ರಾಜ್ಯದ ಗಡಿನಾಡು ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಯುತ್ತಿರುವಾಗ ಕವಿಗಳು, ಕನ್ನಡಪರ ಚಿಂತಕರ ಬಗ್ಗೆ ನೆನಪು ಮಾಡಿಕೊಳ್ಳುವುದು ಸಹಜ, ನಾಡಿನಲ್ಲಿ ಮಹಿಳಾ ಬರಹಗಾರ್ತಿಯರ ಬಗ್ಗೆ 12ನೇ ಶತಮಾನದಲ್ಲೇ ನಾಡಿನಲ್ಲಿ ಎಂತಹ ಗೌರವ ನೀಡಲಾಗಿತ್ತು ಎನ್ನುವ ಬಗ್ಗೆ ಗಮನ ನೀಡಿದಾಗ, ಇಂದಿನ ಆಧುನಿಕ ಯುಗದಲ್ಲೂ ಹೇಗೆ ಮಹಿಳೆ ಮತ್ತೊಮ್ಮೆ ಮೂಲೆಗುಂಪಾಗಿದ್ದಾಳೆ ಎನ್ನುವ ಬಗ್ಗೆ ಎಲ್ಲರೂ ಗಮನಿಸಬೇಕಿದೆ.
ಹಣವಿದ್ದವರೂ ಏನನ್ನಾದರೂ ಮಾಡಬಹುದು ಎನ್ನುವುದು ಇಂದಿನ ದಿನಮಾನದ ವಿಶೇಷ. ಜನಪರ ಕಾಳಜಿ ಇಲ್ಲದಿದ್ದರೂ, ಹಣವಿದ್ದವರು ರಾಜಕೀಯ ಮಾಡಬಹುದು ಎನ್ನುವ ಕಾರಣಕ್ಕಾಗಿ ಇಂದು ರಾಜ್ಯದ ಗಣಿ ಉದ್ಯಮಿಗಳು ರಾಜಕೀಯ ಪ್ರವೇಶ ಮಾಡಿದ್ದಾರೆ. ಕ್ರೀಡಾಪಟುವಲ್ಲದಿದ್ದರೂ ಕ್ರೀಡಾ ಕ್ಷೇತ್ರದಲ್ಲಿ ಮಲ್ಯ, ಮಹಾರಾಜರು ಪಾಲ್ಗೊಂಡಿದ್ದಾರೆ. ಮಾಧ್ಯಮ ಕ್ಷೇತ್ರಗಳು ಹಣವಂತರ ಪಾಲಾಗಿವೆ. ಸರ್ವಂ ಧನ ಮಯಂ ಎನ್ನುವಾಗ ಸಮ್ಮೇಳನ ಉದ್ಘಾಟನೆ ಉದ್ಯಮಿಯ ಪಾಲಾಗಿರುವುದು ಸಹಜವೇ ಎನ್ನಬಹುದು.
ಸಾಪ್ಟವೇರ್ ಇಂಜಿನಿಯರ್ ಆಗುವುದಕ್ಕೆ ಎಂ.ಟೆಕ್ ಆಗಿರಬೇಕು, ವೈದ್ಯರಾಗಲು ಎಂ.ಬಿ.ಬಿ.ಎಸ್. ಓದಿರಬೇಕು. ಆದರೆ ಸಾಹಿತಿಯಾಗಲು ಸ್ನಾತಕೋತ್ತರ ಪದವಿ ಪಡೆಯಬೇಕು ಎಂದೇನಿಲ್ಲ, ಬದಲಿಗೆ ಕನ್ನಡ ಪರ ಮನಸ್ಸಿರಬೇಕು, ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿ, ಪರಂಪರೆ ಬಗ್ಗೆ ಸಾಕಷ್ಟು ವಿಷಯ ತಿಳಿದಿರಬೇಕು, ಬರವಣಿಗೆಯ ಅಲ್ಪಜ್ಞಾನವಾದರೂ ಇರುವುದು ಅಗತ್ಯವಾಗಿದೆ. ಅಂದರೆ ಸಾಹಿತ್ಯಕ್ಕೆ ಸಾಂಪ್ರದಾಯಿಕ ಶಿಕ್ಷಣಕ್ಕಿಂತ ನಾಡಿನ ಸಂಸ್ಕೃತಿಯನ್ನರಿತ ಮನಸ್ಸಿರಬೇಕು.
