಿಗೆಗಳ ಮೂಲಕ ಹತ್ತಿ, ಬೆಟ್ಟದ ನೆತ್ತಿಯ ಮೇಲಿನ ಬತೇರಿಗೆ ಹೋದರೆ, ಕಲ್ಲುಮಂಟಪ, ದೀಪಸ್ತಂಭ, ಏಕಶಿಲೆಯಲ್ಲಿ ಕೂಡಿದ 15-20 ಅಡಿ ಆಳದ ತುಪ್ಪದ ಕೊಳವಿದೆ. ಹಿಂದೆ ಈ ಕೊಳದಲ್ಲಿ ತುಪ್ಪ ಸಂಗ್ರಹಿಸುತ್ತಿದ್ದರಂತೆ. ಗೋಪಾಲಸ್ವಾಮಿ ಹೊಂಡದ ಬಳಿಯ ಪಾವಟಿಗೆಗಳಿಂದ ಇಳಿದು ಹೋಗಬೇಕು.
ಏಕನಾಥೇಶ್ವರಿ ದೇವಾಲಯ:
ಬೆಟ್ಟದ ಮೊದಲ ಸುತ್ತಿನ ಝಂಡಾ ಬತೇರಿಯ ದಕ್ಷಿಣದ ಕಡೆ ಏಕನಾಥೇಶ್ವರಿ ದೇವಾಲಯವಿದೆ. ಮೊದಲು ಬೌದ್ಧ ವಿಹಾರವಾಗಿದ್ದ ಈ ಸ್ಥಳದಲ್ಲಿ ದೇವಿ ಮುಳ್ಳು ಪೊದೆಯಲ್ಲಿ ಅಡಗಿಸಿದ್ದರಂತೆ. ಈ ಗುಹಾಂತರ ದೇವಾಲಯದ ಮುಖಮಂಟಪವನ್ನು ಪಾಳೆಯಗಾರರ ಕಾಲದಲ್ಲಿ ನಿರ್ಮಿಸಲಾಯಿತಂತೆ. ದೇವಾಲಯದ ಮುಂದೆ ಬೃಹತ್ ದೀಪಾಲೆ ಕಂಬ ಹಾಗೂ ಉಯ್ಯಾಲೆ ಕಂಭಗಳಿವೆ. ದೀಪಸ್ತಂಭದಲ್ಲಿ ದುರ್ಗದ ಎರಡನೇ ಪಾಳೆಯಗಾರ ಓಬಣ್ಣನಾಯಕ ಮತ್ತು ಈತನ ಪತ್ನಿ ಕನಕಮ್ಮ ನಾಗತಿಯ ಕೆತ್ತನೆ ಚಿತ್ರಗಳಿವೆ. ವರ್ಷಕ್ಕೊಮ್ಮೆ ದೇವಿಯ ಕಾರ್ತಿಕ ಹಾಗೂ ಸಿಡಿ ಉತ್ಸವ ನಡೆಯುತ್ತದೆ. ಗಾರೆ ಬಾಗಿಲು ಎಡಕ್ಕಿರುವ ದಿಬ್ಬದ ಮೇಲೆ ದೇವಿಯ ಪಾದಗಟ್ಟೆ ಇದೆ.
ಸಂಪಿಗೆ ಸಿದ್ದೇಶ್ವರ ದೇವಾಲಯ:
ಚಿತ್ರದುರ್ಗದ ಬೆಟ್ಟದ ಮೇಲುದುರ್ಗದಲ್ಲಿ ಸಿದ್ದೇಶ್ವರನ ದೇವಾಲಯವಿದೆ. ದೇವಾಲಯದ ಸುತ್ತಲೂ ಕೆಂಡ ಸಂಪಿಗೆ ಸುವಾಸನೆಯ ಗಿಡಮರಗಳಿಂದ ಪಾಳೆಯಗಾರರ ಕಾಲದಲ್ಲಿ ಈ ಗುಡಿಗೆ ಸಂಪಿಗೆ ಸಿದ್ದೇಶ್ವರನ ದೇವಾಲಯವೆಂಬ ಹೆಸರು ಬಂದಿದೆ. ತುಪ್ಪದ ಕೊಳ ಬತೇರಿಯ ತಪ್ಪಲಲ್ಲಿ ಇದೊಂದು ಪುರಾತನ ಗುಹಾಂತರ ದೇವಾಲಯವಿದೆ. ಈ ದೇವಾಲಯವಿರುವ ಗುಡ್ಡಕ್ಕೆ ಮುಕ್ತಿ ಶಿವಾಲಯ ಶಿಬಿರ ಎನ್ನುತ್ತಾರೆ. ದೇವಾಲಯ ಏಕಶಿಲಾ ಗುಹೆಯಾಗಿದ್ದು, ಉತ್ತರದಲ್ಲಿ ಕಲ್ಲುಗೋಡೆ ಮುಖಮಂಟಪವಿದೆ.
ಈ ದೇವಾಲಯವು ಗರ್ಭಗುಡಿ, ಸುಖನಾಸಿ, ನವರಂಗಗಳಿಂದ ಕೂಡಿದ್ದು ಗರ್ಭಗುಡಿಯಲ್ಲಿ ಅನಾದಿಕಾಲದ ಸಿದ್ದನನಾಥ ಲಿಂಗವಿದೆ. ಈ ಸಿದ್ದೇಶ್ವರ ಲಿಂಗದ ಹಿಂದೆ ಕತ್ತಲೆಯಿಂದ ಕೂಡಿದ ನಾಲ್ಕು ಕೋಣೆಗಳ ಗುಹೆ ಇದೆ. ಇಲ್ಲಿ ಅಲ್ಲಮಪ್ರಭುವಿನ ವಿಗ್ರಹವಿದೆ. ನವರಂಗದಲ್ಲಿ ಗಣೇಶ, ಶೂಲಬ್ರಹ್ಮ, ನಾಗರಕಲ್ಲುಗಳು, ನಂದಿ, ಭೈರವ ಮುಂತಾದ ಸುಂದರ ವಿಗ್ರಹಗಳಿವೆ. ಮೂಲೆಯಲ್ಲಿ ಸುಮಾರು ಐದು ಅಡಿ ಎತ್ತರದ ಕಿರೀಟದಲ್ಲಿ ಲಿಂಗ, ರಳಲ್ಲಿ ರುಂಡಮಾಲೆ ಧರಿಸಿದ, ಕರ್ಣಕುಂಡಲಧಾರಿಯಾಗಿರುವ ಸುಂದರ ವೀರಭದ್ರ ನಿಂತಿದ್ದಾನೆ. ಬಲಗಡೆ ಆಡಿನ ತಲೆಯ ದಕ್ಷಬ್ರಹ್ಮ, ನಂದಿ ವಿಗ್ರಹ, ಹಿಂದೆ ನರಸಿಂಹನ ವಿಗ್ರಹವಳಿವೆ.
ಚಿತ್ರದುರ್ಗದ ಕೋಟೆಯ ಬಾಗಿಲುಗಳು
ಚಿತ್ರದುರ್ಗದ ಏಳು ಸುತ್ತಿನ ಕೋಟೆಯೆಂದೊಡನೆ ಥಟ್ಟನೆ ನಮಗೆ ನೆನಪಿಗೆ ಬರುವುದು ಈ ಪ್ರಾಂತ್ಯವನ್ನು ಆಳಿದ ಪಾಳೆಯಗಾರರು. ಈ ದುರ್ಗಮ ಕೋಟೆಯನ್ನು ಪಾಳೆಯಗಾರಗಿಂತ ಮೊದಲು ಆಳ್ವಿಕೆ ನಡೆಸಿದವರು ಈ ಕೋಟೆಯ ನಿರ್ಮಾಣಕ್ಕೆ ಭದ್ರ ಬುನಾದಿಯನ್ನು ಹಾಕಿದ್ದಾರೆ. ಸುಮಾರು 10ನೇ ಶತಮಾನದಲ್ಲಿಯೇ ಕೋಟೆಯ ನಿರ್ಮಾಣವಾಗಿರಬಹುದು ಎಂಬುವುದು ಇತಿಹಾಸಕಾರರ ಅನಿಸಿಕೆ ಕ್ರಿ.ಶ.1070 ರಲ್ಲಿಯೇ ಕೋಟೆ ಇದುದ್ದಕ್ಕೆ ಆಧಾರವಿದೆ. ಏಳು ಸುತ್ತಿನಿಂದ ಕೂಡಿರುವ ಈ ಕೋಟೆಗೆ ಏಳು ಪ್ರಮುಖ ಬಾಗಿಲುಗಳಿವೆ.
ರಂಗಯ್ಯನ ಬಾಗಿಲು:
ಪೂರ್ವ ದಿಕ್ಕಿಗಿರುವ ಈ ಮಹಾದ್ವಾರವು ಪಾಳೆಯಗಾರರ ಮನೆದೇವರಾದ ನೀರ್ಥಡಿ ರಂಗನಾಥನ ಹೆಸರಿನಲ್ಲಿ “ರಂಗಯ್ಯನ ಬಾಗಿಲು” ಎಂದು ಹೆಸರಾಗಿದೆ. ಇದು ಹೊರಸುತ್ತಿನ ಕೋಟೆಯ ಭಾಗವಾಗಿದ್ದು, ಇಡೀ ಊರನ್ನೇ ಸುತ್ತಿ 12 ಕಿ.ಮೀ. ಉದ್ದವಾಗಿದ್ದು, ಬೆಟ್ಟದ ಹಿಂಭಾಗವೆಂದರೆ ಆವರಿಸಿದೆ. ಈಗ ಇಲ್ಲಿ ಸರ್ಕಾರದ ಪ್ರಾಚ್ಯವಸ್ತು ಸಂಗ್ರಹಲಾಯವೂ ಇದೆ.
ಸಿದ್ದಯ್ಯನ ಬಾಗಿಲು:
ಇದಕ್ಕೆ ‘ಸಂತೆಬಾಗಿಲು’ ಎಂತಲೂ ಕರೆಯುತ್ತಾರೆ. ಗಾಂಧಿ ಸರ್ಕಲ್ ನಲ್ಲಿ [ಮಾರ್ಕೆಟ್ ಮುಂಭಾಗ] ನಿಂತು ನೋಡಿದರೆ, ಈ ಬಾಗಿಲು ಕಾಣುತ್ತದೆ. ಪಾಳೆಯಗಾರರ ಕಾಲದಲ್ಲಿ ಈ ಬಾಗಿಲು ಅಂಕಣದಲ್ಲಿ ಕುಸ್ತಿಕಾಳಗ, ಹುಲಿ ಕಾಳಗ, ಮುಂತಾದವುಗಳು ನಡೆಯುತ್ತಿದ್ದು, ಪಾಳೆಯಗಾರರು ಪುರಪ್ರಮುಖರು ಇಲ್ಲಿಯ ಕಾರ್ಯಕ್ರಮಗಳನ್ನು ನೋಡುತ್ತಿದ್ದರು. ಒಂದು ಭಾಗದ ದ್ವಾರವನ್ನು ಮುಚ್ಚಿ, ಲಕ್ಷ್ಮಿನಾರಾಯಣಸ್ವಾಮಿ ಗುಡಿಯನ್ನಾಗಿಸಿದ್ದಾರೆ.
