ಪುಟಗಳು

ನಿದ್ದೆ ಕೆಟ್ಟರೆ ಸೌಂದರ್ಯ ಕೆಟ್ಟಿತು ಜೋಕೆ...!



Sleep To Look Beautiful
 
ಕಟ್ಟುನಿಟ್ಟಿನ ವ್ಯಾಯಾಮ ಮತ್ತು ಒಳ್ಳೆಯ ಆಹಾರಕ್ರಮದಿಂದ ದೇಹದ ತೂಕವನ್ನು ಸದೃಢವಾಗಿ ಇಡಬಹುದು. ಸುಂದರವಾದ ಮೈಕಟ್ಟಿನ ಜೊತೆಗೆ ಮತ್ತಷ್ಟು ಸುಂದವಾಗಿ ಕಾಣಲು ಬ್ಯೂಟಿ ಥೆರಪಿಯನ್ನು ಕೂಡ ಮಾಡಬಹುದು.

ನೀವು ಹೆಚ್ಚು ಸುಂದರಿಯಾಗಬೇಕಾದರೆ ನಿದ್ದೆ ಕೆಡಬೇಡಿ. ನಿದ್ರೆಯನ್ನು ಕಡೆಗೆಣಿಸಿದರೆ ಮಾತ್ರ ಕಣ್ಣುಗಳು ಹೊಳಪನ್ನು ಕಳೆದುಕೊಳ್ಳುತ್ತದೆ. ಇದರಿಂದ ಮುಖದ ಕಾಂತಿ ಕುಂದುವುದು. ಆದ್ದರಿಂದ ಕಣ್ಣಿಗೆ ವಿಶ್ರಾಂತಿ ಅವಶ್ಯಕ. ಸುಂದರವಾಗಿ ಕಾಣಬೇಕೆಂದರೆ ನಿದ್ರೆ ಅವಶ್ಯಕ ಏಕೆ ಎಂದು ತಿಳಿಯಲು ಮುಂದೆ ಓದಿ.

1. ವಯಸ್ಸು ಹೆಚ್ಚಾದಂತೆ ಕಾಣುವುದು: 30ರ ಹರೆಯದಲ್ಲಿಯೆ ಇನ್ನೂ 10 ವರ್ಷ ದೊಡ್ಡವರಾಗಿ ಕಾಣಲು ಯಾರೂ ಇಷ್ಟ ಪಡುವುದಿಲ್ಲ. 7 ಗಂಟೆಗಳಿಗಿಂತ ಕಡಿಮೆ ಸಮಯ ನಿದ್ರೆ ಮಾಡಿದರೆ ಮುಖ ಬಿಳುಚಿಕೊಂಡಂತೆ ಕಾಣುವುದು ಅಲ್ಲದೆ ಕಣ್ಣಿನ ಸುತ್ತ ನೆರಿಗೆ ಬಂದು ಬೇಗನೆ ವಯಸ್ಸಾದಂತೆ ಕಾಣುತ್ತದೆ.

2. ಸೌಂದರ್ಯ ಮಂಕಾಗುವುದು: ಹೊಳೆಯುವ ಕಣ್ಣುಗಳು ಸೌಂದರ್ಯಕ್ಕೊಂದು ಮೆರಗು. ಆದರೆ ಮೇಕಪ್ ನಿಂದ ಮಾತ್ರ ಕಣ್ಣುಗಳನ್ನು ಸುಂದರವಾಗಿ ಕಾಣುವಂತೆ ಮಾಡಲು ಸಾಧ್ಯವಿಲ್ಲ. ಕಣ್ಣುಗಳು ಸುಂದರವಾಗಿ ಕಾಣಲು ನೈಸರ್ಗಿಕವಾಗಿ ಹೊಳಪಿನಿಂದ ಕೂಡಿರಬೇಕು. ಆಗ ಮಾತ್ರ ಮೇಕಪ್ ಮಾಡಿದರೆ ಸುಂದರವಾಗಿ ಕಾಣಿಸಲು ಸಾಧ್ಯ. ಆದ್ದರಿಂದ ಕಣ್ಣುಗಳು ನೈಸರ್ಗಿಕ ಹೊಳಪನ್ನು ಪಡೆಯಲು ಕಣ್ಣುಗಳಿಗೆ ವಿಶ್ರಾಂತಿ ಬೇಕೆಬೇಕು.

