ಪುಟಗಳು

ತ.ರಾ.ಸುಬ್ಬರಾಯ (1920-1984)


      
 ತ.ರಾ.ಸು. ಕುರಿತು....
ಬರೆದಂತೆ ಬದುಕಿದವರು ವಿರಳ, ಬರೆದೇ ಬದುಕಿದವರು ಇನ್ನೂ ವಿರಳ. ಆದರೆ ತ.ರಾ.ಸು. ರವರು ಬರೆದಂತೆ ಬದುಕಿದವರು. ಬರೆದೇ ಬದುಕಿದವರು. ಸುಮಾರು 68 ಕೃತಿಗಳನ್ನು ತಮ್ಮ ಜೀವಿತಾವಧಿಯಲ್ಲಿ ರಚಿಸಿದ ನಂತರವೂ ಬರವಣಿಗೆಗಿಂತ ಬದುಕೇ ದೊಡ್ಡದು ಎಂದು ನಂಬಿಕೊಂಡವರು. ಗಂಡು ಮೆಟ್ಟಿನ ನಾಡಾದ ಚಿತ್ರದುರ್ಗ ಜಿಲ್ಲೆಯು ಕೇವಲ ಗತಕಾಲದ ಇತಿಹಾಸ ಪುಟಗಳಲ್ಲಿ ಅಷ್ಟೇ ಉಳಿಯದೇ ಸಾಹಿತ್ಯ ಲೋಕಕ್ಕೂ, ಅನರ್ಘ್ಯ ರತ್ನಗಳನ್ನು ಕಾಣಿಕೆಯಾಗಿ ನೀಡಿದೆ. ಅವರಲ್ಲಿ ಪ್ರಮುಖರೆಂದರೆ ಕನ್ನಡದ ಅಶ್ವಿನಿ ದೇವತೆಗಳಲ್ಲಿ ಒಬ್ಬರೆಂದೇ ಹೆಸರಾದ ಶ್ರೀ ಟಿ.ಎಸ್.ವೆಂಕಣ್ಣಯ್ಯ, ತ.ಸು.ಶಾಮರಾಯರು, ಆಶುಕವಿಗಳಾದ ಶ್ರೀ ಬೆಳಗೆರೆ ಚಂದ್ರಶೇಖರಶಾಸ್ತ್ರಿಗಳು, ತ.ರಾ.ಸು. ಮುಂತಾದವರನ್ನು ಹೆಸರಿಸಬಹುದು.  ತ.ರಾ.ಸು. ರವರ ಜನನ 1920 ನೇ ಏಪ್ರಿಲ್ 21 ರಂದು ಹರಿಹರ ತಾಲ್ಲೂಕಿನ ಮಲೇಬೆನ್ನೂರಿನಲ್ಲಿ ಜನಿಸಿದರು. ಇವರ ತಂದೆ ರಾಮಸ್ವಾಮಯ್ಯ, ತಳಕು ಗ್ರಾಮದ ಆಶುಕವಿಗಳು. ದೊಡ್ಡಸುಬ್ಬಣ್ಣನವರ ಎರಡನೇ ಮಗ; ತ.ರಾ.ಸು. ರವರ ತಂದೆ. ಹರಿಹರದಲ್ಲಿ ಅಮಲ್ದಾರರಾಗಿದ್ದವರು. ತಾಯಿ ಸೀತಮ್ಮನವರು ಸರಳ ಸಜ್ಜನಿಕೆಯ ಸ್ವಭಾವದ ಹೆಣ್ಣುಮಗಳು. ದೊಡ್ಡಪ್ಪ ಟಿ.ಎಸ್.ವೆಂಕಣ್ಣಯ್ಯ, .ಸು.ಶಾಮರಾಯರು ಇವರ ಚಿಕ್ಕಪ್ಪ.  ಹೀಗಾಗಿ ಇವರ ಮನೆಯ ಪರಿಸರದಲ್ಲೂ, ಇವರ ವಂಶವಾಹಿಣಿಯಲ್ಲೂ ಸಾಹಿತ್ಯದ ಒಲವು ತಾನಾಗಿಯೇ ಹರಿದು ಬಂದಿತ್ತು.
