ಪುಟಗಳು

Tsunami Hits Japan! Live Footage!! 3-11-2011 ~ 2 05EST.flv

Strong Quake Japan 8.9 11-03-2011 Tsunami

Japan EarthQuake : Miyagi 8.9 Magnitude 11/03/2011 - Raw Footage

EARTHQUAKE JAPAN 11 03 2011 n3

Powerful quake hits Japan

ಅಂದಿನ ವಿಶ್ವ ಕನ್ನಡ ಸಮ್ಮೇಳನ (ಅಪರೂಪದ ಚಿತ್ರ)

ಹೆಡ್ ಲೈನ್

ಸಮ್ಮೇಳನದಿ ಚೆನ್ನಮ್ಮ ಬ್ರಿಟಿಷರಿಗೆ ಬರೆದ ಪತ್ರ ಕಾಣಿರಿ

Karnataka Gazetter copy
ಬೆಳಗಾವಿ , ಮಾ.10: ವಿಶ್ವ ಕನ್ನಡ ಸಮ್ಮೇಳನದಲ್ಲಿ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ಏರ್ಪಡಿಸಿರುವ ಐತಿಹಾಸಿಕ ಮಹತ್ವವುಳ್ಳ ದಾಖಲೆಪತ್ರ ವಸ್ತು ಪ್ರದರ್ಶನಕ್ಕೆ ಭಾರಿ ಜನಮನ್ನಣೆ ಸಿಗುತ್ತಿದೆ. ಕಿತ್ತೂರು ರಾಣಿ ಚೆನ್ನಮ್ಮ, ಬ್ರಿಟಿಷ್ ಅಧಿಕಾರಿಗಳು, ಮಹಾತ್ಮ ಗಾಂಧಿ, ಸರ್ ಎಂ ವಿಶ್ವೇಶ್ವರಯ್ಯ ಮುಂತಾದವರು ನಡೆಸಿದ ಪತ್ರಗಳು ಬಳಸಿದ ದಾಖಲೆಗಳ ಅಪೂರ್ವ ಸಂಗ್ರಹವನ್ನು ಒಮ್ಮೆಗೆ ನೋಡುವ ಅವಕಾಶ ಸಾರ್ವಜನಿಕರಿಗೆ ಸಿಕ್ಕಿದೆ.

1973 ರಲ್ಲಿ ಆಸ್ಥಿತ್ವಕ್ಕೆ ಬಂದ ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯು ಐತಿಹಾಸಿಕ ಮಹತ್ವವುಳ್ಳ ದಾಖಲೆಗಳ ಹಾಗೂ ಖಾಸಗಿ ದಾಖಲೆಗಳು ರಾಷ್ಟ್ರದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಗಳ ಪೂರ್ವಾಪರಗಳನ್ನು ಪ್ರತಿಬಿಂಬಿಸುವ ಮಾಹಿತಿಗಳ ಮೂಲಾಧಾರಗಳನ್ನು ಸಂರಕ್ಷಿಸಿ, ಪ್ರದರ್ಶಿಸುತ್ತಿದೆ. ಇವು ಅಧಿಕೃತವಾದ ದಾಖಲೆಗಳ ಸಂಗ್ರಹಗಾರವಾಗಿ, ಪೂರ್ಣ ಪ್ರಮಾಣದಲ್ಲಿ ನಿರ್ದೇಶನಗಳನ್ನೊಳಗೊಂಡಿದೆ.

ಅಮೂಲ್ಯ ದಾಖಲೆಗಳು :ಬ್ರಿಟೀಷರ ಆಡಳಿತ ಕಾಲದಲ್ಲಿ, ಇಂದಿನ ಬೆಳಗಾವಿಜಿಲ್ಲೆಯು ಬಾಂಬೆ ಸಂಸ್ಥಾನಕ್ಕೆ ಸೇರಿತ್ತು. ಬೆಳಗಾವಿ ಭೂಪಟ 1884, ಕನ್ನಡ ಮೊದಲನೆಯ ಪುಸ್ತಕ - 1915, "ಕರ್ನಾಟಕ ಗ್ರಾಮರ್" ಕನ್ನಡ ಲಿಪಿಯ ಪ್ರಥಮ ಮುದ್ರಣ ಫೋಟೊ ಪ್ರತಿಗಳು (1817) ಬ್ರಿಟೀಷರ ವಿರುದ್ಧ ಹೋರಾಡಿದ ವೀರ ರಾಣಿ ಚೆನ್ನಮ್ಮನಿಗೆ ಸಂಬಂಧಿಸಿದ ಕಾಗದ ಪತ್ರಗಳು, ಬ್ರಿಟೀಷ್ ಆಡಳಿತ ಕಾಲದ ದಾಖಲೆಗಳು, ಮಹಾತ್ಮ ಗಾಂಧಿ, ಸರ್. ಎಂ. ವಿಶ್ವೇಶ್ವರಯ್ಯ, ಮಿಂಟೋ, ಮಿರ್ಜಾ ಇಸ್ಮಾಯಿಲ್, ಪುಟ್ಟಣ್ಣ ಚೆಟ್ಟಿ, ಬೆಳಗಾಂ ಗೆಜೆಟಿಯರ್‌ನಿಂದ ಆಯ್ದ ಭಾಗಗಳು, ಬ್ರಿಟೀಷರ ಕಾಲದಲ್ಲಿ ಕನ್ನಡದ ಬಳಕೆ ಕುರಿತಾದ ದಾಖಲೆಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಛಾಯಾಚಿತ್ರಗಳು, ಮುಂತಾದವುಗಳನ್ನು ಒಳಗೊಂಡಿದೆ.

ಬೆಂಗಳೂರಿನ ವಿಧಾನಸೌಧದ ಕೊಠಡಿ ಸಂ ಬಿ-1ರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪತ್ರಾಗಾರ ಇಲಾಖೆಯ ಈ ಸಂಗ್ರಹ ವಿದ್ವಾಂಸರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಆಕರಗಳಾಗಿ ಹಾಗೂ ಸಂಶೋಧನೆಗಳಿಗಾಗಿ ಉಪಯೋಗವಾಗುವಂತೆ ಸರ್ಕಾರದ ಪರವಾಗಿ ನಿರ್ವಹಣೆ ಮತ್ತು ಸಂರಕ್ಷಣೆ ಮಾಡಿಕೊಂಡು ಬರಲಾಗಿದೆ. ವಿಶ್ವ ಕನ್ನಡ ಸಮ್ಮೇಳನಕ್ಕೆ ಹೋದವರೆ ಈ ಅಮೂಲ್ಯ ದಾಖಲೆಗಳ ಸಂಗ್ರಹವನ್ನು ನೋಡಲು ಮರೆಯಬೇಡಿ

ಸರ್ಕಾರದ ಕನ್ನಡ ಸ್ವರಕ್ಕೆ ಎಂಇಎಸ್ ಅಪಸ್ವರ

ಬೆಳಗಾವಿ, ಮಾ.10: ಕುಂದಾ ನಗರಿಯಲ್ಲಿ ಮಾ. 11 ರಂದು ಸಂಜೆ 5 ಗಂಟೆಗೆ ಜಿಲ್ಲಾ ಕ್ರೀಡಾಂಗಣದ ರಾಣಿ ಚೆನ್ನಮ್ಮ ವೇದಿಕೆಯಲ್ಲಿ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರು ವಿಶ್ವ ಕನ್ನಡ ಸಮ್ಮೇಳನ 2011 ಉದ್ಘಾಟಿಸಲಿದ್ದಾರೆ. 48 ಪುಟಗಳ ವಿಸ್ತೃತವಾದ ಆಮಂತ್ರಣ ಪತ್ರಿಕೆ ಹೇಳುವಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಅಂದು ಅಧ್ಯಕ್ಷತೆ ವಹಿಸಲಿದ್ದಾರೆ. ಇದಕ್ಕೂ ಮುನ್ನ ಬೆಳಗ್ಗೆ 10 ಗಂಟೆಗೆ ಮೆರವಣಿಗೆ, ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಕಾರ್ಯಕ್ರಮಗಳಿವೆ. ಆದರೆ, ಇದೆಲ್ಲವೂ ಒಂದು ಪಕ್ಷದ ಸಮಾವೇಶವಾಗಿ ಹೊರ ಹೊಮ್ಮುತ್ತಿದೆ ಮರಾಠಿ ನಾಯಕರಿಗೆ ಬೆಲೆ ನೀಡುತ್ತಿಲ್ಲ ಎಂದು ಮಾಜಿ ಮೇಯರ್ ವಿಜಯ ಮೋರೆ ಬೇಸರ ವ್ಯಕ್ತಪಡಿಸಿದ್ದಾರೆ.

ನಾವೇನೂ ಸಮ್ಮೇಳನವನ್ನು ವಿರೋಧಿಸುತ್ತಿಲ್ಲ, ಕಪ್ಪು ಬಾವುಟ ಹಿಡಿದು ಧರಣಿ ಕೂರುವುದಿಲ್ಲ. ಆದರೆ, ಒಂದು ಪಕ್ಷದ ಸಮಾವೇಶದಂತೆ ತೋರುತ್ತಿರುವ ವಿಶ್ವ ಕನ್ನಡ ಸಮ್ಮೇಳನದಿಂದ ಬೆಳಗಾವಿ ಅಭಿವೃದ್ಧಿಗೆ ಒಂದಿಷ್ಟೂ ಲಾಭವಾಗುವುದಿಲ್ಲ. ಬೆಳಗಾವಿಯಲ್ಲಿರುವ ಮರಾಠಿ, ಉರ್ದು, ಗುಜರಾಥಿ ಭಾಷಾ ಬಾಂಧವರನ್ನು ಸರ್ಕಾರ ಕಡೆಗಣಿಸಿದೆ. ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸಲು ನಮ್ಮ ಹೋರಾಟ ಮುಂದುವರೆಯಲಿದೆ. ನಾಳೆ ಎಂಇಎಸ್ ಮುಖಂಡರೆಲ್ಲ ಕೊಲ್ಹಾಪುರರಲ್ಲಿ ಸಭೆ ಸೇರಿ ಚರ್ಚಿಸಲಿದ್ದೇವೆ ಎಂದು ವಿಜಯ್ ಮೋರೆ ಹೇಳಿದರು.

ಈ ನಡುವೆ ಮೂರು ದಿನಗಳ ಕನ್ನಡಿಗರ ಹಬ್ಬ ಸಾಂಗವಾಗಿ ನಡೆಯಲಿದೆ. ಸಂಸದ ಸುರೇಶ್ ಅಂಗಡಿ ಹಾಗೂ ತಮ್ಮ ನಡುವೆ ನಡೆದ ವಾಗ್ವಾದಗಳು ಸಹಜ ಸಂಘರ್ಷ, ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಲು ಎಲ್ಲರೂ ಶ್ರಮದಾನ ಮಾಡುತ್ತಿದ್ದಾರೆ ಎಂದು ಸಚಿವ ಉಮೇಶ್ ಕತ್ತಿ ಹೇಳಿದರು. ಈ ಮಧ್ಯೆ ಆಹ್ವಾನ ಪತ್ರಿಕೆ ಅಧ್ವಾನದಿಂದ ಗರಂ ಆಗಿದ್ದ ಹಾಲಿ ಮೇಯರ್ ಎನ್ ಬಿ ನಿರ್ವಾಣಿ ಅವರು ತಮ್ಮ ರಾಜೀನಾಮೆಯನ್ನು ವಾಪಾಸ್ ಪಡೆದಿದ್ದು, ಎಂದಿನಂತೆ ಕಾರ್ಯಕ್ರಮಗಳಲ್ಲಿ ಹಾಜರಾಗುವುದಾಗಿ ಹೇಳಿದ್ದಾರೆ.

ಮಾರ್ಚ್ 11 ರಂದು ಹೊರದೇಶ ಹಾಗೂ ಹೊರನಾಡು ಕನ್ನಡಿಗರ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ‘ಎಂತಿದ್ದರೆ ಏನ್, ಎಲ್ಲಿದ್ದರೆ ಏನ್, ನಾವ್ ಕನ್ನಡಿಗರುಷ’- ಉತ್ಸವ; ನಾಟಕ- ಕುಣಿ ಕುಣಿ ನವಿಲೆ: ಮುಂಬೈನ ನ್ಯಾಷನಲ್ ಕನ್ನಡ ಎಜುಕೇಷನ್ ಸೊಸೈಟಿ. ರಚನೆ- ಎಚ್.ಎಸ್. ವೆಂಕಟೇಶಮೂರ್ತಿ. ನಿರ್ದೇಶನ- ಡಾ.ಸಾಸ್ವೆಹಳ್ಳಿ ಸತೀಶ್. ಭಾರತೀಯ ಶಾಸ್ತ್ರೀಯ ಫ್ಯೂಶನ್ ಪ್ರದರ್ಶನ- ಅಮೆರಿಕದ ಜೋತ್ಸ್ನಾ ಶ್ರೀಕಾಂತ್. ನಾಟಕ- ಯಯಾತಿ; ವಾಷಿಂಗ್ಟನ್‌ನ ಕಾವೇರಿ ಕನ್ನಡ ಸಂಘ. ರಚನೆ- ಗಿರೀಶ್ ಕಾರ್ನಾಡ್ . ನಿರ್ದೇಶನ- ರವಿ ಹರಪ್ಪನಹಳ್ಳಿ.

