ಪುಟಗಳು

ಚಪಾತಿ ಜೊತೆ ಖಾರಾ ಖಾರಾ ಎಗ್ ಫ್ರೈ ಮಸಾಲಾ

Spicy Egg Fry
 
ಖಾರ ಖಾರ ಎಗ್ ಫ್ರೈ ಬ್ರೆಡ್, ಚಪಾತಿ, ದೋಸೆ ಯಾವುದಕ್ಕಾದರೂ ಒಳ್ಳೇ ಕಾಂಬಿನೇಶನ್. ಮೊಟ್ಟೆಗೆ ಮಸಾಲೆ ರುಚಿ ಬೆರೆಸಿ ತಯಾರಿಸುವ ಈ ಎಗ್ ಫ್ರೈ ತಿನ್ನಲು ಸ್ವಾದಭರಿತ. ಎಗ್ ಫ್ರೈ ಮಾಡೋದು ಹೇಗೆ ಎಂದು ಯೋಚಿಸುತ್ತಿದ್ದೀರಾ? ಹಾಗಾದರೆ ಇಲ್ಲಿ ನೋಡಿ.

ಎಗ್ ಫ್ರೈಗೆ ಬೇಕಾಗುವ ಪದಾರ್ಥ:
* 2-3 ಮೊಟ್ಟೆ (ಬೇಯಿಸಿ ಸಿಪ್ಪೆ ತೆಗೆದಿರಬೇಕು)
* 1 ಈರುಳ್ಳಿ
* 1 ಟೊಮೆಟೊ
* 3/4 ಚಮಚ ಮೆಣಸು ಮತ್ತು ಜೀರಿಗೆ ಪುಡಿ
* ಪುದೀನಾ, ಕರಿಬೇವು
* 1/2 ಚಮಚ ಕೆಂಪು ಮೆಣಸಿನಕಾಯಿ ಪುಡಿ
* ಎಣ್ಣೆ, ಉಪ್ಪು

ಎಗ್ ಫ್ರೈ ಮಾಡುವ ವಿಧಾನ:
* ಮೊದಲು ಬೇಯಿಸಿದ ಮೊಟ್ಟೆಯನ್ನು ಅರ್ಧ ಭಾಗ ಕತ್ತರಿಸಿಕೊಳ್ಳಬೇಕು.

* ಬಾಣಲೆಗೆ ಎಣ್ಣೆ ಹಾಕಿ ಅದರಲ್ಲಿ ಈರುಳ್ಳಿ, ಕರಿಬೇವು, ಪುದೀನಾ, ಜೀರಿಗೆ ಮೆಣಸಿನ ಪುಡಿಯನ್ನು ಹುರಿದುಕೊಳ್ಳಬೇಕು.

* ನಂತರ ಟೊಮೆಟೊ ಪೇಸ್ಟ್, ಕೆಂಪು ಮೆಣಸಿನ ಪುಡಿ ಮತ್ತು ಉಪ್ಪನ್ನು ಬೆರೆಸಿ ತಿರುಗಿಸಬೇಕು.

* ಈಗ ಎರಡು ಭಾಗವಾಗಿ ಕತ್ತರಿಸಿದ ಮೊಟ್ಟೆಯನ್ನು ಈ ಮಿಶ್ರಣದಲ್ಲಿ ಬೆರೆಸಿ ಸಣ್ಣ ಉರಿಯಲ್ಲಿ ಮಸಾಲೆ ಮೊಟ್ಟೆಯೊಂದಿಗೆ ಬೆರೆಯುವವರೆಗೂ ಬೇಯಿಸಬೇಕು. ಈಗ ಎಗ್ ಫ್ರೈ ಮಸಾಲಾ ತಿನ್ನಲು ರೆಡಿಯಾಗಿದೆ.