ಇನ್ಪೋಸಿಸ್ ನಾರಾಯಣಮೂರ್ತಿ ಕನ್ನಡಿಗರು ಇವರು ವಿಶ್ವಮಟ್ಟದಲ್ಲಿ ಉದ್ದಿಮೆ ಕಟ್ಟಿ ಬೆಳೆಸಿದವರು, ನಾಡಿನ ಕನ್ನಡ ಕೆಲಸಗಳಿಗೆ ಸಾಕಷ್ಟು ಹಣ ನೀಡಿರುವ ದಾನಿಗಳು ಎನ್ನುವುದು ಇವರು ಸಮ್ಮೇಳನ ಉದ್ಘಾಟಿಸಲು ಇರುವ ಅರ್ಹತೆ. ಆದರೂ ಇವರನ್ನು ಗುರುತಿಸುವಾಗ ನಮಗ್ಯಾರಿಗೂ ಇಲ್ಲೊಂದು ಮಹಿಳೆಗೆ ಅನ್ಯಾಯವಾಗುತ್ತಿದೆ ಎನ್ನುವ ಬಗ್ಗೆ ಪ್ರಜ್ಞೆಯೇ ಮೂಡುತ್ತಿಲ್ಲ ಎನ್ನುವುದು ಕಳವಳದ ಸಂಗತಿ.
ಕುಟುಂಬದ ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲೂ ವಿಧ್ಯೆಯನ್ನು ಕಲಿತು, ಸಾಮಾಜಿಕವಾಗಿ ಮಹಿಳೆಗೆ ಮಾನ್ಯತೆ ಸಿಗದಿರುವ ದಿನಗಳಲ್ಲೂ ಮಹಿಳೆಯಾದರೂ ಛಲಬಿಡದೇ ಉದ್ಯೋಗ ಕೈಗೊಂಡು ಸಾಧನೆ ಮಾಡಿರುವ ಸುಧಾಮೂರ್ತಿ ಸರ್ಕಾರದ ಕಣ್ಣಿಗೆ ಕಾಣಲಿಲ್ಲವೇ? ನಾಡಿನ ಹೆಮ್ಮೆಯ ಉದ್ಯಮ ಇನ್ಪೋಸಿಸ್ ನಲ್ಲಿ ಕನ್ನಡ ಕಂಪು ಹರಡಲು ಕಾರಣರಾರು ಎನ್ನುವ ಬಗ್ಗೆ ಅವಲೋಕನ ಮಾಡುವುದು ಅಗತ್ಯವಾಗಿದೆ.
ಕನ್ನಡದ ಹಿಂದಿನ ಕಾಲದ ಲಿಪಿಗಳ ಅಧ್ಯಯನ ಕುರಿತು ಕಲಿತಿರುವ, ತಮ್ಮ ಬಿಡುವಿನ ವೇಳೆಯಲ್ಲಿ ನಾಡಿನ ವಿದ್ಯಾರ್ಥಿಗಳಿಗೆ ಕನ್ನಡ ಪರವಾದ, ಸಂಸ್ಕೃತಿಯ ಪಾಠ ಮಾಡಿರುವ, ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಬಸವಶ್ರೀ ಪ್ರಶಸ್ತಿ ಪಡೆದಿರುವ, ಹಲವಾರು ಕನ್ನಡ ಪುಸ್ತಕ ಬರೆದಿರುವ ಸುಧಾಮೂರ್ತಿ ನಿಜವಾದ ಆಧುನಿಕ ಮಹಿಳೆ ಸ್ಥಾನದಲ್ಲಿ ನಿಲ್ಲುವಂತಹವರಲ್ಲವೇ? ಎನ್ನುವುದನ್ನು ನಾವೆಲ್ಲಾ ಪ್ರಶ್ನಿಸಿಕೊಳ್ಳಬೇಕಿದೆ.
ಪುರುಷರಿಗಿಂತ ಮಹಿಳೆಯರು ಕಡಿಮೆಯಲ್ಲ ಎಂದು ಸಾಧನೆ ಮೂಲಕ ತೋರ್ಪಡಿಸಿರುವ ಇಂದಿನ ಕಾಲದಲ್ಲೂ ಸುಧಾಮೂರ್ತಿ ವಿಶ್ವ ಕನ್ನಡ ಸಮ್ಮೇಳನ ಉದ್ಘಾಟನೆಯ ಯೋಗದಿಂದ ವಂಚಿತರಾಗಿಲ್ಲವೇ? ಕುಟುಂಬದ ಯಶಸ್ಸು ಯಜಮಾನನಿಗೆ ಸಲ್ಲಬೇಕು ಎನ್ನುವ ಮನೋಭಾವ ಇಂದಿಗೂ ಜಾರಿಯಲ್ಲಿದೆಯೇ? ಅಥವಾ ಸುಧಾಮೂರ್ತಿಯವರು ಇಂತಹ ತ್ಯಾಗ ಮನಸ್ಥಿತಿಯ ಮೂಲಕ ಮತ್ತಷ್ಟು ಎತ್ತರಕ್ಕೆ ಏರಲಿದ್ದಾರೆಯೇ? ಎನ್ನುವ ಪ್ರಶ್ನೆ ನನ್ನನ್ನು ಕಾಡುತ್ತಿದೆ.