ವಿಶ್ವಕನ್ನಡ ಸಮ್ಮೇಳನ ಆರಂಭದ ದಿನ ಭಾಗವಹಿಸಲಿರುವ ಗಣ್ಯಾತಿಗಣ್ಯರ ಪಟ್ಟಿ ಇಂತಿದೆ: ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ, ಸಾಹಿತಿ ಡಾ.ಯು.ಆರ್.ಅನಂತಮೂರ್ತಿ, ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ, ವಿಧಾನ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ, ಕೇಂದ್ರ ಸಚಿವವೀರಪ್ಪ ಮೊಯಿಲಿ, ಮಲ್ಲಿಕಾರ್ಜುನ ಖರ್ಗೆ , ವಿಧಾನಸಭಾ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ, ಲೋಕಸಭಾ ಸದಸ್ಯ ಎಚ್.ಡಿ.ಕುಮಾರಸ್ವಾಮಿ, ಚಿತ್ರನಟಿ ಐಶ್ವರ್ಯ ರೈ, ರಂಗಭೂಮಿ ಕಲಾವಿದ ಏಣಗಿ ಬಾಳಪ್ಪ, ಕವಿ ಚೆನ್ನವೀರ ಕಣವಿ, ಕೆ.ಎಸ್.ನಿಸಾರ್ ಅಹಮದ್, ಚಂದ್ರಶೇಖರ ಕಂಬಾರ , ಚಿಂತಕ ಬರಗೂರು ರಾಮಚಂದ್ರಪ್ಪ, ಉದ್ಯಮಿ ಕ್ಯಾಪ್ಟನ್ ಜಿ.ಆರ್. ಗೋಪಿನಾಥ, ಬಿ.ಆರ್.ಶೆಟ್ಟಿ, ಲಂಡನ್ ಲ್ಯಾಂಬೆತ್‌ನ ಮೇಯರ್ ಡಾ.ನೀರಜ್ ಪಾಟೀಲ್, ಅಮೆರಿಕ ಕನ್ನಡ ಕೂಟಗಳ ಒಕ್ಕೂಟದ ಅಮರನಾಥ ಗೌಡ, ಯು.ಕೆ. ಕನ್ನಡ ಬಳಗದ ಡಾ.ಭಾನುಮತಿ, ಚಿತ್ರ ಕಲಾವಿದರಾದ ಅಂಬರೀಶ್, ಬಿ.ಸರೋಜಾದೇವಿ, ಜಯಂತಿ, ಭಾರತಿ ವಿಷ್ಣುವರ್ಧನ್, ಚಿತ್ರ ನಿರ್ದೇಶಕ ಗಿರೀಶ್‌ ಕಾಸರವಳ್ಳಿ, ಡಾ. ಎಚ್.ಸುದರ್ಶನ, ಸುಧಾಮೂರ್ತಿ, ಅನಿಲ್ ಕುಂಬ್ಳೆ ಮತ್ತಿತ್ತರ ಕನ್ನಡಾಭಿಮಾನಿಗಳು

ಬೆಳಗಾವಿ ಮೆರವಣಿಗೆಯಲ್ಲಿ ಕನ್ನಡಿಗರ ದರ್ಬಾರು

ತಾಯಿ ಭುವನೇಶ್ವರಿ ಪ್ರತಿಮೆ ಹೊತ್ತ ಬಲರಾಮ ಗಾಂಭೀರ್ಯದ ನಡೆ, ಕನ್ನಡ ಅಭಿಮಾನಿಗಳ ಜಯ ಘೋಷಣೆಗಳ ಸಂಭ್ರಮದ ನುಡಿ, ಎಲ್ಲೆಡೆ ಹೆಮ್ಮೆಯ ಹಬ್ಬದ ವಾತಾವರಣ. ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಗೃಹ ಸಚಿವ ಆರ್ ಅಶೋಕ್ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಸುಮಾರು 100 ಅಡಿ ಉದ್ದದ ಕನ್ನಡ ಬಾವುಟ ಹಿಡಿದ ಪ್ರವೀಣ್ ಕುಮಾರ್ ಶೆಟ್ಟಿ ನೇತೃತ್ವದ ಕನ್ನಡ ರಕ್ಷಣಾ ವೇದಿಕೆ ಬಳಗದವರು ’ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ’ ಎಂದು ಜಯಧ್ವನಿ ಮೊಳಗಿಸುತ್ತಿದ್ದಾರೆ. ಇನ್ನೊಂದೆಡೆ ಸುಮಾರು 6 ಸಾವಿರಕ್ಕೂ ಅಧಿಕ ಕಲಾವಿದರು ಏರುತ್ತಿರುವ ಬಿಸಿಲನ್ನು ಲೆಕ್ಕಿಸದೆ ಕಲಾ ಪ್ರದರ್ಶನದಲ್ಲಿ ತೊಡಗಿದ್ದಾರೆ.


ಬಲರಾಮನ ಜೊತೆಗೆ ಕೃಷ್ಣಾ, ಸುಧಾ ಆನೆಗಳು ಸಾಗುತ್ತಿರುವ ರೀತಿ ಮೈಸೂರು ದಸರಾ ವೈಭವನ್ನು ನೆನಪಿಸುವಂತಿದೆ. ಪೂರ್ಣಕುಂಭ ಕಲಶ ಹೊತ್ತ 1001 ಮಹಿಳೆಯರು ಕನ್ನಡ ಹಬ್ಬದ ವಾತಾವರಣವನ್ನು ಸೃಷ್ಟಿಸಿದ್ದಾರೆ. ನಂದಿ ಧ್ವಜ ಪೂಜೆ ಪೂರೈಸಿದ ನಂತರ ಸಚಿವ ಅಶೋಕ್, ಗೋವಿಂದ ಕಾರಜೋಳ ಮುಂತಾದ ಜನ ಪ್ರತಿನಿಧಿಗಳ ಸಮೂಹ ತಮ್ಮ ಗೂಟದ ಕಾರಿನತ್ತ ತೆರಳದೆ ಮೆರವಣಿಗೆಯಲ್ಲಿ ಪಾಲ್ಗೊಂಡು ಕನ್ನಡ ಅಭಿಮಾನಿಗಳ ಹರ್ಷವನ್ನು ಹೆಚ್ಚಿಸಿದರು. ಸಿನಿ ನಟ ನಟಿಯರು ವೋಲ್ವೋ ಬಸ್ ನಲ್ಲೇ ಮೆರವಣಿಗೆ ಸುತ್ತಾ ಸುತ್ತಾಟ ನಡೆಸಿದ್ದು ಅಭಿಮಾನಿಗಳನ್ನು ಕೆರಳಿಸಿತ್ತು.

ಜನಪದ ವೈಭವ: ಪೂಜಾ ಕುಣಿತ, ಪಟ ಕುಣಿತ, ಕೋಲಾಟ, ಕಂಸಾಳೆ, ವೀರಗಾಸೆ, ಡೊಳ್ಳು ಕುಣಿತ, ಹುಲಿ ವೇಷ, ಕುದುರೆ ಕುಣಿತ, ತಮಟೆ ಬಡಿತ, ಯಕ್ಷಗಾನದ ವೇಷಗಳು, ಒಂದೇ ಎರಡೇ ಮಾತು ಬರದ ಮೂಗ ಕೂಡಾ ಕನ್ನಡ ಕನ್ನಡ ಎಂದು ಕೂಗುವಂತೆ ಮಾಡಿದೆ. ಕಾಲಿಲ್ಲದವ ಕೂಡಾ ಕನ್ನಡ ಎಂದು ಕುಣಿದಾಡುವಂತೆ ಮಾಡಿದೆ. ನಾಡಿನ ವಿವಿಧೆಡೆಗಳಿಂದ ಬಂದಿರುವ ಸುಮಾರು ಆರು ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದಾರೆ. ಸುಮಾರು 6 ಕಿ.ಮೀ ದೂರ ಸಾಗುವ ಈ ಮೆರವಣಿಗೆಯಲ್ಲಿ ದಣಿವಿಲ್ಲದೆ ಕುಣಿವ ಈ ಸಾಂಸ್ಕೃತಿಕ ರಾಯಭಾರಿಗಳಿಗೆ ನಮೋ ನಮಃ

ಮರಾಠಿ ಗೋಡಾ ಥಕ ಥೈ ಥಕ ಕೈ: ಮೆರವಣಿಯಲ್ಲಿ ಪಾಲ್ಗೊಂಡ ಚಿಣ್ಣರು, ಬಿಳಿ ಕುದುರೆ ಹಿಂದೆ ಮುಂದೆ ಸುತ್ತುತ್ತಿದ್ದರು. ಮೈಸೂರಿನಿಂದ ಬಂದ ಒಟ್ಟು 45 ಕುದುರೆಗಳ ಅಶ್ವದಳದ ಲೆಫ್ಟ್ ರೈಟ್ ಮೆರವಣಿಗೆ ಒಂದು ಕಡೆ ಸಾಗಿದ್ದರೆ, ಮಹಾರಾಷ್ಟ್ರದಿಂದ ಬಂದಿರುವ ಬಿಳಿ ಕುದುರೆ ಸೂರಜ್, ಲಕ್ಷ್ಮಣ್ ಜೋಡಿ ಎಲ್ಲರನ್ನೂ ಮೋಡಿ ಮಾಡುತ್ತಿದೆ. ಆಕರ್ಷಕವಾದ ಈ ಬಿಳಿ ಕುದುರೆಗಳು ಸಂಗೀತದ ಮೋಡಿಗೆ ಸಿಲುಕಿದಂತೆ ಥಕ ಥೈ ಥಕ ಥೈ ಎಂದು ಹೆಜ್ಜೆ ಹಾಕುವುದು, ಕೆನೆಯುವುದು ನೋಡುವುದೇ ಆನಂದ. ಮಾತುಂಗದಿಂದ ಬಂದಿರುವ ಕನ್ನಡ ಸಂಘ ಸೇರಿದಂತೆ ಸುಮಾರು 250ಕ್ಕೂ ಹೊರರಾಜ್ಯದಿಂದ ಬಂದಿರುವ ಕಲಾವಿದರೂ ಈ ಕನ್ನಡ ಮೆರವಣಿಗೆಯಲ್ಲಿ ಪಾಲ್ಗೊಂಡಿರುವುದು ವಿಶೇಷ. ಗಡಿನಾಡಿನ ನಗರ ಬೆಳಗಾವಿಯು ಕರ್ನಾಟಕದ ಎರಡನೇ ರಾಜಧಾನಿಯಾಗಲಿ ಎಂಬ ಆಶಯವನ್ನು ಮೆರವಣಿಗೆ ಹೊರಟ್ಟಿದ್ದವರಲ್ಲಿ ಹೆಚ್ಚು ಜನರ ಅಭಿಪ್ರಾಯವಾಗಿದೆ

ಬೆಳಗಾವಿ ಸುದ್ದಿ ಮೊಬೈಲಲ್ಲಿ ಓದುವುದು ಹೇಗೆ?

ಬೆಳಗಾವಿ, ಮಾ. 10 : ಬೆಳಗಾವಿಯಲ್ಲಿ ನಡೆಯುತ್ತಿರುವ ವಿಶ್ವ ಕನ್ನಡ ಸಮ್ಮೇಳನದ ಸುದ್ದಿಚಿತ್ರಗಳನ್ನು ನೀವು ನಿಮ್ಮ ಮೊಬೈಲ್ ಫೋನ್ ಮುಖಾಂತರ ತಿಳಿಯಬಹುದು. ಇದು ತುಂಬಾ ಸಿಂಪಲ್. ಜಿಪಿಆರ್ಎಸ್ ಸೌಲಭ್ಯ ಇರಲೇಬೇಕು. ಮೂರು ಹೆಜ್ಜೆಗಳು ಕೆಳಗಿನಂತಿವೆ. ನೆನಪಿಡಿ ಈ ಸೇವೆ ಉಚಿತ, ಉಚಿತ, ಉಚಿತ.
ಸ್ಟೆಪ್ 1 : ಮೊಬೈಲ್ ಬ್ರೌಸರ್ ನಲ್ಲಿ http://oneindia.newshunt.com ಓಪನ್ ಮಾಡಿಕೊಳ್ಳಿ.

ಸ್ಟೆಪ್ 2 : ಅಲ್ಲಿ ಕಾಣಿಸುವ Click here ಲಿಂಕನ್ನು ಒತ್ತಿರಿ. ಈಗ ಅಪ್ಲಿಕೇಷನ್ ತಾನಾಗಿಯೇ ಡೌನ್ ಲೋಡ್ ಆಗುವುದು. ಅಪ್ಲಿಕೇಷನ್ ಗೇಮ್ಸ್ ಅಥವಾ ಅಪ್ಲಿಕೇಷನ್ ಫೋಲ್ಡರ್ ನಲ್ಲಿ ಡೌನ್ ಲೋಡ್ ಆಗುತ್ತದೆ.

ಸ್ಟೆಪ್ 3 :
ಗೇಮ್ಸ್ ಅಥವಾ ಅಪ್ಲಿಕೇಷನ್ ಫೋಲ್ಡರಿಗೆ ಹೋಗಿ ನ್ಯೂಸ್ ಹಂಟ್ ತೆರೆದುಕೊಳ್ಳಿ. ಅಲ್ಲಿ ಕನ್ನಡ ಆಯ್ಕೆ ಮಾಡಿಕೊಂಡು ನಂತರ Oneindia Kannada ಕ್ಲಿಕ್ ಮಾಡಿ. ಅದುವೇ ನಿಮ್ಮ ನೆಚ್ಚಿನ ದಟ್ಸ್ ಕನ್ನಡ.ಕಾಂ.

ಓದಲು ತೊಂದರೆಯಿದ್ದರೆ ಅಥವಾ ನ್ಯೂಸ್ ಹಂಟ್ ಸುದ್ದಿಗಳನ್ನು ಪಡೆಯಲು ವಿಫಲರಾದರೆ ನಮ್ಮಗೆ ಬರೆಯಿರಿ

ಇಗೋ ಕನ್ನಡವೆಂದ ಹಿರಿಯ ಜೀವಿ ಪ್ರೊ. ಜಿ. ವೆಂಕಟಸುಬ್ಬಯ್ಯ...


