ಪುಟಗಳು

ಮಕರ ಸಂಕ್ರಾಂತಿ

ಸಂಕ್ರಾಂತಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ಹಬ್ಬ. ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಸಂಕ್ರಾಂತಿಯನ್ನು ಧಾರ್ಮಿಕ ತತ್ವಗಳಿಂದ ಸ್ವತಂತ್ರವಾಗಿ ಆಚರಿಸಲಾಗುತ್ತದೆಯಾದರೂ ವೇದಾಂಗ ಜ್ಯೋತಿಷಶಾಸ್ತ್ರದ ತಳಹದಿ ಹೊಂದಿರುವುದರಿಂದ ಮುಖ್ಯವಾಗಿ ಹಿಂದೂ ಧರ್ಮದವರಿಂದ ಆಚರಿಸಲ್ಪಡುತ್ತದೆ. ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡುಗಳ ಮುಖ್ಯ ಹಬ್ಬಗಳಲ್ಲಿ ಸಂಕ್ರಾಂತಿಯೂ ಒಂದು.

ಜ್ಯೋತಿಷದ ತಳಹದಿ
ಸನಾತನ ಹಿಂದೂ ಧರ್ಮದ ಬುನಾದಿಯಾಗಿರುವ ವೇದಗಳ ಅಂಗಗಳೆಂದೇ ಪ್ರಸಿದ್ಧವಾಗಿರುವ ಆರು ವೇದಾಂಗಗಳಲ್ಲಿ ಒಂದಾದ ಜ್ಯೋತಿಷವನ್ನು ವೇದಗಳ ಕಣ್ಣೆಂದು ಗುರುತಿಸುತ್ತಾರೆ. ವೇದದಳ ಕಾಲದಿಂದಲೂ ಶುಭಕಾರ್ಯಗಳಿಗೆ ಮುಹೂರ್ತಾದಿ ಕಾಲವನ್ನು ನಿರ್ಣಯಿಸಿ, ಗ್ರಹಗಳ ಸ್ಥಿತಿ-ಗತಿ, ರಾಶಿ-ನಕ್ಷತ್ರ, ಗ್ರಹಣ, ಅಸ್ತೋದಯಗಳನ್ನು ನಿರ್ಣಯಿಸಿ, ಶುಭಾಶುಭ ಫಲಗಳನ್ನು ತೋರುತ್ತಾ, ಹಬ್ಬ-ಹರಿದಿನಗಳನ್ನು ಋತುಗಳಿಗನುಸಾರವಾಗಿ ಲೆಕ್ಕಾಚಾರ ಹಾಕಿ ಗುರುತಿಸುತ್ತಿದ್ದ ಶಾಸ್ತ್ರವೇ ಜ್ಯೋತಿಷ. ಈ ಶಾಸ್ತ್ರದಂತೆ, ಸೂರ್ಯನು ನಿರಯಣ ಮಕರರಾಶಿಯನ್ನು ಪ್ರವೇಶಿಸಿದಾಗ, "ಮಕರ ಸಂಕ್ರಾಂತಿ"ಯಾಗುತ್ತದೆ. ಈ ಕಾಲವು ಪ್ರತಿವರ್ಷ ಗ್ರೆಗೋರಿಯನ್ ಪಂಚಾಂಗದ ಜನವರಿ ೧೪ರ ಸುಮಾರಿಗೆ ಬೀಳುತ್ತದೆ. ಹಿಂದೆ, ಈ ಕಾಲವೇ ಉತ್ತರಾಯಣ ಅಥವಾ ಸೂರ್ಯನ ಉತ್ತರದಿಕ್ಕಿನ ಪಯಣದ ಆರಂಭವನ್ನು ಸೂಚಿಸುವ ಕಾಲವೂ ಆಗಿತ್ತಾದ್ದರಿಂದ ಭೂಮಿಯ ಉತ್ತರಾರ್ಧಗೋಳದಲ್ಲಿ ಚಳಿ-ಬೆಚ್ಚನೆಯ ವಾತಾವರಣ ಆರಂಭವಾಗಿ, ಬೆಳೆ ಕಟಾವಿನ ಕಾಲವೂ ಆಗಿತ್ತು. ಈಗ ಉತ್ತರಾಯಣ ಡಿಸೆಂಬರ್ ೨೨ಕ್ಕೇ ಆದರೂ, ಹಿಂದಿನಂತೆಯೇ ಜನವರಿ ೧೪ ರಂದು ನಡೆಯುವ ಮಕರಸಂಕ್ರಾಂತಿಯಂದೇ ಉತ್ತರಾಯಣದ ಆಚರಣೆಯೂ ನಡೆಯುತ್ತದೆ.ಮಹಾಭಾರತದ ಕತೆಯಲ್ಲಿ ಇಚ್ಚಾ ಮರಣಿಯಾದ ಬೀಷ್ಮರು ಪ್ರಾಣ ಬಿಡಲು ಉತ್ತರಾಯಣ ಪರ್ವ ಕಾಲವನ್ನು ಕಾದಿದ್ದರು ಎಂಬ ಉಲ್ಲೆಖವಿದೆ. ಸಂಪರ್ಕದ ಹೆಸರು

