ಪುಟಗಳು

ಪರಮಾತ್ಮ ಹಾಡು & ಸಾಹಿತ್ಯ ಸೂಪರ್ ಬಿಡಿ ಭಟ್ರೇ - ಬಾಲರಾಜ್ ತಂತ್ರಿ

ಯೋಗರಾಜ್ ಭಟ್ ಮತ್ತು ಪುನೀತ್ ಕಾಂಬಿನೇಶನ್ ಚಿತ್ರವೆಂದ ಮೇಲೆ ಪ್ರೇಕ್ಷಕರಿಗೆ ನಿರೀಕ್ಷೆ ಸಹಜ. ಭಟ್ರ ಚಿತ್ರವೆಂದರೆ ಹಾಡಿಗೆ ಪ್ರಾಮುಖ್ಯತೆ ಜಾಸ್ತಿ. ಈ ಆಲ್ಬಮ್‌ನಲ್ಲಿ ಹಾಡಿನ ಟ್ಯೂನ್ ಜೊತೆ ಸಾಹಿತ್ಯದ ಮೇಲೂ ಒಲವು ತೋರಿದ್ದಾರೆ ನಿರ್ದೇಶಕರು. ಪಡ್ಡೆ ಹುಡುಗರಿಗೆ ಮತ್ತು ಅಪ್ಪಟ ಸಂಗೀತ ಪ್ರಿಯರಿಗೆ ಸಮವಾಗುವಂತೆ ಆಲ್ಬಮ್‌ನಲ್ಲಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಬಹು ನಿರೀಕ್ಷಿತ ಪರಮಾತ್ಮ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ಬುಧವಾರ ( ಸೆ.14) ಬೆಂಗಳೂರಿನಲ್ಲಿ ನಡೆಯಲಿದೆ.

ಯಾವನಿಗೆ ಗೊತ್ತು... ಅವ್ಳು ಸಿಕ್ತಾಳ...( ಹಾಡಿರುವವರು: ಟಿಪ್ಪು)
ಸಾಹಿತ್ಯ: ಯೋಗರಾಜ್ ಭಟ್
ವಿಶಿಷ್ಟ ಸಾಹಿತ್ಯ ಮತ್ತು ಸಂಗೀತವಿರುವ ಹಾಡು. ಸ್ಲೋ ಬಿಟ್ ನಿಂದ ಫಾಸ್ಟ್ ಬಿಟ್‌ನಲ್ಲಿ ಸಾಗುವ ಹಾಡು, ಪಡ್ಡೆ ಹುಡುಗರಿಗಾಗಿಯೇ ಭಟ್ರು ವಿಭಿನ್ನ ರೀತಿಯಲ್ಲಿ ಸಾಹಿತ್ಯ ನೀಡಿದ್ದಾರೆ.

ಪರವಶನಾದೆನು...ಅರಿಯುವ ಮುನ್ನವೇ (ಹಾಡಿರುವವರು: ಸೋನು ನಿಗಮ್)
ಸಾಹಿತ್ಯ: ಜಯಂತ್ ಕಾಯ್ಕಿಣಿ
ಮೆಲೋಡಿಯಸ್ ಟ್ಯೂನ್. ಅಬ್ಬರದ ಸಂಗೀತ ನೀಡದೆ ಶಿಸ್ತುಬದ್ಧ ಸಂಗೀತ ನೀಡಿರುವ ಹರಿಕೃಷ್ಣ ತನ್ನ ಹಿಟ್ ಹಾಡುಗಳ ಬತ್ತಳಿಕೆಗೆ ಇನ್ನೊಂದು ಹಾಡನ್ನು ಸೇರಿಸಿಕೊಂಡಿದ್ದಾರೆ. ಹಾಡಿನ ಸಾಹಿತ್ಯದ ಬಗ್ಗೆ ಕಾಯ್ಕಿಣಿ ಸಾಹೇಬ್ರುಗೆ ನಮ್ಮ ಕಡೆಯಿಂದ ಒಂದು ಸಲಾಂ.