3. ಸೊರಗಿದ ತ್ವಚೆ: ಸರಿಯಾಗಿ ನಿದ್ರೆ ಇಲ್ಲದಿದ್ದರೆ ಮುಖದ ಹೊಳಪು ಮಾಯವಾಗಿ ಸೊರಗಿದಂತೆ ಕಾಣುವುದು.

4. ತ್ವಚೆಯಲ್ಲಿ ಎಣ್ಣೆ ಅಂಶದ ಸಮತೋಲನ: ತ್ವಚೆಯಲ್ಲಿ ಎಣ್ಣೆ ಅಂಶವನ್ನು ಸಮತೋಲನದಲ್ಲಿಡಲು ನಿದ್ರೆ ಮಾಡಬೇಕು. ನಿದ್ರೆ ಮಾಡಿದಾಗ ದೇಹ ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಿರುತ್ತದೆ. ಆಗ ದೇಹದಲ್ಲಿ ನೈಸರ್ಗಿಕ ಎಣ್ಣೆ ಉತ್ಪತ್ತಿಯಾಗುವುದರಿಂದ ತ್ವಚೆಯಲ್ಲಿ ತೇವಾಂಶ ಸಮತೋಲನಲ್ಲಿಟ್ಟು ಹೊಳೆಯುವಂತೆ ಮಾಡುತ್ತದೆ.

5. ತೂಕ: ಕಡಿಮೆ ಅವಧಿ ನಿದ್ರೆ ಮಾಡಿದರೆ ದೇಹದ ತೂಕ ಹೆಚ್ಚಾಗುತ್ತದೆ. ನಿದ್ರೆ ಸಮಸ್ಯೆ ಇರುವವರಲ್ಲಿ ಒಬೆಸಿಟಿ ಅಥವಾ ಬೊಜ್ಜಿನ ಸಮಸ್ಯೆ ಕೂಡ ಕಾಣಿಸಿಕೊಳ್ಳುವುದು. ಸರಿಯಾಗಿ ನಿದ್ರೆ ಇಲ್ಲದಿದ್ದರೆ 15 ದಿನದಲ್ಲಿ 5 ಪೌಂಡ್ ತೂಕ ಹೆಚ್ಚಾಗುತ್ತದೆ.

6. ಹಾರ್ಮೋನ್ ಗಳ ಅಸಮತೋಲನ: ನಿದ್ರೆ ಸರಿಯಾಗಿ ಇಲ್ಲದಿದ್ದರೆ ಹಾರ್ಮೋನ್ ಗಳಲ್ಲಿ ಏರುಪೇರು ಉಂಟಾಗುತ್ತದೆ. ಮೊಡವೆಗಳು ಬರಲು ಈ ಹಾರ್ಮೋನ್ ಗಳ ವ್ಯತ್ಯಾಸ ಕೂಡ ಒಂದು ಕಾರಣ.

7. ತಲೆನೋವು: ನಿದ್ರೆ ಕಡಿಮೆಯಾದರೆ ತಲೆನೋವು ಬರುವುದು. ತಲೆನೋವು ಬಂದರೆ ಚಟುವಟಿಕೆಯಿಂದ ಇರಲು ಸಾಧ್ಯವಿಲ್ಲ. ಇವೆಲ್ಲವೂ ಸೌಂದರ್ಯದ ಮೇಲೆ ಅಡ್ಡ ಪರಿಣಾಮವನ್ನು ಬೀರುತ್ತದೆ.

ಸೌಂದರ್ಯ ಹೆಚ್ಚಲು ಸಮರ್ಪಕವಾಗಿ ನಿದ್ದೆ ಮಾಡಿ. ಹಾಗಂತ ಬೆಳಗ್ಗೆ ಹತ್ತು ಗಂಟೆಗೆ ಏಳಬೇಡಿ.