ಬೆಂಗಳೂರಿನಲ್ಲಿ ಫೆಬ್ರುವರಿ ೪,೫,೬ ರಂದು ನಡೆದ ೭೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಾಧಕ ಭಾದಕಗಳ ದೂರದೃಷ್ಟಿಯ ಅವಲೋಕನಾ ಲೇಖನ ಇದು. ಪಬ್ಬು, ಬಾರ್ ಗಳ ಭರಾಟೆಯಂಥ ನಿತ್ಯ ಉತ್ಸವಗಳ ನಗರಿಯಲ್ಲಿ ಅಕ್ಷರ ಜಾತ್ರೆ ಯಶಸ್ವಿಯಾದದ್ದು ಕನ್ನಡದ ಮಟ್ಟಿಗೆ ಆರೋಗ್ಯಕರ ಬೆಳವಣಿಗೆ. ಆದರೆ ಯಶಸ್ವೀ ಎಂಬುದು ಯಾವ ಅರ್ಥದಲ್ಲಿ ಅವಲೋಕಿಸಬಹುದು? ೭೦೦೦೦ ದಿಂದ ೧೦೦೦೦೦ ಜನ ಇದಕ್ಕೆ ಸಾಕ್ಷಿಯಾದರು, ಇಂದಿನ ಯಾಂತ್ರಿಕ ಜೀವನದಲ್ಲಿ ಜನರನ್ನು ಸೇರಿಸುವುದು ರಾಜಕೀಯ ಪರಿಭಾಷೆಯಾಗಿಬಿಟ್ಟಿದೆ. ಇರಲಿ, ಸಾಹಿತ್ಯ ಸಮ್ಮೇಳನಗಳ ಇತಿಹಾಸ ಏನಿರಬಹುದು? ಇವುಗಳ ಕೊಡುಗೆ ಕನ್ನಡ ಸಾಹಿತ್ಯಕ್ಕೆ, ಕನ್ನಡ ನಾಡು ನುಡಿಗೆ ಕೊಡುಗೆ ಯಾವ ರೀತಿಯದು?
೧೯೧೫ ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಉದಯ. ಆಗ ಮೇರು ಬರಹಗಾರರಿದ್ದರು, ಕನ್ನಡವನ್ನು ತಮ್ಮ ಉಸಿರಾಗಿಸಿಕೊಂಡವರಿದ್ದರು. ೧೯೩೨ರ ಮಡಿಕೇರಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಡಿ.ವಿ.ಜಿ.ಯವರು ಮಂಡಿಸಿದ ವಿಷಯಗಳು, ಕರ್ನಾಟಕದ ಏಕೀಕರಣ ಚಳುವಳಿಯ ಸ್ವರೂಪವನ್ನೇ ಬದಲಾಯಿಸಿದವು. ೧೯೪೮ರಲ್ಲಿ ಬೇಂದ್ರೆ, "ಹಕ್ಕಿ ಹಾರುತಿದೆ ನೋಡಿದಿರಾ", ಎಂದಾಗ ವೇದಿಕೆ ಮುಂದಿದ್ದ ಮೂವತ್ತು ಸಾವಿರ ಜನ ತಲೆಯೆತ್ತಿ ನೋಡಿದ್ದರು. ೧೯೫೮ರಲ್ಲಿ ವಿ.ಕೃ.ಗೋಕಾಕ ಬಳ್ಳಾರಿಯಲ್ಲಿ ಮಂಡಿಸಿದ ಹೊಸ ವಿಚಾರಗಳು ನವ್ಯ ಸಾಹಿತ್ಯ ಎಂಬ ಹೊಸ ಚಳುವಳಿಗೆ ಕಾರಣವಾದವು. ೧೯೬೦ರಲ್ಲಿ ಅ.ನ.ಕೃ ಮಣಿಪಾಲದಲ್ಲಿ, ಬೆಂಗಳೂರಿನಲ್ಲಿನ ಕನ್ನಡದ ಸ್ಥಿತಿಗತಿಗಳು, ಚಿತ್ರರಂಗದ ಪರಿಭಾಷಾ ಒಲವಿನ ಬಗ್ಗೆ ಚರ್ಚೆ ನಡೆದಾಗ, ಡಬ್ಬಿಂಗ್ ವಿರೋಧಿ ಚಳುವಳಿಗಳು ನಡೆದವು. ಇನ್ನೂ ಕೆಲವು ಮೇರು ಕವಿಗಳು ತಮ್ಮ ನಿಲುವಿಗೆ ಬದ್ಧರಾಗಿದ್ದರು. ಕರ್ನಾಟಕ ಏಕೀಕರಣವಾಗುವ ತನಕ ಅಧ್ಯಕ್ಷತೆ ಕುವೆಂಪು ಅಧ್ಯಕ್ಷತೆವಹಿಸುವುದಿಲ್ಲವೆಂದಾಗ, ಅವರ ಪ್ರಕಾರ, ೧೯೫೭ರಲ್ಲಿ ಅಧ್ಯಕ್ಷತೆ ವಹಿಸಿದರು. ಕನ್ನಡದ ಕೆಲಸಗಳಿಗೆ ಅಡ್ಡಿಯಾಗುವುದೆಂಬ ಕಾರಣಕ್ಕೆ, ಕೊನೆಯವರೆಗೂ ತಿ.ನಂ.ಶ್ರೀ. ಅಧ್ಯಕ್ಷತೆ ವಹಿಸದೇ ಇದ್ದರು.