ಕತ್ಲಲ್ಲಿ ಕರಡಿಗೆ... ಜಾಮೂನು ತಿನಿಸೋಕೆ ಯಾವತ್ತೂ ಹೋಗಬಾರ್ದೂರಿ (ಹಾಡಿರುವವರು: ಯೋಗರಾಜ್ ಭಟ್ )
ಸಾಹಿತ್ಯ: ಯೋಗರಾಜ್ ಭಟ್
ಜಾನಪದ ಬಿಟ್‌ನಲ್ಲಿ ಸಾಗುವ ಹಾಡು. ಎರಡೆರಡು ಹುಡುಗಿಯರನ್ನು ಪ್ರೀತಿಸಿದರೆ ಜೀವನ ಎಲ್ಲಿಗೆ ಸಾಗುತ್ತದೆ ಎನ್ನುವುದನ್ನು ಭಟ್ರು ತಮ್ಮ ಎಂದಿನ ಶೈಲಿಯಲ್ಲಿ ಹೇಳಿದ್ದಾರೆ ಮತ್ತು ಹಾಡಿದ್ದಾರೆ. ಹಾಡಿನ ಟ್ಯೂನ್ ಅಷ್ಟಕಷ್ಟೇ ಆದರೂ ಸಾಹಿತ್ಯದ ಮೂಲಕ ಹಿಟ್ ಆದರೆ ಅಚ್ಚರಿ ಪಡಬೇಕಾಗಿಲ್ಲ.

ಕಾಲೇಜ್ ಗೇಟಿಗೆ..ಫೇಲ್ ಆಗಿ ಬಂದವರೋ ಚೊಂಬೆಶ್ವರ (ಹಾಡಿರುವವರು: ಹರಿಕೃಷ್ಣ)
ಸಾಹಿತ್ಯ: ಯೋಗರಾಜ್ ಭಟ್
ಮಾರ್ಕ್ ಕಾರ್ಡ್ಸ್ ನಲ್ಲಿ ಸೊನ್ನೆ ರೌಂಡ್ ಆಗಿ ಕಾಣುವುದು ಏನ್ ಮಾಡ್ಲಿ..ಏನ್ಮಾ ಮಾಡ್ಲಿ... ಚೊಂಬೆಶ್ವರ. ಪಾಸ್ ಆಗಿ ಒಂದೇಸಲ ಏನ್ ಮಾಡ್ಲಿ. ದಡ್ಡ ವಿಧ್ಯಾರ್ಥಿಯೊಬ್ಬ ತನ್ನ ಪದವಿ ಮುಗಿಸಲು ಪರೆದಾಡುವ ರೀತಿಯನ್ನು ಭಟ್ರು ಹಾಡಿನ ಮೂಲಕ ತಿಳಿಸಿದ್ದಾರೆ. ಈ ಹಾಡು ಸ್ವಲ್ಪ ದಿನದಲ್ಲೇ ಕಾಲೇಜ್ ಹುಡುಗ/ಹುಡುಗಿಯರ ಬಾಯಲ್ಲಿ ಗುನುಗುವುದರಲ್ಲಿ ಅನುಮಾನವಿಲ್ಲ.

ಹೆಸರು ಪೂರ್ತಿ, ತುಟಿಯ ಕಚ್ಚಿ ಕೊಳ್ಳಲೇ (ಹಾಡಿರುವವರು: ವಾಣಿ ಹರಿಕೃಷ್ಣ)
ಸಾಹಿತ್ಯ: ಯೋಗರಾಜ್ ಭಟ್
ಕಿವಿಗೆ ಮುದ ನೀಡುವ ಹಾಡು. ಇಂತಹ ಟ್ಯೂನ್ ಇರುವ ಹಾಡನ್ನು ಶ್ರೇಯಾ ಕಂಠಸಿರಿಯಲ್ಲಿ ಕೇಳಿರುವ ನಮಗೆ ಅವರೇ ಈ ಹಾಡನ್ನು ಹಾಡಿದ್ದರೆ ಚೆನ್ನಾಗಿರುತ್ತಿತ್ತೇನೋ ಅಂದು ಅನಿಸದೇ ಇರದು.

