`ವಿಮರ್ಶಕ ಜಿ.ಎಚ್.ನಾಯಕರು ಶೋಷಕ ವರ್ಗದಿಂದ ಬಂದವರು. ಅವರ ಹೆಸರೇ ಜಾತಿ ಸೂಚಿತವಾದದ್ದು. ಅವರು ಸವರ್ಣೀರಾದ್ದರಿಂದ ಅವರು ಎಂದೂ ಅವರ ಜನಾಂಗದ ಬಗ್ಗೆ ಹೇಳುವುದಿಲ್ಲ. ಶೋಷಕರೇ ಶೋಷಿತರಿಗೆ ಹಿತವಚನ ನೀಡುವುದು ಈ ದೇಶದ ಬುದ್ಧಿಜೀವಿಗಳ ಫ್ಯಾಷನ್‘
…
`ಹಣದ ವಿಚಾರದಲ್ಲಿ ದೇವನೂರು ಮಹಾದೇವ ಪ್ರಾಮಾಣಿಕನಲ್ಲ. ಆತ ಪಡೆದ ಹಣಕ್ಕೆ ಲೆಕ್ಕವಿಲ್ಲ. ಶಿಸ್ತು ಮೊದಲೇ ಇಲ್ಲ. ಈ ವ್ಯಕ್ತಿ ಮತ್ತೊಬ್ಬರ ಮೇಲೆ ಗೂಬೆ ಕೂರಿಸಿ ತನ್ನ ಅಪ್ರಾಮಾಣಿಕತೆಯನ್ನು ಮುಚ್ಚಿಕೊಳ್ಳಲು ಸದಾ ಪ್ರಯತ್ನಿಸುತ್ತಾರೆ. ದೇವನೂರು ಮಹಾದೇವ ಎಷ್ಟು ದಲಿತರಿಂದ ಹಣ ಪಡೆದುಕೊಂಡಿದ್ದಾರೆ ಎಂಬುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಬೇಕು‘ (ಪು 94-95) ಎಂದು ನೇರವಾಗಿ ಬರೆಯುವ ಮುನಿವೆಂಕಟಪ್ಪ ಯಾವುದೇ ಮುಲಾಜುಗಳಿಲ್ಲದೆ ಬರೆದ ಬರಹಗಳು ಇಲ್ಲಿವೆ.
ದಲಿತ ಚಿಂತಕರಲ್ಲಿ ಒಬ್ಬರಾದ ಡಾ.ಮುನಿವೆಂಕಟಪ್ಪ ಇಲ್ಲಿ ಮಾಡಿರುವುದು ಸಾಹಿತ್ಯದ ವಿಮರ್ಶೆಗಿಂತ ಹೆಚ್ಚಾಗಿ ದಲಿತರ ಚಾರಿತ್ರಿಕ ವಿಮರ್ಶೆ. ಇಲ್ಲಿನ ಲೇಖನಗಳಲ್ಲಿ ಮುಖ್ಯವಗಿ ದಲಿತ ಚಳವಳಿ ಹಾಗೂ ಸಾಹಿತ್ಯ ಚರ್ಚೆಯಾಗಿದೆ. ವೆಂಕಟಪ್ಪನವರ ಈ ಚಿಂತನೆಗಳಲ್ಲಿ ಒಂದು ನೈತಿಕವಾದ ಆಕ್ರೋಶ ಇರುವುದನ್ನು ನಾವು ಕಾಣಬಹುದು. ಇದು ಅನೇಕ ದೊಡ್ಡವರು ಎನ್ನಿಸಿಕೊಂಡವರ ತಪ್ಪು ನಿಲುವುಗಳಿಗೆ ಪ್ರತಿಯಾಗಿ ಹುಟ್ಟಿಕೊಂಡ ಸಿಟ್ಟು. ಈ ಸಿಟ್ಟಿನ ಹಿಂದೆ ನೋವು ಇದೆ ಎಂಬುದನ್ನು ಮರೆಯುವಂತಿಲ್ಲ. ಇದಕ್ಕೆ ಉದಾಹರಣೆಯಾಗಿ ಕವಿ ಸಿದ್ದಲಿಂಗಯ್ಯ ಅವರು `ನನ್ನನ್ನು ದಲಿತ ಕವಿ ಎಂದು ಕರೆಯಬೇಡಿ, ಕನ್ನಡದ ಕವಿ ಎಂದು ಕರೆಯಿರಿ’ ಎಂದು ಕೇಳಿಕೊಂಡಿರುವುದನ್ನು, ದಲಿತರು ತಾವು ನಡೆದುಬಂದ ದಾರಿಯನ್ನು ಹಿಂತಿರುಗಿ ನೋಡಲು ಸಿದ್ಧರಿಲ್ಲದಿರುವುದನ್ನು ತೋರಿದ್ದಾರೆ. (ಪು.28) ಇಂಥ ಅನೇಕ ಸಂದರ್ಭಗಳನ್ನು ಮುನಿವೆಂಕಟಪ್ಪನವರು ಇಲ್ಲಿನ ಪುಟಗಳಲ್ಲಿ ತೆರೆದಿಟ್ಟಿದ್ದಾರೆ. ಇದರೊಂದಿಗೆ ದೇವನೂರು ಮಹದೇವ, ಮೊಗಳ್ಳಿ ಅಂಥವರನ್ನು ಏಕವಚನದಲ್ಲಿ ಕರೆದು ಸಂಯಮ ಕಳೆದುಕೊಳ್ಳುತ್ತಾರೆ.