 ಖ್ಯಾತ ಸಂಶೋಧಕರಾದ ಹುಲ್ಲೂರು ಶ್ರೀನಿವಾಸ ಜೋಯಿಸರ ಚಿತ್ರದುರ್ಗದ ಬಗ್ಗೆ ಹೇಳುತ್ತಿದ್ದ ಕಥೆಗಳೇ, ಮುಂದೊಂದು ದಿನ ದುರ್ಗಾಸ್ತಮಾನದಂತಹ ಮಹಾನ್ ಐತಿಹಾಸಿಕ ಕಾದಂಬರಿಗೆ ಪ್ರೇರಣೆಯಾಯಿತು. ಅದಕ್ಕೂ ಮುಂಚೆ ಒಮ್ಮೆ ವೆಂಕಣ್ಣಯ್ಯನವರು ವಾಚಾಳಿಯಾಗಿದ್ದ ತ.ರಾ.ಸು. ರವರಿಗೆ ಇಷ್ಟೆಲ್ಲಾ ಮಾತಾನಾಡುವಿಯೆಲ್ಲಾ, ಇದನ್ನೇ ಬರೆಯುವ ಸಾಮರ್ಥ್ಯ ನಿನ್ನಲ್ಲಿದೆಯೇ? ಒಂದು ಕಥೆ ನಿನ್ನ ಕೈಯಲ್ಲಿ ಬರೆಯಲಾದೀತೆ?” ಎಂದು ಸವಾಲು ಹಾಕಿದಾಗ ತ.ರಾ.ಸು. ರವರು ಸಂಜೆಯೊಳಗೆ ಒಂದು ಕಥೆ ಬರೆದು ಹತ್ತು ರೂಪಾಯಿ ಗಿಟ್ಟಿಸಿಕೊಂಡರು. ಆ ಕಥೆಯ ಹೆಸರು ಪುಟ್ಟನ ಚೆಂಡು. (ಅವರ ಕೊನೆಯ ಐತಿಹಾಸಿಕ ಕಾದಂಬರಿ ದುರ್ಗಾಸ್ತಮಾನವನ್ನು ಟಿ.ಎಸ್.ವೆಂಕಣ್ಣಯ್ಯನವರಿಗೆ ಅರ್ಪಿಸಿದ್ದಾರೆ.) ರಾಮಸ್ವಾಮಯ್ಯನವರ ಮಿತ್ರನಾಗಿದ್ದ ಎಸ್.ನಿಜಲಿಂಗಪ್ಪನವರು ಪ್ರೀತಿಯಿಂದ ತ.ರಾ.ಸು.ರವರನ್ನು ಧ್ರುವ ಎಂದು ಕರೆಯುತ್ತಿದ್ದರು. ಗಾಂಧೀಜಿಯವರ ಚಳುವಳಿಯು ದೇಶಾದಾಂತ್ಯ ಸಂಚಲನ ಉಂಟುಮಾಡಿತ್ತು.1937ರ ಸುಮಾರಿನಲ್ಲಿ ಚಿತ್ರದುರ್ಗದಲ್ಲಿ ಧ್ವಜ ಸತ್ಯಗ್ರಹ ನಡೆದು ಜಿಲ್ಲೆಯ ಹೊಸದುರ್ಗ ಪಟ್ಟಣವನ್ನು ಕೇಂದ್ರವನ್ನಾಗಿಸಿಕೊಂಡು ಮಿತ್ರರೊಡನೆ ಹಳ್ಳಿ-ಹಳ್ಳಿಗಳಲ್ಲಿ ಸಂಚರಿಸಿ ಕ್ರಾಂತಿ ಗೀತೆಗಳನ್ನು ಹಾಡುತ್ತ.ಭಾಷಣ ಮಾಡುತ್ತಿದ್ದರು. ಬಾಗೂರು ಎಂಬ ಹಳ್ಳಿಯಲ್ಲಿ ಭಾಷಣ ಮಾಡುತ್ತಿದ್ದಾಗ ತ.ರಾ.ಸು. ದಸ್ತಗಿರಿಯಾದರು.ಆಗ ಅವರಿಗೆ 17ರ ಪ್ರಾಯ!