ತನ್ಮಯಲಾದೆನು... ತಿಳಿಯುವ ಮುನ್ನವೇ ಕಣ್ಮರೆ ಆಗಲೇ ಹೇಳು... (ಹಾಡಿರುವವರು: ಶ್ರೇಯಾ ಘೋಶಾಲ್)
ಸಾಹಿತ್ಯ: ಜಯಂತ್ ಕಾಯ್ಕಿಣಿ
ಆಲ್ಬಮ್‌ನ ಮತ್ತೊಂದು ಸೂಪರ್ ಟ್ರ್ಯಾಕ್. ಎಂದಿನಂತೆ ಶ್ರೇಯಾ ಮಸ್ತ್ ಆಗಿ ಹಾಡಿದ್ದಾರೆ. ಸದ್ಯಕ್ಕಂತೂ ಮೆಲೋಡಿಯಸ್ ಹಾಡೆಂದರೆ ಅದು ಶ್ರೇಯಾ ಹಾಡಿದರನೇ ಸೂಕ್ತ ಎನ್ನುವ ಮಟ್ಟಿಗೆ ಕನ್ನಡ ಚಿತ್ರರಂಗ ಬಂದ ಹಾಗಿದೆ. ಹಾಗೇ... ಉಚ್ಚಾರ ತಪ್ಪಿಲ್ಲದೆ ಹಾಡುವ ಶ್ರೇಯಾ ಅದನ್ನು ಉಳಿಸಿಕೊಂಡಿದ್ದಾರೆ ಕೂಡಾ.

ಲೋಕಾಯುಕ್ತಕ್ಕೆ ಪರಮಾಧಿಕಾರ ಬೇಕಾಗಿಲ್ಲ: ಪಾಟೀಲ್

ಗುಲ್ಬರ್ಗಾ, ಸೆ.14: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪರಮಾಧಿಕಾರ ಎನ್ನುವುದಕ್ಕೆ ಅರ್ಥವಿರುವುದಿಲ್ಲ. ಲೋಕಾಯುಕ್ತ ಸಂಸ್ಥೆ ಪರಮಾಧಿಕಾರ ಅಥವಾ ಸರ್ವಾಧಿಕಾರ ನೀಡುವ ಅವಶ್ಯಕತೆ ಇಲ್ಲ ಎಂದು ಲೋಕಾಯುಕ್ತ ಶಿವರಾಜ್ ಪಾಟೀಲ್ ಅವರು ಹೇಳಿದ್ದಾರೆ.

ಪರಮಾಧಿಕಾರ ನೀಡುವಂತೆ ಸರ್ಕಾರವನ್ನು ಕೇಳುವುದಿಲ್ಲ. ಆದರೆ, ಮೂರು ಮುಖ್ಯ ಅಧಿಕಾರ ನೀಡಬೇಕು. ಕರ್ನಾಟಕದ ಲೋಕಾಯುಕ್ತ ಕಾಯ್ದೆ ದೇಶದಲ್ಲೇ ಉತ್ತಮವಾದ ಕಾಯ್ದೆ ಎಂದು ಶಿವರಾಜ್ ಪಾಟೀಲ್ ಅವರು ಸಾರ್ವಜನಿಕ ಅಹವಾಲು ಸ್ವೀಕರಿಸಿದ ನಂತರ ಹೇಳಿದರು.

* ಲೋಕಾಯುಕ್ತ ದಾಳಿಗೆ ಒಳಗಾದ ಅಧಿಕಾರಿ, ನೌಕರರನ್ನು ಹುದ್ದೆಗೆ ಪುನರ್ ನೇಮಕ ಮಾಡುವಾಗ ಲೋಕಾಯುಕ್ತರ ಗಮನಕ್ಕೆ ತರಬೇಕು.
* ದಾಳಿ ನಂತರ ಅಧಿಕಾರಿಗಳು, ನೌಕರರು ಯಾರೇ ಆಗಿರಲಿ ಅವರ ವಿಚಾರಣೆಗೆ ಅನುಮತಿ ನೀಡಬೇಕು.
* ಭ್ರಷ್ಟರ ವಿರುದ್ಧ ಚಾರ್ಜ್ ಶೀಟ್ ಹಾಕಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸುವ ಅಧಿಕಾರ ಕಲ್ಪಿಸಬೇಕು.