ಅಧ್ಯಕ್ಷರು-ಪ್ರೊ.ಜಿ.ವೆಂಕಟಸುಬ್ಬಯ್ಯನವರು ಈ ಬಾರಿಯ ಕನ್ನಡದ ತೇರು ಎಳೆದ ಸಾಹಸದ ಸಾರ್ಥಕ ರೂವಾರಿ. ಪ್ರಭಂದ, ವ್ಯಕ್ತಿಚಿತ್ರ, ಸಂಪಾದನೆಯಲ್ಲಿ ಇವರ ಕೊಡುಗೆ ಅನನ್ಯ. ಬಿ.ಎಂ.ಶ್ರೀ. ವೆಂಕಣ್ಣಯ್ಯನವರಂಥ ಕನ್ನಡದ ಸಾಹಿತ್ಯದ ಕಲಿಗಳ ಶಿಷ್ಯರಿವರು. ೯೮ರ ಇಳಿ ವಯಸ್ಸಿನ ಇವರು, ತನು ಮನ ಧನಗಳಿಂದ ಕನ್ನಡ ಕಟ್ಟುವ ಕೆಲಸ ಮಾಡಿದರು. ಜೀ.ವಿ ಎಂದೇ ಪ್ರಖ್ಯಾತರಾದ ಇವರು ಮುಪ್ಪಾಗಿರಬಹುದು ಆದರೆ ಇವರು ಮಾಡಿದ ಕನ್ನಡದ ಕೆಲಸಕ್ಕೆ ಎಂದಿಗೂ ಮುಪ್ಪಿಲ್ಲ.
ಈ ಬಾರಿ ಕೆಲವು ನಿರ್ಣಯಗಳೂ ಮಂಡನೆಯಾದವು , ಕೆಲವು ಸವಕಲು ವಿಷಯಗಳು ಚರ್ಚೆಯಾದವು.
ಚರ್ಚೆಯಾದ ವಿಷಯಗಳು, ಆಗಿನ ಈಗಿನ ಹಳ್ಳಿ ಜೀವನ.
ಒಬ್ಬ ಮಹಾನುಭಾವ ಆಗಿನ ಹಳ್ಳಿ ಜೀವನವೇ ಚನ್ನಾಗಿತ್ತು, ಈಗೆಲ್ಲ ಯಾಂತ್ರಿಕವಾಗಿದೆ ಎಂದ. ಅರ್ರೇ, ಬದಲಾವಣೆ ಜಗದ ನಿಯಮವಲ್ಲವೇ? ಮತ್ತೊಂದು ವಿಷಯ, ೨೦ ರಿಂದ ೩೦ ವರ್ಷದ ಯುವಕರು ಪೇಟೆಗಳತ್ತ ಮುಖ ಮಾಡುತ್ತಿದ್ದಾರೆ. ಅವರೆಲ್ಲ ತಿರುಗಿ ಹಳ್ಳಿಗಳತ್ತ ಹೊರಡಬೇಕು ಎಂದು ಆಜ್ಞೆಯನ್ನೂ ಮಾಡಿದರು. ಆದರೆ ದಿನಗೂಲಿ ೫೦ ರೂಪಾಯಿ ಕೂಡ ಸಿಗದ ಹಳ್ಳಿಯಲ್ಲಿ ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುವುದು ಕಷ್ಟವಾಗಿರುವಾಗ ಪೇಟೆಗಳತ್ತ ಮುಖ ಮಾಡುವುದರಲ್ಲಿ ತಪ್ಪೇನಿದೆ. ಇಂಥ ವಿಷಯಗಳನ್ನು ಚರ್ಚಿಸುವಾಗ ವಾಸ್ತವಿಕತೆ, ವ್ಯೆಜ್ಞಾನಿಕತೆಯನ್ನು ಮನಗಂಡು ವಿಷಯಗಳನ್ನು ಆಯ್ಕೆ ಮಾಡಬೇಕೆಂಬುದು ನನ್ನ ಅನಿಸಿಕೆ.