2012ರಲ್ಲಿ 5ಲಕ್ಷ ಹೊಸ ಉದ್ಯೋಗ ನೇಮಕಾತಿ

.
Jobs in 2012
 
ಬೆಂಗಳೂರು, ಜ.4: ಉದ್ಯೋಗ ಅರಸುವವರಿಗೆ ಹೊಸ ವರ್ಷದಲ್ಲಿ ವಿಫುಲ ಅವಕಾಶಗಳಿವೆ. 2012ರಲ್ಲಿ ಕನಿಷ್ಠ ಪಕ್ಷ 5 ಲಕ್ಷ ಹೊಸ ನೇಮಕಾತಿಗಳು ನಡೆಯಲಿದೆ ಎಂದು ಉದ್ಯೋಗ ಸಂಸ್ಥೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಗ್ಲೋಬಲ್ ಹಂಟ್ ಸಂಸ್ಥೆ ನಿರ್ದೇಶಕ ಸುನೀಲ್ ಗೋಯಲ್ ಅವರ ಪ್ರಕಾರ, 2012ರಲ್ಲಿ ಎರಡು ಪಟ್ಟು ಸಂಬಳ ಏರಿಕೆ ಕೂಡಾ ಕಾಣುವ ಯೋಗ ಇದೆಯಂತೆ.

ಸರ್ಕಾರದ ಔದ್ಯೋಗಿಕ ನೀತಿ ನಿಯಮ ಹಾಗೂ ಮಾರುಕಟ್ಟೆ ಪರಿಸ್ಥಿತಿ ಅವಲೋಕಿಸಿದರೆ, ವಿವಿಧ ಕ್ಷೇತ್ರಗಳಲ್ಲಿ 5 ಲಕ್ಷ ನೇಮಕಾತಿ ಸುಲಭವಾಗಿ ಆಗಲಿದೆ ಎಂದಿದ್ದಾರೆ.

ಯುಎಸ್ ಆರ್ಥಿಕ ಬಿಕ್ಕಟ್ಟು ಹಾಗೂ ಯುರೋ ಆರ್ಥಿಕ ಕುಸಿತ ಸಂದರ್ಭದಲ್ಲಿ ಭಾರತದ ಕಂಪನಿಗಳು ತೋರಿದ ದಿಟ್ಟತನ ಫಲ ನೀಡುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಎಲಿಕ್ಸಿರ್ ನ ಉಪಾಧ್ಯಕ್ಷೆ ಮೋನಿಕಾ ತ್ರಿಪಾಠಿ ಪ್ರಕಾರ, ಐಟಿ/ಐಟಿಯೇತರ ಸಂಸ್ಥೆಗಳಲ್ಲೇ 3 ಲಕ್ಷಕ್ಕೂ ಅಧಿಕ ನೇಮಕಾತಿ ನಡೆಯಲಿದೆ. ಶೇ.7 ರಿಂದ 8 ಪಟ್ಟು ಹೊಸ ನೇಮಕಾತಿ ಆಗಲಿದೆ.

ಐಟಿ/ಐಟಿಯೇತರ, ಆಸ್ಪತ್ರೆ, ಗ್ರಾಹಕ ಸಂಬಂಧಿ ವೃತ್ತಿ, ರಕ್ಷಣಾ ಇಲಾಖೆ, ರೀಟೇಲ್ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗ ಅವಕಾಶಗಳು ಒದಗಿ ಬರಲಿದೆ.

ನಂತರ ರಿಯಲ್ ಎಸ್ಟೇಟ್, ಆಟೋಮೊಬೈಲ್ ಕ್ಷೇತ್ರ ಕೂಡಾ ಮತ್ತೆ ಉತ್ತುಂಗಕ್ಕೇರಲಿದೆ ಎಂದು ಸಿಂಬಿೋಸಿಸ್ ಸಂಸ್ಥೆ ಸಿಇಒ ವಿನಯ್ ಗ್ರೋವರ್ ಹೇಳುತ್ತಾರೆ.

2011ಕ್ಕೆ ಹೋಲಿಸಿದರೆ ಸಂಬಳ ಏರಿಕೆಯಲ್ಲಿ ಶೇ.11 ರಷ್ಟು ಪ್ರಗತಿ ಕಾಣುವ ನಿರೀಕ್ಷೆಯಿದೆ ಎಂದು ತಜ್ಞರು ಹೇಳಿದ್ದಾರೆ.