ನಮ್ಮ "ಇಗೋ" ಬಿಟ್ಟು ಕನ್ನಡ ಬಳಸೋಣ...! ಕನ್ನಡ ಜೀವಿ ಗಳಾಗೋಣ !

ಶಿಕ್ಷಣ, ಸಾಹಿತ್ಯ, ವಿಮರ್ಶೆ, ಭಾಷಾ ಸಂಶೋಧನೆ, ಸಮಾಜಸೇವೆ-ಹೀಗೆ ಐದೂ ಪ್ರಕಾರಗಳಲ್ಲಿ ಯಶಸ್ವಿಯಾಗಿ ಮಿಂಚಿ ಕನ್ನಡ ಭಾಷಾಸಂಪತ್ತನ್ನು ವಿಫುಲಗೊಳಿಸಿದ ವಿಶಿಷ್ಟ ವ್ಯಕ್ತಿ ಪ್ರೊ. ಜಿ. ವೆಂಕಟಸುಬ್ಬಯ್ಯನವರು. ಆತ್ಮೀಯರಿಗೆ ಇವರು ಪ್ರೊ.ಜಿ.ವಿ. “ನಡೆದಾಡುವ ನಿಘಂಟು” ಎಂದೇ ಕನ್ನಡನಾಡಿನಲ್ಲಿ ಮನೆ ಮಾತಾಗಿರುವ ಪ್ರೊ. ಜಿ.ವಿ. ಈ ಶತಮಾನ ಕಂಡ ಅಪರೂಪದ ಭಾಷಾತಜ್ಞ.

“ಭಾಷೆ ನಿರಂತರವಾಗಿ ಬೆಳೆಯುವಂತಹುದು. ಇದಕ್ಕೆ ಯಾವುದೇ ಚೌಕಟ್ಟಿನ ಅವಶ್ಯಕತೆಯಿಲ್ಲ. ಅನ್ಯ ದೇಶ್ಯ ಶಬ್ದಗಳು ಕನ್ನಡ ಭಾಷೆಯಲ್ಲಿ ಭಾಷೆಯ ವ್ಯಾಪ್ತಿಯನ್ನು ವಿಸ್ತಾರಗೊಳಿಸುತ್ತವೆ”, ಎನ್ನುವ ಪ್ರೊ. ಜಿವಿ ಓರ್ವ ಉದಾರ ಹಾಗೂ ವಿಚಾರವಾದಿಯಾದ ಭಾಷಾ ವಿಜ್ಞಾನಿ.

ನಿತ್ಯೋತ್ಸವ ನಗರಿಯಲ್ಲಿ ಕನ್ನಡದ ತೇರು

ಬೆಂಗಳೂರಿನಲ್ಲಿ ಫೆಬ್ರುವರಿ ೪,೫,೬ ರಂದು ನಡೆದ ೭೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಾಧಕ ಭಾದಕಗಳ ದೂರದೃಷ್ಟಿಯ ಅವಲೋಕನಾ ಲೇಖನ ಇದು. ಪಬ್ಬು, ಬಾರ್ ಗಳ ಭರಾಟೆಯಂಥ ನಿತ್ಯ ಉತ್ಸವಗಳ ನಗರಿಯಲ್ಲಿ ಅಕ್ಷರ ಜಾತ್ರೆ ಯಶಸ್ವಿಯಾದದ್ದು ಕನ್ನಡದ ಮಟ್ಟಿಗೆ ಆರೋಗ್ಯಕರ ಬೆಳವಣಿಗೆ. ಆದರೆ ಯಶಸ್ವೀ ಎಂಬುದು ಯಾವ ಅರ್ಥದಲ್ಲಿ ಅವಲೋಕಿಸಬಹುದು? ೭೦೦೦೦ ದಿಂದ ೧೦೦೦೦೦ ಜನ ಇದಕ್ಕೆ ಸಾಕ್ಷಿಯಾದರು, ಇಂದಿನ ಯಾಂತ್ರಿಕ ಜೀವನದಲ್ಲಿ ಜನರನ್ನು ಸೇರಿಸುವುದು ರಾಜಕೀಯ ಪರಿಭಾಷೆಯಾಗಿಬಿಟ್ಟಿದೆ. ಇರಲಿ, ಸಾಹಿತ್ಯ ಸಮ್ಮೇಳನಗಳ ಇತಿಹಾಸ ಏನಿರಬಹುದು? ಇವುಗಳ ಕೊಡುಗೆ ಕನ್ನಡ ಸಾಹಿತ್ಯಕ್ಕೆ, ಕನ್ನಡ ನಾಡು ನುಡಿಗೆ ಕೊಡುಗೆ ಯಾವ ರೀತಿಯದು? 
   
     ೧೯೧೫ ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಉದಯ. ಆಗ ಮೇರು ಬರಹಗಾರರಿದ್ದರು, ಕನ್ನಡವನ್ನು ತಮ್ಮ ಉಸಿರಾಗಿಸಿಕೊಂಡವರಿದ್ದರು. ೧೯೩೨ರ ಮಡಿಕೇರಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಡಿ.ವಿ.ಜಿ.ಯವರು ಮಂಡಿಸಿದ ವಿಷಯಗಳು, ಕರ್ನಾಟಕದ ಏಕೀಕರಣ ಚಳುವಳಿಯ ಸ್ವರೂಪವನ್ನೇ ಬದಲಾಯಿಸಿದವು. ೧೯೪೮ರಲ್ಲಿ ಬೇಂದ್ರೆ, "ಹಕ್ಕಿ ಹಾರುತಿದೆ ನೋಡಿದಿರಾ", ಎಂದಾಗ ವೇದಿಕೆ ಮುಂದಿದ್ದ ಮೂವತ್ತು ಸಾವಿರ ಜನ ತಲೆಯೆತ್ತಿ ನೋಡಿದ್ದರು. ೧೯೫೮ರಲ್ಲಿ ವಿ.ಕೃ.ಗೋಕಾಕ ಬಳ್ಳಾರಿಯಲ್ಲಿ ಮಂಡಿಸಿದ ಹೊಸ ವಿಚಾರಗಳು ನವ್ಯ ಸಾಹಿತ್ಯ ಎಂಬ ಹೊಸ ಚಳುವಳಿಗೆ ಕಾರಣವಾದವು. ೧೯೬೦ರಲ್ಲಿ ಅ.ನ.ಕೃ ಮಣಿಪಾಲದಲ್ಲಿ, ಬೆಂಗಳೂರಿನಲ್ಲಿನ ಕನ್ನಡದ ಸ್ಥಿತಿಗತಿಗಳು, ಚಿತ್ರರಂಗದ ಪರಿಭಾಷಾ ಒಲವಿನ ಬಗ್ಗೆ ಚರ್ಚೆ ನಡೆದಾಗ, ಡಬ್ಬಿಂಗ್ ವಿರೋಧಿ ಚಳುವಳಿಗಳು ನಡೆದವು. ಇನ್ನೂ ಕೆಲವು ಮೇರು ಕವಿಗಳು ತಮ್ಮ ನಿಲುವಿಗೆ ಬದ್ಧರಾಗಿದ್ದರು. ಕರ್ನಾಟಕ ಏಕೀಕರಣವಾಗುವ ತನಕ ಅಧ್ಯಕ್ಷತೆ ಕುವೆಂಪು ಅಧ್ಯಕ್ಷತೆವಹಿಸುವುದಿಲ್ಲವೆಂದಾಗ, ಅವರ ಪ್ರಕಾರ, ೧೯೫೭ರಲ್ಲಿ ಅಧ್ಯಕ್ಷತೆ ವಹಿಸಿದರು. ಕನ್ನಡದ ಕೆಲಸಗಳಿಗೆ ಅಡ್ಡಿಯಾಗುವುದೆಂಬ ಕಾರಣಕ್ಕೆ, ಕೊನೆಯವರೆಗೂ ತಿ.ನಂ.ಶ್ರೀ. ಅಧ್ಯಕ್ಷತೆ ವಹಿಸದೇ ಇದ್ದರು.

      ಇನ್ನು ಈ ಸಮ್ಮೇಳನದ ವಿಷಯಕ್ಕೆ ಬಂದರೆ,
ಅಧ್ಯಕ್ಷರು-ಪ್ರೊ.ಜಿ.ವೆಂಕಟಸುಬ್ಬಯ್ಯನವರು ಈ ಬಾರಿಯ ಕನ್ನಡದ ತೇರು ಎಳೆದ ಸಾಹಸದ ಸಾರ್ಥಕ ರೂವಾರಿ. ಪ್ರಭಂದ, ವ್ಯಕ್ತಿಚಿತ್ರ, ಸಂಪಾದನೆಯಲ್ಲಿ ಇವರ ಕೊಡುಗೆ ಅನನ್ಯ. ಬಿ.ಎಂ.ಶ್ರೀ. ವೆಂಕಣ್ಣಯ್ಯನವರಂಥ ಕನ್ನಡದ ಸಾಹಿತ್ಯದ ಕಲಿಗಳ ಶಿಷ್ಯರಿವರು. ೯೮ರ ಇಳಿ ವಯಸ್ಸಿನ ಇವರು, ತನು ಮನ ಧನಗಳಿಂದ ಕನ್ನಡ ಕಟ್ಟುವ ಕೆಲಸ ಮಾಡಿದರು. ಜೀ.ವಿ ಎಂದೇ ಪ್ರಖ್ಯಾತರಾದ ಇವರು ಮುಪ್ಪಾಗಿರಬಹುದು ಆದರೆ ಇವರು ಮಾಡಿದ ಕನ್ನಡದ ಕೆಲಸಕ್ಕೆ ಎಂದಿಗೂ ಮುಪ್ಪಿಲ್ಲ.

ಈ ಬಾರಿ ಕೆಲವು ನಿರ್ಣಯಗಳೂ ಮಂಡನೆಯಾದವು , ಕೆಲವು ಸವಕಲು ವಿಷಯಗಳು ಚರ್ಚೆಯಾದವು.
ಚರ್ಚೆಯಾದ ವಿಷಯಗಳು, ಆಗಿನ ಈಗಿನ ಹಳ್ಳಿ ಜೀವನ.
ಒಬ್ಬ ಮಹಾನುಭಾವ ಆಗಿನ ಹಳ್ಳಿ ಜೀವನವೇ ಚನ್ನಾಗಿತ್ತು, ಈಗೆಲ್ಲ ಯಾಂತ್ರಿಕವಾಗಿದೆ ಎಂದ. ಅರ್ರೇ, ಬದಲಾವಣೆ ಜಗದ ನಿಯಮವಲ್ಲವೇ? ಮತ್ತೊಂದು ವಿಷಯ, ೨೦ ರಿಂದ ೩೦ ವರ್ಷದ ಯುವಕರು ಪೇಟೆಗಳತ್ತ ಮುಖ ಮಾಡುತ್ತಿದ್ದಾರೆ. ಅವರೆಲ್ಲ ತಿರುಗಿ ಹಳ್ಳಿಗಳತ್ತ ಹೊರಡಬೇಕು ಎಂದು ಆಜ್ಞೆಯನ್ನೂ ಮಾಡಿದರು. ಆದರೆ ದಿನಗೂಲಿ ೫೦ ರೂಪಾಯಿ ಕೂಡ ಸಿಗದ ಹಳ್ಳಿಯಲ್ಲಿ ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುವುದು ಕಷ್ಟವಾಗಿರುವಾಗ ಪೇಟೆಗಳತ್ತ ಮುಖ ಮಾಡುವುದರಲ್ಲಿ ತಪ್ಪೇನಿದೆ. ಇಂಥ ವಿಷಯಗಳನ್ನು ಚರ್ಚಿಸುವಾಗ ವಾಸ್ತವಿಕತೆ, ವ್ಯೆಜ್ಞಾನಿಕತೆಯನ್ನು ಮನಗಂಡು ವಿಷಯಗಳನ್ನು ಆಯ್ಕೆ ಮಾಡಬೇಕೆಂಬುದು  ನನ್ನ ಅನಿಸಿಕೆ.

ಮುಖ್ಯವಾದ ಸಂಗತಿ ನಿರ್ಣಯಗಳದ್ದು,
ಸಮ್ಮೇಳನದ ಫಲವಾಗಿ ಇಂಥ ನಿರ್ಣಯ ಜನಾಭಿಪ್ರಾಯವಾಗಿ ರೂಪುಗೊಂಡು, ಕಾರ್ಯ ರೂಪಕ್ಕೆ ಬಂದಿತು ಎಂದು ಹೇಳಬಲ್ಲ ಉದಾಹರಣೆ ಇದುವರೆಗೂ ಸಿಕ್ಕಿಲ್ಲ.   ಸಮ್ಮೇಳನಾಧ್ಯಕ್ಷರು  ೩ ದಿನಗಳ ವೈಭವಕ್ಕೆ ಸೀಮಿತವಾಗಿಬಿಟ್ಟಿದ್ದಾರೆ. ಅವರ ಭಾಷಣ ಔಪಚಾರಿಕ ವಿಧಿಯಾಗಿಬಿಟ್ಟಿದೆ, ೩ ದಿನ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತದೆ. ನಿರ್ಣಯಗಳ ವಿವರಗಳೂ ಬರುತ್ತವೆ, ನಂತರ ಎಲ್ಲವೂ ತಣ್ಣಗಾಗುತ್ತವೆ. ಕನಿಷ್ಠ ಚರ್ಚೆ ಕೂಡ ನಡೆಯುವದಿಲ್ಲ.
ನಿರ್ಣಯ ಎಂದರೆ ಕಾವೇರಿ ಚಳುವಳಿ, ಬೆಳಗಾವಿ ಕರ್ನಾಟಕದ್ದೇ ಗೋಕಾಕ್ ಚಳುವಳಿ ಇತ್ಯಾದಿ.
ನಿರ್ಣಯಗಳು ಮೊದಲು ಜನಾಭಿಪ್ರಾಯವಾಗಿ ರೂಪುಗೊಳ್ಳಬೇಕು, ನಂತರ ಚರ್ಚೆಯಾಗಿ ಅದನ್ನು ಕಾರ್ಯಗತಗೊಳಿಸಬೇಕು. ಪ್ರತಿ ಸಮ್ಮೇಳನಾಧ್ಯಕ್ಷರನ್ನು ಒಂದು ವರ್ಷದ ಅವಧಿಯವರೆಗೆ ಸಾಕ್ಷಿ ಪ್ರಜೆಯಾಗಿ ನಿಯಮಿಸಬೇಕೆಂಬುದು ಪರಿಷತ್ತಿನ ಆಗ್ರಹ, ಆದರೆ ಯಾವ ರಾಜಕೀಯ ಪಕ್ಷಗಳೂ ಒಂದು ಖುರ್ಚಿಯನ್ನು ಬಿಡುವುದಿಲ್ಲ ಎಂಬುದು ಅಷ್ಟೇ ಕಟುಸತ್ಯ. 
ಬೇರೆ ರಾಜ್ಯಗಳಿಂದ ಬಂದವರು ಕನ್ನದಲ್ಲಿ ಕಲಿತು ಬಳಸಬೇಕೆಂಬುದು ಈ ಬಾರಿಯ ೧೦ ನಿರ್ಣಯಗಳಲ್ಲಿ ಒಂದು. ಆದರೆ ಕನ್ನಡಿಗರೇ ಕನ್ನಡವನ್ನು ಬಳಸುವಲ್ಲಿ ಅನಾಸ್ಥೆ  ತೋರುವಾಗ, ಬೇರೆಯವರು ಹೇಗೆ ಕಲಿತಾರು.

