ಪುಟಗಳು

ಬ್ರೇಕ್ ಫಾಸ್ಟ್ ಗೆ ಫಟಾಫಟ್ ಪಾಲಾಕ್ ರೈಸ್



Palak Rice Recipe
 
ವಿಟಮಿನ್ ಮತ್ತು ಕಬ್ಬಿಣಾಂಶ ಹೇರಳವಾಗಿರುವ ಪಾಲಾಕ್ ಸೊಪ್ಪು ಮಕ್ಕಳಿಗೆ ತುಂಬಾ ಅವಶ್ಯಕ. ಪಾಲಾಕ್ ಸೊಪ್ಪನ್ನು ಬಳಸಿ ಮಕ್ಕಳಿಗೆ ಇಷ್ಟವಾಗುವಂತೆ ಅಡುಗೆ ಮಾಡುವುದು ಹೇಗೆ ಎಂದು ಯೋಚಿಸುತ್ತಿದ್ದರೆ ಈ ಪಾಲಾಕ್ ರೈಸ್ ಮಾಡುವುದು ಹೇಗೆ ಎಂದು ತಿಳಿದುಕೊಂಡು ಟ್ರೈ ಮಾಡಿ.

ಬೇಕಾಗುವ ಪದಾರ್ಥಗಳು:
* 2 ಕಪ್ ಅನ್ನ
* 1 ಕಪ್ ತೊಳೆದು ಕತ್ತರಿಸಿದ ಪಾಲಾಕ್ ಸೊಪ್ಪು
* 1 ದೊಡ್ಡ ಈರುಳ್ಳಿ
* 3-4 ಹಸಿರು ಮೆಣಸಿನಕಾಯಿ
* 1/2 ಚಕ್ಕೆ, 3 ಕರಿಮೆಣಸು
* 1 ಚಮಚ ಸಾಸಿವೆ, 1 ಚಮಚ ಜೀರಿಗೆ, ಲವಂಗ
* 1/2 ಕಪ್ ಗೋಡಂಬಿ
* ಉಪ್ಪು, ಎಣ್ಣೆ, ಒಂದು ನಿಂಬೆಹಣ್ಣು

ಪಾಲಾಕ್ ರೈಸ್ ಮಾಡುವ ವಿಧಾನ:
1. ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಿಸಿ ಅದಕ್ಕೆ ಸಾಸಿವೆ, ಜೀರಿಗೆ, ಮೆಣಸಿನ ಕಾಯಿ, ಕತ್ತರಿಸಿದ ಈರುಳ್ಳಿ ಹಾಕಿ ಕೆಲವು ನಿಮಿಷ ಹುರಿಯಬೇಕು. ನಂತರ ಕತ್ತರಿಸಿಕೊಂಡ ಪಾಲಾಕ್ ಸೊಪ್ಪನ್ನು ಹಾಕಿ ಹುರಿಯಬೇಕು.
2. ಇದಕ್ಕೆ 1/2 ಕಪ್ ನೀರು ಹಾಕಿ ಕುದಿಯುವವರೆಗೂ ಸಣ್ಣ ಉರಿಯಲ್ಲಿಡಬೇಕು.
3. ನಂತರ ಲವಂಗ, ಚಕ್ಕೆ, ಕರಿಮೆಣಸು ಮತ್ತು ಗೋಡಂಬಿಯನ್ನು ನುಣ್ಣಗೆ ರುಬ್ಬಿಕೊಂಡು ಪ್ರತ್ಯೇಕ ಬಾಣಲೆಯಲ್ಲಿ ಎಣ್ಣೆಗೆ ಹಾಕಿ ಹುರಿಯಬೇಕು.
4. ಪಾಲಾಕ್ ಮಿಶ್ರಣದೊಂದಿಗೆ ರುಬ್ಬಿದ ಮಿಶ್ರಣವನ್ನು ಬೆರೆಸಿ ಅಗತ್ಯವಿದ್ದರೆ ಉಪ್ಪು ಬೆರೆಸಿ ಚೆನ್ನಾಗಿ ತಿರುಗಿಸಿ ತಣ್ಣಗಾಗಲು ಬಿಡಬೇಕು. (ಅನ್ನಕ್ಕೂ ಉಪ್ಪು ಹಾಕಿದ್ದರೆ ಎಚ್ಚರಿಕೆಯಿಂದ ಉಪ್ಪನ್ನು ಬೆರೆಸಿಕೊಳ್ಳಬೇಕು)
5. ಈ ಪಾಲಾಕ್ ಮಸಾಲೆಯೊಂದಿಗೆ ಅನ್ನ ಬೆರೆಸಿ ನಿಂಬೆ ರಸವನ್ನು ಇದರ ಮೇಲೆ ಹಿಂಡಿ ಚೆನ್ನಾಗಿ ಕಲೆಸಬೇಕು. ಈಗ ಟೇಸ್ಟಿ ಪಾಲಾಕ್ ರೈಸ್ ತಿನ್ನಲು ರೆಡಿಯಾಗಿರುತ್ತೆ.

