ಪುಟಗಳು

ಧ್ವನಿಸುರುಳಿ ವಿಮರ್ಶೆ - ಉಪೇಂದ್ರ ಅಭಿನಯದ "ಆರಕ್ಷಕ" *ಬಾಲರಾಜ್ ತಂತ್ರಿ



Upendra starrer Aarakshaka
 
ನಿರ್ದೇಶಕ: ಪಿ ವಾಸು
ಸಂಗೀತ: ಗುರುಕಿರಣ್
ಬ್ಯಾನರ್: ಉದಯರವಿ ಫಿಲಂಸ್

ದಿವಂಗತ ಡಾ.ವಿಷ್ಣುವರ್ಧನ್ ಅಭಿನಯಿಸಿದ ಆಪ್ತರಕ್ಷಕ ಚಿತ್ರದ ನಂತರ ನಿರ್ಮಾಪಕ ಕೃಷ್ಣ ಪ್ರಜ್ವಲ್ ಮತ್ತು ನಿರ್ದೇಶಕ ಪಿ ವಾಸು ಈ ಚಿತ್ರದ ಮೂಲಕ ಒಂದಾಗಿದ್ದಾರೆ. ಆಲ್ಬಮ್ ನಲ್ಲಿ ಒಟ್ಟು ಐದು ಹಾಡುಗಳಿವೆ.


1. ಥೂ ನನ್ ಮಕ್ಳ ಗಂಡಸ್ರಾ ನೀವು..
ಸಾಹಿತ್ಯ: ಉಪೇಂದ್ರ
ಹಾಡಿರುವವರು: ಕೈಲಾಶ್ ಖೇರ್

ಥೂ ನನ್ ಮಕ್ಳ ಗಂಡಸ್ರಾ ನೀವು..ಮೀಸೆ ಇದ್ದರೆ, 70 ರಲ್ಲೂ ಎದ್ದು ಬಂದ್ರಲ್ಲೋ ಅಣ್ಣಾ ಹಜಾರೆ.. ಇದು ಹಾಡಿನ ಮೊದಲ ಸಾಲು. ಟಿಪಿಕಲ್ ಉಪೇಂದ್ರ ಸ್ಟೈಲ್ ಸಾಹಿತ್ಯ. ಫಾಸ್ಟ್ ಬೀಟ್ ನಲ್ಲಿ ಸಾಗುವ ಈ ಹಾಡಿನ ಮುಂದಿನ ಸಾಲಿನಲ್ಲಿ ಬರುವ ಸಾಹಿತ್ಯ ಹೀಗಿದೆ..ಕೋಟಿ ಕೋಟಿ ಲೂಟಿ ಮಾಡಿದಾಗ ಕೋತಿತಾರಾ ಸುಮ್ನಿದ್ರಲ್ಲೂ.. ಗುರುಕಿರಣ್ ಈ ಹಿಂದೆ ಉಪೇಂದ್ರ ಚಿತ್ರಕ್ಕೆ ನೀಡಿದ ಸಂಗೀತದ ಟ್ಯೂನ್ ಕೆಲವೊಮ್ಮೆ ಈ ಹಾಡಿನಲ್ಲಿ ಬರುತ್ತೆ, ಕೈಲಾಶ್ ಖೇರ್ ಸ್ವರ ಉಚ್ಚಾರಣೆಯ ಬಗ್ಗೆ ಆಕ್ಷೇಪಣೆ ಏನೂ ಇಲ್ಲ.

2. ರಾತ್ರಿ ಎಲ್ಲಾ ನಿದ್ದೇನೆ ಇಲ್ಲಾ..ಸಾಹಿತ್ಯ: ಹಂಸಲೇಖಾ
ಹಾಡಿರುವವರು: ಗುರುಕಿರಣ್, ಆಕಾಂಕ್ಷಾ ಬಾದಾಮಿ

ರಾತ್ರಿ ಎಲ್ಲಾ ನಿದ್ದೇನೆ ಇಲ್ಲಾ.. ಒಳಗೆಲ್ಲಾ ನಿನ್ನ ಮೈರಸ್ ಸೇರ್ಕೊಂಡು ಹಾಡ್ತು ಕೋರಸ್. ಗುರುಕಿರಣ್ ಮತ್ತು ಕಾನ್ಫಿಡೆನ್ಸ್ ಸ್ಟಾರ್ ಸಿಂಗರ್ ಪ್ರತಿಭೆ ಆಕಾಂಕ್ಷಾ ಬಾದಾಮಿ ಹಾಡಿರುವ ಈ ಹಾಡಲ್ಲಿ ಗುರುಕಿರಣ್ ಕೆಲವೊಂದು ಹೊಸ ಸಂಗೀತದ ಪರಿಕಗಳನ್ನು ಬಳಸಿಕೊಂಡಿದ್ದಾರೆ. ಸ್ಲೋ ಮತ್ತು ಫಾಸ್ಟ್ ಬೀಟ್ ನಲ್ಲಿ ಈ ಹಾಡು ಸಾಗುತ್ತೆ.

