ಅನಾದಿ ಕಾಲದಿಂದ ನಡೆದು ಕೊಂಡು ಬರುತ್ತಿರುವ ಶಾಸ್ತ್ರ ಸಂಪ್ರದಾಯಗಳ ಪ್ರಕಾರ ಸೂರ್ಯನು ಧನು ರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸುವುದು ಮಕರ ಸಂಕ್ರಮಣ. ಮಕರ ಸಂಕ್ರಾಂತಿಯ ಆಚರಣೆಯು ಸೂರ್ಯನ ಚಲನೆಯನ್ನು ಆಧರಿಸಿದ್ದು ಮಕರ ರಾಶಿಗೆ ಪ್ರವೇಶಿಸುವ ಈ ಕಾಲವು ಉತ್ತರಾಯಣ ಪುಣ್ಯ ಕಾಲವೆಂದು ಕರೆಯಲ್ಪಡುತ್ತದೆ.
ಮಕರ ಸಂಕ್ರಾಂತಿಯ ವೇಳೆ ಶುಭಕಾರ್ಯಗಳನ್ನು ಕೈಗೊಳ್ಳುವುದು ಶ್ರೇಯಸ್ಕರ ಎಂಬ ನಂಬಿಕೆ ರೂಢಿಯಲ್ಲಿದೆ. ಉತ್ತರಾಯಣ ಪುಣ್ಯಕಾಲ ಎಂದು ಕರೆಯಲ್ಪಡುವ ಇದು ಸೂರ್ಯನು ಉತ್ತರ ದಿಕ್ಕಿಗೆ ಸಂಚರಿಸುತ್ತಾನೆ ಎಂಬ ಅರ್ಥವನ್ನು ಕೊಡುತ್ತದೆ. ಉತ್ತರ ಎಂಬ ಪದಕ್ಕೆ ಶ್ರೇಷ್ಠ ಎಂಬ ಅರ್ಥವಿದ್ದು, ಇದನ್ನು ಶ್ರೇಷ್ಠವಾದ ದಾರಿಯೆಂದೂ ಕೂಡಾ ಅರ್ಥೈಸ ಬಹುದು. ಇದರ ಬಗ್ಗೆ ಭಗವದ್ಗೀತೆಯ 8 ನೇ ಅಧ್ಯಾಯದ 24 ನೇ ಶ್ಲೋಕದಲ್ಲಿ ಈ ರೀತಿ ಉಲ್ಲೇಖವಿದೆ.
ಅಗ್ನಿರ್ಜ್ಯೋತಿರ್ ಅಹಃ ಶುಕ್ಲಃ ಷಣ್‌ಮಾಸ ಉತ್ತರಾಯಣಂ।
ತತ್ರ ಪ್ರಯಾತಾ ಗಚ್ಛಂತಿ ಬ್ರಹ್ಮ ಬ್ರಹ್ಮವಿದೋ ಜನಾಃ।।
ಅಂದರೆ ಈ ಕಾಲದಲ್ಲಿ ಎಲ್ಲಾ ಕಾರ್ಯಗಳು ಹೆಚ್ಚು ಶ್ರೇಯಸ್ಕರವಾಗಿ ನಡೆಯುವುದು ಮತ್ತು ಸ್ವರ್ಗದ ಬಾಗಿಲು ತೆರೆದಿರುವುದು. ಮುಕ್ತಿಯನ್ನು ಹೊಂದಲಿರುವ ಸೂತ್ರದ ಬಗ್ಗೆ ಈ ಶ್ಲೋಕದಲ್ಲಿ ವಿವರಿಸಲಾಗಿದೆ. ಅರ್ಥಾತ್ ಅಗ್ನಿ, ಜ್ಯೋತಿ, ಹಗಲು ,ಶುಕ್ಲ ಪಕ್ಷ, ಉತ್ತರಾಯಣದ ಆರು ತಿಂಗಳುಗಳಲ್ಲಿ ಬ್ರಹ್ಮವಿದರಾದ ಯೋಗಿಗಳ ಪ್ರಾಣಗಳು ಬ್ರಹ್ಮದಲ್ಲಿ ವಿಲೀನವಾಗುವುವು. ಇದು ಮುಕ್ತಿಯ ಕಡೆಗಿರುವ ಯಾತ್ರೆಯಾಗಿದೆ.