ಧ್ವನಿಸುರುಳಿ ವಿಮರ್ಶೆ - ಉಪೇಂದ್ರ ಅಭಿನಯದ "ಆರಕ್ಷಕ" *ಬಾಲರಾಜ್ ತಂತ್ರಿ



Upendra starrer Aarakshaka
 
ನಿರ್ದೇಶಕ: ಪಿ ವಾಸು
ಸಂಗೀತ: ಗುರುಕಿರಣ್
ಬ್ಯಾನರ್: ಉದಯರವಿ ಫಿಲಂಸ್

ದಿವಂಗತ ಡಾ.ವಿಷ್ಣುವರ್ಧನ್ ಅಭಿನಯಿಸಿದ ಆಪ್ತರಕ್ಷಕ ಚಿತ್ರದ ನಂತರ ನಿರ್ಮಾಪಕ ಕೃಷ್ಣ ಪ್ರಜ್ವಲ್ ಮತ್ತು ನಿರ್ದೇಶಕ ಪಿ ವಾಸು ಈ ಚಿತ್ರದ ಮೂಲಕ ಒಂದಾಗಿದ್ದಾರೆ. ಆಲ್ಬಮ್ ನಲ್ಲಿ ಒಟ್ಟು ಐದು ಹಾಡುಗಳಿವೆ.


1. ಥೂ ನನ್ ಮಕ್ಳ ಗಂಡಸ್ರಾ ನೀವು..
ಸಾಹಿತ್ಯ: ಉಪೇಂದ್ರ
ಹಾಡಿರುವವರು: ಕೈಲಾಶ್ ಖೇರ್

ಥೂ ನನ್ ಮಕ್ಳ ಗಂಡಸ್ರಾ ನೀವು..ಮೀಸೆ ಇದ್ದರೆ, 70 ರಲ್ಲೂ ಎದ್ದು ಬಂದ್ರಲ್ಲೋ ಅಣ್ಣಾ ಹಜಾರೆ.. ಇದು ಹಾಡಿನ ಮೊದಲ ಸಾಲು. ಟಿಪಿಕಲ್ ಉಪೇಂದ್ರ ಸ್ಟೈಲ್ ಸಾಹಿತ್ಯ. ಫಾಸ್ಟ್ ಬೀಟ್ ನಲ್ಲಿ ಸಾಗುವ ಈ ಹಾಡಿನ ಮುಂದಿನ ಸಾಲಿನಲ್ಲಿ ಬರುವ ಸಾಹಿತ್ಯ ಹೀಗಿದೆ..ಕೋಟಿ ಕೋಟಿ ಲೂಟಿ ಮಾಡಿದಾಗ ಕೋತಿತಾರಾ ಸುಮ್ನಿದ್ರಲ್ಲೂ.. ಗುರುಕಿರಣ್ ಈ ಹಿಂದೆ ಉಪೇಂದ್ರ ಚಿತ್ರಕ್ಕೆ ನೀಡಿದ ಸಂಗೀತದ ಟ್ಯೂನ್ ಕೆಲವೊಮ್ಮೆ ಈ ಹಾಡಿನಲ್ಲಿ ಬರುತ್ತೆ, ಕೈಲಾಶ್ ಖೇರ್ ಸ್ವರ ಉಚ್ಚಾರಣೆಯ ಬಗ್ಗೆ ಆಕ್ಷೇಪಣೆ ಏನೂ ಇಲ್ಲ.