 ಚಿತ್ರದುರ್ಗದಲ್ಲಿದ್ದರೆ ಮಗ ಚಳುವಳಿಗಳ ಹಿಂದೆ ಹೋಗಬಹುದೆಂದು ರಾಮಸ್ವಾಮಯ್ಯನವರು ತ.ರಾ.ಸು. ರವರನ್ನು ಬೆಂಗಳೂರಿನ ನ್ಯಾಷನಲ್ ಹೈಸ್ಕೂಲಿಗೆ ಸೇರಿಸಿದರು. ಎಸ್.ಎಸ್.ಎಲ್.ಸಿ. ಮುಗಿಸಿಕೊಂಡ ತ.ರಾ.ಸು. ಶಿವಮೊಗ್ಗದಲ್ಲಿ ಕಾಲೇಜು ಸೇರಿ, ಕಾಲೇಜಿನ ಪ್ರಬಂಧ ಸ್ಪರ್ಧೆಯಲ್ಲಿ ಬಿ.ಎಂ.ಶ್ರೀ.ಯವರಿಂದ ಬಹುಮಾನ ಸ್ವೀಕರಿಸಿದರು. ಶಿವಮೊಗ್ಗದ ಕಾಲೇಜಿನಲ್ಲಿ ತ.ರಾ.ಸು. ಓದಿದ್ದು ಒಂದೇ ವರ್ಷ. ಜೂನಿಯರ್ ಇಂಟರ್ ಮೀಡಿಯಟ್ ಪರೀಕ್ಷೆಯ ನಂತರ ಸೀನಿಯರ್ ಇಂಟರ್ ಓದಲು ತುಮಕೂರಿಗೆ ಹೋದರು. 1942ರ ಆಗಸ್ಟ್ 9 ರಂದು ಕ್ವಿಟ್ ಇಂಡಿಯಾ ಚಳುವಳಿ (ಚಲೇಜಾವ್ ಚಳುವಳಿ) ಆರಂಭವಾಗುತ್ತಿದ್ದಂತೆ ಬ್ರಿಟೀಷರು ಗಾಂಧೀಜಿ ಮೊದಲಾದ ರಾಷ್ಟ್ರನಾಯಕರನ್ನು ಬಂಧಿಸಿದರು. ಇದರಿಂದ ಇಡೀ ಶಾಲಾ ಕಾಲೇಜುಗಳಿಗೆ ಬಹಿಷ್ಕಾರ ಹಾಕಲಾಯಿತು. ವಿದೇಶಿ ವಸ್ತುಗಳ ದಹನ ನಡೆಸಲಾಯಿತು. ಇದಕ್ಕೆ ತ.ರಾ.ಸು. ಮತ್ತು ಇವರ ಮಿತ್ರರೂ ಹೊರತಾಗಿರಲಿಲ್ಲ. ಒಮ್ಮೆ ಈ ತಂಡ ರೈಲು ಹಳಿಗಳನ್ನು ತಪ್ಪಿಸಿ ಸೇತುವೆಯನ್ನು ಉರುಳಿಸುವ ಏರ್ಪಾಡು ಮಾಡಿಕೊಂಡಿದ್ದಾಗ ಅದು ಪೋಲಿಸರ ಗಮನಕ್ಕೆ ಬಂದು ದಸ್ತಗಿರಿಯಾದರು. ಸೆರೆಮನೆಯಲ್ಲಿದ್ದರೂ ಇವರ ಚಳುವಳಿ ಮುಂದುವರೆದಿತ್ತು. 1942ರ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾದರು. ಜೈಲಿನಿಂದ ಬಿಡುಗಡೆಯೇನೋ ಆದರು. ಆದರೆ ಗಾಂಧೀಜಿಯವರು ಬಿಡುಗಡೆಯಾದ ಹೊರತು ಹಾಗೂ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಹೊರತು ಪುನಃ ಕಾಲೇಜು ಮೆಟ್ಟಿಲು ಹತ್ತುವುದಿಲ್ಲ ಎಂದು ನಿರ್ಧರಿಸಿದರು.
 
 ಪತ್ರಿಕೋದ್ಯಮಿಯಾಗಿ ತ.ರಾ.ಸು.
