ಪುಟಗಳು

ಕತ್ತೆ ತರಹ ದುಡಿದರೆ ಕೆಟ್ಟು ಹೋದಿರಿ ಜೋಕೆ

Health Problem From Overworked
 
ಅವನಿಗೆ ದೊಡ್ಡ ಕಂಪನಿಯಲ್ಲಿ ಉದ್ಯೋಗ. ಕೈತುಂಬಾ ಸಂಬಳ, ತಲೆ ತುಂಬಾ ಕೆಲಸ, ಟಾರ್ಗೆಟ್ ಅದು ಇದು ಅಂತ ಪುರಸೊತ್ತು ಇಲ್ಲದ ಜೀವನ. ಮನೆಗೆ ಬಂದರೂ ಲ್ಯಾಪ್ ಟಾಪ್ ಅವನ ಪ್ರಪಂಚ. ಹೆಂಡತಿ ಜೊತೆ ಶಾಪಿಂಗ್ ಹೋಗಲು ಸಮಯವಿಲ್ಲ. ಮುದ್ದು ಮಗುವಿನ ಜೊತೆ ಆಡಲು ಸಮಯವಿಲ್ಲ.

ಕಾಲಿಗೆ ಚಕ್ರ ಕಟ್ಟಿದಂತಹ ಜೀವನದಿಂದಾಗಿ ಅವನು ಜೀವನದ ಅನೇಕ ಸಂತೋಷದ ಕ್ಷಣಗಳನ್ನು ಕಳೆದುಕೊಳ್ಳುತ್ತಿದ್ದಾನೆ ಅನಿಸುತ್ತದೆ. ಇತ್ತೀಚಿಗೆ ಅವನನ್ನು ನೋಡಿದಾಗ ತುಂಬಾ ಸೊರಗಿದಂತೆ ಕಾಣುತ್ತಿದ್ದ, ಕಾರಣ ಕೇಳಿದಾಗ ಕೆಲಸದ ಒತ್ತಡ ಅಂದ. ಯಶಸ್ವಿಗೆ ಕಠಿಣ ಪರಿಶ್ರಮ ಅಗತ್ಯ. ಹಾಗಂತ ವಿಶ್ರಾಂತಿಯಿಲ್ಲದ ಜೀವನ ದೇಹದ ಆರೋಗ್ಯವನ್ನು ಹದಗೆಡುಸುತ್ತದೆ. ಅಧಿಕ ಕೆಲಸದ ಒತ್ತಡದಿಂದ ಆರೋಗ್ಯದ ಮೇಲೆ ಹತ್ತು ಹಲವು ಕೆಟ್ಟ ಪರಿಣಾಮಗಳು ಉಂಟಾಗುತ್ತವೆ.

1. ನಿದ್ರಾ ಹೀನತೆ:
ದೇಹದ ಆರೋಗ್ಯಕ್ಕೆ 6 ಗಂಟೆ ನಿದ್ರೆ ಅವಶ್ಯಕ. ಕೆಲಸದ ಒತ್ತಡವಿದ್ದರೆ ಮಲಗಿದ್ದರೂ ನಿದ್ರೆ ಬರುವುದಿಲ್ಲ. ಅಲ್ಲದಿದ್ದರೆ ಅತಿ ಕಡಿಮೆ ನಿದ್ರೆ ಮಾಡುವುದು ಇವುಗಳಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ.

2. ಜ್ಞಾಪಕ ಶಕ್ತಿ ಕುಂದುವುದು:
ಅಧಿಕ ಒತ್ತಡದಿಂದ ಮೆದುಳಿನ ನೆನಪಿನ ಶಕ್ತಿ ಕುಂದುತ್ತದೆ. ಜ್ಞಾಪಕ ಶಕ್ತಿ ಹೆಚ್ಚಲು ನಿದ್ರೆ ಅವಶ್ಯಕ. ಇಲ್ಲದಿದ್ದರೆ ಮೆದುಳಿನ ಗ್ರಹಿಸುವ ಮತ್ತು ನೆನಪಿನ ಶಕ್ತಿ ಕುಂದುವುದು.