2. ರಾತ್ರಿ ಎಲ್ಲಾ ನಿದ್ದೇನೆ ಇಲ್ಲಾ..ಸಾಹಿತ್ಯ: ಹಂಸಲೇಖಾ
ಹಾಡಿರುವವರು: ಗುರುಕಿರಣ್, ಆಕಾಂಕ್ಷಾ ಬಾದಾಮಿ

ರಾತ್ರಿ ಎಲ್ಲಾ ನಿದ್ದೇನೆ ಇಲ್ಲಾ.. ಒಳಗೆಲ್ಲಾ ನಿನ್ನ ಮೈರಸ್ ಸೇರ್ಕೊಂಡು ಹಾಡ್ತು ಕೋರಸ್. ಗುರುಕಿರಣ್ ಮತ್ತು ಕಾನ್ಫಿಡೆನ್ಸ್ ಸ್ಟಾರ್ ಸಿಂಗರ್ ಪ್ರತಿಭೆ ಆಕಾಂಕ್ಷಾ ಬಾದಾಮಿ ಹಾಡಿರುವ ಈ ಹಾಡಲ್ಲಿ ಗುರುಕಿರಣ್ ಕೆಲವೊಂದು ಹೊಸ ಸಂಗೀತದ ಪರಿಕಗಳನ್ನು ಬಳಸಿಕೊಂಡಿದ್ದಾರೆ. ಸ್ಲೋ ಮತ್ತು ಫಾಸ್ಟ್ ಬೀಟ್ ನಲ್ಲಿ ಈ ಹಾಡು ಸಾಗುತ್ತೆ.

3. ಐ ಆಮ್ ಬಾರ್ಬಿ ಗರ್ಲ್ ನಾನು ..ಸಾಹಿತ್ಯ: ಕವಿರಾಜ್
ಹಾಡಿರುವವರು: ಚೈತ್ರಾ

ಐ ಆಮ್ ಬಾರ್ಬಿ ಗರ್ಲ್ ನಾನು .. ಸರಿ ಇದ್ದು.. ಕಾಲು ಎಳೆಯುವವರು. ಕಿವಿಗೆ ಕಿವಿಕೊಟ್ಟು ಕೇಳಿದರೂ ಹಾಡಿನ ಸಾಹಿತ್ಯ ಅರ್ಥವಾಗುವುದು ಸ್ವಲ್ಪ ಕಷ್ಟ. ಪಾಶ್ಚಿಮಾತ್ಯ ಶೈಲಿಯಲ್ಲಿ ಸಾಗುವ ಈ ಹಾಡು ಚೈತ್ರಾ ಕಂಠದಿಂದ ಚೆನ್ನಾಗಿ ಮೂಡಿ ಬಂದಿದೆ.

4. ಕಳ್ಳಿ ಕಳ್ಳಿ ಕನ್ನ ಹಾಕಿದೆ..ಸಾಹಿತ್ಯ: ಉಪೇಂದ್ರ
ಹಾಡಿರುವವರು: ಶ್ರೀನಿವಾಸ್, ಶ್ರುತಿ ತುಮಕೂರು

ಕಳ್ಳಿ ಕಳ್ಳಿ ಕನ್ನ ಹಾಕಿದೆ, ಕಳ್ಳ ಪೋಲೀಸ್ ಆಟ ಆಡದೆ ಒಳಗೆಬಾ ತೆರೆದಿದೆ ಹೃದಯದ.. ಆರಕ್ಷಕ ತಾನೇ ನಾನಿನಗೆ.. ಉತ್ತಮ ಸಾಹಿತ್ಯವಿರುವ ಹಾಡು. ಹಾಡು ಮೆಲೋಡಿಯಸ್ ಟ್ಯೂನ್ ನಲ್ಲಿದ್ದು ಶ್ರೀನಿವಾಸ್ ಮತ್ತು ಶ್ರುತಿಯವರ ಸ್ವರ ಉಚ್ಚಾರಣೆ ಮತ್ತು ಬದಲಾವಣೆ ಮೆಚ್ಚುವಂತದ್ದು.