ಚಿನ್ನದ ಮೇಲೆ ಹಾಲ್‌ಮಾರ್ಕ್ ಹೆಗ್ಗುರುತು ಕಡ್ಡಾಯ


Hallmarking of Gold compulsory
 
ನವದೆಹಲಿ, ಜ. 4 : ಗ್ರಾಹಕರು ನಕಲಿ ಉತ್ಪನ್ನ ಕೊಂಡು ಮೋಸ ಹೋಗುವುದನ್ನು ತಪ್ಪಿಸುವ ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಚಿನ್ನದ ಮೇಲೆ ಹಾಲ್‌ಮಾರ್ಕ್ ಹೆಗ್ಗುರುತು ಮೂಡಿಸುವ ಪ್ರಸ್ತಾವನೆಗೆ ಕೇಂದ್ರ ಸರಕಾರ ಬುಧವಾರ ಒಪ್ಪಿಗೆಯ ಮೊಹರನ್ನು ಒತ್ತಿದೆ.

ಈ ನಿಟ್ಟಿನಲ್ಲಿ, ಗ್ರಾಹಕ ವ್ಯವಹಾರ ಸಚಿವಾಲಯದ ವ್ಯಾಪ್ತಿಯಲ್ಲಿ ಬರುವ ದಿ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ (BIS) ಕಾಯ್ದೆಯಲ್ಲಿ ತಿದ್ದುಪಡಿ ತಂದಿದೆ. ಹಾಲ್‌ಮಾರ್ಕ್ ಚಿನ್ನದ ಪರಿಶುದ್ಧತೆಗೆ ನೀಡುವ ಸರ್ಟಿಫಿಕೇಟ್. ಆದರೆ, ಇದು ಕಡ್ಡಾಯವಾಗಿರಲಿಲ್ಲ.

ಪ್ರಧಾನಿ ಡಾ. ಮನಮೋಹನ ಸಿಂಗ್ ಅವರ ನೇತೃತ್ವದ ಕೇಂದ್ರ ಸಂಪುಟ ಸಭೆ ದಿ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ (BIS) ಕಾಯ್ದೆಯ ತಿದ್ದುಪಡಿಗೆ ಒಪ್ಪಿಗೆ ನೀಡಿದ್ದು, ಬಂಗಾರ ಸೇರಿದಂತೆ ಅನೇಕ ಉತ್ಪನ್ನಗಳ ಮೇಲೆ ಹಾಲ್‌ಮಾರ್ಕ್ ಹೆಗ್ಗುರುತು ಮೂಡಿಸುವುದನ್ನು ಕಡ್ಡಾಯ ಮಾಡಿದೆ.

ಹಾಲ್‌ಮಾರ್ಕ್ ಉತ್ಪನ್ನವಿರುವ ಚಿನ್ನವನ್ನೇ ಕೊಳ್ಳಲು ಗ್ರಾಹಕರು ಇಷ್ಟಪಡುತ್ತಾರೆ. ಹಾಲ್‌ಮಾರ್ಕ್ ಗುರುತು ಇದ್ದರೆ ಉತ್ತಮ ಗುಣಮಟ್ಟದ ಸಂಕೇತ. ಸಿಮೆಂಟ್, ಮಿನರಲ್ ನೀರು, ಹಾಲಿನ ಉತ್ಪನ್ನಗಳು ಸೇರಿದಂತೆ 77 ವಸ್ತುಗಳು ಸರ್ಟಿಫಿಕೇಟ್ ಪಡೆದಿವೆ.

ಅಕ್ರಮ ಮದ್ಯ ಕಂಡ್ರೆ ಅಬಕಾರಿ ಅಧಿಕಾರಿಗೆ ತಿಳಿಸಿ


Illegal foreign liquor seized in Bangalore
 
ಬೆಂಗಳೂರು, ಜ, 4 : ಅಕ್ರಮವಾಗಿ ವಿದೇಶಿ ಮದ್ಯವನ್ನು ಸರಬರಾಜು ಮಾಡುತ್ತಿದ್ದ 2 ಮಾರುತಿ ವಾಹನಗಳನ್ನು ಜಪ್ತುಪಡಿಸಿ, ಇವುಗಳಲ್ಲಿ ಸಾಗಾಣಿಕೆ ಮಾಡುತ್ತಿದ್ದ 5 ಲಕ್ಷ ರುಪಾಯಿ ಮೌಲ್ಯದ 72 ಬಾಟಲಿ ವಿದೇಶಿ ಮದ್ಯವನ್ನು ಬೆಂಗಳೂರು ನಗರದ ಅಬಕಾರಿ ಇಲಾಖೆಯ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.