        1942ರಲ್ಲಿ ಬೆಂಗಳೂರಿಗೆ ಬಂದ ತ.ರಾ.ಸು. ಕೆಲಕಾಲ ವಿಶ್ವಕರ್ನಾಟಕ ಪತ್ರಿಕೆಯ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. ಆ ಸುಮಾರಿಗೆ ಇವರ ವಿವಾಹವು ಅಂಬುಜಾರವರೊಂದಿಗೆ ಆಯಿತು. ಆಗ ಅವರಿಗೆ ಬರುತ್ತಿದ್ದ ಸಂಬಳ 25 ರೂಪಾಯಿ. ಎಷ್ಟೋ ದಿನ ಅವರು ಕಡಲೆಕಾಯಿ ತಿಂದು ದಿನದೂಡುತ್ತಿದ್ದರು. ವಿಶ್ವಕರ್ನಾಟಕ ಪತ್ರಿಕೆ ಬಿಟ್ಟ ನಂತರ ಬಿ.ಎನ್.ಗುಪ್ತ ರವರಪ್ರಜಾಮತ ವಾರಪತ್ರಿಕೆಯಲ್ಲಿ ಉಪಸಂಪಾದಕರಾದರು. 1945-46ರ ವೇಳೆಗೆ ಎಂ.ಎಸ್.ಚಿಂತಾಮಣಿ ಎಂಬುವವರು ಆರಂಭಿಸಿ ನಡೆಸುತ್ತಿದ್ದ ವಾಹಿನಿ ಎಂಬ ವಾರಪತ್ರಿಕೆಗೆ ಸಹಸಂಪಾದಕರಾದರು. ವಾಹಿನಿ ವಾರಪತ್ರಿಕೆ ಹೊರಬಂದ ತ.ರಾ.ಸು. ಹೆಂಡತಿಯನ್ನು ತವರುಮನೆಗೆ ಬಿಟ್ಟು ಚಿತ್ರದುರ್ಗಕ್ಕೆ ಹಿಂದಿರುಗಿದರು. ಆಗ ಶ್ರೀಧರ ಎಂಬುವವರು ಆಗತಾನೇ ಆರಂಭಿಸಿದ ನವೋದಯ ಎಂಬ ಪತ್ರಿಕೆಗೆ ಕೆಲಸ ಮಾಡಿದರಾದರೂ ಅದೂ ಸಹ ಊರ್ಜಿತವಾಗಲಿಲ್ಲ. ಆಗಿದ್ದ ಪರಿಸ್ಥಿತಿಯಲ್ಲಿ ಒಂದು ಮಗು ಹುಟ್ಟಿದ ಕೆಲವೇ ದಿನಗಳಲ್ಲಿ ತೀರಿಕೊಂಡಿತು. ಇದಾದ ಕೆಲದಿನಕ್ಕೆ ಆಗಷ್ಟೇ ಆರಂಭವಾಗಿದ್ದ ಪ್ರಜಾವಾಣಿಪತ್ರಿಕೆಯಲ್ಲಿ ಮುಖ್ಯ ಉಪಸಂಪಾದಕರಾಗಿ ಕರ್ತವ್ಯ ನಿರ್ವಹಿಸಿದರು. ಮೈಸೂರಿನಲ್ಲಿದ್ದಾಗ ಮೈಸೂರು ಪತ್ರಿಕೆಗೆ ಅಂಕಣಕಾರರಾಗಿದ್ದರು. ಕಾಲದೂತ ಎಂಬ ಪತ್ರಿಕೆಯನ್ನು ಕೆಲಕಾಲ ನಡೆಸಿದರು. ವಿಚಾರವಾಣಿ ಎಂಬ ಪತ್ರಿಕೆಗೆ ಗೌರವ ಸಂಪಾದಕರಾಗಿದ್ದರು. ಶ್ರೀ ಶಂಕರ ಕೃಪಾ ಎಂಬ ಧಾರ್ಮಿಕ ಪತ್ರಿಕೆಯ ಸಂಪಾದಕ ಮಂಡಳಿಯಲ್ಲಿಯೂ ಸಹ ಕೆಲ ಕಾಲ ಇದ್ದರು.
 
 ಬರಹಗಾರರಾಗಿ ತ.ರಾ.ಸು.