ಖಗೋಳ ಶಾಸ್ತ್ರದ ಪ್ರಕಾರ ಒಂದು ವಿವರಣೆ

ಸೂರ್ಯೋದಯ ಪೂರ್ವದಲ್ಲಿ ಮತ್ತು ಸೂರ್ಯಾಸ್ತಮಾನ ಪಶ್ಚಿಮದಲ್ಲಿ ಎಂದು ಹೇಳುವುದಾದರೂ, ಯಾವುದೇ ಸ್ಥಳದಲ್ಲಿ ಕರಾರುವಾಕ್ಕಾಗಿ ಪೂರ್ವದಲ್ಲೇ ಸೂರ್ಯೋದಯವಾಗುವುದು ಮತ್ತು ಪಶ್ಚಿಮದಲ್ಲೇ ಸೂರ್ಯಾಸ್ತಮಾನವಾಗುವುದು ವರ್ಷದಲ್ಲಿ ಎರಡೇ ದಿನಗಳಂದು. ಆ ದಿನಗಳನ್ನು ಈಕ್ವಿನಾಕ್ಸ್ (equinox)ಎಂದು ಕರೆಯುತ್ತಾರೆ. ಅಂದು ಹಗಲಿರುಳುಗಳು ದಿನವನ್ನು ಸಮಪಾಲಾಗಿ, ಅಂದರೆ ೧೨ಗಂಟೆಗಳಾಗಿ ಹಂಚಿಕೊಳ್ಳುತ್ತವೆ. ವರ್ಷದ ಉಳಿದ ದಿನಗಳಲ್ಲಿ ಹಗಲಿರುಳುಗಳ ಪಾಲು ಸಮವಾಗಿರುವುದಿಲ್ಲ. ಬೇಸಗೆಯಲ್ಲಿ ಹಗಲು ಹೆಚ್ಚು, ಇರುಳು ಕಮ್ಮಿ. ಚಳಿಗಾಲದಲ್ಲಿ ಹಗಲು ಕಮ್ಮಿ, ಇರುಳು ಹೆಚ್ಚು.
ಈಕ್ವಿನಾಕ್ಸ್ ದಿವಸಗಳ ಹೊರತಾಗಿ ಸೂರ್ಯನ ಉದಯ ಪೂರ್ವದ ಬಲಕ್ಕೆ (ಅಂದರೆ ಉತ್ತರಕ್ಕೆ) ಅಥವಾ ಎಡಕ್ಕೆ (ಅಂದರೆ ದಕ್ಷಿಣಕ್ಕೆ) ಆಗುತ್ತದೆ. ಚಳಿಗಾಲ (ಅಂದರೆ ಇರುಳಿನ ಪ್ರಮಾಣ)ಹೆಚ್ಚಾದಂತೆ ಸೂರ್ಯನ ಉದಯ ಹೆಚ್ಚು ದಕ್ಷಿಣ ದಿಕ್ಕಿಗೆ ಚಲಿಸುವುದು ಗೋಚರಿಸುತ್ತದೆ. ಕೊನೆಗೆ ಒಂದು ದಿನ ದಕ್ಷಿಣದ ತುತ್ತ ತುದಿಯ ಹಂತವನ್ನು ತಲುಪಿ, ಅಚಲವೆಂಬಂತೆ ಕಂಡು, ಮರುದಿನದಿಂದ ಸೂರ್ಯನ ಉದಯ ಮರಳಿ ವಿರುಧ್ಧ ದಿಕ್ಕಿನಲ್ಲಿ ಆಗುತ್ತಾ ಚಲಿಸುತ್ತದೆ. ಅಂದರೆ ಸೂರ್ಯ ಇನ್ನು ದಕ್ಷಿಣ ದಿಕ್ಕಿನತ್ತದ ತನ್ನ ಚಲನವನ್ನು ನಿಲ್ಲಿಸಿ ಉತ್ತರಕ್ಕೆ ಚಲಿಸಲು ಪ್ರಾರಂಭಿಸುತ್ತಾನೆ. ಈ ದಿನ ಉತ್ತರಾಯಣದ ದಿನ. ಇದು ಚಳಿಗಾಲ ಮುಗಿದು ಮುಂಬರುವ ಬೇಸಗೆಯ ಮುನ್ಸೂಚನೆ. winter solstice ಎಂದೂ ಕರೆಯಲ್ಪಡುತ್ತದೆ. ಸುಮಾರು ಡಿಸೆಂಬರ್ ೨೨ ಈ ದಿನ. ಈ ದಿನವನ್ನು ಮಕರ ಸಂಕ್ರಾಂತಿಯೆಂದು ಗುರುತಿಸಬೇಕಾಗಿದ್ದರೂ ಸಾಂಪ್ರದಾಯಿಕವಾಗಿ ಜನವರಿ ತಿಂಗಳ ನಡುವಿನಲ್ಲಿ ಮಕರ ಸಂಕ್ರಾಂತಿಯನ್ನು ಆಚರಿಸುತ್ತೇವೆ.