ಓರ್ವ ವ್ಯಕ್ತಿಯನ್ನು ಸಹ ದಸ್ತಗಿರಿ ಮಾಡಲಾಗಿದೆ. ಈ ದಂಧೆಯನ್ನು ಭೇದಿಸಿದ ಬೆಂಗಳೂರು ನಗರದ ಅಬಕಾರಿ ಉಪ ಆಯುಕ್ತರಾದ ಮೊಹಮದ್ ಫಸೀಯುದ್ದೀನ್ ಇವರ ನೇತೃತ್ವದ ವಿಶೇಷ ತಂಡಗಳನ್ನು ಅಬಕಾರಿ ಆಯುಕ್ತರು ಅಭಿನಂದಿಸಿದ್ದಾರೆ.

ಅಕ್ರಮ ವಿದೇಶಿ ಮದ್ಯ ಸರಬರಾಜು ಜಾಲವನ್ನು ಭೇದಿಸಿರುವ ಅಬಕಾರಿ ಇಲಾಖೆ ಇಂತಹ ಚಟುವಟಿಕೆಗಳನ್ನು ನಿಯಂತ್ರಿಸಲು ವಿಶೇಷ ತಂಡಗಳನ್ನು ನೇಮಿಸಿದ್ದು ನಗರದ ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ಶೋಧನೆ ತೀವ್ರಗೊಳಿಸಿದೆ.

ಕಡಿಮೆ ಬೆಲೆಯಲ್ಲಿ ವಿದೇಶಿ ಮದ್ಯವನ್ನು ಸರಬರಾಜು ಮಾಡಲಾಗುತ್ತದೆ ಎಂಬ ಸುದ್ದಿಯನ್ನು ಸಾರ್ವಜನಿಕರು ನಂಬಬಾರದು. ಇಂತಹ ಮದ್ಯ ಸೇವಿಸಿದಲ್ಲಿ ಆರೋಗ್ಯ ಮತ್ತು ಪ್ರಾಣ ಹಾನಿಯಾಗುತ್ತದೆ ಎಂದು ಅಬಕಾರಿ ಆಯುಕ್ತರು ಸಾರ್ವಜನಿಕರಿಗೆ ತಿಳಿವಳಿಕೆ ನೀಡಿರುತ್ತಾರೆ. ಇಂತಹ ಚಟುವಟಿಕೆ ಕಂಡುಬಂದಲ್ಲಿ ಸಾರ್ವಜನಿಕರು ಈ ಕೆಳಕಂಡ ಅಧಿಕಾರಿಗಳನ್ನು ಸಹಕರಿಸಲು ಕೋರಲಾಗಿದೆ.

ಕಚೇರಿಯ ಹೆಸರುದೂರವಾಣಿಮೊಬೈಲ್
ಅಬಕಾರಿ ಜಂಟಿ ಆಯುಕ್ತರು, ರಾಜ್ಯ ವಿಚಕ್ಷಣ ದಳ, ಬೆಂಗಳೂರು22278826/2212272294495-97017
ಅಬಕಾರಿ ಜಂಟಿ ಆಯುಕ್ತರು, ಬೆಂಗಳೂರು ವಿಭಾಗ22214242/ 2212051994495-97028
ಅಬಕಾರಿ ಉಪ ಆಯುಕ್ತರು, ಬೆಂಗಳೂರು ನಗರ ಜಿಲ್ಲೆ (ಪೂರ್ವ)2223279294495-97228
ಅಬಕಾರಿ ಉಪ ಆಯುಕ್ತರು, ಬೆಂಗಳೂರು ನಗರ ಜಿಲ್ಲೆ (ಪಶ್ಚಿಮ)2212504994495-97286
ಅಬಕಾರಿ ಉಪ ಆಯುಕ್ತರು, ಬೆಂಗಳೂರು ನಗರ ಜಿಲ್ಲೆ ಉತ್ತರ2212505294495-97007
ಅಬಕಾರಿ ಉಪ ಆಯುಕ್ತರು, ಬೆಂಗಳೂರು ನಗರ ಜಿಲ್ಲೆ (ದಕ್ಷಿಣ)22240152/ 2223327894495-97214
ಅಬಕಾರಿ ಉಪ ಆಯುಕ್ತರು, ಬೆಂಗಳೂರು ಗ್ರಾಮಾಂತರ ಜಿಲ್ಲೆ22861343/ 22862279/
22868104
94495-97029