ಉಚ್ಚಂಗಿ ಬಾಗಿಲು :
ಪಾಳೆಯಗಾರರ ಮನೆದೇವತೆ ಉಚ್ಚಂಗಮ್ಮ ಈ ದೇವತೆಯ ಹೆಸರಿನಲ್ಲೇ ಕೋಟೆಯ ಪಶ್ಚಿಮ ದಿಕ್ಕಿನ ಬಾಗಿಲಿಗೆ ಉಚ್ಚಂಗಿ ಬಾಗಿಲು ಎನ್ನುತ್ತಾರೆ. ಈ ದ್ವಾರದ ಮೂಲಕ ಸಿಹಿನೀರು ಹೊಂಡಕ್ಕೆ ಹೋಗಬಹುದು. ಈ ಬಾಗಿಲ ಬಳಿ ನರಸಿಂಹ, ಆಂಜನೇಯನ ದೇವಾಲಯಗಳಿವೆ. ಒಂದು ವೃಂದಾವನವು ಇದೆ. ಹಿಂದೆ ಈ ಹೊಂಡದಲ್ಲಿ ದೇವಿಯ ತೆಪ್ಪೋತ್ಸವ ನಡೆಯುತ್ತಿದ್ದಿತಂತೆ. ಈ ಹೊಂಡದ ನೀರನ್ನೇ ದೇವಿಯ ಅಭಿಷೇಕ್ಕೆ ಉಪಯೋಗಿಸುತಿದ್ದರಂತೆ.
ಜೋಡು ಬತೇರಿ ಬಾಗಿಲು:
ಇದಕ್ಕೆ ಇನ್ನೊಂದು ಹೆಸರು ಲಾಲ್ ಗಡದ ಬತೇರಿ ಬಾಗಿಲು. ಲಾಲ್ ಗಡ್ ಎಂದು ಹೇಳಲು ಈ ಭಾಗದ ಕೋಟೆಗೆ ಕೆಂಪುವರ್ಣದ ಕಲ್ಲನ್ನು ಉಪಯೋಗಿಸಿರುವುದು. ಪಾಳೆಯಗಾರರ ದೇವರಾದ ಅಹೋಬಲ ನರಸಿಂಹನ ಹೆಸರಿನಿಂದಲೂ ಕರೆಯುತ್ತಾರೆ.
ಹನುಮನ ಬಾಗಿಲು:
ಪಾಳೆಗಾರರ ಆರಾಧ್ಯ ದೈವ ಹನುಮ. ಅವರ ಧ್ವಜವೂ ಸಹ ಹನುಮದ್ಗರುಡ ಲಾಂಛನ ಉಳ್ಳದ್ದು. ಈ ಕೋಟೆಯ ಪಶ್ಚಿಮದಲ್ಲಿ ಹನುಮಂತ ದೇವಾಲವಿದೆ. ಆದ್ದರಿಂದ ಹನುಮನ ಬಾಗಿಲೆಂತಲೂ ಕರೆಯುತ್ತಾರೆ.
ಗಾರೆ ಬಾಗಿಲು:
ಉಚ್ಚಂಗಮ್ಮನ ಗುಡಿಯಿಂದ ಬೆಟ್ಟದ ದಕ್ಷಿಣ ಭಾಗದಲ್ಲಿರುದೇ ಗಾರೆ ಬಾಗಿಲು ಕೋಟೆಯ ಏಳನೇ ಸುತ್ತು ಇಲ್ಲಿಂದಲೇ ಆರಂಭವಾಗುತ್ತದೆ. ನಯವಾದ ಗಾರೆಗಚ್ಚಿನಿಂದ ಕಟ್ಟಿರುವುದರಿಂದ ಗಾರೆಬಾಗಿಲು ಎನ್ನುತ್ತಾರೆ.
ಕಾಮನ ಬಾಗಿಲು:
ಬೆಟ್ಟಕ್ಕೇರಲು ಹಾಗೂ ಕೋಟೆಯ ಮುಖ್ಯದ್ವಾರಕ್ಕೆ ಮತ್ತು ಮೂರನೇ ಸುತ್ತಿನ ಕೋಟೆ ಪ್ರವೇಶಿಸುವ ಬಾಗಿಲೇ ಕಾಮನ ಬಾಗಿಲು. ಇಡೀ ಚಿತ್ರದುರ್ಗದ ಕೋಟೆಯ ಮಹಾದ್ವಾರಗಳಲ್ಲೇ ಅತ್ಯಂತ್ಯ ಪ್ರಮುಖ, ಸುಂದರ, ಸುಭದ್ರ, ಕಲಾತ್ಮಕ ಬಾಗಿಲು. 25 ಅಡಿ ಎತ್ತರದ ಈ ಭಾರಿ ಗೋಡೆಗಳ ಹೊರಭಾಗದಲ್ಲಿ ಆದಿಶೇಷ, ಶಿವಲಿಂಗ, ವಿಘ್ನೇಶ್ವರ, ಬಸವ, ಹಂಸ, ಕಮಲ, ಗಂಡಭೇರುಂಡ ಮುಂತಾದ ಸುಂದರ ಶಿಲ್ಪಗಳಿವೆ. ಬಾಗಿಲ ಬಳಿ ಸುಮಾರ 10 ಅಡಿ ಎತ್ತರದ ಕಲ್ಲಿನ ತೊಟ್ಟಿ ಇದೆ. ಈ ತೊಟ್ಟಿಯಲ್ಲಿ ಆನೆಗಳು ನೀರು ಕುಡಿಯುತ್ತಿದ್ದವಂತೆ. ಈ ಬಾಗಿಲ ಪಕ್ಕದಲ್ಲೇ ಒಂದು ಚೌಕಾಕಾರದ ಸುಂದರ ಹೊಂಡವಿದೆ. ಕಾಮನಬಾಗಿಲ ಬಳಿ ಇರುವುದರಿಂದ ಇದಕ್ಕೆ ‘ಕಾಮನಬಾವಿ’ ಎನ್ನುತ್ತಾರೆ.
ಕೋಟೆಯೊಳಗಿನ ಸುತ್ತುಗಳು
ಹೊರಸುತ್ತಿನ ಕೋಟೆ:
ರಂಗಯ್ಯನ ಬಾಗಿಲು, ಲಾಲ್ ಕೋಟೆ ಬಾಗಿಲು, ಉಚ್ಚಂಗಿ ಬಾಗಿಲು, ಸಂತೆ ಬಾಗಿಲನ್ನು ಒಳಗೊಂಡಿದೆ.
ಗಾರೆ ಬಾಗಿಲು ಸುತ್ತು ಕೋಟೆ:
ಎರಡನೇ ಸುತ್ತು ಕೋಟೆಯ ಆವರಣ ಆವರಿಸಿದೆ.
ಕಾಮನ ಬಾಗಿಲು ಸುತ್ತು ಕೋಟೆ:
ಕೋಟೆಯ ಮೂರನೇ ಸುತ್ತನ್ನು ಒಳಗೊಂಡಿದೆ.
ಜಾಗಟೆ ಬಾಗಿಲು ಸುತ್ತು ಕೋಟೆ:
ಈ ನಾಲ್ಕನೇ ಸುತ್ತಿನ ಕೋಟೆಯ ಬಾಗಿಲಿಗೆ ವಿಷದ ಕತ್ತಿ ಬಾಗಿಲು ಎನ್ನುತ್ತಾರೆ.
ಗಂಟೆ ಬಾಗಿಲು ಸುತ್ತು ಕೋಟೆ:
ಐದನೇ ಸುತ್ತಿನ ಕೋಟೆಯ ಆವರಣ ಹೊಂದಿರುವ ಬಾಗಿಲಿಗೆ ಗಂಟೆ ಬಾಗಿಲು ಎನ್ನುತ್ತಾರೆ.
ಟೀಕಿನ ಬಾಗಿಲು :
ಈ ಭಾಗದ ಕೋಟೆಯ ಬಾಗಿಲಿಗೆ ಕಸ್ತೂರಿ ರಂಗಪ್ಪನಾಯಕರ ಬಾಗಿಲು, ಟೀಕಿನ ಬಾಗಿಲು ಎಂದು ಕರೆಯುತ್ತಾರೆ.
ಏಕನಾಥೇಶ್ವರಿ ಬಾಗಿಲು ಕೋಟೆ:
ಈ ಭಾಗದ ಕೋಟೆಯಲ್ಲಿ ಅರಮನೆ, ನಾಗರ, ತುಪ್ಪದ ಕೊಳ ಮುಂತಾದವುಗಳಿವೆ. ಏಕನಾಥೇಶ್ವರಿ ದೇವಾಲಯವಿದೆ. ಈ ಬಾಗಿಲಿಗೆ ಅಜ್ಜಿ ಬಾಗಿಲು ಎನ್ನುತ್ತಾರೆ.
ಪರಶುರಾಂಪುರದ ಚನ್ನಕೇಶವ ದೇವಾಲಯ
ಪರಶುರಾಂಪುರವು ಚಳ್ಳಕೆರೆಯಿಂದ ಪೂರ್ವಕ್ಕೆ 30 ಕಿ.ಮೀ. ದೂರದಲ್ಲಿರುವ ಆಂಧ್ರದ ಗಡಿಯಲ್ಲಿರುವ ಹೋಬಳಿ ಕೇಂದ್ರ. ದಕ್ಷಿಣಕ್ಕೆ ಊರ ಹೊರವಲಯ ಕೆರೆಯ ಕೆಳಗೆ ಚನ್ನಕೇಶವ ದೇವಸ್ಥಾನವಿದೆ. ದೇವಸ್ಥಾನದ ಎದುರಿಗೆ ಶ್ರೀ ವೈಷ್ಣವ ಪಂಥದ ಮುದ್ರೆಯನ್ನು ಸಾಂಕೇತಿಕವಾಗಿ ಸೂಚಿಸುವಂತಿರುವ ಮೂರು ಗರುಡ ಸ್ತಂಭಗಳಿವೆ. ಅವುಗಳ ಪಕ್ಕದಲ್ಲಿ ಆಳೆತ್ತರದ ನಿಲುವು ಬಂಡೆಗಳಲ್ಲಿ ಭಕ್ತಿಯಿಂದ ಕೈಮುಗಿದ ಗರುಡ ಮತ್ತು ಅದರ ಎದುರಿಗೆ ಇರುವ ಮತ್ತೊಂದು ಬಂಡೆಯಲ್ಲಿ ಹನುಮಂತನ ರೇಖಾಚಿತ್ರಗಳನ್ನು ಬಿಡಿಸಿ ಬಣ್ಣಗಳಿಂದ ತುಂಬಿದ್ದಾರೆ. ದೇವಸ್ಥಾನದ ಕಟ್ಟಡ ಸಾಧಾರಣ ಗೋಡೆಯಿಂದ ಕೂಡಿದೆ. ಆದರೆ ಗರ್ಭಗುಡಿಯಲ್ಲಿರುವ ಚನ್ನಕೇಶವ ವಿಗ್ರಹ, ಪಕ್ಕದ ಇನ್ನೊಂದು ಗರ್ಭಗುಡಿಯಲ್ಲಿರುವ ಲಕ್ಷ್ಮಿಯ ವಿಗ್ರಹ, ನವರಂಗದ ಪಕ್ಕದ ಗೋಡೆಯ ಬಳಿ ಪ್ರತಿಷ್ಟಾಪಿಸಲಾಗಿರುವ ಆಳ್ವಾರ ವಿಗ್ರಹವನ್ನು ಕಾಣಬಹುದು.