ಇಲ್ಲಿಂದ ಸೂರ್ಯೋದಯ ಇನ್ನು ಆರು ತಿಂಗಳು ಉತ್ತರದ ದಿಕ್ಕಿನಲ್ಲಿ ಚಲಿಸುತ್ತಾ ನಡುವೆ ಮತ್ತೆ ಈಕ್ವಿನಾಕ್ಸ್ ದಿನವನ್ನೂ ತಲುಪಿ, ಇನ್ನೂ ಅದೇ ದಿಕ್ಕಿನಲ್ಲಿ (ಉತ್ತರಕ್ಕೆ)ಚಲಿಸುತ್ತಾ ಹೋಗುತ್ತದೆ. ಉತ್ತರಕ್ಕೆ ಹೆಚ್ಚು ಹೋದಂತೆಲ್ಲಾ ಹಗಲಿನ ಪ್ರಮಾಣ ಹೆಚ್ಚಾಗಿ ಇರುಳು ಕಮ್ಮಿಯಾಗುತ್ತಾ ಹೋಗುತ್ತದೆ. ಸೂರ್ಯನ ತಾಪ ಹೆಚ್ಚಾಗುತ್ತಾ ಬೇಸಗೆಯನ್ನು ಅನುಭವಿಸುತ್ತೇವೆ. ಕೊನೆಗೆ ಒಂದು ದಿನ ಉತ್ತರದ ತುತ್ತ ತುದಿಯನ್ನು ತಲುಪಿ, ಅಚಲವೆಂಬಂತೆ ಕಂಡು, ಮರುದಿನದಿಂದ ಸೂರ್ಯನ ಉದಯ ಮರಳಿ ವಿರುದ್ಧ ದಿಕ್ಕಿನಲ್ಲಿ ಆಗುತ್ತಾ ಚಲಿಸುತ್ತದೆ. ಅಂದರೆ ಸೂರ್ಯ ಇನ್ನು ಉತ್ತರ ದಿಕ್ಕಿನತ್ತದ ತನ್ನ ಚಲನೆಯನ್ನು ನಿಲ್ಲಿಸಿ ದಕ್ಷಿಣಕ್ಕೆ ಚಲಿಸಲು ಪ್ರಾರಂಭಿಸುತ್ತಾನೆ. ಇದು ದಕ್ಷಿಣಾಯನದ ದಿನ. ಬೇಸಗೆ ಮುಗಿದು ಮುಂಬರುವ ಚಳಿಗಾಲದ ಮುನ್ಸೂಚನೆ. ಈ ದಿನವನ್ನು ಕರ್ಕಾಟಕ ಸಂಕ್ರಾಂತಿ ಎಂದು ಗುರುತಿಸುತ್ತಾರೆ. summer solstice ಎಂದೂ ಕರೆಯಲ್ಪಡುತ್ತದೆ. ಸುಮಾರು ಜೂನ್ ೨೧ ಈ ದಿನ.
ಇಷ್ಟೆಲ್ಲಾ ವಿವರಣೆ ಅನ್ವಯಿಸುವುದು ಭೂಮಂಡಲದ ಭೂಮಧ್ಯ ರೇಖೆಯ ಉತ್ತರಾರ್ಧಕ್ಕೆ. ಇದೇ ರೀತಿಯ ಆದರೆ ತದ್ವಿರುದ್ಧವಾದ ವಿವರಣೆ ದಕ್ಷಿಣಾರ್ಧಕ್ಕೆ ಅನ್ವಯಿಸುತ್ತದೆ.
ಹೀಗೆ ಕಾಣುವ ಸೂರ್ಯನ ಚಲನೆಗೆ ಭೂಮಿಯ ಅಕ್ಷರೇಖೆ (axis) ಸುಮಾರು 22 1/2 degree ವಾಲಿರುವುದು ಕಾರಣ.
ಯಾವುದಾದರೂ ಒಂದು ನಿಗದಿತ ಜಾಗದಲ್ಲಿ ದಿನಾಲು ನಿಂತು, ದಿನದ ಒಂದೇ ನಿಗದಿತ ಸಮಯದಲ್ಲಿ, ಆಗಸದಲ್ಲಿ ಸೂರ್ಯನ ಸ್ಥಾನವನ್ನು ಗುರುತು ಹಾಕಿಕೊಂಡು, ಈ ರೀತಿ ವರ್ಷವಿಡೀ ಮಾಡಿದರೆ, ಗುರುತು ಹಾಕಿಕೊಂಡ ಆ ಬಿಂದುಗಳೆಲ್ಲಾ ಸುಮಾರು '8'ರ ಆಕೃತಿಯಲ್ಲಿ ಕಾಣುತ್ತವೆ. ಈ ವಿನ್ಯಾಸವನ್ನು analemma ಎನ್ನುತ್ತಾರೆ. '8'ರ ಆಕೃತಿಯ ನೆತ್ತಿಯ ಬಿಂದು summer solstice ದಿನದಂದು ಆಗುತ್ತದೆ. ಆ ಆಕೃತಿಯ ಅಡಿಯ ಬಿಂದು winter solstice, ಅಂದರೆ ಮಕರ ಸಂಕ್ರಾಂತಿಯ ದಿನದಂದು ಆಗುತ್ತದೆ. ನಡುವೆ ರೇಖೆಗಳು ಪರಸ್ಪರ ಹಾದುಹೋಗುವ ಬಿಂದು equinox ದಿನಗಳು. 8 ರ ಆಕೃತಿಯ ನೆತ್ತಿಯಿಂದ ಅದರ ಅಡಿಯ ಬಿಂದುವಿನ ತನಕದ ದಿನಗಳು ವರ್ಷದ ದಕ್ಷಿಣಾಯನದ ದಿನಗಳು. ಆ ಆಕೃತಿಯ ಅಡಿಯಿಂದ ಅದರ ನೆತ್ತಿಯ ಬಿಂದುವಿನ ತನಕದ ದಿನಗಳು ಉತ್ತರಾಯಣದ ದಿನಗಳು.