ಈ ಬಗೆಯ ನೈತಿಕ ಸಿಟ್ಟುಗಳು ಅವರಲ್ಲಿವೆ. ಅಂತಹ ಸಂಗತಿಗಳ ಬಗ್ಗೆ ನೇರವಾಗಿ, ಆಧಾರಸಹಿತವಾಗಿ ಹೇಳಿದ್ದಾರೆ. ಆದರೆ, ಒಂದೆಡೆ (ಮೈಸೂರು ಜಿಲ್ಲೆಯ ದಲಿತ ಬಂಡಾಯ ಸಾಹಿತ್ಯಿಕ ಹಿರಿಮೆ) ಕಥೆಗಾರ ಮೊಗಳ್ಳಿ ಗಣೇಶರ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿದ `ದಲಿತ ಕಥನ‘ದ ಬಗ್ಗೆ ಬರೆಯುತ್ತ ಮೊಗಳ್ಳಿವರು ಮಾಡುವ ಸುಳ್ಳು ಉಲ್ಲೇಖಗಳನ್ನು, ಲೇಖಕರ ನಡುವೆ `ಒಬ್ಬರ ಮೇಲೆ ಒಬ್ಬರನ್ನು ಎತ್ತಿಕಟ್ಟುವ, ಸಲ್ಲದ ವಿಚಾರಗಳನ್ನು ಬರೆಯುವ ಸಾಹಿತಿಗಳನ್ನು, ಅಂಥವನ್ನು ಪ್ರಕಟಿಸುವ ವಿಶ್ವವಿದ್ಯಾಲಯದ ಪ್ರಸಾರಾಂಗವನ್ನು ಏನೆಂದು ಕರೆಯಬೇಕು?’ ಎಂದು ಕೇಳಿದ್ದಾರೆ. ಈವರೆಗೆ ಲೇಖಕರ ಪ್ರಶ್ನೆ ಸರಿಯಾಗಿಯೇ ಇದೆ. ಮುಂದುವರಿದು ಅವರು ಮೈಸೂರು ವಿಶ್ವವಿದ್ಯಾಲಯದ ಕಥೆಗಾರ ಮೊಗಳ್ಳಿ ಗಣೇಶರು ಎಂ.ಎ ತರಗತಿಯಲ್ಲಿ ಮೂರನೆಯ ದರ್ಜೆಯಲ್ಲಿ ತೇರ್ಗಡೆಯಾಗಿ ಮತ್ತೊಂದು ಎಂ.ಎ ಗೆ ಸೇರಿ ಪ್ರಥಮ ದರ್ಜೆಯಲ್ಲಿ ಪಾಸಾದುದ್ದನ್ನೂ, ಅನಂತರ ಸಂಶೋಧನೆ ನೆಪದಲ್ಲಿ 12 ವರ್ಷಗಳ ಕಾಲ ಒಂದೇ ಕೊಠಡಿಯಲ್ಲಿ ಉಳಿದುಕೊಂಡುದ್ದನ್ನು, ಮೈಸೂರು ವಿ.ವಿ.ಯಲ್ಲಿ ಓದಲು ಬರುವ ಬಡಹುಡುಗರು ಹಾಸ್ಟೇಲ್ನಲ್ಲಿ ರೂಮಿಗಾಗಿ ಪರದಾಡುತ್ತಿರುವುದನ್ನು ನೋಡಿಯೂ ಮುಜುಗರಕ್ಕೆ ಅವರು ಒಳಗಾಗದಿರವುದನ್ನೂ, `ಆತನನ್ನು ಓಡಿಸಿ ನಿಜವಾದ ಅರ್ಹ ಬಡ ವಿದ್ಯಾರ್ಥಿಗಳಿಗೆ ಆ ಜಾಗ ಸಿಗುವಂತಾಗುವಂತೆ ಮಾಡಲು ಸಾಹಸ ಪಡಬೇಕಾಯಿತು‘ ಎಂದು ಬರೆಯುತ್ತಾರೆ. ಮೊಗಳ್ಳಿಯವರ ಕೃತಿಯೊಂದಿಗೆ ಅವರ ಈ ಉಲ್ಲೇಖ ಅಗತ್ಯ ಇತ್ತು ಎಂದು ಅನಿಸುವುದಿಲ್ಲ. ಆದರೂ, ಈ ಪುಸ್ತಕ ಸಾಕಷ್ಟು ಚರ್ಚೆಗಳನ್ನು ದಲಿತ ಸಾಹಿತ್ಯ, ಚಳವಳಿಗಳ ಕುರಿತು ಮಾಡುತ್ತದೆ ಎಂಬುದು ಮಹತ್ವದ ಸಂಗತಿ.
ಶೀರ್ಷಿಕೆ: ದಲಿತ ಚಳವಳಿ ಮತ್ತು ಸಾಹಿತ್ಯ ಲೇಖಕರು: ಡಾ.ವಿ.ಮುನಿವೆಂಕಟಪ್ಪ ಪ್ರಕಾಶಕರು: ಎಸ್.ಎಸ್.ಪ್ರಕಾಶನ ಪುಟಗಳು:128 ಬೆಲೆ:ರೂ.65/-