ಕನ್ನಡ ಪದ ಎಂಬುದು ಕಬ್ಬಿಣದ ಕಡಲೆಯಲ್ಲ, ಹಿರಿದಿದೆ ಕನ್ನಡದ ಅರ್ಥ. ಅರ್ಥ ತಿಳುದುಕೊಂಡವನೇ ಸಾರ್ಥಕ ಜೀವಿ, ಕನ್ನಡದ ಮುದ್ದಣರಿಂದ ಹಿಡಿದು ಈಗಿನ ಮುಂಗಾರು ಮಳೆಯ ತನಕ ಸಾಹಿತ್ಯ ಕೃಷಿಯಾಗಿದೆ, ಇನ್ನು ಮುಂದಿನ ಪೀಳಿಗೆಯ ಕನ್ನಡದ ಉಳಿವು-ಅಳಿವು ನಮ್ಮ ಯುವ ಜನಾಂಗದ ಕೈಯಲ್ಲಿದೆ. ಮಾಯಾನಗರಿಗಳ ಮಲ್ಟಿಪ್ಲೆಕ್ಸ್ ಬೆಂಗಳೂರಿನಲ್ಲಿ ಅಕ್ಷರ ಜಾತ್ರೆಗೆ ಜನಗಳ ಸಾಥ್ ಸಿಕ್ಕಿರುವುದು, ಕನ್ನಡದ ಕೆಲಸಗಳಿಗೆ ಪ್ರೋತ್ಸಾಹವಿದ್ದಂತೆ.
ತಮ್ಮ ಮನಸ್ಸಿಗೆ ತಟ್ಟಿದರೆ ಮರುತ್ತರ ಬರೆಯಿರಿ. 

ವಿಶ್ವ ಕನ್ನಡ ಸಮ್ಮೇಳನ : ಕನ್ನಡ ಚಿತ್ರರಂಗಕ್ಕೆ ಐದು ದಿನ ರಜೆ

ಕುಂದಾ ನಗರಿ ಬೆಳಗಾವಿಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನದ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗಕ್ಕೆ ಮಾರ್ಚ್ 9ರಿಂದ 13ರವರೆಗೆ ಐದು ದಿನಗಳ ಕಾಲ ರಜೆ ಘೋಷಿಸಲಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತಕುಮಾರ್ ಪಾಟೀಲ್ ಸೋಮವಾರ (ಫೆ.21) ಈ ವಿಷಯವನ್ನು ತಿಳಿಸಿದರು.
ಮಾರ್ಚ್ 9ರಿಂದ ಮಾರ್ಚ್ 13ರವರೆಗೆ ಚಿತ್ರ ಪ್ರದರ್ಶನ ಹೊರತು ಪಡಿಸಿ ಉಳಿದ ಚಟುವಟಿಕೆಗಳು ಇರುವುದಿಲ್ಲ. ಬೆಳಗಾವಿಯಲ್ಲಿ ಕನ್ನಡ ಸಿನಿಮಾ ತಾರೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಈಗಾಗಲೆ ಬೆಂಗಳೂರಿನಲ್ಲಿ ತಾರೆಗಳ ತಾಲೀಮು ನಡೆದಿದೆ ಎಂದು ಬಸಂತ್ ತಿಳಿಸಿದರು.
ಕನ್ನಡ ಚಿತ್ರರಂಗದ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಬೆಂಗಳೂರಿನಿಂದಬೆಳಗಾವಿವರೆಗೂ ಸಿನಿಮಾ ತಾರೆಗಳು ಮೆರವಣಿಗೆಯಲ್ಲಿ ಸಾಗಲಿದ್ದಾರೆ. ಬೆಳಗಾವಿಯಲ್ಲಿ ಒಟ್ಟು 1.30 ಗಂಟೆಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಿನಿಮಾ ತಾರೆಗಳು ಹಂಸಲೇಖ ಅವರ ನೇತೃತ್ವದಲ್ಲಿ ನಡೆಸಿಕೊಡಲಿದ್ದಾರೆ ಎಂದರು ಬಸಂತ್.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯಾರಾರು ಪಾಲ್ಗೊಳ್ಳಲಿದ್ದಾರೆ ಎಂಬ ವಿವರಗಳನ್ನು ಬಸಂತ್ ಕುಮಾರ್ ಪಾಟೀಲ್ ನೀಡಿಲ್ಲ. ಒಟ್ಟಿನಲ್ಲಿ ಕನ್ನಡ ಚಿತ್ರರಂಗದ ಕಲಾವಿದರು, ಹಂಚಿಕೆದಾರರು, ವಿತರಕರು, ನಿರ್ಮಾಪಕರು, ನಿರ್ದೇಶಕರು ಪಾಲ್ಗೊಳ್ಳಲಿದ್ದಾರೆ ಎಂಬ ವಿವರಗಳನ್ನು ನೀಡಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಲು ವಿನಂತಿಸಲಾಗಿದೆ. ಭಾಗವಹಿಸಬೇಕಾದದ್ದು ಅವರ ಧರ್ಮ. ವಿಶ್ವಕನ್ನಡ ಸಮ್ಮೇಳನವನ್ನು ಅವರು ಯಶಸ್ವಿಗೊಳಿಸಬೇಕಾಗಿ ಕೋರುತ್ತಿರುವುದಾಗಿ ನಿರ್ಮಾಪಕ ಸಾ ರಾ ಗೋವಿಂದು ತಿಳಿಸಿದರು. ಸಭೆಯಲ್ಲಿ ಹಂಸಲೇಖ, ಕೆಸಿಎನ್ ಚಂದ್ರಶೇಖರ್, ಕರ್ನಾಟಕ ಚಲನಚಿತ್ರ ಕಾರ್ಮಿಕರ, ತಂತ್ರಜ್ಞರ, ಕಲಾವಿದರ ಒಕ್ಕೂಟ ಅಧ್ಯಕ್ಷ ಅಶೋಕ್ ಉಪಸ್ಥಿತರಿದ್ದರು

ಜಿಲ್ಲಾ ಕ್ರೀಡಾಂಗಣ - DISTRICT STADIUM - ವಿಶ್ವ ಕನ್ನಡ ಸಮ್ಮೇಳನ

ವಿಶ್ವ ಕನ್ನಡ ಸಮ್ಮೇಳನ – ಏನಿದೆ, ಏನಿರಬೇಕಾಗಿತ್ತು?

