ಪುಟಗಳು

Makara Sankranti / Shankranti / ಮಕರ ಸಂಕ್ರಾಂತಿ

ನಮ್ಮ ಹಿಂದೂ ಸಂಪ್ರದಾಯದಲ್ಲಿ ಹಬ್ಬಗಳನ್ನು ಪಂಚಾಂಗದ ಪ್ರಕಾರ ಮಾಡುತ್ತೀವಿ. ಪಂಚಾಂಗವು ಚಂದ್ರಮಾನ ಅಥವಾ ನಿರಯನ ಅಂದರೆ ಚಂದ್ರನ ಚಲನೆಯನ್ನು ಆಧರಿಸಿ ತಿಥಿ, ನಕ್ಷತ್ರ ಎಲ್ಲ ನಿರ್ಧರಿಸುತ್ತಾರೆ. ಸಂಕ್ರಾಂತಿ ಹಬ್ಬವು ಇದಕ್ಕೆ ಹೊರತು. ಸಂಕ್ರಾತಿ ಹಬ್ಬವು ಸಾಯನ ಅಥವಾ ಸೂರ್ಯನ ಚಲನೆಯನ್ನು ಆಧರಿಸಿದೆ. ಸೂರ್ಯನು ಧನಸ್ಸು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ದಿನ ಆಚರಿಸುವ ಹಬ್ಬ ಈ ಸಂಕ್ರಾಂತಿ ಹಬ್ಬ. (ಮಕರ - ಮಕರ ರಾಶಿ, ಸಂಕ್ರಮಣ - ಒಂದು ರಾಶಿಯಿಂದ ಮತ್ತೊಂದು ರಾಶಿಗೆ ದಾಟುವ ಸಮಯ) ಆದ್ದರಿಂದ ಇದನ್ನು ಮಕರ ಸಂಕ್ರಾಂತಿ ಎಂದು ಕರೆಯುತ್ತೀವಿ. ಸೂರ್ಯನು ಉತ್ತರಾಭಿ ಮುಖವಾಗಿ ಪರಿಭ್ರಮಣೆ ಶುರು ಮಾಡುತ್ತಾನೆ.ಆದ್ದರಿಂದ ಉತ್ತರಾಯಣ ಕಾಲ ಎಂದೂ ಕರೆಯುತ್ತಾರೆ. ಹೀಗಾಗಿ ದಿನದ ಅವಧಿ ಹೆಚ್ಚಾಗಿ, ರಾತ್ರಿಯ ಅವಧಿ ಕಡಿಮೆ ಆಗುತ್ತಾ ಹೋಗುತ್ತದೆ. ಸೂರ್ಯನು ಮೇಲೇರಿ ಪ್ರಕಾಶ ಬೀರುಬಂತೆ, ನಮ್ಮ ಬಾಳಲ್ಲೂ ಕತ್ತಲೆ ಹೋಗಿ, ಹೊಸ ಬೆಳಕು ಬರುತ್ತದೆ ಎಂಬ ಸಂಕೇತವಾಗಿ ಈ ಹಬ್ಬವನ್ನುಆಚರಿಸುತ್ತಾರೆ.

ಸಂಕ್ರಾತಿ ಹಬ್ಬ ನಾಡ ಹಬ್ಬವೂ ಹೌದು. ಭಾರತ ದೇಶದೆಲ್ಲೆಡೆ ಈ ಹಬ್ಬವನ್ನು ಮಾಡುತ್ತಾರೆ. ದಕ್ಷಿಣದಲ್ಲಿ ಸಂಕ್ರಾಂತಿ, ಪೊಂಗಲ್ ಎನ್ನುತ್ತಾರೆ, ಉತ್ತರದಲ್ಲಿ ಲೋಹರಿ, ಕಿಚಿರಿ ಎಂದು ಆಚರಿಸುತ್ತಾರೆ. ಇದು ಸುಗ್ಗಿಯ ಹಬ್ಬ. ರೈತರು ತಾವು ಬೆಳೆದ ಬೆಳೆಯನ್ನು ಕೊಯ್ಲು ಮಾಡಿ ಫಸಲು ಸಂಗ್ರಹಿಸಿ ಅದಕ್ಕೆ ಪೂಜೆ ಮಾಡುತ್ತಾರೆ. ದವಸಧಾನ್ಯಗಳ ಸಮೃದ್ಧಿ ಇಂದ ನಮ್ಮ ಜೀವನವೂ ಸಮೃದ್ಧಿಯಾಯಿತು ಎಂದು ಖುಷಿಪಡುವ ಸಮಯ.