3. ಅಜಾಗರೂಕತೆ:
ಬೆಲೆಬಾಳುವ ವಸ್ತು ಅಥವಾ ಡಾಕ್ಯೂಮೆಂಟ್ ಮುಂತಾದವುಗಳನ್ನು ಜೋಪಾನವಾಗಿ ತೆಗೆದು ಇಡದಿರುವುದು ಕೆಲವರ ಸ್ವಾಭಾವಿಕ ಗುಣ. ಆದರೆ ವಿಶ್ರಾಂತಿಯಿಲ್ಲದೆ ದುಡಿಯುವವರಿಗೆ ವಸ್ತುಗಳನ್ನು ಎಲ್ಲಿ ಇಟ್ಟದ್ದೇವೆ ಎಂದು ತಕ್ಷಣ ನೆನಪಿಗೆ ಬರುವುದದಿಲ್ಲ. ಅಲ್ಲದೆ ಡೋರ್ ಹಾಗೆ ತೆರೆದಿಟ್ಟು ಹೋಗುವುದು, ಅತ್ಯಾವಶ್ಯಕವಾದ ಡಾಕ್ಯೂಮೆಂಟ್ ಮರೆತು ಹೋಗುವುದು ಅವೆಲ್ಲಾ ಲಕ್ಷಣಗಳು ಕಾಣಿಸಿಕೊಂಡರೆ ದೇಹದ ಆರೋಗ್ಯ ಹದಗೆಟ್ಟಿದೆ ಎಂದು ಅರ್ಥ.

4. ಅಜೀರ್ಣ:
ಅಧಿಕ ಕೆಲಸ ಒತ್ತಡದಿಂದಾಗಿ ಸರಿಯಾದ ಹೊತ್ತಿನಲ್ಲಿ ಊಟ ಮಾಡದಿರುವುದರಿಂದ ಜೀರ್ಣಕ್ರಿಯೆಯಲ್ಲಿ ತೊಂದರೆ ಉಂಟಾಗುತ್ತದೆ. ಇದರಿಂದ ಎಷ್ಟೇ ಪ್ರಿಯವಾದ ಆಹಾರ ಕೂಡ ಬೇಡ ಅನಿಸುತ್ತದೆ.

5. ಆರೋಗ್ಯಕರವಲ್ಲದ ತಿಂಡಿಗಳ ಸೇವನೆ: ಕೆಲಸ ಮಾಡುತ್ತಿರುವಾಗ ಏನಾದರೂ ತಿನ್ನಬೇಕೆಂದು ಅನಿಸುವುದು ಸಹಜ. ಆಗ ಕುರುಕಲು ತಿಂಡಿಗಳನ್ನು ಸೇವಿಸುವುದರಿಂದ ದೇಹದ ಆರೋಗ್ಯ ಮತ್ತಷ್ಟು ಹಾಳಾಗುತ್ತದೆ.

6. ಸಂಸಾರದಲ್ಲಿ ಬಿರುಕು:
ಅಧಿಕ ಒತ್ತಡದಿಂದಾಗಿ ತೀವ್ರ ದಣಿವು ಆಗುವುದರಿಂದ ದಾಂಪತ್ಯ ಜೀವನದಲ್ಲೂ ಆಸಕ್ತಿ ಕುಂದಲಾರಂಭಿಸುತ್ತದೆ. ಇದರಿಂದ ದಂಪತಿಗಳ ನಡುವೆ ಭಾಂದವ್ಯ ಕಡಿಮೆಯಾಗಲು ಕೂಡ ಒಂದು ಕಾರಣವಾಗಿದೆ.

7. ರಕ್ತದೊತ್ತಡ: ವಿಶ್ರಾಂತಿಯಿಲ್ಲದೆ ಕೆಲಸ ಮಾಡುವುದರಿಂದ ರಕ್ತದೊತ್ತಡದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ರಕ್ತದೊತ್ತಡ ಅಧಿಕವಾದಷ್ಟು ತಾಳ್ಮೆ ಕಡಿಮೆಯಾಗಿ ಸಣ್ಣ-ಪುಟ್ಟ ವಿಷಯಕ್ಕೂ ಕೋಪ ಬರುತ್ತದೆ. ಇದರಿಂದಾಗಿ ಮನ ನೆಮ್ಮದಿ ಕೂಡ ಹಾಳಾಗುತ್ತದೆ.

ಟೆನ್ಷನ್ ಮಾಡಿಕೊಂಡು ಕೆಲಸ ಮಾಡುವುದಕ್ಕಿಂತ ಸಾವಧಾನವಾಗಿ ಕೆಲಸ ಮಾಡುವುದು ಮುಖ್ಯ. ಮನಸ್ಸಿಗೂ ದೇಹಕ್ಕೂ ಆಗಾಗ ವಿಶ್ರಾಂತಿ ಕೊಡುತ್ತ ಕೆಲಸ ಮಾಡಬೇಕು. ಇದರಿಂದ ಕೆಲಸದ ದಕ್ಷತೆಯೂ ಹೆಚ್ಚುತ್ತದೆ. ಆರೋಗ್ಯವೂ ಉಳಿಯುತ್ತದೆ.