ಪರಶುರಾಂಪುರದ ಹಂಪಯ್ಯನ ಮಠ
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರ ಗ್ರಾಮದಿಂದ ಕೊರ್ಲಕುಂಟೆ ಗ್ರಾಮದ ಮಾರ್ಗವಾಗಿ ಸುಮಾರು ಅರ್ಧ ಕಿ.ಮೀ. ದೂರದಲ್ಲಿರುವ ಕೋಟೆಕೆರೆ ಜಮೀನೊಂದರಲ್ಲಿ ಗತಕಾಲ ವೈಭವವನ್ನು ಸಾರುವ, ಈಗ ಹಾಳು ಬಿದ್ದಿರುವ ಮಠವೊಂದು ಕಣ್ಣಿಗೆ ಕಾಣುತ್ತದೆ. ಇದು ಚೋಳಕಾಲದ ಇತಿಹಾಸವನ್ನು ಸಾರುತ್ತದೆ.
ಕೋಟೆಕೆರೆಯ ಜಿ.ಶಾಂತಪ್ಪಗೌಡರ ಜಮೀನಿನಲ್ಲಿ ಹಂಪಯ್ಯ ಎಂಬ ಸಾಧು ಕಟ್ಟಿಸಿದ ಮಠ ಎಂಬುದು ಆಧಾರವಿಲ್ಲದ ಸತ್ಯ. ಈ ಮಠವು 13 ಕಂಬಗಳಿಂದ ರಚಿಸಲ್ಪಟ್ಟಿದ್ದು, ಕಂಬಗಳ ನಾಲ್ಕು ಬದಿಯಲ್ಲಿ ವಿವಿಧ ಬಗೆಯ ಶಿಲ್ಪಕೃತಿಗಳನ್ನು ಕೆತ್ತಲಾಗಿದೆ. ಬಸವಣ್ಣ, ಹಂಪಯ್ಯ, ಲಕ್ಷ್ಮಿ, ವ್ಯಾಸ, ವೀರಭದ್ರಸ್ವಾಮಿ, ನಟರಾಜ, ಮೂರು ತಲೆ ಹಸು ಲಿಂಗಕ್ಕೆ ಹಾಲುಣಿಸುತ್ತಿರುವುದು, ಪೂರ್ಣಚಂದ್ರ, ಚಕ್ರ, ಆನೆ, ಗಣಪತಿ, ಕಾಮಧೇನು, ಹೀಗೆ ವಿವಿಧ ಭಂಗಿಗಳನ್ನು ಕಂಬಗಳಲ್ಲಿ ಚಿತ್ರಿಸಲಾಗಿದೆ. ಈ ಮಠದ ದಕ್ಷಿಣ ಭಾಗದಲ್ಲಿ 16 ಕಂಬಗಳಿದ್ದು, ಅದರಲ್ಲಿ 3 ಕಂಬಗಳು ಬಿದ್ದುಹೋಗಿದ್ದು, ಮಂಟಪದ ಸುತ್ತ ಹಾಗೂ ಒಳಗೆ ಅವನತಿಯ ಅಂಚಿನಲ್ಲಿದೆ. ಇದರ ಬಗ್ಗೆ ರಾಜ್ಯ ಸರ್ಕಾರ ಹಾಗೂ ಪ್ರವಾಸೋದ್ಯಮ ಇಲಾಖೆ ಗಮನಹರಿಸುವುದು ಅವಶ್ಯವಾಗಿದೆ.
ಈ ಮಠದಿಂದ ಸ್ವಲ್ಪ ಹಿಂದೆ ವೀರಭದ್ರಸ್ವಾಮಿ ದೇಗುಲವೊಂದು ಕಂಡು ಬರುತ್ತದೆ. ಈ ದೇಗುಲವೂ ಸಹ ಅದೇ ಕಾಲದ್ದಾಗಿದ್ದು, ಅದರಲ್ಲಿಯೂ ಸಹ ಶಿಲ್ಪಕೃತಿಗಳು ಕಂಡು ಬರುತ್ತದೆ. ಅಲ್ಲದೇ ಸುತ್ತಮುತ್ತಲೂ ಶಾಸನಗಳು, ವೀರಗಲ್ಲುಗಳು ಕಾಣಸಿಗುತ್ತದೆ. ಗರ್ಭಗುಡಿಯ ಮುಂಭಾಗ ಮೇಲೆ ಒಂದು ಹಾವು ಚಂದ್ರನನ್ನು ನುಂಗುವ ಕಲಾಕೃತಿಯನ್ನು ನಯನ ಮನೋಹರವಾಗಿ ಕೆತ್ತಿಸಲಾಗಿದೆ. ಇತಿಹಾಸ ಸಂರಕ್ಷಣೆ ನಮ್ಮ ಕೈಯಲ್ಲಿಯೇ ಇದೆಯಾದರೆ, ಇಂತಹವುಗಳನ್ನು ನಾವು ಏಕೆ ಸಂರಕ್ಷಿಸಬಾರದು?
9ನೇ ಶತಮಾನದ ಮಲ್ಲೇಶ್ವರ ದೇವಾಲಯ
ಚಳ್ಳಕೆರೆ ತಾಲ್ಲೂಕಿನಿಂದ ಸೋಮಗುದ್ದು-ಸೊಂಡೇಕೆರೆ ಮಾರ್ಗವಾಗಿ ಸುಮಾರು 13 ಕಿ.ಮೀ. ದೂರದಲ್ಲಿರುವ ಚಿಕ್ಕಮಧುರೆ ಎಂಬ ಗ್ರಾಮವಿದೆ. ಚಿಕ್ಕಮಧುರೆ ಎಂಬ ಗ್ರಾಮದಲ್ಲಿ ಸುಮಾರು ಅರ್ಧ ಕಿ.ಮೀ. ನಷ್ಟು ಒಂದು ಸುಂದರ ದೇವಾಲಯವು ಕಾಣಸಿಗುತ್ತದೆ. ಇದು ನೊಳಂಬರ ಕಾಲದ ದೇವಾಲಯವಾಗಿದ್ದು, ಈ ದೇವಾಲಯವು ಈಗ ಜೀರ್ಣೋದ್ಧಾರಗೊಂಡಿದೆ. ಈಗ ನೋಡಲಿಕ್ಕೆ ಇದು ಪ್ರಾಚೀನ ದೇವಾಲಯದಂತೆ ಕಾಣುವುದಿಲ್ಲವಾದರೂ ಈ ದೇಗುಲದ ಮುಂದಿರುವ ಶಿಲ್ಪಕಲೆಗಳು, ಶಾಸನಗಳೇ ಸಾಕ್ಷಿ.
ಇದು ನೊಳಂಬರ ಕಾಲದಲ್ಲಿ ಕಟ್ಟಿಸಿರಬಹುದೆಂದು ಕಂಡು ಬಂದಿರುತ್ತದೆ. ಈ ದೇವಸ್ಥಾನದಿಂದ ಕಂಬ ಶಾಸನದಿಂದ ಕ್ರಿ.ಶ. 815ರಲ್ಲಿ ಸಿಂಹಪೋತನ ಮಗ ಪರಮೇಶ್ವರ ಪಲ್ಲವಾದಿ ರಾಜ ಹಾಗೂ ಅವನ ಮಗ ಪಲ್ಲವಮಲ್ಲ ಇವರು ರಾಷ್ಟ್ರಕೂಟರ ಸಾಮಂತರಾಗಿದ್ದರೆಂದು, ತಲಕಾಡಿನ ಗಂಗರು ಇವರಿಗೆ ಸೋತು ಸಾಮಂತರಾಗಿದ್ದರೆಂದು, ಪರಮೇಶ್ವರ ಪಲ್ಲವನು ನೊಳಂಬಾಳಿಗೆ ನೀರ್ಗುಂದ ನಾಡನ್ನು ಆಳುತ್ತಿದ್ದಾಗ ಅವನ ರಾಣಿ ಗಾವಗನಬ್ಬೆ, ನಾರಮಾರಬ್ಬೆಯರು ಶಿವಾಲಯಕ್ಕೆ ದತ್ತಿ ಬಿಟ್ಟಿದ್ದನ್ನು, ಪರಮೇಶ್ವರನ ಸೋದರಿ ಪೆರ್ಮಾಡಿಯ ರಾಣಿಯಾಗಿದ್ದನ್ನು, ಗಂಗನೊಳಂಬರ ವೈವಾಹಿಕ ಸಂಭಂಧವನ್ನು, ದಾನನಬ್ಬೆಯ ಮದರಿಕಲ್ಲಿನ ಗಾವಗನೇಶ್ವರಿ ದೇವಾಲಯವೊಂದನ್ನು ಕಟ್ಟಿಸಿ ಭೂದತ್ತಿ ನೀಡಿದಳೆಂದು ಈ ಕನ್ನಡ ಶಾಸನ ತಿಳಿಸುತ್ತದೆ. ಅಲ್ಲದೇ ನೊಳಂಬರ ಕಾಲದ ರಾಜಮಾತೆಯು ಇಲ್ಲಿರುವ ಶಿವಲಿಂಗವನ್ನು ಪ್ರತಿಷ್ಟಾಪಿಸಿದಳೆಂದು ತಿಳಿದು ಬಂದಿದೆ. ಈ ಗ್ರಾಮದ ಸುತ್ತಮುತ್ತಲ ಹೊಲಗಳಲ್ಲಿ ವೀರಗಲ್ಲುಗಳು, ಶಾಸನಗಳು ಪತ್ತೆಯಾಗಿದೆ.