        ಪಾರಿಜಾತ ಎಂಬ ಕಾದಂಬರಿ ಬರೆದು ಮೈಸೂರು ಹೆಸರಾಂತ ಪ್ರಕಾಶಕ ಶ್ರೀ ಡಿ.ವಿ.ಕೆ.ಮೂರ್ತಿ ರವರಿಗೆ ಪ್ರಕಟಿಸಲು ಕೊಟ್ಟರು. ಆಗಲೇ ತ.ರಾ.ಸು.ರವರು ಮೈಸೂರಿನಲ್ಲಿ ಇದ್ದು, ಬರೆಯಲು ನಿಶ್ಚಯಿಸಿದ್ದರು. ಇನ್ನೊಬ್ಬ ಗೆಳೆಯ ರಾ.ವೆಂ.ಶ್ರೀನಿವಾಸಮೂರ್ತಿ ಎಂಬುವವರು ತ.ರಾ.ಸು. ರವರ ಕಾದಂಬರಿಗಳ ಪ್ರಕಟಣೆಗೆ ವ್ಯವಸ್ಥೆ ಮಾಡಿದ್ದರಲ್ಲದೇ ತಾವೇ ರಾಯರ ಪುಸ್ತಕಗಳನ್ನು ಪ್ರಕಟಿಸಿದರು. ತ.ರಾ.ಸುಬ್ಬರಾಯರು ಹಂಸಗೀತೆಯನ್ನು ಬರೆದಾಗ ಈ ಕೃತಿಯು ಎಷ್ಟೊಂದು ಜನಪ್ರಿಯವಾಗಿತ್ತೆಂದರೇ, ಆಗಿನ ಮೈಸೂರು ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರು ಓದಿ ಮೆಚ್ಚಿಕೊಂಡು ತ.ರಾ.ಸು. ರವರನ್ನು ನೋಡಬಯಸಿದರಂತೆ. ಪದವಿ ಪರೀಕ್ಷೆಗೆ ಈ ಕೃತಿ ಪಠ್ಯಪುಸ್ತಕವಾಯಿತು. ಇದೇ ಕಾದಂಬರಿ ಹಿಂದಿ ಚಿತ್ರರಂಗದಲ್ಲಿ ಬಸಂತ್ ಬಹಾರ್ ಆಗಿ 1953ರಲ್ಲಿ ತೆರೆಕಂಡಿತ್ತು. ಮುಂದೆ 1972ರಲ್ಲಿ ಹಂಸಗೀತೆಯಾಗಿ ಕನ್ನಡದಲ್ಲಿ ತೆರೆಕಂಡಿತು. ಈ ಚಿತ್ರ ರಾಷ್ಟ್ರಪ್ರಶಸ್ತಿ ಗಳಿಸಿದ್ದಲ್ಲದೇ ವಿದೇಶಗಳಲ್ಲಿಯೂ ಪ್ರದರ್ಶಿತಗೊಂಡಿತು. ತ.ರಾ.ಸು. ಸಾಮಾಜಿಕ ಕಾದಂಬರಿಗಳನ್ನಷ್ಟೇ ಅಲ್ಲದೇ ಐತಿಹಾಸಿಕ ಹಾಗೂ ಪೌರಾಣಿಕ ಕಾದಂಬರಿಗಳನ್ನು ಬರೆದರು. ರಾಷ್ಟ್ರಕೂಟರ ಅರಸುನೃಪತುಂಗನ ಕುರಿತು ಬರೆದ ಮೊದಲ ಐತಿಹಾಸಿಕ ಕೃತಿ. ತ.ರಾ.ಸು. ಕನ್ನಡದ ದಿಗ್ಗಜರಲ್ಲೊಬ್ಬರಾದ ಡಿ.ಎಲ್.ನರಸಿಂಹಾಚಾರ್ ರವರ ಪ್ರೇರಣೆಯಂತೆ ಶ್ರವಣಬೆಳಗೊಳದ ಗೊಮ್ಮಟೇಶ್ವರ ಶಿಲ್ಪದ ಸೃಷ್ಠಿಗೆ ಕಾರಣಕರ್ತನಾದ ಗಂಗರಸನ ಮಂತ್ರಿ ಚಾವುಂಡರಾಯನಕುರಿತು ಶಿಲ್ಪಶ್ರೀ ಎಂಬ ಐತಿಹಾಸಿಕ ಕಾದಂಬರಿ ಬರೆದರು. ನಡುನಡುವೆ ಬರೆದ ಸಾಮಾಜಿಕ ಕಾದಂಬರಿಗಳು ಸಾಕಷ್ಟು ಹೆಸರು ಮಾಡಿದರು. ಚಂದ್ರವಳ್ಳಿಯ ತೋಟ ಪಠ್ಯಪುಸ್ತಕವಾಗಿತ್ತು. ಸತ್ಯಕಾಮ ಜಾಬಾಲಿಯ ಕಥೆ ಕುರಿತಾದ ನಾಲ್ಕುXನಾಲ್ಕು=ಒಂದು ಪೌರಾಣಿಕ ಕಾದಂಬರಿಯನ್ಉನ ಕೇವಲ ಹನ್ನೊಂದು ದಿನಗಳಲ್ಲಿ ಬರೆದಿದ್ದರು.
