ಪುಟಗಳು

ಸರ್ಕಾರದ ಕನ್ನಡ ಸ್ವರಕ್ಕೆ ಎಂಇಎಸ್ ಅಪಸ್ವರ

ಬೆಳಗಾವಿ, ಮಾ.10: ಕುಂದಾ ನಗರಿಯಲ್ಲಿ ಮಾ. 11 ರಂದು ಸಂಜೆ 5 ಗಂಟೆಗೆ ಜಿಲ್ಲಾ ಕ್ರೀಡಾಂಗಣದ ರಾಣಿ ಚೆನ್ನಮ್ಮ ವೇದಿಕೆಯಲ್ಲಿ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರು ವಿಶ್ವ ಕನ್ನಡ ಸಮ್ಮೇಳನ 2011 ಉದ್ಘಾಟಿಸಲಿದ್ದಾರೆ. 48 ಪುಟಗಳ ವಿಸ್ತೃತವಾದ ಆಮಂತ್ರಣ ಪತ್ರಿಕೆ ಹೇಳುವಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಅಂದು ಅಧ್ಯಕ್ಷತೆ ವಹಿಸಲಿದ್ದಾರೆ. ಇದಕ್ಕೂ ಮುನ್ನ ಬೆಳಗ್ಗೆ 10 ಗಂಟೆಗೆ ಮೆರವಣಿಗೆ, ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಕಾರ್ಯಕ್ರಮಗಳಿವೆ. ಆದರೆ, ಇದೆಲ್ಲವೂ ಒಂದು ಪಕ್ಷದ ಸಮಾವೇಶವಾಗಿ ಹೊರ ಹೊಮ್ಮುತ್ತಿದೆ ಮರಾಠಿ ನಾಯಕರಿಗೆ ಬೆಲೆ ನೀಡುತ್ತಿಲ್ಲ ಎಂದು ಮಾಜಿ ಮೇಯರ್ ವಿಜಯ ಮೋರೆ ಬೇಸರ ವ್ಯಕ್ತಪಡಿಸಿದ್ದಾರೆ.

ನಾವೇನೂ ಸಮ್ಮೇಳನವನ್ನು ವಿರೋಧಿಸುತ್ತಿಲ್ಲ, ಕಪ್ಪು ಬಾವುಟ ಹಿಡಿದು ಧರಣಿ ಕೂರುವುದಿಲ್ಲ. ಆದರೆ, ಒಂದು ಪಕ್ಷದ ಸಮಾವೇಶದಂತೆ ತೋರುತ್ತಿರುವ ವಿಶ್ವ ಕನ್ನಡ ಸಮ್ಮೇಳನದಿಂದ ಬೆಳಗಾವಿ ಅಭಿವೃದ್ಧಿಗೆ ಒಂದಿಷ್ಟೂ ಲಾಭವಾಗುವುದಿಲ್ಲ. ಬೆಳಗಾವಿಯಲ್ಲಿರುವ ಮರಾಠಿ, ಉರ್ದು, ಗುಜರಾಥಿ ಭಾಷಾ ಬಾಂಧವರನ್ನು ಸರ್ಕಾರ ಕಡೆಗಣಿಸಿದೆ. ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸಲು ನಮ್ಮ ಹೋರಾಟ ಮುಂದುವರೆಯಲಿದೆ. ನಾಳೆ ಎಂಇಎಸ್ ಮುಖಂಡರೆಲ್ಲ ಕೊಲ್ಹಾಪುರರಲ್ಲಿ ಸಭೆ ಸೇರಿ ಚರ್ಚಿಸಲಿದ್ದೇವೆ ಎಂದು ವಿಜಯ್ ಮೋರೆ ಹೇಳಿದರು.

ಈ ನಡುವೆ ಮೂರು ದಿನಗಳ ಕನ್ನಡಿಗರ ಹಬ್ಬ ಸಾಂಗವಾಗಿ ನಡೆಯಲಿದೆ. ಸಂಸದ ಸುರೇಶ್ ಅಂಗಡಿ ಹಾಗೂ ತಮ್ಮ ನಡುವೆ ನಡೆದ ವಾಗ್ವಾದಗಳು ಸಹಜ ಸಂಘರ್ಷ, ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಲು ಎಲ್ಲರೂ ಶ್ರಮದಾನ ಮಾಡುತ್ತಿದ್ದಾರೆ ಎಂದು ಸಚಿವ ಉಮೇಶ್ ಕತ್ತಿ ಹೇಳಿದರು. ಈ ಮಧ್ಯೆ ಆಹ್ವಾನ ಪತ್ರಿಕೆ ಅಧ್ವಾನದಿಂದ ಗರಂ ಆಗಿದ್ದ ಹಾಲಿ ಮೇಯರ್ ಎನ್ ಬಿ ನಿರ್ವಾಣಿ ಅವರು ತಮ್ಮ ರಾಜೀನಾಮೆಯನ್ನು ವಾಪಾಸ್ ಪಡೆದಿದ್ದು, ಎಂದಿನಂತೆ ಕಾರ್ಯಕ್ರಮಗಳಲ್ಲಿ ಹಾಜರಾಗುವುದಾಗಿ ಹೇಳಿದ್ದಾರೆ.