ಉಮಾ ಮಹೇಶ್ವರ ದೇವಾಲಯ
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಹೋಬಳಿಯಲ್ಲಿ ನಾಯಕನಹಟ್ಟಿ ಗ್ರಾಮದಿಂದ ಸುಮಾರು 7-8 ಕಿ.ಮೀ. ದೂರದಲ್ಲಿರುವ ಎನ್.ಗೌರಿಪುರ ಎಂಬ ಗ್ರಾಮವಿದೆ. ಈ ಗ್ರಾಮದಲ್ಲಿ ವಿಜಯನಗರ ಅರಸರ ಕಾಲದಲ್ಲಿ ಸ್ಥಾಪಿತವಾಗಿರುವ ಹಾಗೂ ದಕ್ಷಿಣ ಭಾರತದಲ್ಲೇ ಇತಿಹಾಸದ ಹಿನ್ನೆಲೆಯನ್ನು ಹೊಂದಿರುವ ಏಕಶಿಲಾ ಗೌರಿಶಂಕರ ವಿಗ್ರಹವುಳ್ಳ ದೇವಾಲಯವು ಇಲ್ಲಿದೆ. ಈ ದೇವಾಲಯದ ವಿಶೇಷತೆ ಏನೆಂದರೆ ಶಿವನ ತೊಡೆಯ ಮೇಲೆ ಪಾರ್ವತಿದೇವಿ ಕುಳಿತಿರುವ ಹಾಗೂ ಒಂದೇ ಕಲ್ಲಿನಲ್ಲಿ ಕೆತ್ತಿರುವ ವಿಗ್ರಹವು ದಕ್ಷಿಣ ಭಾರತದಲ್ಲಿಯೇ ಎಲ್ಲಿಯೂ ಇಲ್ಲವೆಂಬುದು. ಈ ಗ್ರಾಮವು ಚಳ್ಳಕೆರೆಯಿಂದ ಸುಮಾರು 22 ಕಿ.ಮೀ. ಗೌರಿಯನ್ನು ತೊಡೆಯ ಮೇಲೆ ಕುಳ್ಳಿರಿಸಿದಂತಹ ಭಂಗಿ ನಿಜಕ್ಕೂ ನಯನ ಮನೋಹರ. ನಿಜಕ್ಕೂ ಅಪರೂಪ! ಹಾಗೂ ಅಮೋಘ!!
ಈ ದೇಗುಲದ ಗರ್ಭಗುಡಿಯ ಮುಂದಿನ ನವರಂಗದ ಚಚ್ಚೌಕದ ಕಂಬಗಳು ತಮ್ಮ ಶಿಲ್ಪಕಲೆಯೊಂದಿಗೆ ಸೆಳೆಯುತ್ತವೆ. ಕಂಬಗಳಲ್ಲಿ ನರಸಿಂಹ, ಗಿಳಿ, ಬೇಡರಕಣ್ಣಪ್ಪ, ಭೈರಾಗಿ, ಇನ್ನು ಮುಂತಾದ ಆಕರ್ಷಕ ಕೃತಿಗಳನ್ನು ರಚಿಸಲಾಗಿದೆ. ಶಿವ-ಪಾರ್ವತಿಯರಿಗೆ ಎದುರಾಗಿ ನಂದಿ ವಿಗ್ರಹವೂ ಇದೆ. ಈ ದೇವಾಲಯವನ್ನು ನೋಡಲು ನಾಡಿನೆಲ್ಲೆಡೆಯಿಂದ ಶಿವಭಕ್ತರೂ ಬರುತ್ತಾರೆ. ಸಾಮಾನ್ಯವಾಗಿ ಶಿವನ ದೇವಾಲಯವೆಂದರೆ ಎಲ್ಲೆಡೆಯೂ ಲಿಂಗರೂಪದಲ್ಲಿಯೇ ಹೆಚ್ಚಾಗಿರುತ್ತದೆ. ಆದರೆ ಈ ದೇಗುಲದಲ್ಲಿ ಶಿವನು ಗೌರಿಸಮೇತನಾಗಿರುವುದು ಹಾಗೂ ಪುತ್ರರತ್ನರಾದ ಗಣೇಶ-ಸುಬ್ರಹ್ಮಣ್ಯರೊಂದಿಗೆ ಕುಟುಂಬ ಸಮೇತನಾಗಿರುವುದು ವಿಶೇಷ.
ಹೊಸಗುಡ್ಡ ಗುಹಾಂತರ ದೇವಾಲಯ (ರಾಮದುರ್ಗ)
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯ ಹೀಗೊಂದು ಕಾಲಕ್ಕೆ ಕೇವಲ “ಹಟ್ಟಿ” ಎಂಬ ಹೆಸರನ್ನು ಹೊಂದಿದ್ದ ಪಾಳೆಯಪಟ್ಟಾಗಿತ್ತು. ಈ ಹಟ್ಟಿಯನ್ನಾಳಿದ ಪಾಳೆಯಗಾರರೇ “ಹಟ್ಟಿ ಪಾಳೆಯಗಾರರು” ಎಂದು ಹೆಸರಾಗಿದ್ದಾರೆ. ಈ ಪಾಳೆಯಗಾರರಲ್ಲಿ ಒಬ್ಬನಾದ ಕಾಕಳನಾಯಕನೇ ಹಟ್ಟಿಯ ಮೂಲ ನಿರ್ಮಾಪಕ ಎನ್ನಲಾಗಿದೆ. ಇವನ ಮಗನೇ ದೊಡ್ಡಿಲ ಮಲ್ಲಪ್ಪನಾಯಕ. ಅವರ ಎರಡನೇ ಮಗನೇ ಬೋಡಿ ಮಲ್ಲಪ್ಪನಾಯಕ. ಚಿತ್ರದುರ್ಗದ ಚಿಕ್ಕಣ್ಣನಾಯಕನ ತಂಗಿ “ಸರ್ಜಮ್ಮನಾಗತಿ” ಕಾಕಳನಾಯಕನ ಹೆಂಡತಿ. ಒಮ್ಮೆ ಈ ನಾಯಕನು ಕಾಶೀಯಾತ್ರೆ ಮಾಡುತ್ತಾ, ಆನೆಗೊಂದಿ ಪಟ್ಟಣಕ್ಕೆ ಬಂದನು. ಅಲ್ಲಿ ಭೀಮಾ ಜಟ್ಟಿ ಎಂಬುವವನೊಬ್ಬನು ತನ್ನನ್ನು ಸೋಲಿಸುವರೇ ಇಲ್ಲ ಎಂದು ಹೇಳಿಕೊಳ್ಳುತ್ತಿದ್ದನು. ಅಂತಹ ಜಟ್ಟಿಯನ್ನು ಕಾಕಳನಾಯಕನು ದ್ವಂದ್ವಯುದ್ಧದಲ್ಲಿ ಮಣ್ಣು ಮುಕ್ಕಿಸಿದನು. ಆನೆಗೊಂದಿಯ ರಾಯರು ಇವನ ಸಾಹಸ, ಪರಾಕ್ರಮಗಳನ್ನು ಮೆಚ್ಚಿ, ಇವನಿಗೆ ಮೂರು ಗ್ರಾಮಗಳನ್ನು ಕೊಟ್ಟು, ಹಾಗೆಯೇ “ಭೀಮ” ಎಂಬ ಬಿರುದು ನೀಡಿ ಸನ್ಮಾನಿಸಿದರು.
ಮುಂದೆ ಬೋಡಿ ಮಲ್ಲಪ್ಪನಾಯಕನು ಕಾಶಿಯಿಂದ “ಬೋಡಿಲಿಂಗವನ್ನು ರಾಮೇಶ್ವರದಿಂದ ಮತ್ತೊಂದು ಲಿಂಗವನ್ನು ತೆಗೆದುಕೊಂಡು ಬಂದು ರಾಮದುರ್ಗದಲ್ಲಿ ಪ್ರತಿಷ್ಟಾಪಿಸಿದನು. ನಾಯಕನಹಟ್ಟಿಯ ದಕ್ಷಿಣಕ್ಕಿರುವ ಈ ಗುಡ್ಡ ಕೋಟೆ ಕಟ್ಟಲು ಪ್ರಶಸ್ತ ಸ್ಥಳ ಎನಿಸಿದ್ದರಿಂದ ಅದನ್ನು “ರಾಮದುರ್ಗ” ಎಂದು ಕರೆದನು. ಇದಲ್ಲದೇ ಈ ನಾಯಕನು ಏಳು ಕೆರೆ ಮತ್ತು ಒಂಭತ್ತು ಗ್ರಾಮಗಳನ್ನು ಕಟ್ಟಿಸಿದನು. ಆನೆಗೊಂದಿ ರಾಯರು ಕೊಟ್ಟ “ಭೀಮ” ಎಂಬ ಬಿರುದು ಸದಾಕಾಲ ಉಳಿಯುವಂತೆ ಅವನು ಕಟ್ಟಿಸಿದ ಕೆರೆಯಲ್ಲಿ ಒಂದಕ್ಕೆ “ಭೀಮನಕೆರೆ” ಎಂದು ಹೆಸರಿಟ್ಟನು.
(ಆಧಾರ: “ಹರಿತಿ ಸಿರಿ” – ಲಕ್ಷ್ಮಣ್ ತೆಲಗಾವಿ)
ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ ಕ್ಷೇತ್ರ
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಪುಣ್ಯಕ್ಷೇತ್ರವು ರಾಜ್ಯದ್ಯಾಂತ ಮನೆಮಾತಾಗಿರುವ ಮಹಾಕ್ಷೇತ್ರವಾಗಿದೆ. ಚಳ್ಳಕೆರೆ ನಗರದಿಂದ ಸುಮಾರು 16 ಕಿ.ಮೀ. ದೂರದಲ್ಲಿರುವ ಈ ಕ್ಷೇತ್ರವು ಐತಿಹಾಸಿಕ ಹಿನ್ನೆಲೆಯೂ ಹೊಂದಿದೆ.
ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಜಾತ್ರೆ:
ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿ ಕಂದಾಯ ಹೋಬಳಿ ಕೇಂದ್ರಸ್ಥಳವಾಗಿದ್ದು, ಈ ಗ್ರಾಮದಲ್ಲಿ ಪ್ರತಿವರ್ಷ ಫಾಲ್ಗುಣ ಮಾಸ ಬಹುಳದ ಚಿತ್ತ ನಕ್ಷತ್ರದಂದು ಗುರುತಿಪ್ಪೇರುದ್ರಸ್ವಾಮಿ ಜಾತ್ರಾ ರಥೋತ್ಸವವು ಕರ್ನಾಟಕ ರಾಜ್ಯದಲ್ಲಿ ನಡೆಯುವ ಅತ್ಯಂತ್ಯ ದೊಡ್ಡ ಜಾತ್ರೆಗಳಲ್ಲಿ ಒಂದು. ನಾಯಕನಹಟ್ಟಿ ಜಾತ್ರೆಯು ಹಿಂದೂ-ಮುಸಲ್ಮಾನರ ಭಾವೈಕ್ಯತೆಯ ದ್ಯೋತಕವಾಗಿದೆ. ಇಲ್ಲಿನ ಕೇಂದ್ರ ಶಕ್ತಿಯಾದ ಗುರು ತಿಪ್ಪೇರುದ್ರಸ್ವಾಮಿಯನ್ನು “ಶ್ರೀ ಗುರು ತಿಪ್ಪೇರುದ್ರಸ್ವಾಮಿ” ಎಂತಲೂ ಕರೆಯುತ್ತಾರೆ. ಹಿಂದೆ ಪಂಚಗಣಾಧೀಶ್ವರರೆಂದು ಹೇಳಲಾಗಿರುವ ಕೋಲುಶಾಂತೇಶ, ಕೆಂಪಯ್ಯ, ಚೆನ್ನಪ್ಪಯ್ಯ, ಚನ್ನಬಸವೇಶ್ವರ ಹಾಗೂ ತಿಪ್ಪೇಸ್ವಾಮಿಗಳು ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ಜನಜಾಗೃತಿಯನ್ನು ಮೂಡಿಸಿದ್ದರು ಎನ್ನಲಾಗಿದೆ. ಈ ಐವರಲ್ಲಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಯವರು ನಿಜಗಲ್ಲು-ರಾಯದುರ್ಗ ಕಡೆಗಳಲ್ಲಿ ಸಂಚರಿಸುವ ಸಂಧರ್ಭದಲ್ಲಿ ಫಣಿಯಪ್ಪ ಎಂಬ ಭಕ್ತನ ವ್ಯಕ್ತಿತ್ವಕ್ಕೆ ಮಾರುಹೋಗಿ, ಅವರನ್ನು ತನ್ನೊಂದಿಗೆ ಕರೆತರುತ್ತಾರೆ. ಅಲ್ಲಿಯ ಹಳ್ಳಿಜನರ ಬಡತನದ ಬಗ್ಗೆ ಅರಿತ ಸ್ವಾಮಿಗಳು ಅಲ್ಲಲ್ಲಿ ಕೆಲವು ಕೆರೆಗಳನ್ನು ನಿರ್ಮಿಸುತ್ತಾರೆ. ಕೂಲಿಕಾರರಿಗೆ ದಿನದ ಕೂಲಿಯನ್ನು “ಮಾಡಿದಷ್ಟು ನೀಡು ಭಿಕ್ಷೆ” ಎಂಬ ಮಂತ್ರಶಕ್ತಿಯಿಂದ ಸೃಷ್ಟಿಸುತ್ತಿದ್ದರು ಎಂಬ ದಂತಕಥೆಯು ಇದೆ.