5. ಕುಚ್ ಕುಚ್ಸಾಹಿತ್ಯ: ಕವಿರಾಜ್
ಹಾಡಿರುವವರು: ವಿಜಯ್ ಯೇಸುದಾಸ್, ಚಿತ್ರಾ

ಕುಚ್ ಕುಚ್ ಅಂತೂ ಎನ್ನ ಒಳಗೆ, ಉಕ್ಕಿ ಉಕ್ಕಿ ಬಂತು ಪ್ರೀತಿ ನನಗೆ. ವಿಜಯ್ ಯೇಸುದಾಸ್ ಕನ್ನಡ ಪದ ಉಚ್ಚಾರಣೆ ಸುಧಾರಿಸಿ ಕೊಳ್ಳಬೇಕು. ಮತ್ತೊಂದು ಮೆಲೋಡಿಯಸ್ ಟ್ರ್ಯಾಕ್ ನಲ್ಲಿ ಸಾಗುವ ಹಾಡು.

ಚಿತ್ರದ ಐದು ಹಾಡುಗಳಲ್ಲಿ ಮೂರು ಹಾಡುಗಳು ಚೆನ್ನಾಗಿವೆ. ಕನ್ನಡದ ಗಾಯಕ/ಗಾಯಕಿಯರಿಗೆ ಮತ್ತು ಹೊಸ ಪ್ರತಿಭೆಗಳಿಗೆ ತನ್ನ ಆಲ್ಬಮ್ ನಲ್ಲಿ ಹೆಚ್ಚು ಅವಕಾಶ ನೀಡುವ ಗುರುಕಿರಣ್ ಇತರರಿಗೆ ಮಾದರಿಯಾಗಲಿ. ನೀವು ಆಲ್ಬಮ್ ಗೆ ವ್ಯಯಿಸುವ ಹಣ ಮೊದಲ ಹಾಡಿನ ಸಾಹಿತ್ಯಕ್ಕೆ ಸರಿ ಹೋಗುತ್ತೆ, ಈ ಹಾಡು ಮೆಗಾ ಹಿಟ್ ಆಗುವುದರಲ್ಲಿ ಸಂಶಯವೇ ಇಲ್ಲ.

ಕನ್ನಡದ ಕುಲಕೋಟಿ, ಅದಕ್ಕಿಂತಲೂ ಮುಖ್ಯವಾಗಿ ರಾಜಕಾರಿಣಿಗಳು, ಸರಕಾರೀ ಅಧಿಕಾರಿಗಳು ಒಮ್ಮೆ ಮೊದಲ ಹಾಡು ಕೇಳಿ ಪುಣ್ಯಕಟ್ಕೊಳ್ಳಿ.

ಸೂಪರ್ ಚಿಲ್ಲಿ ಆಲೂ ಫ್ರೈ ಮಾಡಿ ಟೇಸ್ಟ್ ನೋಡಿ



Chilly Potatoes Fry
 
ಇನ್ನೇನು 2012ನೇ ವರ್ಷ ಕಾಲಿಡುತ್ತಿದೆ. ಹೊಸ ವರ್ಷಕ್ಕೆ ಮನೆಗೆ ಅಥಿತಿಗಳು ಬಂದಾಗ ಈ ಚಿಲ್ಲಿ ಆಲೂ ಫ್ರೈ ಮಾಡಿದರೆ ಸಖತ್ ರುಚಿಯಾಗಿರುತ್ತೆ. ಅಷ್ಟೇ ಅಲ್ಲ, ಚಳಿಗಾಲದ ಸಂಜೆಯಲ್ಲಿ ಮೆಲ್ಲನೆ ಈ ಖಾದ್ಯವನ್ನು ಸವಿಯುತ್ತಿದ್ದರೆ ಗೊತ್ತೇ ಆಗದಂತೆ ಬಾಯಲ್ಲಿ ಕರಗಿಹೋಗುತ್ತೆ. ಈ ಚಿಲ್ಲಿ ಆಲೂ ಫ್ರೈ ಮಾಡೋದು ಹೇಗೆ ಎಂದು ಇಲ್ಲಿ ತಿಳಿಯಿರಿ.