ವಸಂತ ಶೆಟ್ಟಿ, ಬೆಂಗಳೂರು
ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನಕ್ಕೆ ಇನ್ನೇನು ಹೊತ್ತು ಎಣಿಕೆ ಶುರುವಾಗಿದೆ. ನಾಟಕ, ಕವನ ವಾಚನ, ಗಮಕ ವಾಚನ, ಕುಣಿತ, ಹಾಡುಗಾರಿಕೆ ಸೇರಿದಂತೆ ನಾಡಿನ ಕಲೆ, ಸಂಸ್ಕೃತಿ ಪ್ರದರ್ಶನಕ್ಕೆ ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಅನ್ನುತ್ತೆ ಸಮ್ಮೇಳನದ ವೆಬ್ ಸೈಟ್ ಅಲ್ಲಿರೋ ಕರೆಯೋಲೆ. ಇದಲ್ಲದೇ, ಕೆಲವು ಒಳ್ಳೆಯ ವಿಷಯಗಳ ಬಗ್ಗೆ ಚರ್ಚಾ ಗೋಷ್ಟಿಯನ್ನು ಏರ್ಪಡಿಸಲಾಗಿದೆ ಅಂತಲೂ ಕಂಡೆ. ಕನ್ನಡ, ಕನ್ನಡಿಗ, ಕರ್ನಾಟಕ ಇತಿಹಾಸದಲ್ಲೆಂದೂ ಕಂಡಿರದಂತಹ ಸವಾಲುಗಳನ್ನು ಎದುರಿಸುತ್ತಿರುವ ಜಾಗತೀಕರಣದ ನಂತರದ ಈ ದಿನಗಳಲ್ಲಿ ಇಂತಹ ಸಮ್ಮೇಳನಗಳು ಹೆಚ್ಚಿನ ಮಹತ್ವ ಪಡೆದಿವೆ ಕೂಡಾ. ಈ ಸಮ್ಮೇಳನ ಕರ್ನಾಟಕದ, ಕನ್ನಡಿಗರ ನಾಳೆಗಳನ್ನು ಕಟ್ಟಲು ಆಗಬೇಕಾದ ಕೆಲಸಗಳ ಬಗ್ಗೆ, ಇವತ್ತು ನಾವೆಲ್ಲಿದೀವಿ, ಈ ದಿನ ನಮ್ಮೆದುರು ಇರುವ ಸವಾಲುಗಳೇನು, ನಾವು ಸಾಗಬೇಕಾದ ದಾರಿ ಯಾವುದು, ಎಂತದ್ದು ಎಂಬಿತ್ಯಾದಿ ವಿಷಯಗಳ ಬಗ್ಗೆ ಚರ್ಚಿಸುವ, ಹೊಸ ದಿಕ್ಕು,ದೆಸೆ ನೀಡುವ ವೇದಿಕೆಯಾಗುತ್ತೆ ಅನ್ನುವುದು ನನ್ನ ನಿರೀಕ್ಷೆಯಾಗಿತ್ತು, ಆದರೆ ಕಾರ್ಯಕ್ರಮದ ಪಟ್ಟಿ ನೋಡಿದಾಗ ಕೆಲ ಮಟ್ಟಿಗೆ ನಿರಾಸೆಯಾಗಿದೆ ಅಂತಲೇ ಹೇಳಬೇಕು. ಜ್ಞಾನಾಧಾರಿತ ಹೊಸ ಜಗತ್ತಿನ ಸವಾಲುಗಳನ್ನು ಎದುರಿಸಿ ಗೆಲ್ಲಲು ಕನ್ನಡಿಗರ ಕಲಿಕೆ, ದುಡಿಮೆಯ ವ್ಯವಸ್ಥೆಗಳನ್ನು ಆದ್ಯತೆಯ ಮೇರೆಗೆ ಚೆನ್ನಾಗಿ ಕಟ್ಟಿಕೊಳ್ಳಬೇಕಾದ ತುರ್ತು ಅಗತ್ಯ ನಮ್ಮ ಮುಂದಿದೆ. ಆದರೆ ಕಾರ್ಯಕ್ರಮದ ಪಟ್ಟಿ ನೋಡಿದ್ರೆ, ಈ ಸಮ್ಮೇಳನ ಹೊಟ್ಟೆಗೆ ಹಿಟ್ಟಿನ ವಿಷಯಗಳಿಗಿಂತ ಹೆಚ್ಚು ಜುಟ್ಟಿನ ಮಲ್ಲಿಗೆಯ ವಿಷಯಗಳತ್ತಲೇ ಗಮನ ಹರಿಸಿದೆಯೆನೋ ಅನ್ನುವಂತಿದೆ !
ಏನಿದೆ?
ಹಾಗಂತ, ಸಮ್ಮೇಳನದಲ್ಲಿ ಪ್ರಯೋಜನವಾಗುವಂತಹ ವಿಷಯಗಳೇ ಇಲ್ಲ ಅಂತಿಲ್ಲ. ಜಾಗತೀಕರಣ, ಮಾರುಕಟ್ಟೆ ಮತ್ತು ಯುವಕರ ಮೇಲೆ ಬೀರಿರುವ ಪ್ರಭಾವದ ಬಗ್ಗೆ ಜಾಗತೀಕರಣ ಕರ್ನಾಟಕ ಅನ್ನುವ ಗೋಷ್ಟಿ, ಗಡಿನಾಡಲ್ಲಿರುವ ಕನ್ನಡಿಗರ ಶಿಕ್ಷಣ ಸವಾಲುಗಳು, ಸಾಮಾಜಿಕ, ಸಾಂಸ್ಕೃತಿಕ ಸ್ಥಿತಿಗತಿಗಳ ಬಗ್ಗೆ ಬೆಳಕು ಚೆಲ್ಲುವ ಗಡಿನಾಡ ಕನ್ನಡಿಗರು ಅನ್ನುವ ಗೋಷ್ಟಿ, ಕನ್ನಡ ತಂತ್ರಾಂಶ, ವಿಜ್ಞಾನ ಶಿಕ್ಷಣದಂತಹ ವಿಷಯಗಳ ಬಗೆಗಿನ ಜ್ಞಾನ-ವಿಜ್ಞಾನ-ತಂತ್ರಜ್ಞಾನ-ಕರ್ನಾಟಕಅನ್ನುವ ಗೋಷ್ಟಿ, ಆಡಳಿತದಲ್ಲಿ ಕನ್ನಡ ಬಳಕೆ ಬಗೆಗಿನ ಕನ್ನಡ ಭಾಷಾ ಬಳಕೆ ಅನ್ನುವ ಗೋಷ್ಟಿ, ಕೃಷಿ ರಂಗ ಎದುರಿಸುತ್ತಿರುವ ಸವಾಲುಗಳ ಬಗೆಗಿನ ಕೃಷಿ-ಸಾಧನೆ ಸವಾಲು ಗೋಷ್ಟಿಗಳು ಈ ಕಾಲಮಾನಕ್ಕೆ ಪ್ರಸ್ತುತವೆನ್ನಿಸುವಂತಹ ಗೋಷ್ಟಿಗಳಾಗಿವೆ. ಇಲ್ಲಿ ಪಾಲ್ಗೊಳ್ಳುತ್ತಿರುವವರು ಅಷ್ಟೇ ಯೋಗ್ಯರು ಅನ್ನುವುದು ಕೂಡಾ ಗಮನಿಸಬೇಕಾದದ್ದು. 
ಏನ್ ಇರಬೇಕಾಗಿತ್ತು ?
ಕವಿ ಗೋಷ್ಟಿ, ಹಾಸ್ಯ, ನಾಟಕ, ಸಂಗೀತದಂತಹ ವಿಷಯಗಳನ್ನು ಬಿಟ್ಟು ಚಿಂತನೆಗೆ ಹಚ್ಚುವ ಚರ್ಚಾ ಗೋಷ್ಟಿಗಳತ್ತ ನೋಡಿದಾಗ ಕಾಣೋದು ಸುಮಾರು 16 ಗೋಷ್ಟಿಗಳು. ಇವುಗಳಲ್ಲಿ ಕನ್ನಡಿಗರ ಭವಿಷ್ಯಕ್ಕೆ ಬುನಾದಿ ಹಾಕಬೇಕಾದ ಕಲಿಕೆಗೆ ಸಂಬಂಧಿಸಿದಂತೆ ಇರೋದು ಒಂದೇ ಒಂದು ಗೋಷ್ಟಿ, ಅದರಲ್ಲೂ ತಾಯ್ನುಡಿ ಶಿಕ್ಷಣದ ಮಹತ್ವ, ಇವತ್ತು ಅದು ಯಾವ ಹಂತದಲ್ಲಿದೆ, ಜಾಗತೀಕರಣದ ಸ್ಪರ್ಧೆಗೆ ಸಜ್ಜುಗೊಳಿಸಲು ಅದರಲ್ಲಿ ಆಗಬೇಕಾದ ಸುಧಾರಣೆಗಳೇನು, ಬದುಕಿನ ಎಲ್ಲ ಹಂತದ ವಿದ್ಯೆಯನ್ನು ಕನ್ನಡದಲ್ಲಿ ತರಲು ಆಗಬೇಕಾದ ಕೆಲಸಗಳೇನು ಅನ್ನುವ ವಿಷಯವೇನೂ ಚರ್ಚೆಯ ಅಜೆಂಡಾದಲ್ಲಿ ಇಲ್ಲ.  ಜಗತ್ತಿನ ಮುಂಚೂಣಿಲ್ಲಿರುವ ಎಲ್ಲ ದೇಶಗಳು ತಮ್ಮ ಏಳಿಗೆಗೆ ಏಣಿಯಾಗಿಸಿಕೊಂಡಿರುವುದು ತಮ್ಮ ತಾಯ್ನುಡಿಯನ್ನು. ಮಕ್ಕಳ ಬುದ್ದಿ ವಿಕಾಸಕ್ಕೆ ತಾಯ್ನುಡಿ ಕಲಿಕೆಗಿಂತ ಒಳ್ಳೆಯ ಹಾದಿಯಿಲ್ಲ ಅನ್ನುವುದನ್ನು ಜಗತ್ತು ಸಾರಿ ಸಾರಿ ಹೇಳಿದೆ. ತಮ್ಮ ತಮ್ಮ ತಾಯ್ನುಡಿಯನ್ನು ಜಾಗತೀಕರಣದ ಸವಾಲುಗಳನ್ನು ಎದುರಿಸಲು ಸಜ್ಜುಗೊಳಿಸಿದ ಎಲ್ಲ ದೇಶಗಳು ಏಳಿಗೆ ಸಾಧಿಸಿ ಮುನ್ನಡೆದಿದ್ದರೆ, ಅಂತಹದೊಂದು ಕನಸು ಕಾಣುವುದೇ ಅಪರಾಧ, ಅದು ಎಂದಿಗೂ ಸಾಧ್ಯವಿಲ್ಲ ಅನ್ನುವ ಆತ್ಮಹತ್ಯಾ ಭಾವ ಆವರಿಸಿಕೊಂಡಿರುವ ಭಾರತದಂತಹ ದೇಶ, ಏಳಿಗೆ ಹೊಂದಿರುವ ದೇಶದ ಬ್ಯಾಕ್ ಆಫೀಸ್ ನಂತೆ ಕೆಲಸ ಮಾಡುತ್ತ ಒಂದಿಷ್ಟು ಸರ್ವಿಸಸ್ ನ ಪುಡಿಗಾಸು ಸಂಪಾದಿಸಿಕೊಂಡು, ಅದನ್ನೇ ಏಳಿಗೆ ಎಂದು ನಂಬಿ, ಸಮಾಜವನ್ನು ನಂಬಿಸುವಂತಹ ದಡ್ಡತನ ತೋರಿಸುತ್ತಿದೆ. ಹೀಗೆ ಹುಟ್ಟುತ್ತಿರುವ ಪುಡಿಗಾಸಿಗೆ ಕಾರಣವಾಗಿರುವ ಇಂಗ್ಲಿಷ್ ಒಂದೇ ನಮ್ಮನ್ನು ನಮ್ಮ ಬಡತನದಿಂದ, ದಾರಿದ್ರ್ಯದಿಂದ, ಕಷ್ಟದಿಂದ ಪಾರು ಮಾಡುವ ಕಾಮಧೇನು ಅನ್ನುವ ಕೆಲವು ಪ್ರಭಾವಿಗಳ ನಂಬಿಕೆಗಳು ತಾಯ್ನುಡಿ ಶಿಕ್ಷಣವನ್ನು ಮೇಲೆತ್ತುವ, ಅದರಲ್ಲಿ ಅನ್ನದ ವಿದ್ಯೆ ತರುವ, ಆ ಮೂಲಕ ಒಳ್ಳೆಯ ದುಡಿಮೆ ಹುಟ್ಟಿಸುವ ವ್ಯವಸ್ಥೆಗೆ ಅಡಿಪಾಯ ಹಾಕಬೇಕಿದ್ದ ಸರ್ಕಾರದ ದಿಕ್ಕು ತಪ್ಪಿಸುತ್ತಿದೆ ಅಂದರೆ ತಪ್ಪಾಗದು.
ಕನ್ನಡ ನುಡಿಯ ಯೋಗ್ಯತೆ ಹೆಚ್ಚಿಸುವುದು ಯಾವಾಗ?
ಇನ್ನೂ ಕನ್ನಡ ನುಡಿಯಲ್ಲಾಗಬೇಕಾದ ಸುಧಾರಣೆ ಬಗ್ಗೆಯೂ ಯಾವ ಚರ್ಚೆಯೂ ಏರ್ಪಟ್ಟಿಲ್ಲ. ಜ್ಞಾನ-ವಿಜ್ಞಾನದ ಸಾರವನ್ನು ಕನ್ನಡಿಗರಿಗೆ ಕನ್ನಡದಲ್ಲೇ ತರಲು ನಮ್ಮ ನುಡಿ ಸಿದ್ಧವಾಗಿದೆಯೇ? ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ ಎಲ್ಲ ಹಂತದಲ್ಲೂ ಹಂತ ಹಂತವಾಗಿ ಒಳ್ಳೆಯ ಕಲಿಕೆ ತರಲು ನಮ್ಮ ನುಡಿಯ ಸುತ್ತ ಭಾಷಾ ವಿಜ್ಞಾನದ ಕಣ್ಣಿನಿಂದ ಆಗಬೇಕಾದ ಕೆಲಸಗಳೇನು? ಇಂತಹ ಕೆಲಸಗಳಿಗೆ ಹೆಚ್ಚು ಹೆಚ್ಚು ಪ್ರತಿಭಾವಂತ ಹುಡುಗರನ್ನು ಸೆಳೆಯುವುದು ಹೇಗೆ? ಅಂತಹದೊಂದು ವಾತಾವರಣ (eco-system) ಕಟ್ಟುವುದರಲ್ಲಿ ಸರ್ಕಾರದ, ವಿಶ್ವವಿದ್ಯಾಲಯಗಳ, ಶಿಕ್ಷಣ ತಜ್ಞರ, ಭಾಷಾ ವಿಜ್ಞಾನಿಗಳ ಪಾತ್ರವೇನು ಅನ್ನುವ ಬಗ್ಗೆ ಚರ್ಚೆ ನಡೆದಿದ್ದಲ್ಲಿ, ಕನ್ನಡಕ್ಕೆ ಇವತ್ತು ಇಲ್ಲದಿರುವ ಕೆಲವು ಯೋಗ್ಯತೆ ತಂದು ಕೊಡುವ ಬಗ್ಗೆ ನಿಜವಾದ ಅರ್ಥದಲ್ಲಿ ಕೆಲಸ ಶುರುವಾಗಿದೆ ಅನ್ನಬಹುದಿತ್ತು. ನಮ್ಮ ನುಡಿಗೆ ಯೋಗ್ಯತೆ ತಂದುಕೊಡದೇ ನಮ್ಮ ವೈಫಲ್ಯತೆಗೆ ಜಾಗತೀಕರಣವನ್ನು ಬೈದು ಏನು ಪ್ರಯೋಜನವಾಗದು.
ಉದ್ದಿಮೆಗಾರಿಕೆ ಹೆಚ್ಚಿಸುವುದು ಹೇಗೆ?
ಉದ್ಯಮಿ ನಾರಾಯಣ ಮೂರ್ತಿಯವರನ್ನು ಕರೆಸುತ್ತಿರುವುದದಿಂದ ಚರ್ಚಾ ಗೋಷ್ಟಿಗಳಲ್ಲಿ ಉದ್ದಿಮೆಗಾರಿಕೆಯ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಾರೆನೋ ಅಂದುಕೊಂಡಿದ್ದೆ. ಉದ್ಯಮಿಯೊಬ್ಬರು ಈ ಸಭೆಗೆ ಚಾಲನೆ ನೀಡುತ್ತಿರುವುದದಿಂದ ಉದ್ದಿಮೆಗಾರಿಕೆ, ಉದ್ಯಮಿಗಳಾಗುವುದು, ಉದ್ಯಮಗಳನ್ನು ಕಟ್ಟುವುದು ಹೀಗೆ ಉದ್ದಿಮೆಗಾರಿಕೆಯ ನಾನ ಮಝಲನ್ನು ಮುಟ್ಟುವ, ಕನ್ನಡಿಗರಲ್ಲಿ ಈ ಕೊರತೆಯನ್ನು ನೀಗಿಸುವ ಬಗ್ಗೆ ಚರ್ಚೆ ನಡೆಸುವ ಅವಕಾಶವಿತ್ತು. ಗೋಷ್ಟಿಗಳ ಪಟ್ಟಿ ನೋಡಿದಾಗ ಈ ಬಗ್ಗೆ ಗಮನ ಕೊಟ್ಟ ಹಾಗಿಲ್ಲ.
ನಾಳೆ ನಮ್ಮದಾಗಲಿ
ಕನ್ನಡವೆಂದರೆ ಬರೀ ಸಾಹಿತ್ಯ, ಸಂಗೀತ, ನಾಟಕ,ಸಿನೆಮಾ ಅನ್ನುವ ಜುಟ್ಟಿನ ಮಲ್ಲಿಗೆಗೆ ಸೀಮಿತವಾಗಿರುವಾಗ, ಅದರಲ್ಲೂ ಬದುಕಿನ ವಿದ್ಯೆಗಳನ್ನು ತರಬಹುದು, ಅದರಲ್ಲೂ ಅನ್ನ ಹುಟ್ಟಿಸಬಹುದು ಅನ್ನುವುದನ್ನು ಸಾಧಿಸಿ ತೋರಿಸುವ ಹೊಣೆಗಾರಿಕೆ ಕನ್ನಡದ ಬಗ್ಗೆ ಕನಸು ಕಾಣುವ ಎಲ್ಲ ಕನ್ನಡದ ಯುವಕರ ಮುಂದಿದೆ. ಇವತ್ತಿನ ವ್ಯವಸ್ಥೆಯನ್ನು ಅಲ್ಲಗಳೆಯದೆಲೆ ಇಂದಿನ ವ್ಯವಸ್ಥೆಯ ಸಾರವನ್ನು ಹೀರಿಕೊಂಡೇ ನಾಳೆ ಕನ್ನಡದಲ್ಲೂ ಈಗಿರುವುದಕ್ಕಿಂತಲೂ ಅದ್ಭುತವಾದ ವ್ಯವಸ್ಥೆ ಕಟ್ಟುವ ಕೆಲಸವಾಗಬೇಕಿದೆ. ಇಂದಿರುವ ವ್ಯವಸ್ಥೆಯನ್ನು ಚಿಮ್ಮುಹಲಗೆಯಾಗಿಸಿಕೊಂಡೇ ಆಗಸಕ್ಕೆ ನೆಗೆಯುವ ಕನಸು ಕಾಣಬೇಕಿದೆ. ಅದಾಗದೇ ಎಷ್ಟು ಸಮ್ಮೇಳನ, ಸಭೆ ಮಾಡಿದರೂ ಕನ್ನಡ ಮುಂದಾಗದು