ಪವಾಡ ಪುರುಷರಾಗಿದ್ದರೆಂದು ನಂಬಲಾದ ಶ್ರೀ ಗುರು ತಿಪ್ಪೇರುದ್ರಸ್ವಾಮಿಯವರು ಯಾವ ಸ್ಥಳದವರು? ಯಾವ ಜಾತಿಯವರು? ಎಂಬ ಬಗ್ಗೆ ಈಗಲೂ ವಿವಾದಗಳಿವೆ. ಇವರು ವೀರಶೈವರೆಂದು ಕೆಲವರು ನಂಬಿದ್ದಾರೆ. ಇವರು ಬೇಡ ಜನಾಂಗದವರು ಇದ್ದಿರಬಹುದೆಂದು ಕೆಲವರ ವಾದ. ಒಂದು ದಿನ ನಾಯಕನಹಟ್ಟಿಗೆ ಬಂದ ತಿಪ್ಪೇಸ್ವಾಮಿಯವರು ಅದೇ ಗ್ರಾಮದಲ್ಲಿದ್ದ ಮಾರಮ್ಮನ ಗುಡಿಗೆ ಹೋಗಿ ಒಂದೆರಡು ದಿನ ತಂಗಲು ಸ್ಥಳಾವಕಾಶ ನೀಡಲು ಮಾರಮ್ಮದೇವಿಯ ಅಪ್ಪಣೆ ಪಡೆದರೆಂದೂ, ಮಾರಮ್ಮ ಬದಲು ಹಳ್ಳಿಗಳಿಗೆ ತಿರುಗಾಡಿ ಬರಲು ಹೋದಾಗ ಗುಡಿಯ ತುಂಬಾ ತಿಪ್ಪೇಸ್ವಾಮಿಯವರ ಜೋಳಿಗೆ-ಬೆತ್ತಗಳು ಕಾಣಿಸಿಕೊಂಡು, ಇದನ್ನು ಕಂಡ ಮಾರಮ್ಮ ಗುಡಿಯನ್ನು ತಿಪ್ಪೇಸ್ವಾಮಿಯವರಿಗೆ ಬಿಟ್ಟುಕೊಟ್ಟು ವಡ್ನಹಳ್ಳಿಗೆ ಹೋಗಿ ನೆಲೆಸಿದಳೆಂದು ಇಲ್ಲಿನ ಜನರು ಕಥೆ ಹೇಳುವುದಿದೆ. ಈಗ ಅದೇ ಗುಡಿ “ಶ್ರೀ ಗುರು ತಿಪ್ಪೇಸ್ವಾಮಿಯ ಒಳಮಠ”. ಇಲ್ಲಿ ತಿಪ್ಪೇಸ್ವಾಮಿಯವರನ್ನು ಲಿಂಗರೂಪದಲ್ಲಿ ಪ್ರತಿಷ್ಟಾಪಿಸಿ ಆರಾಧಿಸಲಾಗುತ್ತಿದೆ.
ಹೊರಮಠ ಹಾಗೂ ಒಳಮಠ:
ನಾಯಕನಹಟ್ಟಿಯಲ್ಲಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಗೆ ಸಂಭಂಧಿಸಿದ ಎರಡು ಆರಾಧನಾ ಸ್ಥಳಗಳಾಗಿದ್ದು, ಅವುಗಳನ್ನು ಹೊರಮಠ ಹಾಗೂ ಒಳಮಠ ಎಂದು ಹೆಸರಿಸಲಾಗಿದೆ. ಶ್ರೀ ತಿಪ್ಪೇಸ್ವಾಮಿಗಳು ಜೀವಿತಾವಧಿಯಲ್ಲಿ ವಾಸವಾಗಿದ್ದ ಸ್ಥಳವು ಊರೊಳಗಿದ್ದು, ಅದನ್ನು ಒಳಮಠವೆಂದು ಕರೆಯುತ್ತಾರೆ. ಜೀವಂತ ಸಮಾಧಿ ಹೊಂದಿದ್ದ ಸ್ಥಳವು ಊರಿಂದ ಹೊರಗಡೆ ಚಿಕ್ಕಕೆರೆ ಹತ್ತಿರ ಇದ್ದು, ಇದಕ್ಕೆ ಹೊರಮಠ ಎನ್ನುವರು. ಒಳಮಠದ ಗೋಪುರವು 50 ಅಡಿ ಎತ್ತರವಿದ್ದು, ಅತ್ಯಾಕರ್ಷಕವಾಗಿದೆ. ಒಳಮಠದ ಮುಂದೆ ಜಾತ್ರೆ ಸಂಧರ್ಭದಲ್ಲಿ ಬೃಹತ್ತಾದ ಅಗ್ನಿಕುಂಡದಲ್ಲಿ ಒಣಕೊಬ್ಬರಿಯ ಹೋಳುಗಳ ರಾಶಿಯನ್ನು ಸುಡುವುದು ರಾಜ್ಯದಲ್ಲಿಯೇ ವಿಶೇಷ ಆಚರಣೆಯಾಗಿದೆ. ಈ ಆಚರಣೆಯ ಹಿಂದೆ ವಿಶಿಷ್ಟ ಕತೆಯೇ ಇದೆ. ತಿಪ್ಪೇಸ್ವಾಮಿಯವರು ಮೊದಲಿಗೆ ರಾಯದುರ್ಗದಿಂದ ನಾಯಕನಹಟ್ಟಿಗೆ ಬರುವಾಗ ರಾತ್ರಿ ಕತ್ತಲೆ ಆವರಿಸಿದ್ದು, ಫಣಿಯಪ್ಪನು ಒಣಕೊಬ್ಬರಿಗಳನ್ನು ಕೋಲುಗಳಿಗೆ ಸಿಕ್ಕಿಸಿ ಬೆಂಕಿಯಿಂದ ಹೊತ್ತಿಸಿ, ಆ ಬೆಳಕಿನಲ್ಲಿ ತಿಪ್ಪೇಸ್ವಾಮಿಯವರನ್ನು ಹಟ್ಟಿಗೆ ಕರೆತಂದನಂತೆ. ಆ ಕಾರಣಕ್ಕೆ ಇಂದಿಗೂ ತಿಪ್ಪೇರುದ್ರಸ್ವಾಮಿ ಜಾತ್ರೆಯಲ್ಲಿ ಭಕ್ತರು ಒಣಕೊಬ್ಬರಿ ಸುಡುವ ಸಂಪ್ರದಾಯ ರೂಢಿಯಲ್ಲಿದೆ. ಅದೇ ರೀತಿ ದುಂಡು ಮೆಣಸು ಎರಚುವ ಸಂಪ್ರದಾಯ ಇಲ್ಲಿ ಇರುತ್ತದೆ.
ಹೊರಮಠವನ್ನು ಶ್ರೀ ತಿಪ್ಪೇರುದ್ರಸ್ವಾಮಿ ‘ಗದ್ದುಗೆ’ ಎಂದು, ಒಳಮಠವನ್ನು ಶ್ರೀ ತಿಪ್ಪೇಸ್ವಾಮಿಯ ‘ಮಠ’ವೆಂದು ಕರೆಯುತ್ತಾರೆ. ಒಳಮಠಕ್ಕೆ ಶೈವರು ಪೂಜಾಧಿಕಾರವನ್ನು ಹೊಂದಿದ್ದರೆ, ಒಳಮಠದಲ್ಲಿ ಪ್ರತಿ ಸೋಮವಾರ ಪೂಜೆ ನಡೆಯುವುದಕ್ಕೆ ಹೊರಮಠಕ್ಕೆ ಜೀವಕಳೆ ಬರಬೇಕು ವಾಡಿಕೆಯಿದೆ! ನಾಯಕನಹಟ್ಟಿ ಜಾತ್ರೆಗೆ ಕರ್ನಾಟಕ ರಾಜ್ಯದ ಅನೇಕ ಜಿಲ್ಲೆಗಳಿಂದಷ್ಟೇ ಅಲ್ಲದೇ ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಿಂದಲೂ ಭಕ್ತಾದಿಗಳು ಸಾಗರೋಪಾದಿಯಲ್ಲಿ ಸೇರುತ್ತಾರೆ. ಸುತ್ತಲೂ ಹತ್ತಾರು ಸ್ಥಳಗಳಿಂದ ರಾಜ್ಯ ಸರ್ಕಾರದ ವಿಶೇಷ ಬಸ್ಸುಗಳ ಈ ಜಾತ್ರೆಗೆ ಹಗಲಿರುಳು ಸಂಚರಿಸುತ್ತವೆ.
- ಚಿತ್ತಾರದುರ್ಗ.ಕಂ
ತ.ರಾ.ಸುಬ್ಬರಾಯ (1920-1984)
ತ.ರಾ.ಸು. ಕುರಿತು....