3. ಐ ಆಮ್ ಬಾರ್ಬಿ ಗರ್ಲ್ ನಾನು ..ಸಾಹಿತ್ಯ: ಕವಿರಾಜ್
ಹಾಡಿರುವವರು: ಚೈತ್ರಾ

ಐ ಆಮ್ ಬಾರ್ಬಿ ಗರ್ಲ್ ನಾನು .. ಸರಿ ಇದ್ದು.. ಕಾಲು ಎಳೆಯುವವರು. ಕಿವಿಗೆ ಕಿವಿಕೊಟ್ಟು ಕೇಳಿದರೂ ಹಾಡಿನ ಸಾಹಿತ್ಯ ಅರ್ಥವಾಗುವುದು ಸ್ವಲ್ಪ ಕಷ್ಟ. ಪಾಶ್ಚಿಮಾತ್ಯ ಶೈಲಿಯಲ್ಲಿ ಸಾಗುವ ಈ ಹಾಡು ಚೈತ್ರಾ ಕಂಠದಿಂದ ಚೆನ್ನಾಗಿ ಮೂಡಿ ಬಂದಿದೆ.

4. ಕಳ್ಳಿ ಕಳ್ಳಿ ಕನ್ನ ಹಾಕಿದೆ..ಸಾಹಿತ್ಯ: ಉಪೇಂದ್ರ
ಹಾಡಿರುವವರು: ಶ್ರೀನಿವಾಸ್, ಶ್ರುತಿ ತುಮಕೂರು

ಕಳ್ಳಿ ಕಳ್ಳಿ ಕನ್ನ ಹಾಕಿದೆ, ಕಳ್ಳ ಪೋಲೀಸ್ ಆಟ ಆಡದೆ ಒಳಗೆಬಾ ತೆರೆದಿದೆ ಹೃದಯದ.. ಆರಕ್ಷಕ ತಾನೇ ನಾನಿನಗೆ.. ಉತ್ತಮ ಸಾಹಿತ್ಯವಿರುವ ಹಾಡು. ಹಾಡು ಮೆಲೋಡಿಯಸ್ ಟ್ಯೂನ್ ನಲ್ಲಿದ್ದು ಶ್ರೀನಿವಾಸ್ ಮತ್ತು ಶ್ರುತಿಯವರ ಸ್ವರ ಉಚ್ಚಾರಣೆ ಮತ್ತು ಬದಲಾವಣೆ ಮೆಚ್ಚುವಂತದ್ದು.

5. ಕುಚ್ ಕುಚ್ಸಾಹಿತ್ಯ: ಕವಿರಾಜ್
ಹಾಡಿರುವವರು: ವಿಜಯ್ ಯೇಸುದಾಸ್, ಚಿತ್ರಾ

ಕುಚ್ ಕುಚ್ ಅಂತೂ ಎನ್ನ ಒಳಗೆ, ಉಕ್ಕಿ ಉಕ್ಕಿ ಬಂತು ಪ್ರೀತಿ ನನಗೆ. ವಿಜಯ್ ಯೇಸುದಾಸ್ ಕನ್ನಡ ಪದ ಉಚ್ಚಾರಣೆ ಸುಧಾರಿಸಿ ಕೊಳ್ಳಬೇಕು. ಮತ್ತೊಂದು ಮೆಲೋಡಿಯಸ್ ಟ್ರ್ಯಾಕ್ ನಲ್ಲಿ ಸಾಗುವ ಹಾಡು.

ಚಿತ್ರದ ಐದು ಹಾಡುಗಳಲ್ಲಿ ಮೂರು ಹಾಡುಗಳು ಚೆನ್ನಾಗಿವೆ. ಕನ್ನಡದ ಗಾಯಕ/ಗಾಯಕಿಯರಿಗೆ ಮತ್ತು ಹೊಸ ಪ್ರತಿಭೆಗಳಿಗೆ ತನ್ನ ಆಲ್ಬಮ್ ನಲ್ಲಿ ಹೆಚ್ಚು ಅವಕಾಶ ನೀಡುವ ಗುರುಕಿರಣ್ ಇತರರಿಗೆ ಮಾದರಿಯಾಗಲಿ. ನೀವು ಆಲ್ಬಮ್ ಗೆ ವ್ಯಯಿಸುವ ಹಣ ಮೊದಲ ಹಾಡಿನ ಸಾಹಿತ್ಯಕ್ಕೆ ಸರಿ ಹೋಗುತ್ತೆ, ಈ ಹಾಡು ಮೆಗಾ ಹಿಟ್ ಆಗುವುದರಲ್ಲಿ ಸಂಶಯವೇ ಇಲ್ಲ.

ಕನ್ನಡದ ಕುಲಕೋಟಿ, ಅದಕ್ಕಿಂತಲೂ ಮುಖ್ಯವಾಗಿ ರಾಜಕಾರಿಣಿಗಳು, ಸರಕಾರೀ ಅಧಿಕಾರಿಗಳು ಒಮ್ಮೆ ಮೊದಲ ಹಾಡು ಕೇಳಿ ಪುಣ್ಯಕಟ್ಕೊಳ್ಳಿ.