ಪತ್ರಿಕಾ ಪ್ರಕಟಣೆ: ವಿಶ್ವ ಕನ್ನಡ ಸಮ್ಮೇಳನ – ೨೦೧೧

ಕನ್ನಡಿಗರ ಸಡಗರದ ಅಭಿಮಾನ ವಿಶ್ವಕನ್ನಡ ಸಮ್ಮೇಳನ. ಸಕಲ ಹೃದಯಗಳ ಕೂಡಲಸಂಗಮ ; ಬುದ್ಧಿಭಾವಗಳ ಸಂಭ್ರಮ.
೨೦೧೧ರ ಮಾರ್ಚ್ ೧೧, ೧೨ ಮತ್ತು ೧೩ರಂದು ಏರ್ಪಡಿಸುವ ವಿಶ್ವಕನ್ನಡ ಸಮ್ಮೇಳನದಲ್ಲಿ ರಾಜ್ಯದ ವಿವಿಧ ಕ್ಷೇತ್ರಗಳ ವಿದ್ವಾಂಸರನ್ನು, ಚಿಂತಕರನ್ನು ಆಹ್ವಾನ ಮಾಡಿ ವಿಚಾರ ವಿನಿಮಯಕ್ಕೆ ಮತ್ತು ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಕಲಾವಿದರನ್ನು ಆಹ್ವಾನಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ೧೫ ವೇದಿಕೆಗಳಲ್ಲಿ ಏರ್ಪಡಿಸಲಾಗುತ್ತಿದೆ.
ಉದ್ಘಾಟನೆಯ ಸಮಾರಂಭದಂದು ಬೆಳಗಾವಿಯ ಶಾಲಾ/ಕಾಲೇಜುಗಳಿಂದ ೫೦೦ ಜನ ಬಾಲಕ/ಬಾಲಕಿಯರನ್ನು ನಾಡಗೀತೆಯ ಗಾಯನಕ್ಕೆ ಸಿದ್ಧಗೊಳಿಸಲಾಗಿದೆ.
ಕಾವ್ಯನೃತ್ಯಾಂಜಲಿ ಎಂಬ ಸಮೂಹ ನೃತ್ಯ ಕಾರ್ಯಕ್ರಮಕ್ಕಾಗಿ ಬೆಳಗಾವಿ, ಧಾರವಾಡ ಮತ್ತು ಹುಬ್ಬಳ್ಳಿಯಿಂದ ೧೨೦೦ ಜನ ವಿದ್ಯಾರ್ಥಿಗಳನ್ನು ಆಯ್ದು ಸಮೂಹನೃತ್ಯಕ್ಕೆ ಖ್ಯಾತ ಕಲಾವಿದೆ ಡಾ|| ಮಾಯಾರಾವ್ ಅವರ ನಿರ್ದೇಶನದಲ್ಲಿ ತರಬೇತಿ ನೀಡಲಾಗುತ್ತಿದೆ.
ರಾಜ್ಯದ ೧೩ ಜನಪದ ಕಲಾತಂಡಗಳನ್ನು ಆಯ್ದು ೧೦೦೧ ಜನಪದ ಕಲಾವಿದರಿಂದ ಜನಪದ ಕಲಾವೈಭವ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಡಾ. ಕದ್ರಿ ಗೋಪಾಲನಾಥ್, ಡಾ. ನರಸಿಂಹಲು ವಡವಾಟಿ ಅವರಿಂದ ಜುಗಲ್‌ಬಂದಿ ಕಾರ್ಯಕ್ರಮ ; ಶ್ರೀಮತಿ ಎಂ.ಎಸ್.ಶೀಲ ತಂಡದಿಂದ ಕರ್ನಾಟಕ ಸಂಗೀತ ; ಶ್ರೀಮತಿ ಸಂಗೀತ ಕಟ್ಟಿ,  ಶ್ರೀಮತಿ ಮೌನಾ ರಾಮಚಂದ್ರ,  ಶ್ರೀ ಪಂಡಿತ್ ಪರಮೇಶ್ವರ ಹೆಗಡೆ,  ಶ್ರೀ ಅಂಬಯ್ಯ ನುಲಿ,  ಶ್ರೀಮತಿ ಅನಿತಾ ಪಾಗದ್,  ಪಂ.ಎಂ.ವೆಂಕಟೇಶ್ ಕುಮಾರ್,  ಪಂ. ವಿನಾಯಕ ತೊರವಿ, ಪಂ.ರಾಜಪ್ರಭು ದೋತ್ರೆ, ಡಾ. ಹನುಮಣ್ಣ ನಾಯಕದೊರೆ, ಪಂ. ಅನಂತ ತೇರದಾಳ್, ಶ್ರೀಮತಿ ಶಕ್ತಿಪಾಟೀಲ್, ಶ್ರೀಮತಿ ಮಾನಸಿ ಪ್ರಸಾದ್, ಶ್ರೀ ರವೀಂದ್ರ ಹಂದಿಗನೂರು, ಶ್ರೀ ಡಿ.ಕುಮಾರದಾಸ್, ಶ್ರೀ ಕೈವಲ್ಯ ಕುಮಾರ್ ಗುರುವ, ಶ್ರೀಮತಿ ಶಾಂತಲಾ ವಟ್ಟಂ, ಶ್ರೀ ಎಂ.ಎಸ್.ಕಾಮತ್, ಮುಂತಾದ ಹಿರಿಯ ಕಲಾವಿದರಿಂದ ಶಾಸ್ತ್ರೀಯ ಸಂಗೀತ, ವಚನ ಮತ್ತು ದಾಸರಪದಗಾಯನ, ಗಜಲ್ ಕಾರ್ಯಕ್ರಮಗಳನ್ನು ವಿವಿಧ ವೇದಿಕೆಗಳಲ್ಲಿ ಏರ್ಪಡಿಸಲಾಗಿದೆ.
ಶ್ರೀಮತಿ ಬಿ.ಜಯಶ್ರೀ, ಶ್ರೀಮತಿ ಸುಭದ್ರಮ್ಮ ಮನ್ಸೂರ್, ಶ್ರೀ ಶಾಮಿತ್ ಸಾಹೇಬ್ ಲಾಟಿ ಮತ್ತು ತಂಡ, ಶ್ರೀ ಲಕ್ಷ್ಮಣದಾಸ್ ಮತ್ತು ತಂಡ, ಸಮುದಾಯ ತಂಡ, ಮುಂತಾದವರಿಂದ ರಂಗಗೀತೆಗಳು ;
ಡಾ. ಮಾಯಾರಾವ್ ತಂಡ, ಶ್ರೀಮತಿ ನಿರುಪಮ ರಾಜೇಂದ್ರ ತಂಡ, ಪ್ರಸಿದ್ಧ ಫೌಂಡೇಷನ್, ನವದೆಹಲಿ, ಪ್ರಭಾತ್ ಕಲಾವಿದರು, ಶ್ರೀಮತಿ ಶುಭಾ ಧನಂಜಯ ತಂಡ, ಮಂಗಳೂರಿನ ಸನಾತನ ನಾಟ್ಯಾಲಯ, ಶ್ರೀಮತಿ ಉಷಾದಾತಾರ್ ಅವರ ತಂಡ, ಶ್ರೀಮತಿ ಅನುರಾಧ ವಿಕ್ರಾಂತ್ ಅವರ ತಂಡ, ಶ್ರೀಮತಿ ಕೃಪಾ ಪಡಕೆ ಅವರ ತಂಡ, ಸಪ್ತಸ್ವರ ಆರ್ಟ್ ಅಂಡ್ ಕ್ರಿಯೇಷನ್ಸ್ ಅವರ ತಂಡ, ಭ್ರಮರಿ ಜ್ಯೋತಿ ಪಟ್ಟಭಿರಾಮನ್ ಅವರ ತಂಡ, ನೂಪುರ ಫೈನ್ ಆರ್ಟ್ಸ್ ತಂಡಗಳಿಂದ ನೃತ್ಯರೂಪಕಗಳನ್ನು ;
ಖ್ಯಾತ ಕಲಾವಿದರಾದ ವಿದ್ವಾನ್ ಅನೂರು ಅನಂತಕೃಷ್ಣಶರ್ಮ, ಮತ್ತು ಪಂ.ಪ್ರವೀಣ್ ಗೋಡ್ಕಿಂಡಿ ಅವರಿಂದ ಸ್ವರಲಯ ಸಮ್ಮೇಳನ ;
ಡಾ. ಸುಮಾ ಸುಧೀಂದ್ರ ಅವರಿಂದ ವಾದ್ಯಮೇಳ ;
ಶ್ರೀ ಶಿವಲಿಂಗಪ್ಪ ರಾಜಾಪೂರ ಹಾಗೂ ಇತರರಿಂದ ಬಾನ್ಸುರಿ ವಾದನ ;
ಮಂಗಳೂರು ಶ್ರೀಮತಿ ಲಾವಣ್ಯ ಮತ್ತು ಶ್ರೀಮತಿ ಸುಬ್ಬಲಕ್ಷ್ಮಿ ಅವರಿಂದ ಸ್ಯಾಕ್ಸೋಫೋನ್ ;
ಡಾ. ಸುಪರ್ಣ ರವಿಶಂಕರ್‌ತಂಡದಿಂದ ಪಂಚವಾದ್ಯಗಳ ನಾದಮೇಳ ;
ಶ್ರೀ ಪ್ರಕಾಶ್ ಸೊಂಟಕ್ಕಿ ಗಿಟಾರ್‌ವಾದನ ;
ಶ್ರೀ ಡಿ.ಎಸ್.ಚಾಳೇಕರ್ ಅವರಿಂದ ಪಂಚಸಿತಾರ್ ವಾದನ ;
ಶ್ರೀ ರಾಜಗೋಪಾಲ ಕಲ್ಲೂರಕರ ಮತ್ತು ಅವರ ತಂಡದಿಂದ ತಬಲ ತರಂಗ ;
ರಾಷ್ಟ್ರಮಟ್ಟದಿಂದ ಡಾ. ಬಾಲಮುರಳಿಕೃಷ್ಣ ಅವರಿಂದ ಕರ್ನಾಟಕ ಸಂಗೀತ ;
ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಂದ ಗೀತಸೌರಭ ;
ಶ್ರೀ ಶಿವಮಣಿ ತಂಡದವರಿಂದ ವಾದ್ಯಲಹರಿ ;
ಶ್ರೀ ವಿಜಯಪ್ರಕಾಶ್ ತಂಡದವರಿಂದ ಸಂಗೀತ ಸಂಜೆ ;
ಒರಿಸ್ಸಾ ತಂಡದಿಂದ ಗೋಟಿ ಪೂವಾ ; ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ
ಶ್ರೀ ಬಾನಂದೂರು ಕೆಂಪಯ್ಯ, ಅಪ್ಪಗೆರೆ ತಿಮ್ಮರಾಜು, ಜನಾರ್ಧನ, ಪಿಚ್ಚಳ್ಳಿ ಶ್ರೀನಿವಾಸ್, ಜೋಗಿಲ ಸಿದ್ಧರಾಜು, ಸಿ.ಎಂ.ನರಸಿಂಹಮೂರ್ತಿ, ಬಸವಲಿಂಗಯ್ಯ ಹಿರೇಮಠ್, ವೇಮಗಲ್ ನಾರಾಯಣಸ್ವಾಮಿ,  ರಾಮು ಮೂಲಗಿ, ತಂಬೂರಿ ರಾಜಮ್ಮ, ಮರಿಸಿದ್ದಮ್ಮ, ರಾಧಾಬಾಯಿ ಮಾದರ್, ಜಯಂತಿ ಶ್ರೀನಿವಾಸ್, ಮೈಸೂರು ಮಹಾದೇವಪ್ಪ, ವಿನುತಾ ಬೂದಾಳ್, ಕೆ.ಯುವರಾಜ್, ವೀರೇಶ್ ಬಳ್ಳಾರಿ, ಶ್ರೀ ಸೋಬಾನೆ ಕೃಷ್ಣೇಗೌಡ ಮಳವಳ್ಳಿ, ಮಹದೇವ್ ಯುಗಧರ್ಮ ರಾಮಣ್ಣ,  ಗಣಪಗೌಡ, ಮುಂತಾದ ಹಿರಿಯ/ಕಿರಿಯ ಕಲಾವಿದರಿಂದ ಜಾನಪದ ಗೀತೆಗಳ ಗಾಯನ ಹಾಗೂ ಜಾನಪದ ನೃತ್ಯ ವೈಭವ ;
ಡಾ.ಶಿವಮೊಗ್ಗ ಸುಬ್ಬಣ್ಣ, ಬಿ.ಕೆ.ಸುಮಿತ್ರ, ಈಶ್ವರಪ್ಪ ಮಿಣಜಿ, ವೈ.ಕೆ.ಮುದ್ದುಕೃಷ್ಣ, ರತ್ನಮಾಲಾ ಪ್ರಕಾಶ್, ಮಾಲತಿ ಶರ್ಮ, ರಮೇಶ್ಚಂದ್ರ, ಮಾಲಾಶ್ರೀ ಕಣವಿ, ಪಿ.ಎ. ಮಂಗಳ, ದಿವ್ಯಾರಾಘವನ್, ಯಶವಂತ ಹಳಬಂಡಿ, ಫಲ್ಗುಣ, ಸಂಗೀತ ಕಾಖಂಡಕಿ, ಲತಾ ಜಹಾಗೀರ್‌ದಾರ್, ಉದಯ ಅಂಕೋಲ, ಹಿಂದೂ ವಿಶ್ವನಾಥ್, ಹೆಚ್.ಆರ್.ಲೀಲಾವತಿ, ಶಶಿಧರ್ ಕೋಟೆ, ರವಿಶಂಕರ್, ಚಂದ್ರಿಕಾ ಗುರುರಾಜ್, ಅರ್ಚನಾ ಉಡುಪ, ಜ್ಯೋತಿರವಿಪ್ರಕಾಶ್, ಕಸ್ತೂರಿ ಶಂಕರ್, ಉಪಾಸನ ಮೋಹನ್, ಕಿಕ್ಕೇರಿ ಕೃಷ್ಣಮೂರ್ತಿ, ಸ್ನೇಹ ಹಂಪಿಹೊಳಿ, ನಾಗಚಂದ್ರಿಕಾ ಭಟ್, ಪ್ರೇಮಲತಾ ದಿವಾಕರ, ಮೃತ್ಯುಂಜಯ ದೊಡ್ಡವಾಡಿ, ವಿ.ರಾಜು, ರಮಾ ಅರವಿಂದ್, ನಾರಾಯಣರಾವ್ ಮಾನೆ, ಅಲ್ಲದೆ ಯುವ ಪ್ರತಿಭೆಗಳಾದ ಸಿಂಚನಾ, ಆಕಾಂಕ್ಷ, ಎಂ.ಎಸ್.ಮೀನಾಕ್ಷಿ, ಸೂಗೂರೇಶ್ ಅಸ್ಕಿಹಾಳ, ಮುಂತಾದ ಯುವಪ್ರತಿಭೆಗಳನ್ನೊಳಗೊಂಡ ಸುಗಮ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ;
ವಿಶೇಷ ಆಕರ್ಷಣೆಯಾಗಿ ಚಲನಚಿತ್ರ ಕಲಾವಿದರು ಹಾಗೂ ಕಿರುತೆರೆಯ ಕಲಾವಿದರು ರಸಮಂಜರಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ ;
ಇದಲ್ಲದೆ ಕರ್ನಾಟಕ ಪ್ರಗತಿಯನ್ನು ಕುರಿತಂತೆ ವಿಶೇಷವಾಗಿ ಲೇಸರ್ ಶೋ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ;
ಮೂರು ವೇದಿಕೆಗಳಲ್ಲಿ ರಾಜ್ಯದ ಎಲ್ಲಾ ಕಡೆಯಿಂದ ೫೦ ನಾಟಕಗಳನ್ನು (ಹವ್ಯಾಸಿ, ವೃತ್ತಿ, ಯಕ್ಷಗಾನ, ಬಯಲಾಟ, ಪ್ರಸಂಗಗಳು ಸೇರಿ) ಏರ್ಪಡಿಸಲಾಗಿದೆ ; ಬೀದಿರಂಗ, ಯುವರಂಗ, ವೃತ್ತಿನಾಟಕದ ತುಣುಕುಗಳ ೧೫೦ ಪ್ರದರ್ಶನಗಳಿವೆ ;
ವಾಷಿಂಗ್ಟನ್ ಡಿ.ಸಿ.ಯ ಕಾವೇರಿ ಕನ್ನಡ ಸಂಘದವರು ಯಯಾತಿ ನಾಟಕವನ್ನು ;
ದುಬಾಯಿ ರಂಗಸಿರಿ ಅವರು ಒಡಕಲು ಬಿಂಬ ನಾಟಕವನ್ನು ;
ದೆಹಲಿ ಕನ್ನಡ ಸಂಘದವರು ನಾ ಸತ್ತಿಲ್ಲ ;
ಮುಂಬೈಯ ಕರ್ನಾಟಕ ಸಂಘ ಮತ್ತು ಮೈಸೂರು ಅಸೋಸಿಯೇಷನ್‌ರವರು ಸಾದರಪಡಿಸುವ ನಾಟಕಗಳನ್ನು ;
ಮುಂಬೈನಿಂದ ಒಂದು ಯಕ್ಷಗಾನ ತಂಡವು ಸಮ್ಮೇಳನದಲ್ಲಿ ಕಾರ್ಯಕ್ರಮ ನೀಡಲು ಭಾಗವಹಿಸುತ್ತಿವೆ;
ಗೋಷ್ಠಿಗಳು
ಪ್ರೊ.ಕೆ.ಎಸ್.ನಿಸಾರ್‌ಅಹಮದ್ ಉದ್ಘಾಟಿಸಿ, ಡಾ. ಚನ್ನವೀರಕಣವಿಯವರ ಅಧ್ಯಕ್ಷತೆಯಲ್ಲಿ ೨೯ ಜನ ಕವಿಗಳನ್ನೊಳಗೊಂಡ ಸಿರಿಗನ್ನಡ, ಕವಿಗೋಷ್ಠಿಯು ; ಶ್ರೀ ಎಚ್.ಎಸ್.ಶಿವಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ಕನ್ನಡವು ಸೇರಿದಂತೆ ತೆಲುಗು, ಮರಾಠಿ, ತುಳು, ತಮಿಳು, ಕೊಂಕಣಿ, ಬ್ಯಾರಿ, ಉರ್ದು, ಹಿಂದಿ ಕವಿಗಳು ಭಾಗವಹಿಸುವ ಬಹುಭಾಷಾ ಕವಿಗೋಷ್ಠಿಯು ನಡೆಯಲಿದೆ ;
ಪ್ರೊ. ಅ.ರಾ.ಮಿತ್ರ ಅವರ ಅಧ್ಯಕ್ಷತೆಯಲ್ಲಿ ನಗುನಗುತಾ ಬಂದೇವಾ ಎಂಬ ಹಾಸ್ಯ ಗೋಷ್ಠಿಯನ್ನು ಏರ್ಪಡಿಸಲಾಗಿದೆ ;
ಸಾಂಸ್ಕೃತಿಕ ಕರ್ನಾಟಕ ; ಸಮಕಾಲೀನ ಜಗತ್ತು ಮತ್ತು ಮಹಿಳೆ ; ಹೊರನಾಡು ಮತ್ತು ಹೊರದೇಶದ ಕನ್ನಡಿಗರು ; ಗಡಿನಾಡ ಕನ್ನಡಿಗರು ; ಕನ್ನಡ ಆಡಳಿತ ಭಾಷೆ ; ಜಾಗತೀಕರಣ ಕರ್ನಾಟಕ ; ಜ್ಞಾನ ವಿಜ್ಞಾನ ತಂತ್ರಜ್ಞಾನ ಕರ್ನಾಟಕ ; ಕೃಷಿ ಸಾಧನೆ ಸವಾಲು ; ಸಮೂಹ ಮಾಧ್ಯಮ ಸಾಮಾಜಿಕ ಕಾಳಜಿ ; ಕನಸಿನ ಕರ್ನಾಟಕ ; ದೇಸಿ ಚಿಂತನೆ ; ದಲಿತ ಸಂಸ್ಕೃತಿ ಅನನ್ಯತೆ ; ಎಂಬ ಗೋಷ್ಠಿಗಳ ಜೊತೆಗೆ ಕನ್ನಡ ಪುಸ್ತಕೋದ್ಯಮ ; ಕನ್ನಡ ಚಿತ್ರೋದ್ಯಮ ಕುರಿತ ವಿಚಾರಸಂಕಿರಣಗಳು ಹಾಗೂ ಮಕ್ಕಳಿಗಾಗಿ ವಿಶೇಷವಾದ ಗೋಷ್ಠಿಗಳನ್ನು ಏರ್ಪಡಿಸಲಾಗಿದೆ ;
ಈ ಗೋಷ್ಠಿಗಳಲ್ಲಿ ಸುಮಾರು ೩೩೧ಕ್ಕೂ ಹೆಚ್ಚು ವಿದ್ವಾಂಸರು, ಕವಿಗಳು, ಸಂಸ್ಕೃತಿ ಚಿಂತಕರು ಭಾಗವಹಿಸುತ್ತಿದ್ದಾರೆ.
ಇದಲ್ಲದೆ ೪೦೦ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳು ; ೧೫೦೦೦ ಅಮೂಲ್ಯ ಕನ್ನಡ ಗ್ರಂಥಗಳ ಪ್ರದರ್ಶನ ; ವಿವಿಧ ಇಲಾಖೆಗಳಿಂದ ಪ್ರಗತಿ ದರ್ಶನ ಮಳಿಗೆಗಳು ; ಶಿಲ್ಪಕಲೆ ; ಚಿತ್ರಕಲೆ ಕುರಿತ ಪ್ರಾತ್ಯಕ್ಷಿಕ ಶಿಬಿರಗಳು ; ರಂಗಭೂಮಿ ; ಕನ್ನಡ ಚಿತ್ರೋದ್ಯಮ ; ಜಾನಪದ ಕ್ಷೇತ್ರ ಕುರಿತಂತೆ ವಸ್ತುಪ್ರದರ್ಶನ ; ಅಪರೂಪದ ದಾಖಲೆಗಳು ; ಅಂಚೆಚೀಟಿ ಹಾಗೂ ನಾಣ್ಯಗಳ ಕುರಿತ ಪ್ರದರ್ಶನ ಏರ್ಪಡಿಸಲಾಗಿದೆ ;
ಒಟ್ಟಾರೆ ೫೫೦೦ ಜನ ಜನಪದ ಕಲಾವಿದರು, ಸಂಗೀತ ನೃತ್ಯ ಮುಂತಾದ ಕಲಾವಿದರು ಭಾಗವಹಿಸುತ್ತಿದ್ದಾರೆ.
ಕನ್ನಡತೇರು – ಮೆರವಣಿಗೆ
ವಿಶ್ವಕನ್ನಡ ಸಮ್ಮೇಳನದ ಅಂಗವಾಗಿ ಪ್ರತಿಜಿಲ್ಲೆಯಿಂದ ವಿಶ್ವಕನ್ನಡ ತೇರು ಹೊರಟು ಬೆಳಗಾವಿಗೆ ಮಾರ್ಚ್ ೧೦ರಂದು ಸೇರಲಿವೆ. ೧೧ ರಂದು ಆಕರ್ಷಕವಾದ ಬೃಹತ್ ಮೆರವಣಿಗೆಯನ್ನು ಬೆಳಗಾವಿ ನಗರದಲ್ಲಿ ಏರ್ಪಡಿಸಲಾಗಿದೆ.
ಪುಸ್ತಕ ಬಿಡುಗಡೆ
ವಿಶ್ವಕನ್ನಡ ಸಮ್ಮೇಳನದ ಅಂಗವಾಗಿ ೧೦೧ ಕನ್ನಡ ಗ್ರಂಥಗಳು, ಸಂದರ್ಭ ಗ್ರಂಥ ಪುನರಾವಲೋಕನ ಹಾಗೂ ೩೬ ಜಾನಪದ ಯಕ್ಷಗಾನ ಗ್ರಂಥಗಳು ಬಿಡುಗಡೆಯಾಗಲಿವೆ.