ಬರೆದಂತೆ ಬದುಕಿದವರು ವಿರಳ, ಬರೆದೇ ಬದುಕಿದವರು ಇನ್ನೂ ವಿರಳ. ಆದರೆ ತ.ರಾ.ಸು. ರವರು ಬರೆದಂತೆ ಬದುಕಿದವರು. ಬರೆದೇ ಬದುಕಿದವರು. ಸುಮಾರು 68 ಕೃತಿಗಳನ್ನು ತಮ್ಮ ಜೀವಿತಾವಧಿಯಲ್ಲಿ ರಚಿಸಿದ ನಂತರವೂ ಬರವಣಿಗೆಗಿಂತ ಬದುಕೇ ದೊಡ್ಡದು ಎಂದು ನಂಬಿಕೊಂಡವರು. ಗಂಡು ಮೆಟ್ಟಿನ ನಾಡಾದ ಚಿತ್ರದುರ್ಗ ಜಿಲ್ಲೆಯು ಕೇವಲ ಗತಕಾಲದ ಇತಿಹಾಸ ಪುಟಗಳಲ್ಲಿ ಅಷ್ಟೇ ಉಳಿಯದೇ ಸಾಹಿತ್ಯ ಲೋಕಕ್ಕೂ, ಅನರ್ಘ್ಯ ರತ್ನಗಳನ್ನು ಕಾಣಿಕೆಯಾಗಿ ನೀಡಿದೆ. ಅವರಲ್ಲಿ ಪ್ರಮುಖರೆಂದರೆ ಕನ್ನಡದ ಅಶ್ವಿನಿ ದೇವತೆಗಳಲ್ಲಿ ಒಬ್ಬರೆಂದೇ ಹೆಸರಾದ ಶ್ರೀ ಟಿ.ಎಸ್.ವೆಂಕಣ್ಣಯ್ಯ, ತ.ಸು.ಶಾಮರಾಯರು, ಆಶುಕವಿಗಳಾದ ಶ್ರೀ ಬೆಳಗೆರೆ ಚಂದ್ರಶೇಖರಶಾಸ್ತ್ರಿಗಳು, ತ.ರಾ.ಸು. ಮುಂತಾದವರನ್ನು ಹೆಸರಿಸಬಹುದು. ತ.ರಾ.ಸು. ರವರ ಜನನ 1920 ನೇ ಏಪ್ರಿಲ್ 21 ರಂದು ಹರಿಹರ ತಾಲ್ಲೂಕಿನ ಮಲೇಬೆನ್ನೂರಿನಲ್ಲಿ ಜನಿಸಿದರು. ಇವರ ತಂದೆ ರಾಮಸ್ವಾಮಯ್ಯ, ತಳಕು ಗ್ರಾಮದ ಆಶುಕವಿಗಳು. ದೊಡ್ಡಸುಬ್ಬಣ್ಣನವರ ಎರಡನೇ ಮಗ; ತ.ರಾ.ಸು. ರವರ ತಂದೆ. ಹರಿಹರದಲ್ಲಿ ಅಮಲ್ದಾರರಾಗಿದ್ದವರು. ತಾಯಿ ಸೀತಮ್ಮನವರು ಸರಳ ಸಜ್ಜನಿಕೆಯ ಸ್ವಭಾವದ ಹೆಣ್ಣುಮಗಳು. ದೊಡ್ಡಪ್ಪ ಟಿ.ಎಸ್.ವೆಂಕಣ್ಣಯ್ಯ, ತ.ಸು.ಶಾಮರಾಯರು ಇವರ ಚಿಕ್ಕಪ್ಪ. ಹೀಗಾಗಿ ಇವರ ಮನೆಯ ಪರಿಸರದಲ್ಲೂ, ಇವರ ವಂಶವಾಹಿಣಿಯಲ್ಲೂ ಸಾಹಿತ್ಯದ ಒಲವು ತಾನಾಗಿಯೇ ಹರಿದು ಬಂದಿತ್ತು.
ಖ್ಯಾತ ಸಂಶೋಧಕರಾದ ಹುಲ್ಲೂರು ಶ್ರೀನಿವಾಸ ಜೋಯಿಸರ ಚಿತ್ರದುರ್ಗದ ಬಗ್ಗೆ ಹೇಳುತ್ತಿದ್ದ ಕಥೆಗಳೇ, ಮುಂದೊಂದು ದಿನ “ದುರ್ಗಾಸ್ತಮಾನ”ದಂತಹ ಮಹಾನ್ ಐತಿಹಾಸಿಕ ಕಾದಂಬರಿಗೆ ಪ್ರೇರಣೆಯಾಯಿತು. ಅದಕ್ಕೂ ಮುಂಚೆ ಒಮ್ಮೆ ವೆಂಕಣ್ಣಯ್ಯನವರು ವಾಚಾಳಿಯಾಗಿದ್ದ ತ.ರಾ.ಸು. ರವರಿಗೆ “ಇಷ್ಟೆಲ್ಲಾ ಮಾತಾನಾಡುವಿಯೆಲ್ಲಾ, ಇದನ್ನೇ ಬರೆಯುವ ಸಾಮರ್ಥ್ಯ ನಿನ್ನಲ್ಲಿದೆಯೇ? ಒಂದು ಕಥೆ ನಿನ್ನ ಕೈಯಲ್ಲಿ ಬರೆಯಲಾದೀತೆ?” ಎಂದು ಸವಾಲು ಹಾಕಿದಾಗ ತ.ರಾ.ಸು. ರವರು ಸಂಜೆಯೊಳಗೆ ಒಂದು ಕಥೆ ಬರೆದು ಹತ್ತು ರೂಪಾಯಿ ಗಿಟ್ಟಿಸಿಕೊಂಡರು. ಆ ಕಥೆಯ ಹೆಸರು “ಪುಟ್ಟನ ಚೆಂಡು”. (ಅವರ ಕೊನೆಯ ಐತಿಹಾಸಿಕ ಕಾದಂಬರಿ ‘ದುರ್ಗಾಸ್ತಮಾನ’ವನ್ನು ಟಿ.ಎಸ್.ವೆಂಕಣ್ಣಯ್ಯನವರಿಗೆ ಅರ್ಪಿಸಿದ್ದಾರೆ.) ರಾಮಸ್ವಾಮಯ್ಯನವರ ಮಿತ್ರನಾಗಿದ್ದ ಎಸ್.ನಿಜಲಿಂಗಪ್ಪನವರು ಪ್ರೀತಿಯಿಂದ ತ.ರಾ.ಸು.ರವರನ್ನು ‘ಧ್ರುವ’ ಎಂದು ಕರೆಯುತ್ತಿದ್ದರು. ಗಾಂಧೀಜಿಯವರ ಚಳುವಳಿಯು ದೇಶಾದಾಂತ್ಯ ಸಂಚಲನ ಉಂಟುಮಾಡಿತ್ತು.1937ರ ಸುಮಾರಿನಲ್ಲಿ ಚಿತ್ರದುರ್ಗದಲ್ಲಿ ಧ್ವಜ ಸತ್ಯಗ್ರಹ ನಡೆದು ಜಿಲ್ಲೆಯ ಹೊಸದುರ್ಗ ಪಟ್ಟಣವನ್ನು ಕೇಂದ್ರವನ್ನಾಗಿಸಿಕೊಂಡು ಮಿತ್ರರೊಡನೆ ಹಳ್ಳಿ-ಹಳ್ಳಿಗಳಲ್ಲಿ ಸಂಚರಿಸಿ ಕ್ರಾಂತಿ ಗೀತೆಗಳನ್ನು ಹಾಡುತ್ತ.ಭಾಷಣ ಮಾಡುತ್ತಿದ್ದರು. ಬಾಗೂರು ಎಂಬ ಹಳ್ಳಿಯಲ್ಲಿ ಭಾಷಣ ಮಾಡುತ್ತಿದ್ದಾಗ ತ.ರಾ.ಸು. ದಸ್ತಗಿರಿಯಾದರು.ಆಗ ಅವರಿಗೆ 17ರ ಪ್ರಾಯ!
ಚಿತ್ರದುರ್ಗದಲ್ಲಿದ್ದರೆ ಮಗ ಚಳುವಳಿಗಳ ಹಿಂದೆ ಹೋಗಬಹುದೆಂದು ರಾಮಸ್ವಾಮಯ್ಯನವರು ತ.ರಾ.ಸು. ರವರನ್ನು ಬೆಂಗಳೂರಿನ ನ್ಯಾಷನಲ್ ಹೈಸ್ಕೂಲಿಗೆ ಸೇರಿಸಿದರು. ಎಸ್.ಎಸ್.ಎಲ್.ಸಿ. ಮುಗಿಸಿಕೊಂಡ ತ.ರಾ.ಸು. ಶಿವಮೊಗ್ಗದಲ್ಲಿ ಕಾಲೇಜು ಸೇರಿ, ಕಾಲೇಜಿನ ಪ್ರಬಂಧ ಸ್ಪರ್ಧೆಯಲ್ಲಿ ಬಿ.ಎಂ.ಶ್ರೀ.ಯವರಿಂದ ಬಹುಮಾನ ಸ್ವೀಕರಿಸಿದರು. ಶಿವಮೊಗ್ಗದ ಕಾಲೇಜಿನಲ್ಲಿ ತ.ರಾ.ಸು. ಓದಿದ್ದು ಒಂದೇ ವರ್ಷ. ಜೂನಿಯರ್ ಇಂಟರ್ ಮೀಡಿಯಟ್ ಪರೀಕ್ಷೆಯ ನಂತರ ಸೀನಿಯರ್ ಇಂಟರ್ ಓದಲು ತುಮಕೂರಿಗೆ ಹೋದರು. 1942ರ ಆಗಸ್ಟ್ 9 ರಂದು ಕ್ವಿಟ್ ಇಂಡಿಯಾ ಚಳುವಳಿ (ಚಲೇಜಾವ್ ಚಳುವಳಿ) ಆರಂಭವಾಗುತ್ತಿದ್ದಂತೆ ಬ್ರಿಟೀಷರು ಗಾಂಧೀಜಿ ಮೊದಲಾದ ರಾಷ್ಟ್ರನಾಯಕರನ್ನು ಬಂಧಿಸಿದರು. ಇದರಿಂದ ಇಡೀ ಶಾಲಾ ಕಾಲೇಜುಗಳಿಗೆ ಬಹಿಷ್ಕಾರ ಹಾಕಲಾಯಿತು. ವಿದೇಶಿ ವಸ್ತುಗಳ ದಹನ ನಡೆಸಲಾಯಿತು. ಇದಕ್ಕೆ ತ.ರಾ.ಸು. ಮತ್ತು ಇವರ ಮಿತ್ರರೂ ಹೊರತಾಗಿರಲಿಲ್ಲ. ಒಮ್ಮೆ ಈ ತಂಡ ರೈಲು ಹಳಿಗಳನ್ನು ತಪ್ಪಿಸಿ ಸೇತುವೆಯನ್ನು ಉರುಳಿಸುವ ಏರ್ಪಾಡು ಮಾಡಿಕೊಂಡಿದ್ದಾಗ ಅದು ಪೋಲಿಸರ ಗಮನಕ್ಕೆ ಬಂದು ದಸ್ತಗಿರಿಯಾದರು. ಸೆರೆಮನೆಯಲ್ಲಿದ್ದರೂ ಇವರ ಚಳುವಳಿ ಮುಂದುವರೆದಿತ್ತು. 1942ರ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾದರು. ಜೈಲಿನಿಂದ ಬಿಡುಗಡೆಯೇನೋ ಆದರು. ಆದರೆ ಗಾಂಧೀಜಿಯವರು ಬಿಡುಗಡೆಯಾದ ಹೊರತು ಹಾಗೂ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಹೊರತು ಪುನಃ ಕಾಲೇಜು ಮೆಟ್ಟಿಲು ಹತ್ತುವುದಿಲ್ಲ ಎಂದು ನಿರ್ಧರಿಸಿದರು.