ಮುಖ್ಯವಾದ ಸಂಗತಿ ನಿರ್ಣಯಗಳದ್ದು,
ಸಮ್ಮೇಳನದ ಫಲವಾಗಿ ಇಂಥ ನಿರ್ಣಯ ಜನಾಭಿಪ್ರಾಯವಾಗಿ ರೂಪುಗೊಂಡು, ಕಾರ್ಯ ರೂಪಕ್ಕೆ ಬಂದಿತು ಎಂದು ಹೇಳಬಲ್ಲ ಉದಾಹರಣೆ ಇದುವರೆಗೂ ಸಿಕ್ಕಿಲ್ಲ. ಸಮ್ಮೇಳನಾಧ್ಯಕ್ಷರು ೩ ದಿನಗಳ ವೈಭವಕ್ಕೆ ಸೀಮಿತವಾಗಿಬಿಟ್ಟಿದ್ದಾರೆ. ಅವರ ಭಾಷಣ ಔಪಚಾರಿಕ ವಿಧಿಯಾಗಿಬಿಟ್ಟಿದೆ, ೩ ದಿನ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತದೆ. ನಿರ್ಣಯಗಳ ವಿವರಗಳೂ ಬರುತ್ತವೆ, ನಂತರ ಎಲ್ಲವೂ ತಣ್ಣಗಾಗುತ್ತವೆ. ಕನಿಷ್ಠ ಚರ್ಚೆ ಕೂಡ ನಡೆಯುವದಿಲ್ಲ.
ನಿರ್ಣಯ ಎಂದರೆ ಕಾವೇರಿ ಚಳುವಳಿ, ಬೆಳಗಾವಿ ಕರ್ನಾಟಕದ್ದೇ ಗೋಕಾಕ್ ಚಳುವಳಿ ಇತ್ಯಾದಿ.
ನಿರ್ಣಯಗಳು ಮೊದಲು ಜನಾಭಿಪ್ರಾಯವಾಗಿ ರೂಪುಗೊಳ್ಳಬೇಕು, ನಂತರ ಚರ್ಚೆಯಾಗಿ ಅದನ್ನು ಕಾರ್ಯಗತಗೊಳಿಸಬೇಕು. ಪ್ರತಿ ಸಮ್ಮೇಳನಾಧ್ಯಕ್ಷರನ್ನು ಒಂದು ವರ್ಷದ ಅವಧಿಯವರೆಗೆ ಸಾಕ್ಷಿ ಪ್ರಜೆಯಾಗಿ ನಿಯಮಿಸಬೇಕೆಂಬುದು ಪರಿಷತ್ತಿನ ಆಗ್ರಹ, ಆದರೆ ಯಾವ ರಾಜಕೀಯ ಪಕ್ಷಗಳೂ ಒಂದು ಖುರ್ಚಿಯನ್ನು ಬಿಡುವುದಿಲ್ಲ ಎಂಬುದು ಅಷ್ಟೇ ಕಟುಸತ್ಯ.
ಬೇರೆ ರಾಜ್ಯಗಳಿಂದ ಬಂದವರು ಕನ್ನದಲ್ಲಿ ಕಲಿತು ಬಳಸಬೇಕೆಂಬುದು ಈ ಬಾರಿಯ ೧೦ ನಿರ್ಣಯಗಳಲ್ಲಿ ಒಂದು. ಆದರೆ ಕನ್ನಡಿಗರೇ ಕನ್ನಡವನ್ನು ಬಳಸುವಲ್ಲಿ ಅನಾಸ್ಥೆ ತೋರುವಾಗ, ಬೇರೆಯವರು ಹೇಗೆ ಕಲಿತಾರು.
ಕನ್ನಡ ಪದ ಎಂಬುದು ಕಬ್ಬಿಣದ ಕಡಲೆಯಲ್ಲ, ಹಿರಿದಿದೆ ಕನ್ನಡದ ಅರ್ಥ. ಅರ್ಥ ತಿಳುದುಕೊಂಡವನೇ ಸಾರ್ಥಕ ಜೀವಿ, ಕನ್ನಡದ ಮುದ್ದಣರಿಂದ ಹಿಡಿದು ಈಗಿನ ಮುಂಗಾರು ಮಳೆಯ ತನಕ ಸಾಹಿತ್ಯ ಕೃಷಿಯಾಗಿದೆ, ಇನ್ನು ಮುಂದಿನ ಪೀಳಿಗೆಯ ಕನ್ನಡದ ಉಳಿವು-ಅಳಿವು ನಮ್ಮ ಯುವ ಜನಾಂಗದ ಕೈಯಲ್ಲಿದೆ. ಮಾಯಾನಗರಿಗಳ ಮಲ್ಟಿಪ್ಲೆಕ್ಸ್ ಬೆಂಗಳೂರಿನಲ್ಲಿ ಅಕ್ಷರ ಜಾತ್ರೆಗೆ ಜನಗಳ ಸಾಥ್ ಸಿಕ್ಕಿರುವುದು, ಕನ್ನಡದ ಕೆಲಸಗಳಿಗೆ ಪ್ರೋತ್ಸಾಹವಿದ್ದಂತೆ.
ತಮ್ಮ ಮನಸ್ಸಿಗೆ ತಟ್ಟಿದರೆ ಮರುತ್ತರ ಬರೆಯಿರಿ.