ಈ ಮೂರು ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗುವುದು. ಬಾಕಿ ಉಳಿದಿರುವ ಪ್ರಕರಣಗಳನ್ನು ಇತ್ಯರ್ಥ್ಯಗೊಳಿಸಲು ಕ್ರಮ ಕೈಗೊಳ್ಳಲಾಗುವುದು.

ಉಪ ಲೋಕಾಯುಕ್ತರ ಅಧೀನದಲ್ಲಿ 12 ಸಾವಿರ ಪ್ರಕರಣಗಳಿವೆ. ಲೋಕಾಯುಕ್ತರ ಅಧೀನದಲ್ಲಿ 3000 ಪ್ರಕರಣಗಳು ಬಾಕಿ ಉಳಿದಿವೆ.

ಮಾಂಸಪ್ರಿಯರಷ್ಟೇ ಅಲ್ಲ, ಕುಟ್ಟಿಗಳು ಸಕತ್ ಎಂಡ್ಕುಡುಕರು

ತಿರುವನಂತಪುರ, ಸೆ.14 : ಈ ಬಾರಿಯ ಓಣಂ ಆರಂಭದಲ್ಲಿ ಒಂದು ದಿನ ಮಾಂಸ ತಿನ್ನುವುದನ್ನು ಕಷ್ಟಪಟ್ಟು ತಡೆದುಕೊಂಡರೂ ದೇಶದ ಟಾಪ್ ಮಾಂಸಪ್ರಿಯ ಜನ ಎನಿಸಿದ ಕುಟ್ಟಿಗಳು ಈಗ ಮದ್ಯ ಮಾರಾಟದಲ್ಲಿ ದಾಖಲೆ ಸೃಷ್ಟಿಸಿದ್ದಾರೆ.

ಸರ್ಕಾರಿ ಸ್ವಾಮ್ಯದ ಬಿವರೇಜಸ್ ನಿಗಮ(KSBC)ದ ಮಾಹಿತಿ ಪ್ರಕಾರ, ಉತ್ರಾಡಂ ದಿನ ತನಕದ 8 ದಿನಗಳ ಅವಧಿಯಲ್ಲಿ ರಾಜ್ಯದಲ್ಲಿ 236 ಕೋಟಿ ರೂಪಾಯಿನ ಮದ್ಯ ಮಾರಾಟವಾಗಿದೆ. ಕಳೆದ ಬಾರಿಗಿಂತ 48 ಕೋಟಿ ರೂಪಾಯಿ ಮದ್ಯ ಮಾರಾಟ ಅಧಿಕವಾಗಿದೆ.

ಉತ್ರಾಡಂ ದಿನ ಮಾತ್ರ 37 ಕೋಟಿ ರೂಪಾಯಿನ ಮದ್ಯ ಮಾರಾಟವಾಗಿದೆ. ಕಳೆದ ವರ್ಷ 30 ಕೋಟಿ ರೂಪಾಯಿನ ಮದ್ಯ ಮಾರಾಟವಾಗಿತ್ತು. ಕಳೆದ ವರ್ಷ 8 ದಿನಗಳ ಅವಧಿಯಲ್ಲಿ 199 ಕೋಟಿ ರೂಪಾಯಿನ ಮದ್ಯ ಮಾರಾಟವಾದರೆ ಈ ವರ್ಷ 236 ಕೋಟಿ ರೂಪಾಯಿನ ಮದ್ಯ ಮಾರಾಟವಾಗಿದೆ ಎಂದು ಅಂಕಿ ಅಂಶ ತಿಳಿಸುತ್ತಿದೆ.