ವಿಶ್ವ ಕನ್ನಡ ಸಮ್ಮೇಳನ:ಯೋಗೀಂದ್ರ ಬರೆದ ಹೊರದೇಶೀ ಯೋಚನೆಗಳು

http://www.belgaum.nic.in/kannada_s_Sam/map.html

http://www.belgaum.nic.in/kannada_s_Sam/map.html?sms_ss=blogger&at_xt=4d79ab1e02c94bd2%2C0

ವಿಶ್ವ ಕನ್ನಡ ಸಮ್ಮೇಳನ 2011 ರ ವಸತಿ ಕುರಿತಾದ ಮಾಹಿತಿ

 ವಸತಿ ಕುರಿತಾದ ವಿವರಗಳಿಗೆ ಭೇಟಿ ನೀಡಿ,
ಸ್ವಾಗತ ಭವನ, ಕುಮಾರ ಗಂಧರ್ವ ರಂಗ ಮಂದಿರದ ಹಿಂದುಗಡೆ,
ಮಹಾನಗರ ಪಾಲಿಕೆ ಕಟ್ಟಡದ  ಎದುರುಗಡೆ,
ಜಿಲ್ಲಾ ಪೋಲೀಸ ಅಧೀಕ್ಷಕರ ಕಚೇರಿ ರಸ್ತೆ, ಬೆಳಗಾವಿ.
ಮಾಹಿತಿ ವಿಚಾರಣೆಗಾಗಿ ಮೊಬೈಲ ಸಂದೇಶ SMS “VKS NAME”
ನಂ. 9220092200 ಗೆ ಕಳುಹಿಸಿರಿ .

ವಿಶ್ವ ಕನ್ನಡ ಸಮ್ಮೇಳನ ಪುರುಷ ಪ್ರಧಾನವೇ?

ರಾಜ್ಯದ ಗಡಿನಾಡು ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಯುತ್ತಿರುವಾಗ ಕವಿಗಳು, ಕನ್ನಡಪರ ಚಿಂತಕರ ಬಗ್ಗೆ ನೆನಪು ಮಾಡಿಕೊಳ್ಳುವುದು ಸಹಜ, ನಾಡಿನಲ್ಲಿ ಮಹಿಳಾ ಬರಹಗಾರ್ತಿಯರ ಬಗ್ಗೆ 12ನೇ ಶತಮಾನದಲ್ಲೇ ನಾಡಿನಲ್ಲಿ ಎಂತಹ ಗೌರವ ನೀಡಲಾಗಿತ್ತು ಎನ್ನುವ ಬಗ್ಗೆ ಗಮನ ನೀಡಿದಾಗ, ಇಂದಿನ ಆಧುನಿಕ ಯುಗದಲ್ಲೂ ಹೇಗೆ ಮಹಿಳೆ ಮತ್ತೊಮ್ಮೆ ಮೂಲೆಗುಂಪಾಗಿದ್ದಾಳೆ ಎನ್ನುವ ಬಗ್ಗೆ ಎಲ್ಲರೂ ಗಮನಿಸಬೇಕಿದೆ.
 