ಅದೇ ರೀತಿ ಧೂಮ, ರಾತ್ರಿ, ಕೃಷ್ಣ ಪಕ್ಷ ಮತ್ತು ದಕ್ಷಿಣಾಯನದ ಆರು ತಿಂಗಳು ಪ್ರಯಾಣ ಮಾಡಿದ ಯೋಗಿಗಳ ಪ್ರಾಣಗಳು ಚಂದ್ರಜ್ಯೋತಿಯನ್ನು ಸೇರಿ ಮತ್ತೆ ಸಂಸಾರಕ್ಕೆ ಮರಳುವುದು. ಆದರೆ ಉತ್ತರಾಯಣದಲ್ಲಿ ಮರಣಹೊಂದಿದ ಯಾರೂ ಮರಳಿ ಸಂಸಾರಕ್ಕೆ ಬರುವುದಿಲ್ಲ. ಅವರು ಮುಕ್ತಿಯನ್ನು ಹೊಂದುತ್ತಾರೆ ಎಂಬುದು ಇದರ ತಾತ್ಪರ್ಯವಾಗಿದೆ. ಈ ದಿನದಂದು ಕೈಗೊಳ್ಳುವ ಯಾವುದೇ ಕಾರ್ಯಗಳು ಅಂದರೆ ಸ್ನಾನ, ದಾನ, ಹೋಮ, ಪೂಜೆ ಮೊದಲಾದ ಶುಭ ಕಾರ್ಯಗಳಿಗೆ ವಿಶೇಷ ಫಲ ಲಭಿಸುವುದು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.
ಉತ್ತರಾಯಣ ಪುಣ್ಯ ಕಾಲದ ಆರಂಭ
ಮಕರ ಸಂಕ್ರಾಂತಿಯು ಪ್ರಧಾನವಾಗಿ ಸೂರ್ಯನು ತನ್ನ ಪಥವನ್ನು ಬದಲಾಯಿಸುವುದನ್ನು ಸೂಚಿಸುವುದು ಮಾತ್ರವಲ್ಲದೆ ಉತ್ತರಾಯಣ ಪುಣ್ಯ ಕಾಲದ ಆರಂಭವೂ ಇದಾಗಿದೆ. ಮಕರ ಸಂಕ್ರಾಂತಿ ಅಥವಾ ಸಂಕ್ರಮಣದ ಅರ್ಥವು ಮಕರ ರಾಶಿಯನ್ನು ಹಾದು ಹೋಗುವುದು ಅಥವಾ ಮಕರ ರಾಶಿಗೆ ಬದಲಾಗುವುದು ಎಂಬುದಾಗಿದೆ. ಈ ಆಚರಣೆಯು ಸೂರ್ಯದೇವನ ಸಂಚಾರವನ್ನು ಗಣನೆಗೆ ತೆಗೆದುಕೊಂಡು ಆಚರಿಸಲಾಗುತ್ತಿದ್ದು ಸೂರ್ಯದೇವನು ತನ್ನ ಏಳು ಕುದುರೆಗಳಿಂದ ಎಳೆಯಲ್ಪಡುವ ಭವ್ಯ ರಥದಲ್ಲಿ ಮಕರ ರಾಶಿಗೆ ಪ್ರವೇಶಿಸುತ್ತಾನೆ ಎಂದು ಪುರಾತನ ಕಾಲದಿಂದಲೇ ಭಾರತೀಯರಲ್ಲಿ ನೆಲೆವೂರಿರುವ ವಿಶ್ವಾಸವಾಗಿದ್ದು, ಪ್ರಸ್ತುತ ರಥದ ಏಳು ಕುದುರೆಗಳು ಕಾಮನ ಬಿಲ್ಲಿನ ಏಳು ಬಣ್ಣಗಳನ್ನು ಪ್ರತಿನಿಧಿಸುತ್ತವೆ.