ಕಳೆದ ವರ್ಷಕ್ಕಿಂತ 24.93 ಶೇಕಡಾ ಅತ್ಯಧಿಕವಾಗಿದೆ. ಕರುನಾಗಪಳ್ಳಿ ಮದ್ಯ ಮಾರಾಟದಲ್ಲಿ ಪ್ರಥಮ ಹಾಗೂ ಚಾಲಕ್ಕುಡಿ ಎರಡನೇ ಸ್ಥಾನದಲ್ಲಿದೆ. ಇಡುಕ್ಕಿ ಚಿನ್ನಕಲ ಕೊನೆಯ ಸ್ಥಾನದಲ್ಲಿದೆ. ಕೇರಳದಲ್ಲಿ ದಿನೇ ದಿನೇ
ಕುಡುಕರ ಸಂಖ್ಯೆ ಹೆಚ್ಚುತ್ತಿದೆ ಎಂಬುದು ಈ ಅಂಕಿ ಅಂಶ ತಿಳಿಸುತ್ತಿದೆ.

ಅಂಕಿಅಂಶದಂತೆ 2005-06ನೇ ಸಾಲಿನಲ್ಲಿ 2,635.81 ಕೋಟಿ ರೂಪಾಯಿನ ವ್ಯವಹಾರ ಬಿವರೇಜಸ್ ನಿಗಮದಲ್ಲಿ ನಡೆದಿದೆ. 2010-11ರ ಅವಧಿಯಲ್ಲಿ 5,239.32 ಕೋಟಿ ರೂಪಾಯಿನ ವಹಿವಾಟು
ನಡೆದಿದೆ. ಕಳೆದ ಐದು ವರ್ಷದ ಅವಧಿಯಲ್ಲಿ ಮದ್ಯದ ವಹಿವಾಟು ಮೂರುಪಟ್ಟು ಜಾಸ್ತಿಯಾಗಿದೆ ಎಂದು ಅಂಕಿಅಂಶ ತಿಳಿಸುತ್ತಿದೆ.

ಕುಡುಕರ ನಾಡಾಗುತ್ತಿರುವ ಕೇರಳಗೆ ಒಮ್ಮೆ ಯಾಕೆ ಭೇಟಿ ಕೊಟ್ಟು ಅಲ್ಲಿನ ಮದ್ಯಪ್ರಿಯ ಜನರ ರಹಸ್ಯ ತಿಳಿಯಬಾರದು ಎಂದು ನಮ್ಮ ಅಬಕಾರಿ ಸಚಿವ ರೇಣುಕಾಚಾರ್ಯ ಯೋಚಿಸಿದ್ದಾರೆ ಎಂಬ ಸುದ್ದಿಯಿದೆ.

ತಾಯಿಗೆ 'ಎಚ್ಚರ'ವಾದಾಗ ಮಗಳು ಗರ್ಭಿಣಿಯಾಗಿದ್ದಳು!


ಮುಂಬೈ, ಸೆ. 14 : ನೆರೆಹೊರೆಯ ಯುವಕ ಪ್ರತಿದಿನ ಕೊಡುತ್ತಿದ್ದ ದಾರೂವನ್ನು ಪ್ರತಿರಾತ್ರಿ ಸೇವಿಸಿ ಲೋಕವನ್ನೇ ಮೈಮರೆಯುತ್ತಿದ್ದ ಆ ಮಹಾತಾಯಿಗೆ ನಾಲ್ಕು ತಿಂಗಳಿಂದ ಮನೆಯಲ್ಲಿ ಏನು ನಡೆಯುತ್ತಿದೆ ಎಂಬುದೇ ತಿಳಿದಿರಲಿಲ್ಲ. ಆಕೆ 'ಎಚ್ಚರ'ವಾದಾಗ ಕಾಲ ಮಿಂಚಿ ಹೋಗಿತ್ತು. ಹದಿನಾರು ವರ್ಷದ ಮಗಳು ಗರ್ಭಿಣಿಯಾಗಿದ್ದಳು.