 ಚಿತ್ರದುರ್ಗ ತ.ರಾ.ಸು. ರವರಿಗೆ ಪ್ರಿಯವಾಗಿದ್ದ ಸ್ಥಳ. ಇಲ್ಲಿನ ಕೋಟೆಯ ಪ್ರತಿಯೊಂದು ಕಲ್ಲು ಇವರಿಗೆ ಚಿರಪರಿಚಿತ. ಚಿತ್ರದುರ್ಗದ ಮೇಲೆ ಇವರಿಗೆ ಇದ್ದ ಅದಮ್ಯ ಪ್ರೀತಿಗೆ ಸಾಕ್ಷಿಯಾಗಿರುವುದೇ ದುರ್ಗಾಸ್ತಮಾನ; ತ.ರಾ.ಸು. ರವರ ಕೊನೆಯ ಕೃತಿ. ಅದ್ವೈತ ಮತ ಸ್ಥಾಪನಾಚಾರ್ಯ ಶಂಕರಾಚಾರ್ಯರ ಕುರಿತು ಆನಂದಂ ಬ್ರಹ್ಮೇತಿ ವ್ಯಜನಾತ್ ಎಂಬ ಕಾದಂಬರಿ ಬರೆಯಲು ಸಾಕಷ್ಟು ಟಿಪ್ಪಣಿಗಳನ್ನು ಮಾಡಿಕೊಂಡಿದ್ದ ತ.ರಾ.ಸು. ರವರಿಗೆ ಕಡೆಯವರೆಗೂ ಅದನ್ನು ಬರೆಯಲು ಸಾಧ್ಯವಾಗಲಿಲ್ಲ. ಇದರಿಂದ ಕನ್ನಡಿಗರಿಗೆ ಒಂದು ಅಮೂಲ್ಯ ಕೃತಿ ಸಿಗುವುದು ತಪ್ಪಿಹೋಯಿತು. ತ.ರಾ.ಸು. ರವರು ಬರೆದ ಶ್ರೀ ಚಕ್ರೇಶ್ವರಿ ಕಾದಂಬರಿ ಅಪೂರ್ಣವಾಗಿಯೇ ಉಳಿದಿತ್ತು. ಆದರೆ ಅದರ ಕಥೆ ಕೇಳಿದ್ದ ಅವರ ಶಿಷ್ಯ ನಾ.ಪ್ರಭಾಕರ್ ಅದನ್ನು ಪೂರೈಸಿದ್ದರು. 1927ರ ನಂತರದ ವರ್ಷಗಳಲ್ಲಿ ಕಾಗದ ಲೇಖನಗಳನ್ನು ಡಿಕ್ಟೇಷನ್ ಕೊಡುತ್ತ ಪ್ರಭಾಕರರಿಂದಲೇ ತ.ರಾ.ಸು. ಬರೆಸುತ್ತಿದ್ದರು. ತ.ರಾ.ಸು. ಬರೆದ ಆತ್ಮಕಥೆ ಜಿಲ್ಲಾಮಟ್ಟದ ಸೌರಭ ಎಂಬ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತಾದರೂ, ಹಿಂದಿರುಗಿ ನೋಡಿದಾಗ ಎಂಬ ಅಪೂರ್ಣ ಆತ್ಮಕಥೆಯನ್ನು ತರಂಗದಲ್ಲಿ ಪ್ರಕಟವಾಯಿತು. ಹಿಂದಿರುಗಿ ನೋಡಿದಾಗ ಅಪೂರ್ಣ ಆತ್ಮಕಥೆಯನ್ನು ತ.ರಾ.ಸು. ರವರ ಪತ್ನಿ ಅಂಬುಜಾ ರವರು ಪೂರ್ಣಗೊಳಿಸಿ 1990ರಲ್ಲಿ ಹೊರತಂದರು.