ಮಕರ ರಾಶಿಗೆ ಸೂರ್ಯನ ಪ್ರವೇಶವು ಇರುಳನ್ನು ಹೋಗಲಾಡಿಸುವುದು ಮಾತ್ರವಲ್ಲದೆ ಈ ಕಾಲದಲ್ಲಿ ಸಸ್ಯಗಳ ಬೆಳವಣಿಗೆಗೂ ಸಹಕರಿಸುತ್ತದೆ. ವೇದಶಾಸ್ತ್ರದ ಪ್ರಕಾರ ಇದು ಮನಸ್ಸಿನ ಕಾರಿರುಳನ್ನು ಹೋಗಲಾಡಿಸಿ ಸ್ವ ಪ್ರಜ್ಞೆಯ ದಾರಿಯಾದ ಮೋಕ್ಷವನ್ನು ಹೊಂದಲು ಸಹಕಾರಿಯಾಗುತ್ತದೆ. ಆದುದರಿಂದಲೇ ಇದನ್ನು ಪುಣ್ಯ ಕಾಲವೆಂದು ಕರೆಯಲ್ಪಡುತ್ತದೆ. ಈ ಕಾಲವು ಸ್ವರ್ಗದ ಬಾಗಿಲು ತೆರೆದಿರುವ ಕಾಲವೆಂದು ಚಾಲ್ತಿಯಲ್ಲಿದ್ದು, ಈ ಅವಧಿಯಲ್ಲಿ ಮರಣ ಹೊಂದುವವರು ಸ್ವರ್ಗವನ್ನು ಪಡೆಯುತ್ತಾರೆ ಎಂಬ ಐತಿಹ್ಯವಿದೆ. ಆದುದರಿಂದಲೇ ಮಹಾಭಾರತದ ಕಥೆಯಲ್ಲಿ ಭೀಷ್ಮ ಇಹಲೋಕ ತ್ಯಜಿಸಲು ಈ ಕಾಲದ ನಿರೀಕ್ಷೆಯಲ್ಲಿದ್ದದ್ದನ್ನು ನಾವು ಇಲ್ಲಿ ನೆನಪಿಸಿ ಕೊಳ್ಳಬಹುದು. ಈ ಕಾಲದಲ್ಲಿ ಇರುಳಿನ ಅವಧಿಯು ಕಡಿಮೆಯಿದ್ದು ಸೂರ್ಯನ ಬೆಳಕು ಸದಾ ಭೂಮಿ ಮೇಲಿರುತ್ತದೆ. ಮಾಗಿಯ ಚಳಿ ಕಡಿಮೆಯಾಗುವ ಈ ಸಮಯದಲ್ಲಿ ಸರಿಯಾಗಿ ಬೆಳೆ ಕೊಯ್ಲಿಗೆ ಬಂದಿರುತ್ತದೆ. ಅಂದರೆ ಸುಗ್ಗಿ ಕಾಲ. ಹಳ್ಳಿಗಳಲ್ಲಿ ಇದನ್ನೇ ಸುಗ್ಗಿ ಹಬ್ಬವೆಂದು ಆಚರಿಸುವ ಸಂಪ್ರದಾಯವು ಭಾರತಾದ್ಯಂತ ಕಂಡು ಬರುತ್ತದೆ.
ಈ ದಿನದಂದು ಭಕ್ತರು ಹೆಸರು ಬೇಳೆ, ಅಕ್ಕಿ ಮತ್ತು ಬೆಲ್ಲವನ್ನು ಸೇರಿಸಿ ತಯಾರಿಸುವ ತಿಂಡಿ (ಪೊಂಗಲ್) ಹೆಚ್ಚಿನ ಪ್ರಾಧಾನ್ಯತೆಯನ್ನು ವಹಿಸಿದೆ, ಈ ಪೊಂಗಲ್ ಶ್ರೀ ನಾರಾಯಣ, ಲಕ್ಷ್ಮಿ ದೇವರ ದೈವಿಕ ಪ್ರೀತ್ಯರ್ಥವಾಗಿ ಸಲ್ಲಿಸಲಾಗುತ್ತದೆ.