ಹಣವಿದ್ದವರೂ ಏನನ್ನಾದರೂ ಮಾಡಬಹುದು ಎನ್ನುವುದು ಇಂದಿನ ದಿನಮಾನದ ವಿಶೇಷ. ಜನಪರ ಕಾಳಜಿ ಇಲ್ಲದಿದ್ದರೂ, ಹಣವಿದ್ದವರು ರಾಜಕೀಯ ಮಾಡಬಹುದು ಎನ್ನುವ ಕಾರಣಕ್ಕಾಗಿ ಇಂದು ರಾಜ್ಯದ ಗಣಿ ಉದ್ಯಮಿಗಳು ರಾಜಕೀಯ ಪ್ರವೇಶ ಮಾಡಿದ್ದಾರೆ. ಕ್ರೀಡಾಪಟುವಲ್ಲದಿದ್ದರೂ ಕ್ರೀಡಾ ಕ್ಷೇತ್ರದಲ್ಲಿ ಮಲ್ಯ, ಮಹಾರಾಜರು ಪಾಲ್ಗೊಂಡಿದ್ದಾರೆ. ಮಾಧ್ಯಮ ಕ್ಷೇತ್ರಗಳು ಹಣವಂತರ ಪಾಲಾಗಿವೆ. ಸರ್ವಂ ಧನ ಮಯಂ ಎನ್ನುವಾಗ ಸಮ್ಮೇಳನ ಉದ್ಘಾಟನೆ ಉದ್ಯಮಿಯ ಪಾಲಾಗಿರುವುದು ಸಹಜವೇ ಎನ್ನಬಹುದು.
 
ಸಾಪ್ಟವೇರ್ ಇಂಜಿನಿಯರ್ ಆಗುವುದಕ್ಕೆ ಎಂ.ಟೆಕ್ ಆಗಿರಬೇಕು, ವೈದ್ಯರಾಗಲು ಎಂ.ಬಿ.ಬಿ.ಎಸ್. ಓದಿರಬೇಕು. ಆದರೆ ಸಾಹಿತಿಯಾಗಲು ಸ್ನಾತಕೋತ್ತರ ಪದವಿ ಪಡೆಯಬೇಕು ಎಂದೇನಿಲ್ಲ, ಬದಲಿಗೆ ಕನ್ನಡ ಪರ ಮನಸ್ಸಿರಬೇಕು, ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿ, ಪರಂಪರೆ ಬಗ್ಗೆ ಸಾಕಷ್ಟು ವಿಷಯ ತಿಳಿದಿರಬೇಕು, ಬರವಣಿಗೆಯ ಅಲ್ಪಜ್ಞಾನವಾದರೂ ಇರುವುದು ಅಗತ್ಯವಾಗಿದೆ. ಅಂದರೆ ಸಾಹಿತ್ಯಕ್ಕೆ ಸಾಂಪ್ರದಾಯಿಕ ಶಿಕ್ಷಣಕ್ಕಿಂತ ನಾಡಿನ ಸಂಸ್ಕೃತಿಯನ್ನರಿತ ಮನಸ್ಸಿರಬೇಕು.
 
ಇನ್ಪೋಸಿಸ್ ನಾರಾಯಣಮೂರ್ತಿ ಕನ್ನಡಿಗರು ಇವರು ವಿಶ್ವಮಟ್ಟದಲ್ಲಿ ಉದ್ದಿಮೆ ಕಟ್ಟಿ ಬೆಳೆಸಿದವರು, ನಾಡಿನ ಕನ್ನಡ ಕೆಲಸಗಳಿಗೆ ಸಾಕಷ್ಟು ಹಣ ನೀಡಿರುವ ದಾನಿಗಳು ಎನ್ನುವುದು ಇವರು ಸಮ್ಮೇಳನ ಉದ್ಘಾಟಿಸಲು ಇರುವ ಅರ್ಹತೆ. ಆದರೂ ಇವರನ್ನು ಗುರುತಿಸುವಾಗ ನಮಗ್ಯಾರಿಗೂ ಇಲ್ಲೊಂದು ಮಹಿಳೆಗೆ ಅನ್ಯಾಯವಾಗುತ್ತಿದೆ ಎನ್ನುವ ಬಗ್ಗೆ ಪ್ರಜ್ಞೆಯೇ ಮೂಡುತ್ತಿಲ್ಲ ಎನ್ನುವುದು ಕಳವಳದ ಸಂಗತಿ.
 
ಕುಟುಂಬದ ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲೂ ವಿಧ್ಯೆಯನ್ನು ಕಲಿತು, ಸಾಮಾಜಿಕವಾಗಿ ಮಹಿಳೆಗೆ ಮಾನ್ಯತೆ ಸಿಗದಿರುವ ದಿನಗಳಲ್ಲೂ ಮಹಿಳೆಯಾದರೂ ಛಲಬಿಡದೇ ಉದ್ಯೋಗ ಕೈಗೊಂಡು ಸಾಧನೆ ಮಾಡಿರುವ ಸುಧಾಮೂರ್ತಿ ಸರ್ಕಾರದ ಕಣ್ಣಿಗೆ ಕಾಣಲಿಲ್ಲವೇ? ನಾಡಿನ ಹೆಮ್ಮೆಯ ಉದ್ಯಮ ಇನ್ಪೋಸಿಸ್ ನಲ್ಲಿ ಕನ್ನಡ ಕಂಪು ಹರಡಲು ಕಾರಣರಾರು ಎನ್ನುವ ಬಗ್ಗೆ ಅವಲೋಕನ ಮಾಡುವುದು ಅಗತ್ಯವಾಗಿದೆ.
 
ಕನ್ನಡದ ಹಿಂದಿನ ಕಾಲದ ಲಿಪಿಗಳ ಅಧ್ಯಯನ ಕುರಿತು ಕಲಿತಿರುವ, ತಮ್ಮ ಬಿಡುವಿನ ವೇಳೆಯಲ್ಲಿ ನಾಡಿನ ವಿದ್ಯಾರ್ಥಿಗಳಿಗೆ ಕನ್ನಡ ಪರವಾದ, ಸಂಸ್ಕೃತಿಯ ಪಾಠ ಮಾಡಿರುವ, ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಬಸವಶ್ರೀ ಪ್ರಶಸ್ತಿ ಪಡೆದಿರುವ, ಹಲವಾರು ಕನ್ನಡ ಪುಸ್ತಕ ಬರೆದಿರುವ ಸುಧಾಮೂರ್ತಿ ನಿಜವಾದ ಆಧುನಿಕ ಮಹಿಳೆ ಸ್ಥಾನದಲ್ಲಿ ನಿಲ್ಲುವಂತಹವರಲ್ಲವೇ? ಎನ್ನುವುದನ್ನು ನಾವೆಲ್ಲಾ ಪ್ರಶ್ನಿಸಿಕೊಳ್ಳಬೇಕಿದೆ.
 
ಪುರುಷರಿಗಿಂತ ಮಹಿಳೆಯರು ಕಡಿಮೆಯಲ್ಲ ಎಂದು ಸಾಧನೆ ಮೂಲಕ ತೋರ್ಪಡಿಸಿರುವ ಇಂದಿನ ಕಾಲದಲ್ಲೂ ಸುಧಾಮೂರ್ತಿ ವಿಶ್ವ ಕನ್ನಡ ಸಮ್ಮೇಳನ ಉದ್ಘಾಟನೆಯ ಯೋಗದಿಂದ ವಂಚಿತರಾಗಿಲ್ಲವೇ? ಕುಟುಂಬದ ಯಶಸ್ಸು ಯಜಮಾನನಿಗೆ ಸಲ್ಲಬೇಕು ಎನ್ನುವ ಮನೋಭಾವ ಇಂದಿಗೂ ಜಾರಿಯಲ್ಲಿದೆಯೇ? ಅಥವಾ ಸುಧಾಮೂರ್ತಿಯವರು ಇಂತಹ ತ್ಯಾಗ ಮನಸ್ಥಿತಿಯ ಮೂಲಕ ಮತ್ತಷ್ಟು ಎತ್ತರಕ್ಕೆ ಏರಲಿದ್ದಾರೆಯೇ? ಎನ್ನುವ ಪ್ರಶ್ನೆ ನನ್ನನ್ನು ಕಾಡುತ್ತಿದೆ.
 
ಮಾಧ್ಯಮಗಳು ಸಮ್ಮೇಳನ ಉದ್ಘಾಟನೆಯ ವ್ಯಕ್ತಿ ಕುರಿತು ಚರ್ಚೆ ನಡೆಸುತ್ತಿವೆ, ಇದೇ ಮಾಧ್ಯಮಗಳಲ್ಲಿ ಹಿಂದೆ ಸುಧಾಮೂರ್ತಿಯವರ ಕನ್ನಡ ಪರ ಮನಸ್ಸಿನ ಬಗ್ಗೆ, ಅವರು ಸವೆಸಿದ ಕಷ್ಟದ ದಿನಗಳ ಬಗ್ಗೆ, ಅವರು ಬರೆದಿರುವ ಕನ್ನಡ ಪುಸ್ತಕಗಳು, ಕನ್ನಡ ಶಾಲೆಗಾಗಿ ಇನ್ಪೋಸಿಸ್ ಪ್ರತಿಷ್ಠಾನದ ಮೂಲಕ ನೀಡಿರುವ ಕೊಡುಗೆಗಳಿಗೆ ಇವರಲ್ಲಿರುವ ಕನ್ನಡಪರ ಮನಸ್ಸೇ ಕಾರಣವೆಂದು ಹೇಳಲಾಗಿತ್ತು, ಆದರೆ ಇಂದು ಅವರಿಗಾಗುತ್ತಿರುವ ವಂಚನೆ ಬಗ್ಗೆ ಚಕಾರವೆತ್ತುತ್ತಿಲ್ಲವೇಕೆ?
 
ಕನ್ನಡದ ಕವಯಿತ್ರಿ ಅಕ್ಕಮಹಾದೇವಿ, ಮುಕ್ತಾಯಕ್ಕ, ನಂಬಿಯಕ್ಕ, ಗೊಗ್ಗವ್ವೆ, ದೋಸೆ ಪಿಟ್ಟವ್ವೆ, ಹಿರೇಜಂಬೂರು ಸತ್ಯಕ್ಕ ಸೇರಿದಂತೆ ಹಲವರು ತಮ್ಮ ಸರಳ ಜೀವನದೊಂದಿಗೆ ಅನುಭವ ಸಾಹಿತ್ಯ ರಚನೆ ಮಾಡಿದವರು ಇಂತಹವರಿಗೆ ಅನುಭವ ಮಂಟಪದಲ್ಲಿ ವಿಶೇಷ ಸ್ಥಾನ ನೀಡಿ ಗೌರವಿಸಿರುವುದು ನಾಡಿನ ಹೆಮ್ಮೆಯ ಸಂಗತಿಗಳಲ್ಲೊಂದು. ಮಹಿಳೆಯರ ಶಿಕ್ಷಣ ಕಷ್ಟ ಎನ್ನುವ ಕಾಲದಲ್ಲಿ ತಾಂತ್ರಿಕ ಶಿಕ್ಷಣ ಪಡೆದಿರುವ, ಕೌಟುಂಬಿಕ ಜೀವನದಲ್ಲೂ ಮನೆ, ಕಚೇರಿಯಲ್ಲಿ ಕೆಲಸ ಮಾಡಿ, ಸಾಹಿತ್ಯ ಕ್ಷೇತ್ರದಲ್ಲೂ ಗುರುತಿಸಿ ಕೊಂಡಿರುವ ಸುಧಾಮೂರ್ತಿಯವರು ಇಂದಿನ ಆಧುನಿಕ ಜಗತ್ತಿನ ಮಾದರಿ ಮಹಿಳೆಯಾಗಿ ಕಾಣುತ್ತಿಲ್ಲವೇ?
 
ವಿಶ್ವ ಕನ್ನಡ ಸಮ್ಮೇಳನ ಉದ್ಘಾಟನೆ ಭಾಗ್ಯ ನಿಜವಾಗಿ ಸಿಗಬೇಕಿರುವುದು ಸುಧಾಮೂರ್ತಿಯವರಿಗೆ, ಆದರೆ ಹಣ ಪ್ರಧಾನ, ಪುರುಷ ಪ್ರಧಾನ ವ್ಯವಸ್ಥೆ ಮತ್ತೊಮ್ಮೆ ಮಹಿಳೆಗೆ ವಂಚನೆ ಮಾಡುತ್ತಿದೆಯೇ ಎನ್ನುವ ಪ್ರಶ್ನೆ ನನಗೆ ಪದೇ ಪದೇ ಕಾಡುತ್ತಿದೆ.
 
-ಚಂದ್ರಶೇಖರ ಮಠದ, ಶಿಕಾರಿಪುರ.
chandru27pvr@gmail.com

ವಿಶ್ವ ಕನ್ನಡ ಸಮ್ಮೇಳನ ಮತ್ತು ಕನ್ನಡಿಗರ ಏಳಿಗೆ

ವಿಶ್ವ ಕನ್ನಡ ಸಮ್ಮೇಳನ ಮತ್ತು ಕನ್ನಡಿಗರ ಏಳಿಗೆ

100 kannada cinema artists for VKS

100 kannada cinema artists for VKS

Chariot to spread awareness at Vishwa Kannada Sammelan

Chariot to spread awareness at Vishwa Kannada Sammelan

The Hindu : News / National : Vishwa Kannada Sammelan begins today

The Hindu : News / National : Vishwa Kannada Sammelan begins today