ಪುಟಗಳು

ಸೃಷ್ಟಿ ವೆಂಚರ್ಸ್ ಪುಸ್ತಕ ಪರಿಷೆ ಬಗ್ಗೆ ನಿಮಗೆ ಎಷ್ಟು ಗೊತ್ತು?

ಬೆಂಗಳೂರು, ಸೆ.16: ನಗರದ ಬಸವನಗುಡಿಯ ನೆಟ್ಟಕಲ್ಲಪ್ಪ ವೃತ್ತದಲ್ಲಿ ಅಕ್ಟೋಬರ್ 30 ರಂದು ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ 'ಪುಸ್ತಕ ಪರಿಷೆ' ನಡೆಯಲಿದೆ. ಸೃಷ್ಟಿ ವೆಂಚರ್ಸ್ ಮತ್ತು ಅನುಭವ ಶಾಲೆ ಈ ಪರಿಷೆಯನ್ನು ಆಯೋಜಿಸಿದೆ.

ಆದರೆ, ಸಂತೆಯಲ್ಲಿ ಪುಸ್ತಕಗಳ ಖರೀದಿ ಅಥವಾ ಮಾರಾಟ ಇರುವುದಿಲ್ಲ. ಬದಲಾಗಿ ಹೊಸ ಮತ್ತು ಹಳೆಯ ಎಲ್ಲ ಪ್ರಕಾರದ ಪುಸ್ತಕಗಳು ಹಸ್ತದಿಂದ ಹಸ್ತಕ್ಕೆ ಹಾಗೂ ಪುಸ್ತಕದಿಂದ ಪುಸ್ತಕಕ್ಕೆ ವಿನಿಮಯವಾಗಲಿವೆ. ಅಲ್ಲಿ ಯಾರು ಬೇಕಾದರೂ ತಮಗೆ ಇಷ್ಟವಾದ ಪುಸ್ತಕವನ್ನು ಉಚಿತವಾಗಿ ಕೊಂಡೊಯ್ಯಬಹುದು. ಅದೇ ರೀತಿ, ಇತರರ ಅನುಕೂಲಕ್ಕಾಗಿ ಪುಸ್ತಕವನ್ನು ಕೊಡಬಹುದಾಗಿದೆ ಎಂದು ಸೃಷ್ಟಿ ವೆಂಚರ್ಸ್ ಸಂಚಾಲಕ ನಾಗರಾಜ್‌ ಆರ್. ನಾವುಂದ ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಕಡಿಮೆಯಾಗುತ್ತಿರುವ ಪುಸ್ತಕ ಸಂಸ್ಕೃತಿ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರವೇಶ ಉಚಿತ. ಆದರೆ, ಒಬ್ಬರಿಗೆ ಒಂದು ಪುಸ್ತಕ ಮಾತ್ರ ನೀಡಲಾಗುವುದು ಎಂದು ನಾಗರಾಜ್‌ ತಿಳಿಸಿದರು. ನಾಗರಾಜ್‌ ನಾವುಂದ ಅವರ ಮೊಬೈಲ್ - 99450 03479 ಮತ್ತು 93434 99518.

ಇದು ಸಂಸ್ಥೆಯ ನಾಲ್ಕನೇ ಪುಸ್ತಕ ಪರಿಷೆಯಾಗಿದೆ. ಕಳೆದ ಮೂರು ಪುಸ್ತಕ ಪರಿಷೆಗಳಲ್ಲಿ ಸುಮಾರು 80 ಸಾವಿರ ಪುಸ್ತಕಗಳನ್ನು ವಿತರಿಸಿದ್ದೇವೆ. ಈ ಬಾರಿ 1 ಲಕ್ಷ ಪುಸ್ತಕಗಳನ್ನು ಓದುಗರಿಗೆ ತಲುಪಿಸುವ ಗುರಿ ಇದೆ. ಈ ನಿಟ್ಟಿನಲ್ಲಿ ಪುಸ್ತಕ ಸಂಗ್ರಹ ಕಾರ್ಯ ನಡೆದಿದ್ದು, ಈಗಾಗಲೇ ಸುಮಾರು 35 ಸಾವಿರ ವಿವಿಧ ಪ್ರಕಾರದ ಪುಸ್ತಕಗಳನ್ನು ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಓದುಗರು ಮತ್ತು ಪುಸ್ತಕಗಳ ನಡುವಿನ ಸೇತುವೆಯಾಗಿ ಪುಸ್ತಕ ಪರಿಷೆ ಕಾರ್ಯನಿರ್ವಹಿಸಲಿದೆ. ಪುಸ್ತಕಗಳ ಸಂಗ್ರಹಕ್ಕೆ ಸ್ಥಳೀಯ ಸಂಘಟನೆಗಳು, ಪುಸ್ತಕ ಪ್ರಾಧಿಕಾರ ಸೇರಿದಂತೆ ಜನರೂ ಕೈಜೋಡಿಸಿದ್ದಾರೆ ಎಂದು ಅವರು ಸ್ಮರಿಸಿದರು. ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ನಾಗಶ್ರೀ, ಪದ್ಮಶ್ರೀ, ಸತೀಶ್‌ ಉರಾಳ ಮತ್ತಿತರರು ಉಪಸ್ಥಿತರಿದ್ದರು.