ಹಬ್ಬವೊಂದು ನಾಮ ಹಲವು
ಮಕರ ಸಂಕ್ರಾಂತಿಯು ಭಾರತದೆಲ್ಲಡೆಗಳಲ್ಲಿ ವಿವಿಧ ಹೆಸರುಗಳಿಂದ ಆಚರಿಸಲ್ಪಡುತ್ತದೆ. ಪಂಜಾಬ್‌ನಲ್ಲಿ ಇದು ಲೋಹರಿ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಬೋಗಲಿ ಬಿಹು, ಗುಜರಾತ್ ಮತ್ತು ರಾಜಸ್ತಾನದಲ್ಲಿ ಉತ್ತರಾಯಣ್ (ಗಾಳಿಪಟ ಹಾರಿಸುವ ಹಬ್ಬ), ಕರ್ನಾಟಕ, ಬಿಹಾರ, ಆಂಧ್ರ ಪ್ರದೇಶ ಮೊದಲಾದೆಡೆ ಮಕರ ಸಂಕ್ರಾಂತಿಯಾಗಿಯೂ, ತಮಿಳ್ನಾಡಿನಲ್ಲಿ ಮನೆಮನೆಗಳಲ್ಲಿ ಹಾಲನ್ನು ಉಕ್ಕಿಸುವುದ ಮೂಲಕ "ಪೊಂಗಲ್" ಹಬ್ಬ ಆಗಿಯೂ, ಕೇರಳದ ಶಬರಿಮಲೆ ದೇವಸ್ಥಾನದಲ್ಲಿ ಮಕರ ವಿಳಕ್ಕ್ ಉತ್ಸವವಾಗಿಯೂ ಮಿಕ್ಕಿ ಉಳಿದ ರಾಜ್ಯಗಳಲ್ಲಿ ಸಂಕ್ರಾಂತಿ ಎಂದೂ ಆಚರಿಸಲ್ಪಡುತ್ತದೆ.
ಎಳ್ಳುಬೆಲ್ಲ ತಿಂದು ಒಳ್ಳೆ ಮಾತನ್ನಾಡಿ
ಹೊಸ ಫಸಲು ಭತ್ತ, ಕಬ್ಬು, ಎಳ್ಳು ಇತ್ಯಾದಿಗಳನ್ನು ಹೊಲಗಳಿಂದ ಮನೆಗೆ ತಂದು ಅವುಗಳನ್ನು ದಾನ ಮಾಡಿದ ನಂತರ ಸೇವಿಸುವ ಪದ್ಧತಿಯು ಪುರಾತನ ಕಾಲದಿಂದಲೇ ನಡೆದು ಕೊಂಡು ಬಂದಿದೆ. ಕರ್ನಾಟಕದಕಲ್ಲಿ ಸಂಕ್ರಾಂತಿಗೆ ಸಂಬಂಧಪಟ್ಟ ಆಚರಣೆಗಳಲ್ಲಿ ಕಂಡು ಬರುವುದು "ಎಳ್ಳು". ಮನೆಯಲ್ಲಿ ಎಳ್ಳನ್ನು ತಯಾರಿಸಿ ಸುತ್ತ ಮುತ್ತಲಿನ ಮನೆಗೆ ಎಳ್ಳನ್ನು ಹಂಚಿ ಶುಭಾಶಯಗಳನ್ನು ಕೋರುತ್ತಾರೆ. ಈ ಸಂಪ್ರದಾಯವನ್ನು "ಎಳ್ಳು ಬೀರುವುದು" ಎಂದು ಕರೆಯುತ್ತಾರೆ. ಎಳ್ಳುಬೆಲ್ಲ ತಿಂದು ಒಳ್ಳೆಯ ಮಾತನ್ನಾಡೋಣ ಎನ್ನುತ್ತಾ ಹಂಚುವ ಎಳ್ಳಿನ ಜತೆಗೆ, ಸಕ್ಕರೆಯ ಅಚ್ಚುಗಳನ್ನು ,ಹಣ್ಣು ಮತ್ತು ಕಬ್ಬಿನ ಚಿಕ್ಕ ತುಂಡುಗಳನ್ನು ಸಹ ಹಂಚುವ ಪದ್ದತಿ ಇದೆ. ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿದ ಒಣ ಕೊಬ್ಬರಿ, ಬೆಲ್ಲ, ಹುರಿಗಡಲೆ, ಸಿಪ್ಪೆ ತೆಗೆದ ಕಡಲೇ ಕಾಯಿ ಬೀಜ ಹಾಗೂ ಹುರಿದ ಬಿಳಿ ಎಳ್ಳನ್ನು ಸೇರಿಸಿ 'ಎಳ್ಳ'ನ್ನು ತಯಾರಿಸಲಾಗುತ್ತದೆ.