 
 ಚಿತ್ರರಂಗದಲ್ಲಿ ತ.ರಾ.ಸು.
ಕನ್ನಡದ ಕಾದಂಬರಿಗಳನ್ನಾಧರಿಸಿ ಕನ್ನಡ ಚಿತ್ರಗಳನ್ನು ನಿರ್ಮಿಸುವ ಒಂದು ಪರಂಪರೆ 1962ರಲ್ಲಿ ಪ್ರಾರಂಭವಾಯಿತು. ಕೃಷ್ಣಮೂರ್ತಿ ಪುರಾಣಿಕರ ಧರ್ಮದೇವತೆ ಕಾದಂಬರಿ ಆಧರಿಸಿದ ಕರುಣೆಯೇ ಕುಟುಂಬ ಕಣ್ಣು ಚಿತ್ರವು ಕನ್ನಡದ ಪ್ರಥಮ ಕಾದಂಬರಿ ಆಧಾರಿತ ಚಿತ್ರ. ಹಾಗೇ ನೋಡಿದರೆ ತ.ರಾ.ಸು. ರವರ ವಿಶಿಷ್ಟ ಕೃತಿ ಹಂಸಗೀತೆಯನ್ನಾಧರಿಸಿ ಹಿಂದಿಯಲ್ಲಿ ಬಸಂತ್ ಬಹಾರ್ ಎಂಬ ಸಿನಿಮಾ ಬಹುಹಿಂದೆಯೇ ತೆರೆಕಂಡಿತ್ತು. 1959ರಲ್ಲಿಯೇ ತ.ರಾ.ಸು. ತಮ್ಮ ಕನ್ನಡ ಚಳುವಳಿ, ರಾಜಕೀಯ ಚಟುವಟಿಕೆಗಳ ಜತೆಗೆ ಸಿನಿಮಾ ಚಟುವಟಿಕೆಯಲ್ಲೂ ತೊಡಗಿದ್ದರು. ಚಂದ್ರವಳ್ಳಿಯ ತೋಟ, ಚಕ್ರತೀರ್ಥ, ಮಾರ್ಗದರ್ಶಿ (ಮಾರ್ಗದರ್ಶಿ, ಭಾಗ್ಯಶಿಲ್ಪ ಮತ್ತು ಬೆಳಕಿನ ಬೀದಿ ಕಾದಂಬರಿಗಳ ಆಧಾರಿತ), ಪುರ್ನಜನ್ಮ (ಸಾಕುಮಗಳು ಆಧಾರಿತ), ನಾಗರಹಾವು (ನಾಗರಹಾವು, ಎರಡು ಹೆಣ್ಣು ಒಂದು ಗಂಡು, ಹಾಗೂ ಸರ್ಪಮತ್ಸರ ಕಾದಂಬರಿಗಳ ಆಧಾರಿತ), ಚಂದನದ ಗೊಂಬೆ, ಗಾಳಿಮಾತು, ಬೆಂಕಿಯ ಬಲೆ, ಬಿಡುಗಡೆಯ ಬೇಡಿ, ಮಸಣದ ಹೂ, ಆಕಸ್ಮಿಕ (ಆಕಸ್ಮಿಕ-ಅಪರಾಧ-ಪರಿಣಾಮ ಆಧಾರಿತ), ಇವು ತ.ರಾ.ಸು. ರವರು ಬರೆದ ಕಾದಂಬರಿಗಳ ಆಧಾರಿತ ಚಲನಚಿತ್ರಗಳು. ಎಸ್.ಆರ್.ಪುಟ್ಟಣ್ಣ ಕಣಗಾಲ್ ರವರು ನಿರ್ದೇಶಿಸಿದ ನಾಗರಹಾವು ಚಿತ್ರ ತೆಲುಗಿನಲ್ಲಿ ಕೋಡೆನಾಗು ಎಂದೂ, ತಮಿಳಿನಲ್ಲಿ ರಾಜನಾಗಂ ಎಂದು ಮತ್ತು ಹಿಂದಿಯಲ್ಲಿ ಜಹರೀಲಾ ಇನ್ಸಾನ್ ಎಂದು ತೆರೆಕಂಡಿತು. ಅದೇ ಪುಟ್ಟಣ್ಣನವರ ಕೊನೆಯ ಚಿತ್ರ ಮಸಣದ ಹೂ ಸಹ ತ.ರಾ.ಸು. ರವರ ಕಾದಂಬರಿ ಆಧಾರಿತ ಚಿತ್ರ.