ಕನ್ನಡಿಗರೂ ಈ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸುತ್ತೀವಿ ಅಲ್ಲವೇ .
ಎಲ್ಲ ಹಬ್ಬಗಳಂತೆ ಈ ದಿನವೂ ಮನೆಯನ್ನು ಸ್ವಚ್ಛ ಮಾಡಿ ಅಲಂಕರಿಸುತ್ತೀವಿ. ಮನೆಯ ಮುಂದೆ ವಿಶೇಷ ರಂಗೋಲಿ ಬರೆಯುತ್ತಾರೆ. ಈ ಹಬ್ಬಕ್ಕೆ ಪ್ರತ್ಯೇಕವಾದ ಯಾವುದೇ ಪೂಜಾ ವಿಧಾನ / ವ್ರತ ಇಲ್ಲ. ಮಂಗಳ ಸ್ನಾನ ಮಾಡಿ ಮನೆಯ ದೇವರಿಗೆ ಪೂಜೆ ಮಾಡುತ್ತಾರೆ.ಈ ಹಬ್ಬದ ವಿಶೇಷತೆ ಎಳ್ಳು ಮತ್ತು ಸಕ್ಕರೆ ಅಚ್ಚು. ಬೆಲ್ಲ , ಕೊಬ್ಬರಿ, ಕಡಲೇಕಾಯಿ ಬೀಜ, ಹುರಿಗಡಲೆ, ಎಳ್ಳು - ಈ ಐದು ಸಾಮಗ್ರಿಗಳನ್ನು ಸರಿಯಾದ ಪ್ರಮಾಣದಲ್ಲಿ ಮಿಶ್ರ ಮಾಡಿ ತಯಾರಿಸುತ್ತಾರೆ.ಎಳ್ಳ ಸಕ್ಕರೆ ಅಚ್ಚನ್ನು ದೇವರ ಮುಂದೆ ಇಟ್ಟು ನೈವೇದ್ಯ ಮಾಡಿ ಪೂಜೆಯ ನಂತರ ಮನೆಯವರೆಲ್ಲ ತಿನ್ನುವುದು. ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡಿ ಎಂಬ ನುಡಿಯಂತೆ ಎಲ್ಲರೂ ಸಿಹಿಯಾದ, ಒಳ್ಳೆಯ ಮಾತಾಡಿ, ಒಳ್ಳೆ ವಿಷಯಗಳನ್ನು ಯೋಚಿಸಿ, ಒಳ್ಳೆ ಕಾರ್ಯಗಳನ್ನು ಮಾಡಿರಿ.

ಎಳ್ಳು, ಸಕ್ಕರೆ ಅಚ್ಚು , ಕಬ್ಬು, ಹಣ್ಣುಗಳನ್ನು ಬಂಧು - ಬಾಂಧವರಿಗೆ, ಸ್ನೇಹಿತರಿಗೆ ಹಂಚುತ್ತಾರೆ. ಮದುವೆಯ ನಂತರ ಹೆಣ್ಣು ಮಗಳು ಸುಮಂಗಲಿಯರಿಗೆ ಎಳ್ಳು ಬೀರಿ ಆಶಿರ್ವಾದ ಪಡೆಯುತ್ತಾರೆ . ಮಗು ಹುಟ್ಟಿದ ವರ್ಷ ಎಳ್ಳು ಜೊತೆಗೆ ಬೆಳ್ಳಿ ಕೃಷ್ಣ / ಬೆಳ್ಳಿ ಬಟ್ಟಲು ಬೀರುವ ಪದ್ಧತಿ ಕೆಲವು ಮನೆಗಳಲ್ಲಿವೆ. ಮನೆಯಲ್ಲಿ ಚಿಕ್ಕ ಮಕ್ಕಳಿಗೆ ಸಂಕ್ರಾಂತಿ ದಿನ ಸಂಜೆ ಆರತಿ ಮಾಡುತ್ತಾರೆ. ಊಟಕ್ಕೆ ಸಾಮಾನ್ಯವಾಗಿ ಸಿಹಿ ಮತ್ತು ಖಾರ ಪೊಂಗಲ್ /ಹುಗ್ಗಿ ಮಾಡುತ್ತಾರೆ. ಒಟ್ಟಿನಲ್ಲಿ ಸಂಕ್ರಾತಿಹಬ್ಬ ಅಂದರೆ ಸಡಗರದ ಹಬ್ಬ.

ನಮ್ಮ ಮನೆಯ ಎಳ್ಳು -ಸಕ್ಕರೆ ಅಚ್ಚು

ಪರದೇಶದಲ್ಲಿದ್ದರೆ ಎಳ್ಳು ಸಕ್ಕರೆ ಅಚ್ಚು ಮಾಡುವುದು ಒಂದು ಸಾಹಸವೇ ಸರಿ. ಬೆಂಗಳೂರಿನಲ್ಲಿ ಬಿಸಿಲಿನಲ್ಲಿ ಬೆಲ್ಲ, ಕೊಬ್ಬರಿ ಒಣಗಿಸುತ್ತಾರೆ. ನಾನೀಗಿರುವ ಊರಿನ ಹವಾಮಾನದಲ್ಲಿ ಬರಿ ಚಳಿ ಹಿಮ ತುಂಬಿಹೋಗಿದೆ. ಆದರೂ ಎಳ್ಳು ಮಾಡುವ ಆಸೆ ಇತ್ತು. ಏನು ಮಾಡುವುದು ಎಂದು ಯೋಚಿಸುವಾಗ ತಲೆಗೆ ಹೊಸ ವಿಚಾರ ಹೊಳೆಯಿತು. ಚಳಿಗೆ ಮನೆಯನ್ನು ಬೆಚ್ಚಗೆ ಇಡುವುದಕ್ಕೆ ಇರುವ room/space heater ನನ್ನ ನೆರವಿಗೆ ಬಂತು. ಈ heater ಶಾಖದಿಂದ ಕೊಬ್ಬರಿ, ಬೆಲ್ಲ ಒಣಗಿತು.ಸಕ್ಕರೆ ಅಚ್ಚುಗಳನ್ನು ಸ್ನೇಹಿತೆಯೊಬ್ಬರ ಸಲಹೆಯಂತೆ candy molds ಉಪಯೋಗಿಸಿ ಮಾಡಿದ್ದಾಯಿತು. ನನ್ನಎಳ್ಳು ಸಕ್ಕರೆ ಅಚ್ಚು ಅಂತೂ ತಯಾರಾಯಿತು:)


ಈ ಸಂಕ್ರಾಂತಿ ಹಬ್ಬವು ನಿಮ್ಮೆಲ್ಲರಿಗೂ ಸಂತಸ ಸಮ್ರುಧ್ಧಿ ತರಲಿ:)