ಸಂಕ್ರಾತಿಯ ಆಚರಣೆಯಲ್ಲಿ ಎಳ್ಳು ಬೆಲ್ಲದ ಸೇವನೆಯು ಆರೋಗ್ಯಕರವಾಗಿರುತ್ತದೆ. ಎಳ್ಳಿಗೆ ಶಾಖವನ್ನುಂಟು ಮಾಡುವ ಶಕ್ತಿಯಿರುವುರುವುದರಿಂದಲೇ ಚಳಿಗಾಲದಲ್ಲಿ ಇದರ ಸೇವನೆ ಉತ್ತಮ. ಬರಿಯ ಎಳ್ಳು ಸೇವನೆಯು ಕಫ ಮತ್ತು ಪಿತ್ತ ರೋಗದ ವೃದ್ಧಿಗೆ ಕಾರಣವಾಗುವುದರಿಂದ ಎಳ್ಳಿನೊಡನೆ ಹುರಿದ ಕಡಲೆ ಬೀಜ, ಕೊಬ್ಬರಿ ಮತ್ತು ಬೆಲ್ಲವನ್ನು ಸೇವಿಸಲಾಗುತ್ತದೆ. ಹೀಗೆ ಆರೋಗ್ಯದ ದೃಷ್ಟಿಯಿಂದ ವೈಜ್ಞಾನಿಕವಾಗಿಯೂ ಸಂಕ್ರಾಂತಿಯ ಆಚರಣೆಯು ಜನಜೀವನದಲ್ಲಿ ಹೆಚ್ಚಿನ ಪ್ರಾಧಾನ್ಯವನ್ನು ವಹಿಸುತ್ತದೆ.
ಸಾಮಾನ್ಯವಾಗಿ ಮನೆಯ ಹೆಣ್ಣು ಮಕ್ಕಳು ಎಳ್ಳು ಬೀರಿದರೆ, ಹೆಣ್ಣು ಮಕ್ಕಳಿಲ್ಲದ ಮನೆಯಲ್ಲಿ ಗಂಡು ಮಕ್ಕಳನ್ನು ಎಳ್ಳು ಬೀರಲು ಕಳುಹಿಸುವುದೂ ವಾಡಿಕೆಯಲ್ಲಿದೆ. ಇದಲ್ಲದೆ ಮದುವೆಯಾಗಿ ಗಂಡನ ಮನೆಗೆ ಹೋದ ಹೆಂಗೆಳೆಯರು 5 ವರ್ಷಗಳ ವರೆಗೆ ನೆಂಟರಿಷ್ಟರಿಗೆ ಎಳ್ಳನ್ನು ಬೀರುವರು. ಈ ಸಂಪ್ರದಾಯದ ಪ್ರಕಾರ, ಮೊದಲ ವರ್ಷ 5 ಬಾಳೆಹಣ್ಣುಗಳನ್ನು ದಾನ ಮಾಡಿದರೆ, ಎರಡನೇ ವರ್ಷ 10, ಮೂರನೇ ವರ್ಷ 15 ಹೀಗೆ ಐದನೇ ವರ್ಷ 25 ಬಾಳೆಹಣ್ಣುಗಳನ್ನು ದಾನ ಮಾಡುವ ಸಂಪ್ರದಾಯವು ಕೆಲವೆಡೆಗಳಲ್ಲಿ ಚಾಲ್ತಿಯಲ್ಲಿದೆ.