 ಆಚರಣೆ

ಕರ್ನಾಟಕ

ಸಕ್ಕರೆ ಅಚ್ಛು
ಎಳ್ಳು ಬೆಲ್ಲ
ಕರ್ನಾಟಕದಲ್ಲಿ ಸಂಕ್ರಾಂತಿಗೆ ಸಂಬಂಧಪಟ್ಟ ಆಚರಣೆಗಳಲ್ಲಿ ಮುಖ್ಯವಾಗಿ ಕಂಡುಬರುವುದು "ಎಳ್ಳು". ಮನೆಯಲ್ಲಿ ಎಳ್ಳನ್ನು ತಯಾರಿಸಿ ಸುತ್ತಲಿನ ಮನೆಗಳಿಗೆ "ಎಳ್ಳು ಬೀರುವುದು" ಮತ್ತು ಸ್ನೇಹಿತರು-ಸಂಬಂಧಿಕರೊಂದಿಗೆ ಶುಭಾಶಯಗಳನ್ನು ಹಂಚಿಕೊಳ್ಳುವುದು ಸಾಮಾನ್ಯವಾಗಿ ಕಂಡುಬರುವ ಸಂಕ್ರಾಂತಿಯ ಸಂಪ್ರದಾಯಗಳು. ಎಳ್ಳಿನ ಜೊತೆಗೆ ಸಕ್ಕರೆ ಅಚ್ಚುಗಳು,ಹಣ್ಣು,ಮತ್ತು ಕಬ್ಬಿನ ತುಂಡುಗಳನ್ನು ಸಹ ಬೀರುವುದುಂಟು.ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿದ ಬೆಲ್ಲ,ಒಣ ಕೊಬ್ಬರಿ,ಹುರಿಗಡಲೆ,ಸಿಪ್ಪೆ ತೆಗೆದ ಕಡಲೇಕಾಯಿ ಬೀಜ ಹಾಗೂ ಹುರಿದ ಬಿಳಿ ಎಳ್ಳನ್ನು ಸೇರಿಸಿ "ಎಳ್ಳು" ತಯಾರಿಸಲಾಗುತ್ತದೆ.

 ತಮಿಳುನಾಡು

ತಮಿಳುನಾಡಿನಲ್ಲಿ ಈ ಹಬ್ಬವನ್ನು "ಪೊಂಗಲ್" ಎಂದು ಕರೆಯಲಾಗುತ್ತದೆ. ಇಲ್ಲಿ ಇದು ನಾಲ್ಕು ದಿನಗಳ ಹಬ್ಬ - ಈ ನಾಲ್ಕು ದಿನಗಳು ಮತ್ತು ಆ ದಿನಗಳಲ್ಲಿನ ಆಚರಣೆಗಳು ಹೀಗಿವೆ:
  • ಭೋಗಿ: ಹೊಸ ಬಟ್ಟೆಗಳು