(ಆಧಾರ: ತ.ರಾ.ಸು. ಕುರಿತು... ನಾ.ಪ್ರಭಾಕರ್)


ಹೆಸರು
ತ.ರಾ.ಸುಬ್ಬರಾಯ (ತ.ರಾ.ಸು)
ಜನ್ಮ ದಿನಾಂಕ
21-04-1920
ಜನ್ಮ ಸ್ಥಳ
ಮಲೇಬೆನ್ನೂರು (ಹರಿಹರ ತಾಲ್ಲೂಕು)
ವಂಶಸ್ಥರ ಸ್ಥಳ
ತಳಕು (ಚಳ್ಳಕೆರೆ ತಾಲ್ಲೂಕು)
ಶಿಕ್ಷಣ
ಸೀನಿಯರ್ ಇಂಟರಮೀಡಿಯಟ್ ವರೆಗೆ
ಕೃತಿಗಳು
ಸಾಮಾಜಿಕ:
ಚಕ್ರತೀರ್ಥ, ಬೇಡದ ಮಗು, ಜೀತದ ಜೀವ, ಯಕ್ಷಪ್ರಶ್ನೆ ಇತ್ಯಾದಿ.
ಐತಿಹಾಸಿಕ:
ದುರ್ಗಾಸ್ತಮಾನ, ನೃಪತುಂಗ, ರಕ್ತರಾತ್ರಿ, ಶಿಲ್ಪಶ್ರೀ ಇತ್ಯಾದಿ.
ಕಥಾಸಂಕಲನ:
ರೂಪಸಿ, ತೊಟ್ಟಿಲು ತೂಗಿತು, ತ.ರಾ.ಸು.ರವರ ಸಮಗ್ರ ಕಥೆಗಳು, ಇತ್ಯಾದಿ.
ನಾಟಕ:
ಜ್ವಾಲಾ, ಮೃತ್ಯು ಸಿಂಹಾಸನ.
ಆತ್ಮಕಥೆ:
ಹಿಂದಿರುಗಿ ನೋಡಿದಾಗ.
ಬರೆದ ಮೊದಲ ಕೃತಿ:
ಪುಟ್ಟನ ಚೆಂಡು.
ಸ್ವಾತಂತ್ಯ ಆಂದೋಳನದಲ್ಲಿ ತ.ರಾ.ಸು.ಧ್ವಜ ಸತ್ಯಾಗ್ರಹ (1937),
ಅರಣ್ಯ ಸತ್ಯಾಗ್ರಹ (1939),
ಚಲೇಜಾವ್ ಚಳುವಳಿ (1942),
ಜವಬ್ದಾರಿ ಸರ್ಕಾತಿ ಚಳುವಳಿ (1947),
ಪ್ರಗತಿಶೀಲ ಸಾಹಿತ್ಯ ಚಳುವಳಿ (1944),
ಕನ್ನಡ ಚಳುವಳಿ (1960-84)
ಚಲನಚಿತ್ರವಾದ ತ.ರಾ.ಸು. ರವರ ಕಾದಂಬರಿಗಳು
ಹಂಸಗೀತೆ, ಚಂದ್ರವಳ್ಳಿಯ ತೋಟ, ಚಕ್ರತೀರ್ಥ, ಸಾಕುಮಗಳು (ಪುರ್ನಜನ್ಮ), ನಾಗರಹಾವು, ಗಾಳಿಮಾತು, ಬೆಂಕಿಯ ಬಲೆ, ಮಸಣದ ಹೂವು, ಬಿಡುಗಡೆಯ ಬೇಡಿ, ಆಕಸ್ಮಿಕ ಇತ್ಯಾದಿ
ಮರಣ10-04-1984