ಪುಟಗಳು

ವಿಶ್ವ ಕನ್ನಡ ಸಮ್ಮೇಳನ : ಕನ್ನಡ ಚಿತ್ರರಂಗಕ್ಕೆ ಐದು ದಿನ ರಜೆ

ಕುಂದಾ ನಗರಿ ಬೆಳಗಾವಿಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನದ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗಕ್ಕೆ ಮಾರ್ಚ್ 9ರಿಂದ 13ರವರೆಗೆ ಐದು ದಿನಗಳ ಕಾಲ ರಜೆ ಘೋಷಿಸಲಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತಕುಮಾರ್ ಪಾಟೀಲ್ ಸೋಮವಾರ (ಫೆ.21) ಈ ವಿಷಯವನ್ನು ತಿಳಿಸಿದರು.
ಮಾರ್ಚ್ 9ರಿಂದ ಮಾರ್ಚ್ 13ರವರೆಗೆ ಚಿತ್ರ ಪ್ರದರ್ಶನ ಹೊರತು ಪಡಿಸಿ ಉಳಿದ ಚಟುವಟಿಕೆಗಳು ಇರುವುದಿಲ್ಲ. ಬೆಳಗಾವಿಯಲ್ಲಿ ಕನ್ನಡ ಸಿನಿಮಾ ತಾರೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಈಗಾಗಲೆ ಬೆಂಗಳೂರಿನಲ್ಲಿ ತಾರೆಗಳ ತಾಲೀಮು ನಡೆದಿದೆ ಎಂದು ಬಸಂತ್ ತಿಳಿಸಿದರು.
ಕನ್ನಡ ಚಿತ್ರರಂಗದ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಬೆಂಗಳೂರಿನಿಂದಬೆಳಗಾವಿವರೆಗೂ ಸಿನಿಮಾ ತಾರೆಗಳು ಮೆರವಣಿಗೆಯಲ್ಲಿ ಸಾಗಲಿದ್ದಾರೆ. ಬೆಳಗಾವಿಯಲ್ಲಿ ಒಟ್ಟು 1.30 ಗಂಟೆಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಿನಿಮಾ ತಾರೆಗಳು ಹಂಸಲೇಖ ಅವರ ನೇತೃತ್ವದಲ್ಲಿ ನಡೆಸಿಕೊಡಲಿದ್ದಾರೆ ಎಂದರು ಬಸಂತ್.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯಾರಾರು ಪಾಲ್ಗೊಳ್ಳಲಿದ್ದಾರೆ ಎಂಬ ವಿವರಗಳನ್ನು ಬಸಂತ್ ಕುಮಾರ್ ಪಾಟೀಲ್ ನೀಡಿಲ್ಲ. ಒಟ್ಟಿನಲ್ಲಿ ಕನ್ನಡ ಚಿತ್ರರಂಗದ ಕಲಾವಿದರು, ಹಂಚಿಕೆದಾರರು, ವಿತರಕರು, ನಿರ್ಮಾಪಕರು, ನಿರ್ದೇಶಕರು ಪಾಲ್ಗೊಳ್ಳಲಿದ್ದಾರೆ ಎಂಬ ವಿವರಗಳನ್ನು ನೀಡಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಲು ವಿನಂತಿಸಲಾಗಿದೆ. ಭಾಗವಹಿಸಬೇಕಾದದ್ದು ಅವರ ಧರ್ಮ. ವಿಶ್ವಕನ್ನಡ ಸಮ್ಮೇಳನವನ್ನು ಅವರು ಯಶಸ್ವಿಗೊಳಿಸಬೇಕಾಗಿ ಕೋರುತ್ತಿರುವುದಾಗಿ ನಿರ್ಮಾಪಕ ಸಾ ರಾ ಗೋವಿಂದು ತಿಳಿಸಿದರು. ಸಭೆಯಲ್ಲಿ ಹಂಸಲೇಖ, ಕೆಸಿಎನ್ ಚಂದ್ರಶೇಖರ್, ಕರ್ನಾಟಕ ಚಲನಚಿತ್ರ ಕಾರ್ಮಿಕರ, ತಂತ್ರಜ್ಞರ, ಕಲಾವಿದರ ಒಕ್ಕೂಟ ಅಧ್ಯಕ್ಷ ಅಶೋಕ್ ಉಪಸ್ಥಿತರಿದ್ದರು