ಅಮಾಯಕರನ್ನು ದಾರಿತಪ್ಪಿಸಲು, ಅವಕಾಶದ ದುರ್ಲಾಭ ಪಡೆಯಲು ದುರುಳರು ಎಂತೆಂಥ ತಂತ್ರಗಳನ್ನು ಹೂಡುತ್ತಾರೆ ಎಂಬುದಕ್ಕೆ ಈ ಪ್ರಕರಣವೇ ತಾಜಾ ಉದಾಹರಣೆ. ಬೆಳೆದ ಹೆಣ್ಣುಮಗಳು ಮನೆಯಲ್ಲಿರುವಾಗ ಪಾಲಕರು ಎಚ್ಚರಿಕೆಯಿಂದಿರಬೇಕು ಎಂಬ ಪಾಠವನ್ನೂ ಈ ಪ್ರಕರಣ ಕಲಿಸಿದೆ.

ಆಗಿದ್ದಿಷ್ಟು : ಊಟ ವಿತರಿಸುವ ಕಂಪನಿಯ ಮ್ಯಾನೇಜರ್ ಆಗಿರುವ ರಾಮ್ ರಾಜೇಶ್ ವರ್ಮಾ ಎಂಬಾತ ಪಕ್ಕದ ಮನೆಯ ಹೆಂಗಸಿಗೆ ಪ್ರತಿರಾತ್ರಿ ಮದ್ಯ ತಂದುಕೊಡುತ್ತಿದ್ದ. ಆಕೆ ಅದನ್ನು ಹೀರಿ ಆನಂದಸಾಗರದಲ್ಲಿ ಮೈಮರೆಯುತ್ತಿದ್ದಂತೆ ತನ್ನ ರಾತ್ರಿ ಕಾರ್ಯಾಚರಣೆ ಆರಂಭಿಸುತ್ತಿದ್ದ.

ತಾಯಿ ನಿದ್ರಾಪರವಶಳಾಗುತ್ತಿದ್ದಂತೆ ಆಕೆಯ ಹದಿನಾರು ವರುಷದ ಹದಿಹರೆಯದ ಮಗಳ ಅತ್ಯಾಚಾರ ಮಾಡುತ್ತಿದ್ದ. ಇದು ನಾಲ್ಕು ತಿಂಗಳುಗಳ ಕಾಲ ಸಾಗಿದೆ. ಹದಿನಾರರ ಬಾಲಕಿಯನ್ನು ಬೆದರಿಸಿ ಬಾಯಿಮುಚ್ಚಿಸಿದ್ದಾನೆ. ಆಕೆ ಬಾಯಿ ಮುಚ್ಚಿದರೂ ಹೊಟ್ಟೆ ಕೇಳಬೇಕಲ್ಲ. ಮೂರು ತಿಂಗಳು ದಾಟುತ್ತಿದ್ದಂತೆ ಉಬ್ಬುತ್ತಾ ಸಾಗಿದೆ.

ತಾಯಿಗೆ ತನ್ನ ತಪ್ಪಿನ ಅರಿವಾಗಿ ಮಗಳನ್ನು ಮದುವೆಯಾಗುವಂತೆ ವರ್ಮಾನಿಗೆ ಧಮ್ಕಿ ಹಾಕಿದ್ದಾಳೆ. ಆತ ಓಕೆ ಓಕೆ ಅನ್ನುತ್ತಲೇ ದಿನಗಳನ್ನು ದೂಡಿದ್ದಾನೆ. ಒಂದು ದಿನ ಮೊಬೈಲಿಗೂ ಸಿಗದೆ ಪರಾರಿಯಾಗಿದ್ದಾನೆ. ಆತನನ್ನು ನಂಬಿ ಕೆಟ್ಟ ತಾಯಿ ನಂತರ ಪೊಲೀಸರಿಗೆ ದೂರು ನೀಡಿದ್ದಾಳೆ. ಈಗ ಆತ ಬೋರಿವ್ಲಿ ಪೊಲೀಸರ ಅತಿಥಿಯಾಗಿದ್ದಾನೆ.