ಮಹಾರಾಷ್ಟ್ರದಲ್ಲಿ ಈ ದಿನದಂದು ಎಳ್ಳಿನ ಉಂಡೆಯನ್ನು ದಾನ ಮಾಡಿ ಆಚರಿಸುವ ಪದ್ಧತಿ ಕಂಡುಬರುತ್ತದೆ. ಅಲ್ಲಿ ಇದನ್ನು 'ತಿಲ್‌ಗೋಳ' ಎಂದು ಕರೆಯುತ್ತಾರೆ. ರಾಜಸ್ಥಾನ. ಗುಜರಾತ್, ಮಹರಾಷ್ಟ್ರ ಮೊದಲಾದ ರಾಜ್ಯಗಳಲ್ಲಿ ಈ ಹಬ್ಬವನ್ನು ಗಾಳಿಪಟ ಹಾರಿಸಿ ಆಚರಿಸುತ್ತಾರೆ. ಮಕರ ಸಂಕ್ರಾತಿಯ ದಿನದಂದು ಪವಿತ್ರ ಸ್ಥಳಗಳಾದ ಪ್ರಯಾಗ, ಹರಿದ್ವಾರ್, ಉಜ್ಜೈನಿ ಮತ್ತು ನಾಸಿಕ್ ಮೊದಲಾದೆಡೆಗಳಲ್ಲಿ ವಿಶೇಷ ಮೇಳಗಳು ನಡೆದು ಬರುತ್ತಿದ್ದು, 12 ವರುಷಕ್ಕೊಮ್ಮೆ ಆಚರಿಸುವ ಕುಂಭ ಮೇಳವು ಸಂಕ್ರಾತಿಯ ದಿನದಂದು ಮೇಲಿನ ಯಾವುದಾದರೊಂದು ಕ್ಷೇತ್ರಗಳಲ್ಲಿ ನೆರವೇರುತ್ತದೆ. ವರ್ಷಂಪ್ರತಿ ಚಿಕ್ಕ ಕುಂಭ ಮೇಳವೆಂದು ಕರೆಯಲ್ಪಡುವ ಮಾಘ ಮೇಳ ಪ್ರಯಾಗದಲ್ಲಿಯೂ, ಗಂಗಾಸಾಗರ ಮೇಳವು ಗಂಗಾನದಿಯಲ್ಲಿಯೂ ಮಕರ ಸಂಕ್ರಾಂತಿಯ ದಿನದಂದು ನೆರವೇರಿಸಲ್ಪಡುತ್ತದೆ.
ಮಕರರಾಶಿಗೆ ಸೂರ್ಯನ ಪ್ರವೇಶ
ತಮಿಳುನಾಡಿನಲ್ಲಿ ಮತ್ತು ಆಂಧ್ರ ಪ್ರದೇಶದಲ್ಲಿ ಮಕರ ಸಂಕ್ರಾಂತಿಯು "ಪೊಂಗಲ್" ಹಬ್ಬವೆಂದು ಮೂರು ದಿನಗಳ ಕಾಲ ಆಚರಿಸುತ್ತಿದ್ದು ತಮ್ಮ ಬೆಳೆಯ ಮೊದಲ ಕೊಯ್ಲನ್ನು ಮನೆಗೆ ತಂದು ಹೊಸ ಅಕ್ಕಿಯನ್ನು ಹಾಲಿನೊಂದಿಗೆ ಬೇಯಿಸಿ ಒಂದು ಬಗೆಯ ಸಿಹಿ ತಿಂಡಿಯಾದ 'ಚಕ್ಕರಪೊಂಗಲ್"ನ್ನು ತಯಾರಿಸುತ್ತಾರೆ. ಈ ಖಾದ್ಯವನ್ನು ಮೊದಲು ಸೂರ್ಯನಿಗೆ ಅರ್ಪಿಸಲಾಗುತ್ತಿದ್ದು ನಂತರ ಪ್ರಸಾದ ರೂಪದಲ್ಲಿ ಎಲ್ಲರಿಗೂ ವಿತರಿಸಲಾಗುತ್ತದೆ. ಜನರು ಈ ದಿನದಂದು 'ಹೊಸಅಕ್ಕಿ ಊಟ'ವನ್ನು ತಯಾರಿಸಿ ಧಾನ್ಯಲಕ್ಷ್ಮಿಯನ್ನು ಪೂಜಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಮನೆ ಮುಂದೆ ವರ್ಣರಂಜಿತ "ಕೋಲಂ" ಎಂದರೆ ರಂಗೋಲಿಯನ್ನು ರಚಿಸಿ ಸಮೃದ್ಧಿಯನ್ನು ಆಹ್ವಾನಿಸುತ್ತಾ ಆಚರಿಸುವ ಈ ಹಬ್ಬವು ಸಂಪತ್ತು, ಸಮಾಧಾನ ಮತ್ತು ಏಳಿಗೆಯ ದ್ಯೋತಕವಾಗಿದೆ.