  • ಪೊಂಗಲ್: ಸಮೃದ್ಧಿಯ ಸಂಕೇತವಾಗಿ ಹಾಲು-ಬೆಲ್ಲಗಳನ್ನು ಪಾತ್ರೆಯಲ್ಲಿ ಕುದಿಸಿ ಉಕ್ಕಿಸಲಾಗುತ್ತದೆ
  • ಮಾಟ್ಟು ಪೊಂಗಲ್: ಗೋಪೂಜೆ
    • ಕೆಲವು ಕಡೆಗಳಲ್ಲಿ "ಜಲ್ಲಿಕಟ್ಟು" ಎಂಬ ಗೂಳಿಯನ್ನು ಪಳಗಿಸುವ ಆಟ ನಡೆಯುತ್ತದೆ
  • ಕಾಣುಮ್ ಪೊಂಗಲ್

ಇತರ ಸ್ಥಳಗಳು

ಕೇರಳದ ಶಬರಿಮಲೆ
ಮಕರ ಸಂಕ್ರಾಂತಿಯಂದು ಕೇರಳದ ಶಬರಿಮಲೆಯಲ್ಲಿ ಕಾಣುವ ಮಕರಜ್ಯೋತಿಗೆ ಹೆಚ್ಚಿನ ಪ್ರಾಧಾನ್ಯತೆ ಇದೆ. ಅಯ್ಯಪ್ಪ ವೃತಾಧಾರಿಗಳಾದ ಜನರು ಶಬರಿಮಲೆಗೆ ತೆರಳಿ ತಮ್ಮ ಸ್ವಾಮಿಯ ಪಾದಕ್ಕೆರಗಿ ಮಕರ ಜ್ಯೋತಿಯ ದರ್ಶನವನ್ನು ಪಡೆದರೆ ಜನ್ಮ ಸಾರ್ಥಕವಾಗುವುದೆಂಬ ನಂಬಿಕೆಯಿಂದಾಗಿ ಲಕ್ಷೋಪಲಕ್ಷ ಜನರು ಈ ಜ್ಯೋತಿಯ ದರ್ಶನಕ್ಕಾಗಿ ವರ್ಷಂಪ್ರತಿ ಶಬರಿಮಲೆ ಸನ್ನಿಧಾನಕ್ಕಾಗಮಿಸುತ್ತಾರೆ."ಮಕರ ವಿಳಕ್ಕು"ಎಂದು ಕರೆಯಲ್ಪಡುವ ಈ ಜ್ಯೋತಿಯು ಶಬರಿಮಲೆಯ ಬೆಟ್ಟದಿಂದ ಮೂರು ಬಾರಿ ಗೋಚರವಾಗುತ್ತಿದ್ದು, ಅಂತೂ ಇದು ವೈಜ್ಞಾನಿಕವಾಗಿಸಾಬೀತಾಗಿಲ್ಲವಾದರೂ, ಪ್ರಸ್ತುತ ಕಾಲದಲ್ಲಿಯೂ ಆಧ್ಯಾತ್ಮಿಕತೆಯ ಕುರುಹನ್ನು ತೋರಿಸುತ್ತದೆ ಎನ್ನುತ್ತಾರೆ ಭಕ್ತರು.ನಮನ