ಚಿಲ್ಲಿ ಆಲೂ ಫ್ರೈಗೆ ಬೇಕಾಗುವ ಪದಾರ್ಥ:
* 2 ಚಮಚ ಚಿಲ್ಲಿ ಸಾಸ್
* 1 1/2 ಚಮಚ ಸೋಯಾ ಸಾಸ್
* 1 1/2 ಚಮಚ ವಿನೆಗರ್
* 3 ಚಮಚ ಟೊಮೆಟೊ ಕೆಚಪ್
* ಚಿಟಿಕೆ ಅಜಿನೊಮೊಟೊ
* ರುಚಿಗೆ ತಕ್ಕಷ್ಟು ಉಪ್ಪು
* ಮೆಣಸಿನ ಪುಡಿ
* 1/2 ಕೆ.ಜಿ ಚಿಕ್ಕ ಆಲೂಗಡ್ಡೆ
* ಎಣ್ಣೆ
* 2 ಚಮಚ ಕತ್ತರಿಸಿದ ಮೆಣಸಿನಕಾಯಿ
* 2 ಚಮಚ ಬೆಳ್ಳುಳ್ಳಿ
* ಕೊತ್ತಂತರಿ
* ಕೆಂಪು ಮೆಣಸಿನಕಾಯಿ ಪುಡಿ

ಚಿಲ್ಲಿ ಆಲೂ ಫ್ರೈ ಮಾಡುವ ವಿಧಾನ:
* ಒಂದು ಬಟ್ಟಲಿನಲ್ಲಿ ಚಿಲ್ಲಿ ಸಾಸ್, ಸೋಯಾ ಸಾಸ್, ವಿನೆಗರ್, ಟೊಮೆಟೊ ಕೆಚಪ್, ಅಜಿನೊಮೊಟೊ, ಸ್ವಲ್ಪ ಉಪ್ಪು, ಮೆಣಸಿನ ಪುಡಿ, ಆಲೂಗಡ್ಡೆಯನ್ನು ಬಟ್ಟಲಿನಲ್ಲಿ ಸೇರಿಸಿ ಮುಚ್ಚಿ 20 ನಿಮಿಷ ಫ್ರಿಡ್ಜ್ ನಲ್ಲಿಡಬೇಕು.

* ತಳ ಗಟ್ಟಿಯಿರುವ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಕಾಯಿಸಿ ಅದರಲ್ಲಿ ಮೆಣಸಿನಕಾಯಿ, ಬೆಳ್ಳುಳ್ಳಿ, ಕೊತ್ತಂಬರಿ, ಉಪ್ಪು, ಕೆಂಪುಮೆಣಸಿನ ಪುಡಿ ಮತ್ತು ಫ್ರಿಡ್ಜ ನಲ್ಲಿಟ್ಟ ಮಿಶ್ರಣವನ್ನು ಬೆರೆಸಿ ಚೆನ್ನಾಗಿ ತಿರುಗಿಸಿ ಬೇಯುವವರೆಗೂ ಕಾಯಬೇಕು.

ಈಗ ಚಿಲ್ಲಿ ಆಲೂಗಡ್ಡೆ ಫ್ರೈ ತಿನ್ನಲು ಸಿದ್ಧವಾಗಿರುತ್ತೆ.