ಮಾಧ್ಯಮಗಳು ಸಮ್ಮೇಳನ ಉದ್ಘಾಟನೆಯ ವ್ಯಕ್ತಿ ಕುರಿತು ಚರ್ಚೆ ನಡೆಸುತ್ತಿವೆ, ಇದೇ ಮಾಧ್ಯಮಗಳಲ್ಲಿ ಹಿಂದೆ ಸುಧಾಮೂರ್ತಿಯವರ ಕನ್ನಡ ಪರ ಮನಸ್ಸಿನ ಬಗ್ಗೆ, ಅವರು ಸವೆಸಿದ ಕಷ್ಟದ ದಿನಗಳ ಬಗ್ಗೆ, ಅವರು ಬರೆದಿರುವ ಕನ್ನಡ ಪುಸ್ತಕಗಳು, ಕನ್ನಡ ಶಾಲೆಗಾಗಿ ಇನ್ಪೋಸಿಸ್ ಪ್ರತಿಷ್ಠಾನದ ಮೂಲಕ ನೀಡಿರುವ ಕೊಡುಗೆಗಳಿಗೆ ಇವರಲ್ಲಿರುವ ಕನ್ನಡಪರ ಮನಸ್ಸೇ ಕಾರಣವೆಂದು ಹೇಳಲಾಗಿತ್ತು, ಆದರೆ ಇಂದು ಅವರಿಗಾಗುತ್ತಿರುವ ವಂಚನೆ ಬಗ್ಗೆ ಚಕಾರವೆತ್ತುತ್ತಿಲ್ಲವೇಕೆ?
ಕನ್ನಡದ ಕವಯಿತ್ರಿ ಅಕ್ಕಮಹಾದೇವಿ, ಮುಕ್ತಾಯಕ್ಕ, ನಂಬಿಯಕ್ಕ, ಗೊಗ್ಗವ್ವೆ, ದೋಸೆ ಪಿಟ್ಟವ್ವೆ, ಹಿರೇಜಂಬೂರು ಸತ್ಯಕ್ಕ ಸೇರಿದಂತೆ ಹಲವರು ತಮ್ಮ ಸರಳ ಜೀವನದೊಂದಿಗೆ ಅನುಭವ ಸಾಹಿತ್ಯ ರಚನೆ ಮಾಡಿದವರು ಇಂತಹವರಿಗೆ ಅನುಭವ ಮಂಟಪದಲ್ಲಿ ವಿಶೇಷ ಸ್ಥಾನ ನೀಡಿ ಗೌರವಿಸಿರುವುದು ನಾಡಿನ ಹೆಮ್ಮೆಯ ಸಂಗತಿಗಳಲ್ಲೊಂದು. ಮಹಿಳೆಯರ ಶಿಕ್ಷಣ ಕಷ್ಟ ಎನ್ನುವ ಕಾಲದಲ್ಲಿ ತಾಂತ್ರಿಕ ಶಿಕ್ಷಣ ಪಡೆದಿರುವ, ಕೌಟುಂಬಿಕ ಜೀವನದಲ್ಲೂ ಮನೆ, ಕಚೇರಿಯಲ್ಲಿ ಕೆಲಸ ಮಾಡಿ, ಸಾಹಿತ್ಯ ಕ್ಷೇತ್ರದಲ್ಲೂ ಗುರುತಿಸಿ ಕೊಂಡಿರುವ ಸುಧಾಮೂರ್ತಿಯವರು ಇಂದಿನ ಆಧುನಿಕ ಜಗತ್ತಿನ ಮಾದರಿ ಮಹಿಳೆಯಾಗಿ ಕಾಣುತ್ತಿಲ್ಲವೇ?
ವಿಶ್ವ ಕನ್ನಡ ಸಮ್ಮೇಳನ ಉದ್ಘಾಟನೆ ಭಾಗ್ಯ ನಿಜವಾಗಿ ಸಿಗಬೇಕಿರುವುದು ಸುಧಾಮೂರ್ತಿಯವರಿಗೆ, ಆದರೆ ಹಣ ಪ್ರಧಾನ, ಪುರುಷ ಪ್ರಧಾನ ವ್ಯವಸ್ಥೆ ಮತ್ತೊಮ್ಮೆ ಮಹಿಳೆಗೆ ವಂಚನೆ ಮಾಡುತ್ತಿದೆಯೇ ಎನ್ನುವ ಪ್ರಶ್ನೆ ನನಗೆ ಪದೇ ಪದೇ ಕಾಡುತ್ತಿದೆ.
-ಚಂದ್ರಶೇಖರ ಮಠದ, ಶಿಕಾರಿಪುರ.
chandru27pvr@gmail.com