ಒಟ್ಟಿನಲ್ಲಿ ಸೂರ್ಯನು ಮಕರ ರಾಶಿಗೆ ಪ್ರವೇಶಿಸಿ ಲೋಕದ ಕಾರಿರುಳನ್ನು ಹೋಗಲಾಡಿಸುವಂತೆ ಜನರು ಈ ಕಾಲದಲ್ಲಿ ಪುಣ್ಯ ಕಾರ್ಯಗಳಲ್ಲಿಯೂ ಆಧ್ಯಾತ್ಮಿಕ ಚಿಂತೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು ಮುಕ್ತಿ ಮಾರ್ಗದಲ್ಲಿ ಸಾಗುವಂತೆ ಈ ಆಚರಣೆಯು ಪ್ರೇರಣೆಯನ್ನು ನೀಡುತ್ತದೆ. 

ಮುಖ್ಯವಾಗಿ ದಕ್ಷಿಣ ಭಾರತದ ಹಬ್ಬವಾದರೂ, ಇತರ ಸ್ಥಳಗಳಲ್ಲಿ ಸಹ ಬೇರೆ ಬೇರೆ ಹೆಸರುಗಳಲ್ಲಿ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಸಂಕ್ರಾಂತಿಯ ದಿನದಂದು ಗಾಳಿಪಟಗಳನ್ನು ಹಾರಿಬಿಡುವ ಸಂಪ್ರದಾಯವುಂಟು. ಮಹಾರಾಷ್ಟ್ರದಲ್ಲಿಯೂ, ಎಳ್ಳು ಮತ್ತು ಸಕ್ಕರೆಯ ಕುಸುರಿಕಾಳನ್ನು ಬಂಧು ಮಿತ್ರರಿಗೆ ಹಂಚುವ ರೂಢಿ ಇದೆ. ಪ್ರಮುಖವಾಗಿ ಅವರು, ಎಳ್ಳಿನ ಉಂಡೆ ಗಳನ್ನು ಹಂಚುತ್ತಾರೆ. ಅದಕ್ಕೆ ಅವರು ಲಡ್ಡು ಎನ್ನುತ್ತಾರೆ. ಕರ್ನಾಟಕದ ಸಂಪ್ರದಾಯದ ತರಹ ಬಿಡಿಕಾಳುಗಳನ್ನು ಹಂಚುವ ಪದ್ಧತಿಯಿಲ್ಲ. ಹಾ. ಎಳ್ಳುಂಡೆಕೊಡುವಾಗ ತಪ್ಪದೆ, " ತಿಳ್ಗುಳ್ ಘ್ಯಾ, ಅಣಿ ಗೋಡ್ ಗೋಡ್ ಬೋಲ", ಎನ್ನುವ ಮಾತು ಹೇಳುವುದನ್ನು ಮರೆಯುವುದಿಲ್ಲ ! ಪಂಜಾಬ್ ಮತ್ತು ಹರಿಯಾಣಗಳಲ್ಲಿ ಸಂಕ್ರಾಂತಿಗೆ "ಲೋಹರಿ," ಎಂದು ಹೆಸರು.