ಇದು ಗಾಂಧಿನಗರ ಬೆಚ್ಚಿ ಬೀಳಿಸುವ ಬ್ರೇಕಿಂಗ್ ನ್ಯೂಸ್


Shivanna, Appu & Upendra
 
ಗಾಂಧಿನಗರ ಬೆಚ್ಚಿಬೀಳಿಸುವ ಬ್ರೇಕಿಂಗ್ ನ್ಯೂಸೊಂದು ಹೊರಬಿದ್ದಿದೆ. ಇದು ಗಾಳಿ ಸುದ್ದಿಯಲ್ಲ, ಅಧಿಕೃತವಾಗಿ ಪ್ರಕಟವಾಗಬೇಕಷ್ಟೇ. ಶಿವರಾಜ್ ಕುಮಾರ್ ಚಿತ್ರವೊಂದನ್ನು ಉಪೇಂದ್ರ ನಿರ್ದೇಶಿಸುತ್ತಾರೆ ಎನ್ನುವ ಸುದ್ದಿ ಕಳೆದ ವರ್ಷ ಹರಡಿತ್ತು. ಶಿವರಾಜ್ ಕುಮಾರ್, ಪುನೀತ್ ರಾಜಕುಮಾರ್ ಒಂದೇ ಚಿತ್ರದಲ್ಲಿ ಈಗ ನಟಿಸಲಿದ್ದಾರೆ. ಚಿತ್ರವನ್ನು ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಲಿದ್ದಾರೆ.

2010 ರಲ್ಲಿ ಸಿಂಬಲ್ ಚಿಹ್ನೆಯ ಮೂಲಕ ಸೂಪರ್ ಆಗಿ ಗಿರಿಗಿಟ್ಲೆ ಆಡಿಸಿದ್ದ ಉಪೇಂದ್ರ ತನ್ನಲ್ಲಿರುವ ನಿರ್ದೇಶನದ ಜಾಣ್ಮೆಯನ್ನು ಮತ್ತೊಮ್ಮೆ ಒರೆಗೆ ಹಚ್ಚಲಿದ್ದಾರೆ. ಚಿತ್ರವನ್ನು ರಾಕಲೈನ್ ವೆಂಕಟೇಶ್ ನಿರ್ಮಿಸಲಿದ್ದಾರೆ. ಉಳಿದ ತಂತ್ರಜ್ಞಾನ, ತಾರಾಗಣ ಇನ್ನೂ ಅಂತಿಮವಾಗಿಲ್ಲ.

ಉಪೇಂದ್ರ ಅಭಿನಯದ ಆರಕ್ಷಕ ಚಿತ್ರ ಈ ತಿಂಗಳು ತೆರೆಗೆ ಬರಲಿದೆ. ಗಾಡ್ ಫಾದರ್ ಚಿತ್ರ ಚಿತ್ರೀಕರಣದ ಹಂತದಲ್ಲಿದ್ದು, ಕಲ್ಪನಾ ಚಿತ್ರಕ್ಕೆ ಇದೇ ತಿಂಗಳು ಸಂಕ್ರಾಂತಿಯಂದು ಮಹೂರ್ತ ಫಿಕ್ಸ್ ಆಗಿದೆ. 3ಡಿ ಚಿತ್ರ ಕಠಾರಿ ವೀರ ಸುರಸುಂದರಾಂಗಿ ಇದ್ದಿಷ್ಟು ಸದ್ಯ ಉಪೇಂದ್ರ ಬಳಿ ಇರುವ ಪ್ರಾಜೆಕ್ಟ್ ಗಳು.

2010ರಲ್ಲಿ ಅವರು ನಿರ್ದೇಶಿಸಿ, ನಾಯಕನಾಗಿ ನಟಿಸಿದ್ದ ಸೂಪರ್ ಚಿತ್ರ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಭರ್ಜರಿ ಹಿಟ್ ಆಗಿತ್ತು. ಆ ಚಿತ್ರಕ್ಕೆ ಕೂಡಾ ರಾಕಲೈನ್ ವೆಂಕಟೇಶ್ ಅವರೇ ನಿರ್ಮಾಪಕರಾಗಿದ್ದರು. ಈಗ ಇನ್ನೊಂದು ಮೆಗಾ ಬಜೆಟ್ ಚಿತ್ರಕ್ಕೆ ಅವರು ಕೈಹಾಕಿದ್ದಾರೆ. ಬಾಕ್ಸ್ ಆಫೀಸ್ ಕಿಂಗ್ ಪುನೀತ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಒಟ್ಟಾಗಿ ನಟಿಸುವುದು ಒಂದು ಕಡೆಯಾದರೆ ಆ ಚಿತ್ರಕ್ಕೆ ಉಪೇಂದ್ರ ನಿರ್ದೇಶನ ಮಾಡುವುದು ಪ್ರೇಕ್ಷಕರ ಪಾಲಿಗೆ ಹಬ್ಬವೋ ಹಬ್ಬ.