ಮಾರ್ಚ್ 11 ರಂದು ಹೊರದೇಶ ಹಾಗೂ ಹೊರನಾಡು ಕನ್ನಡಿಗರ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ‘ಎಂತಿದ್ದರೆ ಏನ್, ಎಲ್ಲಿದ್ದರೆ ಏನ್, ನಾವ್ ಕನ್ನಡಿಗರುಷ’- ಉತ್ಸವ; ನಾಟಕ- ಕುಣಿ ಕುಣಿ ನವಿಲೆ: ಮುಂಬೈನ ನ್ಯಾಷನಲ್ ಕನ್ನಡ ಎಜುಕೇಷನ್ ಸೊಸೈಟಿ. ರಚನೆ- ಎಚ್.ಎಸ್. ವೆಂಕಟೇಶಮೂರ್ತಿ. ನಿರ್ದೇಶನ- ಡಾ.ಸಾಸ್ವೆಹಳ್ಳಿ ಸತೀಶ್. ಭಾರತೀಯ ಶಾಸ್ತ್ರೀಯ ಫ್ಯೂಶನ್ ಪ್ರದರ್ಶನ- ಅಮೆರಿಕದ ಜೋತ್ಸ್ನಾ ಶ್ರೀಕಾಂತ್. ನಾಟಕ- ಯಯಾತಿ; ವಾಷಿಂಗ್ಟನ್‌ನ ಕಾವೇರಿ ಕನ್ನಡ ಸಂಘ. ರಚನೆ- ಗಿರೀಶ್ ಕಾರ್ನಾಡ್ . ನಿರ್ದೇಶನ- ರವಿ ಹರಪ್ಪನಹಳ್ಳಿ.

ವಿಶ್ವಕನ್ನಡ ಸಮ್ಮೇಳನ ಆರಂಭದ ದಿನ ಭಾಗವಹಿಸಲಿರುವ ಗಣ್ಯಾತಿಗಣ್ಯರ ಪಟ್ಟಿ ಇಂತಿದೆ: ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ, ಸಾಹಿತಿ ಡಾ.ಯು.ಆರ್.ಅನಂತಮೂರ್ತಿ, ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ, ವಿಧಾನ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ, ಕೇಂದ್ರ ಸಚಿವವೀರಪ್ಪ ಮೊಯಿಲಿ, ಮಲ್ಲಿಕಾರ್ಜುನ ಖರ್ಗೆ , ವಿಧಾನಸಭಾ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ, ಲೋಕಸಭಾ ಸದಸ್ಯ ಎಚ್.ಡಿ.ಕುಮಾರಸ್ವಾಮಿ, ಚಿತ್ರನಟಿ ಐಶ್ವರ್ಯ ರೈ, ರಂಗಭೂಮಿ ಕಲಾವಿದ ಏಣಗಿ ಬಾಳಪ್ಪ, ಕವಿ ಚೆನ್ನವೀರ ಕಣವಿ, ಕೆ.ಎಸ್.ನಿಸಾರ್ ಅಹಮದ್, ಚಂದ್ರಶೇಖರ ಕಂಬಾರ , ಚಿಂತಕ ಬರಗೂರು ರಾಮಚಂದ್ರಪ್ಪ, ಉದ್ಯಮಿ ಕ್ಯಾಪ್ಟನ್ ಜಿ.ಆರ್. ಗೋಪಿನಾಥ, ಬಿ.ಆರ್.ಶೆಟ್ಟಿ, ಲಂಡನ್ ಲ್ಯಾಂಬೆತ್‌ನ ಮೇಯರ್ ಡಾ.ನೀರಜ್ ಪಾಟೀಲ್, ಅಮೆರಿಕ ಕನ್ನಡ ಕೂಟಗಳ ಒಕ್ಕೂಟದ ಅಮರನಾಥ ಗೌಡ, ಯು.ಕೆ. ಕನ್ನಡ ಬಳಗದ ಡಾ.ಭಾನುಮತಿ, ಚಿತ್ರ ಕಲಾವಿದರಾದ ಅಂಬರೀಶ್, ಬಿ.ಸರೋಜಾದೇವಿ, ಜಯಂತಿ, ಭಾರತಿ ವಿಷ್ಣುವರ್ಧನ್, ಚಿತ್ರ ನಿರ್ದೇಶಕ ಗಿರೀಶ್‌ ಕಾಸರವಳ್ಳಿ, ಡಾ. ಎಚ್.ಸುದರ್ಶನ, ಸುಧಾಮೂರ್ತಿ, ಅನಿಲ್ ಕುಂಬ್ಳೆ ಮತ್ತಿತ್ತರ ಕನ್ನಡಾಭಿಮಾನಿಗಳು