ಪತ್ರಿಕೋದ್ಯಮಿಯಾಗಿ ತ.ರಾ.ಸು.
1942ರಲ್ಲಿ ಬೆಂಗಳೂರಿಗೆ ಬಂದ ತ.ರಾ.ಸು. ಕೆಲಕಾಲ ‘ವಿಶ್ವಕರ್ನಾಟಕ’ ಪತ್ರಿಕೆಯ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. ಆ ಸುಮಾರಿಗೆ ಇವರ ವಿವಾಹವು ‘ಅಂಬುಜಾ’ರವರೊಂದಿಗೆ ಆಯಿತು. ಆಗ ಅವರಿಗೆ ಬರುತ್ತಿದ್ದ ಸಂಬಳ 25 ರೂಪಾಯಿ. ಎಷ್ಟೋ ದಿನ ಅವರು ಕಡಲೆಕಾಯಿ ತಿಂದು ದಿನದೂಡುತ್ತಿದ್ದರು. ವಿಶ್ವಕರ್ನಾಟಕ ಪತ್ರಿಕೆ ಬಿಟ್ಟ ನಂತರ ಬಿ.ಎನ್.ಗುಪ್ತ ರವರ ‘ಪ್ರಜಾಮತ’ ವಾರಪತ್ರಿಕೆಯಲ್ಲಿ ಉಪಸಂಪಾದಕರಾದರು. 1945-46ರ ವೇಳೆಗೆ ಎಂ.ಎಸ್.ಚಿಂತಾಮಣಿ ಎಂಬುವವರು ಆರಂಭಿಸಿ ನಡೆಸುತ್ತಿದ್ದ ‘ವಾಹಿನಿ’ ಎಂಬ ವಾರಪತ್ರಿಕೆಗೆ ಸಹಸಂಪಾದಕರಾದರು. ‘ವಾಹಿನಿ’ ವಾರಪತ್ರಿಕೆ ಹೊರಬಂದ ತ.ರಾ.ಸು. ಹೆಂಡತಿಯನ್ನು ತವರುಮನೆಗೆ ಬಿಟ್ಟು ಚಿತ್ರದುರ್ಗಕ್ಕೆ ಹಿಂದಿರುಗಿದರು. ಆಗ ಶ್ರೀಧರ ಎಂಬುವವರು ಆಗತಾನೇ ಆರಂಭಿಸಿದ ‘ನವೋದಯ’ ಎಂಬ ಪತ್ರಿಕೆಗೆ ಕೆಲಸ ಮಾಡಿದರಾದರೂ ಅದೂ ಸಹ ಊರ್ಜಿತವಾಗಲಿಲ್ಲ. ಆಗಿದ್ದ ಪರಿಸ್ಥಿತಿಯಲ್ಲಿ ಒಂದು ಮಗು ಹುಟ್ಟಿದ ಕೆಲವೇ ದಿನಗಳಲ್ಲಿ ತೀರಿಕೊಂಡಿತು. ಇದಾದ ಕೆಲದಿನಕ್ಕೆ ಆಗಷ್ಟೇ ಆರಂಭವಾಗಿದ್ದ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಮುಖ್ಯ ಉಪಸಂಪಾದಕರಾಗಿ ಕರ್ತವ್ಯ ನಿರ್ವಹಿಸಿದರು. ಮೈಸೂರಿನಲ್ಲಿದ್ದಾಗ ‘ಮೈಸೂರು’ ಪತ್ರಿಕೆಗೆ ಅಂಕಣಕಾರರಾಗಿದ್ದರು. ‘ಕಾಲದೂತ’ ಎಂಬ ಪತ್ರಿಕೆಯನ್ನು ಕೆಲಕಾಲ ನಡೆಸಿದರು. ‘ವಿಚಾರವಾಣಿ’ ಎಂಬ ಪತ್ರಿಕೆಗೆ ಗೌರವ ಸಂಪಾದಕರಾಗಿದ್ದರು. ‘ಶ್ರೀ ಶಂಕರ ಕೃಪಾ’ ಎಂಬ ಧಾರ್ಮಿಕ ಪತ್ರಿಕೆಯ ಸಂಪಾದಕ ಮಂಡಳಿಯಲ್ಲಿಯೂ ಸಹ ಕೆಲ ಕಾಲ ಇದ್ದರು.
ಬರಹಗಾರರಾಗಿ ತ.ರಾ.ಸು.
‘ಪಾರಿಜಾತ’ ಎಂಬ ಕಾದಂಬರಿ ಬರೆದು ಮೈಸೂರು ಹೆಸರಾಂತ ಪ್ರಕಾಶಕ ಶ್ರೀ ಡಿ.ವಿ.ಕೆ.ಮೂರ್ತಿ ರವರಿಗೆ ಪ್ರಕಟಿಸಲು ಕೊಟ್ಟರು. ಆಗಲೇ ತ.ರಾ.ಸು.ರವರು ಮೈಸೂರಿನಲ್ಲಿ ಇದ್ದು, ಬರೆಯಲು ನಿಶ್ಚಯಿಸಿದ್ದರು. ಇನ್ನೊಬ್ಬ ಗೆಳೆಯ ರಾ.ವೆಂ.ಶ್ರೀನಿವಾಸಮೂರ್ತಿ ಎಂಬುವವರು ತ.ರಾ.ಸು. ರವರ ಕಾದಂಬರಿಗಳ ಪ್ರಕಟಣೆಗೆ ವ್ಯವಸ್ಥೆ ಮಾಡಿದ್ದರಲ್ಲದೇ ತಾವೇ ರಾಯರ ಪುಸ್ತಕಗಳನ್ನು ಪ್ರಕಟಿಸಿದರು. ತ.ರಾ.ಸುಬ್ಬರಾಯರು ‘ಹಂಸಗೀತೆ’ಯನ್ನು ಬರೆದಾಗ ಈ ಕೃತಿಯು ಎಷ್ಟೊಂದು ಜನಪ್ರಿಯವಾಗಿತ್ತೆಂದರೇ, ಆಗಿನ ಮೈಸೂರು ಮಹಾರಾಜರಾಗಿದ್ದ ‘ಜಯಚಾಮರಾಜೇಂದ್ರ ಒಡೆಯರು’ ಓದಿ ಮೆಚ್ಚಿಕೊಂಡು ತ.ರಾ.ಸು. ರವರನ್ನು ನೋಡಬಯಸಿದರಂತೆ. ಪದವಿ ಪರೀಕ್ಷೆಗೆ ಈ ಕೃತಿ ಪಠ್ಯಪುಸ್ತಕವಾಯಿತು. ಇದೇ ಕಾದಂಬರಿ ಹಿಂದಿ ಚಿತ್ರರಂಗದಲ್ಲಿ ‘ಬಸಂತ್ ಬಹಾರ್’ ಆಗಿ 1953ರಲ್ಲಿ ತೆರೆಕಂಡಿತ್ತು. ಮುಂದೆ 1972ರಲ್ಲಿ ‘ಹಂಸಗೀತೆ’ಯಾಗಿ ಕನ್ನಡದಲ್ಲಿ ತೆರೆಕಂಡಿತು. ಈ ಚಿತ್ರ ರಾಷ್ಟ್ರಪ್ರಶಸ್ತಿ ಗಳಿಸಿದ್ದಲ್ಲದೇ ವಿದೇಶಗಳಲ್ಲಿಯೂ ಪ್ರದರ್ಶಿತಗೊಂಡಿತು. ತ.ರಾ.ಸು. ಸಾಮಾಜಿಕ ಕಾದಂಬರಿಗಳನ್ನಷ್ಟೇ ಅಲ್ಲದೇ ಐತಿಹಾಸಿಕ ಹಾಗೂ ಪೌರಾಣಿಕ ಕಾದಂಬರಿಗಳನ್ನು ಬರೆದರು. ರಾಷ್ಟ್ರಕೂಟರ ಅರಸು “ನೃಪತುಂಗ”ನ ಕುರಿತು ಬರೆದ ಮೊದಲ ಐತಿಹಾಸಿಕ ಕೃತಿ. ತ.ರಾ.ಸು. ಕನ್ನಡದ ದಿಗ್ಗಜರಲ್ಲೊಬ್ಬರಾದ ಡಿ.ಎಲ್.ನರಸಿಂಹಾಚಾರ್ ರವರ ಪ್ರೇರಣೆಯಂತೆ ಶ್ರವಣಬೆಳಗೊಳದ ಗೊಮ್ಮಟೇಶ್ವರ ಶಿಲ್ಪದ ಸೃಷ್ಠಿಗೆ ಕಾರಣಕರ್ತನಾದ ಗಂಗರಸನ ಮಂತ್ರಿ ‘ಚಾವುಂಡರಾಯನ’ ಕುರಿತು “ಶಿಲ್ಪಶ್ರೀ” ಎಂಬ ಐತಿಹಾಸಿಕ ಕಾದಂಬರಿ ಬರೆದರು. ನಡುನಡುವೆ ಬರೆದ ಸಾಮಾಜಿಕ ಕಾದಂಬರಿಗಳು ಸಾಕಷ್ಟು ಹೆಸರು ಮಾಡಿದರು. “ಚಂದ್ರವಳ್ಳಿಯ ತೋಟ” ಪಠ್ಯಪುಸ್ತಕವಾಗಿತ್ತು. ಸತ್ಯಕಾಮ ಜಾಬಾಲಿಯ ಕಥೆ ಕುರಿತಾದ “ನಾಲ್ಕುXನಾಲ್ಕು=ಒಂದು” ಪೌರಾಣಿಕ ಕಾದಂಬರಿಯನ್ಉನ ಕೇವಲ ಹನ್ನೊಂದು ದಿನಗಳಲ್ಲಿ ಬರೆದಿದ್ದರು.