ಸಂಕ್ರಾಂತಿ ಹಬ್ಬದ ರಾತ್ರಿಯಂದು ದೇವರ ಪೂಜೆಯ ನಂತರ ಜ್ಯೋತಿಷಿಗಳಿಂದ ಸಂಕ್ರಾಂತಿ ಮೂರ್ತಿಯ ಸ್ವರೂಪ ಮತ್ತು ಆ ವರ್ಷದ ಸಂಕ್ರಾಂತಿ ಫಲವನ್ನು ಓದಿಸಿ ತಿಳಿಯುವ ಪದ್ದತಿಯೂ ಕೆಲವೆಡೆಗಳಲ್ಲಿ ಕಂಡು ಬರುತ್ತದೆ. ಸಂಕ್ರಾಂತಿ ಪುರುಷನಿಗೆ ಮೂರು ತಲೆಗಳು, ಎರಡು ಮುಖಗಳು, ಐದು ಬಾಯಿ, ಮೂರು ಕಣ್ಣು, ಜೋಲಾಡುವ ಕಿವಿ ಮತ್ತು ಹುಬ್ಬುಗಳು, ಉದ್ದವಾದ ಮೂಗು, ಕೆಂಪುಹಲ್ಲು, ಎಂಟು ತೋಳು ಮತ್ತು ಎರಡು ಕಾಲು ಮತ್ತು ಕಪ್ಪುಬಣ್ಣದ ಅರ್ಧ ಗಂಡು ಅರ್ಧ ಹೆಣ್ಣಿನ ರೂಪವಿರುತ್ತದೆ ಎಂಬ ವಿಶ್ವಾಸವು ಚಾಲ್ತಿಯಲ್ಲಿದೆ. ಅದೇ ರೀತಿ ಅಂದು ಪಠಿಸುವ ದಿನ, ವಾರ, ಮಾಸ ಭವಿಷ್ಯಗಳು ಹೆಚ್ಚಿನ ಪ್ರಾಶಸ್ತ್ಯವನ್ನು ಗಳಿಸಿಕೊಂಡಿವೆ.
ಮಕರ ಸಂಕ್ರಾಂತಿಯಂದು ಕೇರಳದ ಶಬರಿಮಲೆಯಲ್ಲಿ ಕಾಣುವ ಮಕರಜ್ಯೋತಿಗೆ ಹೆಚ್ಚಿನ ಪ್ರಾಧಾನ್ಯತೆ ಇದೆ. ಅಯ್ಯಪ್ಪ ವೃತಾಧಾರಿಗಳಾದ ಜನರು ಶಬರಿಮಲೆಗೆ ತೆರಳಿ ತಮ್ಮ ಸ್ವಾಮಿಯ ಪಾದಕ್ಕೆರಗಿ ಮಕರ ಜ್ಯೋತಿಯ ದರ್ಶನವನ್ನು ಪಡೆದರೆ ಜನ್ಮ ಸಾರ್ಥಕವಾಗುವುದೆಂಬ ನಂಬಿಕೆಯಿಂದಾಗಿ ಲಕ್ಷೋಪಲಕ್ಷ ಜನರು ಈ ಜ್ಯೋತಿಯ ದರ್ಶನಕ್ಕಾಗಿ ವರ್ಷಂಪ್ರತಿ ಶಬರಿಮಲೆ ಸನ್ನಿಧಾನಕ್ಕಾಗಮಿಸುತ್ತಾರೆ. "ಮಕರ ವಿಳಕ್ಕು" ಎಂದು ಕರೆಯಲ್ಪಡುವ ಈ ಜ್ಯೋತಿಯು ಶಬರಿಮಲೆಯ ಬೆಟ್ಟದಿಂದ ಮೂರು ಬಾರಿ ಗೋಚರವಾಗುತ್ತಿದ್ದು, ಇದು ಪ್ರಸ್ತುತ ಕಾಲದಲ್ಲಿಯೂ ಆಧ್ಯಾತ್ಮಿಕತೆಯ ಕುರುಹನ್ನು ತೋರಿಸುತ್ತದೆ.
ಅಂತೂ ಒಟ್ಟಿನಲ್ಲಿ ಸೂರ್ಯನು ಮಕರ ರಾಶಿಗೆ ಪ್ರವೇಶಿಸಿ ಲೋಕದ ಕಾರಿರುಳನ್ನು ಹೋಗಲಾಡಿಸುವಂತೆ ಜನರು ಈ ಕಾಲದಲ್ಲಿ ಪುಣ್ಯ ಕಾರ್ಯಗಳಲ್ಲಿಯೂ ಆಧ್ಯಾತ್ಮಿಕ ಚಿಂತೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು ಮುಕ್ತಿ ಮಾರ್ಗದಲ್ಲಿ ಸಾಗುವಂತೆ ಈ ಆಚರಣೆಯು ಪ್ರೇರಣೆಯನ್ನು ನೀಡುತ್ತದೆ.