ಚಿತ್ರದುರ್ಗ ತ.ರಾ.ಸು. ರವರಿಗೆ ಪ್ರಿಯವಾಗಿದ್ದ ಸ್ಥಳ. ಇಲ್ಲಿನ ಕೋಟೆಯ ಪ್ರತಿಯೊಂದು ಕಲ್ಲು ಇವರಿಗೆ ಚಿರಪರಿಚಿತ. ಚಿತ್ರದುರ್ಗದ ಮೇಲೆ ಇವರಿಗೆ ಇದ್ದ ಅದಮ್ಯ ಪ್ರೀತಿಗೆ ಸಾಕ್ಷಿಯಾಗಿರುವುದೇ “ದುರ್ಗಾಸ್ತಮಾನ”; ತ.ರಾ.ಸು. ರವರ ಕೊನೆಯ ಕೃತಿ. ಅದ್ವೈತ ಮತ ಸ್ಥಾಪನಾಚಾರ್ಯ ಶಂಕರಾಚಾರ್ಯರ ಕುರಿತು “ಆನಂದಂ ಬ್ರಹ್ಮೇತಿ ವ್ಯಜನಾತ್” ಎಂಬ ಕಾದಂಬರಿ ಬರೆಯಲು ಸಾಕಷ್ಟು ಟಿಪ್ಪಣಿಗಳನ್ನು ಮಾಡಿಕೊಂಡಿದ್ದ ತ.ರಾ.ಸು. ರವರಿಗೆ ಕಡೆಯವರೆಗೂ ಅದನ್ನು ಬರೆಯಲು ಸಾಧ್ಯವಾಗಲಿಲ್ಲ. ಇದರಿಂದ ಕನ್ನಡಿಗರಿಗೆ ಒಂದು ಅಮೂಲ್ಯ ಕೃತಿ ಸಿಗುವುದು ತಪ್ಪಿಹೋಯಿತು. ತ.ರಾ.ಸು. ರವರು ಬರೆದ “ಶ್ರೀ ಚಕ್ರೇಶ್ವರಿ” ಕಾದಂಬರಿ ಅಪೂರ್ಣವಾಗಿಯೇ ಉಳಿದಿತ್ತು. ಆದರೆ ಅದರ ಕಥೆ ಕೇಳಿದ್ದ ಅವರ ಶಿಷ್ಯ ನಾ.ಪ್ರಭಾಕರ್ ಅದನ್ನು ಪೂರೈಸಿದ್ದರು. 1927ರ ನಂತರದ ವರ್ಷಗಳಲ್ಲಿ ಕಾಗದ ಲೇಖನಗಳನ್ನು ಡಿಕ್ಟೇಷನ್ ಕೊಡುತ್ತ ಪ್ರಭಾಕರರಿಂದಲೇ ತ.ರಾ.ಸು. ಬರೆಸುತ್ತಿದ್ದರು. ತ.ರಾ.ಸು. ಬರೆದ ಆತ್ಮಕಥೆ ಜಿಲ್ಲಾಮಟ್ಟದ “ಸೌರಭ” ಎಂಬ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತಾದರೂ, “ಹಿಂದಿರುಗಿ ನೋಡಿದಾಗ” ಎಂಬ ಅಪೂರ್ಣ ಆತ್ಮಕಥೆಯನ್ನು “ತರಂಗ”ದಲ್ಲಿ ಪ್ರಕಟವಾಯಿತು. “ಹಿಂದಿರುಗಿ ನೋಡಿದಾಗ” ಅಪೂರ್ಣ ಆತ್ಮಕಥೆಯನ್ನು ತ.ರಾ.ಸು. ರವರ ಪತ್ನಿ ಅಂಬುಜಾ ರವರು ಪೂರ್ಣಗೊಳಿಸಿ 1990ರಲ್ಲಿ ಹೊರತಂದರು.
ಚಿತ್ರರಂಗದಲ್ಲಿ ತ.ರಾ.ಸು.
ಕನ್ನಡದ ಕಾದಂಬರಿಗಳನ್ನಾಧರಿಸಿ ಕನ್ನಡ ಚಿತ್ರಗಳನ್ನು ನಿರ್ಮಿಸುವ ಒಂದು ಪರಂಪರೆ 1962ರಲ್ಲಿ ಪ್ರಾರಂಭವಾಯಿತು. ಕೃಷ್ಣಮೂರ್ತಿ ಪುರಾಣಿಕರ “ಧರ್ಮದೇವತೆ” ಕಾದಂಬರಿ ಆಧರಿಸಿದ “ಕರುಣೆಯೇ ಕುಟುಂಬ ಕಣ್ಣು” ಚಿತ್ರವು ಕನ್ನಡದ ಪ್ರಥಮ ಕಾದಂಬರಿ ಆಧಾರಿತ ಚಿತ್ರ. ಹಾಗೇ ನೋಡಿದರೆ ತ.ರಾ.ಸು. ರವರ ವಿಶಿಷ್ಟ ಕೃತಿ “ಹಂಸಗೀತೆ”ಯನ್ನಾಧರಿಸಿ ಹಿಂದಿಯಲ್ಲಿ “ಬಸಂತ್ ಬಹಾರ್” ಎಂಬ ಸಿನಿಮಾ ಬಹುಹಿಂದೆಯೇ ತೆರೆಕಂಡಿತ್ತು. 1959ರಲ್ಲಿಯೇ ತ.ರಾ.ಸು. ತಮ್ಮ ಕನ್ನಡ ಚಳುವಳಿ, ರಾಜಕೀಯ ಚಟುವಟಿಕೆಗಳ ಜತೆಗೆ ಸಿನಿಮಾ ಚಟುವಟಿಕೆಯಲ್ಲೂ ತೊಡಗಿದ್ದರು. ಚಂದ್ರವಳ್ಳಿಯ ತೋಟ, ಚಕ್ರತೀರ್ಥ, ಮಾರ್ಗದರ್ಶಿ (ಮಾರ್ಗದರ್ಶಿ, ಭಾಗ್ಯಶಿಲ್ಪ ಮತ್ತು ಬೆಳಕಿನ ಬೀದಿ ಕಾದಂಬರಿಗಳ ಆಧಾರಿತ), ಪುರ್ನಜನ್ಮ (ಸಾಕುಮಗಳು ಆಧಾರಿತ), ನಾಗರಹಾವು (ನಾಗರಹಾವು, ಎರಡು ಹೆಣ್ಣು ಒಂದು ಗಂಡು, ಹಾಗೂ ಸರ್ಪಮತ್ಸರ ಕಾದಂಬರಿಗಳ ಆಧಾರಿತ), ಚಂದನದ ಗೊಂಬೆ, ಗಾಳಿಮಾತು, ಬೆಂಕಿಯ ಬಲೆ, ಬಿಡುಗಡೆಯ ಬೇಡಿ, ಮಸಣದ ಹೂ, ಆಕಸ್ಮಿಕ (ಆಕಸ್ಮಿಕ-ಅಪರಾಧ-ಪರಿಣಾಮ ಆಧಾರಿತ), ಇವು ತ.ರಾ.ಸು. ರವರು ಬರೆದ ಕಾದಂಬರಿಗಳ ಆಧಾರಿತ ಚಲನಚಿತ್ರಗಳು. ಎಸ್.ಆರ್.ಪುಟ್ಟಣ್ಣ ಕಣಗಾಲ್ ರವರು ನಿರ್ದೇಶಿಸಿದ ನಾಗರಹಾವು ಚಿತ್ರ ತೆಲುಗಿನಲ್ಲಿ “ಕೋಡೆನಾಗು” ಎಂದೂ, ತಮಿಳಿನಲ್ಲಿ “ರಾಜನಾಗಂ” ಎಂದು ಮತ್ತು ಹಿಂದಿಯಲ್ಲಿ “ಜಹರೀಲಾ ಇನ್ಸಾನ್” ಎಂದು ತೆರೆಕಂಡಿತು. ಅದೇ ಪುಟ್ಟಣ್ಣನವರ ಕೊನೆಯ ಚಿತ್ರ “ಮಸಣದ ಹೂ” ಸಹ ತ.ರಾ.ಸು. ರವರ ಕಾದಂಬರಿ ಆಧಾರಿತ ಚಿತ್ರ.
(ಆಧಾರ: “ತ.ರಾ.ಸು. ಕುರಿತು...”– ನಾ.ಪ್ರಭಾಕರ್)
ಹೆಸರು | ತ.ರಾ.ಸುಬ್ಬರಾಯ (ತ.ರಾ.ಸು) | |
ಜನ್ಮ ದಿನಾಂಕ | 21-04-1920 | |
ಜನ್ಮ ಸ್ಥಳ | ಮಲೇಬೆನ್ನೂರು (ಹರಿಹರ ತಾಲ್ಲೂಕು) | |
ವಂಶಸ್ಥರ ಸ್ಥಳ | ತಳಕು (ಚಳ್ಳಕೆರೆ ತಾಲ್ಲೂಕು) | |
ಶಿಕ್ಷಣ | ಸೀನಿಯರ್ ಇಂಟರಮೀಡಿಯಟ್ ವರೆಗೆ | |
ಕೃತಿಗಳು | ಸಾಮಾಜಿಕ: ಚಕ್ರತೀರ್ಥ, ಬೇಡದ ಮಗು, ಜೀತದ ಜೀವ, ಯಕ್ಷಪ್ರಶ್ನೆ ಇತ್ಯಾದಿ.ಐತಿಹಾಸಿಕ: ದುರ್ಗಾಸ್ತಮಾನ, ನೃಪತುಂಗ, ರಕ್ತರಾತ್ರಿ, ಶಿಲ್ಪಶ್ರೀ ಇತ್ಯಾದಿ. ಕಥಾಸಂಕಲನ: ರೂಪಸಿ, ತೊಟ್ಟಿಲು ತೂಗಿತು, ತ.ರಾ.ಸು.ರವರ ಸಮಗ್ರ ಕಥೆಗಳು, ಇತ್ಯಾದಿ. ನಾಟಕ: ಜ್ವಾಲಾ, ಮೃತ್ಯು ಸಿಂಹಾಸನ. ಆತ್ಮಕಥೆ: ಹಿಂದಿರುಗಿ ನೋಡಿದಾಗ. ಬರೆದ ಮೊದಲ ಕೃತಿ: ಪುಟ್ಟನ ಚೆಂಡು. | |
ಸ್ವಾತಂತ್ಯ ಆಂದೋಳನದಲ್ಲಿ ತ.ರಾ.ಸು. | ಧ್ವಜ ಸತ್ಯಾಗ್ರಹ (1937), ಅರಣ್ಯ ಸತ್ಯಾಗ್ರಹ (1939), ಚಲೇಜಾವ್ ಚಳುವಳಿ (1942), ಜವಬ್ದಾರಿ ಸರ್ಕಾತಿ ಚಳುವಳಿ (1947), ಪ್ರಗತಿಶೀಲ ಸಾಹಿತ್ಯ ಚಳುವಳಿ (1944), ಕನ್ನಡ ಚಳುವಳಿ (1960-84) | |
ಚಲನಚಿತ್ರವಾದ ತ.ರಾ.ಸು. ರವರ ಕಾದಂಬರಿಗಳು | ಹಂಸಗೀತೆ, ಚಂದ್ರವಳ್ಳಿಯ ತೋಟ, ಚಕ್ರತೀರ್ಥ, ಸಾಕುಮಗಳು (ಪುರ್ನಜನ್ಮ), ನಾಗರಹಾವು, ಗಾಳಿಮಾತು, ಬೆಂಕಿಯ ಬಲೆ, ಮಸಣದ ಹೂವು, ಬಿಡುಗಡೆಯ ಬೇಡಿ, ಆಕಸ್ಮಿಕ ಇತ್ಯಾದಿ | |
ಮರಣ | 10-04-1984 |
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)